ರಾಜಕೀಯ ದೇಣಿಗೆಗಳಿಗೆ ವಿನಾಯಿತಿ; ಸರ್ಕಾರದ ಖಜಾನೆಗೆ 11,813 ಕೋಟಿ ರೂ. ತೆರಿಗೆ ನಷ್ಟ!

Date:

Advertisements

ರಾಜಕೀಯ ಪಕ್ಷಗಳಿಗೆ ನೀಡಲಾಗುವ ದೇಣಿಗೆಗಳಿಗೆ ತೆರಿಗೆ ವಿನಾಯಿತಿ ನೀಡಿರುವ ಕಾರಣ ಕಳೆದ 10 ವರ್ಷಗಳಲ್ಲಿ ಸರ್ಕಾರ ಖನಾನೆಗೆ ಬರೋಬ್ಬರಿ 11,812.98 ಕೋಟಿ ರೂ. ತೆರಿಗೆ ನಷ್ಟವಾಗಿದೆ. ಸರ್ಕಾರವು ಬೃಹತ್ ಪ್ರಮಾಣದ ತೆರಿಗೆ ಆದಾಯವನ್ನು ಕಳೆದುಕೊಂಡಿದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.

ಕಾಮನ್ವೆಲ್ತ್ ಮಾನವ ಹಕ್ಕುಗಳ ಕಾರ್ಯಕ್ರಮದ ಹಿರಿಯ ಸಂಶೋಧಕ ವೆಂಕಟೇಶ್ ನಾಯಕ್ ಅವರು ಈ ಅಧ್ಯಯನ ನಡೆಸಿದ್ದಾರೆ. 2015ರಿಂದ 2024ರವರೆಗೆ ರಾಜಕೀಯ ಪಕ್ಷಗಳು ಪಡೆದಿರುವ ದೇಣಿಗೆಗಳ ಆಧಾರದ ಮೇಲೆ ಅಧ್ಯಯನ ನಡೆದಿದೆ. ‘ರೆವೆನ್ಯೂ ಇಂಪ್ಯಾಕ್ಟ್‌ ಆಫ್ ಡೊನೇಷನ್ಸ್‌ ಟು ಪೊಲಿಟಿಕಲ್ ಪಾರ್ಟೀಸ್: ಎ ಪ್ರಿಲಿಮಿನರಿ ಸ್ಟಡಿ’ (ರಾಜಕೀಯ ಪಕ್ಷಗಳಿಗೆ ದೇಣಿಗೆಗಳ ಆದಾಯದ ಪರಿಣಾಮ: ಪ್ರಾಥಮಿಕ ಅಧ್ಯಯನ) ಎಂಬ ಶೀರ್ಷಿಕೆಯಡಿ ವರದಿಯನ್ನು ರಚಿಸಲಾಗಿದೆ.

ವರದಿಯು ಕೇಂದ್ರ ಸರ್ಕಾರದ ರಶೀದಿ ದಾಖಲೆಗಳು ಮತ್ತು ‘ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ನಿಂದ (ADR) ಪಡೆಯಲಾದ ಚುನಾವಣಾ ಆಯೋಗದ ಫೈಲಿಂಗ್‌ಗಳು ಮತ್ತು ಲೆಕ್ಕಪರಿಶೋಧನೆಗಳ ಅಂಕಿಅಂಶಗಳನ್ನು ವಿಶ್ಲೇಷಿಸಿದೆ. ವಿವಾದಿತ ಚುನಾವಣಾ ಬಾಂಡ್‌ಗಳನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ ಬಳಿಕ, ಈ ವಿಶ್ಲೇಷಣೆಯನ್ನು ಮಾಡಲಾಗಿದೆ.

Advertisements

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದರಲ್ಲಿ ವೈಯಕ್ತಿಕ ದಾನಿಗಳು ಅಥವಾ ಹಿಂದು ಅನ್‌ಡಿವೈಡೆಡ್ ಫ್ಯಾಮಿಲೀಸ್ (ಹಿಂದು ಅವಿಭಜಿತ ಕುಟುಂಬಗಳು -HUFs) ಕಾಪೋರೇಟ್ ಕಂಪನಿಗಳಿಗಿಂತ ಹೆಚ್ಚು ಕೊಡುಗೆ ನೀಡಿವೆ ಎಂದು ವರದಿ ಹೇಳಿದೆ.

ವರದಿ ಪ್ರಕಾರ, 2022-23ರ ಹಣಕಾಸು ವರ್ಷದಲ್ಲಿ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿರುವ ವೈಯಕ್ತಿಕ ದಾನಿಗಳು 2,275.85 ಕೋಟಿ ರೂ. ಮೌಲ್ಯದ ತೆರಿಗೆ ವಿನಾಯಿತಿಗ ಪಡೆದಿದ್ದಾರೆ. ಕಾರ್ಪೊರೇಟ್ ಕಂಪನಿಗಳು 514.4 ಕೋಟಿ ರೂ. ಮತ್ತು ಸಂಘ-ಸಂಸ್ಥೆಗಳು 115.71 ಕೋಟಿ ರೂ. ವಿನಾಯಿತಿ ಪಡೆದಿವೆ.

ಈ ಪ್ರವೃತ್ತಿಯು 2023-24ರ ಆರ್ಥಿಕ ವರ್ಷದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಒಟ್ಟು ತೆರಿಗೆ ವಿನಾಯತಿಯಲ್ಲಿ ವೈಯಕ್ತಿಕ ದಾನಿಗಳು ಗರಿಷ್ಠ (78.3%) ವಿನಾಯತಿ ಪಡೆಯುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.

2015-16ನಿಂದ 2023-24ರ ವೇಳೆಗೆ, ವೈಯಕ್ತಿಕ/HUF ವಿನಾಯಿತಿಗಳು 66.1 ಕೋಟಿ ರೂ. ನಿಂದ 2,275.85 ಕೋಟಿ ರೂ.ಗೆ ಏರಿಕೆಯಾಗಿದೆ. ಏತನ್ಮಧ್ಯೆ, ಕಾರ್ಪೊರೇಟ್ ಕಂಪನಿಗಳು 2019-20ರ ಆರ್ಥಿಕ ವರ್ಷದಲ್ಲಿ (ಲೋಕಸಭಾ ಚುನಾವಣೆಯ ವರ್ಷ) 1,159.91 ಕೋಟಿ ರೂ. ತೆರಿಗೆ ವಿನಾಯತಿ ಪಡೆದಿವೆ. ಆದರೆ, ಚುನಾವಣೆಯ ಬಳಿಕ, ಅವುಗಳು ಪಡೆದಿರುವ ವಿನಾಯತಿ ಕುಸಿದಿದೆ.

2015-16ರಲ್ಲಿ ರಾಜಕೀಯ ಪಕ್ಷಗಳಿಗೆ (43 ಪಕ್ಷಗಳು) ಘೋಷಿತ ದೇಣಿಗೆಯು 714 ಕೋಟಿ ರೂ. ಇತ್ತು. ಇದು, 2023-24ರಲ್ಲಿ 7,203 ಕೋಟಿ ರೂ.ಗಳಿಗೆ (27 ಪಕ್ಷಗಳು) ಏರಿಕೆಯಾಗಿದೆ. ಆದಾಗ್ಯೂ, 9 ವರ್ಷಗಳಲ್ಲಿ ನೀಡಲಾದ ಒಟ್ಟು ದೇಣಿಗೆಗಳಲ್ಲಿ ಕೇವಲ 41.76% (28,287 ಕೋಟಿ ರೂ.) ದೇಣಿಗೆಗೆ ಮಾತ್ರ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಅಂಕಿಅಂಶಗಳು ಹೇಳಿವೆ. ಉಳಿದ 58% ದೇಣಿಗೆ ತೆರಿಗೆ ವಿನಾಯತಿ ನೀಡುವ ಬಗ್ಗೆ ಮಾಹಿತಿ ಇಲ್ಲ ಎಂದು ವರದಿ ತಿಳಿಸಿದೆ.

“ಈ ಅಂಕಿಅಂಶಗಳು ವಿರೋಧಾಭಾಸವನ್ನು ಸೂಚಿಸುತ್ತವೆ. 100% ತೆರಿಗೆ ವಿನಾಯಿತಿ ಪಡೆಯುವ ಅವಕಾಶವಿದ್ದರೂ ಹೆಚ್ಚಿನ ದಾನಿಗಳು ವಿಶೇಷವಾಗಿ ಕಾರ್ಪೊರೇಟ್‌ ಸಂಸ್ಥೆಗಳು ವಿನಾಯಿತಿಯ ಪ್ರಯೋಜನಗಳನ್ನು ಪಡೆಯುವುದಿಲ್ಲ. ತೆರಿಗೆ ವಿನಾಯಿತಿ ಪಡೆಯದೇ ದೇಣಿಗೆ ನೀಡಲು ಅವರು ಮುಂದೆ ಬಂದಿದ್ದೇಕೆ? ಅವರು ಬೇರೆ ಯಾವ ಪ್ರಯೋಜನ, ಪ್ರೋತ್ಸಾಹಗಳನ್ನು ಪಡೆದಿದ್ದಾರೆ? ಪಾರದರ್ಶಕತೆಯ ಕೊರತೆಯಿಂದಾಗಿ ಉತ್ತರಗಳೂ ದೊರೆಯದಂತಾಗಿವೆ” ಎಂಬುದರ ಮೇಲೆ ವರದಿ ಬೆಳಕು ಚೆಲ್ಲಿದೆ.

ಕಾರ್ಪೊರೇಟ್ ಸಂಸ್ಥೆಗಳು 2024ರ ಚುನಾವಣೆಗೂ ಮೊದಲು ಹೆಚ್ಚಿನ ದೇಣಿಗೆ ನೀಡಿವೆ; 2019ರ ಲೋಕಸಭಾ ಚುನಾವಣೆಗೂ ಹಿಂದಿನ 2018-19ರ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್‌ ಕಂಪನಿಗಳು 801.58 ಕೋಟಿ ರೂ. ವಿನಾಯಿತಿ ಪಡೆದಿವೆ. ಚುನಾವಣಾ ವರ್ಷವೂ ಆಗಿದ್ದ 2019-20ರ ಆರ್ಥಿಕ ವರ್ಷದಲ್ಲಿ ಕಂಪನಿಗಳು ತೆರಿಗೆ ವಿನಾಯತಿಯು 1,159.91 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.

ಆದಾಗ್ಯೂ, 2020ರ ನಂತರ, ಕಾರ್ಪೊರೇಟ್ ಸಂಸ್ಥೆಗಳು ಪಡೆದ ತೆರಿಗೆ ವಿನಾಯತಿ ಕಸಿದಿದೆ. 2020-21ರ ಆರ್ಥಿಕ ವರ್ಷದಲ್ಲಿ ಕಾರ್ಪೊರೇಟ್ ಕಂಪನಿಗಳಳು ಪಡೆದ ವಿನಾಯತಿಯು 256 ಕೋಟಿ ರೂ.ಗೆ ಕುಸಿದಿದೆ. ಇದಕ್ಕೆ, ಬಹುಶಃ ಚುನಾವಣಾ ಬಾಂಡ್‌ಗಳು ಕಾರಣವಿರಬಹುದು ಎಂದು ನಾಯಕ್ ಹೇಳಿದ್ದಾರೆ.

“ಚುನಾವಣಾ ಬಾಂಡ್‌ಗಳು ಅನಾಮಧೇಯ, ಹಿಂಬಾಗಿಲಿನ ಹಣಕಾಸು ಪ್ರೋತ್ಸಾಹವನ್ನು ಹೆಚ್ಚಿಸಿತು. ಕಂಪನಿಗಳು ಸಾರ್ವಜನಿಕ ಪರಿಶೀಲನೆ ಮತ್ತು ತೆರಿಗೆ ವಿನಾಯಿತಿಗಳನ್ನು ಪಡೆಯದೆ ರಹಸ್ಯವಾಗಿ ದೇಣಿಗೆ ನೀಡಿರಬಹುದು. ಬಾಂಡ್‌ಗಳನ್ನು ರದ್ದುಗೊಳಿಸಿದ ನಂತರ, ಕಾರ್ಪೊರೇಟ್‌ ಕಂಪನಿಗಳು ಮತ್ತೆ ವಿನಾಯಿತಿಗಳನ್ನು ಪಡೆಯಲು ಮುಂದಾಗಬಹುದು. ಆದರೆ, 2023-24ರಲ್ಲಿ 577.98 ಕೋಟಿ ರೂ. ತೆರಿಗೆ ವಿನಾಯತಿಯನ್ನು ಮಾತ್ರವೇ ಸೂಚಿಸುತ್ತಿದೆ” ಎಂದು ಅವರು ತಿಳಿಸಿದ್ದಾರೆ.

ವೈಯಕ್ತಿಕ ದಾನಿಗಳ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿರುವ ನಾಯಕ್, “ಸಾಮಾನ್ಯ ನಾಗರಿಕರು ಹೆಚ್ಚು ದೇಣಿಗೆ ನೀಡುತ್ತಿದ್ದಾರೆಯೇ ಅಥವಾ ಇದು ಸಂಪತ್ತಿನ ಕೇಂದ್ರೀಕರಣವೇ? ಆದಾಯ ತೆರಿಗೆ ಇಲಾಖೆಯಿಂದ ಸೂಕ್ಷ್ಮ ದತ್ತಾಂಶವಿಲ್ಲದ ಕಾರಣ, ನಮಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ. ರಾಜಕೀಯ ಪಕ್ಷಗಳು ತಮ್ಮ ದಾನಿಗಳ ವಿವರಗಳನ್ನು ಬಹಿರಂಗಪಡಿಸಬೇಕು. ಇದು ಕೇವಲ ತೆರಿಗೆ ವಿನಾಯಿತಿಯ ವಿಚಾರವಲ್ಲ, ಪ್ರಜಾಪ್ರಭುತ್ವದ ಹೊಣೆಗಾರಿಕೆಯೂ ಆಗಿದೆ” ಎಂದು ಹೇಳಿದ್ದಾರೆ.

ಈ ವರದಿ ಓದಿದ್ದೀರಾ?: ಚುನಾವಣಾ ಬಾಂಡ್ | ಆರೋಪಿ, ಅಪರಾಧಿಗಳೇ ಇಲ್ಲದ ಹಗರಣವೇ?

ಗಮನಾರ್ಹವಾಗಿ, 2022-23ನೇ ಹಣಕಾಸು ವರ್ಷದಲ್ಲಿ 25 ರಾಜಕೀಯ ಪಕ್ಷಗಳು ಒಟ್ಟು 3,912 ಕೋಟಿ ರೂ. ದೇಣಿಗೆ ಪಡೆದಿರುವುದಾಗಿ ಘೋಷಿಸಿದವು. ಘೋಷಿಸದ ಮೊತ್ತ ಮತ್ತು ಪಕ್ಷಗಳೂ ಇವೆ. 40ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಕಡ್ಡಾಯ ಆಡಿಟ್ ವರದಿಗಳನ್ನು ಸಲ್ಲಿಸಲು ವಿಫಲವಾಗಿವೆ. ಹೀಗಾಗಿ, ಘೋಷಿತ ದೇಣಿಗೆಗಳು ಅತ್ಯಂತ ಕಡಿಮೆ ಮೊತ್ತವೆಂದು ವರದಿ ಸೂಚಿಸುತ್ತದೆ.

ದಾನಿಗಳ ದತ್ತಾಂಶವನ್ನು ಕೋರಿ ನಾಯಕ್ ಅವರು ಹಲವು ಬಾರಿ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ, ಆದಾಯ ತೆರಿಗೆ ಇಲಾಖೆ ಮಾಹಿತಿ ಕೊಡಲು ಪದೇ ಪದೇ ನಿರಾಕರಿಸಿದೆ. “ಸರ್ಕಾರವು ‘ಒಂದು ಬಟನ್‌ ಕ್ಲಿಕ್ ಮಾಡುವುದರ ಮೂಲಕ’ ದೇಣಿಗೆ ಮತ್ತು ತೆರಿಗೆ ವಿನಾಯತಿಯ ಡೇಟಾವನ್ನು ಸಂಗ್ರಹಿಸಿ, ಮಾಹಿತಿ ಕೊಡಬಹುದು. ಆದರೆ, ಅವರು ಕೊಡುತ್ತಿಲ್ಲ. ಈ ಗೌಪ್ಯತೆ ಏಕೆ? ಪಾದದರ್ಶಕತೆಯು ಸಾರ್ವಜನಿಕ ಹಿತಾಸಕ್ತಿಯನ್ನು ಹೆಚ್ಚಿಸುತ್ತದೆ. ಅದರೆ, ಅದಾಗುತ್ತಿಲ್ಲ” ಎಂದು ನಾಯಕ್ ಹೇಳಿದ್ದಾರೆ.

ವರದಿಯು ಗಂಭೀರ ಪ್ರಶ್ನೆಯೊಂದನ್ನು ಮುನ್ನೆಲೆಗೆ ತಂದಿದೆ; 58% ದಾನಿಗಳು ತೆರಿಗೆ ವಿನಾಯಿತಿಗಳನ್ನು ಏಕೆ ಪಡೆದಿಲ್ಲ? ಸಾವಿರಾರು ಕೋಟಿಗಳನ್ನು ದೇಣಿಗೆ ನೀಡುವ ವ್ಯಕ್ತಿಗಳು/HUFಗಳು ಯಾರು? ಕಾರ್ಪೊರೇಟ್ ದೇಣಿಗೆಗಳು ಚುನಾವಣಾ ಬಾಂಡ್‌ ರದ್ದತಿಯ ನಂತರ ಮತ್ತೆ ತೆರಿಗೆ ವಿನಾಯತಿ ಪಡೆಯುತ್ತವೆಯೇ?

“ಈ ಪ್ರವೃತ್ತಿಗಳು ಮತ್ತು ಪ್ರಶ್ನೆಗಳ ಕುರಿತು ಸಂಸದೀಯ ಚರ್ಚೆ ನಡೆಯಬೇಕು” ಎಂದು ನಾಯಕ್ ಪ್ರತಿಪಾದಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X