ಇಲ್ಲಿ ಶಿಕ್ಷಕಿಯ ಮೇಲಿನ ಆರೋಪ ಮತ್ತು ತನಿಖೆ ಇಷ್ಟೇ ವ್ಯಾಪ್ತಿಯಲ್ಲಿರಬೇಕಾದ ವಿಚಾರ, ಮತಾಂತರ, ಕ್ರೈಸ್ತ ಶಾಲೆಗಳಿಂದ ಹಿಂದೂ ವಿದ್ಯಾರ್ಥಿಗಳು ಹೊರಗೆ ಬನ್ನಿ… ಇಂತಹ ಭೀಕರ ಹೇಳಿಕೆಗಳಿಗೆ ವಿಸ್ತರಿಸಿಕೊಂಡು ಅಸಲಿ ಸಮಸ್ಯೆ ಗೌಣವಾಯಿತು. ಅದಕ್ಕೆ ಕಾರಣ ಶಾಸಕರ ದುಡುಕಿನ ಹೇಳಿಕೆ ಮತ್ತು ವರ್ತನೆ.
ಮಂಗಳೂರಿನ ಸೇಂಟ್ ಜೆರೋಸಾ ಶಾಲೆಯ ಪ್ರಕರಣದ ಕುರಿತು ತನಿಖೆ ಪ್ರಾರಂಭವಾಗಿದೆ. ಶಿಕ್ಷಕಿಯ ವಿರುದ್ಧ ಮತ್ತು ಶಾಲೆಯ ವಿರುದ್ಧ ವಿದ್ಯಾರ್ಥಿಗಳು ಪೋಷಕರು ಮಾಡಿದ ಪ್ರತೀ ಅರೋಪವೂ ತನಿಖೆಯಾಗಬೇಕು. ಶಿಕ್ಷಕಿಯ ತಪ್ಪಿದ್ದರೆ ಶಿಕ್ಷೆ ಆಗಬೇಕು. ಅದಕ್ಕೆ ಆಡಳಿತ ಮಂಡಳಿ ಸಹಕರಿಸಬೇಕು. ಈ ಹೋರಾಟದ ನಾಯಕಿ ಕವಿತಾ ಅನ್ನುವವರಿಗೆ ಜೀವ ಬೆದರಿಕೆ ಬಂದಿದೆಯಂತೆ. ಅದೂ ತನಿಖೆಯಾಗಿ ಆರೋಪಿಯನ್ನು ಬಂಧಿಸಬೇಕು. ಕ್ರೈಸ್ತ ಧರ್ಮದ ಬಗ್ಗೆ ತೀರಾ ಅವಹೇಳನದ ಸಂದೇಶ ಹಾಕುತ್ತಿರುವ ಓರ್ವ ವ್ಯಕ್ತಿಯ ವಿರುದ್ಧವೂ ಕೇಸ್ ಆಗಬೇಕು.
ಈಗ ವಿಷಯಕ್ಕೆ ಬರುತ್ತೇನೆ… ಜೆರೋಸಾ ಶಾಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಈ ಹಿಂದೆ ಮಾತನಾಡಿದ್ದಕ್ಕೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳಿದ್ದರು. ಇದೇ ಪ್ರಶ್ನೆಗಳನ್ನು ನಾನು ಅದೇ ಶಾಲೆಗೆ ಭೇಟಿ ನೀಡಿ ಕೇಳಿದ್ದೇನೆ. ಅವರೂ ಉತ್ತರಿಸಿದ್ದಾರೆ.
10-2-24ರ ಬೆಳಿಗ್ಗೆ 4 ಪಾಲಕರು ಬಂದು ಮೌಖಿಕವಾಗಿ ದೂರು ಸಲ್ಲಿಸಿದ್ದು, ಶಾಲಾ ಮುಖ್ಯಸ್ಥರು ಶಿಕ್ಷಕಿಯನ್ನು ಮತ್ತು ವಿದ್ಯಾರ್ಥಿಗಳನ್ನು ವಿಚಾರಿಸಿ ಮುಂದಿನ ಕ್ರಮ ಕೈಗೊಳ್ಳಲು ಎರಡು ದಿನ ಅವಕಾಶ ಕೇಳಿದ್ದಾರೆ. ಅದನ್ನು ಪಾಲಕರು ನಿರಾಕರಿಸಿದ್ದಾರೆ. ಶಿಕ್ಷಕಿ ಈಗಲೇ ಬರುತ್ತಾರೆ, ಮಾತನಾಡೋಣ ಎಂದರೂ ತಮಗೆ ಸಮಯವಿಲ್ಲವೆಂದು ಪಾಲಕರು ಹೊರ ಹೋಗಿದ್ದಾರೆ. ಸ್ವಲ್ಪ ಸಮಯದಲ್ಲೇ ಪ್ರಭಾ ಮೇಡಂ ಬಂದಿದ್ದಾರೆ. ಶಿಕ್ಷಕಿ ಓರ್ವ ಪಾಲಕರಿಗೆ ಪೋನ್ ಮಾಡಿದ್ದಾರೆ. ದೂರವಾಣಿ ಕರೆಗಳ ದಾಖಲೆ ಪರಿಶೀಲನೆ ಮಾಡಬಹುದು. ಅವರು ಬರಲು ನಿರಾಕರಿಸಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಶಾಲೆಯಲ್ಲಿ ನಿರಂತರ ಹಿಂದೂ ಅವಹೇಳನ ಎಂದು ವಿಡಿಯೋ ವೈರಲ್ ಮಾಡಿದ್ದಾರೆ. ತಕ್ಷಣ ಪ್ರತಿಭಟನೆ ಪ್ರಾರಂಭವಾಗಿದೆ. ಶಾಲೆಯವರು ಪೊಲೀಸ್ ಅಧಿಕಾರಿಗಳು ಆಡಿಯೋ ವೈರಲ್ ಮಾಡಿದ ಬಗ್ಗೆ ದೂರು ನೀಡಿದ್ದಾರೆ.
ಇಲ್ಲಿ ಈ ಹೋರಾಟವನ್ನು ಸಂಘಟಿಸಿದ ಕವಿತಾ ಅನ್ನುವವರು ಕುದ್ರುವಿನಲ್ಲಿ ಕ್ರೈಸ್ತರೇ ನಡೆಸುವ ಅಂಗನವಾಡಿ ಟೀಚರ್ ಆಗಿದ್ದು, ಅದು ಬಂದ್ ಆದ ಮೇಲೆ ರಾಜಕೀಯ ಮುಖಂಡರ ಪ್ರಭಾವ ಬಳಸಿ ತೊಕ್ಕೊಟ್ಟಿನ ಕ್ರೈಸ್ತ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರಂತೆ.
ಕ್ರೈಸ್ತ ಸಮುದಾಯದ ಸಂಸ್ಥೆಯಲ್ಲಿ ಕೆಲಸ ಮಾಡುವ ಕಾರಣಕ್ಕೆ ಅನ್ಯಾಯವನ್ನು ಪ್ರಶ್ನಿಸಬಾರದು ಅನ್ನುವುದು ಸರಿಯಲ್ಲ.
ಆದರೆ, ಅವರಿಗೆ ಹಲವಾರು ಕ್ರೈಸ್ತ ಮುಖಂಡರ, ಧಾರ್ಮಿಕ ಮುಂದಾಳುಗಳ ಪರಿಚಯವಿತ್ತು. ಅವರಲ್ಲಿ ತನ್ನ ನೋವು ಹೇಳಬಹುದಿತ್ತು. ಅದು ಸಾಧ್ಯವಾಗದು ಎಂದಾದರೆ, ಓರ್ವ ಶಿಕ್ಷಕಿಗೆ ಶಾಲೆಯ ವಿಷಯ ಕುರಿತು ಮೊದಲು ಮುಖ್ಯಸ್ಥೆಗೆ ದೂರು ಸಲ್ಲಿಸಬೇಕು. ನಂತರ ಶಿಕ್ಷಣ ಇಲಾಖೆ, ಅದೂ ಆಗದಿದ್ದರೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಬೇಕು ಎಂಬ ಎಲ್ಲಾ ಮಾಹಿತಿ ಅವರಿಗೆ ತಿಳಿದಿತ್ತು. ಇಂತಹ ಪ್ರಕರಣಗಳಾದಾಗ ಶಿಕ್ಷಣ ಸಂಸ್ಥೆ ಹೇಗೆ ನಿರ್ವಹಿಸುತ್ತದೆ ಎಂಬ ಸ್ಪಷ್ಟವಾದ ಕಲ್ಪನೆ ಅವರಿಗಿತ್ತು.
ಅದೇ ರೀತಿ ಇನ್ನೋರ್ವ ಪೋಷಕಿ ತನ್ನ ಮಗಳ ಶುಲ್ಕ ರಿಯಾಯಿತಿಗೆ ಕ್ರೈಸ್ತ ಮುಖಂಡರನ್ನು ಸಂಪರ್ಕಿಸಿ ಸಹಾಯ ಪಡೆದವರು. ಅವರೂ ಕೂಡಾ ಈ ನಾಯಕರ ಗಮನಕ್ಕೆ ತರಬಹುದಿತ್ತು. ಹೀಗೆ ಸರಳವಾಗಿದ್ದ ಎಲ್ಲಾ ಅವಕಾಶ ಬಿಟ್ಟು ಆಡಿಯೋ ವೈರಲ್ ಮಾಡಿದ ಉದ್ದೇಶಕ್ಕೆ ವಿವರಣೆ ಅವರೇ ಹೇಳಬೇಕು. ತನಿಖಾಧಿಕಾರಿ ಈ ಕುರಿತು ತನಿಖೆ ಮಾಡಬೇಕು.
ಇನ್ನು ದೂರಿನ ತನಿಖೆಗೇ ಶಿಕ್ಷಣ ಸಂಸ್ಥೆ ತಯಾರಿಲ್ಲ ಎಂಬ ಅಪವಾದ. ಓರ್ವ ಶಿಕ್ಷಕಿಯಲ್ಲಿ ಕೆಲಸದಿಂದ ಅಮಾನತು ಮಾಡಲು ಒಂದು ದೂರು ಅರ್ಜಿಯಾದರೂ ಬೇಕು. ಇಲ್ಲಿ ಶಾಲೆಗೆ ಯಾರೂ ಬರೆದುಕೊಟ್ಟದ್ದೇ ಇಲ್ಲ. ಶಿಕ್ಷಣ ಇಲಾಖೆಗೆ ದೂರು ಕೊಟ್ಟು ಅದರ ಮಾಹಿತಿಯಾದರೂ ಶಾಲೆಗೆ ಬಂದಿತ್ತೋ ಅದೂ ಇಲ್ಲ. ಈ ಬಗ್ಗೆ ಸರಿಯಾದ ತನಿಖೆಯಾಗಬೇಕು.
ತನಿಖೆಗೆ ತಡೆಯಾದ ಪ್ರತಿಭಟನೆ: 12-2-24 ರ ಬೆಳಿಗ್ಗೆ 11.25 ರ ವೇಳೆಗೆ ಬಿ. ಇ. ಓ. ಶಾಲೆಗೆ ಬಂದು ತನಿಖೆ ಪ್ರಾರಂಭಿಸಿದ್ದಾರೆ. ಸುಮಾರು 20 ಶಿಕ್ಷಕರ ಹೇಳಿಕೆ ಪಡೆದಿದ್ದಾರೆ. ಹಲವು ಪೋಷಕರಿಗೂ ಮೀಟಿಂಗ್‌ಗೆ ಬರಲು ಕರೆ ಹೋಗಿದೆ. ಹಾಗಾಗಿ ತನಿಖೆ ಮಾಡಲು ಶಾಲೆಯವರು ಒಪ್ಪಿಲ್ಲ ಅನ್ನುವುದೇ ಸುಳ್ಳು.
ಆದರೆ, ಸುಮಾರು 12.45 ಗಂಟೆಗೆ ಗೇಟಿನ ಬಳಿ ಶಾಸಕರು, ಡಿಡಿಪಿಐ ಮತ್ತು ಇನ್ನೋರ್ವ ಮಹಿಳಾ ಅಧಿಕಾರಿ ಬಂದಿದ್ದಾರೆ. ಏಕಾಏಕಿ ಪ್ರತಿಭಟನೆ ಪ್ರಾರಂಭವಾಗಿದೆ. ಶಾಲೆಯೊಳಗೆ ತನಿಖೆ ಪ್ರಾರಂಭವಾದದ್ದು ಹಿರಿಯ ಅಧಿಕಾರಿಗೆ ಗೊತ್ತಿರಲೇಬೇಕು.
ಇಲ್ಲಿ ಶಾಸಕರು ಮತ್ತು ಅಧಿಕಾರಿಗಳು ನೇರ ಶಾಲೆಯೊಳಗೆ ಬಂದು ತನಿಖೆ ಮುಂದುವರಿಸಿದರೆ ಇತ್ಯರ್ಥ ಆಗುತ್ತಿತ್ತು. ಆದರೆ ಶಾಸಕರು ಮತ್ತು ಅಧಿಕಾರಿಗಳು ಗೇಟಿನ ಬಳಿ ನಿಂತರೇ ಹೊರತು ಒಳಗೆ ಬರಲೇ ಇಲ್ಲ. ಕಚೇರಿಯಲ್ಲಿ ತನಿಖೆ ಮಾಡುತ್ತಿದ್ದ ಕಿರಿಯ ಅಧಿಕಾರಿ ತನ್ನ ತನಿಖೆ ನಿಲ್ಲಿಸಿ ಹೋರ ಹೋಗಿದ್ದರು. ಅಂದರೆ ಪ್ರತಿಭಟನೆಯ ಮೊದಲೇ ತನಿಖೆ ಪ್ರಾರಂಭವಾಗಿದೆ. ಅದನ್ನು ನಿಲ್ಲಿಸಿದ್ದು ಶಾಸಕರು ಮತ್ತು ಹಿರಿಯ ಅಧಿಕಾರಿಗಳು.
ಶಾಸಕರು ಕೇವಲ ಅಧಿಕಾರಗಳ ಜೊತೆ ನೇರವಾಗಿ ಶಾಲೆಯ ಒಳಗೆ ಹೋಗುವ ಅಧಿಕಾರವಿದೆ. ಅಥವಾ ಹಿರಿಯ ಅಧಿಕಾರಿಗಳನ್ನು ಕಚೇರಿಗೆ ಕರೆಸಿಕೊಳ್ಳುವ ಅಧಿಕಾರವೂ ಇದೆ. ಅವರು ಅದನ್ನೆಲ್ಲ ಬಿಟ್ಟು ಒಮ್ಮೆಲೇ, ತಾವೇ ಪ್ರತಿಭಟನೆಗೆ ಇಳಿದದ್ದು, ಮಕ್ಕಳನ್ನು ಸೇರಿಸಿಕೊಂಡದ್ದು ಯಾಕೆ ಅನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ.
ಇನ್ನೂ ಒಂದು ವಿಚಿತ್ರವಿದೆ. ಈ ಪ್ರಕರಣದ ಸಂಘಟಕಿ ಎನ್ನಲಾದ ಪೋಷಕಿ “ತನ್ನ ಮಗಳು ಬಂದು, ಶಿಕ್ಷಕಿ ಹಿಂದೂ ದೇವರ ಅವಹೇಳನ ಮಾಡಿದ್ದಾರೆ “ಎಂದು ತನ್ನ ಗಮನಕ್ಕೆ ತಂದಳು ಎಂಬ ಹೇಳಿಕೆ ನೀಡಿದ್ದಾರೆ.
ಅವರ ಮಗಳು 7th B. ಆದರೆ, ಗಲಾಟೆಗೆ ಕಾರಣವಾದ ಪಾಠವಾಗಿದ್ದು 7th A ನಲ್ಲಿ. ಅಂದರೆ ಅವಳ ಮಗಳು ಆ ಕ್ಲಾಸಿನಲ್ಲೇ ಇರಲಿಲ್ಲ. ಹಾಗಾದರೆ ಅವರ ಮಗಳು ಇದನ್ನು ಹೇಳಿದ್ದು ಹೇಗೆ?
ಇನ್ನು ಕ್ರೈಸ್ತ ಶಾಲೆಗಳು ಹಿಂದೂ ವಿರೋಧಿ, ಹಿಂದೂಧರ್ಮದ ಅವಹೇಳನ ಮಾಡುತ್ತಾರೆ, ಕ್ರೈಸ್ತ ಧರ್ಮ ತುರುಕಿಸುತ್ತಾರೆ ಇತ್ಯಾದಿ ಪ್ರಶ್ನೆ ಕೇಳಿದ್ದೀರಿ. ನಾನು ನೇರವಾಗಿ ಅವರಿಗೂ ಕೇಳಿದೆ. ಅವರ ಉತ್ತರಗಳು, ಸರ್, ನಮ್ಮ ಶಾಲೆಗೆ 60 ವರ್ಷವಾಗಿದೆ. 60 ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಹೊರಹೊಗಿದ್ದಾರೆ. ನೀವು ಒಂದಿಷ್ಟು ನಿರ್ದಿಷ್ಟ ದೂರುಗಳನ್ನು ತೋರಿಸಿ. ಶೇ 70ಕ್ಕೂ ಹೆಚ್ಚು ಹಿಂದೂ ವಿದ್ಯಾರ್ಥಿಗಳೇ ಇರುವುದು. ಹಿಂದೂ ಮುಸ್ಲಿಂ ಕ್ರೈಸ್ತ ಶಿಕ್ಷಕರು ಇದ್ದಾರೆ (ದಾಖಲೆಗಳನ್ನು ತೋರಿಸಿದ್ದಾರೆ)
ಇದನ್ನೂ ಓದಿ ಕರಾವಳಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಯಾಕಿಲ್ಲ? ಶಾಸಕರು ಹೋರಾಡುತ್ತಿರುವುದು ಯಾವ ವಿಚಾರಕ್ಕೆ?
ದೀಪಾವಳಿ, ರಂಜಾನ್, ಕ್ರಿಸ್ಮಸ್ ಆಚರಿಸುತ್ತೇವೆ. ಸಂದರ್ಭಕ್ಕೆ ಪೂರಕವಾಗಿ ಸೂಕ್ತವಾದ ಬೈಬಲ್, ಭಗವದ್ಗೀತೆ ಮತ್ತು ಕುರಾನಿನ ವಾಕ್ಯ ಓದಿಸುತ್ತೇವೆ. ನೀವು ಗ್ರಂಥಾಲಯಕ್ಕೆ ಹೋಗಿ ನೋಡಿ ಎಲ್ಲವೂ ಇದೆ. (ನೋಡಿದೆ. ಇರುವುದೂ ನಿಜ)
ಪ್ರತೀ ವರ್ಷ ನಾವು ಬಡ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ನೀಡಿದ್ದೇವೆ. ಕೊರೋನಾ ಸಮಯದ ಒಂದು ವರ್ಷ ಸುಮಾರು 4.5 ಲಕ್ಷ ರೂ. ರಿಯಾಯಿತಿ ಮಾಡಿದ್ದೇವೆ. ಅದರ ಹೆಚ್ಚಿನ ಫಲಾನುಭವುಗಳು ಹಿಂದೂ ವಿದ್ಯಾರ್ಥಿಗಳು. (ತಗೊಳ್ಳಿ.. ದಾಖಲೆ ತೋರಿಸಿದ್ದಾರೆ. ನಾನೂ ಇಟ್ಟುಕೊಂಡಿದ್ದೇನೆ)
ಈಗ ಹೇಳಿ ಸರ್, ನಮ್ಮ ಶಾಲೆಯಿಂದ ಕಲಿತ ಕಾರಣಕ್ಕೆ ಮತಾಂತರ ಆದ ವಿದ್ಯಾರ್ಥಿಗಳ ಪಟ್ಟಿ ನೀವು ಹೇಳಬಹುದಾ? ಆರೋಪ ನನ್ನದಲ್ಲ. ಈ ಪ್ರಶ್ನೆ ಕೇಳಿದವರಿಗೆ ಇದನ್ನು ತಲುಪಿಸುವೆ ಎಂದಿದ್ದೇನೆ.
ಸರಿ ನಿಮ್ಮ ಶಿಕ್ಷಕಿ ತಪ್ಪು ಮಾಡಿದ್ದಾರೆ ಎಂದು ಅನ್ನಿಸುವುದಾ? ಕೇಳಿದೆ. ಕಳೆದ 6 ವರ್ಷಗಳಿಂದ ಪಾಠ ಮಾಡುತ್ತಿದ್ದಾರೆ. ಯಾವ ದೂರೂ ಬಂದಿಲ್ಲ. ಈಗಲೂ ದೂರಿನ ವಿವರ ನಮಗೆ ಕೊಡದೇ ಗಲಾಟೆಯಾಗುತ್ತಿದೆ. ಅದರ ತನಿಖೆ ಸರಿಯಾಗಿ ಆಗಲಿ. ಅವರು ತಪ್ಪು ಮಾಡಿದ್ದರೆ ನಾವು ಖಂಡಿತ ಒಪ್ಪುತ್ತೇವೆ. ಆದರೆ ಅವರಿಂದ ಒಂದು ವಿವರಣೆಯನ್ನೂ ಕೇಳದೇ ಶಾಲೆಯಿಂದ ಹೊರ ಕಳಿಸಿದ್ದು ನ್ಯಾಯವಲ್ಲ. ವಿದ್ಯಾರ್ಥಿಗಳು ಶಿಕ್ಷಕರ ವಿರುದ್ಧ ಘೋಷಣೆ ಕೂಗಿದ್ದು, ಶಾಸಕರು ನಮ್ಮನ್ನು ರಸ್ತೆಯಲ್ಲಿ ನಿಲ್ಲಿಸಿ ಬೈದು ಗದರಿಸಿದ್ದು ನಮಗೆ ಬೇಸರವಾಗಿದೆ.
ಸರಿ ನಿಮ್ಮ ವಿದ್ಯಾರ್ಥಿಗಳು ಹೇಳಿದ ದೂರುಗಳ ಬಗ್ಗೆ ನೀವು ಎನು ಹೇಳುವುದು. ಅವರ ದೂರಿನ ಬಗ್ಗೆ ತಜ್ಞರಿಂದ ತನಿಖೆಯಾಗಲಿ. ನಮ್ಮ ಅಭ್ಯಂತರವಿಲ್ಲ.
ಒಟ್ಟಾರೆ ಈ ಪ್ರಕರಣ ನಮಗೆ ಒಂದು ಅನುಭವ. ಒಂದು ಘಟನೆ ಆದ ತಕ್ಷಣ ಊರಿಗೆ ಊರೇ ಸಮಸ್ಯೆಯ ಮೇಲೆ ಬೀಳುವ ಹೊಡೆತಕ್ಕೆ ನೈಜವಾದ ಸಮಸ್ಯೆ ಆ ಗುಂಪಿನ ನಡುವೆ ತಪ್ಪಿಸಿಕೊಳ್ಳತ್ತದೆ. ಇಲ್ಲಿ ಶಿಕ್ಷಕಿಯ ಮೇಲಿನ ಆರೋಪ ಮತ್ತು ತನಿಖೆ ಇಷ್ಟೇ ವ್ಯಾಪ್ತಿಯಲ್ಲಿರಬೇಕಾದ ವಿಚಾರ, ಮತಾಂತರ, ಕ್ರೈಸ್ತ ಶಾಲೆಗಳಿಂದ ಹಿಂದೂ ವಿದ್ಯಾರ್ಥಿಗಳು ಹೊರಗೆ ಬನ್ನಿ ಇಂತಹ ಭೀಕರ ಹೇಳಿಕೆಗಳಿಗೆ ವಿಸ್ತರಿಸಿಕೊಂಡು ಅಸಲಿ ಸಮಸ್ಯೆ ಗೌಣವಾಯಿತು. ಅದಕ್ಕೆ ಕಾರಣ ಶಾಸಕರ ದುಡುಕಿನ ಹೇಳಿಕೆ ಮತ್ತು ವರ್ತನೆ. ಎಲ್ಲದರ ಬಗ್ಗೆ ತನಿಖೆಯಾಗಲಿ. ಸತ್ಯ ಹೊರಬರಲಿ.

ಎಂ ಜಿ ಹೆಗಡೆ, ಮಂಗಳೂರು
ಲೇಖಕ, ಜನಪರ ಹೋರಾಟಗಾರ
ಸಾವಧಾನದ ಬರೆಹ.
ಮತ್ತು ಇಂತಹ ವಿಷಯಗಳಲ್ಲಿ ಇತಹ ಸಾವಧಾನವೇ ಇರಬೇಕಾದ್ದು.
ಶಾಲೆಯ ಆಡಳಿತ ಮಂಡಳಿ ಮತ್ತು ಸರಕಾರಗಳು ಕೂಡ ಕರ್ತವ್ಯ ಲೋಪ ಮಾಡಿದಂತೆ ಈ ಬರೆಹ ಓದಿದಾಗ ಅನಿಸುತ್ತದೆ.
ಅಂದು ವರ್ಗದಲ್ಲಿದ್ದ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಮತ್ತು ಶಿಕ್ಷಕಿ ಶ್ರೀಮತಿ ಪ್ರಭಾ ಅವರನ್ನು ವಿಶದವಾಗಿ ಇನ್ನೊಮ್ಮೆ ಬೇಕಾದರೆ ಹಿರಿಯ ಅಧಿಕಾರಿಗಳು ವಿಚಾರಿಸಿ ಸತ್ಯ ಶೋಧನೆ ನಡೆಸಬೇಕು.
ಧರ್ಮದ ಅಭಿಮಾನ ಇರುವುದು ಯಾರ ತಪ್ಪೂ ಅಲ್ಲ.ಆದರೆ ಶಿಕ್ಷಕರು ಪಾಠ ಮಾಡುವಾಗ ತಮ್ಮ ಧರ್ಮದ ಪ್ರೀತಿಗಾಗಿ ಅನ್ಯ ಧರ್ಮಗಳನ್ನು ಹಳಿಯಬಾರದೆಂಬುದು ಎಲ್ಲರಿಗು ತಿಳಿದ ವಿಚಾರವೇ.ಇಲ್ಲಿ ಹಾಗಾಗಿದೆಯೇ ಎಂಬುದನ್ನು ನಿಷ್ಪಕ್ಷಪಾತವಾದ ತನಿಖೆಯ ಮೂಲಕ ಕಂಡುಕೊಳ್ಳಬೇಕು.ವಿದ್ಯಾರ್ಥಿಗಳು ಕೂಡ ತಾವು ಒಳ್ಳೆಯದನ್ನು ಕಲಿಯಲು ಬಂದವರು ಎಂಬುದನ್ನು ಅರಿತು ಮುಂದೆ ಸಾಗಬೇಕು.
ಒಳ್ಳೆಯ ತನಿಖೆಯಾಗಲಿ.ಮತ್ತು ಸತ್ಯ ಹೊರಬರಲಿ.ಪಕ್ಷಗಳು ಕೂಡ ಸತ್ಯವನ್ನು ಮಾತ್ರ ಬೆಮಬಲಿಸಲಿ.
Thank you for writing so clearly. I have seen your interview too. May God bless you so that you may continue to speak the truth at all times.
ಪ್ರಕರಣದಲ್ಲಿ ತನಿಖೆ ಮಾಡುತ್ತಿದ್ದ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಅಂತೆ ಇದು ನಿಜವೇ?
ಅತ್ಯಂತ ವಿವೇಚನೆಯಿಂದ ಕೂಡಿದ ನ್ಯಾಯ ಪರ ಲೇಖನ!ಇಡೀ ಪ್ರಕರಣವನ್ನು ರಾಜಕೀಯಗೊಳಿಸಿದ ಶಾಸಕರಿಗೆ ಧಿಕ್ಕಾರ ಮತ್ತು ಅವರ ಮೇಲೆ ಕೇಸು ದಾಖಲಿಸಿ😡