ಈ ಸಮ್ಮೇಳನ ತಮಗೆ ಬೇಕಾದವರನ್ನು ಮೆಚ್ಚಿಸುವುದಕ್ಕೆ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರು, ಶಾಸಕರಾದ ಜನಾರ್ದನ ರೆಡ್ಡಿಯವರಿಗೆ ಮತ ಹಾಕಿದವರಿಗೆ ಮತ್ತು ಹಾಕಿಸಿದವರಿಗೆ ಕೃತಜ್ಞತೆಗಳನ್ನು ಹೇಳುವ ಸಮ್ಮೇಳನ ಎಂಬಂತಾಗಿದೆ.
ಮಾರ್ಚ್ 27 ಮತ್ತು 28ರಂದು ಗಂಗಾವತಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ, ತರಾತುರಿಯಲ್ಲಿ ರಾಜಕೀಯ ಪ್ರತಿಷ್ಠೆಗಾಗಿ ನಡೆಸಲಾಗುತ್ತಿದೆ. ಈ ಸಮ್ಮೇಳನದ ಕುರಿತಾಗಿ ಯಾವುದೇ ಪೂರ್ವಭಾವಿ ಸಭೆಗಳನ್ನು ನಡೆಸದೇ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಅಜೀವ ಸದಸ್ಯರಿಗೆ ಕಿಂಚಿತ್ತು ಮರ್ಯಾದೆ ಕೊಡದೆ, ಕ.ಸಾ.ಪ.ಪದಾಧಿಕಾರಿಗಳು ತಮಗೆ
ಅನುಕೂಲಕರವಾಗುವ ರೀತಿಯಲ್ಲಿ ಹಾಗೂ ಅನುದಾನ ನೀಡಿದವರ ಮನವೊಪ್ಪಿಸುವ ಸಮ್ಮೇಳನ ಮಾಡುತ್ತಿರುವಂತಿದೆ.
ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನವಲ್ಲ, ಸಾಹಿತಿಗಳ ಸಮ್ಮೇಳನವೂ ಅಲ್ಲ, ಇದು ಸಾರ್ವಜನಿಕರ ಸಮ್ಮೇಳನ. ಕಾರಣ ಕನ್ನಡ ಸಾಹಿತ್ಯಪರಿಷತ್ತಿಗೆ, ಸರ್ಕಾರದ ಅನುದಾನ ಪೂರೈಕೆಯಾಗುವುದರಿಂದ, ಪ್ರತಿಯೊಬ್ಬ ಕನ್ನಡ ಪ್ರಜೆಯ ಸ್ವಾಭಿಮಾನದ ಸಮ್ಮೇಳನ ಎಂಬುದು ಯಾರು ಅಲ್ಲಗಳೆಯುವುದಿಲ್ಲ. ಆದರೆ ಈ ಸಮ್ಮೇಳನ ತಮಗೆ ಬೇಕಾದವರನ್ನು ಮೆಚ್ಚಿಸುವುದಕ್ಕೆ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರು ಮತ್ತು ಶಾಸಕರಾದ ಜನಾರ್ದನ ರೆಡ್ಡಿಯವರಿಗೆ ಮತ ಹಾಕಿದವರಿಗೆ ಮತ್ತು ಹಾಕಿಸಿದವರಿಗೆ ಕೃತಜ್ಞತೆಗಳನ್ನು ಹೇಳುವ ಸಮ್ಮೇಳನ ಎಂಬಂತಾಗಿದೆ.
ಇಂದು ಪತ್ರಿಕೆಗಳಲ್ಲಿ, ಸಮ್ಮೇಳನದ ರೂಪುರೇಷೆಯಲ್ಲಿ ಕೆಲವೊಂದು ಲೋಪವಾಗಿರಬಹುದು. ಹಾಗಂತ ಯಾವುದೇ ತಪ್ಪುಗಳಾಗಿಲ್ಲ ಎಂಬ ಜಿಲ್ಲಾ ಅಧ್ಯಕ್ಷರ ಹೇಳಿಕೆಗೆ ನನ್ನ ಈ ಲೇಖನದ ಪ್ರತಿಕ್ರಿಯೆ.
ಸಾರೋಟದ ಮೆರವಣಿಗೆಗಾಗಿ ಹಂಬಲಿಸುವ ಸಾಹಿತಿಗಳಿಗೆ ಸಮ್ಮೇಳನ ಮೀಸಲಾಗಿರುತ್ತದೆ ಎಂಬುವುದು ಇತ್ತೀಚಿನ ಪ್ರಜ್ಞಾವಂತರ ಅನಿಸಿಕೆ. ಯಾವುದೇ ಸಾಹಿತ್ಯ ಸಮ್ಮೇಳನಗಳು, ಸಮಾಜದ ಅಂಕುಡೊಂಕುಗಳನ್ನು ಕಾದ ಕುಲುಮೆಯಲ್ಲಿ ತಟ್ಟಿ ತಿದ್ದುವ ಅಲುಗಿನಂತಾಗಬೇಕು. “ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು” ಎನ್ನುವ ಬಸವಣ್ಣನ ನುಡಿಯಂತೆ, ಕೊಪ್ಪಳ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಈ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳು ಧ್ವನಿ ಯಾಗಬೇಕಿತ್ತು. ಅದಾಗದೇ ಕೇವಲ ಪ್ರತಿಷ್ಠೆಗಾಗಿ ನಡೆಸಲಾಗುತ್ತಿರುವುದು ಬಗ್ಗೆ ಜಿಲ್ಲ ಕ.ಸಾ.ಪ ಅವಲೋಕನ ಮಾಡಿಕೊಳ್ಳಬೇಕು.

ಕೊಪ್ಪಳ ಜಿಲ್ಲೆ ಜೈನಕಾಶಿ ಎಂದು ಪ್ರಸಿದ್ಧಿಯಾಗಿದೆ. ಇಲ್ಲಿಯ ಇತಿಹಾಸ ಜಾಗತಿಕ ಮಟ್ಟದಲ್ಲಿ ದಾಖಲಾಗಿದೆ. ಇಲ್ಲಿಯ ದಾಸ ಸಾಹಿತ್ಯ, ಶರಣರ, ಅವಧೂತರ ಸಾಹಿತ್ಯ, ಜಾನಪದ ಕಲೆಗಳು, ಶಿಲ್ಪ ಕಲೆಗಳು, ಸಾಲು ಸಾಲು ಬೆಟ್ಟಗಳು ಶೃಂಗಾರ ಕಾವ್ಯವನ್ನೇ ಸಾರುತ್ತಿರುವ ರಾಶಿ- ರಾಶಿ ಕಲ್ಲುಗಳ ನೈಸರ್ಗಿಕ ವಾಸ್ತುಶಿಲ್ಪ, ಭವ್ಯವಾದ ಧಾರ್ಮಿಕ ಪರಂಪರೆ, ಬಂಡಾಯ ಸಾಹಿತ್ಯ ಎಲ್ಲವೂ ಅವಿಸ್ಮರಣೀಯ.
ವಿಶೇಷವಾಗಿ ದಶಕಗಳಿಂದ ಅಂಜನಾದ್ರಿ ಪರ್ವತ ರಾಷ್ಟ್ರಮಟ್ಟದ ಪ್ರವಾಸ ತಾಣವಾಗಿರುವುದು ಕೊಪ್ಪಳ ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ. ಅದಲ್ಲದೆ ಕರ್ನಾಟಕದ ಏಳು ಅದ್ಭುತಗಳಲ್ಲಿ ಹಿರೇಬೆಣಕಲ್ಲಿನ “ಮೌರ್ಯರ ಬೆಟ್ಟ” ಮೊದಲ ಸ್ಥಾನ ಪಡೆದು ಜಿಲ್ಲೆಯ ಐತಿಹಾಸಿಕ ಕುರುಹಿವಿಗೆ ಸಾಕ್ಷಿಯಾಗಿದೆ.
ಇಂತೆಲ್ಲಾ ಭವ್ಯ ಇತಿಹಾಸ ಹೊಂದಿದ ಕೊಪ್ಪಳ ಜಿಲ್ಲೆಯಲ್ಲಿ ಸಮಸ್ಯೆಗಳಿಗೂ ಕೊರತೆ ಇಲ್ಲ.ಇತ್ತೀಚಿಗೆ ಸಣಾಪುರದಲ್ಲಿ ನಡೆದಂತಹ ವಿದೇಶಿ ಮಹಿಳೆ ಹಾಗೂ ಸ್ಥಳೀಯ ಮಹಿಳೆಯ ಮೇಲೆ ನಡೆದಂತಹ ಸಾಮೂಹಿಕ ಅತ್ಯಾಚಾರ ಮತ್ತು ಓರ್ವನ ಕೊಲೆ ಅಂತಾರಾಷ್ಟ್ರ ಮಟ್ಟದಲ್ಲಿ ನಮ್ಮ ಜಿಲ್ಲೆಗೆ ಕಳಂಕ ತಂದಿದೆ. ಅಲ್ಲದೆ ಹೆಚ್ಚುತ್ತಿರುವ ಡ್ರಗ್ಸ್, ಗಾಂಜಾ, ಚಟುವಟಿಕೆಗಳು,ಇಸ್ಪೀಟ್ ಅಡ್ಡಗಳು ಸಮಾಜದ ಸ್ವಾಸ್ಥಕ್ಕೆ ಹಾನಿಯುಂಟುಮಾಡುತ್ತಿವೆ. ಇವೆಲ್ಲವುದರಿಂದ, ಯುವಜನತೆಯ ಭವಿಷ್ಯ ಅಂಧಕಾರದಲ್ಲಿದೆ. ಬಹು ಮುಖ್ಯವಾಗಿ ಇತ್ತೀಚೆಗೆ ಕೊಪ್ಪಳದ ಬಿಎಸ್ಪಿಎಲ್ ಕಾರ್ಖಾನೆಯ ಕುರಿತು ಬಹುದೊಡ್ಡ ಆಂದೋಲನ ನಡೆದು ತಾತ್ಕಾಲಿಕ ನಿಲುಗಡೆಗೆ ಸರ್ಕಾರ ಆದೇಶಿಸಿದರೂ, ಇನ್ನೂ ಸಂಪೂರ್ಣ ನಿಲುಗಡೆಯಾಗದೆ ಕೊಪ್ಪಳ ನಾಗರಿಕರು ಆತಂಕದಲ್ಲಿದ್ದಾರೆ. ಅಲ್ಲಿಯ ವಾಯುಮಾಲಿನ್ಯ ಜನತೆಯ ಆರೋಗ್ಯದ ಮೇಲೆ ಹಾನಿ ಉಂಟು ಮಾಡುತ್ತಿದ್ದರೂ, ನಿರೀಕ್ಷಿತ ಮಟ್ಟದ ಫಲಿತಾಂಶ ಸಿಗದ ಕಾರಣ ಚಳವಳಿಗಾರರು ಇನ್ನೂ ಹೋರಾಟ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ದಲಿತ ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಿವೆ. ಅದಕ್ಕಾಗಿ ಅನೇಕ ಹೋರಾಟಗಳು ನಡೆಯುತ್ತಿವೆ. ಮಹಿಳೆಯರ ದೌರ್ಜನ್ಯಗಳು ಎಗ್ಗಿಲ್ಲದೆ ಸಾಗುತ್ತಿವೆ. ರೈತರ ಸಂಕಷ್ಟಗಳು ಮುಗಿಲು ಮುಟ್ಟಿವೆ. ಇವೆಲ್ಲವೂ ಸಮಾಜದ ಮೌಲ್ಯಾಧಾರಿತ ಬದುಕಿಗೆ ಕೊಡಲಿ ಪೆಟ್ಟು ಕೊಡುತ್ತಿದ್ದರೂ, ಈ ಎಲ್ಲಾ ವಿಷಯಗಳು ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಚರ್ಚೆ ಮಾಡದಿರುವುದು ಶೋಚನೀಯ. ಇದು ಕೇವಲ ಲೋಪವಲ್ಲ, ಬಹುದೊಡ್ಡ ಪ್ರಮಾದವೆಂದು ಜಿಲ್ಲಾಧ್ಯಕ್ಷರು ಭಾವಿಸದಿರುವುದು ಆಶ್ಚರ್ಯಕರ ಸಂಗತಿ.
ಇನ್ನು ಈ ಅದ್ದೂರಿಯ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ನೋಡಿದರೆ, ಇದು ಸಾಹಿತ್ಯ ಸಮ್ಮೇಳನವೋ, ಸನ್ಮಾನ ಸಮ್ಮೇಳನವೋ ಅಥವಾ ಧಾರ್ಮಿಕ ಸಮ್ಮೇಳನವೋ ಅರ್ಥವಾಗುತ್ತಿಲ್ಲ?
20 ಪುಟಗಳ ಆಹ್ವಾನ ಪತ್ರಿಕೆಯಲ್ಲಿ, ಒಟ್ಟು ಸುಮಾರು 72 ಸಾಧಕರಿಗೆ ಸನ್ಮಾನ ಮಾಡುತ್ತಿರುವುದು ಉಸಿರುಗಟ್ಟಿಸುವ ಹಾಗಿದೆ. ಅಲ್ಲದೆ ಗೋಷ್ಠಿ-1ರಲ್ಲಿ ಉಪನ್ಯಾಸ 3 ಇದ್ದರೆ, ಉಪಸ್ಥಿತರ ಸಂಖ್ಯೆ 53. ಗೋಷ್ಠಿ-2ರಲ್ಲಿ 32 ಕವಿಗಳಿದ್ದರೆ ಉಪಸ್ಥಿತರು- 35. ಗೋಷ್ಠಿ 3ರಲ್ಲಿ ಉಪನ್ಯಾಸ-1 ಇದ್ದರೆ, ಉಪಸ್ಥಿತಿ 14. ಗೋಷ್ಠಿ-4ರಲ್ಲಿ ಮಹಿಳಾ ಕವಿಗಳು 34 ಇದ್ದರೆ, ಉಪಸ್ಥಿತರು -57.
ಗೋಷ್ಠಿ-5 ರಲ್ಲಿ ಉಪನ್ಯಾಸ-3 ಇದ್ದರೆ ಉಪಸ್ಥಿತಿಯ -57. ಗೋಷ್ಠಿ-6ರಲ್ಲಿ ಉಪನ್ಯಾಸ- 4 ಇದ್ದರೆ, ಉಪಸ್ಥಿತಿಯ-60 ಇದು ಉಪಸ್ಥಿತರಿಗೆ ಉಪದ್ರ ಕೊಟ್ಟ ಹಾಗಿದೆ. ಒಟ್ಟಾರೆ ಇದ್ದಬದ್ದವರನ್ನೆಲ್ಲಾ ಕರೆದು ಕೂಡಿಸಿ ಸಮಾಧಾನ ಮಾಡಿದಂತಿದೆ. ಒಂದು ವೇಳೆ ಇಷ್ಟೊಂದು ಸಂಖ್ಯೆಯಲ್ಲಿ ಸಾಧಕರಿಗೆ ಸನ್ಮಾನ ಮಾಡುವುದು ಅನಿವಾರ್ಯ ಆಗಿದ್ದರೆ, ಮೂರನೇ ದಿನ ಕೇವಲ ಸನ್ಮಾನಕ್ಕೆ ಮೀಸಲಾಗಿಟ್ಟಿದ್ದರೆ, ಸಾಧಕರಿಗೂ ಗೌರವ ಕೊಟ್ಟಂತಾಗುತ್ತಿತ್ತು.
ಅಲ್ಲದೆ ಗೋಷ್ಠಿಗಳಿಗಿಂತ ಕವಿಗಳ ಸಂಖ್ಯೆ ಹೆಚ್ಚಿರುವುದರಿಂದ ಇದು ಕಾವ್ಯ ಸಮ್ಮೇಳನವೋ ಎಂಬ ಸಂಶಯವನ್ನು ಹುಟ್ಟುಹಾಕುತ್ತದೆ.
ಇಷ್ಟಕ್ಕೆ ಮುಗಿಯಲಿಲ್ಲ, ಈ ಸಮೇಳನದಲ್ಲಿ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡದಿರುವುದು ಎದ್ದು ಕಾಣುತ್ತಿದೆ. ದಲಿತ ಸಾಹಿತ್ಯಕ್ಕೆ ಯಾವುದೇ ಮನ್ನಣೆ ಕೊಡದಿರುವುದು ಈ ಸಾಹಿತ್ಯ ಸಮ್ಮೇಳನವು ಸಾಮಾಜಿಕ ಅಸಮಾನತೆಯ ಕೈಗನ್ನಡಿಯಾಗಿದೆ.
ಜಿಲ್ಲೆಯ ದಲಿತ ಹೋರಾಟಗಾರರ ನಿರ್ಲಕ್ಷ, ಅಲ್ಪಸಂಖ್ಯಾತರ ಕಡೆಗಡನೆ ಅದರಲ್ಲೂ ಮುಖ್ಯವಾಗಿ ಮುಸ್ಲಿಮರ ಬಗ್ಗೆ ತಾತ್ಸಾರ, ಮಹಿಳಾ ಹೋರಾಟಗಾರರ ಬಗ್ಗೆ ಅಲಕ್ಷ್ಯ ಎಲ್ಲವೂ ಸಮ್ಮೇಳನದ ಬಹುದೊಡ್ಡ ಪ್ರಮಾದಗಳಾಗಿವೆ. ಬಹುಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಈ ಎರಡು ದಿನದ ಅದ್ದೂರಿ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಳ್ಳುತ್ತಿರುವ ಪುಸ್ತಕಗಳ ಸಂಖ್ಯೆ ಕೇವಲ ನಾಲ್ಕು, ಇವೆಲ್ಲವೂ ಕ ಸಾ.ಪ ಜಿಲ್ಲಾ ಅಧ್ಯಕ್ಷರು ತಪ್ಪು ಎಂದು ಭಾವಿಸದೆ ಹೋಗುತ್ತಿರುವುದು ವಿಪರ್ಯಾಸ.
ಗಮನಿಸಬೇಕಾದ ಅಂಶವೆಂದರೆ, ಎರಡು ದಿನದ ವೇದಿಕೆಗಳಲ್ಲಿ ಸಾರಾಸಗಟಾಗಿ, ಕೊಪ್ಪಳ ಜಿಲ್ಲೆಯ ಹರ- ಗುರು -ಚರಮೂರ್ತಿಗಳಿಗೆ ದಿವ್ಯ ಸಾನಿಧ್ಯ ಕೊಟ್ಟು ಆಹ್ವಾನಿಸಿರುವುದು ಸೋಜಿಗದ ಸಂಗತಿ ಅಷ್ಟೇ ಅಲ್ಲ, ಖೇದಕರವೂ ಹೌದು. ಒಂದು ವೇಳೆ ಈ ಆಹ್ವಾನವನ್ನು ಪರಿಗಣಿಸಿ ಕೊಪ್ಪಳ ಜಿಲ್ಲೆಯ ಎಲ್ಲಾ ಸ್ವಾಮೀಜಿಗಳು ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದರೆ, ಒಂದು ಕ್ಷಣ ಕಲ್ಪನೆ ಮಾಡಿಕೊಂಡರೆ ಅದು ಧಾರ್ಮಿಕಜನ ಸಮ್ಮೇಳನವೆಂದು ಅನ್ನಿಸದೇ ಹೋದೀತೆ?
ಕೊನೆಯದಾಗಿ ಜಿಲ್ಲಾ ಸಾಹಿತ್ಯ ಸಮ್ಮೇಳನ, ನವಂಬರ್- ಡಿಸೆಂಬರ್- ಜನವರಿ ತಿಂಗಳೊಳಗೆ ನಡೆಸುವುದು ಸೂಕ್ತ. ಪ್ರಸ್ತುತ ಪರೀಕ್ಷಾ ಸಂದರ್ಭದ ಮಾರ್ಚ್ ತಿಂಗಳಲ್ಲಿ ನಡೆಸುವುದು ಸೂಕ್ತವಲ್ಲ. ಕನಿಷ್ಠ ವಾರದ ಕೊನೆಯ ದಿನಗಳಾದ ಶನಿವಾರ ಮತ್ತು ರವಿವಾರ ದಿನಗಳಂದು ಸಮ್ಮೇಳನ ನಡೆಸದೆ, ಗುರುವಾರ ಮತ್ತು ಶುಕ್ರವಾರ ನಡೆಸಲು ತೀರ್ಮಾನಿಸಿರುವುದು ಅದೆಷ್ಟು ಸರಿ? ಈ ನಿಟ್ಟಿನಲ್ಲಿ ಕ.ಸಾ.ಪ ಯೋಚಿಸಬೇಕಿದೆ. ಒಟ್ಟಾರೆ ಕನ್ನಡ ಸಾಹಿತ್ಯ ಪರಿಷತ್ತಿನ 13ನೆಯ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನ ಡಿಜೆ ಸೌಂಡಿನ ಸಂಗೀತದಂತಿದೆ.

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
jayakumarcsj@gmail.com