ಸಿನಿಮಾಗಳನ್ನು ಆಯ್ಕೆ ಮಾಡುವಾಗ ಸರ್ಕಾರ, ತನ್ನ ನೀತಿಗಳ ವಿರುದ್ಧ, ಧರ್ಮಗಳನ್ನು ಬಗ್ಗೆ ಚರ್ಚಿಸುವ ವಸ್ತುವಿರುವ ಸಿನಿಮಾಗಳನ್ನು ಆಯ್ಕೆ ಮಾಡಬಾರದು ಎಂದು ಸ್ಪಷ್ಟ ನಿರ್ದೇಶನ ಕೊಟ್ಟಿದೆ. ಹಾಗಾಗಿ ಗುಟ್ಟಮಟ್ಟದ ಸಿನಿಮಾಗಳನ್ನು ಆಯ್ಕೆ ಮಾಡಲು ಆಗಿಲ್ಲ ಎಂದು ಆಯ್ಕೆ ಸಮಿತಿಯ ಸದಸ್ಯರೊಬ್ಬರು ಹೇಳಿಕೊಂಡರು
ಗೋವಾದಲ್ಲಿ ಪ್ರತಿವರ್ಷ ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿನಿಮಾ ಕುತೂಹಲಿಗಳು ಚಾತಕಪಕ್ಷಿಯಂತೆ ಕಾಯುತ್ತಾರೆ. ಕಾರಣ – IFFI ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗುವ ಜಾಗತಿಕ ಸಿನಿಮಾಗಳು ಗುಣಮಟ್ಟದಿಂದ ಕೂಡಿದ್ದು ಉತ್ಕೃಷ್ಟತೆಯನ್ನು ಮೆರೆಯುತ್ತದೆ.
ಅದೇ ನಿರೀಕ್ಷೆಯಲ್ಲಿ ನವೆಂಬರ್ 20ರಿಂದ 28ರವರೆಗೂ ನಡೆಯುತ್ತಿರುವ 54ನೇ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಇತ್ತು. ಆದರೆ, ಮೊದಲ ದಿನ ಉತ್ಸಾಹದಿಂದ ಪಣಜಿಯ ಎಂಟರ್ಟೈನ್ಮೆಂಟ್ ಸೊಸೈಟಿ ಆಫ್ ಗೋವಾ (ಐನಾಕ್ಸ್) ಹೆಜ್ಜೆ ಇಟ್ಟ ಕೂಡಲೇ ಅಲ್ಲಿದ್ದ ನೀರಸ ವಾತಾವರಣ ನೋಡಿ ಮನಸ್ಸಿಗೆ ಪಿಚ್ಚೆನಿಸಿತು. ಹಬ್ಬದ ವಾತಾವರಣವಿರಬೇಕಿದ್ದ ಆವರಣದಲ್ಲಿ, ಮದುವೆಗೆ ಒಲ್ಲದ ಮದುವಣಿಗಿತ್ತಿಯ ದಿಬ್ಬಣದ ತಯಾರಿಯಂತೆ, ಆಗಷ್ಟೇ ಪ್ರದರ್ಶನದ ಫ್ಲೆಕ್ಸ್ ಚೌಕಟ್ಟುಗಳಿಗೆ ಮೊಳೆ ಹೊಡೆಯುತ್ತ ಕುಳಿತಿದ್ದರು.
ಸಿನಿಮಾ ಪ್ರೇಮಿಗಳಿಗೆ ಆವರಣದ ಅಲಂಕಾರ ಅಷ್ಟು ಮುಖ್ಯವಾಗಬಾರದು. ಸಿನಿಮಾ ನೋಡಿ ಸಂಭ್ರಮಿಸಬೇಕಷ್ಟೆ ಎಂದುಕೊಂಡು ಚಿತ್ರೋತ್ಸವದ ಸಿನಿಮಾಗಳ ಪಟ್ಟಿ ನೋಡಿದರೆ ಅದೂ ಕೂಡ ನಿರಾಶದಾಯಕವಾಗಿತ್ತು.
ಸಿನಿಮಾ ಮಾಧ್ಯಮದ ವ್ಯಾಕರಣಗಳನ್ನು ಕರಗತಮಾಡಿಕೊಂಡು ಸಿನಿಮಾವನ್ನು ಸೃಜನಶೀಲವಾಗಿ ತಮ್ಮದೇ ಶೈಲಿಯಲ್ಲಿ ಅಭಿವ್ಯಕ್ತಿಸುವ ಹಲವು ನಿರ್ದೇಶಕರು ಪ್ರಪಂಚದಾದ್ಯಂತ ಇದ್ದಾರೆ. ಅಂತವರ ಸಿನಿಮಾಗಳು ಜಾಗತಿಕವಾಗಿ ನಡೆಯುವ ಹಲವಾರು ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿಗಳಿಗೆ ಭಾಜನವಾಗುತ್ತದೆ. ಫ್ರಾನ್ಸ್ ನಲ್ಲಿ ನಡೆಯುವ ಕಾನ್ಸ್ ಚಿತ್ರೋತ್ಸವ, ಇಟಲಿಯಲ್ಲಿ ನಡೆಯುವ ವೆನಿಸ್ ಚಿತ್ರೋತ್ಸವ ಮತ್ತು ಜರ್ಮನಿಯಲ್ಲಿ ನಡೆಯವ ಬರ್ಲಿನ್ ಚಿತ್ರೋತ್ಸವಗಳಲ್ಲಿ ಆಯ್ಕೆಯಾಗುವ ಸಿನಿಮಾಗಳು ಗುಣಮಟ್ಟದಿಂದ ಕೂಡಿರುತ್ತದೆ. ಹಾಗಾಗಿ ಮೇಲೆ ಹೇಳಿದ ಚಿತ್ರೋತ್ಸವಗಳಲ್ಲಿ ಭಾಗಿಯಾದ ಸಿನಿಮಾಗಳನ್ನು ಗೋವಾ ಚಿತ್ರೋತ್ಸವದಲ್ಲಿ ಬಹುನಿರೀಕ್ಷೆಯಿಂದ ವೀಕ್ಷಿಸಲು ಸಿನಿಮಾ ಪ್ರೇಮಿಗಳು ಆಸಕ್ತರಾಗಿರುತ್ತಾರೆ.
ಆದರೆ, ನೂರಾರು ಸಿನಿಮಾಗಳ ಪಟ್ಟಿಯಲ್ಲಿ ಈ ಬಾರಿ ಕೇವಲ ಏಳೆಂಟು ಅಂತಹ ಸಿನಿಮಾಗಳು ಇರುವುದು ನಿರಾಶದಾಯಕವಾಗಿದೆ. ಆಯ್ಕೆ ಸಮಿತಿಯ ನಿರ್ಲಕ್ಷ್ಯತೆ, ಉದಾಸೀನತೆ ಢಾಳಾಗಿ ಕಾಣುತ್ತದೆ. ಅಳುವ ಸರ್ಕಾರ ಸಿನಿಮಾ ಉತ್ಸವದಂಥ ಸಾಂಸ್ಕೃತಿಕ ಕಾರ್ಯಕ್ರಮದ ಮೂಲ ಉದ್ದೇಶವನ್ನು ಕಡೆಗಣಿಸಿ, ತನ್ನ ರಾಜಕೀಯ ಪೂರ್ವಾಗ್ರಹಗಳನ್ನು ಹೇರುವ ಕಡೆಗೆ ಹೆಚ್ಚು ಗಮನ ಕೇಂದ್ರೀಕರಿಸಿದರೆ ಇಂತ ಅಪಸವ್ಯಗಳು ಉಂಟಾಗುತ್ತದೆ. ಸಿನಿಮಾ ಆಯ್ಕೆ ಸಮಿತಿಯಲ್ಲಿರುವ ಗೆಳೆಯರೊಬ್ಬರಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದಾಗ, ಸಿನಿಮಾಗಳನ್ನು ಆಯ್ಕೆ ಮಾಡುವಾಗ ಸರ್ಕಾರ ತನ್ನ ನೀತಿಗಳ ವಿರುದ್ಧ, ಧರ್ಮಗಳನ್ನು ಬಗ್ಗೆ ಚರ್ಚಿಸುವ ವಸ್ತುವಿರುವ ಸಿನಿಮಾಗಳನ್ನು ಆಯ್ಕೆ ಮಾಡಬಾರದು ಎಂದು ಸ್ಪಷ್ಟ ನಿರ್ದೇಶನ ಕೊಟ್ಟಿದೆ. ಹಾಗಾಗಿ ಗುಟ್ಟಮಟ್ಟದ ಸಿನಿಮಾಗಳನ್ನು ಆಯ್ಕೆ ಮಾಡಲು ಇರುವ ತಮಗಿರುವ ಅಸಹಾಯಕತೆಯನ್ನು ತೊಡಿಕೊಂಡು ಅಲವತ್ತುಕೊಂಡರು.
ಗಮನ ಸೆಳೆದ ಚಿತ್ರಗಳು
ಇಷ್ಟು ಮಿತಿಗಳಲ್ಲೂ ಬೆರಳೆಣಿಕೆಯಷ್ಟಾದರೂ ಕೆಲವು ಪ್ರತಿಭಾವಂತ ನಿರ್ದೇಶಕರ ಶ್ರೇಷ್ಠ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆದಿವೆ.
ಅವುಗಳಲ್ಲಿ – ವಿಕ್ಟರ್ ಎರಿಸ್ ನ ” ಕ್ಲೋಸ್ ಯುವರ್ ಐಸ್” (ಅರ್ಜೆಂಟೈನಾ) , ಜಸ್ಟೀಸ್ ಟ್ರೈಟ್ ನ “ಅನಾಟಮಿ ಆಫ್ ಎ ಫಾಲ್”(ಫ್ರಾನ್ಸ್), ಕ್ರಿಸ್ಟಿ ಪುಜಿ ಯ” ಎಮ್ ಎಮ್ ಎಕ್ಸ್ ಎಕ್ಸ್ (ರೊಮೇನಿಯ), ಮೊಲಿ ಮನ್ನಿಂಗ್ ವಾಕರ್ ನ ” ಹೌ ಟು ಹ್ಯಾವ್ ಸೆಕ್ಸ್ (ಇಂಗ್ಲೆಂಡ್), ನೂರಿ ಬಿಲ್ಗೆ ಸಿಲನ್ ನ “ಅಬೌಟ್ ಡ್ರೈ ಗ್ರಾಸೆಸ್ (ಟರ್ಕಿ), ಲಾವ್ ಡಯಜ್ ನ ” ಎಸೆನ್ ಶಿಯಲ್ ಟ್ರುತ್ ಆಫ್ ದಿ ಲೇಕ್” (ಫಿಲಿಪೈನ್ಸ್) ಸಿನಿಮಾಗಳನ್ನು ಉದಾಹರಿಸಬಹುದು.
ಕಳೆದ ಬಾರಿಯ ಚಿತ್ರೋತ್ಸವದಲ್ಲಿ ವಿವೇಕ್ ಅಗ್ನಿಹೊತ್ರಿಯವರ ದಿ ಕಾಶ್ಮೀರಿ ಫೈಲ್ಸ್ ಸಿನಿಮಾವನ್ನು ಅಂತರಾಷ್ಟ್ರೀಯ ವಿಭಾಗದಲ್ಲಿ ಹಾಕಿದ್ದರು. ಜ್ಯೂರಿ ಪ್ರಮುಖರಲ್ಲಿ ಒಬ್ಬರಾದ ಖ್ಯಾತ ನಿರ್ದೇಶಕ ನಾವದ್ ಲಾಪಿದ್ ಅಂತ ಆಯ್ಕೆ ಬಗ್ಗೆ ‘ವಲ್ಗರ್ , ಪ್ರಾಪಗಂಡ’ ಸಿನಿಮಾ ಎಂದು ಕಟುವಾಗಿ ಟೀಕಿಸಿದ್ದರು. ಆ ಕಾರಣಕ್ಕೊ ಏನೋ ಈ ಬಾರಿ ದ ಕೇರಳ ಸ್ಟೋರಿ, ದ ವ್ಯಾಕ್ಸಿನ್ ವಾರ್ ನಂತಹ ಪ್ರಪಗಾಂಡ ಸಿನಿಮಾಗಳು ಚಿತ್ರೋತ್ಸವದಲ್ಲಿ ಇದ್ದರೂ ಅವನ್ನು ಅಂತರರಾಷ್ಟ್ರೀಯ ವಿಭಾಗದಲ್ಲಿ ಪ್ರದರ್ಶಿಸುತ್ತಿಲ್ಲ ಎಂಬುದು ಸಮಾಧಾನದ ವಿಷಯ.
ಇನ್ನು ಮುಂದೆ ಬರುವ ಚಲನಚಿತ್ರೋತ್ಸವಗಳಲ್ಲಾದರೂ ಆಳುವ ಪ್ರಭುತ್ವ ತನ್ನ ಮೂಗನ್ನು ತೂರಿಸದೆ ಆಯ್ಕೆ ಸಮಿತಿಗೆ ಪೂರ್ಣ ಸ್ವಾತಂತ್ರ್ಯವನ್ನು ಕೊಡಲಿ ಎಂದು ಆಗ್ರಹಿಸೋಣ.

ಚಂದ್ರಪ್ರಭ ಕಠಾರಿ
ಸಿನಿಮಾಸಕ್ತ, ಲೇಖಕ