ಸತತ ಮೂರು ಗಂಡುಮಕ್ಕಳನ್ನು ಕಳೆದುಕೊಂಡು ಶಾಪಗ್ರಸ್ತರು ಎಂದು ತಿಳಿದಿದ್ದ ತಂದೆ ತಾಯಿಗೆ ನಾಥುರಾಮ್ ಗೋಡ್ಸೆಯನ್ನು ಉಳಿಸಿಕೊಳ್ಳಲು ಉಳಿದದ್ದು ಒಂದೇ ಮಾರ್ಗ- ಅದು ಗಂಡು ಮಗುವನ್ನೇ ಹೆಣ್ಣಾಗಿ ಬೆಳೆಸುವುದು, ಸಲಹುವುದು…
ಬ್ರಿಟಿಷ್ ಆಡಳಿತದ ಬಾರಾಮತಿ ಪಟ್ಟಣದ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬ್ರಾಹ್ಮಣ ಕುಟುಂಬದ ವಿನಾಯಕ ಗೋಡ್ಸೆ ಹಾಗೂ ಲಕ್ಷ್ಮಿ ಎಂಬ ದಂಪತಿಗಳು ನಾಥುರಾಮ್ ಗೋಡ್ಸೆಯ ತಂದೆ ತಾಯಿ. ತಾಯಿ ಗೃಹಿಣಿಯಾಗಿ ಪೂಜಾ ಕಾರ್ಯಗಳಲ್ಲಿ ನಿರತರಾಗಿರುತ್ತಿದ್ದರು. ಸಂಪ್ರದಾಯಬದ್ಧ ದಂಪತಿಗಳು ಬ್ರಾಹ್ಮಣ ವರ್ಗವು ಹಿಂದೂ ಧರ್ಮದ ಸಂರಕ್ಷಕ ವರ್ಗವೆಂದೇ ಭಾವಿಸಿದ್ದರು. ಯಾವುದೋ ಅಗೋಚರ ಶಕ್ತಿಗಳು ಸಕಲ ವಸ್ತುಗಳನ್ನೂ, ಪ್ರಾಣಿ ಸಂಕುಲಗಳನ್ನೂ ನಿಯಂತ್ರಿಸಲ್ಪಡುತ್ತಿವೆ ಎಂದೇ ನಂಬಿದ್ದರು. ಹೀಗೆಯೇ ಶ್ರೇಣೀಕೃತ ವ್ಯವಸ್ಥೆ ರೂಪುಗೊಂಡಿದೆ, ಬ್ರಾಹ್ಮಣ ವರ್ಗವೇ ಸಾರ್ವಭೌಮ ವರ್ಗ, ಸೃಷ್ಟಿಕರ್ತನಾದ ಕಾಲಬ್ರಹ್ಮನ ಮೆದುಳಿನಿಂದ ಬ್ರಾಹ್ಮಣ ಜಾತಿ ಮೂಡಿತ್ತೆನ್ನುವ ಅಚಲ ನಂಬಿಕೆ ಇವರದಾಗಿತ್ತು.
ನಾಥುರಾಮ್ ಗೋಡ್ಸೆ(19 ಮೇ 1910) ಹುಟ್ಟಿದ್ದು ಮಹಾರಾಷ್ಟ್ರದ ಪೂನಾ ಜಿಲ್ಲೆಯ ಬಾರಾಮತಿಯ ಸಣ್ಣ ನಗರದಲ್ಲಿ. ದಂಪತಿಗೆ ನಾಥು ಐದನೇ ಮಗ. ಮೊದಲನೇ ಮಗು ಹೆಣ್ಣು. ಆನಂತರ ಹುಟ್ಟಿದ್ದ ಮೂರು ಗಂಡುಮಕ್ಕಳು ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದರು. ನಾಥು ನಾಲ್ಕನೆಯ ಗಂಡುಮಗುವಾಗಿ ಹುಟ್ಟಿದಾಗ ಪೋಷಕರು ಆತಂಕಕ್ಕೊಳಗಾಗಿದ್ದರು. ಯಾವುದೋ ಶಾಪಕ್ಕೆ ಸಿಲುಕಿ ನಮ್ಮ ಮಕ್ಕಳು ಅಸುನೀಗುತ್ತಿವೆ ಎಂದು ಬಲವಾಗಿ ನಂಬಿದ್ದರು. ಸತತ ಮೂರು ಗಂಡುಮಕ್ಕಳನ್ನು ಕಳೆದುಕೊಂಡು ಶಾಪಗ್ರಸ್ತರಂತಿದ್ದ ತಂದೆ ತಾಯಿಗೆ ನಾಥುನನ್ನು ಉಳಿಸಿಕೊಳ್ಳಲು ಉಳಿದದ್ದು ಒಂದೇ ಮಾರ್ಗ- ಅದು ಗಂಡು ಮಗುವನ್ನೇ ಹೆಣ್ಣಾಗಿ ಬೆಳೆಸುವುದು, ಸಲಹುವುದು.
ನಾಥುರಾಮ್ ಗೋಡ್ಸೆಯ ಮೂಲ ನಾಮ ರಾಮಚಂದ್ರ ವಿನಾಯಕ ಗೋಡ್ಸೆ. ತಂದೆ-ತಾಯಿಯ ಆತಂಕವನ್ನು ದೂರ ಮಾಡಿ ಬದುಕುಳಿದಿದ್ದ. ಬದುಕುಳಿದ ಮಗುವನ್ನು ಪೋಷಕರು ಹೆಣ್ಣುಮಗುವಿನಂತೆ ಬೆಳೆಸಲು ನಿರ್ಧರಿಸಿದ್ದರು. ಹಿರಿಯ ಮಗಳಾದ ಮಥುರಾಳ ಜೊತೆಗೆ ಆಟ ಆಡಲು ಬಿಡುತ್ತಿದ್ದರು. ಹೆಣ್ಣುಮಕ್ಕಳ ಉಡುಪುಗಳನ್ನು ಧರಿಸುತ್ತಿದ್ದರು. ಬಾಲ್ಯಾವಸ್ಥೆಯಲ್ಲೇ ಪೋಷಕರು ಈತನಿಗೆ ಮೂಗುತಿ(ನತ್ತು) ತೊಡಿಸಿದ್ದರು. ತಲತಲಾಂತರದಿಂದ ಆರಾಧಿಸುತ್ತಾ ಬಂದಿರುವ ಹರೇಶ್ವರ-ಯೋಗೇಶ್ವರ ದೇವರು ರಾಮಚಂದ್ರನನ್ನು ಉಳಿಸಿದ್ದಾನೆ ಎಂಬ ನಂಬಿಕೆಯಲ್ಲಿ ನತ್ತನ್ನು ತೊಡಿಸಿದ್ದರು. ಆ ದೇವರು ಮತ್ತು ನತ್ತಿನ ಕಾರಣಕ್ಕಾಗಿಯೇ ಗಂಡುಮಗು ಬದುಕಿ ಉಳಿದಿದೆ ಎನ್ನುತ್ತಿದ್ದರು. ನತ್ತನ್ನು ಧರಿಸಿದಕ್ಕಾಗಿಯೇ, ನತ್ತು ರೂಢಿಯಲ್ಲಿ ನಾಥು ಆಗಿ, ಆನಂತರ ನಾಥುರಾಮ್ ಎಂದಾಯಿತು.
ಕಾಲಕ್ರಮೇಣ ನಾಥುರಾಮ್ ಗೋಡ್ಸೆಯ ಬೆನ್ನಿಗೇ ನಾಲ್ಕು ಮಕ್ಕಳು- ಎರಡು ಹೆಣ್ಣು, ಎರಡು ಗಂಡು ಮಕ್ಕಳು ಹುಟ್ಟಿದವು. ಒಟ್ಟು ಆರು ಮಕ್ಕಳಾದವು.
ಗೋಡ್ಸೆ ಬೆಳೆಯುತ್ತಾ ತಾನೊಬ್ಬ ಗಂಡು ಮಗುವೇ ಎನ್ನುವ ಅನುಮಾನ ಬೆಳೆಯಲಾರಂಭಿಸಿತು. ಏಕೆಂದರೆ, ಎಲ್ಲದಕ್ಕೂ ತನ್ನ ಅಕ್ಕ ಮತ್ತು ಅಮ್ಮನನ್ನೇ ಆಶ್ರಯಿಸುತ್ತಿದ್ದ. ಆತನ ಆಟೋಟಗಳೆಲ್ಲವೂ ಅಕ್ಕ ಮತ್ತು ಹೆಣ್ಣುಮಕ್ಕಳ ಜೊತೆಗೆ ಹೆಚ್ಚಾಗಿದ್ದವು. ಇದನ್ನು ಗಮನಿಸಿದ ಮನೆಯವರು ಆತನಿಗೆ ಶಾಲೆಗೆ ಹೋಗುವವರೆಗೂ ಹೆಣ್ಣುಡುಗೆಗಳನ್ನೇ ತೊಡಿಸುತ್ತಿದ್ದರು. ಶಾಲೆಗೆ ಸೇರುವ ಸಮಯಕ್ಕೆ ಗೋಡ್ಸೆ ಹೆಣ್ಣುಮಕ್ಕಳ ಉಡುಪುಗಳನ್ನು ತೊಡುವುದನ್ನು ನಿಲ್ಲಿಸಿದರೂ, ತಂದೆ ತಾಯಿಗಳು ಕಟ್ಟಿಕೊಟ್ಟ ನಂಬಿಕೆಗಳು, ಧಾರ್ಮಿಕ ಆಚರಣೆಗಳು ಆತನ ಮೇಲೆ ಗಾಢ ಪರಿಣಾಮ ಬೀರಿದವು.
ಸದಾ ಅಂತರ್ಮುಖಿಯಾಗಿರುತ್ತಿದ್ದ ಗೋಡ್ಸೆ, ಪೂಜೆ-ಪುನಸ್ಕಾರದಲ್ಲಿ ಮುಳುಗಿಹೋಗಿರುತ್ತಿದ್ದ, ದೇವದೂತನಂತೆ ಮಾತನಾಡುತ್ತಿದ್ದ. ಈ ನಡವಳಿಕೆಗಳಿಂದಲೇ ಆತ ತನ್ನ ಮನೆಯಲ್ಲಿ ಮನ್ನಣೆಯನ್ನೂ ಗಳಿಸಿದ್ದ. ತನ್ನ ಅಕ್ಕ ಮಥುರಾಳಿಗಿದ್ದ ನಿಗೂಢ ಕಾಯಿಲೆಯನ್ನು ಯಾವುದೋ ದಿವ್ಯ ಶಕ್ತಿಯಿಂದ ಗುಣಪಡಿಸುತ್ತಿದ್ದ. ವಿಶೇಷ ಪೂಜೆಗೆ ಪೋಷಕರಿಗೆ ಆಜ್ಞೆ-ಆದೇಶಗಳನ್ನೂ ಮಾಡುತ್ತಿದ್ದ.
ಕೆಲವೊಮ್ಮೆ ಏನನ್ನೋ ಯೋಚಿಸುತ್ತ, ದಿಟ್ಟಿಸಿ ನೋಡುತ್ತಾ ಕೂತುಬಿಡುತ್ತಿದ್ದ ಗೋಡ್ಸೆ, ಆ ಸಮಯದಲ್ಲಿ ಆತನನ್ನು ಯಾರಾದರೂ ಮಾತನಾಡಿಸಿದರೆ ಕೊಡುವ ಉತ್ತರ ವಿಚಿತ್ರವಾಗಿರುತ್ತಿತ್ತು. ಪೂಜೆಗೆ ಕೂತರೆ ಗಂಟೆಗಟ್ಟಲೇ ಸಮಯ ತೆಗೆದುಕೊಂಡು ನಾನಾರೀತಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದ.
ತಂದೆ ಸರ್ಕಾರಿ ಉದ್ಯೋಗಿಯಾದ್ದರಿಂದ ವರ್ಗಾವಣೆ ಅನಿವಾರ್ಯವಾಗಿತ್ತು. ಬಾರಾಮತಿಯಿಂದ ಖೇಡ್, ಲೋನಾವಾಲಾ… ಹೀಗೆ ಹಲವಾರು ಕಡೆ ತಂದೆ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. ನಾಥುರಾಮ್ ಗೋಡ್ಸೆಗೆ ಆಂಗ್ಲ ಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕು ಎನ್ನುವ ಕಾರಣಕ್ಕೆ ಪೋಷಕರು, ಪೂನಾ ಪಟ್ಟಣದಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ಬಿಟ್ಟಿದ್ದರು. ಆದರೆ ಅಲ್ಲಿ ಉಸಿರುಗಟ್ಟಿಸುವ ವಾತಾವರಣವಿದ್ದು, ರಜೆ ಸಿಕ್ಕಾಗೆಲ್ಲಾ ಮನೆಗೆ ಬಂದುಬಿಡುತ್ತಿದ್ದ. ಬಂದಾಗೆಲ್ಲಾ ಪೂಜಾ ಕಾರ್ಯದಲ್ಲಿ ನಿರತನಾಗಿಬಿಡುತ್ತಿದ್ದ.
ತಂದೆ ವಿನಾಯಕ ರಾವ್ರಿಗೆ ಮಗ ಹೇಗೋ ಮೆಟ್ರಿಕ್ಯುಲೇಷನ್ ಪರೀಕ್ಷೆ ಪಾಸು ಮಾಡಿ ಒಂದು ಉದ್ಯೋಗ ಹಿಡಿದರೆ, ಮನೆ ಕಷ್ಟವನ್ನು ನಿಭಾಯಿಸಬಹುದು ಎಂದು ಭಾವಿಸಿ ಕಷ್ಟದಲ್ಲೂ ನಾಥುರಾಮನಿಗೆ ಹಣ ಕಳಿಸುತಿದ್ದರು. ಆದರೆ ನಾಥುರಾಮನಿಗೆ ಕಲಿಕೆಯಲ್ಲಿ ಆಸಕ್ತಿಯೇ ಇರಲಿಲ್ಲ. ಸ್ನೇಹಿತರ ಸಹವಾಸ ಅತಿಯಾಗಿ, ಚಿಕ್ಕಮ್ಮಳ ಮನೆಗೂ ಸರಿಯಾಗಿ ಹೋಗುತ್ತಿರಲಿಲ್ಲ. ಕೊನೆಗೆ 1929ರ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಅನುತ್ತೀರ್ಣನಾದ. ತಂದೆಯ ಆಸೆಗೆ ಎಳ್ಳುನೀರು ಬಿಟ್ಟು ಕೊನೆಗೆ ಶಿಕ್ಷಣವನ್ನೇ ಕೈಚೆಲ್ಲಿ ಕೂತ.
1929ರ ಸಮಯ, ಸುಮಾರು ಮೂರು ತಿಂಗಳ ಕಾಲ ಮಹಾತ್ಮಾ ಗಾಂಧಿಯವರು ಸುದೀರ್ಘ ಪ್ರವಾಸದಲ್ಲಿದ್ದರು. ಸಣ್ಣ ಪಟ್ಟಣಗಳು, ಸಾರ್ವಜನಿಕ ಸಭೆಗಳು, ವಿದ್ಯಾರ್ಥಿಗಳು, ಮಹಿಳೆಯರನ್ನೂ ಸೇರಿದಂತೆ ಕಾಂಗ್ರೆಸ್ ನಾಯಕರುಗಳನ್ನು ಸಂಘಟಿಸುವ ಕೆಲಸದಲ್ಲಿ ಮುಳುಗಿದ್ದರು. ಕಾಂಗ್ರೆಸ್ ನಾಯಕರು ಸೇರಿದಂತೆ ಸಾರ್ವಜನಿಕರೆಲ್ಲರೂ ಖಾದಿ ಬಟ್ಟೆ ತೊಡುವಂತೆ ಮತ್ತು ಬಳಸುವಂತೆ ಕರೆ ಕೊಟ್ಟರು. ಸಂಪೂರ್ಣ ಸ್ವರಾಜ್ಯಕ್ಕಾಗಿ ಬ್ರಿಟೀಷರ ವಿರುದ್ದ ಹೋರಾಡಲು, ದೇಶವನ್ನು ಮರಳಿ ಪಡೆಯಲು ಜನರನ್ನು ಅಣಿಗೊಳಿಸುತ್ತಿದ್ದರು.
ಗೋಡ್ಸೆ ಆಗ ಸಣ್ಣವ. ಹೋರಾಟದ ನಿಲುವುಗಳನ್ನು ಅರ್ಥಮಾಡಿಕೊಳ್ಳುವ ಪ್ರಾಯವಲ್ಲ. 1930ರ ಹೊತ್ತಿಗೆ ತಂದೆಗೆ ಕರಾವಳಿ ಪ್ರದೇಶಕ್ಕೆ ವರ್ಗವಾಯಿತು. ಇತ್ತ ಕಲಿಕೆಯಲ್ಲಿ ಹಿಂದುಳಿದಿದ್ದ ಗೋಡ್ಸೆಗೆ ಕೆಲಸ ಸಿಗಲಿಲ್ಲ. ಬೇರೆ ದಾರಿ ಕಾಣದೆ, ಬ್ರಿಟೀಷರ ದಬ್ಬಾಳಿಕೆ ಮತ್ತು ಅಣಿಯಾಗುತ್ತಿದ್ದ ಜನಸಂಗ್ರಾಮದಲ್ಲಿ ಸ್ನೇಹಿತರೊಟ್ಟಿಗೆ ಭಾಗಿಯಾಗಲು ಮುಂದಾದ.
ಸ್ವಾತಂತ್ರ್ಯ ಚಳವಳಿಯೊಂದಿಗೆ ಗಾಢವಾದ ಒಡನಾಟ ಬೆಳೆಯುತ್ತಿದ್ದರು, ಜೊತೆಗಿದ್ದವರ ನಿಲುವುಗಳನ್ನು ಅರಿಯಲು, ಅರ್ಥ ಮಾಡಿಕೊಳ್ಳಲು ಗೋಡ್ಸೆ ಸೋತಿದ್ದ. ಅದಕ್ಕಿಂತ ಹೆಚ್ಚಾಗಿ ತನ್ನ ಸುತ್ತಲಿನವರು ಏನು ಹೇಳಿದರೂ ಒಪ್ಪಿಬಿಡುವ ಜಾಯಮಾನದವನಾಗಿದ್ದ. ತನ್ನ ಮನಸ್ಸಿನಲ್ಲಿ ಮೂಡುವ ಅನೇಕ ಗೊಂದಲಗಳನ್ನು ನಿವಾರಿಸಿಕೊಳ್ಳಲು, ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಒಬ್ಬ ಸರಿಯಾದ ಮಾರ್ಗದರ್ಶಕನನ್ನು ಎದುರು ನೋಡುತ್ತಿದ್ದ. ಇದೆಲ್ಲದಕ್ಕೂ ಇಂಬು ನೀಡುವಂತೆ ಹಿಂದುತ್ವವನ್ನು ಪ್ರತಿಪಾದಿಸುವ ತಂದೆ ಸಮಾನ ವ್ಯಕ್ತಿಯೊಬ್ಬ ಸಿಕ್ಕರು. ಆ ವ್ಯಕ್ತಿಯೇ ವಿನಾಯಕ ದಾಮೋದರ್ ಸಾವರ್ಕರ್.
ಚಿಕ್ಕವನಾಗಿದ್ದಾಗ ತನ್ನ ದೈವೀಶಕ್ತಿಯ ಬಲದಿಂದ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆದಿದ್ದ ಗೋಡ್ಸೆ, ಬುದ್ಧಿವಂತನಂತೆ ಕಾಣುತ್ತಿದ್ದ ಗೋಡ್ಸೆ, ಈಗ ಸಾವರ್ಕರ್ ಎಂಬ ವ್ಯಕ್ತಿ ಆಡಿಸುವ ಆಟದ ಬೊಂಬೆಯಾಗಿದ್ದ. ಆತ ಹೇಳಿದ ಕೆಲಸಗಳನ್ನು ಚಾಚೂತಪ್ಪದೆ ಮಾಡುತ್ತಿದ್ದ. ಅದೇ ಸರಿಯಾದ ಮಾರ್ಗ ಎಂದು ಬಲವಾಗಿ ನಂಬಿದ್ದ. ಆ ನಂಬಿಕೆಯ ಆಧಾರದ ಮೇಲೆಯೇ ಮಹಾತ್ಮನಿಗೆ ಗುಂಡಿಕ್ಕಿದ್ದ!