ಹಾಜರಾತಿ ಕೊರತೆ ಕಾರಣಕ್ಕೆ ಶಿಕ್ಷಣದಿಂದ ಹೊರಗಿಡುವ ಸರ್ಕಾರದ ನೀತಿ: ಬಡವರ ಮಕ್ಕಳ ಭವಿಷ್ಯಕ್ಕೆ ಮಾರಕ

Date:

Advertisements
 ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆ, ಬಡತನವು ಮಕ್ಕಳು ಶಾಲೆಗಳಿಂದ ಹೊರಗುಳಿಯುವಂತೆ ಮಾಡುತ್ತದೆ. ಇದು ಹಾಜರಾತಿ ಕೊರತೆಗೆ ಕಾರಣವಾಗುತ್ತದೆ. ಈ ಮೂಲ ಸಮಸ್ಯೆಗೆ ಕಾರಣ ಸರ್ಕಾರವೇ...

10ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ನಿಯಮಿತವಾಗಿ ತರಗತಿಗೆ ಹಾಜರಾಗದೇ ಇದ್ದರೆ, 75%ಗಿಂತ ಕಡಿಮೆ ಹಾಜರಾತಿ ಇದ್ದರೆ – ಅಂತಹ ಮಕ್ಕಳನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ ಹೊರಗಿಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಮುಂದಾಗಿದೆ.

ಇತ್ತೀಚೆಗೆ, ಸುತ್ತೋಲೆ ಹೊರಡಿಸಿರುವ ಮುಂಡಳಿ, ”75%ರಷ್ಟು ಹಾಜರಾತಿ ಇಲ್ಲದೆ, ಹಾಜರಾತಿ ಕೊರತೆ ಇದ್ದು, ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ, ಅವರಿಗೆ ಮತ್ತೆರಡು ಮರು ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಆ ವಿದ್ಯಾರ್ಥಿಗಳನ್ನು 10ನೇ ತರಗತಿಗೆ ಮರು ದಾಖಲು ಮಾಡಿಕೊಳ್ಳಬೇಕು” ಎಂದು ಹೇಳಿದೆ.

ಪರೀಕ್ಷಾ ಮಂಡಳಿಯ ಈ ನಿರ್ಧಾರವು ಬಹುಸಂಖ್ಯೆಯ ಮಕ್ಕಳನ್ನು ಶಿಕ್ಷಣದಿಂದ ಹೊರಗಿಡುತ್ತದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಹಿಂದೆ, ಎಸ್‌ಎಸ್‌ಎಲ್‌ಸಿಯ ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಎರಡು ಬಾರಿ ಮರುಪರೀಕ್ಷೆ ಬರೆಯಲು ಅವಕಾಶವಿತ್ತು. ಆದರೆ, ಆ ಅವಕಾಶವನ್ನು ಕಸಿದುಕೊಂಡಿದೆ.

Advertisements

ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೂ ಮುನ್ನ ಶಿಕ್ಷಣ ಇಲಾಖೆಯು ಹಲವಾರು ಅಂಕಿಅಂಶಗಳನ್ನು ಪರಿಶೀಲಿಸಬೇಕು. ಮುಖ್ಯವಾಗಿ, ಮಕ್ಕಳ ಹಾಜರಾತಿಯಲ್ಲಿ ಕೊರತೆ ಕಾಣುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಗಮನಿಸಬೇಕು. ಅದಕ್ಕಾಗಿ, ಸಮೀಕ್ಷೆಗಳನ್ನು ನಡೆಸಬೇಕು. ಆದರೆ, ಇದಾವುದೇ ಕ್ರಮಗಳನ್ನು ಕೈಗೊಳ್ಳದೆ ಏಕಾಏಕಿ ವಿದ್ಯಾರ್ಥಿಗಳನ್ನು ಪರೀಕ್ಷೆಗಳಿಂದ, ಮಾತ್ರವಲ್ಲ ಶಿಕ್ಷಣದಿಂದಲೇ ಹೊರಗಿಡಲು ಸರ್ಕಾರ ಮುಂದಾಗಿದೆ.

ಆಳುವವರಿಗೂ, ಅಧಿಕಾರಿಗಳಿಗೂ ಶಿಕ್ಷಣದ ಮಹತ್ವ ಸರಿಯಾಗಿ ಅರ್ಥವಾಗಿಲ್ಲ. ಶಿಕ್ಷಣವನ್ನು ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಮೇಲೆ ನೋಡಬೇಕು. ಆದರೆ, ಸರ್ಕಾರಗಳು ಆ ಮಾನದಂಡದಲ್ಲಿ ನೋಡುತ್ತಿಲ್ಲ. ಬದಲಾಗಿ, ಕಲಿಕೆಯ ಮಾರ್ಗವಾಗಿ ಮಾತ್ರವೇ ನೋಡಲಾಗುತ್ತಿದೆ. ಶಿಕ್ಷಣದ ವಿಚಾರದಲ್ಲಿ ಸರ್ಕಾರಗಳ ದೃಷ್ಟಿಕೋನವೇ ಸರಿಯಿಲ್ಲದಾಗ ಇಂತಹ ನೀತಿಗಳು, ನಿಯಮಗಳು ಜಾರಿಗೆ ಬರುತ್ತವೆ. ಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತವೆ.

ಶಿಕ್ಷಣವು ಮಕ್ಕಳ ಮೂಲಭೂತ ಹಕ್ಕು ಎಂದು ಸಂವಿಧಾನ ಹೇಳುತ್ತದೆ. 14 ವರ್ಷದೊಳಗೆ ಪ್ರತಿಯೊಬ್ಬ ಮಗುವೂ ಕಡ್ಡಾಯವಾಗಿ ಶಿಕ್ಷಣ ಪಡೆಯಲೇಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪೋಷಕರು ಮತ್ತು ಸರ್ಕಾರದ ಆದ್ಯ ಕರ್ತವ್ಯವೆಂದು ಹೇಳಲಾಗಿದೆ. ಆದರೆ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಶಿಕ್ಷಣ ನೀತಿಗಳು, ನಿಯಮಗಳನ್ನು ಆಳುವವರು ಹೇರಹೊರಟಿದ್ದಾರೆ.

ಈ ಹಿಂದೆ, 9ನೇ ತರಗತಿವರೆಗೆ ಯಾವುದೇ ಮಗುವನ್ನು ‘ಅನುತ್ತೀರ್ಣ’ ಮಾಡುವಂತಿಲ್ಲ ಎಂಬ ನಿಯಮವಿತ್ತು. ಆದರೆ, ಆ ನಿಯಮಕ್ಕೂ ತಿದ್ದುಪಡಿ ತರಲಾಗಿದೆ. 7 ಮತ್ತು 9ನೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಫೇಲ್‌ ಮಾಡುವಂತಿಲ್ಲ. ಹಾಗಂತ, ನೇರವಾಗಿ ತೇರ್ಗಡೆಗೊಳಿಸಿ, ಮುಂದಿನ ತರಗತಿಗೆ ದಾಖಲಾತಿಯನ್ನೂ ನೀಡುವಂತಿಲ್ಲ. ಪರೀಕ್ಷೆಯಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳನ್ನು ಅದೇ ತರಗತಿಯಲ್ಲಿ ಕೂರಿಸಿ, 2 ತಿಂಗಳು ತರಬೇತಿ ನೀಡಿ, ಮತ್ತೆ ಪರೀಕ್ಷೆ ಬರೆಸಿ, ಪಾಸು ಮಾಡಿ, ಮುಂದಿನ ತರಗತಿಗೆ ಕಳಿಸಬೇಕು ಎಂದು ತಿದ್ದುಪಡಿ ನೀತಿ ಹೇಳುತ್ತದೆ.

ಇದು, ಮಕ್ಕಳ ಕಲಿಕೆಯ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಆದರೆ, ಇದರ ಅರಿವು ನೀತಿ-ನಿಮಯಗಳನ್ನು ರೂಪಿಸುವವರಿಗೆ ಇದ್ದಂತೆ ಕಾಣುತ್ತಿಲ್ಲ. ಈಗ, 10ನೇ ತರಗತಿಯಲ್ಲಿ ಹಾಜರಾತಿ ಕೊರತೆ ಇದ್ದು, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಮರುಪರೀಕ್ಷೆಗಳಿಂದ ಹೊರಗಿಡಲಾಗುತ್ತಿದೆ.

ಆದರೆ, ಇಂತಹ ನೀತಿಗಳನ್ನು ತರುವ ಮುನ್ನ, ವಿದ್ಯಾರ್ಥಿಗಳ ಹಾಜರಾತಿ ಕೊರತೆಗೆ ಕಾರಣವೇನು ಎಂಬುದನ್ನು ಸರ್ಕಾರ, ಶಿಕ್ಷಣ ಇಲಾಖೆ ಕಂಡುಕೊಳ್ಳಬೇಕು. ಪ್ರಮುಖವಾಗಿ, ವಲಸೆ ಕಾರ್ಮಿಕರು, ಗ್ರಾಮೀಣ ಭಾಗದ ಮಕ್ಕಳು, ಕೂಲಿ ಕಾರ್ಮಿಕರ ಮಕ್ಕಳು, ತಳ ಸಮುದಾಯದ ಮಕ್ಕಳ ಹಾಜರಾತಿ ಕಡಿಮೆ ಇರುತ್ತದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ.

ಅಂದರೆ, ವಿದ್ಯಾರ್ಥಿಗಳ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆ, ಬಡತನವು ಮಕ್ಕಳು ಶಾಲೆಗಳಿಂದ ಹೊರಗುಳಿಯುವಂತೆ ಮಾಡುತ್ತದೆ. ಇದು ಹಾಜರಾತಿ ಕೊರತೆಗೆ ಕಾರಣವಾಗುತ್ತದೆ. ಈ ಮೂಲ ಸಮಸ್ಯೆಗೆ ಕಾರಣ ಸರ್ಕಾರವೇ. ಸರ್ಕಾರಗಳು ಶೋಷಿತ, ಹಿಂದುಳಿದ ಸಮುದಾಯಗಳನ್ನು ಮೇಲೆತ್ತುವ ಯೋಜನೆಗಳನ್ನು ಹೆಚ್ಚಾಗಿ ರೂಪಿಸುತ್ತಿಲ್ಲ ಮತ್ತು ಅನುಷ್ಠಾನಗೊಳಿಸುತ್ತಿಲ್ಲ. ಪರಿಣಾಮ, ಹಿಂದುಳಿದ ಸಮುದಾಯಗಳ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುವ ಅನಿವಾರ್ಯತೆ ಕುಟುಂಬಗಳಲ್ಲಿದೆ.

ಈ ವರದಿ ಓದಿದ್ದೀರಾ?: ಸರ್ಕಾರಿ ಶಾಲೆ, ಮಾದರಿ ಶಾಲೆ ಆಗದೇಕೆ?

ವಲಸೆ ಕಾರ್ಮಿಕರು ಪ್ರತಿ 3 ಅಥವಾ 6 ತಿಂಗಳಿಗೊಮ್ಮೆ ಒಂದೆಡೆಯಿಂದ, ಮತ್ತೊಂದೆಡೆಗೆ ವಲಸೆ ಹೋಗುತ್ತಾರೆ. ಅಂತಹ ಸಂದರ್ಭಗಳಲ್ಲಿ ಅವರ ಮಕ್ಕಳೂ ವಲಸೆ ಹೋಗುವುದು ಅನಿವಾರ್ಯವಾಗುತ್ತದೆ. ಪರಿಣಾಮ, ವಲಸೆ ಕಾರ್ಮಿಕರ ಮಕ್ಕಳು ಶಾಲೆಗೆ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಇನ್ನು, ಹೈದರಾಬಾದ್ ಕರ್ನಾಟಕದಂತಹ ಹಿಂದುಳಿದ ಭಾಗಗಳಲ್ಲಿ ಮಕ್ಕಳನ್ನೂ ಒಳಗೊಂಡಂತೆ ಇಡೀ ಕುಟುಂಬ ದಿನನಿತ್ಯ ದುಡಿದೇ ಬದುಕಬೇಕಾದ ಸ್ಥಿತಿ ಇದೆ. ಬಡತನದ ಕಾರಣಕ್ಕಾಗಿ ಪೋಷಕರು ನಿತ್ಯವೂ ಮಕ್ಕಳನ್ನು ಶಾಲೆಗೆ ಕಳಿಸದೆ, ಆಗಾಗ್ಗೆ ಕೂಲಿಗಾಗಿ ತಮ್ಮೊಂದಿಗೆ ಕರೆದೊಯ್ಯುವ ನಿದರ್ಶನಗಳೂ ಇವೆ.

ಇಷ್ಟೆಲ್ಲ ಸಮಸ್ಯೆ, ಸವಾಲುಗಳ ಕಾರಣದಿಂದಾಗಿ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿದೆ. ಇಂತಹ ಸಮಸ್ಯೆಗಳಿಂದ ಶಿಕ್ಷಣಿಕವಾಗಿ ಹಿಂದುಳಿಯುವ ಮಕ್ಕಳು ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ, ಮತ್ತೆ ಪರೀಕ್ಷೆ ಬರೆದು ಉತ್ತೀರ್ಣರಾಗಿ ಮುಂದಿನ ತರಗತಿಗೆ ಹೋಗಲು ನೆರವಾಗುವ ಉದ್ದೇಶದಿಂದಲೇ ಮರುಪರೀಕ್ಷೆಗಳು ಅಸ್ತಿತ್ವದಲ್ಲಿವೆ.

ಈ ಅವಕಾಶದಿಂದಾಗಿಯೇ, 2024ರಲ್ಲಿ ಹಾಜರಾತಿ ಕೊರತೆ ಇದ್ದ ಸುಮಾರು 15 ಸಾವಿರ ವಿದ್ಯಾರ್ಥಿಗಳು ಮರುಪರೀಕ್ಷೆಗಳನ್ನು ಬರೆದಿದ್ದಾರೆ. ಅವರಲ್ಲಿ ಹೆಚ್ಚಿನವರು ಉತ್ತೀರ್ಣರಾಗಿ ಮುಂದಿನ ತರಗತಿಗೆ ತೇರ್ಗಡೆ ಹೊಂದಿದ್ದಾರೆ. ಹೀಗಿರುವಾಗ, ಪರೀಕ್ಷಾ ಮಂಡಳಿಯು ಏಕಪಕ್ಷೀಯವಾಗಿ ಕೇವಲ ಹಾಜರಾತಿ ಕೊರತೆಯ ಕಾರಣಕ್ಕೆ ಮಕ್ಕಳನ್ನು ಪರೀಕ್ಷೆಗಳಿಂದ ಹೊರಗಿಡುವುದು ವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಕಸಿದುಕೊಂಡಂತೆಯೇ ಸರಿ.

ಬದಲಾಗಿ, ಮಕ್ಕಳು ಶಾಲೆಗೆ ಬಾರದೇ ಇರುವುದಕ್ಕೆ ಕಾರಣಗಳನ್ನು ಸರ್ಕಾರಗಳು ಹುಡುಕಬೇಕು. ಸಮೀಕ್ಷೆ ನಡೆಸಬೇಕು. ಮಕ್ಕಳು ಯಾವುದೇ ಸಮಸ್ಯೆ, ಸವಾಲುಗಳಿಗೆ ಗುರಿಯಾಗದೆ ಸ್ವತಂತ್ರವಾಗಿ ಶಿಕ್ಷಣ ಪಡೆಯುವಂತಹ ವ್ಯವಸ್ಥೆಯನ್ನು ಒದಗಿಸಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು.

ಈ ವರದಿ ಓದಿದ್ದೀರಾ?:

ಸರ್ಕಾರದ ನೀತಿಯ ಬಗ್ಗೆ ಈದಿನ.ಕಾಮ್‌ ಜೊತೆಗೆ ಮಾತನಾಡಿದ ಶಿಕ್ಷಣ ತಜ್ಞ ಶ್ರೀಪಾದ್ ಭಟ್, ”ಶಿಕ್ಷಣವನ್ನು ಸಾಮಾಜಿಕ-ಆರ್ಥಿಕ ಸ್ತರದಲ್ಲಿ ನೋಡಬೇಕೆಂದು ಹೇಳುತ್ತಲೇ ಬಂದಿದ್ದೇವೆ. ಆದರೆ, ಸರ್ಕಾರಗಳಿಗೆ ಇದು ಅರ್ಥವಾಗುತ್ತಿಲ್ಲ. ಶಾಲೆಗಳಿಂದ ಹೊರಗುಳಿಯುವವರು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳೇ ಆಗಿರುತ್ತಾರೆ. ಹೀಗಾಗಿ, ಮಕ್ಕಳು ಶಾಲೆಗೆ ಬಾರದೇ ಇರುವುದಕ್ಕೆ ಕಾರಣವೇನು ಎಂಬ ಬಗ್ಗೆ ಸಮೀಕ್ಷೆಗಳನ್ನು ನಡೆಸಬೇಕು. ಸಮಸ್ಯೆಗಳನ್ನು ಗುರುತಿಸಬೇಕು. ಯಾವ ಜಾತಿ, ಯಾವ ವರ್ಗದ ಮಕ್ಕಳ ಹಾಜರಾತಿ ಕೊರತೆ ಇದೆ. ಅದಕ್ಕೆ, ಸಾಮಾಜಿಕ ಹಿನ್ನೆಲೆ ಕಾರಣವೇ ಎಂಬುದನ್ನು ಅರಿತುಕೊಳ್ಳಬೇಕು. ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ಸರ್ಕಾರಗಳು ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವ ನೀತಿಗಳನ್ನು ರೂಪಿಸುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ, ಸರ್ವಶಿಕ್ಷಣ ಅಭಿಯಾನದ ಅಡಿಯಲ್ಲಿ ‘ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಿ’, ‘ಶಿಕ್ಷಣದಿಂದ ಹೊರಗುಳಿದವರನ್ನು ಶಿಕ್ಷಣದ ವ್ಯಾಪ್ತಿಗೆ ತನ್ನಿ’ ಎಂಬ ಘೋಷ ವಾಕ್ಯಗಳೊಂದಿಗೆ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸಗಳು ನಡೆಯುತ್ತಿದ್ದವು. ಆದರೆ, ಈಗ ಮಕ್ಕಳನ್ನು ಶಿಕ್ಷಣದಿಂದ ಹೊರದಬ್ಬುವ ಕ್ರಮಗಳು ಜಾರಿಗೆ ಬರುತ್ತಿವೆ. ಇದು, ಶಿಕ್ಷಣದಿಂದ ಹೊರಗುಳಿಯುವಿಕೆಯನ್ನು, ಶಿಕ್ಷಣದಿಂದ ಹೊರದಬ್ಬುವಿಕೆಯಾಗಿ ಮಾರ್ಪಡುತ್ತಿದೆ. ಹಾಜರಾತಿ ಕಾರಣಕ್ಕಾಗಿ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ, ಶಿಕ್ಷಣದಿಂದ ಹೊರಗಿಡುವ ತನ್ನ ನೀತಿಗಳನ್ನು ಶಿಕ್ಷಣ ಇಲಾಖೆ, ಸರ್ಕಾರಗಳು ಕೈಬಿಡಬೇಕು. ಮಕ್ಕಳನ್ನು ಶಾಲೆಗೆ ಕರೆತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಆರೋಪಗಳಿಗೆ ಉತ್ತರ ಕೊಟ್ಟಿತೆ? ಉಳಿದಿರುವ ಪ್ರಶ್ನೆಗಳೇನು?

ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಆಯೋಗದ ಈ ನಡೆಯನ್ನು "ಸಂವಿಧಾನಕ್ಕೆ ಅಪಮಾನ"...

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ದಾವಣಗೆರೆ | ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ದಲಿತ ಸಂಘಟನೆಗಳಿಂದ ಹರಿಹರದಲ್ಲಿ ಆ.18ಕ್ಕೆ ಪ್ರತಿಭಟನೆ

ಪರಿಶಿಷ್ಟ ಜಾತಿ ಜನಾಂಗದವರಿಗೆ ಯಥಾವತ್ತಾಗಿ ಒಳ ಮೀಸಲಾತಿ ಜಾರಿ ಮಾಡಲು ಒತ್ತಾಯಿಸಿ,...

ಚಿತ್ರದುರ್ಗ | ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದ ಆರ್ಥಿಕ ಸಬಲೀಕರಣ; ಸಚಿವ ಡಿ.ಸುಧಾಕರ್ ಅಭಿಮತ

"ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತಂದ ಪಂಚ ಗ್ಯಾರಂಟಿ...

Download Eedina App Android / iOS

X