ಧಾರಾವಾಹಿಯಂತೆ ನಡೆದ ಮಹಾ ಮದುವೆಯೂ, ಏರಿದ ಮೊಬೈಲ್‌ ಡೇಟಾ ದರವೂ…

Date:

Advertisements
ಈ ಆಡಂಬರದ ಪ್ರದರ್ಶನವು ಕೇವಲ ಒಂದು ಸಿರಿವಂತ ಕುಟುಂಬದ ಐಶ್ವರ್ಯ ಮತ್ತು ಅಧಿಕಾರದ ಪ್ರದರ್ಶನವಾಗಿರದೇ, ಇದು ಈ ದೇಶದಲ್ಲಿರುವ ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಗಳ ವ್ಯವಸ್ಥೆಯ ಅಣಕದ ಪ್ರದರ್ಶನವಾಗಿತ್ತು

 

ದೇಶದ ತುಂಬ ಎಂದೂ ನಡೆಯದ ಅತಿ ವೈಭವದ ಮದುವೆಯ ಸುದ್ದಿಯೇ ಸುದ್ದಿ. ಈ ಮದುವೆ ಯಾರದ್ದು ಎಂದು ಹೇಳುವ ಪ್ರಮೇಯವೇ ಇಲ್ಲ. ಕಳೆದ ಡಿಸೆಂಬರ್ ತಿಂಗಳಿನಿಂದ ಪ್ರಾರಂಭವಾದ ಅಂಬಾನಿ ಪುತ್ರನ ಮದುವೆಯ ಪ್ರತಿ ಕಾರ್ಯಕ್ರಮಗಳನ್ನು ಮುಗಿಯದ ಧಾರಾವಾಹಿಯಂತೆ ಮುಖ್ಯ ಸ್ತರದ ಬಹುತೇಕ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಳ್ಳುತ್ತಲೇ ಬಂದಿದ್ದು, ಸದ್ಯಕ್ಕೆ ಮುಗಿದಿದೆ ಎಂಬ ಘಟ್ಟ ತಲುಪಿದೆ.

ಈ ಮದುವೆಯನ್ನು ಇಡಿ ದೇಶವೇ ಸಂಭ್ರಮಿಸಬೇಕೆಂಬ ಇರಾದೆ ಇವರ ಕುಟುಂಬ ಮತ್ತು ಮಾಧ್ಯಮಗಳಿಗಿದ್ದಂತಿತ್ತು. ಮದುವೆಯ ಸುದ್ದಿಯ ಮಹಾಪೂರದಲ್ಲಿ ದೇಶದ ಅತಿ ಮುಖ್ಯ ಸುದ್ದಿಗಳು ಜಾಗ ಕಳೆದುಕೊಂಡಿವೆ. 3ನೇ ಪುಟದಲ್ಲೆಲ್ಲೋ ಕಾಣಿಸಿಕೊಳ್ಳಬೇಕಾಗಿದ್ದ ಈ ಮಾಹಿತಿ ಮೊದಲ ಪುಟದ ನಿರಂತರ ಸುದ್ದಿಯಾಗಿರುವುದು ಇಂದಿನ ಮಾಧ್ಯಮಗಳ ನಿಲುವಿಗೆ ಹಿಡಿದ ಕನ್ನಡಿಯಾಗಿದೆ. ಇಷ್ಟೆಲ್ಲಾ ಪ್ರಚಾರ ಸಿಗುತ್ತಿರುವ ಈ ಮದುವೆಯ ವರ ಅಥವಾ ವಧು ಮಾಡಿರುವ ಸಾಧನೆಯಾದರೂ ಏನು? ಈ ದೇಶಕ್ಕೆ ಮತ್ತು ಜನರಿಗೆ ಅವರಿಂದ ಸಿಕ್ಕಿರುವ ವಿಶೇಷ ಕೊಡುಗೆಯಾದರೂ ಏನು? ಏನೂ ಇಲ್ಲ! ವರ ಅತಿ ಸಿರಿವಂತರೊಬ್ಬರ ಮಗ ಅನ್ನುವ ಸಾಧನೆ ಬಿಟ್ಟರೆ ಮತ್ತೇನೂ ಇಲ್ಲ. ಬಹುಶಃ ಮಾಧ್ಯಮಗಳಿಗೆ ಈ ಜೋಡಿ ಧರಿಸಿದ್ದ  ಭಾರೀ ಬೆಲೆಯುಳ್ಳ ವಾಚು, ಆಭರಣ ಮತ್ತು ಪೋಷಾಕುಗಳು ಹಾಗೂ ಮದುವೆಯ ಆಡಂಬರಗಳು ಪ್ರಚಾರಯೋಗ್ಯವಾದ ಅತಿ ದೊಡ್ಡ ಸಾಧನೆಗಳು ಎನಿಸಿರಬಹುದು. ಈ ಮಹಾ ಮದುವೆಗೆ ನಿಖರವಾಗಿ ಎಷ್ಟು ಖರ್ಚಾಗಿದೆ ಎಂದು ತಿಳಿದಿಲ್ಲವಾದರೂ, ಸುಮಾರು 5,000 ಕೋಟಿ ರೂಪಾಯಿಗಳು ವ್ಯಯವಾಗಿರಬಹುದೆಂದು ಅಂದಾಜಿಸಲಾಗಿದೆ.

ಈ ಸಿರಿವಂತ ಕುಟುಂಬವು ತನ್ನ ಆದಾಯವನ್ನು ತನಗಿಷ್ಟ ಬಂದಂತೆ ಖರ್ಚು ಮಾಡುವುದರಲ್ಲಿ ತಪ್ಪೇನಿದೆ ಎಂಬುದು ಕೆಲವರ ಅಭಿಪ್ರಾಯವಾಗಿದ್ದರೆ, ಈ ವೆಚ್ಚದಿಂದ ಅನೇಕ ವ್ಯವಹಾರ ಮತ್ತು ಕೆಲಸಗಳು ಹೆಚ್ಚಾಗಿವೆ ಎನ್ನುವ ವಾದವೂ ಇದೆ. ಇದೆಲ್ಲವೂ ನಿಜವಿರಬಹುದು. ಆದರೆ ಇವರ ಆದಾಯದ ಮೂಲವನ್ನು ಶೋಧಿಸಿದಾಗ ಈ ಮದುವೆಯ ಖರ್ಚನ್ನು ಜನರೇ ಭರಿಸುತ್ತಿದ್ದಾರೆ ಎನ್ನುವುದು ವಾಸ್ತವವಾಗಿದೆ. ಇವರು ನಡೆಸುತ್ತಿರುವ ಜಿಯೋ ಟೆಲಿಕಮ್ಯುನಿಕೇಷನ್ಸ್ ಸೇವೆಗಳ ದರವನ್ನು ಜುಲೈ 3ರಿಂದ ಹೆಚ್ಚಿಸಲಾಗಿದೆ. ಈಗಾಗಲೇ ಕಂಪೆನಿಯು ತನ್ನ ಲಾಭವನ್ನು ಅಧಿಕ ಮಾಡಿಕೊಂಡಿದ್ದರೂ ಕಳೆದ ವರ್ಷಗಳಲ್ಲಿ 5ಜಿ ಡೇಟಾ ಒದಗಿಸಿದ ಖರ್ಚನ್ನು ಭರಿಸುವ ಕಾರಣ ನೀಡಿ ಬಹುತೇಕ ಎಲ್ಲ ಮೊಬೈಲ್ ಸೇವಾ ಯೋಜನೆಗಳ ದರವನ್ನು ಹೆಚ್ಚಿಸಿರುವುದು ಕಂಡುಬರುತ್ತದೆ.

Advertisements

JIO on top telecom

1ಜಿಬಿ ಡೇಟಾದ ಕಡಿಮೆ ರೀಚಾರ್ಜ್‌ ಬೆಲೆಯನ್ನು ರೂ 15 ರಿಂದ 19ಕ್ಕೆ ಅಂದರೆ ಸುಮಾರು 27% ರಷ್ಟು ಏರಿಸಲಾಗಿದೆ. ಅದರಂತೆ 339 ರೂ.ಗಳ ಪೋಸ್ಟ್ ಪೇಯ್ಡ್ ದರವನ್ನು 449ಕ್ಕೆ ಏರಿಸಲಾಗಿದ್ದು, ಮಿತಿರಹಿತ ರೂ.666 ಯೋಜನೆಯನ್ನು ರೂ. 399ಕ್ಕೆ ಏರಿಸಲಾಗಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ಜೂನ್ 27ರಂದು ವರದಿ ಮಾಡಿದೆ. ಇದು ದೇಶದಲ್ಲಿಯೇ ಅತಿ ದೊಡ್ಡ ಸಂಖ್ಯೆಯ ಗ್ರಾಹಕರನ್ನು ಹೊಂದಿರುವ ಕಂಪೆನಿಯಾಗಿದ್ದು, ಡಿಸೆಂಬರ್ 2023ಕ್ಕೆ ಇದು ಸುಮಾರು 49 ಕೋಟಿ ಗ್ರಾಹಕರನ್ನು ಹೊಂದಿದೆಯೆಂದು ಆನ್‌ಲೈನ್ ಪತ್ರಿಕೆಯೊಂದು ವರದಿ ಮಾಡಿದೆ. ಸುಮಾರು 10 ರಿಂದ 27% ರಿಚಾರ್ಜ್ ದರ ಹೆಚ್ಚಿಸಿರುವ ಈ ಕಂಪೆನಿಗೆ ಒಟ್ಟು 49ಕೋಟಿ ಗ್ರಾಹಕರಿಂದ ಪ್ರತಿ ತಿಂಗಳು ಎಷ್ಟೊಂದು ಹೆಚ್ಚಿನ ಮೊತ್ತವು ಹರಿದು ಬರಲಿದೆ ಎಂಬುದನ್ನು ಓದುಗರು ಗ್ರಹಿಸಬಹುದಾಗಿದೆ. ಅಂದರೆ ಈ ಕಂಪೆನಿಯ ಮೊಬೈಲ್ ಸೇವೆ ಪಡೆಯುತ್ತಿರುವ ಸಾರ್ವಜನಿಕರು ಇವರ ಆಡಂಬರದ ಮದುವೆಯ ಖರ್ಚುನ್ನು ತಮ್ಮ ಜೇಬಿನಿಂದ ಭರಿಸಿದ್ದಾರೆ ಎಂದಾಯಿತು.

ಹೀಗೆ ತಮಗಿಷ್ಟ ಬಂದಂತೆ ದರ ಏರಿಸುವ ಬಂಡವಾಳಶಾಹಿ ನೀತಿಯನ್ನು ನಿಯಂತ್ರಿಸಬೇಕಾದ ಸರ್ಕಾರ ಮತ್ತು ಗ್ರಾಹಕರ ಮೇಲಿನ ಈ ಶೋಷಣೆಯನ್ನು ಪ್ರಶ್ನಿಸಬೇಕಾಗಿದ್ದ ಅನೇಕ ವಿರೋಧ ಪಕ್ಷಗಳು ತಮ್ಮ ಜವಾಬ್ದಾರಿ ಮರೆತು ಮದುವೆಗೆ ಹೋಗಿ ಅಲ್ಲಿನ ಆಡಂಬರದಲ್ಲಿ ತಾವೂ ಭಾಗಿಯಾಗಿದ್ದಾರೆ. ಮದುವೆಗೆ ಅನೇಕ ಗಣ್ಯರು ದೇಶ ವಿದೇಶದಿಂದ ಆಗಮಿಸಿದ ಕಾರಣ ಇವರಿಗೆ ಸ್ಥಳೀಯ ಪೊಲೀಸರಿಂದ ರಕ್ಷಣಾ ವ್ಯವಸ್ಥೆ, ವಿವಾಹ ಪೂರ್ವದ ಕಾರ್ಯಕ್ರಮಕ್ಕೆ ವಿಮಾನ ನಿಲ್ದಾಣದ ಸುಧಾರಣೆ ಇತ್ಯಾದಿಗಳನ್ನು ನಿರ್ವಹಿಸಲು ಸರ್ಕಾರವು ತನ್ನ ಸಂಪೂರ್ಣ ಸಹಕಾರ ನೀಡಿದೆ. ಹೀಗೆ ಸಾರ್ವಜನಿಕರ ತೆರಿಗೆಯಿಂದ ನಿರ್ವಹಿಸಲಾಗುವ ಈ ಸೌಲಭ್ಯಗಳನ್ನು ಒದಗಿಸುವ ಮೂಲಕ ಬಂಡವಾಳಶಾಹಿಗಳ ಸೇವೆಗೆ ತಾವು ಸದಾ ಸಿದ್ಧವೆಂಬ ಉದಾರ ಧೋರಣೆಯನ್ನು ಸರ್ಕಾರ ತೋರಿಸಿದೆ.

ಜನರಾದರೂ ಹೆಚ್ಚು ದರ ನೀಡಿ ಯಾಕೆ ಇವರ ಮೊಬೈಲ್ ಸೇವೆ ಪಡೆಯಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಬಿಎಸ್‌ಎನ್‌ಎಲ್ ಎಂಬ ಮರೆತು ಹೋಗುತ್ತಿರುವ ಸಾರ್ವಜನಿಕ ಉದ್ಯಮವನ್ನು ನೆಲಕಚ್ಚಿಸುವಲ್ಲಿ ಸರ್ಕಾರಗಳೇ ಮುಖ್ಯ ಪಾತ್ರ ವಹಿಸಿವೆ. ಖಾಸಗಿ ಕಂಪೆನಿಗಳ ಪರವಾದ ನೀತಿಗಳನ್ನು ಕೈಗೊಳ್ಳುವ ಮೂಲಕ ಮೊಬೈಲ್ ಸೇವಾ ಕ್ಷೇತ್ರದ ಮಾರುಕಟ್ಟೆಯಲ್ಲಿ ಈ ಕಂಪೆನಿಗಳೇ ಗತಿ ಎಂಬಂತಹ ವ್ಯವಸ್ಥೆಯೊಳಗೆ ಜನರನ್ನು ಬಲಿಪಶು ಮಾಡಿದ್ದೆಲ್ಲವು ಈಗ ಕಥೆಯಾಗಿದೆ. ಇದೊಂದೇ ಅಲ್ಲದೆ, ಅಂಬಾನಿ ಕುಟುಂಬದ ಇನ್ನೂ ಅನೇಕ ಉದ್ದಿಮೆಗಳಿಗೆ ಸರ್ಕಾರಗಳು ನೀಡಿರುವ ಬೆಂಬಲದಿಂದಾಗಿ ಈ ಕುಟುಂಬವು ಏಷ್ಯಾದಲ್ಲಿಯೇ ಮೊದಲ ಶ್ರೀಮಂತ ಸ್ಥಾನದಲ್ಲಿರಲು ಸಾಧ್ಯವಾಗಿದೆ ಎನ್ನುವುದು ಗಮನಾರ್ಹ ವಿಷಯವಾಗಿದೆ.

anant ambani wedding

ಹೀಗೆ ಪಡೆದ ಲಾಭದ ಹಣವನ್ನು ಈ ಮಹಾ ಮದುವೆಯಲ್ಲಿ ನೀರಿನಂತೆ ಖರ್ಚು ಮಾಡುತ್ತಿದ್ದರೆ, ಅದರ ಮೂಲವನ್ನು ಆದಾಯ ತೆರಿಗೆ ಇಲಾಖೆಯಾಗಲಿ ಅಥವಾ ಸಂಬಂಧಿತ ಇಲಾಖೆಗಳು ಶೋಧಿಸುವ ಸಾಹಸಕ್ಕೆ ಇಳಿಯುವುದಿಲ್ಲ. ಬದಲಿಗೆ ಆಡಂಬರದ ಪರಾಕಾಷ್ಠೆ ತಲುಪಿದ ಈ ವೈಭವದ ಮದುವೆಯಲ್ಲಿ ಆಳುವ ಸರ್ಕಾರ, ಅನೇಕ ವಿರೋಧ ಪಕ್ಷಗಳ ನಾಯಕರು (ರಾಹುಲ್ ಗಾಂಧಿ ಕುಟುಂಬವನ್ನು ಹೊರತು ಪಡಿಸಿ), ಸಿನಿಮಾ-ಕ್ರೀಡಾ ವಲಯದ ಹೆಸರಾಂತ ವ್ಯಕ್ತಿಗಳು, ಕಾರ್ಪೋರೇಟ್ ಜಗತ್ತು ಹಾಗೂ ಮಠಾಧೀಶರೆಲ್ಲರೂ ಭಾಗವಹಿಸಿ ನಾವು ನಿಮ್ಮೊಂದಿಗಿದ್ದೇವೆ ಎಂಬ ಭರವಸೆಯನ್ನು ಈ ಸಿರಿವಂತ ಕುಟುಂಬಕ್ಕೆ ನೀಡಿದ್ದಷ್ಟೇ ಅಲ್ಲ, ಅವರೆಲ್ಲರಿಗೂ ಇಂತಹ ಬಂಡವಾಳ ಶಾಹಿಗಳ ಸಾನಿಧ್ಯದ ಅಗತ್ಯವಿದೆಯೆಂಬುದನ್ನು ಸಹ ಖಚಿತಪಡಿಸಿದ್ದಾರೆ.

ಹೀಗೆ ನಡೆದ ಮದುವೆಯಲ್ಲಿ ಈ ದೇಶದ ಸಾಮಾನ್ಯ ಜನರೆಲ್ಲಿದ್ದರು? ಅವರನ್ನು ನೀವು ಮುಖ್ಯ ಕಾರ್ಯಕ್ರಮಗಳಲ್ಲಿ ಗಣ್ಯರೊಂದಿಗೆ ನೋಡದೇ ಇರಬಹುದು. ಎಷ್ಟೇ ತೆರಿಗೆ ನೀಡಿದರೂ, ಮತ ಚಲಾಯಿಸಿದರೂ  ಜನಸಾಮಾನ್ಯರು ಎಷ್ಟಾದರೂ ಫಲಾನುಭವಿಗಳಲ್ಲವೇ? ಅವರಿಗೆ ವಿಶೇಷವಾಗಿ ಆದರೆ ಬೇರೆಯಾಗಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಊಟ ನೀಡಿದ್ದಲ್ಲದೆ, ಸುಮಾರು 50 ಜೋಡಿಗಳಿಗೆ ಉಚಿತ ಕಲ್ಯಾಣ ಭಾಗ್ಯ ಪ್ರಾಪ್ತವಾದ ಸುದ್ಧಿಯನ್ನು ಮಾಧ್ಯಮಗಳು ಬಿತ್ತರಿಸಿ ಈ ಸಿರಿವಂತ ಕುಟುಂಬವು ಎಷ್ಟು ಕರುಣಾಮಯಿಗಳು ಎಂಬುದನ್ನು ದೇಶಕ್ಕೆ ಪರಿಚಯ ಮಾಡಿಕೊಟ್ಟವು.

nita ambani

ಸೌಂದರ್ಯ ಪ್ರಜ್ಞೆಯ ಗಂಧವೂ ಇಲ್ಲದ ಈ ಝಗಮಗಿಸುವ ವೈಭವದ ಮದುವೆಯ ಪ್ರತಿಯೊಂದು ವ್ಯವಸ್ಥೆಯಲ್ಲಿಯೂ ಸಿರಿವಂತಿಕೆಯ ಪ್ರದರ್ಶನದ ಉದ್ದೇಶವೇ ಎದ್ದು ಕಾಣುತಿತ್ತು. ಮನರಂಜನೆಗಳಲ್ಲಿ ರಂಗವ್ಯವಸ್ಥೆ ಮತ್ತು ಗೀತ/ನೃತ್ಯಕಾರರ ವೇಷಭೂಷಣಗಳ ಥಳಥಳಿಕೆಗಳು ಮಹತ್ವವಾಗಿದ್ದು, ಅಲ್ಲಿ ಸ್ವರಸ್ವಾದ-ಆನಂದಾನುಭವ ಸ್ಫುರಿಸುವ ಯಾವ ಅಂಶವೂ ಇರಲಿಲ್ಲ. ಅತಿಥಿ ಮತ್ತು ಆತಿಥೇಯರ ಕಣ್ಣು ಕೊರೈಸುವ ವೇಷಭೂಷಣಗಳು ತಮ್ಮ ಹೊಳಪಿನಿಂದ ಅದನ್ನು ಧರಿಸಿದ್ದ ವ್ಯಕ್ತಿಯ ಅಂದವನ್ನು ಮಂಕುಗೊಳಿಸಿದ್ದವು.

ಇದನ್ನೂ ಓದಿ ಮಾತನಾಡಲು ಅವಕಾಶ ನೀಡದ ಆರೋಪ; ನೀತಿ ಆಯೋಗ ಸಭೆಯಿಂದ ಹೊರನಡೆದ ಮಮತಾ ಬ್ಯಾನರ್ಜಿ

ಒಟ್ಟಾರೆ, ಈ ಮಹಾ ಮದುವೆಯ ಮಹತ್ತರ ಉದ್ದೇಶವು ಬೆಸೆದ ಎರಡು ಹೃದಯಗಳನ್ನು ಸಾಮಾಜಿಕವಾಗಿ ಒಪ್ಪಿ ಕುಟುಂಬ ವ್ಯವಸ್ಥೆಗೆ ಬರಮಾಡಿಕೊಳ್ಳುವುದಾಗಿರದೇ, ಸಿರಿವಂತಿಕೆ ಮತ್ತು ಅಧಿಕಾರವನ್ನು ಜಗತ್ತಿಗೆ ಜಾಹೀರು ಮಾಡುವುದಾಗಿತ್ತು ಎನಿಸುತ್ತದೆ. ಈ ಆಡಂಬರದ ಪ್ರದರ್ಶನವು ಕೇವಲ ಒಂದು ಸಿರಿವಂತ ಕುಟುಂಬದ ಐಶ್ವರ್ಯ ಮತ್ತು ಅಧಿಕಾರದ ಪ್ರದರ್ಶನವಾಗಿರದೇ, ಇದು ಈ ದೇಶದಲ್ಲಿರುವ ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಗಳ ವ್ಯವಸ್ಥೆಯ ಅಣಕದ ಪ್ರದರ್ಶನವಾಗಿತ್ತು ಎನಿಸುತ್ತದೆ. ಅಲ್ಲಿ ಅಧಿಕಾರ, ಹಣ, ಸಾಮಾಜಿಕ ಪ್ರತಿಷ್ಠೆ ಹೊಂದಿದ ಒಂದು ವರ್ಗವು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಟ್ಟಾಗಿ ಈ ಅಸಮಾನತೆಯನ್ನು ಸಂಭ್ರಮಿಸಿದ ವಿಕೃತಿಯನ್ನು ಜನ ಸಾಮಾನ್ಯರು ಮತ್ತೆ ಮತ್ತೆ ಬೆರಗಿನಿಂದ ವೀಕ್ಷಿಸುತ್ತಾ ಆಹಾ, ಓಹೋ ಎಂದು ಅಲ್ಲಿನ ವೈಭವವನ್ನು ತಮ್ಮದೇ ಎಂಬಂತೆ ವರ್ಣಿಸುತ್ತಾ, ಆನಂದಿಸುತ್ತಾ, ಖುಷಿ ಪಡುತ್ತಿರುವುದು ದುರಂತವೇ ಸರಿ.

ಲತಾಮಾಲ
ಲತಾಮಾಲ
+ posts

ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಲತಾಮಾಲ
ಲತಾಮಾಲ
ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X