‘ಗ್ಯಾರಂಟಿ ಯೋಜನೆ’ಗಳು ಚುನಾವಣಾ ಸಮಯದಲ್ಲಷ್ಟೇ ಗ್ಯಾರಂಟಿ!

Date:

Advertisements
ಗ್ಯಾರಂಟಿ ಯೋಜನೆಗಳನ್ನು ಚುನಾವಣೆ ಮತ್ತು ಮತದಾನದೊಂದಿಗೆ ಜೋಡಿಸುವ ಕ್ಷುದ್ರ ಮತ್ತು ಕೊಳಕು ರಾಜಕಾರಣವನ್ನು ಎಲ್ಲ ಪಕ್ಷಗಳು ಮಾಡುತ್ತಿವೆ. ಇಂತಹ ನೀಚ ರಾಜಕಾರಣ ಮಾಡುವುದರಲ್ಲಿ ಬಿಜೆಪಿ ಪಿಎಚ್‌.ಡಿ ಮಾಡಿದೆ. ಉಳಿದ ಪಕ್ಷಗಳು ಬಿಜೆಪಿಯನ್ನು ನಕಲು ಮಾಡುತ್ತಿವೆ. 

ರಾಜ್ಯ ಮತ್ತು ದೇಶದ ರಾಜಕಾರಣದಲ್ಲಿ ರಾಜಕೀಯ ಪಕ್ಷ ಮತ್ತು ಸರ್ಕಾರಗಳ ಗ್ಯಾರಂಟಿ ಭರವಸೆಗಳು, ಯೋಜನೆಗಳು ಹೆಚ್ಚು ಗಮನ ಸೆಳೆಯುತ್ತಿವೆ. ಗ್ಯಾರಂಟಿ ಯೋಜನೆಗಳಿಗೆ ಕರ್ನಾಟಕವೇ ನಾಂದಿ ಹಾಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಘೋಷಿಸಿದ ಐದು ಗ್ಯಾರಂಟಿಗಳು ಜನಸಾಮಾನ್ಯರ ಮೆಚ್ಚುಗೆ ಗಳಿಸಿದ ಬಳಿಕ, ನಾನಾ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳ ಚರ್ಚೆ ಮತ್ತು ಘೋಷಣೆಗಳು ಹೆಚ್ಚಾಗಿವೆ. ಉಚಿತ ಮತ್ತು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕತೆ ದಿವಾಳಿ ಆಗುತ್ತದೆ ಎಂದೆಲ್ಲ ಅಬ್ಬರದ ಭಾಷಣ ಮಾಡಿದ್ದ ಬಿಜೆಪಿ ಮತ್ತು ಮೋದಿ ಕೂಡ ಲೋಕಸಭಾ ಚುನಾವಣೆಯಲ್ಲಿ ‘ಮೋದಿ ಕಿ ಗ್ಯಾರಂಟಿ’ಯನ್ನೂ, ಹಲವು ರಾಜ್ಯಗಳ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನೂ ಘೋಷಿಸಿದ್ದರು.

ಆದರೂ, ಗ್ಯಾರಂಟಿ ಯೋಜನೆಗಳೂ ಸೇರಿದಂತೆ ಜನರಿಗೆ ನೇರವಾಗಿ ನಗದು ಒದಗಿಸುವ ಹಲವಾರು ಯೋಜನೆಗಳು ಚುನಾವಣಾ ಸಮಯದಲ್ಲಿ ಮಾತ್ರವೇ ಜನರ ಕೈಗೆ ಸಿಗುವ ಯೋಜನೆಗಳಾಗಿ ಮಾರ್ಪಡುತ್ತಿವೆ. ಅದಕ್ಕೆ ಸಾಕಷ್ಟು ಉದಾಹರಣೆಗಳೂ ಇವೆ. ಅಂಥದ್ದೇ ಒಂದು ನಿದರ್ಶನವಾಗಿ, ಈ ವರ್ಷದ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯಲಿರುವ ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (ಪಿಎಂ ಕಿಸಾನ್) ಅಡಿ ರೈತರಿಗೆ 22,000 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ದೇಶಾದ್ಯಂತ ಒಟ್ಟು 9.8 ಕೋಟಿ ರೈತರು ಯೋಜನೆ ಫಲಾನುಭವಿಗಳಾಗಿದ್ದು, ಇವರಲ್ಲಿ, ಸುಮಾರು 10% ರೈತರು (75 ಲಕ್ಷ) ಬಿಹಾರದವರೇ ಆಗಿದ್ದಾರೆ.

”ನಾವು ರೈತರಿಗೆ ಹೆಚ್ಚಿನ ಮಹತ್ವ ನೀಡಿದ್ದೇವೆ. ಆಹಾರ ಸಂಸ್ಕರಣೆ ಉದ್ಯಮಕ್ಕೂ ಹೆಚ್ಚು ಗಮನ ಕೊಟ್ಟಿದ್ದೇವೆ. ಜಗತ್ತಿನ ಪ್ರತಿಯೊಂದು ಅಡುಗೆಮನೆಯಲ್ಲಿಯೂ ಭಾರತೀಯ ರೈತರು ಬೆಳೆದ ಕನಿಷ್ಠ ಒಂದು ಉತ್ಪನ್ನವಿರಬೇಕು ಎಂಬ ಕನಸು ನನಗಿತ್ತು. ಕಳೆದ ವರ್ಷಗಳಲ್ಲಿ, ಭಾರತದ ಕೃಷಿ ರಫ್ತು ಗಮನಾರ್ಹವಾಗಿ ಹೆಚ್ಚಾಗಿದೆ. ಇದು ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಗಳನ್ನು ಪಡೆಯಲು ಅವಕಾಶ ದೊರೆತಿದೆ. ಬಿಹಾರದ ಮಖಾನಾ(ಕಮಲ ಬೀಜ) ರಫ್ತಿಗೆ ಒತ್ತು ಕೊಡಲಾಗುತ್ತಿದೆ. ನಾನು 365 ದಿನಗಳಲ್ಲಿ ಕನಿಷ್ಠ 300 ದಿನ ಮಖಾನಾ ತಿನ್ನುತ್ತೇನೆ” ಎಂದೆಲ್ಲ ಹೇಳಿದ್ದಾರೆ.

Advertisements

ಜೊತೆಗೆ, ರೈಲು ಮತ್ತು ರಸ್ತೆ ಯೋಜನೆಗಳನ್ನೂ ಘೋಷಿಸಿದ್ದಾರೆ. ವಿಕ್ರಮಶಿಲಾ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪಿಸುವ ಭರವಸೆಯನ್ನೂ ನೀಡಿದ್ದಾರೆ. ಭಾಗಲ್ಪುರ ರೇಷ್ಮೆಯನ್ನು ಬಳಸಿ ತಯಾರಿಸಿದ ಸೀರೆಗಳು ದೇಶದಲ್ಲಿ ಮಾತ್ರವೇ ಅಲ್ಲದೆ, ವಿಶ್ವದ ಇತರೆಡೆಗಳಲ್ಲಿಯೂ ಪ್ರಸಿದ್ಧಿ ಪಡೆದಿವೆ ಎಂದು ಹಾಡಿ ಹೊಗಳಿದ್ದಾರೆ.

ಚುನಾವಣಾ ವರ್ಷದಲ್ಲಿ ಬಿಹಾರಕ್ಕೆ ಭರಪೂರ ಯೋಜನೆಗಳು ದೊರೆಯುತ್ತಿವೆ. ಕೇಂದ್ರ ಬಜೆಟ್‌ನಲ್ಲಿಯೂ 59,000 ಕೋಟಿ ರೂ. ಅನುದಾನ ನೀಡಲಾಗಿದೆ. ಮಾತ್ರವಲ್ಲದೆ, ಬಜೆಟ್‌ ಅಧಿವೇಶನದಲ್ಲಿ ವೇಳೆ ನಿರ್ಮಲಾ ಸೀತಾರಾಮನ್ ಅವರು ಬಿಹಾರದ ‘ಮಧುಬನಿ’ ಸೀರೆ ಉಟ್ಟು ಬಜೆಟ್‌ ಮಂಡಿಸಿದ್ದಾರೆ.

ಆಳುವ ಸರ್ಕಾರಗಳು ಚುನಾವಣೆಯ ಸಮಯದಲ್ಲಿ, ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಯೋಜನೆಗಳು ಮತ್ತು ಬಜೆಟ್‌ನಲ್ಲಿ ಹೆಚ್ಚಿನ ಒತ್ತುಕೊಡುವುದು ಹೊಸ ವಿಚಾರವೇನೂ ಅಲ್ಲ. ಅದನ್ನು ಬಿಜೆಪಿ ಮಾತ್ರವೇ ಮಾಡುತ್ತಿಲ್ಲ. ಅಧಿಕಾರದಲ್ಲಿದ್ದ ಮತ್ತು ಅಧಿಕಾರದಲ್ಲಿರುವ ಎಲ್ಲ ಪಕ್ಷಗಳು ಇಂಥದ್ದನ್ನೇ ಮಾಡಿವೆ. ಆದರೆ, ಇಂತಹ ತಂತ್ರಗಳಲ್ಲಿ ಬಿಜೆಪಿ ಕೊಂಚ ಮುಂದಿದೆ. ಆದಾಗ್ಯೂ, ಕೆಲವು ಜನಪರ ಯೋಜನೆಗಳು ಅಥವಾ ಜನರಿಗೆ ಉಪಯೋಗವಾಗುವ ಮತ್ತು ವರ್ಷಪೂರ್ತಿ ಜನರಿಗೆ ದೊರೆಯಬೇಕಾದ ಕಾರ್ಯಕ್ರಮಗಳೂ ಕೂಡ ಇತ್ತೀಚಿನ ದಿನಗಳಲ್ಲಿ ಚುನಾವಣೆಯ ದಾಳವಾಗಿ ಮಾರ್ಪಡುತ್ತಿವೆ. ಚುನಾವಣೆಯ ಸಮಯದಲ್ಲಿ ಮಾತ್ರವೇ ಜನರ ಕೈಸೇರುತ್ತಿವೆ. ಹೀಗೆ ಮಾಡುವುದರಿಂದ ಜನರು ಸರ್ಕಾರದ ಬಗ್ಗೆ ವಿಶ್ವಾಸ ಇಡುತ್ತಾರೆ ಎಂದು ಪಕ್ಷಗಳು ಭಾವಿಸಿವೆ.

ಆ ಕಾರಣಕ್ಕಾಗಿಯೇ, ಮೋದಿ ಅವರು ಚುನಾವಣಾ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ನಿಂತು ‘ಪಿಎಂ ಕಿಸಾನ್’ ಯೋಜನೆಯಡಿ ರೈತರ ಖಾತೆಗಳಿಗೆ 2,000 ರೂ. ಬಿಡುಗಡೆ ಮಾಡಿದ್ದಾರೆ. ರೈತರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ. ಅಲ್ಲದೆ, ಕಳೆದ ವರ್ಷದ ಅಂತ್ಯದಲ್ಲಿ ನಡೆದ ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ಹಾಗೂ ಜಮ್ಮು ಮತ್ತು ಕಾಶ್ಮೀರ ವಿದಾನಸಭಾ ಚುನಾವಣಾ ಸಮಯದಲ್ಲಿಯೂ ಇದೇ ‘ಪಿಎಂ ಕಿಸಾನ್ ಯೋಜನೆ’ಯಡಿ 18ನೇ ಕಂತಿನ ಹಣವನ್ನು ಮೋದಿ ಬಿಡುಗಡೆ ಮಾಡಿದ್ದರು. ಅದೂ, ಚುನಾವಣೆಯಲ್ಲಿ ಹೈವೋಲ್ಟೇಜ್ ರಾಜ್ಯವಾಗಿದ್ದ ಮಹಾರಾಷ್ಟ್ರದ ವಾಶಿಮ್‌ನಲ್ಲಿ ಆ ಹಣವನ್ನು ಬಿಡುಗಡೆ ಮಾಡಿದ್ದರು. ಜೊತೆಗೆ, ಚುನಾವಣೆಯ ಹೊಸ್ತಿಲಿನಲ್ಲಿಯೇ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ‘ಲಡ್ಕಿ ಬಹಿನ್’ ಯೋಜನೆಯನ್ನು ಘೋಷಿಸಿತ್ತು.

ಜನಪರ ಯೋಜನೆಗಳಲ್ಲಿ ಜನರಿಗೆ ಕೊಡಬೇಕಾದ ಹಣವನ್ನು ಚುನಾವಣಾ ಸಮಯದವರೆಗೆ ಹಿಡಿದಿಟ್ಟುಕೊಂಡು, ಚುನಾವಣೆ ಹತ್ತಿರ ಬಂದಾಗ ಮಾತ್ರವೇ ಬಿಡುಗಡೆ ಮಾಡುವ ಚಾಳಿ ಬಿಜೆಪಿಯದ್ದು ಮಾತ್ರವಲ್ಲ; ಕಾಂಗ್ರೆಸ್‌ ಕೂಡ ಅಂತಹ ಚಾಳಿಯನ್ನು ಹೊಂದಿದೆ. ಕರ್ನಾಟಕದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಹಲವು ಬಾರಿ ಅದನ್ನು ಮಾಡಿ ತೋರಿಸಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ನ ಐದು ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ನೀಡುವ ಶಕ್ತಿ ಯೋಜನೆ ಮತ್ತು ಗೃಹ ಜ್ಯೋತಿ ಯೋಜನೆ ನಿರಂತರವಾಗಿ ಜಾರಿಯಲ್ಲಿವೆ ಮತ್ತು ಮುಂದುವರೆಯುತ್ತಿವೆ. ಆದರೆ, ಫಲಾನುಭವಿಗಳಿಗೆ ನೇರವಾಗಿ ನಗದು ನೀಡುವ ಗೃಹ ಲಕ್ಷ್ಮಿ, ಯುವ ನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳ ಹಣವನ್ನು ಆಗಾಗ್ಗೆ ತಡೆಹಿಡಿದು, ಮೂರು-ನಾಲ್ಕು ತಿಂಗಳಿಗೆ ಒಮ್ಮೆಲೆ ಬಿಡುಗಡೆ ಮಾಡಲಾಗುತ್ತಿದೆ. ಅದೂ, ಆ ಹಣ ಚುನಾವಣೆಯ ಸಮಯದಲ್ಲಿಯೇ ಬಿಡುಗಡೆಯಾಗಿದೆ ಎಂಬುದು ಗಮನಾರ್ಹ.

ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2,000 ರೂ., ಯುವನಿಧಿ ಅಡಿಯಲ್ಲಿ ಪದವಿ ಮುಗಿಸಿದ ಅರ್ಹ ಯುವಜನರಿಗೆ 3,000 ರೂ. ನಿರುದ್ಯೋಗ ಭತ್ಯೆ ಹಾಗೂ ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಅಕ್ಕಿ ಬದಲಿಗೆ ತಲಾ 170 ರೂ. ಹಣವನ್ನು ಸರ್ಕಾರ ಒದಗಿಸುತ್ತಿದೆ. ಆದರೆ, ಈ ಮೂರೂ ಯೋಜನೆಗಳ ಹಣ ಹಠಾತ್ತನೆ ಸ್ಥಗಿತಗೊಳ್ಳುವುದು, ನಂತರ ಒಟ್ಟಿಗೆ ಬಿಡುಗಡೆಯಾಗುವುದು ನಡೆದೇ ಇದೆ. ಯಾವುದೇ ಒಂದು ಸಮಯದಲ್ಲಿ ಏನಾದರೂ ಸಮಸ್ಯೆಯಾಗಿ ಒಂದು ವಾರ ಅಥವಾ ಒಂದು ತಿಂಗಳು ತಡವಾಗುವುದು ಸಾಮಾನ್ಯ. ಆದರೆ, ರಾಜ್ಯದಲ್ಲಿ ಹಲವು ಸಂದರ್ಭಗಳಲ್ಲಿ ಮೂರು ತಿಂಗಳವರೆಗೆ ಯೋಜನೆಗಳ ಹಣ ಫಲಾನುಭವಿಗಳಿಗೆ ತಲುಪದೇ ಇರುವ ನಿದರ್ಶನಗಳಿವೆ.

ಹಾಗೆ, ನೋಡಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಲೋಕಸಭಾ ಚುನಾವಣೆ ನಡೆಯಿತು. ಚುನಾವಣೆಯು ರಾಜ್ಯದಲ್ಲಿ ಏಪ್ರಿಲ್ 15 ಮತ್ತು ಮೇ 7ರಂದು ಎರಡು ಹಂತದಲ್ಲಿ ನಡೆಯಿತು. ಆ ಚುನಾವಣೆಯ ಸಮಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಎರಡು ತಿಂಗಳ ಹಣವನ್ನು ತಡೆಹಿಡಿಯಲಾಗಿತ್ತು. ಚುನಾವಣೆ ಹತ್ತಿರ ಬಂದಂತೆ, ಏಪ್ರಿಲ್ 15ರಂದು ಒಟ್ಟಿಗೆ ಎರಡು ತಿಂಗಳ 4,000 ರೂ. ಹಣವನ್ನು ಸರ್ಕಾರ ಫಲಾನುಭವಿಗಳ ಖಾತೆಗೆ ಜಮಾ ಮಾಡಿತು.

ಇದು, ಈ ಚುನಾವಣೆಗೆ ಮಾತ್ರವೇ ಸೀಮಿತವಾಗಿರಲಿಲ್ಲ. ಬಳಿಕ, ನವೆಂಬರ್ 13ರಂದು ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿತು. ಆ ಸಂದಭದಲ್ಲಿಯೂ ಗೃಹಲಕ್ಷ್ಮೀ ಯೋಜನೆಯ ಜುಲೈ, ಆಗಸ್ಟ್‌ ಹಾಗೂ ಸೆಪ್ಟೆಂಬರ್ ತಿಂಗಳ ಕಂತುಗಳನ್ನು ತಡೆಹಿಡಿಯಲಾಗಿತ್ತು. ಮೂರು ತಿಂಗಳ ಹಣವನ್ನು ಅಕ್ಟೋಬರ್ ತಿಂಗಳಲ್ಲಿ ಒಟ್ಟಿಗೆ ಪಾವತಿಸಲಾಯಿತು. ಈಗಲೂ, ಮೂರು ಕಂತುಗಳ ಹಣ ಇನ್ನೂ ಪಾವತಿಯಾಗಿಲ್ಲ. ಈಗ ಬಿಡುಗಡೆ ಮಾಡಲಾಗುತ್ತಿದೆ. ಇನ್ನು, ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳು ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಯುವ ಸಾಧ್ಯತೆಗಳಿವೆ. ಅಲ್ಲಿಯವರೆಗೆ ಆರ್ಥಿಕ ವರ್ಷದ ಬದಲಾವಣೆ, ಬಜೆಟ್‌ ಮಂಡನೆ, ಹಂಚಿಕೆ ಹೆಸರಿನಲ್ಲಿ ಮತ್ತೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಮಾಡುವುದನ್ನು ವಿಳಂಬಗೊಳಿಸಿ, ಚುನಾವಣೆ ಸಮಯದಲ್ಲಿ ಬಿಡುಗಡೆ ಮಾಡಬಹುದು.

ಅಂದರೆ, ಗ್ಯಾರಂಟಿ ಮತ್ತು ಇತರ ನೇರ ನಗದು ಪಾವತಿಯ ಕಾರ್ಯಕ್ರಮಗಳನ್ನು ಕಾಂಗ್ರೆಸ್‌-ಬಿಜೆಪಿ ಎರಡೂ ಕೂಡ ಚುನಾವಣೆಗಳಿಗಾಗಿ ಜನರಿಗೆ ಹಣ ಕೊಡುವ ಯೋಜನೆಗಳಾಗಿಯೇ ನೋಡುತ್ತಿವೆ ಎಂಬುದು ಸ್ಪಷ್ಟ.

ಜೊತೆಗೆ, ಶಕ್ತಿ ಯೋಜನೆಯಡಿ ಕರ್ನಾಟಕದ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸಲಾಗುತ್ತಿದೆ. ಇದರಿಂದ, ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗುತ್ತದೆ. ಮಹಿಳೆಯರ ಸಬಲೀಕರಣಕ್ಕೆ ಉತ್ತಮ ಅವಕಾಶ ಸಿಗುತ್ತದೆ ಎಂಬುದು ಕಾಂಗ್ರೆಸ್‌ನ ವಾದವಾಗಿತ್ತು. ಆದರೆ, ಮೆಟ್ರೋ ಟಿಕೆಟ್‌ ದರವನ್ನು ಕನಿಷ್ಠ 45%ರಿಂದ ಗರಿಷ್ಠ 80%ವರೆಗೆ ಹೆಚ್ಚಿಸಲಾಗಿದೆ. ಅದಕ್ಕೂ ಕಾಂಗ್ರೆಸ್‌ ತನ್ನದೇ ವಾದ ಮುಂದಿಡುತ್ತದೆ.

ಅದು, ಮೆಟ್ರೋದಲ್ಲಿ ಶ್ರೀಮಂತರು, ಉಳ್ಳವರು ಹೆಚ್ಚಾಗಿ ಓಡಾಡುತ್ತಾರೆ ಎಂಬುದು ಕಾಂಗ್ರೆಸ್‌ನ ವಾದ. ಆದರೆ, ಬೆಂಗಳೂರಿನಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಶ್ರೀಮಂತರು, ಉಳ್ಳವರಲ್ಲಿ ಭಾಗಶಃ ಎಲ್ಲರೂ ತಮ್ಮದೇ ಸ್ವಂತ ವಾಹನಗಳಲ್ಲೇ ಪ್ರಯಾಣಿಸುತ್ತಾರೆ. ಮೆಟ್ರೋ ಬಳಸುವವರಲ್ಲಿ ಸಾಮಾನ್ಯ ಉದ್ಯೋಗಿಗಳು, ಕೂಲಿ ಕಾರ್ಮಿಕರೇ ಜಾಸ್ತಿ. ಹೀಗಿರುವಾಗ, ಶಕ್ತಿ ಯೋಜನೆ ತನ್ನ ಗುರಿಯನ್ನು ಸಾಧಿಸಲು ಸಾಧ್ಯವೇ. ಮೆಟ್ರೋದಲ್ಲೂ ಕೂಡ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಬೇಕು ಮತ್ತು ಪುರುಷರಿಗೆ ದರ ಹೆಚ್ಚಿಸಿ ಟಿಕೆಟ್ ಹೊರೆಯನ್ನೂ ಹೇರಬಾರದು. ಆದರೆ, ಇವೆರಡನ್ನೂ ಕಾಂಗ್ರೆಸ್‌ ಸರ್ಕಾರ ಮಾಡುತ್ತಿಲ್ಲ.

ಈ ವರದಿ ಓದಿದ್ದೀರಾ?: ಬಿಜೆಪಿಯ ಕರಾಳ ಮುಖ | ರೀಲ್ಸ್‌ ಮಾಡುವುದು, ಅವಘಡವಾದಾಗ ಅಳಿಸಲು ನೋಟಿಸ್‌ ಕೊಡುವುದು!

ಹಾಗೆ ನೋಡಿದರೆ, ನಿಜಕ್ಕೂ ಮಹಿಳಾ ಸಬಲೀಕರಣದ ಯೋಜನೆ ಇದ್ದದ್ದು ಮತ್ತು ಇರುವುದು ದೆಹಲಿಯಲ್ಲಿ. ಅಲ್ಲಿ, ಹಿಂದೆ ಇದ್ದ ಕೇಜ್ರಿವಾಲ್ ಸರ್ಕಾರ, ಬಸ್‌ ಮತ್ತು ಮೆಟ್ರೋ ಎರಡರಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸಿತ್ತು. ಸದ್ಯ ಈಗ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದಾಗ್ಯೂ, ಎಎಪಿ ಜಾರಿಗೊಳಿಸಿದ್ದ ಯೋಜನೆಗಳು ಮುಂದುವರೆದಿವೆ. ತಮಿಳುನಾಡಿನಲ್ಲಿ ಎಲ್ಲ ಪಟ್ಟಣಗಳಲ್ಲಿಯೂ ಎಲ್ಲ ಮಹಿಳೆಯರಿಗೆ ಎಲ್ಲ ಸಂದರ್ಭಗಳಲ್ಲೂ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಒದಗಿಸಲಾಗುತ್ತದೆ.

ಜನ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವಾಗ ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯಗಳ ಬಗ್ಗೆ ಪಕ್ಷಗಳು ಮತ್ತು ಸರ್ಕಾರಗಳು ಮಾತನಾಡುವಾಗ, ಗ್ಯಾರಂಟಿ ಯೋಜನೆಗಳನ್ನು ಏಕರೂಪವಾಗಿ ಎಲ್ಲ ಸಮಯದಲ್ಲಿಯೂ ದೊರೆಯುವಂತೆ ಮಾಡಬೇಕು. ಆ ರೀತಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಆದರೆ, ಇಂತಹ ಯೋಜನೆಗಳನ್ನು ಚುನಾವಣೆ ಮತ್ತು ಮತದಾನದೊಂದಿಗೆ ಜೋಡಿಸುವ ಕ್ಷುದ್ರ ಮತ್ತು ಕೊಳಕು ರಾಜಕಾರಣವನ್ನು ಎಲ್ಲ ಪಕ್ಷಗಳು ಮಾಡುತ್ತಿವೆ. ಇಂತಹ ನೀಚ ರಾಜಕಾರಣ ಮಾಡುವುದರಲ್ಲಿ ಬಿಜೆಪಿ ಪಿಎಚ್‌.ಡಿ ಮಾಡಿದೆ. ಉಳಿದ ಪಕ್ಷಗಳು ಬಿಜೆಪಿಯನ್ನು ನಕಲು ಮಾಡುತ್ತಿವೆ. ಬಿಜೆಪಿಯೂ ಸೇರಿದಂತೆ ಎಲ್ಲ ಪಕ್ಷಗಳು ಇಂತಹ ಹೀನ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಜನಪರ ಯೋಜನೆಗಳು ಎಲ್ಲ ಸಮಯದಲ್ಲೂ ಜನರಿಗೆ ದೊರೆಯುವಂತಾಗಬೇಕು.

ಅದರಲ್ಲೂ ಬಿಜೆಪಿ, ಎನ್‌ಡಿಎಯೇತರ ಸರ್ಕಾರ ಇರುವ ರಾಜ್ಯಗಳಲ್ಲಿ ಗ್ಯಾರಂಟಿ ಅಥವಾ ಜನಪರ ಯೋಜನೆಗಳು ಆರ್ಥಿಕ ದಿವಾಳಿಗೆ ಕಾರಣವೆಂದು ದೂಷಿಸುವುದು ಮತ್ತು ಎನ್‌ಡಿಎ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅದೇ ಉಚಿತ ಯೋಜನೆಗಳನ್ನು ಜಾರಿಗೆ ತರುವ ಎರಡು ನಡೆ, ಎರಡು ನಾಲಿಗೆ ರಾಜಕಾರಣವನ್ನು ನಿಲ್ಲಿಸಬೇಕು. ತಾವು ಉಚಿತ ಯೋಜನೆಗಳ ಪರವಿದ್ದೇವೆ ಅಥವಾ ವಿರುದ್ಧವಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಬೇಕು. ಅದರಂತೆ, ನಡೆಯಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X