ಪಂಚರಾಜ್ಯ ಚುನಾವಣೆ | ಹ್ಯಾಟ್ರಿಕ್ ಪುರಾಣ ಮತ್ತು ಅಂಕಿಅಂಶಗಳ ಸತ್ಯ : ಯೋಗೇಂದ್ರ ಯಾದವ್

Date:

Advertisements
ಹೋರಾಟ ಆರಂಭವಾಗುವ ಮುನ್ನವೇ ಎದುರಾಳಿಯ ಮನೋಬಲ ಛಿದ್ರಗೊಂಡರೆ, ಪಂದ್ಯ ವಾಕ್ ಓವರ್ ಆಗಬಹುದು. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಾವಧಾನದಿಂದ ಪರಿಶೀಲಿಸುವುದು ಮುಖ್ಯವಾಗಿದೆ.

 

ಪಂಚರಾಜ್ಯ ಚುನಾವಣೆಯ ಫಲಿತಾಂಶವನ್ನು “ಹ್ಯಾಟ್ರಿಕ್” ಎಂದು ಪ್ರಧಾನಿ ಹೇಳಿದರು. ಉಳಿದವರೆಲ್ಲರೂ ಕೂಡ “ಹ್ಯಾಟ್ರಿಕ್” ಎಂದರು. ಮೂರು ರಾಜ್ಯಗಳ ಗೆಲುವಿನ ನಂತರ ಈಗ ಮೂರನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸಂದೇಶ ಬೆಳಗಿನ ವೇಳೆಗೆ ದೇಶಾದ್ಯಂತ ಹಬ್ಬಿತ್ತು. ಬಿಜೆಪಿ ಬೆಂಬಲಿಗರು ಈಗಾಗಲೇ ಗೆಲುವಿನ ಸಂಭ್ರಮದಲ್ಲಿದ್ದಾರೆ, ವಿರೋಧಿಗಳು ಹತಾಶರಾಗಿದ್ದಾರೆ. ಯಾರಿಗೂ ಕೇಳಲು ಸಮಯವಿಲ್ಲ; ಈ ತೀರ್ಮಾನವು ನಿಜವೇ?

ಮನೋವೈಜ್ಞಾನಿಕ ಆಟಗಳನ್ನು ಆಡಿ ಗೆಲ್ಲಲಾಗುತ್ತಿದೆ. ಸತ್ಯದ ಒಂದು ಸಣ್ಣ ಬಲೂನನ್ನು ಎಷ್ಟೇ ದೊಡ್ಡದಾಗಿ ಉಬ್ಬಿಸಿದರೂ, ಪ್ರತಿ ವಿರೋಧಾತ್ಮಕ ಸತ್ಯವು ಅದರೊಳಗೆ ಅಡಗಿದೆ. ಹೋರಾಟ ಆರಂಭವಾಗುವ ಮುನ್ನವೇ ಎದುರಾಳಿಯ ಮನೋಬಲ ಛಿದ್ರಗೊಂಡರೆ, ಪಂದ್ಯ ವಾಕ್ ಓವರ್ ಆಗಬಹುದು. ಆದ್ದರಿಂದ, ನಾವು ಈ ಹೇಳಿಕೆಗಳನ್ನು ಸಾವಧಾನದಿಂದ, ಶಾಂತ ಮನಸ್ಸಿನಿಂದ ಪರಿಶೀಲಿಸುವುದು ಮುಖ್ಯವಾಗಿದೆ.

ಹೆಜ್ಜೆ 1: ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ಪ್ರಾರಂಭಿಸಿ, ನಾಲ್ಕು ರಾಜ್ಯಗಳಲ್ಲಿ ಎಲ್ಲಾ ಪಕ್ಷಗಳು ಪಡೆದ ಒಟ್ಟು ಮತಗಳನ್ನು ಸೇರಿಸಿ. ಗೆಲುವಿನ ಕಹಳೆ ಊದುತ್ತಿರುವ ಬಿಜೆಪಿ ಒಟ್ಟು 4,81,33,463 ಮತಗಳನ್ನು ಪಡೆದಿದ್ದರೆ, ಚುನಾವಣೆಯಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್ 4,90,77907 ಮತಗಳನ್ನು ಪಡೆದಿದೆ. ಅಂದರೆ, ಒಟ್ಟಾರೆಯಾಗಿ ಕಾಂಗ್ರೆಸ್ ಬಿಜೆಪಿಗಿಂತ 9.5ಲಕ್ಷ ಹೆಚ್ಚು ಮತಗಳನ್ನು ಪಡೆದಿದೆ.

Advertisements

ಇನ್ನು, ಬಿಜೆಪಿ ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ನಾಶ ಮಾಡಿದೆ ಎಂಬಂತೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಹಿಂದಿಯ ಮೂರು ರಾಜ್ಯಗಳ ಸೀಟುಗಳನ್ನು ನೋಡಿದರೆ ಬಿಜೆಪಿ ಎಂದು ಕಾಣಿಸಿದರೂ ವಾಸ್ತವದಲ್ಲಿ ಮತಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ರಾಜಸ್ಥಾನದಲ್ಲಿ ಬಿಜೆಪಿ 41.7% ಮತಗಳನ್ನು ಪಡೆದರೆ, ಕಾಂಗ್ರೆಸ್ 39.6% ಮತಗಳನ್ನು ಪಡೆದಿದೆ. ಅಂದರೆ ವ್ಯತ್ಯಾಸವು ಕೇವಲ ಎರಡು ಪ್ರತಿಶತ.

ಮತ್ತೊಂದೆಡೆ, ಛತ್ತೀಸ್‌ಗಢದಲ್ಲಿ ಅಂತರವು 4 ಪ್ರತಿಶತ: ಬಿಜೆಪಿ 46.3 ರಷ್ಟು ಮತಗಳನ್ನು ಹೊಂದಿದ್ದರೆ, ಕಾಂಗ್ರೆಸ್ 42.2 ರಷ್ಟು ಮತಗಳನ್ನು ಹೊಂದಿದೆ. ಮಧ್ಯಪ್ರದೇಶದಲ್ಲಿ ಮಾತ್ರ ವ್ಯತ್ಯಾಸವು 8% ಕ್ಕಿಂತ ಹೆಚ್ಚು: ಬಿಜೆಪಿ 48.6% ಮತ್ತು ಕಾಂಗ್ರೆಸ್ 40% ಮತಗಳನ್ನು ಪಡೆದಿವೆ. ಮೂರೂ ರಾಜ್ಯಗಳಲ್ಲಿ ಸೋತರೂ ಕಾಂಗ್ರೆಸ್ ಶೇ 40 ಅಥವಾ ಅದಕ್ಕಿಂತ ಹೆಚ್ಚಿನ ಮತಗಳನ್ನು ಹೊಂದಿದ್ದು, ಅಲ್ಲಿಂದ ಮರಳಿ ಬರುವುದು ಕಷ್ಟವೇನಲ್ಲ.

ಹಿಂದಿ ಮಾತನಾಡುವ ಮೂರು ರಾಜ್ಯಗಳಲ್ಲಿ ಬಿಜೆಪಿ ಪಡೆದಿರುವ ಒಟ್ಟಾರೆ ಮುನ್ನಡೆಯನ್ನು ಕೇವಲ ಒಂದು ತೆಲಂಗಾಣದಿಂದ ಸರಿದೂಗಿಸಲಾಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ 39.4 ಶೇಕಡಾ (92 ಲಕ್ಷಕ್ಕೂ ಹೆಚ್ಚು) ಮತಗಳನ್ನು ಪಡೆದರೆ, ಬಿಜೆಪಿ ಶೇಕಡಾ 13.9 (32ಲಕ್ಷಕ್ಕಿಂತ ಕಡಿಮೆ) ಮತಗಳನ್ನು ಗಳಿಸಿದೆ.

ಈ ರಾಜ್ಯಗಳಲ್ಲಿ 2018ರ ನಂತರ, ಕಾಂಗ್ರೆಸ್ ಚುನಾವಣಾ ಸ್ಪರ್ಧೆಯಿಂದ ಹೊರಗುಳಿಯುವ ಅಂಚಿನಲ್ಲಿತ್ತು. ಅಲ್ಲಿ ಅದು ಉನ್ನತ ಸ್ಥಾನವನ್ನು ತಲುಪುವುದು ರಾಜಕೀಯ ಉನ್ನತಿ ಮತ್ತು ಹುರುಪಿನ ಸಂಕೇತವಾಗಿದೆ.

ಹೆಜ್ಜೆ2: ಹ್ಯಾಟ್ರಿಕ್ ಪುರಾಣವನ್ನು ಪರೀಕ್ಷಿಸಲು ಇತಿಹಾಸವನ್ನು ಪರಿಶೀಲಿಸಿ. ಕಳೆದ ಎರಡು ದಶಕಗಳಿಂದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಚುನಾವಣೆ ನಡೆದ ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. ಕಳೆದ ಬಾರಿ 2018ರಲ್ಲಿ ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಸೋತಿತ್ತು. ಆದರೆ, ಆಗ ಪ್ರಧಾನಿಯಾಗಲಿ, ಮಾಧ್ಯಮಗಳಾಗಲಿ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಖಚಿತ ಎಂದು ಹೇಳಲಿಲ್ಲ.

ಸಂಸತ್ತಿನ ಚುನಾವಣೆಗಳು ನಡೆದಾಗ, ಈ ಮೂರು ರಾಜ್ಯಗಳಲ್ಲಿ ಮತ್ತು ಹಿಂದಿ ಬಾಹುಳ್ಳ ಉಳಿದ ಭಾಗಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತು. ಮತ್ತೊಂದೆಡೆ, 2003ರಲ್ಲಿ ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಸೋತಾಗ, ಅದರ ಕೆಲವೇ ತಿಂಗಳುಗಳಲ್ಲಿ, 2004ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನಿರೀಕ್ಷಿತ ಯಶಸ್ಸನ್ನು ಸಾಧಿಸಿತು. ಅಂದರೆ ವಿಧಾನಸಭೆ ಮತ್ತು ಲೋಕಸಭೆಯ ಚುನಾವಣೆಯ ಸ್ವರೂಪವೇ ಬೇರೆಯಾಗಿದ್ದು, ನೇರವಾಗಿ ವಿಧಾನಸಭೆಯಿಂದಲೇ ಲೋಕಸಭೆಯ ಬಗ್ಗೆ ತೀರ್ಮಾನಗಳನ್ನು ಮಾಡುವುದು ತಪ್ಪಾಗುತ್ತದೆ. ಬಿಜೆಪಿ ಅದನ್ನು ಹಿಮ್ಮೆಟ್ಟಿಸಲು ಸಾಧ್ಯವಾದರೆ ಕಾಂಗ್ರೆಸ್ ಏಕೆ ಮಾಡಬಾರದು?

ಹೆಜ್ಜೆ 3: 2024ರಲ್ಲಿ ಅಧಿಕಾರದ ಬದಲಾವಣೆಯ ಸಮೀಕರಣವನ್ನು ನೋಡಿ. ಹಿಂದಿ ಬೆಲ್ಟ್‌ನ ಈ ಮೂರು ರಾಜ್ಯಗಳ ಮೇಲೆ ಬಿಜೆಪಿ ಅವಲಂಬಿತವಾಗಿದೆ. ಆದರೆ ಪ್ರತಿಪಕ್ಷಗಳ ಭರವಸೆ ಅವುಗಳ ಮೇಲೆ ನಿಂತಿಲ್ಲ. ಭಾರತ ಮೈತ್ರಿಕೂಟದ ಚುನಾವಣಾ ಲೆಕ್ಕಾಚಾರವು ಕರ್ನಾಟಕ, ಮಹಾರಾಷ್ಟ್ರ, ಬಿಹಾರ ಮತ್ತು ಬಂಗಾಳದಲ್ಲಿ ಬಿಜೆಪಿಯ ಸ್ಥಾನಗಳನ್ನು ಕಡಿಮೆ ಮಾಡುವುದರ ಮೇಲೆ ಅವಲಂಬಿತವಾಗಿದೆ.

ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದ 65 ಸ್ಥಾನಗಳ ಪೈಕಿ ಬಿಜೆಪಿ ಈಗಾಗಲೇ ತನ್ನ ಖಾತೆಯಲ್ಲಿ 61 ಮತ್ತು ಕಾಂಗ್ರೆಸ್‌ಗೆ ಕೇವಲ 3 ಸ್ಥಾನಗಳಿವೆ. ಅಂದರೆ ಈ ಎಲ್ಲಾ ಸ್ಥಾನಗಳನ್ನು ಉಳಿಸಿಕೊಳ್ಳುವುದು ಮತ್ತು ಸಾಧ್ಯವಾದರೆ ತೆಲಂಗಾಣದಲ್ಲಿ ಗೆದ್ದಿರುವ ನಾಲ್ಕು ಸ್ಥಾನಗಳನ್ನು ಹೆಚ್ಚಿಸುವುದು ಬಿಜೆಪಿಯ ಸವಾಲು. ಮತ್ತೊಂದೆಡೆ, ಈ ರಾಜ್ಯಗಳಲ್ಲಿ ಕಾಂಗ್ರೆಸ್ ಕಳೆದುಕೊಳ್ಳಲು ಏನೂ ಇಲ್ಲ. ಅಂದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸದೇನೂ ಸಾಧಿಸಿಲ್ಲ.

ಹೆಜ್ಜೆ 4: ಲೋಕಸಭೆಯ ಪ್ರಕಾರ ವಿಧಾನಸಭೆಯ ಈ ಫಲಿತಾಂಶವನ್ನು ಎಣಿಸಿ. ವಾಸ್ತವವಾಗಿ, ಲೋಕಸಭೆ ಚುನಾವಣೆಯಲ್ಲಿ ಈ ವಿಧಾನಸಭೆಯ ಫಲಿತಾಂಶಗಳನ್ನು ರದ್ದುಪಡಿಸುವ ಅಗತ್ಯವೂ ಕಾಂಗ್ರೆಸ್‌ಗೆ ಇಲ್ಲ. ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ಒಟ್ಟು 83 ಲೋಕಸಭಾ ಸ್ಥಾನಗಳನ್ನು ಹೊಂದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 65 ಸ್ಥಾನಗಳನ್ನು ಪಡೆದಿತ್ತು, ಕೇವಲ 6 ಕಾಂಗ್ರೆಸ್‌ಗೆ, ಉಳಿದವು BRS,MNF ಮತ್ತು MIMಗೆ ಬಂದವು.

2024ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ 2023ರ ವಿಧಾನಸಭಾ ಚುನಾವಣೆಯಲ್ಲಿ ಪಡೆದ ಮತಗಳನ್ನು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಿಖರವಾಗಿ ಪಡೆದರೆ, ಆಗ ಅಂಕಿಅಂಶಗಳು ಈ ರೀತಿ ಇರುತ್ತದೆ. ರಾಜಸ್ಥಾನ; ಬಿಜೆಪಿ 14, ಕಾಂಗ್ರೆಸ್ 11, ಛತ್ತೀಸ್ ಗಢ: ಬಿಜೆಪಿ 8, ಕಾಂಗ್ರೆಸ್ 3, ಮಧ್ಯಪ್ರದೇಶ: ಬಿಜೆಪಿ 25, ಕಾಂಗ್ರೆಸ್ 4 ಮತ್ತು ತೆಲಂಗಾಣ: ಕಾಂಗ್ರೆಸ್ 9, ಬಿಜೆಪಿ 0 (ಬಿಆರ್ ಎಸ್ 7 ಮತ್ತು ಎಂಐಎಂ 1), ಮಿಜೋರಾಂ: ಜೆಎಂಪಿ 1.

ಒಟ್ಟಾರೆ, ಈ ವಿಧಾನಸಭಾ ಚುನಾವಣೆಗಳ ಪ್ರಕಾರ ಲೋಕಸಭೆಯ 83 ಸ್ಥಾನಗಳಲ್ಲಿ ಬಿಜೆಪಿ 46 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 28 ಸ್ಥಾನಗಳನ್ನು ಪಡೆಯುತ್ತದೆ. ಅಂದರೆ, ಈ ವಿಧಾನಸಭಾ ಫಲಿತಾಂಶಗಳ ಪ್ರಕಾರ ಲಾಭದ ಬದಲು ಬಿಜೆಪಿ 19 ಸ್ಥಾನಗಳನ್ನು ಕಳೆದುಕೊಳ್ಳಬಹುದು ಮತ್ತು ಕಾಂಗ್ರೆಸ್ 22 ಸ್ಥಾನಗಳನ್ನು ಗಳಿಸಬಹುದು. ಕಾಂಗ್ರೆಸ್ ಮಾಡಬೇಕಾಗಿರುವುದು ವಿಧಾನಸಭೆಯಲ್ಲಿ ಪಡೆಯುವ ಮತಗಳು ಲೋಕಸಭೆಯಲ್ಲೂ ಸಿಗುವಂತೆ ನೋಡಿಕೊಳ್ಳುವುದು.

ಇದನ್ನೂ ಓದಿ ಈ ಫಲಿತಾಂಶ ಲೋಕಸಭೆ ಚುನಾವಣೆಯ ಹ್ಯಾಟ್ರಿಕ್‌ ಗೆಲುವಿನ ಮುನ್ಸೂಚನೆ: ಪ್ರಧಾನಿ ನರೇಂದ್ರ ಮೋದಿ

ಇದು ಸರಳ ಗಣಿತ ಎಂದು ಈಗ ಯಾರಾದರೂ ಹೇಳುತ್ತಾರೆ. ನೀವು “ಮೋದಿ ಮ್ಯಾಜಿಕ್” ಅನ್ನು ಸಹ ಲೆಕ್ಕ ಹಾಕಿಲ್ಲ. ಮೋದಿಯ ಮ್ಯಾಜಿಕ್ ಕೆಲಸ ಮಾಡಿದರೆ ಈ ಎಲ್ಲಾ ರಾಜ್ಯಗಳಲ್ಲಿ ಕೇಸರಿ ಮೊಳಗುತ್ತದೆ ಮತ್ತು ಕಾಂಗ್ರೆಸ್ ನಿರ್ನಾಮವಾಗಲಿದೆ. ಆದರೆ “ಮೋದಿ ಇದ್ದರೆ ಏನು ಬೇಕಾದರೂ ಸಾಧ್ಯ” ಎಂದಾದರೆ ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ವಾದವನ್ನು ನೀಡುವ ಅವಶ್ಯಕತೆ ಏನಿದೆ? ಮ್ಯಾಜಿಕ್ ಅನ್ನು ನಂಬಿದರೆ ಅದನ್ನು ನಂಬಿಕೆ ಎಂದು ಕರೆಯಿರಿ, ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ರಕ್ಷಣೆ ಪಡೆಯುವ ಅಗತ್ಯವೇನು?

ಯೋಗೇಂದ್ರ ಯಾದವ್‌
ಯೋಗೇಂದ್ರ ಯಾದವ್
+ posts

ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್
ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X