ದ್ವೇಷ ಭಾಷಣ ತಡೆಗೆ ವಿಧೇಯಕ; ಶಾಂತಿಯ ತೋಟದ ರಕ್ಷಣೆಗೆ ಅಗತ್ಯ

Date:

Advertisements

ಯಾವುದೇ ಧರ್ಮದ ವ್ಯಕ್ತಿ, ಸಂಘಟನೆ, ಪಕ್ಷ ಯಾರೇ ದ್ವೇಷ ಭಾಷಣ ಮಾಡಿದರೂ ಅಂಥವರನ್ನು ಮುಲಾಜಿಲ್ಲದೇ ಸ್ಥಳದಿಂದಲೇ ಬಂಧನ ಮಾಡುವಂತಾಗಬೇಕು. ಯಾರಾದರೂ ದೂರು ಕೊಡಲಿ ಎಂದು ಪೊಲೀಸರು ಕಾಯುವುದು ನಿಲ್ಲಬೇಕು. ಕೃತ್ಯ ನಡೆದ ಇಂತಿಷ್ಟೇ ಸಮಯದಲ್ಲಿ ಸ್ವಯಂಪ್ರೇರಿತವಾಗಿ ಪೊಲೀಸ್ ಇಲಾಖೆಯೇ ದೂರು ದಾಖಲು ಮಾಡಿ ಬಂಧಿಸುವಂತೆ ನಿಯಮ ರೂಪಿಸಬೇಕು

ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಜಾತಿ, ಧರ್ಮ, ಭಾಷೆ ಸೇರಿ ವಿವಿಧ ವಿಷಯಗಳ ಮೇಲೆ ದ್ವೇಷ ಭಾಷಣ ಮಾಡುವುದನ್ನು ನಿಯಂತ್ರಿಸಲು ಹೊಸ ವಿಧೇಯಕ ತರುತ್ತಿರುವುದು ಒಳ್ಳೆಯ ಬೆಳವಣಿಗೆ. ದ್ವೇಷ ಭಾಷಣ ಮಾಡುವವರನ್ನು ಇತ್ತೀಚಿಗಿನ ದಿನಗಳಲ್ಲಿ ಹೀರೊಗಳಂತೆ ಕಾಣಲಾಗುತ್ತಿದೆ. ಅಂಥವರನ್ನು ರಾಜ್ಯದ ಮೂಲೆ ಮೂಲೆಗೆ ಕರೆಸಿ ಭಾಷಣ ಮಾಡಿಸಲಾಗುತ್ತಿದೆ. ಇದರಿಂದ ಉತ್ತೇಜನಗೊಂಡ ಬಹುತೇಕ ಯುವಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈಗಾಗಲೇ ಭಾರತೀಯ ನ್ಯಾಯ ಸಂಹಿತೆಯಲ್ಲಿ ಇದರ ವಿರುದ್ದ ದೂರು ದಾಖಲು ಮಾಡಲು ಅವಕಾಶವಿದ್ದರೂ ಸಮಗ್ರವಾಗಿ ಜಾರಿ ಮಾಡಲು ಕಷ್ಟಸಾಧ್ಯವಾಗಿದೆ.

ಹಲವು ಸಂದರ್ಭಗಳಲ್ಲಿ ಸುಪ್ರೀಂಕೋರ್ಟ್‌ ಸಹ ಯಾರೇ ದ್ವೇಷ ಭಾಷಣ ಮಾಡಿದರೂ ಸ್ವಯಂಪ್ರೇರಿತವಾಗಿ ಪೊಲೀಸ್ ಇಲಾಖೆಯೇ ದೂರು ದಾಖಲಿಸಬೇಕೆಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಆದರೂ ರಾಜಕಾರಣಿಗಳ ಕೈಗೊಂಬೆಯಾಗಿರುವ ಸ್ಥಳೀಯ ಪೊಲೀಸರು ದೂರು ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಬಡಪಾಯಿ ಭಾಷಣಕಾರರ ಮೇಲೆ ದೂರು ದಾಖಲು ಮಾಡುತ್ತಾರೆ. ಆದರೆ ಪ್ರಭಾವಿ ವ್ಯಕ್ತಿಗಳು ಎಷ್ಟೇ ದ್ವೇಷ ಭಾಷಣ ಮಾಡಿದರೂ ಅವರ ಮೇಲೆ ಪೊಲೀಸರು ದೂರು ದಾಖಲಿಸುವುದಿಲ್ಲ. ಇದರಿಂದ ದೇಶದಲ್ಲಿ ಕಾನೂನಿದೆಯೇ ಎನ್ನುವ ಅನುಮಾನ ಮೂಡುತ್ತದೆ.

ಕರ್ನಾಟಕದಲ್ಲಿ ಕೆಲವು ಬಲಪಂಥೀಯ ಸಂಘಟನೆ ಮುಖಂಡರು ಹಾಗೂ ಬಿಜೆಪಿ ಪಕ್ಷದ ನಾಯಕರಾದ ಬಸನಗೌಡ ಯತ್ನಾಳ್‌, ಸಿ.ಟಿ.ರವಿ, ಎನ್.ರವಿಕುಮಾರ್‌, ಪ್ರತಾಪ ಸಿಂಹ, ಬಸವರಾಜ ಬೊಮ್ಮಾಯಿ, ಯಶ್ಪಾಲ್ ಸುವರ್ಣ, ಹರೀಶ್‌ ಪೂಂಜಾ ಸೇರಿದಂತೆ ಇನ್ನುಳಿದ ನಾಯಕರು ಪ್ರತಿ ಸಲ ಸಂಬಂಧವಿಲ್ಲದಿದ್ದರೂ ಮುಸ್ಲಿಂ, ಪಾಕಿಸ್ತಾನ, ವಕ್ಫ್, ಬಾಂಗ್ಲಾ ದೇಶ ಎಂದು ಮುಸ್ಲಿಮರ ವಿರುದ್ದ ದ್ವೇಷ ಭಾಷಣ ಮಾಡುತ್ತ ಬಂದಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಇದು ಮಿತಿ ಮೀರಿ ಹೋಗಿರುವುದನ್ನು ರಾಜ್ಯದ ಜನ ನೋಡಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಗಲಾಟೆಯಲ್ಲಿ ಯುವಕನೊಬ್ಬ ಹತ್ಯೆಯಾಗಿದ್ದನ್ನೇ ನೆಪವಾಗಿಸಿಕೊಂಡು ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಬಿಜೆಪಿ ಶಾಸಕರಾಗಿದ್ದ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ಭಯದ ವಾತಾವರಣ ಸೃಷ್ಟಿಸಲಾಗಿತ್ತು. ಕೆ.ಎಸ್.ಈಶ್ವರಪ್ಪ ಇಡೀ ಮುಸ್ಲಿಂ ಸಮುದಾಯದ ವಿರುದ್ದ ದ್ವೇಷದ ಭಾಷಣ ಮಾಡಿದ್ದು ಇತಿಹಾಸ, “ಮುಸ್ಲಿಂ ಗುಂಡಾಗಳು” ಎನ್ನುವ ಶಬ್ದ ಬಳಸಲಾಗಿತ್ತು, ಆದರೂ ಅವರ ಮೇಲೆ ಒಂದೂ ಕೇಸ್ ದಾಖಲಾಗಿಲ್ಲ ಎಂದರೆ ಕಾನೂನಿನ ಸಡಿಲಿಕೆ ಎಷ್ಟರಮಟ್ಟಿಗೆ ಇದೆ ಎಂದು ತಿಳಿಯಬಹುದಾಗಿದೆ.

ಕಲ್ಲಡ್ಕ ಪ್ರಭಾಕರ ಭಟ್ ಎನ್ನುವ ವ್ಯಕ್ತಿ ಮಂಡ್ಯ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡಿದ್ದು, ಅವನ ಮೇಲೆ ಸುಪ್ರೀಂ ಕೋರ್ಟ್‌ ನಿರ್ದೇಶನವಿದ್ದರೂ ಪೊಲೀಸ್ ಇಲಾಖೆ ಸ್ವಯಂಕೃತ ದೂರು ದಾಖಲು ಮಾಡಿಲ್ಲ. ಇತ್ತೀಚಿಗೆ ಪ್ರತಾಪ್‌ ಸಿಂಹ ಯಾದಗಿರಿ ಜಿಲ್ಲೆಯ ಶಹಾಪುರ ನಗರಕ್ಕೆ ಬಂದು ದ್ವೇಷ ಭಾಷಣ ಮಾಡಿದ್ದು, ಅವರ ಮೇಲೆ ಅಲ್ಲಿಯ ಪೊಲೀಸರು ಸ್ವಯಂಕೃತ ದೂರು ದಾಖಲು ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ದ್ವೇಷ ಭಾಷಣದ ದೂರುಗಳ ಮೇಲೆ ಬಲಪಂಥೀಯ ಸಂಘಟನೆ ಸದಸ್ಯರು ಮತ್ತು ಬಿಜೆಪಿ ನಾಯಕರನ್ನು ಜೈಲಿಗೆ ಕಳುಹಿಸಿದ ಉದಾಹರಣೆ ಇಲ್ಲ. ಇದರಿಂದ ದ್ವೇಷ ಭಾಷಣ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

Advertisements

ದ್ವೇಷ ಭಾಷಣ ಮಾಡುತ್ತಾನೆ ಎನ್ನುವ ಕಾರಣಕ್ಕೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾನನ್ನು ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಗಣೇಶ ಹಬ್ಬದ ಕಾರ್ಯಕ್ರಮಕ್ಕೆ ಕರೆದಿದ್ದರು. ಸ್ಥಳೀಯವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಗೊಳಿಸಲಾಯಿತು. ಜಾತಿ, ಧರ್ಮ, ಭಾಷೆ, ಪ್ರದೇಶಗಳ ಆಧಾರದಲ್ಲಿ ದ್ವೇಷ ಭಾಷಣ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಮತ್ತು ಸಮಾಜದಲ್ಲಿ ಕೆಲವರು ಅಂತಹ ಭಾಷಣ ಮಾಡುವವರನ್ನು ಹೀರೊ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಅಂತ್ಯ ಅನ್ನುವುದೇ ಇರುವುದಿಲ್ಲ.

ಈಗಾಗಲೇ ದ್ವೇಷ ಭಾಷಣ ತಡೆಯಲು ಕಾನೂನಿದ್ದರೂ ಮತ್ತೊಂದು ಕಾನೂನು ಏಕೆ ಎನ್ನುವ ಪ್ರಶ್ನೆ ಸಹಜವಾಗಿ ಏಳಬಹುದು. ಇದನ್ನು ತುಷ್ಟೀಕರಣದ ದೃಷ್ಟಿಯಿಂದಲೂ ನೋಡಬಹುದು. ಇಂಡಿಯನ್ ಪೀನಲ್ ಕೋಡ್ ಅಡಿಯಲ್ಲಿ ಭಯೋತ್ಪಾದಕ ಕೃತ್ಯಗಳನ್ನು ತಡೆಯಲು ಅವಕಾಶವಿದ್ದರೂ ಹಿಂದೆ ಟಾಡಾ, ಕೋಕಾ, ಮೋಕಾ, ಇತ್ತೀಚಿಗೆ ಯುಎಪಿಎಯಂತಹ ಕಾನೂನುಗಳನ್ನು ಮಾಡಲಾಗಿದೆ. ಸಮಾಜ ಶಾಂತಿಯಿಂದ ಬದುಕಬೇಕಾದರೆ ಇಂತಹ ಕಟ್ಟುನಿಟ್ಟಿನ ಕಾನೂನುಗಳ ಅವಶ್ಯಕತೆ ಇದೆ. ಅಲ್ಲದೇ ಈಗ ಮಾಡಲಾಗುತ್ತಿರುವ ದ್ವೇಷ, ಅಪರಾಧಗಳು ಮತ್ತು ದ್ವೇಷ ಭಾಷಣಗಳು(ಹೋರಾಟ, ತಡೆಗಟ್ಟುವಿಕೆ ಮತ್ತು ಶಿಕ್ಷೆ) ವಿಧೇಯಕ 2025ರಲ್ಲಿ ಕಾನೂನು ಸುವ್ಯವಸ್ಥೆ ಜವಾಬ್ದಾರಿ ಇರುವ ಪೊಲೀಸ್ ಇಲಾಖೆ, ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ತಹಸೀಲ್ದಾರ್‌, ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳನ್ನೂ ಇದರಲ್ಲಿ ಜವಾಬ್ದಾರರನ್ನಾಗಿಸಬೇಕು.

ಯಾವುದೇ ಧರ್ಮದ ವ್ಯಕ್ತಿ, ಸಂಘಟನೆ, ಪಕ್ಷ ಯಾರೇ ದ್ವೇಷ ಭಾಷಣ ಮಾಡಿದರೂ ಅಂತಹವರನ್ನು ಮುಲಾಜಿಲ್ಲದೇ ಸ್ಥಳದಿಂದಲೇ ಅರೆಸ್ಟ್‌ ಮಾಡುವಂತಾಗಬೇಕು. ಯಾರಾದರೂ ದೂರು ಕೊಡಬೇಕೆಂದು ಪೊಲೀಸ್ ಇಲಾಖೆಯವರು ಕಾಯುವುದು ನಿಲ್ಲಬೇಕು. ಕೃತ್ಯ ನಡೆದ ಇಂತಿಷ್ಟೇ ಸಮಯದಲ್ಲಿ ಸ್ವಯಂಪ್ರೇರಿತವಾಗಿ ಪೊಲೀಸ್ ಇಲಾಖೆಯೇ ದೂರು ದಾಖಲು ಮಾಡಿ ಬಂಧಿಸುವಂತೆ ನಿಯಮ ರೂಪಿಸಬೇಕು. ಅದಕ್ಕಿಂತ ಹೆಚ್ಚಾಗಿ ಪೊಲೀಸ್ ಇಲಾಖೆ ಈ ರೀತಿ ಭಾಷಣ ಮಾಡುವವರನ್ನು ಕರೆಸುವ ಸಂಘಟನೆಗಳ ಮುಖಂಡರ ಮೇಲೂ ಕೇಸ್ ದಾಖಲಿಸಬೇಕು ಮತ್ತು ದ್ವೇಷ ಭಾಷಣ ಮಾಡಿದವರು ಯಾವುದೇ ಕಾರ್ಯಕ್ರಮಗಳಿಗೆ ಬರುತ್ತಾರೆ ಎಂದು ಗೊತ್ತಿದ್ದಲ್ಲಿ ಅಂತಹ ಕಾರ್ಯಕ್ರಮಗಳನ್ನು ಮುಂಚಿತವಾಗಿಯೇ ರದ್ದುಪಡಿಸಬೇಕು.

ಇದನ್ನೂ ಓದಿ ಕಾಂಗ್ರೆಸ್‌ ನಾಯಕರು ಕೋಮುವಾದದ ಪರವೋ, ವಿರುದ್ಧವೋ?

Prevention is Better than Cure ಎನ್ನುವ ಹಾಗೆ ಮುಂಚಿತವಾಗಿಯೇ ಪೊಲೀಸ್ ಇಲಾಖೆ ಮತ್ತು ಕಾರ್ಯನಿರ್ವಾಹಕ ದಂಡಾಧಿಕಾರಿಗಳಿಗೆ ದ್ವೇಷ ಭಾಷಣ ತಡೆಯುವ ಜವಾಬ್ದಾರಿ ನಿಗದಿಗೊಳಿಸಬೇಕು. ದ್ವೇಷ ಭಾಷಣ ಮಾಡಿ ಸ್ಥಳದಿಂದ ವ್ಯಕ್ತಿ ಪರಾರಿಯಾದರೆ ತಕ್ಷಣ ಅಲ್ಲಿಯ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತಾಗಬೇಕು. ಸರ್ಕಾರ ತರಲು ಹೊರಟಿರುವ ಕಾಯ್ದೆಯಲ್ಲಿ ದೂರು ದಾಖಲಾದರೆ, ಅಂತಹವರಿಗೆ ಕನಿಷ್ಠ ಮೂರು ತಿಂಗಳು ಬೇಲ್ ಸಿಗದಂತಹ ಕಠಿಣ ನಿಯಮ ರೂಪಿಸಬೇಕು. ಈಗಾಗಲೇ ಕೋಕಾ, ಟಾಡಾ, ಯುಎಪಿಎ ಕಾಯ್ದಯೆಲ್ಲಿ ಇಂತಹ ಅವಕಾಶ ನೀಡಲಾಗಿದೆ.

ಒಟ್ಟಾರೆಯಾಗಿ ಶಾಂತಿಯ ತೋಟ ಶಾಂತಿಯಿಂದ ಇರಲು ಎಲ್ಲರೂ ಸೇರಿ ಪ್ರಯತ್ನ ಮಾಡುವ ಅವಶ್ಯಕತೆಯಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕಾನೂನು ಮಾಡಲು ಹೊರಟಿರುವುದು ಸೂಕ್ತವಾಗಿದೆ.

ರಜಾಕ್‌ ಉಸ್ತಾದ್‌
ಡಾ ರಝಾಕ್‌ ಉಸ್ತಾದ್‌
+ posts

ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ರಝಾಕ್‌ ಉಸ್ತಾದ್‌
ಡಾ ರಝಾಕ್‌ ಉಸ್ತಾದ್‌
ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X