“ಧರ್ಮ, ಧರ್ಮ”ವೆಂದು ಸದಾ ಅರಚುವ ನಾಯಕರು ಯಾವ ಧಾರ್ಮಿಕ ಬೋಧನೆಯನ್ನು ನಿಷ್ಠೆಯಿಂದ ಪಾಲಿಸಿದ್ದಾರೆ? ಬೇರೆಯವರಿಂದ ಸಂಗ್ರಹಿಸಿದ ಹಣದಲ್ಲಿ ಬಾಳುವ, ಪರರು ನೀಡಿದ ಮನೆಗಳಲ್ಲಿ ಬದುಕುವ ಇವರು ನಿಮ್ಮನ್ನು ಸ್ವಾವಲಂಬಿಗಳಾಗಿ ಹೇಗೆ ಮಾಡಬಲ್ಲರು? “ನಮ್ಮ ಧರ್ಮ ಅಪಾಯದಲ್ಲಿದೆ” ಎಂದು ಅಳುವ, ಗೋಳಿಡುವ ನಾಯಕರೆಲ್ಲ ಅಸಂಬದ್ಧ… It is all rubbish.
(ನಾನು ಬಹಳ ಇಷ್ಟ ಪಟ್ಟು ಓದುವ ಸಣ್ಣ ಕತೆಗಾರರಲ್ಲಿ ನಿಕೊಲಾಯ್ ಗೊಗೊಲ್, ಕಾಫ್ಕ, ಸಾರ್ತ್ರ, ಬೋರ್ಗೆಸ್, ಚೆಕಾವ್, ಪ್ರೇಮ್ ಚಂದ್, ವೈಕೋಂ ಬಷೀರ್, ಅಂತರ್ಜನಂ ಸದಾ ಇರುತ್ತಾರೆ. ಸಾಮಾಜಿಕ ಪಿಡುಗುಗಳನ್ನು, ಶೋಷಣೆಗೆ ತೊಡಗಿರುವ ಸಾಂಸ್ಥಿಕ ಧರ್ಮಗಳನ್ನು, ಭ್ರಷ್ಟ ವ್ಯವಸ್ಥೆಯನ್ನು ನೀರ್ಭಿತರಾಗಿ ಪ್ರಶ್ನಿಸುವ ಎದೆಗಾರಿಕೆಗೆ, ಅವರಿಗಿದ್ದ ಸಾಮಾಜಿಕ ಬದ್ಧತೆ, ಮತ್ತು ಮನುಷ್ಯನ ಅಸ್ತಿತ್ವವನ್ನೇ ಎಳೆಎಳೆಯಾಗಿ ಬಿಚ್ಚಿಟ್ಟ ಈ ಕತೆಗಾರರು ಆದರ್ಶವೇ ಸರಿ. ಆದರೆ ದೇಶ ವಿಭಜನೆಯಾಗುವ ತೀರಾ ಗೊಂದಲಮಯ ಕಾಲದಲ್ಲಿ ಕತೆಗಳನ್ನು ಬರೆದ ಹಸನ್ ಮಂಟೋಗೆ ನನ್ನೆದೆಯಲ್ಲಿ ವಿಶೇಷ ಸ್ಥಾನವಿದೆ. ದೃಢ ನಿಲುವು, ನೇರ ನುಡಿಗಳಿಂದ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿ, ಪರದಾಡಿದರೂ ಅಳುಕದ ಬರಹಗಾರ ಮಂಟೋ.
ಮಂಟೋ ನಮ್ಮವ ಎಂದು ಭಾರತೀಯರು ಹೇಳಿಕೊಂಡರೆ, ಪಾಕಿಸ್ತಾನಿಯರಿಗೂ ಮಂಟೋ ಮೇಲೆ ಅಭಿಮಾನವಿದೆ. ಭಾರತ-ಪಾಕಿಸ್ತಾನ ವಿಭಜನೆಯನ್ನೇ ಮಹಾ ಹುಚ್ಚುತನವೆಂದಿದ್ದ ಮಂಟೋ ಒಮ್ಮೆ ಹೀಗೆಂದಿದ್ದ- “It’s quite amazing that I’m considered one of Pakistan’s and India’s big writers. I can only say that it’s possible that I’ve tricked them into believing this shit.”
ಸಾದತ್ ಹಸನ್ ಮಂಟೋ ಮೊಹಮ್ಮದ್ ಅಲಿ ಜಿನ್ಹಾರನ್ನು ಗಮನದಲ್ಲಿಟ್ಟುಕೊಂಡು ಬರೆದ ಲೇಖನ ”ಹಿಂದೂಸ್ಥಾನ್ ಕೋ ಲೀಡರೋ ಸೆ ಬಚಾವೋ” ಎಲ್ಲ ಕಾಲಕ್ಕೂ ಅನ್ವಯವಾಗುತ್ತದೆ. ಈ ಲೇಖನ ಈ ಕಾಲಕ್ಕೂ ಸೂಕ್ತ.)
ನಾವುಗಳು ಕೆಲ ಕಾಲದಿಂದ ಕೇಳಿಸಿಕೊಳ್ಳುತ್ತಲೇ ಬಂದಿದ್ದೇವೆ- ಹಿಂದೂಸ್ತಾನವನ್ನು ಇದರಿಂದ ಉಳಿಸಿ, ಹಿಂದೂಸ್ತಾನವನ್ನು ಅದರಿಂದ ಉಳಿಸಿ ಎಂದು. ವಾಸ್ತವವೇನೆಂದರೆ ಹೀಗೆ ಹಿಂದೂಸ್ತಾನವನ್ನು ಉಳಿಸಿ, ಉಳಿಸಿ ಎಂದು ಕೂಗಿಕೊಳ್ಳುವವರಿಂದ ಹಿಂದೂಸ್ಥಾನವನ್ನು ಉಳಿಸಬೇಕಿದೆ, ರಕ್ಷಿಸಬೇಕಿದೆ. ಈ ರೀತಿಯ ವಿಷಯಗಳನ್ನ ಹುಟ್ಟುಹಾಕುವುದರಲ್ಲಿ ಅವರು ನಿಪುಣರೆಂಬುವುದರಲ್ಲಿ ಯಾವ ಅನುಮಾನಗಳಿಲ್ಲ. ಕನಿಷ್ಠ ಪ್ರಾಮಾಣಿಕತೆಯು ಈ ನಿಪುಣರಲ್ಲಿ ಇರುವುದಿಲ್ಲ. ಇಳಿಸಂಜೆಯಲ್ಲಿ ಎಲ್ಲವನ್ನು ಖಂಡಿಸಿ, ಕೆರಳಿಸುವ ಉಗ್ರ ಭಾಷಣ ಮಾಡಿ ಮತ್ತು ನೀತಿ ಬೋಧನೆ ನೀಡಿದ ನಂತರ ಶಯನಗಾರಕ್ಕೆ ಮರಳಿ ಮೃದು ಹಾಸಿಗೆಯ ಮೇಲೆ ಕುಳಿತಾಗ ಇವರ ತಲೆಗಳು ಖಾಲಿಯಾಗಿರುತ್ತವೆ, ದೇಶವನ್ನು ಉಳಿಸುವ, ಜನರನ್ನು ರಕ್ಷಿಸುವ ಪೊಳ್ಳು ಮಾತುಗಳು ಮೆದುಳಿನಿಂದ ಮಾಯವಾಗಿರುತ್ತವೆ.
ಹಿಂದೂಸ್ಥಾನವನ್ನು ನಿಜವಾಗಿಯೂ ಬಾಧಿಸುತ್ತಿರುವ ವಿಷಯಗಳ ಕುರಿತು ಅವರು ಒಂದು ಕ್ಷಣವೂ ವ್ಯಯಿಸುವುದಿಲ್ಲ. ಅವರ ಕಳವಳ, ಕಾಳಜಿಗಳೆಲ್ಲಾ ವೈಯಕ್ತಿಕ ವಿಚಾರಗಳಿಗಷ್ಟೇ ರಾಷ್ಟ್ರಕ್ಕಲ್ಲ. ಸ್ವಂತ ವಿಚಾರಗಳು ಅವರನ್ನು ಯಾವ ಮಟ್ಟಕ್ಕೆ ಆವರಿಸಿಕೊಂಡಿರುತ್ತವೆಯೆಂದರೆ ಜನರ ಕುರಿತು ಆಲೋಚಿಸುವುದಕ್ಕೆ ಅವರಿಗೆ ಆಸಕ್ತಿಯೇ ಇರುವುದಿಲ್ಲ. ತಮ್ಮ ಕುಟುಂಬ ಮತ್ತು ಮನೆಯನ್ನೇ ಸಮರ್ಥವಾಗಿ ನಿಭಾಯಿಸಲಾಗದಿದ್ದವರು, ಗುಣದಲ್ಲಿ ನೀಚರು, ದೇಶವನ್ನು ಸರಿಪಡಿಸುತ್ತೇವೆ ಎನ್ನುತ್ತಾರೆ, ಸರಿ ತಪ್ಪುಗಳ ಕುರಿತು ಬೋಧಿಸುತ್ತಾರೆ! ಇವರ ಹೇಳಿಕೆಗಳು ಇಷ್ಟು ಹಾಸ್ಯಾಸ್ಪದವಾಗಿಲ್ಲದಿದ್ದರೆ ಇವುಗಳನ್ನ ಬಹುಶಃ ತಮಾಷೆ ಎಂದಾದರೂ ಪರಿಗಣಿಸಬಹುದಿತ್ತು.
ಇದನ್ನು ಓದಿದ್ದೀರಾ?: ಕೃಷಿ ಸಚಿವರ ಸೂಚನೆಯನ್ನು ಗೌರವಿಸದ ಕುಲಪತಿ: ಕೃಷಿ ವಿವಿಗಳಿಗೇ ‘ಕಿಸಾನ್ ಸತ್ಯಾಗ್ರಹ’ ಬೇಡವಾಯಿತೇ?
ಈ ನಾಯಕರು- ಧರ್ಮವನ್ನೊಂದು ಕುಂಟು, ಅಂಗವಿಕಲನಂತೆ ನೋಡುತ್ತಾರೆ. ಆ ಕುಂಟನನ್ನು ಭಿಕ್ಷಾಟನೆಗೆ ಬಿಡುತ್ತಾರೆ. ಹಣ ಸಂಗ್ರಹಿಸುತ್ತಾರೆ. ಧರ್ಮವನ್ನು, ಮೇಲಧಿಕಾರಿಗಳನ್ನು ಕಣ್ಮುಚ್ಚಿ ನಂಬುವ ಜನರ ಮುಂದೆ ಆಗಾಗ ಅಂಗವಿಕಲನ ಹೆಣವನ್ನು ಪ್ರದರ್ಶನಕ್ಕಿಟ್ಟು ಮೊರೆಯಿಡುತ್ತಾರೆ. ಪರಿಶ್ರಮ, ಪ್ರಯತ್ನಗಳಿಂದ ಸತ್ತ ಅಂಗವಿಕಲನಿಗೂ ಮರುಜೀವ ನೀಡುತ್ತೇವೆಂದು ನುಡಿಯುತ್ತಾರೆ.
ನಿಜ ಏನೆಂದರೆ ಧರ್ಮ ಹೇಗಿತ್ತೋ ಹಾಗೆ ಇದೆ. ಅದು ಹಾಗೆ ಉಳಿಯಲಿದೆ. ಧಾರ್ಮಿಕ ತತ್ವಗಳು ಅಖಂಡವಾಗಿ, ಮಜಬೂತಾಗಿವೆ. ಧರ್ಮ ಎಂದಿಗೂ ಬದಲಾಗದು. ಧರ್ಮ ಅಪ್ಪಳಿಸುವ ಅಲೆಗೆ ಸವೆಯದ ಪರ್ವತ. ಹಾಗಾಗಿ “ನಮ್ಮ ಧರ್ಮ ಅಪಾಯದಲ್ಲಿದೆ” ಎಂದು ಅಳುವ, ಗೋಳಿಡುವ ನಾಯಕರೆಲ್ಲ ಅಸಂಬದ್ಧ… It is all rubbish.
ಮೊದಲಿಗೆ ಧರ್ಮ, ಮತ, ನಂಬಿಕೆ ಎಂಬುದು ಅಪಾಯದಲ್ಲಿ ಬೀಳುವ ವಿಷಯಗಳೇ ಅಲ್ಲ. ಸದಾ ಅಪಾಯದಲ್ಲಿರುವವರು ನಾಯಕರು ಮಾತ್ರ. ಧರ್ಮ ಅಪಾಯದಲ್ಲಿದೆಯೆಂದೇಳಿ ತಮ್ಮನ್ನ ತಾವು ರಕ್ಷಿಸಿಕೊಳ್ಳುತ್ತಾರೆ. ಹಿತಕರ ಪರಿಸರದಲಿ ನಂಜಿಡುವ ನಾಯಕರುಗಳಿಂದ ಹಿಂದೂಸ್ಥಾನವನ್ನು ರಕ್ಷಿಸಿ. ನಿಮಗೆ ತಿಳಿದಿಲ್ಲವೆನ್ನಿಸುತ್ತೆ, ಈ ನಾಯಕರು ಕೈಯಲ್ಲಿ ಕತ್ತರಿ ಹಿಡಿದು ಬೀದಿ ಬೀದಿ ಸುತ್ತುತ್ತಾರೆ, ನಿಮಗೆ ಅರಿವಿಲ್ಲದ ಹಾಗೆ ನಿಮ್ಮ ಜೇಬಿಗೆ ಕತ್ತರಿ ಹಾಕಿಬಿಡುತ್ತಾರೆ. ಅವರ ಜೀವನದ ಪರಮ ಗುರಿ ಹಣ, ಸಂಪತ್ತು. ಅವರು ಪ್ರತಿಬಾರಿ ನಿಟ್ಟುಸಿರು ಬಿಟ್ಟಾಗಲು ಅಲ್ಲಿ ಅಪ್ರಾಮಾಣಿಕತೆ, ದುರಾಸೆಯ ದುರ್ನಾತವಿರುತ್ತದೆ.
ಭಾರೀ ಗಾತ್ರದ ಹೂಮಾಲೆ ತೊಟ್ಟು, ಬೃಹತ್ ಮೆರವಣಿಗೆಯ ಮುಂಚೂಣಿಯಲ್ಲಿದ್ದುಕೊಂಡು, ಟೊಳ್ಳು ಪದಗಳಿಂದಲೇ ತುಂಬಿತುಳುಕುವ ಅಂತ್ಯವಿಲ್ಲದ ಭಾಷಣ ನೀಡುತ್ತಲೇ ತಮ್ಮ ಅಧಿಕಾರದ ಹಾದಿ ಸುಗಮ ಮಾಡಿಕೊಳ್ಳುತ್ತಾರೆ. ಐಷಾರಾಮಿ ಜೀವನದ ದಾರಿ ಕಂಡುಕೊಳ್ಳುತ್ತಾರೆ. ಅಪಾರ ಹಣ ಸಂಗ್ರಹಿಸುವ, ಸಂಪತ್ತು ಕ್ರೋಡೀಕರಿಸಿಕೊಳ್ಳುವ ಇವರು ನಿರುದ್ಯೋಗ ಹೇಗೆ ಕೊನೆಗೊಳ್ಳುವುದೆಂದು ಎಂದಾದರೂ ಹೇಳಿದ್ದಾರೆಯೇ? “ಧರ್ಮ, ಧರ್ಮ”ವೆಂದು ಸದಾ ಅರಚುವ ನಾಯಕರು ಯಾವ ಧಾರ್ಮಿಕ ಬೋಧನೆಯನ್ನು ನಿಷ್ಠೆಯಿಂದ ಪಾಲಿಸಿದ್ದಾರೆ? ಬೇರೆಯವರಿಂದ ಸಂಗ್ರಹಿಸಿದ ಹಣದಲ್ಲಿ ಬಾಳುವ, ಪರರು ನೀಡಿದ ಮನೆಗಳಲ್ಲಿ ಬದುಕುವ ಇವರು ನಿಮ್ಮನ್ನು ಸ್ವಾವಲಂಬಿಗಳಾಗಿ ಹೇಗೆ ಮಾಡಬಲ್ಲರು?
ಬೇರೆ ಬೇರೆ ರಾಗಗಳನ್ನಾಡುವ ನಾನಾ ನಾಯಕರು ಹಿಂದೂಸ್ಥಾನಕ್ಕೆ ಬೇಡ. ಒಂದೇ ರಾಗದಲ್ಲಿ ಒಂದೇ ಹಾಡು ಹಾಡುವ ನಾಯಕರು ಬೇಕು. ಲಂಗುಲಗಾಮಿಲ್ಲದೆ ಓಡುತ್ತಿರುವ ಆಡಳಿತದ ಹುಚ್ಚು ಕುದುರೆಯನ್ನು ಹತೋಟಿಗೆ ತರುವ ನಾಯಕ ಬೇಕು. ದಕ್ಷತೆಯಿಂದ ದೇಶವನ್ನು ಸ್ವಾತಂತ್ರ್ಯದೆಡೆಗೆ ನಡೆಸುವ ನಾಯಕ ಬೇಕು. ಕಲೀಫ್ ಉಮರ್‍ನ ವಿವೇಕ, ಆಟ ಟರ್ಕ್‌ನ ಕೆಚ್ಚೆದೆಯ ನಾಯಕ ಬೇಕು.
ಇದನ್ನು ಓದಿದ್ದೀರಾ?: ಹೊಸ ಓದು | ಓದಲೇಬೇಕಾದ ಬಿ.ಟಿ. ಜಾಹ್ನವಿಯವರ ‘ಒಬ್ರು ಸುದ್ಯಾಕೆ… ಒಬ್ರು ಗದ್ಲ್ಯಾಕೆ’
ನೆನಪಿಡಿ- ಲೋಭಿಯೊಬ್ಬ ನಮ್ಮನ್ನು ಸರಿಯಾದ ಮಾರ್ಗದಲ್ಲೆಂದೂ ಕರೆದುಕೊಂಡು ಹೋಗಲಾರ. ರೇಷಿಮೆ ಉಡುಗೆ, ತೊಡುಗೆಯಲ್ಲಿರುವವರು ಬೀದಿ ಬದಿಯಲ್ಲಿ ಮಲಗುವವರಿಗೆ ಏನನ್ನೂ ಕೊಡಲಾರರು. ಲೋಭಿಗಳನ್ನು ಪಕ್ಕಕ್ಕೆ ಒಗೆಯಿರಿ. ಹಾಸಿಗೆಯ ಸಂದುಗಳಲ್ಲಿ ತೆವಳುತ್ತ ವಾಸಿಸುವ, ಹೊರಬಂದು ರಕ್ತ ಹೀರುವ ತಿಗಣೆಗಳಂತೆ ಅವರು. ನಿಮ್ಮ ಧಿಕ್ಕಾರ-ಪ್ರತಿರೋಧದ ಕಾವಿನಿಂದ ಇವರನ್ನು ಸಂದುಗಳಿಂದ ಹೊರಗೆಳೆದು, ಹೊರತಳ್ಳಿ.
(ಈಗಿನ ನಾಯಕರು) ತಾವು ಸಿರಿವಂತರಾಗುವ ಉದ್ದೇಶದಿಂದಲೇ ಸಿರಿವಂತರ ವಿರುದ್ಧ ಗಲಾಟೆ ಮಾಡುತ್ತಾರೆ. ನಿಮ್ಮ ಕಲ್ಪನೆಗೂ ನಿಲುಕದ ನೀಚರಿವರು. ಠಕ್ಕರಲ್ಲಿ ಮಹಾ ಠಕ್ಕರು. ಅವರಿಗೆ ನಿಮ್ಮ ಅನಿಸಿಕೆಗಳನ್ನು ನಿಖರವಾಗಿ ತಿಳಿಸಿಬಿಡಿ. ಆಕ್ರಮಿಸಿಕೊಂಡಿರುವ ಸಿಂಹಾಸನ, ಮಹಾಪೀಠಗಳಿಂದ ಇವರನ್ನು ಕೆಳಗಿಳಿಸಿ, ಹೊರದಬ್ಬುವ ಬಲಿಷ್ಠ ಬಾಹು, ಅಗಲ ಎದೆಯಿರುವ ಹರಿದಬಟ್ಟೆ ತೊಟ್ಟ ದಿಟ್ಟ ಯುವಕರು ದೇಶಕ್ಕೆ ತುರ್ತಾಗಿ ಬೇಕಾಗಿದ್ದಾರೆ.
ಬಡವರ ಮೇಲೆ ಸಹಾನುಭೂತಿ ತೋರುವ ಹಕ್ಕು ಅವರಿಗಿಲ್ಲ. ನೆನಪಿಡಿ ಬಡತನದಲ್ಲಿ ಯಾವ ಅವಮಾನವಿಲ್ಲ. ಬಡತನದಲ್ಲಿ ಅವಮಾನವಿದೆಯೆಂದುಕೊಳ್ಳುವುದೇ ದೊಡ್ಡ ಅವಮಾನ. ಬಡವ ತನ್ನ ದುಡಿಮೆಯಿಂದ ಬದುಕುವವ. ಬಡವ ಕಿತ್ತು ತಿನ್ನುವವರಿಗಿಂತ ಮೇಲು. ದುಡಿಮೆಯಿಂದ ಬದುಕುವವರಾಗಿ. ಸ್ವಾಭಿಮಾನಿಗಳಾಗಿ. ನಿಮ್ಮ ಒಳಿತೆಲ್ಲಿದೆ ಎಂದು ನಿಷ್ಠುರವಾಗಿ ನೋಡಿ. ನಮ್ಮ ಬದುಕು ನಮ್ಮ ಕೈಯಲ್ಲಿದೆ ಎಂದು ಸಾಬೀತುಪಡಿಸಿದಾಗ ಈ ನಾಯಕರಿಗೆ ಅವಿತುಕೊಳ್ಳಲು ಜಾಗವಿರುವುದಿಲ್ಲ.
ಮೂಲ- ಸಾದತ್ ಹಸನ್ ಮಂಟೋ, ಅನುವಾದ: ಹರೀಶ್ ಗಂಗಾಧರ್

ಹರೀಶ್ ಗಂಗಾಧರ್
ಲೇಖಕ, ಪ್ರಾಧ್ಯಾಪಕ