ರಾಜ್ಯ ಸರ್ಕಾರ ಕೇಳಿದಷ್ಟು ಅಕ್ಕಿಯನ್ನು ಕೊಡಲು ನಿರಾಕರಿಸಿ ಬಡವರ ಅನ್ನಕ್ಕೂ ಕಲ್ಲು ಹಾಕುವ ಕೆಲಸ ಮೋದಿ ಸರ್ಕಾರ ಮಾಡಿತ್ತು. ಸಿದ್ದರಾಮಯ್ಯ ಸರ್ಕಾರ ಐದು ಕೆ ಜಿ ಅಕ್ಕಿಯ ಜೊತೆಗೆ ಪ್ರತಿ ಕೆಜಿಗೆ ₹34 ದರದಲ್ಲಿ 5 ಕೆಜಿ ಅಕ್ಕಿಯ ಬಾಬ್ತು ₹170 ನಗದು ಫಲಾನುಭಾವಿಗಳ ಖಾತೆಗಳಿಗೆ ಹಾಕುವ ಮೂಲಕ ಪರಿಹಾರ ಕಂಡುಕೊಂಡಿತ್ತು. ಕೇಳಿದಾಗ ಕೊಡದೇ, ಈಗ ಕೊಡ್ತೀವಿ ಅಂದ್ರೂ ಸರ್ಕಾರ ಖರೀದಿಸ್ತಿಲ್ಲ, ಸರ್ಕಾರ ದಿವಾಳಿಯಾಗಿದೆ ಎಂದು ಹಂಗಿಸಿದರೆ ಏನರ್ಥ?
ತಮ್ಮ ಸ್ಥಾನದ ಘನತೆ ಮರೆತು ಹೇಳಿಕೆ ನೀಡುವುದರಲ್ಲಿ, ಅದರಲ್ಲೂ ಸುಳ್ಳು ಹೇಳುವವರಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸದಾ ಮೊದಲ ಸಾಲಿನಲ್ಲಿ ಕಾಣಿಸುತ್ತಾರೆ. ರಾಜ್ಯದಿಂದ ಸಂಸದರಾಗಿ, ಮೂರನೇ ಬಾರಿಗೆ ಕೇಂದ್ರ ಸಚಿವರಾಗಿರುವ ರಾಜ್ಯಕ್ಕೆ ತಂದ ಯೋಜನೆಗಳು ಶೂನ್ಯ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆ ಅನ್ಯಾಯ, ನೀರಾವರಿ ಯೋಜನೆ ವಿಳಂಬ, ಅನುದಾನ ಹಂಚಿಕೆಯಲ್ಲಿ ಅನ್ಯಾಯ, ಮೇಕೆ ದಾಟುವಿನಂಥ ಬೆಂಗಳೂರಿಗೆ ಕುಡಿಯುವ ನೀರು ಹರಿಸುವ ಯೋಜನೆಗಳಿಗೆ ಅನುಮತಿ ನೀಡದಿರುವುದು, ಪ್ರವಾಹ- ನೆರೆ ಪರಿಹಾರ ನೀಡದಿರುವುದು ಇಂತಹ ಕೇಂದ್ರ ಸರ್ಕಾರದಿಂದಾಗುವ ಪರಮ ಅನ್ಯಾಯಗಳ ಬಗ್ಗೆ ಕನಿಷ್ಠ ಅಸಮಾಧಾನ ಹೊರ ಹಾಕಿದ ಉದಾಹರಣೆಯೇ ಇಲ್ಲ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಡಬಲ್ ಎಂಜಿನ್ ಸರ್ಕಾರ ರಾಜ್ಯಕ್ಕೆ ಕೊಟ್ಟದ್ದು ಸೊನ್ನೆ. ತಮ್ಮದೇ ಸರ್ಕಾರ ಇದ್ದಾಗಲೂ ಹೆಚ್ಚು ಅನುದಾನ ತರದೇ ಗಪ್‌ಚುಪ್ ಅಂತಿದ್ದ ಜೋಶಿ ಮಹಾಶಯರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಕೇಂದ್ರ ಸರ್ಕಾರದ ಅನ್ಯಾಯದ ಪರ ನಿಂತು ಜಾಗಟೆ ಬಡಿಯುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ಕಳೆದ ವರ್ಷ ರಾಜ್ಯಕ್ಕೆ ಬರಬೇಕಿರುವ ಜಿಎಸ್‌ಟಿ ಪಾಲಿನಲ್ಲಿ ಅನ್ಯಾಯವಾಗಿರುವ ಬಗ್ಗೆ ರಾಜ್ಯ ಸರ್ಕಾರದ ಮಂತ್ರಿಗಳು, ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಹೋಗಿ ಹೋರಾಟ ಮಾಡಿದರೂ ಅತ್ತ ಸುಳಿಯದ ಕೇಂದ್ರ ಸಚಿವರೂ ಆಗಿದ್ದ ಜೋಶಿ, ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ ಸಹಿತ 26 ಮಂದಿ ಸಂಸದರೂ ರಾಜ್ಯಕ್ಕೆ ಅನ್ಯಾಯ ಆಗಿಲ್ಲ ಎಂದು ಕೇಂದ್ರ ಸರ್ಕಾರದ ಪರ ನಿಂತು ರಾಜ್ಯದ್ರೋಹಿಗಳಾಗಿದ್ದರು. ರಾಜ್ಯ ಸರ್ಕಾರದ ವಿರುದ್ಧವೇ ಬಿಜೆಪಿ ಮತ್ತದರ ಮಡಿಲ ಮಾಧ್ಯಮಗಳೂ ತುತ್ತೂರಿ ಊದಿದ್ದವು. ಅದೇ ರೀತಿ ಬಡವರಿಗೆ ತಿಂಗಳಿಗೆ ತಲಾ ಹತ್ತು ಕೆ ಜಿ ಉಚಿತ ಅಕ್ಕಿ ನೀಡುವ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದಾಗಲೂ, “ಕೇಂದ್ರ ಸರ್ಕಾರವನ್ನು ಕೇಳಿ ಗ್ಯಾರಂಟಿ ಯೋಜನೆ ಘೋಷಿಸಿದ್ರಾ?, ಮೋದಿ ಅಕ್ಕಿ ಕೊಡ್ತೇನೆ ಅಂದಿದ್ರಾ? ” ಎಂದು ಪ್ರಶ್ನೆ ಮಾಡಿದ್ರು. ಯಾವ ಸರ್ಕಾರವೇ ಆಗಲಿ ಬಡವರ ಅನ್ನದ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂಬ ಕನಿಷ್ಠ ಪ್ರಜ್ಞೆ ಯಾವ ಬಿಜೆಪಿ ನಾಯಕರಿಗೂ ಇರಲಿಲ್ಲ.
2023ರ ಮೇ 20ರಂದು ರಾಜ್ಯದಲ್ಲಿ ಪ್ರಚಂಡ ಬಹುಮತದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿದ್ದ ಪ್ರತಿ ಪಡಿತರದಾರ ಕುಟುಂಬಗಳ ಸದಸ್ಯರಿಗೆ ತಲಾ ಹತ್ತು ಕೆಜಿ ಅಕ್ಕಿ ನೀಡುವ “ಅನ್ನಭಾಗ್ಯ” ಯೋಜನೆಗೆ ಹೆಚ್ಚುವರಿ ಅಕ್ಕಿ ಬೇಕು ಎಂದು ಎಫ್‌ಸಿಐ ಗೆ ರಾಜ್ಯಸರ್ಕಾರ ಮನವಿ ಮಾಡಿತ್ತು. ಅನ್ನಭಾಗ್ಯ ಯೋಜನೆಯಡಿ ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ ಪ್ರತಿ ವ್ಯಕ್ತಿಗೆ 10 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲು ಎಫ್‌ಸಿಐನಿಂದ 2.28 ಲಕ್ಷ ಮೆಟ್ರಿಕ್ ಟನ್‌ಗಳನ್ನು ಕೋರಿತ್ತು. ಜೂನ್ 12 ರಂದು ಎರಡು ಪತ್ರಗಳಲ್ಲಿ ಎಫ್‌ಸಿಐ ಸುಮಾರು 2.22 ಲಕ್ಷ ಮೆಟ್ರಿಕ್ ಟನ್ ಪೂರೈಸಲು ಒಪ್ಪಿಕೊಂಡಿತ್ತು. ಆದರೆ ಒಂದು ದಿನದ ನಂತರ, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಧಾನ್ಯಗಳನ್ನು ಮಾರಾಟ ಮಾಡುವುದರ ವಿರುದ್ಧ FCIಗೆ ನಿರ್ದೇಶನ ನೀಡಿತು. ಜೂನ್ 14 ರಂದು, ಎಫ್‌ಸಿಐ ಕರ್ನಾಟಕಕ್ಕೆ ಅಕ್ಕಿ ಹಂಚಿಕೆ ಆದೇಶವನ್ನು ರದ್ದುಗೊಳಿಸಿತು. ಕೇಜಿಗೆ 34 ರೂಪಾಯಿಯಂತೆ ಹೆಚ್ಚುವರಿ ಹಣ ನೀಡಲೂ ಸರ್ಕಾರ ಒಪ್ಪಿತ್ತು. ಜೂನ್ 10ರಂದು ಯೋಜನೆಗೆ ಸಿದ್ದರಾಮಯ್ಯ ಅವರು ಚಾಲನೆ ನೀಡಿಯೂ ಆಗಿತ್ತು. ಆದರೆ, ಅಷ್ಟರಲ್ಲಿ ಎಫ್‌ಸಿಐ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿ ಆ ಮೂಲಕ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಚಾಲೂ ಆಗದಂತೆ ತಡೆಯುವ ಪ್ರಯತ್ನ ಮಾಡಿತ್ತು.

ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ನೀಡಲು ಭಾರತೀಯ ಆಹಾರ ನಿಗಮ ನಿರಾಕರಿಸಿರುವುದಕ್ಕೆ ರಾಜಕೀಯ ಆರೋಪ ಕೇಳಿಬಂದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಎಫ್‌ಸಿಐ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಎಫ್‌ಸಿಐ ನೀತಿಯಲ್ಲಿ ಬದಲಾವಣೆಯಾಗಿರುವ ಕಾರಣ ರಾಜ್ಯಗಳಿಗೆ ಹೆಚ್ಚುವರಿ ಅಕ್ಕಿ ನೀಡಲಾಗುತ್ತಿಲ್ಲ ಎಂದು ಹೇಳಿತ್ತು.
‘ಹೆಚ್ಚುವರಿ ಅಕ್ಕಿಗಾಗಿ ಕರ್ನಾಟಕ ಸರ್ಕಾರದಿಂದ ನಮಗೆ ಮನವಿ ಬಂದಿತ್ತು. ಅಲ್ಲದೇ ಇದನ್ನು ನೀಡಲು ನಮ್ಮ ಪ್ರಾದೇಶಿಕ ಕಚೇರಿ ಅಧಿಕಾರಿಗಳು ಒಪ್ಪಿಗೆಯನ್ನೂ ಸೂಚಿಸಿದ್ದರು. ಆದರೆ ನಮ್ಮ ನೀತಿ ಬದಲಾವಣೆಯಾಗಿರುವ ಮಾಹಿತಿ ಅವರಿಗೆ ಲಭ್ಯವಿಲ್ಲದ ಕಾರಣ ಒಪ್ಪಿಗೆ ನೀಡಿದ್ದರು. ಆದರೆ ಇದೀಗ ನಮ್ಮ ನೀತಿ ಬದಲಾಗಿದೆ. ರಾಜ್ಯಗಳಿಗೆ ನೇರವಾಗಿ ಅಕ್ಕಿ ಮಾರಾಟ ನಿಲ್ಲಿಸಲಾಗಿದೆ. ಅಕ್ಕಿ-ಗೋಧಿ ಬೆಲೆ ನಿಯಂತ್ರಿಸಲು ಮುಕ್ತ ಮಾರುಕಟ್ಟೆಗೆ ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ರಾಜ್ಯಗಳಿಗೆ ನೀಡುತ್ತಿದ್ದ ಹೆಚ್ಚುವರಿ ಧಾನ್ಯದ ಸರಬರಾಜು ತಡೆ ಹಿಡಿಯಲಾಗಿದೆ’ ಎಂದು ಭಾರತ ಆಹಾರ ನಿಗಮದ ಅಧ್ಯಕ್ಷ ಅಶೋಕ್ ಕೆ.ಕೆ. ಮೀನಾ ಅವರು ಹೇಳಿದ್ದರು.
ರಾಜ್ಯ ಸರ್ಕಾರ ಬೇಡಿಕೆ ಇಟ್ಟಷ್ಟು ಅಕ್ಕಿಯನ್ನು ಕೊಡಲು ನಿರಾಕರಿಸಿ ಬಡವರ ಅನ್ನಕ್ಕೂ ಕಲ್ಲು ಹಾಕುವ ಕೆಲಸ ಮೋದಿ ಸರ್ಕಾರ ಮಾಡಿತ್ತು. ಸಿದ್ದರಾಮಯ್ಯ ಸರ್ಕಾರ ಐದು ಕೇಜಿ ಅಕ್ಕಿಯ ಜೊತೆಗೆ ಪ್ರತಿ ಕೆಜಿಗೆ ₹34 ದರದಲ್ಲಿ 5 ಕೆಜಿ ಅಕ್ಕಿ ಬದಲು ₹170 ನಗದು ಫಲಾನುಭಾವಿಗಳ ಖಾತೆಗಳಿಗೆ ಹಾಕುವ ಮೂಲಕ ಪರಿಹಾರ ಕಂಡುಕೊಂಡಿತ್ತು.
ಎಫ್‌ಸಿಐ ನಲ್ಲಿ ಕೊಳೆಯುವಷ್ಟು ಅಕ್ಕಿ ದಾಸ್ತಾನು ಇದ್ದರೂ ಕರ್ನಾಟಕ ಕೇಳಿದಷ್ಟು ಅಕ್ಕಿ ಪೂರೈಸಲು ನಿರಾಕರಿಸಿ, ನಾನಾ ನೆಪ ಹೇಳಿದ್ದ ಮೋದಿ ಸರ್ಕಾರ 2023ರ ಜುಲೈನಲ್ಲಿ ಮುಕ್ತ ಮಾರುಕಟ್ಟೆಗೆ ಅಕ್ಕಿಯನ್ನು ಹರಾಜು ಹಾಕಿತ್ತು. ಯಾವುದೇ ರಾಜ್ಯ ಸರ್ಕಾರಗಳು ಹರಾಜಿನಲ್ಲಿ ಭಾಗವಸುವಂತಿಲ್ಲ ಎಂಬ ನಿಯಮ ಮಾಡಿತ್ತು. ಇದರಿಂದಾಗಿ ಹರಾಜಿನಲ್ಲೂ ಖರೀದಿ ಮಾಡದಂತೆ ದಿಗ್ಬಂಧನ ಹೇರಿ ದುಷ್ಟತನ ಮತ್ತು ದ್ವೇಷದ ರಾಜಕಾರಣ ಮಾಡಿದ್ದರು. ಆಗಲೂ ರಾಜ್ಯದ ಇಪ್ಪತ್ತಾರು ಮಂದಿ ಸಂಸದರು ಬಡವರ ಅನ್ನದ ಪರ ಧ್ವನಿ ಎತ್ತಿರಲಿಲ್ಲ. ಹರಾಜಿನಲ್ಲಿ ನಿರೀಕ್ಷಿಸಿದಷ್ಟು ಅಕ್ಕಿ ಮಾರಾಟವಾಗದ ಕಾರಣ ಉಳಿಕೆ ಅಕ್ಕಿಯನ್ನು ʼಭಾರತ್ ರೈಸ್ʼ ಹೆಸರಿನಲ್ಲಿ ಆನ್‌ಲೈನ್ ನಲ್ಲಿ ಮಾರಾಟ ಮಾಡಲು ಇಳಿದಿತ್ತು ಕೇಂದ್ರ ಸರ್ಕಾರ.

2024ರ ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆ ನಡೆಯಲಿತ್ತು. ಆದರೆ ಫೆಬ್ರವರಿ 6 ರಂದು ಮೋದಿ ಸರ್ಕಾರ ಭಾರತ್ ರೈಸ್ ಹೆಸರಿನಲ್ಲಿ 29 ರೂಪಾಯಿಗೆ ಕೆ ಜಿ ಅಕ್ಕಿ ನೀಡುವ ಯೋಜನೆಗೆ ಚಾಲನೆ ನೀಡಿತ್ತು. ಆನ್‌ಲೈನ್‌ನಲ್ಲಿ ಅಕ್ಕಿ ಖರೀದಿಸುವ ಅವಕಾಶ ನೀಡಿತ್ತು. ಜೊತೆಗೆ ಮೊಬೈಲ್ ವ್ಯಾನ್‌ಗಳಲ್ಲಿ ಮಾರಾಟ ಮಾಡುವ ಗಿಮಿಕ್ ನಡೆಸಿತ್ತು.
‘ಭಾರತ್ ರೈಸ್’ ಆರಂಭದಲ್ಲಿ, 5 ಕೆಜಿ ಅಕ್ಕಿಯನ್ನು ಆಹಾರ ನಿಗಮ ಆಫ್ ಇಂಡಿಯಾ (FCI) ಹೊರತುಪಡಿಸಿ NAFED, NCCF ಮತ್ತು ಕೇಂದ್ರೀಯ ಭಂಡಾರ್ ಈ ಮೂರು ಏಜೆನ್ಸಿಗಳ ಮೂಲಕ ಮಾರಾಟ ಮಾಡಲಾಗಿತ್ತು. ಆರಂಭದಲ್ಲಿ, ಮೊಬೈಲ್ ವ್ಯಾನ್‌ಗಳು ಸೇರಿದಂತೆ ಕೇಂದ್ರೀಯ ಭಂಡಾರ್, NAFED ಮತ್ತು NCCF ಔಟ್‌ಲೆಟ್‌ಗಳಲ್ಲಿ ಭಾರತ್ ರೈಸ್ ಖರೀದಿಗೆ ಲಭ್ಯವಿರುತ್ತದೆ ಎಂದು ಆಹಾರ ಸಚಿವ ಪಿಯೂಷ್ ಗೋಯಲ್ ಹೇಳಿದ್ದರು. ಕೆಲವು ಬಿಜೆಪಿ ಸಂಸದರು, ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಇಂತಹ ಜಾಗಗಳಲ್ಲಿ ಭಾರತ್ ರೈಸ್ ಮೊಬೈಲ್ ವ್ಯಾನುಗಳು ಬರಲಿವೆ ಎಂದು ಮುಂಚಿತವಾಗಿ ಪ್ರಚಾರ ಮಾಡಿ ತಮ್ಮ ಕಾರ್ಯಕರ್ತರು, ಮುಖಂಡರು ಮುಗಿಬಿದ್ದು ಖರೀದಿಸುವಂತೆ ಮಾಡಿದ್ದರು. ಬಡವರ ಕೈಗೆ ಭಾರತ್ ರೈಸ್ ಸಿಗಲೇ ಇಲ್ಲ. ಹಣವಿದ್ದವರು ಬೇಕಷ್ಟು ಕೊಂಡು ದಾಸ್ತಾನು ಮಾಡಿಟ್ಟುಕೊಂಡರು. ಚುನಾವಣೆ ಮುಗಿದ ನಂತರ ಭಾರತ್ ರೈಸ್ ನಾಪತ್ತೆಯಾಗಿದೆ.
ಅನ್ನಭಾಗ್ಯಕ್ಕೆ ಅಕ್ಕಿ ನೀಡದೇ ವಂಚನೆ ಮಾಡಿದ್ದ ಬಿಜೆಪಿಗೆ ಕರ್ನಾಟಕದಲ್ಲಿ 8 ಲೋಕಸಭಾ ಸೀಟು ನಷ್ಟವಾಯಿತು. ಇಡೀ ದೇಶದಲ್ಲಿ ಸ್ಪಷ್ಟ ಬಹುಮತ ಪಡೆಯಲು ಮೋದಿ ವಿಫಲವಾದರು. 305 ಇದ್ದ ಬಿಜೆಪಿ ಸೀಟುಗಳು 240ಕ್ಕೆ ಕುಸಿದಿತ್ತು. ಮಿತ್ರಪಕ್ಷಗಳ ನೆರವಿನಿಂದ ಎನ್‌ಡಿಎ ಕೂಟ ರಚಿಸಿದ ಮೋದಿ ಪರಿವಾರದಲ್ಲಿ ಈಗ ಪ್ರಲ್ಹಾದ್ ಜೋಶಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದಾರೆ. ನಾವು ಅಕ್ಕಿ ಪೂರೈಸಲು ಸಿದ್ಧರಿದ್ದೇವೆ, ರಾಜ್ಯಸರ್ಕಾರ ಅರ್ಜಿ ಸಲ್ಲಿಸುತ್ತಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.
ಏಳು ಕೆಜಿ ಅಕ್ಕಿಯನ್ನು ಐದಕ್ಕೆ ಇಳಿಸಿದ್ದ ಬಡವರ ವಿರೋಧಿ ಬಿಜೆಪಿ
2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುಗಳಿಗೆಯಲ್ಲಿಯೇ ನೇರವಾಗಿ ಕ್ಯಾಬಿನೆಟ್ ಹಾಲ್‌ಗೆ ತೆರಳಿ ಪ್ರತಿ ಬಿಪಿಎಲ್ ಕಾರ್ಡುದಾರ ಕುಟುಂಬಗಳ ಪ್ರತಿ ವ್ಯಕ್ತಿಗಳಿಗೆ ಕೆಜಿಗೆ ಒಂದು ರೂಪಾಯಿಯಂತೆ ತಲಾ ಏಳು ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದರು. ಒಂದು ವರ್ಷದ ನಂತರ ಉಚಿತವಾಗಿ ಅಕ್ಕಿ ಕೊಡಲು ಶುರು ಮಾಡಿದ್ದರು. ಆದರೆ ನಂತರ ಬಂದ ಬಿಜೆಪಿ ಸರ್ಕಾರ ಏಳು ಕೆಜಿ ಅಕ್ಕಿಯನ್ನು ಐದು ಕೆಜಿಗೆ ಇಳಿಸಿತ್ತು. ಇದು ಬಿಜೆಪಿಯವರು ಎಷ್ಟು ಬಡಜನರ ಪರ ಇದ್ದಾರೆ ಎಂಬುದಕ್ಕೆ ಸ್ಪಷ್ಟ ನಿದರ್ಶನ. ಆಗ ಜನರೂ ಸುಮ್ಮನಿದ್ದರು. ಸರ್ಕಾರ ದಿವಾಳಿಯಾಗಿದೆ, ಜನರಿಗೆ ಅಕ್ಕಿ ಕೊಡಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ಕಾಂಗ್ರೆಸ್ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ ಎಂದು ಜೋಶಿಯವರು ಕುಹಕವಾಡುತ್ತಿದ್ದಾರೆ. ಆದರೆ, ಬಡಜನರಿಗೆ ಅಕ್ಕಿ ಸಿಗದಿದ್ದರೆ ಅದು ಗೇಲಿ ಮಾಡುವ ವಿಚಾರವಲ್ಲ. ಅದಕ್ಕೆ ತಾವೂ ಹೊಣೆಗಾರರು ಎಂದು ಜೋಶಿಯವರಿಗೆ ನೆನಪಿಸಬೇಕಿದೆ.

“ಹೀಗಿರುವಾಗ, ಈಗ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ,”ಕೇಂದ್ರ ಸರ್ಕಾರ ಈಗ ರಾಜ್ಯಕ್ಕೆ ₹22.50 ಬೆಲೆಗೆ ಅಕ್ಕಿ ಕೊಟ್ಟು ವಾರ್ಷಿಕ ₹2,280 ಕೋಟಿ ಉಳಿಸಿಕೊಡಲು ಮುಂದಾದರೆ, ರಾಜ್ಯ ಸರ್ಕಾರವೇ ಇದಕ್ಕೆ ಸಿದ್ಧವಿಲ್ಲ” ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ. ಅದೂ ಐದು ಕೆಜಿ ಅಕ್ಕಿಯ ಹಣ ಸರ್ಕಾರ ಫಲಾನುಭವಿಗಳ ಖಾತೆಗೆ ಹಾಕಿಲ್ಲ ಎಂಬ ಮಾಧ್ಯಮ ವರದಿಗೆ ನೀಡಿದ ಪ್ರತಿಕ್ರಿಯೆ.
“ಮುಂದಾಲೋಚನೆ ಇಲ್ಲದ ಅವೈಜ್ಞಾನಿಕ ರೀತಿಯ ಯೋಜನೆಗಳ ಘೋಷಣೆ, ಅನುಷ್ಠಾನದಿಂದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ರಾಜ್ಯದ ಬೊಕ್ಕಸವನ್ನು ಬರಿದು ಮಾಡಿದೆ. ಇತ್ತ, ಜನರಿಗೆ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ. ಈ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ” ಎಂದಿದ್ದಾರೆ. ಹೀಗೆ ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರದ ಮೇಲಿನ ತಮ್ಮ ಅಸಹನೆ ಹೊರ ಹಾಕಿದ್ದಾರಷ್ಟೇ. ಬಡವರ ಮೇಲಿನ ಕಾಳಜಿಯಿಂದ ಅಲ್ಲ. ಬರೇ ರಾಜಕೀಯ ತೆವಲಿನ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪದೇ ವಿಫಲವಾಗಬೇಕು, ಮುಂದಿನ ಸಲ ಬಿಜೆಪಿ ಅಧಿಕಾರ ಹಿಡಿಯಬೇಕು ಎಂಬುದಷ್ಟೇ ಉದ್ದೇಶ. ಇದಕ್ಕೆ ಅವರ ಹೇಳಿಕೆಯೇ ಸಾಕ್ಷಿ.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಏರಿದಾಗ ಎಷ್ಟೇ ಮನವಿ ಮಾಡಿದರು ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರವು ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿತ್ತು. ಅಷ್ಟೇ ಅಲ್ಲ ಹತ್ತು ಕೆಜಿ ಅಕ್ಕಿ ಕೊಡದ ಬಗ್ಗೆ ಬಿಜೆಪಿ ನಾಯಕರು ಗೇಲಿ ಮಾಡುತ್ತಿದ್ದರು. ಐದು ಕೆ ಜಿ ಕೊಡುತ್ತಿರೋದು ಮೋದಿ ಸರ್ಕಾರ. ಕಾಂಗ್ರೆಸ್ ಭರವಸೆ ನೀಡಿದ ಹತ್ತು ಕೆಜಿ ಅಕ್ಕಿ ಕೊಡಬೇಕು, ಒಟ್ಟು ತಲಾ ಹದಿನೈದು ಕೆ ಜಿ ಎಂದು ಅಪಪ್ರಚಾರ ಮಾಡಿದ್ದರು. ಹೆಚ್ಚು ಹಣ ತೆತ್ತು ಖರೀದಿಸುತ್ತೇವೆ ಎಂದರೂ ಅಕ್ಕಿ ಕೊಡದಿರುವ ಕೇಂದ್ರದ ಧೋರಣೆ ಖಂಡಿಸಿ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಆಗಿನ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರನ್ನು ಎರಡು ಬಾರಿ ಭೇಟಿಯಾಗಿ ಮನವಿ ಮಾಡಿದ್ದರು. ನಂತರ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸುವ ಬಗ್ಗೆಯೂ ಸರ್ಕಾರ ಚಿಂತಿಸಿತ್ತು. ಕೇಂದ್ರ ಸರ್ಕಾರದ ಕಡೆಯಿಂದ ಸ್ಪಂದನೆಯೇ ಸಿಗದಿದ್ದಾಗ ಕೊನೆಗೆ ರಾಜ್ಯ ಸರ್ಕಾರ ತಲಾ ಐದು ಕೆಜಿ ಅಕ್ಕಿಯ ಹಣ ವಿತರಿಸಲು ಆರಂಭಿಸಿತು. ತಲಾ ಒಂದು ಕೆಜಿಗೆ 34 ರೂಪಾಯಿಯಂತೆ ಪ್ರತಿಯೊಬ್ಬನ ಖಾತೆಗೆ ತಿಂಗಳಿಗೆ 170 ರೂಪಾಯಿ ಖಾತೆಗೆ ಸರ್ಕಾರ ನೀಡುತ್ತಿದೆ. ಕೆಲ ತಿಂಗಳಿನಿಂದ ಹಣ ಜಮೆ ಆಗಿಲ್ಲ ಎಂಬುದು ನಿಜ. ಅದನ್ನು ಸರ್ಕಾರ ನಿಧಾನವಾಗಿಯಾದರೂ ಹಾಕುತ್ತಿದೆ. ಆದರೆ, ರಾಜ್ಯ ಕೇಳಿದಷ್ಟು ಅಕ್ಕಿ ನೀಡದೇ ಯೋಜನೆ ಹಳ್ಳ ಹಿಡಿಸಲು ಹೊರಟವರು ಈಗ ಕಡಿಮೆ ಬೆಲೆಗೆ ಅಕ್ಕಿ ಕೊಡುತ್ತೇವೆ ಎಂದರೂ ಖರೀದಿಸುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ. ಕೇಳಿದಾಗ ಕೊಡಬೇಕಿತ್ತು, ಬೇಡದಿದ್ದಾಗ ಖರೀದಿಸಿ ಎಂದರೆ ಅದಕ್ಕೆ ಭಂಡತನ ಎನ್ನಬೇಕಷ್ಟೇ.
ಐದು ಕೆಜಿ ಅಕ್ಕಿಯ ಬಾಬ್ತು170 ರೂಪಾಯಿ ಕೊಡುವ ಯೋಜನೆಯ ಬಗ್ಗೆ ಜನರಿಗೂ ಉತ್ತಮ ಎಂಬ ಭಾವನೆ ಇದೆ. ಹಣ ಖಾತೆಗೆ ಹಾಕುವುದರಿಂದ ಮಿಕ್ಕ ದಿನಸಿ ಖರೀದಿಸಲು ಅಥವಾ ಇನ್ಯಾವುದೋ ಅಗತ್ಯಗಳಿಗೆ ನೆರವಾಗುತ್ತಿದೆ. ಹತ್ತು ಕೆಜಿ ಅಕ್ಕಿ ಕೊಟ್ಟರೆ ಅದನ್ನು ಹಣಕ್ಕೆ ಮಾರುತ್ತಾರೆ ಎಂಬ ಆರೋಪಕ್ಕೆ ಅವಕಾಶ ಇಲ್ಲದಂತಾಗಿತ್ತು. ಇಷ್ಟೆಲ್ಲದರ ನಡುವೆ ಹಣದ ಬದಲು ಹತ್ತು ಕೆ ಜಿ ಅಕ್ಕಿ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೊಂಕು ನುಡಿಯದೇ ಜೋಶಿಯವರು ಮತ್ತು ಬಿಜೆಪಿ ನಾಯಕರು ಬಡವರ ಪರ ಯೋಜನೆಗಳನ್ನು ಬೆಂಬಲಿಸಬೇಕಿದೆ.
ಅನ್ನಭಾಗ್ಯ, ಗೃಹಲಕ್ಷ್ಮಿ ಎರಡೂ ಯೋಜನೆಗಳನ್ನು ರಾಜ್ಯಸರ್ಕಾರ ಜಾರಿಗೊಳಿಸಿದೆಯಷ್ಟೇ. ಆದರೆ ಹಣ ಪಾವತಿಯಲ್ಲಿ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಇದು ವಿಪಕ್ಷಗಳಿಗೆ ಅಪಪ್ರಚಾರಕ್ಕೆ ಆಹಾರ ನೀಡಿದಂತೆ. ಯೋಜನೆ ಘೋಷಿಸುವಾಗ ಇದ್ದ ಅದೇ ಕಾಳಜಿ, ಬದ್ಧತೆ ಸಮರ್ಪಕವಾಗಿ ಜಾರಿ ಮಾಡುವುದರಲ್ಲೂ ಇರಬೇಕಿದೆ. ಈ ಬಗ್ಗೆ ರಾಜ್ಯ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
ಇದನ್ನೂ ಓದಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗದಿದ್ದರೆ, ಸಮಿತಿ ಏಕೆ ಬೇಕು?

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.