ಆಹಾರ ಅವರವರ ಸಂಸ್ಕೃತಿ ಮತ್ತು ಅವರವರ ಇಷ್ಟ ಎಂದು ಬಿಡದೆ ವ್ಯಾಜ್ಯ ಮಾಡುತ್ತಾ ಕೂತಿರುವವರು ಸಂವೇದನೆಯ, ಸೂಕ್ಷ್ಮತೆಯ ಸಾಹಿತ್ಯ ಸಮ್ಮೇಳನ ಮಾಡುವುದಕ್ಕೆ ಅರ್ಹತೆ ಪಡೆದಿಲ್ಲ ಎಂದು ಅನಿಸುತ್ತಿದೆ
ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರವನ್ನು ನಿಷೇಧಿಸಿದರೆ ಬಹುಸಂಖ್ಯಾತರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಹೇಳಿದ್ದಾರೆ.
87ನೇ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿಚಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಂಟು ಮಾಡಿರುವ ವಿವಾದಕ್ಕೆ ಸಂಬಂಧಿಸಿದಂತೆ ಅವರು ವಿಡಿಯೊ ಪ್ರತಿಕ್ರಿಯೆ ನೀಡಿದ್ದಾರೆ.
ಮಾಂಸಾಹಾರ ಅಂದರೆ ಗೋಚರವಾದ ಜೀವ ಆಹಾರ. ಸಸ್ಯಾಹಾರ ಅಂದರೆ ಅಗೋಚರವಾದ ಜೀವ ಆಹಾರ. ಈಗ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ಕೊಡಬೇಕೋ ಬೇಡವೋ ಎಂದು ಮಡಿಮೈಲಿಗೆ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆಯನ್ನು ವಿತರಿಸಲಾಗುತ್ತಿದೆ. ಅದಕ್ಕೂ ಆರಂಭದಲ್ಲಿ ವಿರೋಧ ಮಾಡಲಾಗಿತ್ತು. ನಂತರ ತಣ್ಣಗಾಯಿತು. ಈಗ ಸಾಹಿತ್ಯ ಸಮ್ಮೇಳನದಲ್ಲಿ ವಿವಾದ ಆಗಿದೆ. ಮಡಿ ಮೈಲಿಗೆ ಮಾಡಲಾಗುತ್ತಿದೆ. ಸಾಹಿತ್ಯ ಸಮ್ಮೇಳನ ಸಂವೇದನಾಶೀಲವಾದದ್ದು ಮತ್ತು ಒಂದು ಸಂಸ್ಕೃತಿಗೆ ಸಂದೇಶ ನೀಡುವಂಥದ್ದು. ಮಾಂಸಾಹಾರವು ಸಸ್ಯಾಹಾರದಂತೆಯೇ ಇನ್ನೊಂದು ಆಹಾರ. ಅದು ಅವರವರ ಸಂಸ್ಕೃತಿ ಮತ್ತು ಅವರವರ ಇಷ್ಟ ಎಂದು ಬಿಡದೆ ವ್ಯಾಜ್ಯ ಮಾಡುತ್ತಾ ಕೂತಿರುವವರು ಸಂವೇದನೆಯ, ಸೂಕ್ಷ್ಮತೆಯ ಸಾಹಿತ್ಯ ಸಮ್ಮೇಳನ ಮಾಡುವುದಕ್ಕೆ ಅರ್ಹತೆ ಪಡೆದಿಲ್ಲ ಎಂದು ಅನಿಸುತ್ತಿದೆ ಎಂದಿದ್ದಾರೆ.
ಈ ವಿವಾದ ಮಂಡ್ಯದಲ್ಲಿ ಹುಟ್ಟಿಕೊಂಡಿದೆ. ಮಂಡ್ಯ ಜಿಲ್ಲೆಯು ಹೃದಯವಂತರ ಜಿಲ್ಲೆ ಮತ್ತು ಅಲ್ಲಿ ಬಹುಸಂಖ್ಯಾತರು ಮಾಂಸಾಹಾರಿಗಳು. ಅಂತಹ ಕಡೆ ಸಹಜವಾಗಿ ಮಾಂಸಾಹಾರ ನೀಡಬೇಕಿತ್ತು. ಆದರೆ ಅದರ ಬದಲು ವಿವಾದ ಆಗಿದೆ. ಮಡಿ ಮೈಲಿಗೆ ಎಂದು ಮಾಂಸಾಹಾರವನ್ನು ನಿಷೇಧಿಸಿದರೆ ಬಹುಸಂಖ್ಯಾತರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಇದಾಗಬಾರದು. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿಯವರಲ್ಲಿ ನಾನು ಕೂಡ ಈ ಸಂಬಂಧ ವಿನಂತಿ ಮಾಡಿದ್ದೀನಿ. ಏನಾಗುತ್ತದೆ ಎಂದು ನೋಡಣ ಎಂದು ಪ್ರತಿಕ್ರಿಯಿಸಿದ್ದಾರೆ.
ಮನುಷ್ಯ ದಿನೇದಿನೇ ಜ್ಞಾನಿಯಾಗುತ್ತಿದ್ದಾನೆ ಎಂದು ನಾವು ಅಂದುಕೊಂಡಿದ್ದೇವೆ. ಆದರೆ ಇಂದಿನ ಕಾಲಮಾಲದಲ್ಲೂ ನಾವು ಸೇವಿಸುವ ಆಹಾರ ಅಥವಾ ಧರಿಸುವ ಉಡುಪು ಆಯಾ ಸಂಸ್ಕೃತಿಗೆ ಅನುಗುಣ ಎಂದು ನಾವು ಮನದಟ್ಟು ಮಾಡಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹರ್ಯಾಣದ ಜಜ್ಜರ್ ಎಂಬ ಊರಿನಲ್ಲಿ ದಲಿತರು ಗೋಮಾಂಸ ತಿಂದರೆಂದ ಎಂಟು ಜನರನ್ನು ಗೋರಕ್ಷಣಾ ಮಂಚ್ (ವಿಶ್ವ ಹಿಂದೂ ಪರಿಷತ್) ಸಂಘಟನೆಯವರು ಕೊಂದಿದ್ದರು. ಇಂದಿನಿಂದ ಮಾತ್ರ ಗೋಮಾಂಸ ಮಾತ್ರ ತಿನ್ನುತ್ತೇನೆ ಎಂದು ಅಂದೇ ಘೋಷಿಸಿದ್ದೆ. ಗೋಮಾಂಸ ತಿಂದೆ. ಆದರೆ ವಚನ ಭ್ರಷ್ಟನಾದೆ. ಯಾಕೆಂದರೆ ನಾನು ಮೀನು ವಗೈರೆ ಬಿಡಲಿಲ್ಲ. ಪಶ್ಚಿಮ ಬಂಗಾಳದಲ್ಲಿ ಎಒನ್ ಬ್ರಾಹ್ಮಣರು ಭಟ್ಟಾಚಾರ್ಯರು. ಈ ಪಂಗಡಕ್ಕೆ ಸೇರಿದ ಹುಡುಗಿಯನ್ನು ಗೆಳೆಯ ಸತ್ಯನಾರಾಯಣ ಮಲ್ಲಿಪಟ್ಟಣರ ಮಗ ಮದುವೆಯಾಗುತ್ತಾರೆ. ಅಲ್ಲಿನ ಸಂಪ್ರದಾಯದ ಪ್ರಕಾರ, ಮದುವೆಯಾದವನು ಮಾವನ ಮನೆಗೆ ಮೀನುಗಳನ್ನು ತರುವುದು ಸಂಪ್ರದಾಯ. ಅದನ್ನು ಅಡುಗೆ ಮಾಡಿ, ಪ್ರಸಾದ ಎಂದು ಇಡೀ ಮನೆಯವರು ಸೇವನೆ ಮಾಡಬೇಕು. ಇಲ್ಲಿ ನನಗೆ ಅರ್ಥವಾಗದೆ ಇರುವುದು- ಬ್ರಾಹ್ಮಣರು ಮೀನನ್ನು ತಿಂದರೆ ಅದು ಮಾಂಸಾಹಾರ ಆಗಲ್ಲ. ಏನಪ್ಪ ಇದರ ಅರ್ಥ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿರಿ: ಸ್ವಾರೆ ತುಂಬಾ ಬಾಡು, ಕಣ್ತುಂಬಾ ಜಾತ್ರೆ; ನುಡಿಹಬ್ಬಕ್ಕೆ ತಕರಾರೆ?
ರಾಮಕೃಷ್ಣ ಪರಮಹಂಸರು ಎಲ್ಲರನ್ನೂ ಆವಾಹಿಸಿಕೊಳ್ಳಲು ಹೊರಟವರು. ಬುದ್ಧ, ಏಸು ಮೊದಲಾದವರನ್ನು ಆವಾಹಿಸಿಕೊಂಡು ಬದುಕಿದರು. ಒಮ್ಮೆ ಪೈಗಂಬರ್ ಅವರನ್ನು ಆವಾಹಿಸಿಕೊಳ್ಳಲು ಹೋಗುತ್ತಾರೆ. ಆದರೆ ಹತ್ತಿರ ಬಂದರೂ ಪೈಗಂಬರ್ ಒಳಗೆ ಬರುವುದಿಲ್ಲ. “ನಾನು ಮೀನು ಮಾತ್ರ ತಿನ್ನುತ್ತೇನೆ, ಗೋಮಾಂಸ ತಿನ್ನುತ್ತಿಲ್ಲ. ಹೀಗಾಗಿ ಪೈಗಂಬರ್ ಬಾಗಿಲಲ್ಲೇ ನಿಂತುಕೊಳ್ಳುತ್ತಾರೆ, ಒಳಗೆ ಬರುತ್ತಿಲ್ಲ” ಎಂದು ತಿಳಿದು ಪೈಗಂಬರ್‌ರನ್ನು ಒಳಗೆ ಕರೆದುಕೊಳ್ಳಲು ಪರಮಹಂಸರು ಗೋಮಾಂಸ ತಿನ್ನುತ್ತಾರೆ. ಇದು ನಮ್ಮ ಸಂಸ್ಕೃತಿ. ಇಂಥ ವ್ಯಕ್ತಿಗಳಿರುವ ನಾಡಲ್ಲಿ ಹುಟ್ಟಿದವರು ಆಹಾರದ ವ್ಯಾಜ್ಯ ಮಾಡುತ್ತಾ ಕೂತಿದ್ದೇವೆ ಎಂದು ಟೀಕಿಸಿದ್ದಾರೆ.
ಮಡಿ, ಮೈಲಿಗೆ, ಮೇಲು, ಕೀಲು ಎಂಬುದರಲ್ಲೇ ನಮ್ಮ ಜೀವನ ವ್ಯರ್ಥವಾಗುತ್ತಿದೆ. ಹಿಟ್ಲರ್ ಸಸ್ಯಾಹಾರಿಯಾಗಿದ್ದ. ಪ್ರಾಣಿಗಳನ್ನು ಸಾಕಲೆಂದು ಒಂದು ಮನೆ ಕಟ್ಟಿಸಿಕೊಟ್ಟಿದ್ದ. ಆದರೆ ಲಕ್ಷಲಕ್ಷ ಮನುಷ್ಯರನ್ನು ಗ್ಯಾಸ್ ಚೇಂಬರ್‌ನಲ್ಲಿ ಕೂಡಿಹಾಕಿ ಬೇಯಿಸಿ, ಅದರ ಹೊಗೆ ಸೇವಿಸುತ್ತಿದ್ದ. ಯಾವುದೋ ಧರ್ಮವೋ, ಜಾತಿಯೋ, ವ್ಯಕ್ತಿಯೋ ದ್ವೇಷದ ಕಿಚ್ಚಿಗೆ ಒಳಗಾದಾಗ ಇಂಥವೆಲ್ಲ ಆಗುತ್ತವೆ ಎಂದು ಎಚ್ಚರಿಸಿದ್ದಾರೆ.