ಒಳಮೀಸಲಾತಿ ಜಾರಿ : ಜಸ್ಟಿಸ್ ನಾಗಮೋಹನ ದಾಸ್ ಆಯೋಗದ ಮುಂದಿವೆ ಕೆಲ ಪ್ರಶ್ನೆ

Date:

Advertisements

ಕೊಟ್ಟ ಮಾತಿನಂತೆ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿಗಾಗಿ ಏಕಸದಸ್ಯ ಆಯೋಗವನ್ನು ರಚಿಸಿ, ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ ದಾಸ್ ಅವರ ಹೆಗಲಿಗೆ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣದ ಶಿಫಾರಸ್ಸು ಜವಾಬ್ದಾರಿಯನ್ನು ಹೊರಿಸಿದೆ.

ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ವೈಜ್ಞಾನಿಕ ದತ್ತಾಂಶದ ಆಧಾರದಲ್ಲಿ ಮೀಸಲಾತಿ ವರ್ಗೀಕರಣ ಮಾಡಬೇಕಿದೆ. ಕರ್ನಾಟಕ ಸರ್ಕಾರದ ಬಳಿ ಜಸ್ಟಿಸ್ ಎ.ಜೆ.ಸದಾಶಿವ ಆಯೋಗದ ವರದಿ ಇತ್ತು. ಅದಕ್ಕೆ ಬಿಜೆಪಿ ಸರ್ಕಾರವೇ ಕೊನೆಯ ಮೊಳೆ ಹೊಡೆದಾಗಿದೆ. ಇನ್ನು ಜಾತಿ ಗಣತಿಯ ವರದಿಯು ವಿವಾದದ ಕೇಂದ್ರವಾಗಿದೆ. ಹೀಗಿರುವಾಗ ಒಳಮೀಸಲಾತಿಗಾಗಿ ಸೂಕ್ತ ದತ್ತಾಂಶ ಪಡೆಯಲು ಹೊಸ ಆಯೋಗವನ್ನು ರಚಿಸಿ, ತುರ್ತಾಗಿ ಮಾಹಿತಿ ಪಡೆಯಬೇಕು ಎಂಬುದು ಒಳಮೀಸಲಾತಿ ಹೋರಾಟಗಾರರ ಒತ್ತಾಸೆಯಾಗಿತ್ತು. ಇದೇ ಸರಿಯಾದ ಮಾರ್ಗವೂ ಆಗಿದ್ದರಿಂದ ಸರ್ಕಾರ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿತು.

ಉಪಚುನಾವಣೆ ಹೊಸ್ತಿಲಲ್ಲಿ ಆಯೋಗ ರಚನೆಯ ಪ್ರಸ್ತಾಪವನ್ನು ಸರ್ಕಾರ ಮಾಡಿದ್ದರಿಂದ ಇದು ಎಲೆಕ್ಷನ್ ಸ್ಟಂಟ್ ಎಂಬ ಟೀಕೆಗಳನ್ನೂ ಕೆಲವರು ಮಾಡಿದ್ದುಂಟು. ಆದರೆ ಮತದಾನ ಮುಗಿದ ತಕ್ಷಣವೇ ಆಯೋಗ ರಚನೆಯ ಪ್ರತಿಯನ್ನು ಸರ್ಕಾರ ಹೊರಬಿಟ್ಟಿದೆ. ಒಳಮೀಸಲಾತಿ ಜಾರಿಯಾಗುವರೆಗೂ ಯಾವುದೇ ಹೊಸ ನೇಮಕಾತಿ ಮಾಡುವುದಿಲ್ಲ ಎಂಬ ವಾಗ್ದಾನವನ್ನೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿರುವುದರಿಂದ ನೈತಿಕ ಒತ್ತಡವೂ ಇಲ್ಲಿ ಕೆಲಸ ಮಾಡುತ್ತಿರುವುದು ಸ್ಪಷ್ಟ.

Advertisements

ಒಳಮೀಸಲಾತಿ ಶಿಫಾರಸ್ಸು ಮಾಡುವಾಗ ಜಸ್ಟಿಸ್ ದಾಸ್ ಅವರ ಮುಂದೆ ಇರುವ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಸಮುದಾಯದಲ್ಲಿಯೂ ಇರುವ ಗೊಂದಲಗಳನ್ನು ನೋಡಬೇಕಾಗುತ್ತದೆ. ಕಾಂಗ್ರೆಸ್- ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವಿದ್ದಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕಾಗಿ ನಾಗಮೋಹನ ದಾಸ್ ಅವರ ನೇತೃತ್ವದಲ್ಲೇ ಸಮಿತಿ ರಚಿಸಲಾಗಿತ್ತು. ಎಸ್‌ಸಿ ಮೀಸಲಾತಿಯನ್ನು ಶೇ. 2ರಷ್ಟು (ಅಂದರೆ ಶೇ. 15ರಿಂದ ಶೇ.17ಕ್ಕೆ), ಎಸ್‌ಟಿ ಮೀಸಲಾತಿಯನ್ನು ಶೇ.4ರಷ್ಟು (ಅಂದರೆ ಶೇ.3ರಿಂದ ಶೇ.7ಕ್ಕೆ) ಹೆಚ್ಚಿಸಿ ಎಂದು ವರದಿ ನೀಡಲಾಗಿತ್ತು. ಆಪರೇಷನ್‌ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಸಮಿತಿಯ ಶಿಫಾರಸ್ಸಿನ ಅನ್ವಯ ಜಾರಿಗೆ ತಂದಿರುವುದಾಗಿ ಹೇಳಿತ್ತು. ರಾಜ್ಯದಲ್ಲಿ ನಡೆದಿರುವ ನೇಮಕಾತಿಗಳು ಹೆಚ್ಚಾದ ಮೀಸಲಾತಿ ಅನ್ವಯವೇ ಆಗಿವೆ ಎನ್ನುತ್ತಾರೆ ಅಧಿಕಾರಿಗಳು.

ಮತ್ತೊಂದೆಡೆ, ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಸರ್ಕಾರ ರಚಿಸಿದ ಜೆ.ಸಿ.ಮಾಧುಸ್ವಾಮಿ ನೇತೃತ್ವದ ಕ್ಯಾಬಿನೆಟ್ ಸಬ್‌ ಕಮಿಟಿಯು ಶೇ.17ರ ಮೀಸಲಾತಿ ಅನ್ವಯವೇ ಮೀಸಲಾತಿ ಹಂಚಿಕೆ ಮಾಡಿತ್ತು. ಬಿಡುಗಡೆಯೇ ಆಗದೆ ಕಡತದಲ್ಲೇ ಕೊಳೆತ ಸದಾಶಿವ ಆಯೋಗದ ವರದಿಯಲ್ಲಿ ಶೇ.15ರಷ್ಟು ಮೀಸಲಾತಿಯಲ್ಲಿ ಮಾದಿಗರಿಗೆ ಶೇ.6, ಹೊಲೆಯರಿಗೆ ಶೇ.5, ಸ್ಪೃಶ್ಯರಾದ ಭೋವಿ, ಲಂಬಾಣಿ, ಕೊರಚ, ಕೊರಮ ಸಮುದಾಯಗಳಿಗೆ ಶೇ.3 ಮತ್ತು ಉಳಿದ ಇತರೆ ಸಣ್ಣಪುಟ್ಟ ಅಸಹಾಯಕ ಸಮುದಾಯಗಳಿಗೆ ಶೇ. 1ರಷ್ಟು ಪ್ರಾತಿನಿಧ್ಯವನ್ನು ಹಂಚಿಕೆ ಮಾಡಲಾಗಿತ್ತು. ವರದಿಯಲ್ಲಿನ ಇಷ್ಟು ಸಾರಾಂಶವಷ್ಟೇ ಹೊರಗೆ ಬಿದ್ದಿತ್ತು. ಇದನ್ನು ಮೂಲೆಗೆ ತಳ್ಳಿದ ಉಪಸಮಿತಿ, ಶೇ.17ರಷ್ಟು ಮೀಸಲಾತಿಯಲ್ಲಿ ಮಾದಿಗರಿಗೆ ಶೇ.6ರಷ್ಟನ್ನೇ ಉಳಿಸಿಕೊಂಡಿತ್ತು.

ಮಾದಿಗರ ಜನಸಂಖ್ಯೆ ಹೆಚ್ಚಳವಾಗಿಯೇ ಇಲ್ಲ ಎಂಬಂತೆ ತೋರಿಸಲಾಗಿತ್ತು. ಇನ್ನುಳಿದಂತೆ ಹೊಲೆಯರಿಗೆ ಶೇ. 5.5, ಸ್ಪೃಶ್ಯ ಜಾತಿಗಳಿಗೆ ಶೇ. 4.5, ಇತರೆ ಪರಿಶಿಷ್ಟರಿಗೆ ಶೇ. 1ರಷ್ಟು ಮೀಸಲಾತಿಯನ್ನು ನೀಡಲಾಗಿತ್ತು. ಹೆಚ್ಚಿಸಲಾದ ಪ್ರಮಾಣದಲ್ಲಿ ಸ್ಪೃಶ್ಯ ಸಮುದಾಯಗಳಿಗೆ ಒಂದೂವರೆ ಪರ್ಸೆಂಟ್ ನೀಡಿದ್ದರೆ, ಮಾದಿಗರಿಗಾಗಲೀ, ಇತರೆ ಸಣ್ಣಪುಟ್ಟ ಸಮುದಾಯಗಳಿಗಾಗಲೀ ಯಾವುದೇ ಪಾಲು ಇರಲಿಲ್ಲ. ಇದನ್ನೇ ಕೇಂದ್ರಕ್ಕೆ ಶಿಫಾರಸ್ಸನ್ನೂ ಮಾಡಲಾಗಿತ್ತು. ಯಾವ ಅನುಪಾತದಲ್ಲಿ ಇದನ್ನು ಹಂಚಿಕೆ ಮಾಡಿದ್ದರೋ, ಯಾವ ಯಾವ ಅಂಕಿ-ಅಂಶ ಆಧರಿಸಿದ್ದರೋ ಎಂಬುದು ಸಮುದಾಯಗಳಿಗೆ ತಿಳಿಯಲೇ ಇಲ್ಲ. ಅಂದಿನ ಪರಿಸ್ಥಿತಿಯ ಪ್ರಕಾರ, ಒಳಮೀಸಲಾತಿಗಾಗಿ ಕೇಂದ್ರ ಸರ್ಕಾರ ತಿದ್ದುಪಡಿ ತರಬೇಕಿತ್ತು. ಆಗಿನ್ನೂ ಕೋರ್ಟ್ ತೀರ್ಪು ಹೊರಬಿದ್ದಿರಲಿಲ್ಲ. ಈಗ ನ್ಯಾಯಾಂಗ ಸ್ಪಷ್ಟ ನಿರ್ದೇಶನ ನೀಡಿ ರಾಜ್ಯ ಸರ್ಕಾರಕ್ಕೆ ಮೀಸಲಾತಿ ವರ್ಗೀಕರಣದ ಅಧಿಕಾರವಿದೆ ಎಂದಿರುವುದು ಮಹತ್ವದ ಸಂಗತಿ.

ಪರಿಶಿಷ್ಟರಿಗೆ ಹೆಚ್ಚಿಸಲಾಗಿರುವ ಮೀಸಲಾತಿ ಈಗ ಮುಂದುವರಿದುಕೊಂಡು ಹೋಗುತ್ತಿದೆ. ನ್ಯಾಯಾಲಯದಲ್ಲಿ ಯಾರೂ ಪ್ರಶ್ನಿಸದ ಕಾರಣ ಯಾವುದೇ ಸಮಸ್ಯೆ ಈವರೆಗೂ ಆಗಿಲ್ಲ. ನಮ್ಮ ಮುಂದಿರುವ ಪ್ರಶ್ನೆ- ಒಳಮೀಸಲಾತಿಯನ್ನು ಹೆಚ್ಚಾದ ಮೀಸಲಾತಿ ಅನ್ವಯ ಹಂಚುವುದು ಸರಿಯೋ ಅಥವಾ 15ರಷ್ಟು ಮೀಸಲಾತಿಯನ್ವಯ ಹಂಚುವುದೋ ಸರಿಯೋ ಎಂಬುದಾಗಿದೆ. “ಜನಸಂಖ್ಯೆಯ ಡೇಟಾ ಅನ್ವಯ ಮೀಸಲಾತಿ ವರ್ಗೀಕರಣ ಮಾಡಬೇಕಾಗುತ್ತದೆ. ಇಲ್ಲಿ ಮೀಸಲಾತಿ ಅನುಪಾತ ಮುಖ್ಯವೇ ಹೊರತು, ಶೇ.15ರಷ್ಟೋ, ಶೇ.17ರಷ್ಟೋ ಎಂಬುದಲ್ಲ. ಶೇ. 24ರಷ್ಟು ಮೀಸಲಾತಿ ಏರಿಕೆಯಾದರೂ ಅನುಪಾತದ ಅನ್ವಯವೇ ವರ್ಗೀಕರಣ ಮಾಡಬೇಕಾಗುತ್ತದೆ” ಎನ್ನುತ್ತಾರೆ ಚಿಂತಕ ಶಿವಸುಂದರ್.

“ಜಸ್ಟಿಸ್ ದಾಸ್ ಅವರು ಮೀಸಲಾತಿ ವರ್ಗೀಕರಣ ಮಾಡುವಾಗ ಶೇ.17ಕ್ಕೂ ಮತ್ತು ಶೇ.15ಕ್ಕೂ ಅನ್ವಯ ಆಗುವಂತೆ ವರ್ಗೀಕರಿಸಿ ಶಿಫಾರಸ್ಸು ಮಾಡಬೇಕು. ಆಗ ಕೋರ್ಟ್‌ನಲ್ಲಿ ಯಾರಾದರೂ ಶೇ.17ರಷ್ಟು ಮೀಸಲಾತಿ ಹಂಚಿಕೆಯನ್ನು ಪ್ರಶ್ನಿಸಿದರೂ ಸಮಸ್ಯೆಯಾಗದು. ಸರ್ಕಾರ ಜಾರಿಗೆ ತರುವಾಗ ಶೇ.17ರಷ್ಟು ವರ್ಗೀಕರಣವನ್ನೇ ಮುಂದುವರಿಸಿ ಸಮುದಾಯಕ್ಕೆ ಒಳಿತು ಮಾಡಬೇಕು. ಈ ಸಂಬಂಧ ಹೋರಾಟಗಾರರು ಮನವಿಗಳನ್ನು ಆಯೋಗದ ಮುಂದೆ ಇಡಬೇಕು” ಎನ್ನುತ್ತಾರೆ ಬರಹಗಾರ ಸಾಕ್ಯ ಸಮಗಾರ.

ಇದನ್ನು ಓದಿದ್ದೀರಾ? ಒಳಮೀಸಲಾತಿಗಾಗಿ ಜಸ್ಟಿಸ್ ನಾಗಮೋಹನದಾಸ್ ಆಯೋಗ ರಚಿಸಿದ ರಾಜ್ಯ ಸರ್ಕಾರ

ಇಂದ್ರಾ ಸಹಾನಿ ಪ್ರಕರಣದ ಅನ್ವಯ ಮೀಸಲಾತಿ ಮಿತಿ ಶೇ.50ರಷ್ಟು ಮೀರುವಂತಿಲ್ಲ. ಪರಿಶಿಷ್ಟ ಮೀಸಲಾತಿ ಹೆಚ್ಚಿಸಿದರೆ ತೀರ್ಪು ಉಲ್ಲಂಘಿಸಿದಂತೆ ಆಗುತ್ತದೆ ಎಂದು ನ್ಯಾಯಾಂಗ ಹೇಳುವ ಸಾಧ್ಯತೆ ಇದೆ. ಆಗ ಮೀಸಲಾತಿ ಹೆಚ್ಚಳ ಬಿದ್ದು ಹೋಗಬಹುದು. ಇದಕ್ಕಿರುವ ಎರಡು ಮಾರ್ಗಗಳೆಂದರೆ ಕೇಂದ್ರ ಸರ್ಕಾರ ಶೇ. 50ರಷ್ಟು ಮೀಸಲಾತಿ ಮಿತಿ ಮೀರುವ ತಿದ್ದುಪಡಿ ತಂದು ಹೊಸ ಕಾಯ್ದೆ ಮಾಡಬೇಕು, ಮೀಸಲಾತಿ ಹೆಚ್ಚಳ ಮಾಡಿರುವ ರಾಜ್ಯಗಳಿಗೆ ಶೆಡ್ಯೂಲ್ 9ರಲ್ಲಿ ರಕ್ಷಣೆ ನೀಡಬೇಕು ಎಂಬ ಅಭಿಪ್ರಾಯಗಳಿವೆ. ‘ಮುಖ್ಯವಾಗಿ ಇಂದ್ರಾ ಸಹಾನಿ ಕೇಸ್‌ನಲ್ಲಿ ವಿಧಿಸಲಾಗಿರುವ ಮೀಸಲಾತಿ ಮಿತಿಯನ್ನು ತೆರವು ಮಾಡಲು ವಿಸ್ತೃತ ಪೀಠದಲ್ಲಿ ವಿಚಾರಣೆ ನಡೆಯಬೇಕು’ ಎನ್ನುತ್ತಾರೆ ಚಿಂತಕ ಶಿವಸುಂದರ್.

ಜಸ್ಟಿಸ್ ದಾಸ್ ಅವರ ಮುಂದೆ ಸದ್ಯ ಇರುವ ಬಹು ಮುಖ್ಯವಾದ ಸವಾಲು ಆದಿ ಕರ್ನಾಟಕ (ಎ.ಕೆ), ಆದಿ ದ್ರಾವಿಡ (ಎ.ಡಿ.) ಸಮಸ್ಯೆಯನ್ನು ಪರಿಹರಿಸುವುದು. ಕೆಲವೆಡೆ ಎ.ಕೆ. ಆದವರು, ಕೆಲವೆಡೆ ಎ.ಡಿ. ಆಗಿದ್ದಾರೆ. ಇದನ್ನು ಮೀಸಲಾತಿ ವರ್ಗೀಕರಣಕ್ಕಾಗಿ ಬಗೆಹರಿಸಿಕೊಡಬೇಕಿದೆ.

ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿರುವ, ಪ್ರಾತಿನಿಧ್ಯದಲ್ಲಿ ತೀರಾ ಹಿಂದುಳಿದಿರುವ ಸಣ್ಣ ಪುಟ್ಟ ಸಮುದಾಯಗಳ ಸ್ಥಿತಿಗತಿಯನ್ನು ಸರ್ಕಾರದ ಮುಂದೆ ಇಡಬೇಕಾದ ತುರ್ತು ಆಯೋಗದ ಮುಂದಿದೆ. ಹಲವು ಜವಾಬ್ದಾರಿಗಳನ್ನು ನಿಭಾಯಿಸಿರುವ ಜಸ್ಟಿಸ್ ದಾಸ್ ಅವರಿಗೆ ಈ ಗಂಟುಗಳನ್ನು ಬಿಚ್ಚುವುದು ಅಸಾಧ್ಯವೇನೂ ಅಲ್ಲ ಎಂಬುದು ಹೋರಾಟಗಾರರ ವಿಶ್ವಾಸ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X