ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವ ತೆರಿಗೆ ಅನ್ಯಾಯದ ಬಗ್ಗೆ ಸರ್ಕಾರ ಮತ್ತು ಹಲವು ಸಂಘಟನೆಗಳು ಧ್ವನಿ ಎತ್ತುತ್ತಿವೆ. ಆದರೆ, ವಿಪಕ್ಷ ನಾಯಕ ಆರ್ ಅಶೋಕ್ ಮತ್ತು ಬಿಜೆಪಿ ನಾಯಕರು ಮಾತ್ರ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವನ್ನು ಸಮರ್ಥಿಸುವ ಬರದಲ್ಲಿ ನಿರಂತರವಾಗಿ ರಾಜ್ಯದ ವಿರುದ್ಧವಾದ ನಿಲುವನ್ನೇ ತಾಳುತ್ತಿದ್ದಾರೆ. ಈ ಮೂಲಕ ರಾಜ್ಯದವರೇ ಆದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದೊಂದಿಗೆ ಸೇರಿ ತಮ್ಮದೇ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ.
ಆರ್ ಅಶೋಕ್ ಅವರು ನೀಡುವ ಹೇಳಿಕೆಗಳನ್ನು ನೋಡಿದಾಗ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಎಷ್ಟು ತೆರಿಗೆ, ಅನುದಾನ ಬರಬೇಕಾಗಿತ್ತು ಮತ್ತು ಎಷ್ಟು ಬಂದಿದೆ ಎಂಬ ತಿಳುವಳಿಕೆ ಇಲ್ಲ ಅನಿಸುತ್ತದೆ ಅಥವಾ ಎಲ್ಲಾ ತಿಳುವಳಿಕೆ ಇದ್ದರೂ ಕೂಡಾ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿ ಮೇಲೆ ಬಿಜೆಪಿ ನಾಯಕರಿಗೆ ಇರುವ ಭಯ, ಅವರ ತಿಳುವಳಿಕೆಯನ್ನು ಮುಚ್ಚಿ ಹಾಕಿದಂತಿದೆ. ಆದಾಗ್ಯೂ, ಬಿಜೆಪಿ ನಾಯಕರು ತಿಳಿಯಬೇಕಾದ ಕೆಲವು ವಿಚಾರಗಳಿವೆ.
ತಿಳುವಳಿಕೆ ಒಂದು: ಜನಸಂಖ್ಯೆ ಲೆಕ್ಕಾಚಾರ
ಕೇಂದ್ರ ಸರ್ಕಾರಕ್ಕೆ ಹೋಗುವ ತೆರಿಗೆಯಲ್ಲಿ ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಾದ ತೆರಿಗೆಯ ಪಾಲನ್ನು ‘ಡಿವಿಸಿಬಲ್ ಪೂಲ್’ ಎಂದು ಕರೆಯುತ್ತಾರೆ. ಈ ಹಂಚಿಕೊಳ್ಳಬೇಕಾದ ತೆರಿಗೆಯ ಪಾಲಲ್ಲಿ ಶೇ.41ರಷ್ಟು ಪಾಲನ್ನು ರಾಜ್ಯಗಳ ಜೊತೆ ಹಂಚಿಕೊಳ್ಳಬೇಕು ಎಂದು 15ನೇ ಹಣಕಾಸು ಆಯೋಗ ಹೇಳುತ್ತದೆ. ಈ ಪೈಕಿ ಯಾವ ರಾಜ್ಯಕ್ಕೆ ಎಷ್ಟು ಹಣಕಾಸು ಹಂಚಿಕೆ ಮಾಡಬೇಕು ಎಂಬುದನ್ನು ಕೂಡಾ 15ನೇ ಹಣಕಾಸು ಆಯೋಗ ಹೇಳುತ್ತದೆ. ಉತ್ತರ ಪ್ರದೇಶಕ್ಕೆ ಶೇ.17, ಬಿಹಾರಕ್ಕೆ ಶೇ.10ರಷ್ಟು ತೆರಿಗೆ ಪಾಲು ನಿಗದಿ ಮಾಡಿದರೆ, ಕರ್ನಾಟಕಕ್ಕೆ ಮಾತ್ರ ಕೇವಲ ಶೇ.3.6ರಷ್ಟು ತೆರಿಗೆ ಪಾಲನ್ನು ನಿಗದಿ ಮಾಡಿದೆ.
ಇದನ್ನು ಓದಿದ್ದೀರಾ?: ತೆರಿಗೆ ಹಂಚಿಕೆ | ಅನ್ಯಾಯದ ವಿರುದ್ಧ ಬಿಜೆಪಿ ಸಂಸದರು ಧ್ವನಿ ಎತ್ತಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ
ಈ ಲೆಕ್ಕಾಚಾರದಲ್ಲಿ ಇತ್ತೀಚೆಗೆ ತೆರಿಗೆ ಹಂಚಿಕೆ ಮಾಡಿದಾಗ ಕರ್ನಾಟಕಕ್ಕೆ ಕೇವಲ 6,498 ಕೋಟಿ ರೂಪಾಯಿ ಮಾತ್ರ ತೆರಿಗೆ ಪಾಲು ಬಂದಿದೆ. ಈ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದಾಗ ಆರ್ ಅಶೋಕ್ ಅವರು ಮಾತ್ರ ರಾಜ್ಯಕ್ಕೆ ಯಾವುದೇ ಅನ್ಯಾಯವಾಗಿಲ್ಲ, ಜನಸಂಖ್ಯೆ ಆಧಾರದಲ್ಲಿ ತೆರಿಗೆ ಹಂಚಿಕೆಯಾಗುತ್ತಿದೆ. ಜನಸಂಖ್ಯೆ ಆಧಾರದಲ್ಲಿ ತೆರಿಗೆ ಹಂಚಿಕೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದು ಮನಮೋಹನ್ ಸಿಂಗ್ ಸರ್ಕಾರ ಎಂದು ಹೇಳಿದ್ದಾರೆ.
ಆದರೆ, ವಾಸ್ತವವಾಗಿ 14ನೇ ಹಣಕಾಸು ಆಯೋಗ ತನ್ನ ವರದಿಯಲ್ಲಿ ಜನಸಂಖ್ಯೆಯನ್ನು ಮಾನದಂಡವಾಗಿ ತೆಗೆದುಕೊಂಡಾಗ 1971ರ ಮತ್ತು 2011ರ ಜನಸಂಖ್ಯೆಯನ್ನು ಪರಿಗಣನೆಗೆ ತೆಗೆದುಕೊಂಡಿತ್ತು. ಈ ಮೂಲಕ ಕಡಿಮೆ ಜನಸಂಖ್ಯೆ ಇರುವ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗದಂತೆ ನೋಡಿಕೊಂಡಿತ್ತು. ಈ ಆಧಾರದಲ್ಲಿ ಕರ್ನಾಟಕಕ್ಕೆ ಶೇ.4.71 ತೆರಿಗೆ ಪಾಲನ್ನು ನಿಗದಿಪಡಿಸಲಾಗಿತ್ತು. ಆದರೆ, 15ನೇ ಹಣಕಾಸು ಆಯೋಗವು 1971ರ ಜನಸಂಖ್ಯೆಯನ್ನು ಪರಿಗಣಿಸದೆ 2011ರ ಜನಸಂಖ್ಯೆಯನ್ನು ಮಾತ್ರ ಗಣನೆಗೆ ತೆಗೆದುಕೊಂಡಿತು. 1971ರಿಂದ 2011ರವರೆಗಿನ 40 ವರ್ಷಗಳ ಅವಧಿಯಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಅಗಾಧವಾದ ಕೊಡುಗೆಯನ್ನು ನೀಡಿದ ದಕ್ಷಿಣ ಭಾರತದ ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಇದರಿಂದ ನಮಗೆ ಅನ್ಯಾಯವಾಗುತ್ತದೆ ಎಂದು ದಕ್ಷಿಣ ಭಾರತದ ರಾಜ್ಯಗಳು ಹೇಳಿದರೂ ಕೂಡಾ 15ನೇ ಹಣಕಾಸು ಆಯೋಗ ಅದನ್ನು ಗಮನಕ್ಕೆ ತೆಗೆದುಕೊಳ್ಳದೆ 2011ರ ಜನಸಂಖ್ಯೆಯನ್ನು ಮಾತ್ರ ಗಣನೆಗೆ ತೆಗೆದುಕೊಂಡು ಕರ್ನಾಟಕಕ್ಕೆ ಕೇವಲ ಶೇ.3.6ರಷ್ಟು ತೆರಿಗೆ ಪಾಲನ್ನು ನಿಗದಿಪಡಿಸಿದೆ.
ಜನಸಂಖ್ಯೆ ಆಧಾರದಲ್ಲಿ ತೆರಿಗೆ ಹಂಚಿಕೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದು ಮನಮೋಹನ್ ಸಿಂಗ್ ಸರ್ಕಾರ ಎಂದು ಆರ್ ಅಶೋಕ್ ಹೇಳಿದ್ದಾರೆ. ಆದರೆ, ಈ 15ನೇ ಹಣಕಾಸು ಆಯೋಗ ರಚನೆಯಾಗಿದ್ದು ತಮ್ಮ ವರದಿ ನೀಡಿದ್ದು ಇದೇ ಪ್ರಧಾನಿ ನರೇಂದ್ರ ಮೋದಿ ಅವರ ಕಾಲದಲ್ಲಿ. ಹಾಗಾಗಿ ರಾಜ್ಯ ಸರ್ಕಾರಕ್ಕೆ ಆದ ಅನ್ಯಾಯಕ್ಕೆ ಜವಾಬ್ದಾರಿ ಮೋದಿ ಸರ್ಕಾರ. ಹಣಕಾಸು ಆಯೋಗದ ನಿರ್ಧಾರವನ್ನು ಪ್ರಶ್ನಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಆದರೆ, ಕೇಂದ್ರ ಸರ್ಕಾರವು ದಕ್ಷಿಣ ಭಾರತದ ರಾಜ್ಯಗಳ ಮನವಿಯ ಹೊರತಾಗಿಯೂ 15ನೇ ಹಣಕಾಸು ಆಯೋಗದ ನಿರ್ಧಾರವನ್ನು ಪ್ರಶ್ನಿಸಿಲ್ಲ. ತೆರಿಗೆ ಪಾಲು ಕಡಿಮೆಯಾಗಿದ್ದರಿಂದ ಕರ್ನಾಟಕಕ್ಕೆ ಈಗಾಗಲೇ ಆಗಿರುವ ಮತ್ತು ಮುಂದೆ 2025-26ರವರೆಗೆ ಆಗುವ ನಷ್ಟ 62,097 ಕೋಟಿ ರೂಪಾಯಿ ಆಗಿದೆ.
ಈ ವರದಿ ಓದಿದ್ದೀರಾ?: ಕೇಂದ್ರದ ತೆರಿಗೆ ಅನ್ಯಾಯ ಖಂಡಿಸಿ ‘ನಮ್ಮ ತೆರಿಗೆ ನಮ್ಮ ಹಕ್ಕು’ ಹೋರಾಟ: ಡಿ ಕೆ ಶಿವಕುಮಾರ್
ತಿಳುವಳಿಕೆ ಎರಡು: ವಿಶೇಷ ಅನುದಾನವೆಲ್ಲಿ?
ಆರ್ ಅಶೋಕ್ ಅವರು ತಿಳಿದಿರಬೇಕಾದ ಇನ್ನೊಂದು ಅಂಶವೂ ಕೂಡಾ 15ನೇ ಹಣಕಾಸು ಆಯೋಗಕ್ಕೆ ಸಂಬಂಧಿಸಿದ್ದಾಗಿದೆ. 15ನೇ ಹಣಕಾಸು ಆಯೋಗವು ತಮ್ಮ ನಿರ್ಧಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಮನವರಿಕೆಯಾದಾಗ 2020-21ನೇ ವರದಿಯಲ್ಲಿ ಕರ್ನಾಟಕಕ್ಕೆ 5,495 ಕೋಟಿ ರೂಪಾಯಿ ವಿಶೇಷ ಅನುದಾನ ನೀಡುವಂತೆ ಶಿಫಾರಸು ಮಾಡಿತು. ಆದರೆ, ಈವರೆಗೆ ಕೇಂದ್ರ ಸರ್ಕಾರ ಹಣ ನೀಡಿಲ್ಲ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ವಿಶೇಷ ಅನುದಾನ ಕೇಳಿದ್ದರು. ಅದಾದ ಬಳಿಕ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಆ ಅನುದಾನವನ್ನು ನೀಡುವಂತೆ ಮನವಿ ಮಾಡಿದ್ದರು. ಆದರೆ ಅದಾದ ಬೆನ್ನಲ್ಲೇ ಈ ಶಿಫಾರಸು ರದ್ದು ಮಾಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 15ನೇ ಹಣಕಾಸು ಆಯೋಗಕ್ಕೆ ಪತ್ರ ಬರೆದರು.
ಕಾಂಗ್ರೆಸ್ ಸರ್ಕಾರ ಈ 5495 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಕೇಳಿದಾಗ ನಿರ್ಮಲಾ ಸೀತಾರಾಮನ್ ಅವರು ಈ ಹಣ ನೀಡುವುದಾಗಿ ಹೇಳಿರುವುದು ನಿಜ, ಆದರೆ ಅದು ಮಧ್ಯಂತರ ವರದಿ ಎಂದರು. ಅಂತಿಮ ವರದಿಯಲ್ಲಿ ಈ ವಿಶೇಷ ಅನುದಾನವಿಲ್ಲ. ನಾವು ಅಂತಿಮ ವರದಿಯನ್ನು ಪಾಲಿಸಬೇಕಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಆದರೆ ವಾಸ್ತವವೆಂದರೆ ಹಣಕಾಸು ಆಯೋಗವು ಎರಡು ವರದಿಯನ್ನು ನೀಡಿದೆ. ಒಂದು 2020-21ನೇ ಹಣಕಾಸು ವರ್ಷದ ವರದಿ, ಮತ್ತೊಂದು 2021ರಿಂದ 2026ರ ನಡುವೆ ಬರುವ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ವರದಿಯನ್ನು ನೀಡಿತು. ಇವೆರಡೂ ಕೂಡಾ ಅಂತಿಮ ವರದಿಯೇ ಆಗಿದೆ. ಆರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಇದನ್ನು ಮಧ್ಯಂತರ ವರದಿ ಎಂದು ಉಲ್ಲೇಖಿಸುತ್ತಿದ್ದರು.
ಆದರೆ ಇದು ಮಧ್ಯಂತರ ವರದಿಯಲ್ಲ, ಅಂತಿಮ ವರದಿಯಾಗಿದೆ. ಇದನ್ನು ಹಣಕಾಸು ಆಯೋಗದಲ್ಲಿದ್ದ ಕರ್ನಾಟಕದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಎಲ್ಲಾ ಸತ್ಯ ತಿಳಿದಿದ್ದರೂ ಕೂಡಾ ಮಧ್ಯಂತರ ವರದಿ ಎಂದು ಕೇಂದ್ರ ಹಣಕಾಸು ಸಚಿವೆಯೇ ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಇನ್ನು 2021ರಿಂದ 2026ರ ನಡುವೆ ಬರುವ ಆರ್ಥಿಕ ವರ್ಷದ ಅಂತಿಮ ವರದಿಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಆರು ಸಾವಿರ ಕೋಟಿ ರೂಪಾಯಿ ನೀಡುವ ಶಿಫಾರಸಿದೆ. ಇದರ ಬಗ್ಗೆ ಬಿಜೆಪಿ ನಾಯಕರಾದ ಆರ್ ಅಶೋಕ್, ತೇಜಸ್ವಿ ಸೂರ್ಯ, ಇತರೆ ನಾಯಕರು ಚಕಾರ ಎತ್ತಲ್ಲ. ಒಟ್ಟಾರೆಯಾಗಿ ಈ ಎರಡೂ ವಿಷಯದಿಂದ ಕರ್ನಾಟಕಕ್ಕೆ ಆದ ನಷ್ಟ 11,495 ಕೋಟಿ ರೂಪಾಯಿ ಆಗಿದೆ.
ಇದನ್ನು ಓದಿದ್ದೀರಾ? ಮತ್ತೆ ತೆರಿಗೆ ಅನ್ಯಾಯ, ಕನ್ನಡಿಗರನ್ನು ಕೆಣಕುತ್ತಿರುವ ಕೇಂದ್ರ ಸರ್ಕಾರ: ಡಿ ಕೆ ಸುರೇಶ್ ಆಕ್ರೋಶ
ತಿಳುವಳಿಕೆ ಮೂರು: ಜಿಎಸ್‌ಟಿ ಕೊರತೆ ಪರಿಹಾರ
ಜಿಎಸ್‌ಟಿ ಜಾರಿ ಮಾಡಿದಾಗ, ಕೇಂದ್ರ ಸರ್ಕಾರವು ಜಿಎಸ್‌ಟಿ ಸಂಗ್ರಹವು ವರ್ಷದಿಂದ ವರ್ಷಕ್ಕೆ ಶೇಕಡ 14ರಷ್ಟು ಹೆಚ್ಚಾಗಬೇಕು, ಒಂದು ವೇಳೆ ಹೆಚ್ಚಾಗದಿದ್ದರೆ ಕೊರತೆಯನ್ನು ಮುಂದಿನ ಐದು ವರ್ಷಗಳ ಕಾಲ ಕೇಂದ್ರ ಸರ್ಕಾರ ತುಂಬುತ್ತದೆ ಎಂದು ಹೇಳಿತ್ತು. ಅದರ ಪ್ರಕಾರ 2017ರಿಂದ 2022ರ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಸಂಗ್ರಹವಾಗಬೇಕಾಗಿದ್ದ ಜಿಎಸ್‌ಟಿ ತೆರಿಗೆ 4,92,296 ಕೋಟಿ, ಆದರೆ ಸಂಗ್ರಹವಾಗಿದ್ದು 3,26,764 ಕೋಟಿ ರೂಪಾಯಿ. 165532 ಕೋಟಿ ರೂಪಾಯಿ ಕೊರತೆ ಕಾಣಿಸಿಕೊಂಡಿತು. ಆದ್ದರಿಂದ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಜಿಎಸ್‌ಟಿ ಪರಿಹಾರವಾಗಿ 1,65,532 ರೂಪಾಯಿ ನೀಡಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರ ಈವರೆಗೆ ಕೇವಲ 1,06,258 ಕೋಟಿ ರೂಪಾಯಿ ಪರಿಹಾರ ನೀಡಿದೆ. ಕೊರತೆಯ ಮೊತ್ತ 59,274 ಕೋಟಿ ರೂಪಾಯಿಯಿದೆ. ಇದನ್ನು ಇನ್ನೂ ಕೊಟ್ಟಿಲ್ಲ.
ತಿಳುವಳಿಕೆ ನಾಲ್ಕು: ಸೆಸ್, ಸರ್‌ಚಾರ್ಜ್ ಏರಿಕೆ
ಮನ್‌ಮೋಹನ್ ಸಿಂಗ್ ಸರ್ಕಾರವಿದ್ದಾಗ ಸೆಸ್ ಮತ್ತು ಸರ್‌ಚಾರ್ಜ್ ಶೇಕಡ 8-9 ವಿಧಿಸುತ್ತಿದ್ದರು. ಆದರೆ ಕಳೆದ ಹತ್ತು ವರ್ಷದಲ್ಲಿ ಮೋದಿ ಆಡಳಿತದಲ್ಲಿ ಸೆಸ್ ಮತ್ತು ಸರ್‌ಚಾರ್ಜ್ ಶೇಕಡ 25ರವರೆಗೂ ಏರಿಕೆಯಾಗಿದೆ. ಮೋದಿ ಅವರ ಹತ್ತು ವರ್ಷದ ಆಡಳಿತದಲ್ಲಿ ತೆರಿಗೆ ಸಂಗ್ರಹ ಶೇಕಡ 192 ರಷ್ಟು ಹೆಚ್ಚಾಗಿದ್ದರೆ, ಆದರೆ ಇದೇ ಅವಧಿಯಲ್ಲಿ ಸೆಸ್ ಮತ್ತು ಸರ್‌ಚಾರ್ಜ್ ಶೇಕಡ 422ರಷ್ಟು ಹೆಚ್ಚಾಗಿದೆ. ಈ ಸುಂಕವನ್ನು ರಾಜ್ಯ ಸರ್ಕಾರದೊಂದಿಗೆ ಹಂಚಿಕೊಳ್ಳದಂತಹ ನಿಯಮವನ್ನು ಮಾಡಿಕೊಂಡಿದ್ದಾರೆ. ಅದರಿಂದಾಗಿ ಈ ತೆರಿಗೆ ಸಂಗ್ರಹದಲ್ಲಿ ಶೇಕಡ 41ರಷ್ಟು ರಾಜ್ಯ ಸರ್ಕಾರದೊಂದಿಗೆ ಹಂಚಿಕೊಳ್ಳಬೇಕೆಂದು 15ನೇ ಹಣಕಾಸು ಆಯೋಗ ಹೇಳಿದರೂ ಕೂಡಾ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ಕೇವಲ ಶೇಕಡ 36ರಷ್ಟು ತೆರಿಗೆ ಪಾಲನ್ನು ಹಂಚಿಕೊಳ್ಳುತ್ತಿದೆ. ಇದರಿಂದ ಕರ್ನಾಟಕ ಮಾತ್ರವಲ್ಲ ಒಕ್ಕೂಟ ವ್ಯವಸ್ಥೆಗೆ ಅನ್ಯಾಯವಾಗಿದೆ. ಇದರಿಂದಾಗಿ ಕರ್ನಾಟಕಕ್ಕೆ 55,000 ಕೋಟಿ ರೂಪಾಯಿ ನಷ್ಟವಾಗಿದೆ.
ಒಟ್ಟಾರೆಯಾಗಿ ಈ ನಾಲ್ಕು ಲೆಕ್ಕಾಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ 1,87,866 ಕೋಟಿ ರೂಪಾಯಿ ನಷ್ಟವಾಗಿದೆ. ಇಷ್ಟೊಂದು ಭಾರೀ ಪ್ರಮಾಣದಲ್ಲಿ ನಷ್ಟವಾಗಿದ್ದರೂ ಕೂಡಾ ಕೇಂದ್ರ ಸರ್ಕಾರ ಯಾವುದೇ ಅನ್ಯಾಯ ಮಾಡಿಲ್ಲ ತಪ್ಪೆಲ್ಲ ಕಾಂಗ್ರೆಸ್ ಸರ್ಕಾರದ್ದು ಎಂದು ಕರ್ನಾಟಕದವರೇ ಆಗಿ ಬಿಜೆಪಿ ನಾಯಕರು ರಾಜಕೀಯ ಮಾಡುವುದು ಎಷ್ಟು ಸರಿ? ಹೀಗಿರುವಾಗ ಆರ್ ಅಶೋಕ್ ಮತ್ತು ಅವರ ಪಕ್ಷಕ್ಕೆ ನಾಚಿಕೆ ಆಗಲ್ವಾ ಎಂದು ನಾವು ಪ್ರಶ್ನಿಸಬೇಕಾಗುತ್ತದೆ.
