ಒಳಮೀಸಲಾತಿ ಜಾರಿಯಲ್ಲಿ ಈಗಾಗಲೇ ಅಧಿಸೂಚಿಸಿರುವ ಹುದ್ದೆಗಳನ್ನು ಸೇರಿಸದಿರುವುದು ಅದಕ್ಕಾಗಿ ಹೋರಾಡುತ್ತಿರುವ ಸಮುದಾಯಗಳನ್ನು ವಂಚಿಸುವ ಹುನ್ನಾರವೇ?.. ಹೀಗೊಂದು ಪ್ರಶ್ನೆ ಸಾರ್ವಜನಿಕರ ನಡುವೆ ಎದ್ದಿದೆ.
ಸರಿಸುಮಾರು ಮೂರು ದಶಕಗಳ ನಿರಂತರ ಹೋರಾಟ ಹಾಗೂ ಇತ್ತೀಚಿಗೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿದ ತೀರ್ಪಿನ ನಂತರದಲ್ಲಿ ರಾಜ್ಯ ಸರ್ಕಾರಕ್ಕೆ ಒಳಮೀಸಲಾತಿ ಅನುಷ್ಠಾನದ ಕುರಿತು ಸಬೂಬು ಹೇಳದಂತೆ ಕಟ್ಟಿಹಾಕಿದೆ. ಇದರಿಂದಾಗಿ ಒಳಮೀಸಲಾತಿ ಜಾರಿ ಮಾಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ.
ಒಳಮೀಸಲಾತಿ ಜಾರಿಯಾಗುವವರೆಗೂ ಯಾವುದೇ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡುವುದಿಲ್ಲ ಎಂದು ಹೇಳಿದೆ. ಆದರೆ, ಸರ್ಕಾರಕ್ಕೆ ನಿಜಕ್ಕೂ ಕಾಳಜಿ ಇದ್ದರೆ ಪ್ರಸ್ತುತ ನೇಮಕಾತಿ ಪ್ರಕ್ರಿಯೆಯಲ್ಲಿರುವ ಎಲ್ಲಾ ಹುದ್ದೆಗಳಿಗೂ ತಡೆ ನೀಡಬೇಕಾಗಿತ್ತು. ಈಗ ಹಾಗೆ ಆಗಿಲ್ಲ. ಪ್ರಸ್ತುತ ನೇಮಕಾತಿಯ ಪ್ರಕ್ರಿಯೆಯಲ್ಲಿರುವ ಉನ್ನತ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆದ ನಂತರ ಒಳಮೀಸಲಾತಿ ಜಾರಿ ಮಾಡಿದರೂ ಆಗುವ ಪ್ರಯೋಜನವಾದರೂ ಏನು? ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಮೀಸಲಾತಿ ಹೊಂದಿಯೂ, ಅವಕಾಶ ವಂಚಿತವಾಗಿರುವ ಪರಿಶಿಷ್ಟ ಜಾತಿಯ ಒಳಪಂಗಡದವರು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಚುನಾವಣಾ ಗೆಲುವನ್ನೇ ಉದ್ದೇಶವಾಗಿಟ್ಟುಕೊಂಡು ಇಲ್ಲಿಯವರೆಗೂ ಭರವಸೆಗಳನ್ನೇ ನೀಡುತ್ತಾ, ನಯವಾಗಿ ವಂಚಿಸುತ್ತಲ್ಲೇ ಬಂದಿದ್ದವರಿಗೆ, ಇನ್ನೂ ಆ ತಂತ್ರ ಫಲಿಸುವುದಿಲ್ಲ ಎನ್ನುವುದು ಗೊತ್ತಾಗಿದೆ. ಸಮುದಾಯವೂ ಜಾಗೃತಗೊಂಡಿದೆ, ಹೋರಾಟದ ತೀವ್ರತೆಯೂ ಹೆಚ್ಚಾಗಿದೆ. ಪರಿಶಿಷ್ಟರ ಒಳಪಂಗಡಗಳ ಆಕ್ರೋಶದ ಕುದಿಗೆ ಎಲ್ಲಿ ಬಹುಮತದ ಜಂಘಾಬಲವೇ ಕುಸಿಯುವ ಆತಂಕ ರಾಜಕೀಯ ಪಕ್ಷಗಳಲ್ಲಿ ಮೂಡಿರುವುದಂತು ಸತ್ಯ.
ಸಂವಿಧಾನವನ್ನು ಬದಲಿಸುತ್ತೇವೆ ಎನ್ನುತ್ತಿದ್ದ ಪಕ್ಷದವರೇ ಒಳ ಮೀಸಲಾತಿಯ ಜಾರಿಗೆ ಪಟ್ಪು ಹಿಡಿದಿದ್ದಾರೆ. ಒಳಮೀಸಲಾತಿ ಅಸ್ತ್ರ ಬಳಸಿ ಬಹುದೊಡ್ಡ ವೋಟ್ ಬ್ಯಾಂಕ್ ಮಾಡಿಕೊಳ್ಳುವ ಯೋಜನೆಯಲ್ಲಿದ್ದಾರೆ. ಸಾಮಾಜಿಕ ನ್ಯಾಯವೇ ನಮ್ಮ ಧ್ಯೇಯ ಎನ್ನುವ ಕಾಂಗ್ರೆಸ್ ಪಕ್ಷ ನಿಧಾನ ತಂತ್ರ ಅನುಸರಿಸಿ, ಮುಂದುವರೆದ ಭಾಗವಾಗಿ, ಒಳಮೀಸಲಾತಿ ಕುರಿತು ನಿರ್ಧಾರ ಪ್ರಕಟಿಸುವುದು ಅನಿವಾರ್ಯ ಎಂದು ಗೊತ್ತಾಗಿ ಲಾಭ-ನಷ್ಟಗಳ ಲೆಕ್ಕಾಚಾರವನ್ನು ಹಾಕಿ, ಆಳೆದು ತೂಗಿ, ಸುಪ್ರೀಂ ಕೋರ್ಟ್ ತೀರ್ಪಿನ ಮೂರು ತಿಂಗಳ ನಂತರ ಸರ್ಕಾರ ಅಂತಿಮ ತೀರ್ಮಾನವನ್ನು ಮಾಡಿದೆ. ಈ ತೀರ್ಮಾನದಿಂದ ತಕ್ಷಣಕ್ಕೆ ಎಡಗೈ ಮತ್ತು ಬಲಗೈ ಸಮುದಾಯಕ್ಕಾಗುವ ಲಾಭವಾದರೂ ಏನು ಎಂಬ ಬಗ್ಗೆ ಸರ್ಕಾರವೇ ಉತ್ತರಿಸಬೇಕಾಗಿದೆ.
ಕಾಂಗ್ರೆಸ್ ಸರ್ಕಾರಕ್ಕೆ ನಿಜಕ್ಕೂ ಕಾಳಜಿ ಇದ್ದರೆ ಒಳಮೀಸಲಾತಿ ಜಾರಿಯಾಗುವರೆಗೂ, ಈಗಾಗಲೇ ಅಧಿಸೂಚಿಸಿರುವ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಮತ್ತು ಮುಂಬಡ್ತಿಯನ್ನು ತಡೆದಾಗ ಮಾತ್ರ ಮೂರು ದಶಕಗಳ ಹೋರಾಟಕ್ಕೆ ಅರ್ಥ ಬರುತ್ತದೆ. ಹೀಗೆ ನಿಯಮ ರೂಪಿಸೂವ ಸಂದರ್ಭದಲ್ಲಿ ತಡೆ ಹಿಡಿದಿರುವ ಹಲವು ಪ್ರಕರಣಗಳು ಕರ್ನಾಟಕದಲ್ಲಿವೆ. ಹಾಗಾಗಿ ರೊಟ್ಟಿ ರಾಜ್ಯ ಸರ್ಕಾರದ ಕೈಯ್ಯಲ್ಲಿದೆ. ಎಲ್ಲರಿಗೂ ಸಮಪಾಲು ಕೊಡುವ ಅವಕಾಶ, ಜವಾಬ್ದಾರಿಯೂ ಇದೆ.
ಅಕ್ಟೋಬರ್ 28ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಧೀಶರ ಅಧ್ಯಕ್ಷತೆಯಲ್ಲಿ ಒಂದು ಆಯೋಗವನ್ನು ರಚಿಸಿ ಮೂರು ತಿಂಗಳ ಗಡುವಿನಲ್ಲಿ ವರದಿ ಪಡೆಯುವುದು, ಅಲ್ಲಿಯವರೆಗೂ ಹೊಸ ಸರ್ಕಾರಿ ಹುದ್ದೆಗಳ ನೇಮಕಾತಿಗಳಿಗೆ ತಡೆ ನೀಡುವುದಾಗಿ ಸರ್ಕಾರ ಸಾರಿದೆ. ಈಗಾಗಲೇ ಹೊರಡಿಸಿರುವ ಅಧಿಸೂಚನೆಗಳಿಗೆ ತಡೆ ನೀಡುವುದಿಲ್ಲ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ, ಈಗಾಗಲೆ ಅಧಿಸೂಚನೆ ಹೊರಡಿಸಿರುವ ಹುದ್ದೆಗಳಿಗೂ ತಡೆ ನೀಡಿದಾಗ ಮಾತ್ರ ಮೂರು ದಶಕಗಳ ಹೋರಾಟಕ್ಕೆ ಅರ್ಥ ಬರುತ್ತದೆ. ಈ ಸುಲಭ ಸಾಮಾಜಿಕ ನ್ಯಾಯದ ಸೂತ್ರ ಬರಿಗಣ್ಣಿಗೆ ಕಾಣುವ ಸತ್ಯವಾಗಿದೆ.
ಪ್ರಸ್ತುತ ಕರ್ನಾಟಕ ಲೋಕಸೇವಾ ಅಯೋಗವು 387 ಗೆಜೆಟೆಡ್ ಪ್ರೋಬೇಷನರ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಉಪವಿಭಾಗಾಧಿಕಾರಿ, ಡಿವೈಎಸ್‌ಪಿ, ತಹಶೀಲ್ದಾರ್ ಅಂತಹ ಉನ್ನತ ಹುದ್ದೆಗಳನ್ನು ಹೊಂದಿರುವ ಸದರಿ ನೇಮಕಾತಿಗಳನ್ನು ಕೆಪಿಎಸ್‌ಸಿ ಮೂರು ವರ್ಷಗಳಿಗೊಮ್ಮ ನಡೆಸುತ್ತದೆ. ಹಾಗೂ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ, ಸಹಾಯಕ ಇಂಜಿನಿಯರ್, ಸಹಾಯಕ ಕಾರ್ಯಕಾರಿ ಇಂಜಿನಿಯರ್, ಪಿಡಿಒ, ತಾಲೂಕು ಹಿಂದುಳಿದ ಕಲ್ಯಾಣಾಧಿಕಾರಿ, ಪಶು ವೈದ್ಯಾಧಿಕಾರಿ, ಮುಂತಾದ ಗ್ರೂಪ್ -ಎ ಮತ್ತು ಗ್ರೂಪ್ – ಬಿ ವೃಂದದ ಹುದ್ದೆಗಳಿಗೂ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಿಗೆ ಮುಂದಿನ ಏಳು-ಏಂಟು ವರ್ಷಗಳಲ್ಲಿ ನೇಮಕಾತಿ ಮಾಡುವ ಸಂಭವನೀಯತೆ ಇರುವುದಿಲ್ಲ. ಈಗಾಗಲೇ ಅಧಿಸೂಚನೆ ಹೊರಡಿಸಿರುವ ಈ ಎಲ್ಲಾ ಹುದ್ದೆಗಳಿಗೂ ಸರ್ಕಾರ ತಡೆ ನೀಡದಿದ್ದರೆ, ಈ ಎಲ್ಲಾ ಹುದ್ದೆಗಳಿಗೂ ನೇಮಕಾತಿ ನಡೆದ ನಂತರ ಒಳಮೀಸಲಾತಿ ಜಾರಿ ಮಾಡಿದರೆ ಮಾದಿಗ ಸಮುದಾಯಕ್ಕೆ ಯಾವುದೇ ಅನುಕೂಲವಾಗುವುದಿಲ್ಲ. ಹಾಗಾಗಿ, ರಾಜ್ಯ ಸರ್ಕಾರ ಪ್ರಸ್ತುತ ತೀರ್ಮಾನವನ್ನು ಪುನರ್ ಅವಲೋಕಿಸಿ ಈ ಎಲ್ಲಾ ಹುದ್ದೆಗಳಿಗೂ ತಡೆ ನೀಡಿದಾಗ ಮಾತ್ರ ಒಳಮೀಸಲಾತಿಯ ನಿಜ ಅನುಷ್ಠಾನವಾಗಲಿದೆ. ಇಲ್ಲವಾದರೆ ಕಣ್ಣೊರೆಸುವ ತಂತ್ರ ಎನ್ನುವುದು ಸಾಬೀತಾಗುತ್ತದೆ.
ಭಾರತ ಸಂವಿಧಾನದ 371 ಜೆ, ವಿಧಿಯನ್ವಯ ಹೈದರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂದರ್ಭದಲ್ಲಿ, ವಿಧಿಯನ್ವಯ ನಿಯಮಗಳನ್ನು ರೂಪಿಸುವಾಗ ಅದಾಗಲೇ ಹೊರಡಿಸಲಾಗಿದ್ದ ನೇಮಕಾತಿ ಅಧಿಸೂಚನೆಳನ್ನು ಒಗೊಂಡಂತೆ ಮುಂಬರುವ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ತಡೆಹಿಡಿಯಲಾಗಿತ್ತು. ನ್ಯಾ. ಎಚ್. ಎನ್ ನಾಗಮೋಹನ್ ದಾಸ್ ಸಮಿತಿಯ ವರದಿಯನ್ವಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸುವಾಗಲೂ ಹಾಗೂ ಇತ್ತೀಚೆಗೆ ಸಾಮಾನ್ಯ ನೇಮಕಾತಿ ನಿಯಮಗಳು, 1978 ರನ್ವಯ ಒಂದು ಬಾರಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಿದ ಸಂದರ್ಭದಲ್ಲಿಯೂ, ಪರೀಕ್ಷೆಗೆ ಒಂದು ದಿನ ಬಾಕಿ ಇದ್ದಾಗಲೇ, ಆ ನೇಮಕಾತಿ ಅಧಿಸೂಚನೆಗಳನ್ನು ತಡೆಹಿಡಿದು ಹೊಸದಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಇಂತಹ ಪ್ರಕರಣಗಳಲ್ಲಿ ಈಗಾಲೇ ಹೊರಡಿಸಿದ್ದ ಅಧಿಸೂಚನೆಗಳನ್ನು ತಡೆಹಿಡಿದಿರುವುದು ಬರಿಗಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿರುವಾಗ, ಒಳಮೀಸಲಾತಿ ಜಾರಿಯ ವಿಷಯದಲ್ಲೂ ಇದನ್ನು ಪಾಲಿಸಿದರೆ ಸಾಮಾಜಿಕ ನ್ಯಾಯ ವಿಸ್ತರಣೆಯ ಯಾವತ್ತೂ ಅನುಷ್ಠಾನವೇ ಆಗುವುದರಲ್ಲಿ ಅನುಮಾನವಿಲ್ಲ.
ಈಗಾಗಲೇ ಹಲವರು ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ ಸಿ ಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಒಳಮೀಸಲಾತಿಯ ಹೋರಾಟಗಾರು, ಸಮುದಾಯದವರು ಎಲ್ಲರೂ ಒಕ್ಕೊರಲಿನಿಂದ ಈ ಬೇಡಿಕೆಗೆ ಧ್ವನಿ ಎತ್ತಬೇಕಿದೆ. ಅದು ಸಾಧ್ಯವಾಗದೆ ಕುರ್ಚಿ ಆಸೆಗೆ ಕೈಕಟ್ಟಿ ಕುಳಿತು, ‘ಊರು ಕೊಳ್ಳೆ ಹೊಡೆದ ಮೇಲೆ ಕೋಟೆಬಾಗಿಲು ಹಾಕಿದರೆ ಏನೂ ಪ್ರಯೋಜನವಿಲ್ಲ’ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.
ಒಳಮೀಸಲಾತಿಗಾಗಿ ಮೂರು ದಶಕಗಳಿಂದ ನಡೆಸಿದ ಹೋರಾಟ ಯಾವ ಪ್ರಮಾಣದ್ದೂ ಅಂದರೆ ಅಕ್ಷರಗಳಿಗೆ ಸಿಗುವಷ್ಟು ಸುಲಭವಾಗಿಯೇನೂ ಇಲ್ಲ. ಮೀಸಲಾತಿಯಿಂದ ನಿರೀಕ್ಷಿತ ಮಟ್ಟದಲ್ಲಿ ಅನುಕೂಲ ಪಡೆಯದವರಿಗೆ ಭರವಸೆಯಾಗಿರುವ ಒಳಮೀಸಲಾತಿ ನೆಮ್ಮದಿ, ಗೌರವದ, ಸ್ವಾಭಿಮಾನದ ಬದುಕು ರೂಪಿಸಲು ನೆರವಾಗಬೇಕಾದರೆ ಉನ್ನತ ಹುದ್ದೆಗಳು ನ್ಯಾಯ ಸಮ್ಮತವಾಗಿ ದಕ್ಕಬೇಕಿದೆ.
ಇದನ್ನು ಓದಿದ್ದೀರಾ? ವಕ್ಫ್ ಆಸ್ತಿ ದೇವರ ಹೆಸರಿನಲ್ಲಿ ಮುಸ್ಲಿಮರೇ ನೀಡಿದ ದಾನ; ರಾಜಕೀಯ ಕಾರಣಕ್ಕೆ ಕೆಸರೆರಚಾಟ ಸಲ್ಲದು
1980-90ರ ದಶಕದಲ್ಲಿ ಮಾದಿಗ ಸಮುದಾಯ ಶಿಕ್ಷಣ ಮತ್ತು ಉದ್ಯೋಗದಲ್ಲಿ ಯಾವ ಪರಿಸ್ಥಿತಿಯಲ್ಲಿ ಇತ್ತೋ, ಆ ಸ್ಥಿಯಲ್ಲಿ ಹೊಲಯ ಸಮುದಾಯ ಈಗ ಆ ಸ್ಥಿತಿಗೆ ತಲುಪಿದೆ. ಕಳೆದ ಹಲವು ವರ್ಷಗಳಿಂದ ಶಿಕ್ಷಣ, ಉದ್ಯೋಗ ಮತ್ತು ಸರ್ಕಾರದ ಯೋಜನೆಗಳಲ್ಲಿ ಎಡಗೈ ಮತ್ತು ಬಲಗೈ ಪಡೆಯುತ್ತಿರುವ ಪಾಲು ತೀರಾ ಕಡಿಮೆಯಾಗಿದೆ. ಈ ಬಗ್ಗೆ ಎರಡು ಸಮುದಾಯಗಳಿಗೂ ಮನವರಿಕೆ ಆದಂತೆ ಕಾಣುತ್ತದೆ. ಇದಕ್ಕೆ ದಾವಣಗೆಯಲ್ಲಿ ಒಳಮೀಸಲಾತಿಗಾಗಿ ಎಡಗೈ, ಬಲಗೈ ಸಮುದಾಯಗಳು ಜಂಟಿಯಾಗಿ ಒಟ್ಟುಗೂಡಿ ನಡೆಸಿದ ಹೋರಾಟವೇ ಸಾಕ್ಷಿಯಾಗಿದೆ. ಒಳಮೀಸಲಾತಿ ಬಗ್ಗೆ ಪೂರ್ವಾಗ್ರಹವಾಗಿ ಯೋಚಿಸುವ ಬದಲು ನಾವು ಯಾವ ಸ್ಥಿತಿಯಲ್ಲಿದ್ದೇವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯವಾಗಿದೆ.
ಇಷ್ಟಾಗಿಯೂ, ರಾಜ್ಯ ಕಾಂಗ್ರೆಸ್ ಸರ್ಕಾರ ಈಗಾಗಲೇ ಹೊರಡಿಸಿರುವ ಅಧಿಸೂಚನೆಗಳನ್ನು ತಡೆಯದೆ ‘ಅದೇ ತಾಳ, ಅದೇ ರಾಗ’ ಹಾಡಿದರೆ ಸಾಂಪ್ರದಾಯಿಕ ಮತಬ್ಯಾಂಕ್ ಆಗಿರುವ ಪರಿಶಿಷ್ಟರ ಬಹುಸಂಖ್ಯಾತ ಎಡಗೈ ಸಮುದಾಯದ ಮತಗಳನ್ನು ಕಳೆದುಕೊಳ್ಳುವುದರ ಜೊತೆಗೆ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಸ್ಪೃಶ್ಯ ಜಾತಿಯ ಯುವಕರೊಂದಿಗೆ ಸ್ಪರ್ಧಿಸುತ್ತಿರುವ ಬಲಗೈ ಸಮುದಾಯದ ಯುವ ಸಮುದಾಯದ ಮತ ಕಳೆದುಕೊಂಡು ಕರ್ನಾಟಕದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಕುಂದು ತಂದುಕೊಳ್ಳುವುದಲ್ಲಿರಲ್ಲಿ ಯಾವುದೇ ಅನುಮಾನ ಇಟ್ಟುಕೊಳ್ಳುವಂತಿಲ್ಲ. ಎಲ್ಲವೂ ಅಂಗೈಯ್ಯಲ್ಲಿದೆ. ಆಯ್ಕೆಯೂ ಸರ್ಕಾರದ ಕೈಯಲ್ಲಿದೆ.

true words