ಲಕ್ಷ್ಮೀನಾರಾಯಣ ಅವರ ‘ಕೀಟಲೆಯ ದಿನಗಳು’ ಕೃತಿ ಆತ್ಮಕಥನದ ಲೇಪವಿದ್ದರೂ, ಅವರ ವಿಡಂಬನೆ, ಗೇಲಿ, ತಮಾಷೆ, ವ್ಯಂಗ್ಯದ ಹಿಂದೆ 'ಸುಧಾರಣೆ'ಯಾಗಬೇಕೆಂಬ ಹಂಬಲವಿದೆ. ಅವರ ಸಾಹಿತ್ಯವು ಹಾಸ್ಯವನ್ನು ಬಳಸಿಕೊಂಡು ಮಾಡಿರುವ ರಚನಾತ್ಮಕ ಸಾಮಾಜಿಕ ವಿಮರ್ಶೆಯ ಗುಣವನ್ನು ಹೊಂದಿದೆ.
ಗೆಳೆಯ ಲಕ್ಷ್ಮೀನಾರಾಯಣನ ಆತ್ಮಕತೆಯ ಸ್ವರೂಪದ ಅಂಕಣ ಬರಹಗಳನ್ನು ಓದುತ್ತಿದ್ದಾಗ ನನಗೆ ಡಯೋಜೆನೆಸ್(ಕ್ರಿಸ್ತಪೂರ್ವ ಐದನೇ ಶತಮಾನದಲ್ಲಿದ್ದ ಗ್ರೀಸಿನ ವಿಲಕ್ಷಣ ತತ್ವಜ್ಞಾನಿ) ಸದಾ ನೆನಪಾಗುತ್ತಿದ್ದ. ಇವು ಮನುಷ್ಯ ಸಮಾಜದ ಪೊಳ್ಳುತನ, ಆಡಂಬರ ಪ್ರದರ್ಶನ, ಡೌಲು, ಹುಸಿ ಪ್ರತಿಷ್ಠೆಗಳ ಬಲೂನಿಗೆ ಸೂಜಿ ಮೊನೆಯಾದ ಬರಹಗಳು. ಹಾಗೆಯೇ ಮನುಷ್ಯ ಸಮಾಜದ ಘನತೆ, ಮನುಷ್ಯ ಸಂಬಂಧಗಳ ಮಾರ್ದವತೆ, ಪ್ರೀತಿ, ಕಕ್ಕುಲಾತಿಗಳನ್ನು, ಗೆಳೆತನದ ತಂದುಕೊಡುವ ಅನುಭೂತಿಯನ್ನು, ಸರಳ ಬದುಕಿನ ಆನಂದವನ್ನು ಆರಾಧಿಸುವ ಆಶಯದ ಅಂತಃಕರಣವನ್ನು ತಟ್ಟುವ ಲೇಖನಗಳು. ಇಲ್ಲಿ ಸ್ಥಾಯಿಯಾಗಿರುವುದು ಹಾಸ್ಯ, ವಿಡಂಬನೆ, ವ್ಯಂಗ್ಯ, ವಿನೋದ ಹಲವೆಡೆ ಕುಚೋದ್ಯ. ಈ ದೊಡ್ಡ ಸಂಪುಟದ ಪ್ರತಿ ಹಾಳೆಯಲ್ಲೂ ಗಾಢವಾಗಿ ತುಂಬಿಹೋಗಿರುವ ಈ ಹಾಸ್ಯ ರಸಾಯನ ಸಹಜವಾಗಿಯೇ ಡಯೋಜೆನೆಸ್‌ನನ್ನು ನೆನಪಿಗೆ ತರುತ್ತದೆ.
ಈ ಅಂಕಣ ಬರಹಗಳ ಸಂಗ್ರಹ ‘ಕೀಟಲೆಯ ದಿನಗಳು’ ಕೃತಿ ಬಗ್ಗೆ ಮುನ್ನುಡಿ ಬರೆಯಲು ಆರಂಭಿಸಿದಾಗ ಲಕ್ಷ್ಮೀನಾರಾಯಣನ ಬದುಕಿನ ಸಂಗತಿಗಳು ಮತ್ತು ಬರಹಗಳಲ್ಲಿನ ವಿವರಗಳ ನಡುವಿನ ಸಂಬಂಧಗಳ ಪ್ರಸ್ತಾಪವಿಲ್ಲದೆ ಬರೆಯುವ ಮುನ್ನುಡಿ ಅಪೂರ್ಣ ಎನಿಸಿತು. ಇದು ಪರಿಷ್ಕಾರಗೊಂಡ ಅಂಕಣಗಳ ಸಂಕಲನವಾದರೂ ಇಲ್ಲಿ ಬರುವ ಪಾತ್ರ, ಸ್ಥಳ, ಸನ್ನಿವೇಶ ಎಲ್ಲವೂ ಕಾಲದೇಶ ಬದ್ಧವಾದವು. ಎರಡು ವ್ಯಕ್ತಿಗಳ ಮೂಲ ಹೆಸರನ್ನು ಬದಲಿಸಿರುವುದು ಬಿಟ್ಟರೆ ಇಲ್ಲಿ ಅವರ ಜೊತೆ ಒಡನಾಡಿದ ವ್ಯಕ್ತಿಗಳೆಲ್ಲ ಸ್ವಂತ ಹೆಸರಿನಲ್ಲೇ ಹಾಜರಾಗಿವೆ. ಇಲ್ಲಿ ಬರುವ ಸನ್ನಿವೇಶಗಳೆಲ್ಲವೂ ನಿಜ ಜೀವನದಲ್ಲಿ ಘಟಿಸದಂಥವು. ಬಹುತೇಕ ಘಟನೆಗಳಿಗೆ ಅವರು ಸಾಕ್ಷಿ. ಅನೇಕ ವೇಳೆ ನಿರೂಪಣೆ, ವಿವರಗಳು ಉತ್ಪ್ರೇಕ್ಷಿತವಾದಂತೆ ಕಂಡು ಬಂದರೂ ವಾಸ್ತವದಲ್ಲಿ ಅವನ್ನು ಅಂಡರ್ ಪ್ಲೇ ಮಾಡಿದ್ದಾರೆಂದು ನನಗನಿಸುತ್ತದೆ.
ಬದುಕಿನುದ್ದಕ್ಕೂ ಬಿಂದಾಸಾಗಿ ಬಾಳಿದ ಲಕ್ಷ್ಮೀನಾರಾಯಣ ಅವರು ಅರವತ್ತರ ನಂತರ ಅಂಕಣ ಬರಹಗಾರರಾಗಿ ಸ್ಫೋಟಿಸುವರೆಂದು ಯಾರೂ ಊಹಿಸಿರಲಿಲ್ಲ. ಸಾಹಸಗಳ ಬೆನ್ನುತ್ತುವುದರಲ್ಲಿ ನಿಪುಣರಾದ ಅವರಿಗೆ ಮಾತ್ರ ಇಂಥವು ಸಾಧ್ಯ. ಈ ಕೃತಿಯನ್ನು ಓದಿ ಮುಗಿಸಿದಾಗ ಇದೊಂದು ಕಾಲಾನುಕ್ರಮಣಿಕೆಯನ್ನು ಧಿಕ್ಕರಿಸಿದ ಚದುರಿದ ಆತ್ಮ ಕಥನದಂತೆ ಕಾಣುತ್ತದೆ. ಆತ್ಮ ಕಥನದ ಲೇಪವಿದ್ದರೂ, ಈಗಾಗಲೇ ಹೇಳಿದಂತೆ ಸಕಲವನ್ನೂ ವಕ್ರ ದೃಷ್ಟಿಯಿಂದ ನೋಡಿ ನಗಾಡುವ ಡಯೋಜೆನೆಸ್ ಗುಣ ಇಲ್ಲಿ ಭದ್ರವಾಗಿ ನೆಲೆಯೂರಿದೆ. ವ್ಯಕ್ತಿ, ಘಟನೆ ಅಥವಾ ಯಾವುದೋ ಒಂದು ವಿಷಯವನ್ನು ತಿಳಿ ಹಾಸ್ಯದಲ್ಲಿ ನಿರೂಪಿಸುವ ಕನ್ನಡದ ಸಂದರ್ಭದಲ್ಲಿ ಹರಟೆ ಅಥವಾ ಲಲಿತ ಪ್ರಬಂಧ ಎನ್ನಬಹುದಾದ ವರ್ಗಕ್ಕೆ ಇಲ್ಲಿನ ಬರಹಗಳನ್ನು ಸೇರಿಸಬಹುದಾದರೂ ಆ ವರ್ಗಿಕರಣವನ್ನು ಮೀರುವ ಗುಣಗಳು ಇಲ್ಲಿನ ಲೇಖನಗಳಿಗಿದೆ. ಒಂದಂತೂ ಸತ್ಯ. ಈ ಪುಸ್ತಕವನ್ನು ಓದಿ ಮುಗಿಸಿದ ನಂತರ ಇದೊಂದು ಕನ್ನಡದಲ್ಲಿ ಸಂಭವಿಸಿದ ಹೊಸದೊಂದು ಮಾರ್ಗದ ಬರವಣಿಗೆ ಅನಿಸದಿರದು. ಲವಲವಿಕೆಯನ್ನೇ ಹೊದ್ದುಕೊಂಡ ಭಾಷೆಯು ಓದುಗನನ್ನು ಗಿರಗಿಟ್ಲೆ ಆಡಿಸಿ ಆನಂದದ ಅಮಲಿನಲ್ಲಿ ತೇಲಿಸುವುದಂತೂ ನಿಜ.
ಲಕ್ಷ್ಮೀನಾರಾಯಣ ಅವರು ತಮ್ಮ ಬದುಕಿನ ಚದುರಿದ ಚಿತ್ರಗಳನ್ನು ಇಲ್ಲಿ ಮೂರು ಭಾಗಗಳಲ್ಲಿ ಸಂಕಲಿಸಿದ್ದಾರೆ. ಪ್ರತಿಯೊಂದು ಭಾಗವು ಅವರ ಬದುಕಿದ ಬೇರೆ ಬೇರೆ ಸ್ಥಳಗಳಲ್ಲಿ ಘಟಿಸಿದ ಸನ್ನಿವೇಶಗಳನ್ನೊಳಗೊಂಡಿದೆ. ಮೊದಲ ಭಾಗದಲ್ಲಿ ಅವರು ಹುಟ್ಟಿದ ಹಾಸನ ನಗರದಲ್ಲಿನ ಬಾಲ್ಯ ಮತ್ತು ವಿದ್ಯಾಭ್ಯಾಸ, ಕೌಟುಂಬಿಕ ಬಾಂಧವ್ಯ, ಅಲ್ಲಿನ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಜನಪರ ಹೋರಾಟಗಳು ಮತ್ತು ಹಾಸನದ ಸುತ್ತಮುತ್ತಲಿನ, ವಿಶೇಷವಾಗಿ ಸಕಲೇಶಪುರದ ವಿಶಿಷ್ಟ ಜನರ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಬಾಲ್ಯಕಾಲದ ತುಂಟ ಹುಡುಗರ ಸಾಹಸಗಳು, ಕಳ್ಳತನಗಳು, ಶಾಲೆಯಲ್ಲಿನ ಪೇಚಿನ ಪ್ರಸಂಗಗಳು, ಸಕಲೇಶಪುರದ ರಸಿಕ ಜನರ ಮೋಜಿನ ಕತೆಗಳನ್ನು ಹೆಣೆದಿದ್ದಾರೆ. ತುಂಟ ಮಕ್ಕಳನ್ನು ಕಟ್ಟಿಕೊಂಡು ಹೆಣಗುವ ಸಕಲ ತಾಯಂದಿರ ಪ್ರತಿನಿಧಿಯನ್ನು ಅವರ ಅಮ್ಮನಲ್ಲಿ ಕಂಡಿದ್ದಾರೆ. ತಮ್ಮನ್ನು ತಿದ್ದಿ ತೀಡಿ ಬೆಳೆಸಿದ ಗುರುಗಳು ಮತ್ತು ರೈತ ನಾಯಕ ಪಾಂಡುರಂಗ ವಿಠಲರ ವ್ಯಕ್ತಿತ್ವವನ್ನು ಸಾರಿ ಹೇಳುವ ಆಪ್ತ ನುಡಿನಮನಗಳು ಸಹ ಈ ಭಾಗದಲ್ಲಿವೆ.
ಎರಡನೇ ಭಾಗವು ಕೃಷಿ ವಿಜ್ಞಾನ ಪದವಿ ಕಲಿಯಲು ಬಂದ ಮುಗ್ಧ ವಿದ್ಯಾರ್ಥಿಯ ಕಾಲೇಜು ಬದುಕು ಮತ್ತು ಬೆಂಗಳೂರು ನಗರದಲ್ಲಿನ ಆತನ ಹುಡುಕಾಟವನ್ನು ಒಳಗೊಂಡಿದೆ. ಮುಖ್ಯವಾಗಿ ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಹಾಸನದ ಬಡಾವಣೆ ಎಂದೇ ಕರೆಯುವ ಕೆಂಚಾಂಬ ಲಾಡ್ಜಿನ ಸುತ್ತಮುತ್ತ ಲೇಖಕ ಮತ್ತು ಗೆಳೆಯ ದೀಪಿ(ಪ್ರದೀಪ್) ಕೈಗೊಂಡ ಯಾತ್ರೆಗಳ, ಭೇಟಿಯಾದ ವ್ಯಕ್ತಿಗಳ, ಎದುರಿಸಿದ ಸನ್ನಿವೇಶಗಳ ಅಪರೂಪದ ವಿವರಗಳು ಇಲ್ಲಿವೆ. ಇಲ್ಲಿ ಲಕ್ಷ್ಮೀನಾರಾಯಣರ ಚಿತ್ರಕ ಶಕ್ತಿ ಪರಾಕಾಷ್ಠೆ ಮುಟ್ಟಿದೆ. ಎಪ್ಪತ್ತರ ದಶಕದ ಬೆಂಗಳೂರಿನ ಸಾಮಾಜಿಕ, ಸಾಂಸ್ಕೃತಿಕ ಜಗತ್ತಿನ, ಜನಜೀವನ ಬದುಕಿನ ಸೀಳು ನೋಟವೊಂದನ್ನು ಇಲ್ಲಿನ ಬರಹಗಳು ಕಟ್ಟುತ್ತವೆ.
ಇದನ್ನು ಓದಿದ್ದೀರಾ?: ಲಂಕೇಶರ ಒಟ್ಟು ಕಥನವನ್ನು ವರ್ತಮಾನದಲ್ಲಿ ಗ್ರಹಿಸುವ ವಿಧಾನಗಳೇನು? ಒಂದು ಪ್ರವೇಶಿಕೆ
ಬ್ಯಾಂಕಿನಲ್ಲಿನ ಅವರ ವೃತ್ತಿ ಬದುಕಿನ ಬವಣೆಗಳು ಮೂರನೆಯ ಭಾಗದಲ್ಲಿವೆ. ತಮ್ಮ ರಾಜಿಯಾಗದ ಪ್ರವೃತ್ತಿಯಿಂದಾಗಿ 26 ವರ್ಷಗಳಲ್ಲಿ ಹದಿನಾರು ಬಾರಿ ಬೇರೆ ಬೇರೆ ವಿವಿಧ ಸ್ಥಳಗಳಿಗೆ ವರ್ಗಾವಣೆಗೊಂಡ ಅವರು ತಾವು ಬದುಕಿದ ಸ್ಥಳಗಳಲ್ಲಿನ ಅನುಭವಗಳನ್ನು ದಾಖಲಿಸಿದ್ದಾರೆ. ಅವರ ಯಾತ್ರೆ ದೂರದ ಬಿಜಾಪುರದ ಕುಗ್ರಾಮ ತಾಂಬಾದಿಂದ ಹಿಡಿದು, ಮಧುಗಿರಿ, ಕೋಲಾರ, ಬಾಗೇಪಲ್ಲಿಯ ಪಾತಪಾಳ್ಯ, ಹಾಸನ, ಬಳ್ಳಾರಿಯ ಕಂಪ್ಲಿ, ತಮಿಳುನಾಡಿನ ಹೊಸೂರುವರೆಗೂ ವ್ಯಾಪಿಸಿದೆ. ಅಲ್ಲಿನ ವಿಶಿಷ್ಟ ಪರಿಸರ ಮತ್ತು ದೊರೆತ ಗೆಳೆಯರ ಜೊತೆಗಿನ ಮೋಜಿನ ಪ್ರಸಂಗಗಳು ಬೆಂಗಳೂರಿನ ಹಲಸಿನ ಹಣ್ಣಿನ ಪರಿಮಳ, ಬಿಜಾಪುರದ ಮಿರ್ಚಿ ಮಂಡಕ್ಕಿಯ ‘ಆಹಾ–ಖಾರ’ದ ಸವಿಯೊಡನೆ ಮಧುಗಿರಿಯ ‘ಕುಕ್ಕ ಮಾಂಸ’ದ ನರುಗಂಪು ಸೂಸಿಕೊಂಡೇ ಬರುತ್ತವೆ.
ಲಕ್ಷ್ಮೀನಾರಾಯಣ ಅವರ ಬರಹದಲ್ಲಿ ಬೇರೆಲ್ಲ ವಿನೋದ ಸಾಹಿತ್ಯದ ಬರಹಗಾರರಿಗಿಂತ ಭಿನ್ನವಾಗುವುದು ಅವರಿಗಿರುವ ಪ್ರಖರವಾದ ಸಾಮಾಜಿಕ ಕಳಕಳಿಯಿಂದ, ಅವರದು ಸೂಕ್ಷ್ಮವಾಗಿ ಪರಿವೀಕ್ಷಿಸುವ ಮನಸ್ಸು. ನಮ್ಮ ಸಮಾಜದ ಎಲ್ಲ ವಿವರಗಳನ್ನು ಅದು ಗ್ರಹಿಸಬಲ್ಲದು. ನಮ್ಮ ಗ್ರಾಮೀಣ ಬದುಕು, ಅದು ತರುವ ಕೀಳರಿಮೆ, ಅಲ್ಲಿನ ಹೊಲಸುತನ, ವಿದ್ಯಾಭ್ಯಾಸದ ಸ್ವರೂಪ, ರಾಜಕೀಯ ಕ್ಷೇತ್ರದ ಢಾಂಬಿಕತನ, ಶಿಕ್ಷಣ ಕ್ಷೇತ್ರದ ಮಾಲಿನ್ಯ, ಸಮಾಜದಲ್ಲಿ ಸೃಷ್ಟಿಯಾಗುವ ವಿಕೃತಗಳೆಲ್ಲವನ್ನೂ ಮನಸ್ಸು ಗ್ರಹಿಸಿದೆ. ಅವರ ಬರಹಗಳ ಉದ್ದೇಶ ನಗಿಸುವುದು ಮಾತ್ರವಲ್ಲ. ಅಲ್ಲಿ ಗೇಲಿ ಮುಖ್ಯವಲ್ಲ. ತಮಾಷೆ ಅನುಷಂಗಿಕವಾದರೂ ಅವರು ತಲುಪಲು ಉದ್ದೇಶಿಸಿರುವ ಗುರಿಯೇ ಬೇರೆ. ಒಟ್ಟು ಸಮಾಜದ ಅಸಾಂಗತ್ಯ, ಮನೆ ಮಾಡಿ ಕುಳಿತಿರುವ ದೌರ್ಬಲ್ಯ, ಜನರ ಕುಟಿಲತೆ, ಆವರಿಸಿರುವ ಮೌಡ್ಯ, ಪ್ರಮುಖವಾಗಿ ಶಿಕ್ಷಣ, ಸಮಾಜ, ಆಡಳಿತ ಮತ್ತು ರಾಜಕೀಯ ರಂಗದಲ್ಲಿ ಆಗುತ್ತಿರುವ ಅನಾಹುತುಗಳಿಂದ ರೊಚ್ಚಿಗೆದ್ದ ಮನಸ್ಸು ತನ್ನ ಪ್ರತಿಭಟನೆಯನ್ನು ದಾಖಲಿಸಲು ಆಯ್ದುಕೊಂಡಿರುವ ಮಾರ್ಗವಿದು. ಅಲ್ಲದೆ ಹಲ್ಲುಕಚ್ಚಿ ಓದಿ, ದುಡಿದು ಜೀವನ ಸಾಗಿಸುವ ಲೋಕಮಾನ್ಯ ಜೀವನ ವಿಧಾನವೇ ಅವರಿಗೆ ಅಸಂಗತ ಎನ್ನಿಸಿದೆ. ರೂಢಿಗತ ಮೌಲ್ಯಗಳು ಮೌಢ್ಯದಂತೆ ಕಂಡಿವೆ. ಶಾಲಾಶಿಕ್ಷಣ ವಿಧಾನವೇ ಹಿಂಸೆಯಾಗಿದೆ. ಅದನ್ನು ಪ್ರತಿಭಟಿಸುವ ಮಾರ್ಗವಾಗಿ ಅವರು ಹಾಸ್ಯವನ್ನು ಬದುಕು ಮತ್ತು ಬರಹಗಳಲ್ಲಿ ಬಳಕೆ ಮಾಡುತ್ತಾ ಬಂದಿದ್ದಾರೆ ಎನಿಸುತ್ತದೆ. ಅವರ ವಿಡಂಬನೆ, ಗೇಲಿ, ತಮಾಷೆ, ವ್ಯಂಗ್ಯದ ಹಿಂದೆ ‘ಸುಧಾರಣೆ’ಯಾಗಬೇಕೆಂಬ ಹಂಬಲವಿದೆ. ಅವರ ಸಾಹಿತ್ಯವು ಹಾಸ್ಯವನ್ನು ಬಳಸಿಕೊಂಡು ಮಾಡಿರುವ ರಚನಾತ್ಮಕ ಸಾಮಾಜಿಕ ವಿಮರ್ಶೆ. ಜೊತೆಗೆ ಅವರ ಜನಪರ ಹೊರಾಟಗಳ ಒಲವು, ಮಾನವೀಯ ಕಾಳಜಿಗಳು ಇಲ್ಲಿ ಹಾಸ್ಯ ಲೇಪನದೊಡನೆ ಉದ್ದೀಪನಗೊಂಡಿವೆ. ಇದಕ್ಕೆ ಈ ಕೃತಿಯಲ್ಲಿ ಹೇರಳ ದೃಷ್ಟಾಂತಗಳು ದೊರೆಯುತ್ತವೆ.
ಲಕ್ಷ್ಮೀನಾರಾಯಣ ಅವರು ನಗೆಯುಕ್ಕಿಸುವ, ವಿಷಾದ ತುಂಬುವ, ಕಾಡುವ, ಕೆಣಕುವ, ಚಿಂತನೆಗೆ ಹಚ್ಚುವ ಕನ್ನಡಕ್ಕೆ ವಿಶಿಷ್ಟ ಬಗೆಯ ಆತ್ಮಕಥನವನ್ನು ನೀಡಿದ್ದಾರೆ.
-ಡಾ.ಕೆ. ಪುಟ್ಟಸ್ವಾಮಿ
ಎಸ್.ಎನ್. ಲಕ್ಷ್ಮೀನಾರಾಯಣರ 'ಕೀಟಲೆಯ ದಿನಗಳು' ಕೃತಿ 9.7.23ರ ಭಾನುವಾರ, ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಬೆಳಗ್ಗೆ 10ಕ್ಕೆ ಲೋಕಾರ್ಪಣೆಗೊಳ್ಳಲಿದೆ. ಪುಸ್ತಕಕ್ಕಾಗಿ: ಅಮೂಲ್ಯ ಪ್ರಸ್ತಕ, 94486 76770