ಕಾನ್ಶಿರಾಮ್ | ಸಾವಯವ ಬುದ್ಧಿಜೀವಿ ಮತ್ತು ಬಹುಜನ ನಾಯಕ- ಡಾ. ಸಿ.ಜಿ. ಲಕ್ಷ್ಮೀಪತಿ

Date:

Advertisements
ಮಾನ್ಯವರ ಕಾನ್ಶಿರಾಮ್ ಅವರ ಜನ್ಮದಿನವಾದ ಇಂದು ಅವರ ಬಹುಪ್ರಸಿದ್ಧ ಕೃತಿ 'ಚಮಚಾ ಏಜ್'ನ ಕನ್ನಡ ಅನುವಾದ ಬಿಡುಗಡೆಯಾಗುತ್ತಿದೆ (ಸ್ಥಳ: ಸಂಸ ಬಯಲು ರಂಗಮಂದಿರ, ಸಂಜೆ 5.30) ರೀಟಾ ರೀನಿ ಅವರು ಕನ್ನಡಕ್ಕೆ ತಂದಿರುವ ಈ ಕೃತಿಗೆ ಡಾ.ಸಿ.ಜಿ.ಲಕ್ಷ್ಮೀಪತಿಯವರು ಬರೆದಿರುವ ಮುನ್ನುಡಿಯಿದು.

ಕಾನ್ಶಿರಾಮ್‌ರವರನ್ನು ಪ್ರಖರ ಪ್ರಾಯೋಗಿಕ ಅಂಬೇಡ್ಕರ್ ವಾದಿಯಾಗಿ ಮತ್ತು ರಾಜಕೀಯ ಮುತ್ಸದ್ದಿಯಾಗಿ ಮರುಪರಿಶೋಧಿಸಿಕೊಳ್ಳುವುದು ಈ ಕಾಲಮಾನಕ್ಕೆ ಬಹಳ ಸೂಕ್ತವಾದುದು. ಹಾಗೆಯೇ ಅವರನ್ನು ಯಾವುದೇ ರಾಜಕೀಯ ಪಕ್ಷದ ಆಸ್ತಿಯೆಂಬಂತೆ ನೋಡದೆ ವಿಶ್ವದ ಕ್ರಾಂತಿಕಾರಿ ಚಿಂತಕರು ಮತ್ತು ಬುದ್ಧಿಜೀವಿಗಳ ಸಾಲಿನಲ್ಲಿಟ್ಟು ಅರ್ಥಮಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

ಮಾನ್ಯರಾದ ಕಾನ್ಶಿರಾಮ್‌ರವರ ‘ಚಮಚಾ ಏಜ್’ ಕೃತಿಯು ಪೂರ್ಣ ಪ್ರಮಾಣದಲ್ಲಿ ಅದರ ಮೂಲ ರೂಪದಲ್ಲಿ ಕನ್ನಡಿಗರಿಗೆ ದೊರೆಯುತ್ತಿರುವುದು ಸಂತಸದ ವಿಚಾರ. ಏಕೆಂದರೆ ಈಗಾಗಲೇ ಚರಿತ್ರೆಯ ಅಬ್ರಾಹ್ಮಣೀಕರಣ ಮತ್ತು ಸಿಖ್ ಕ್ರಾಂತಿ ಕೃತಿಗಳ ಮೂಲಕ ಬಹುಜನ ಕನ್ನಡಿಗರು ಭಾರತೀಯ ಚರಿತ್ರೆಯನ್ನು ಸರಿಯಾದ ದಿಕ್ಕಿನಲ್ಲಿ ನೋಡುವಂತೆ ಪ್ರೇರೇಪಿಸುವ ಕೃತಿಗಳನ್ನು ಅನುವಾದ ಮಾಡಿದ್ದಾರೆ. ಈ ಅನುವಾದವನ್ನು ಸಮರ್ಥವಾಗಿ ನಿರ್ವಹಿಸಿರುವ ರೀಟಾ ರೀನಿಯವರಿಗೆ ಅಭಿನಂದನೆಗಳು. ಹಾಗೆಯೇ, ಈ ಸಂದರ್ಭದಲ್ಲಿ ಕಾನ್ಶಿರಾಮ್‌ ರವರ ಒಟ್ಟು ತಾತ್ವಿಕತೆಯನ್ನು ಗ್ರಹಿಸಲು ಈ ಮುನ್ನುಡಿಯಲ್ಲಿ ಪ್ರಯತ್ನಿಸಲಾಗಿದೆ.

ಕಮ್ಯುನಿಸ್ಟರು ವಿಶ್ವದಾದ್ಯಂತ ಕಾರ್ಲ್ ಮಾರ್ಕ್ಸ್ ಮತ್ತು ಎಂಗೆಲ್ಸ್ ಅವರ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಕೃತಿಯನ್ನು ಒಂದು ಮ್ಯಾಗ್ನಂ ಓಪಸ್ ಆಗಿ ಪರಿಗಣಿಸುತ್ತಾರೆ. ಮಹಾತ್ಮ ಜ್ಯೋತಿ ಬಾಫುಲೆಯವರ ಗುಲಾಮಗಿರಿ ಕೃತಿಯು ಭಾರತದ ಚರಿತ್ರೆಯನ್ನು ನಿರ್ವಹಿಸುವ ವಿಧಾನವನ್ನು ಭಾರತೀಯರಿಗೆ ತೋರಿಸಿಕೊಟ್ಟಿದೆ. ಪೆರಿಯಾರ್ ಅವರ ಜೀವನ ಮತ್ತು ಸಮಗ್ರ ಕೃತಿಗಳು ಭಾರತದ ಪರ್ಯಾಯ ಅಬ್ರಾಹ್ಮಣ ಚರಿತ್ರೆಯನ್ನು ವಿವರಿಸುವ ಕೈಮರಗಳಾಗಿವೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಜಾತಿ ವಿನಾಶ ಕೃತಿಯು ಅವರ ಚಿಂತನೆಗಳ ಸಾರ ರೂಪ ಎಂದೇ ಗ್ರಹಿಸಲಾಗುತ್ತದೆ.

ಹಾಗೆಯೇ ಕಾನ್ಶಿರಾಂ ಅವರ ‘ಚಮಜಾ ಏಜ್’ ಕೃತಿಯು ಅಂಬೇಡ್ಕರ್‌ವಾದ ಮತ್ತು ಭಾರತೀಯ ಸಮಾಜವನ್ನು ಗ್ರಹಿಸುವುದಕ್ಕೆ ನೆರವಾಗುವ ಅತ್ಯುತ್ತಮ ಪಠ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಾನ್ಶಿರಾಮ್, ಅವರ ವ್ಯಕ್ತಿತ್ವ, ತತ್ವ, ಸಂಘಟನೆ ಮತ್ತು ನಾಯಕತ್ವವನ್ನು ಕುರಿತು ವಿವೇಚಿಸುವ ಸಾಂಸ್ಕೃತಿಕ, ಸಾಮಾಜಿಕ ಸಂದರ್ಭ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿಯೇ ಇದೆ.

ಈ ಲೇಖನದಲ್ಲಿ ಕಾನ್ಶಿರಾಮ್‌ರವರ ಕುರಿತ ಎರಡು ಪ್ರಧಾನ ಪ್ರಮೇಯಗಳನ್ನು ಮಂಡಿಸಲಾಗಿದೆ. ಮೊದಲನೆಯದಾಗಿ, ಸಾವಯವ ಬುದ್ಧಿಜೀವಿ ಮತ್ತು ರಾಜಕೀಯ, ಸಾಮಾಜಿಕ ತತ್ವಜ್ಞಾನಿಯಾಗಿ ಕಾನ್ಶಿರಾಮ್. ಎರಡನೆಯದಾಗಿ, ಡಾ. ಬಿ.ಆರ್. ಅಂಬೇಡ್ಕ‌ರ್ ಅವರ ಸಿದ್ಧಾಂತಗಳನ್ನು ಪ್ರಾಕ್ಸಿಸ್ (praxis) ಆಚರಣೆಯಲ್ಲಿ ತಂದ ರಾಜಕೀಯ ಮುತ್ಸದ್ದಿ ಮತ್ತು ಬಹುಜನ ನಾಯಕರಾಗಿ ಕಾನ್ಶಿರಾಮ್.

ಕಾನ್ಶಿರಾಮ್‌ ರವರ ಕುರಿತು ಮೊದಲ ಪ್ರಮೇಯವನ್ನು ಅರ್ಥೈಸಿಕೊಳ್ಳೋಣ. ಕಾನ್ಶಿರಾಮ್‌ರವರು ಇಟಲಿಯ ಚಿಂತಕ ಆಂಟೋನಿಯೋ ಗ್ರಾಮ್ಶಿ ಹೇಳುವ ಅರ್ಥದಲ್ಲಿ ನಿಜವಾದ ಸಾವಯವ ಬುದ್ಧಿಜೀವಿಯಾಗಿದ್ದರು. ಸಾವಯವ ಬುದ್ಧಿಜೀವಿ ಎಂದರೆ ಜನರೊಂದಿಗೆ ನಿರಂತರ ಸಂಪರ್ಕವನ್ನು ಸಾಧಿಸುತ್ತಾ ಅವರಲ್ಲಿರುವ ನುಡಿಗಟ್ಟುಗಳನ್ನು ತನ್ನ ಚಿಂತನೆಗೆ ಅಳವಡಿಸಿಕೊಳ್ಳುತ್ತಾ ಸಂಘಟನೆಯನ್ನು ಮಾಡುವವರು. ಕಾನ್ಶಿರಾಮ್‌ರವರು ಜನರ ಜೊತೆ ನಿಕಟವಾದ ಸಂಪರ್ಕವನ್ನು ಹೊಂದಿದ್ದರು. ಸುಮಾರು ನಾಲ್ಕು ಸಾವಿರದಿಂದ ಐದು ಸಾವಿರ ಕಿಲೋಮೀಟರ್ ಸೈಕಲ್ ಯಾತ್ರೆಯನ್ನು ಮಾಡಿದರು. ಸಾವಿರಾರು ಜನರೊಂದಿಗೆ ಮುಖಾಮುಖಿ ಸಂಪರ್ಕವನ್ನು ಹೊಂದಿದ್ದರು. ಯಾವುದೇ ಗುಂಪನ್ನು, ಜನಸಮೂಹವನ್ನು ನಿರ್ಲಕ್ಷಿಸುತ್ತಿರಲಿಲ್ಲ. ಪಂಜಾಬಿನಲ್ಲಿದ್ದ ಆಗಿನ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಿದ್ದಾರೆಂದು ಆರೋಪಿಸಲ್ಪಟ್ಟ ನಾಯಕರ ಜೊತೆಗೆ ನಿರಂತರ ಸಂಪರ್ಕವನ್ನು ಹೊಂದಿದ್ದರು. ಈಶಾನ್ಯ ರಾಜ್ಯಗಳ ಬುಡಕಟ್ಟು ನಾಯಕರನ್ನು ಕರೆದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ವೇದಿಕೆಯನ್ನು ಒದಗಿಸಿಕೊಟ್ಟಿದ್ದರು. ಕಾಶ್ಮೀರದ ಹೋರಾಟಗಾರರೊಂದಿಗೂ, ಅವರ ಕ್ರಿಯಾಶೀಲ ಮಾತುಕತೆಗಳು ನಡೆಯುತ್ತಿತ್ತು. ಲಕ್ಷಾಂತರ ಚಮ್ಮಾರರು, ರವಿದಾಸಿಯಾ/ರಾಮದಾಸಿಯಾ ಪಂಥಿಗಳು, ಒಬಿಸಿ ನಾಯಕರು ಮೊದಲಾದವರನ್ನು ಉದ್ದೇಶಿಸಿ ಸಭೆಗಳನ್ನು ನಡೆಸುತ್ತಿದ್ದರು. ಇದೆಲ್ಲದರ ಫಲವಾಗಿ ಅವರೊಳಗೆ ಭಾರತಕ್ಕೆ ಅಗತ್ಯವಾದ ರಾಜಕೀಯ ಮತ್ತು ಸಾಂಸ್ಕೃತಿಕ ಮುನ್ನೋಟಗಳಿರುವ ನೀಲ ನಕಾಶೆಯೊಂದು ರೂಪು ಪಡೆಯುತ್ತಿತ್ತು.

Advertisements
kanshi ram 2

ಜನಸಾಮಾನ್ಯರೊಡನೆ ಬೆರೆಯುವ ಸಂಕೇತಗಳನ್ನೇ ಅವರು ಬಳಸುತ್ತಿದ್ದರು. ಮಧ್ಯಮ ವರ್ಗದ ಗುಮಾಸ್ತರೊಬ್ಬರು ತೊಡಬಹುದಾದ ದೊಗಳೆ ಪ್ಯಾಂಟು ಮತ್ತು ಅಂಗಿಯನ್ನು ಹಾಕುತ್ತಿದ್ದರು. ಬಡವರ ವಾಹನವಾದ ಸೈಕಲ್ ಅನ್ನು ಬಳಸಿದರು. ಎಲ್ಲ ರ್‍ಯಾಲಿಗಳಲ್ಲಿಯೂ ಮಹಿಳೆಯರ ಹಾಜರಾತಿಯನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಬ್ರಾಹ್ಮಣರು, ಬನಿಯಾಗಳು ಮತ್ತು ಪ್ರಬಲ ಜಾತಿಗಳನ್ನು ಹೊರತುಪಡಿಸಿದ ವಿಶಾಲವಾದ ಜನಸಮುದಾಯದೊಂದಿಗೆ ತಮ್ಮ ವಾಗ್ವಾದವನ್ನು ಏರ್ಪಡಿಸಿಕೊಂಡರು. ಅದಕ್ಕಾಗಿ ಡಿಎಸ್4 (ದಲಿತ, ಶೋಷಿತ, ಸಾಮಾಜಿಕ್, ಸಂಘರ್ಷ್ ಸಮಿತಿ) ಸ್ಥಾಪಿಸಿದರು. ಈ ಪ್ರಮಾಣದಲ್ಲಿ ಭಾರತೀಯ ಸಮಾಜದೊಳಗೆ ಜನಸಂಪರ್ಕವಿಟ್ಟುಕೊಂಡ ಅಪರೂಪದ ವ್ಯಕ್ತಿ ಕಾನ್ಶಿರಾಮ್. ಈ ಪ್ರಕ್ರಿಯೆಯ ಫಲವಾಗಿ ಅವರ ಚಿಂತನೆಗಳು ಬಹಳ ಸರಳವಾಗಿ ಕಂಡರೂ ಸಂಕೀರ್ಣವಾಗಿದ್ದವು. ಸಂಕೀರ್ಣವಾಗಿ ಕಂಡರೂ ಪ್ರಾಯೋಗಿಕವಾಗಿ ಅವುಗಳನ್ನು ಜಾರಿಗೆ ತರುವಂತೆ ರೂಪಿಸುತ್ತಿದ್ದರು. ಅವರ ‘ಚಮಚಾ ಏಜ್’ ಪುಸ್ತಕ ಅಂಬೇಡ್ಕರ್ ಮತ್ತು ಗಾಂಧಿಯವರ ನಡುವೆ ಆದ ಪೂನಾ ಒಪ್ಪಂದದ 50 ವರ್ಷದ ನೆನಪಿಗೆ ಪ್ರಕಟವಾಯಿತು. ಆ ಕೃತಿಯಲ್ಲಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಉಲ್ಲೇಖಿಸಿ ಅವರ ವಿಚಾರಗಳನ್ನು ಬೆಳೆಸುವ ಪ್ರಯತ್ನ ಮಾಡಿದರು. ಯಾವ ರೀತಿಯಲ್ಲಿ ಇಟಲಿಯ ಆಂಟೋನಿಯೋ ಗ್ರಾಮ್ಶಿ, ಕಾರ್ಲ್ ಮಾರ್ಕ್ಸ್ ಅವರ ವಿಚಾರಗಳನ್ನು ಮತ್ತಷ್ಟು ವಿಸ್ತರಿಸಿ ಮಾರ್ಕ್ಸ್ ವಾದಕ್ಕೆ ಬಲ ತುಂಬಿದರೋ ಹಾಗೆಯೇ ಕಾನ್ಶಿರಾಮ್ ಅವರು ಅಂಬೇಡ್ಕ‌ರ್ ವಾದಕ್ಕೆ ಬಲ ತುಂಬಿದರು.

ಹಾಗೆಯೇ, ಡಾ. ಬಿ.ಆರ್. ಅಂಬೇಡ್ಕ‌ರ್ ರವರನ್ನು ಸರಿಯಾಗಿ ಗ್ರಹಿಸಿ, ಅಂಬೇಡ್ಕರೋತ್ತರ ಭಾರತದಲ್ಲಿ ಅಂಬೇಡ್ಕರ್ ಚಳವಳಿಯನ್ನು ಹೇಗೆ ಮುಂದುವರಿಸಬಹುದೆಂಬ ಸೂಚನೆಗಳನ್ನು ನೀಡುವುದರ ಜೊತೆಗೆ ಅದನ್ನು ಕಾರ್ಯಗತಗೊಳಿಸಿ ತೋರಿಸಿಕೊಟ್ಟರು. ತಮ್ಮ ‘ಚಮಚಾ ಏಜ್’ ಪುಸ್ತಕದಲ್ಲಿ ಅಂಬೇಡ್ಕರೋತ್ತರ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ನಿಲುವುಗಳನ್ನು ಸ್ಪಷ್ಟಪಡಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್‌ರವರು ತಮ್ಮ ಕೊನೆಯ ದಿನಗಳಲ್ಲಿ ಅವರ ನಂತರ ಅವರ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಮುಂದಕ್ಕೆ ಕೊಂಡೊಯ್ಯುವವರ ಬಗೆಗೆ ಅನುಮಾನವನ್ನು ವ್ಯಕ್ತಪಡಿಸಿದ್ದರು. “ನಾನು ಎಳೆದುಕೊಂಡು ಬಂದಿರುವ ರಥವನ್ನು ನನ್ನ ಅನುಯಾಯಿಗಳು ಸಾಧ್ಯವಾದರೆ ಮುಂದಕ್ಕೆ ತೆಗೆದುಕೊಂಡು ಹೋಗಲಿ, ಇಲ್ಲವಾದರೆ ಅಲ್ಲಿಯೇ ನಿಲ್ಲಿಸಲಿ, ಆದರೆ ಯಾವುದೇ ಸಂದರ್ಭದಲ್ಲಿಯೂ ನನ್ನ ರಥವನ್ನು ಹಿಂದಕ್ಕೆ ಎಳೆದುಕೊಂಡು ಹೋಗಬಾರದು. ಇದು ನನ್ನ ಜನರಿಗೆ ನಾನು ಕೊಡುವ ಸಂದೇಶ” (ಚಮಚಾ ಏಜ್, 140, ಸಮ್ಯಕ್ ಪ್ರಕಾಶನ) ಎಂದು ಹೇಳಿದ್ದರು. ಕಾನ್ಶಿರಾಮ್ ಇದನ್ನು ಉಲ್ಲೇಖಿಸಿ ಅಂಬೇಡ್ಕರೈಟ್ ಚಳವಳಿಯು ಸ್ವಾರ್ಥಿಗಳು, ಅಪ್ರಮಾಣಿಕರು, ದುರಾಸೆಯುಳ್ಳ ದುಷ್ಟ ಚಮಚಾಗಳ ಕೈಗೆ ಸಿಕ್ಕಿ ದುರ್ಬಲವಾಯಿತು. ಅವರು ಹೋಳು ಹೋಳಾಗಿ ಹೋದರು. ಕಾಂಗ್ರೆಸ್ ಮತ್ತು ಮೊದಲಾದ ಪಕ್ಷಗಳನ್ನು ಸೇರಿ ದಲ್ಲಾಳಿಗಳಾಗಿ ಅಥವಾ ಚಮಚಾಗಳಾಗಿ ಬದಲಾದರು. ಇನ್ನರ್ಧ ಜನರು ಪರೋಕ್ಷವಾಗಿ ದಲ್ಲಾಳಿಗಳಾಗಿ ಬಾಬಾ ಸಾಹೇಬರ ಹೆಸರಿನಲ್ಲಿ ಸಣ್ಣ ಸಣ್ಣ ಗುಂಪುಗಳನ್ನು ರಚಿಸಿಕೊಂಡರು. ಒಟ್ಟಾರೆ ಹೇಳಬೇಕೆಂದರೆ ಅಂಬೇಡ್ಕರೋತ್ತರ ಯುಗದ ಸಾರಾಂಶ ಇದು. ಇದನ್ನು ಅರ್ಥೈಸಿಕೊಂಡು ನಾವು ಮುನ್ನಡೆಯಬೇಕೆಂದು ಬಹುಜನರಿಗೆ ಕಾನ್ಶಿರಾಮ್ ಕರೆಯಿತ್ತರು.

ಜೊತೆಗೆ, ಜಾತಿಯನ್ನು ಪ್ರಧಾನ ಅಂಶವನ್ನಾಗಿ ಪರಿಗಣಿಸಿ ತಳ ರಚನೆಗಿಂತ ಮೇಲು ರಚನೆಯು ಪ್ರಬಲವೆಂಬುದನ್ನು ಅಂಬೇಡ್ಕರ್‌ರಂತೆಯೇ ಕಾನ್ಶಿರಾಮ್ ಮನಗಂಡಿದ್ದರು. ಹಾಗಾಗಿ, ಜಾತಿಗಳ ಏಣಿಶ್ರೇಣೀಕರಣಗಳ ಬಗೆಗೆ ಸ್ಪಷ್ಟವಾದ ಚಿತ್ರಣವನ್ನು ಹೊಂದಿದ್ದರು. ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಬ್ರಾಹ್ಮಣವಾದದ ಉತ್ಪನ್ನವೆಂದು ಕರೆದರು. ಈ ಉತ್ಪನ್ನದ ಫಲಾನುಭವಿಗಳಲ್ಲಿ ಶೇಕಡ 10-15 ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರಿದ್ದಾರೆಂದು ವಿವರಿಸಿದರು. ಶೇಕಡ 85-90ರಷ್ಟು ಜನರು ಈ ಸಾಮಾಜಿಕ ವ್ಯವಸ್ಥೆಯ ಬಲಿಪಶುಗಳು ಎಂಬುದು ಕಾನ್ಶಿರಾಮ್‌ ರವರ ಅಭಿಪ್ರಾಯ. ಮಧ್ಯಂತರ ಶೂದ್ರ ಜಾತಿಗಳು, ಇತರ ಹಿಂದುಳಿದ ಜಾತಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು ಈ ವ್ಯಾಪ್ತಿಯಲ್ಲಿ ಬರುತ್ತಾರೆ. ಇವರನ್ನು ಬಹುಜನರೆಂದು ಕಾನ್ಶಿರಾಮ್ ಕರೆಯುತ್ತಾರೆ.

‘ಚಮಚಾ ಏಜ್’ ಪುಸ್ತಕದಲ್ಲಿ ಬಹುಜನರ ಸಮಸ್ಯೆಗಳ ಪರಿಹಾರಕ್ಕೆ ದೀರ್ಘಕಾಲೀನ ಪರಿಹಾರ ಸೂಚಿಸುತ್ತಾರೆ. ಸಂಸ್ಕೃತಿ ಬದಲಾವಣೆ ಮತ್ತು ಸಾಂಸ್ಕೃತಿಕ ನಿಯಂತ್ರಣ ಮುಖ್ಯ ಸಾಧನಗಳೆಂದು ಪರಿಗಣಿಸುತ್ತಾರೆ. ಭಾರತದ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮುಖ್ಯ ಸಮಸ್ಯೆ ಎಂದರೆ ಜಾತಿ. ಈ ಜಾತಿಯು ಶಾಸ್ತ್ರಗಳ ಉತ್ಪನ್ನ, ವಿಚಿತ್ರವಾದ ಧಾರ್ಮಿಕ ಪರಿಕಲ್ಪನೆಗಳನ್ನು ಹೊಂದಿದೆ. ಈ ಧಾರ್ಮಿಕ ಪರಿಕಲ್ಪನೆಯು ಸಾಂಸ್ಕೃತಿಕ ದಬ್ಬಾಳಿಕೆಯನ್ನು ಉಂಟುಮಾಡಿದೆ. ಆ ದಬ್ಬಾಳಿಕೆಯನ್ನು ಜಾತಿಗಳ ಸಂಸ್ಕೃತಿ ಎಂದು ಕಾನ್ಶಿರಾಮ್ ಹೇಳುತ್ತಾರೆ. ಬೇರೆ ದೇಶಗಳಲ್ಲಿ ಧರ್ಮವು ವೈಯಕ್ತಿಕವಾಗಿರುತ್ತದೆ. ಸಂಸ್ಕೃತಿಯು ಎಲ್ಲರಿಗೂ ಅನ್ವಯಿಸುತ್ತದೆ. ಸಂಸ್ಕೃತಿ ಬೇರೆ, ಧರ್ಮ ಬೇರೆ. ಆದರೆ ಭಾರತದಲ್ಲಿ ಸಂಸ್ಕೃತಿ ಮತ್ತು ಧರ್ಮ ಎರಡು ಒಂದೇ. ಅದೇನೆಂದರೆ ಜಾತಿಯೇ ಸಂಸ್ಕೃತಿ, ಸಂಸ್ಕೃತಿಯೇ ಜಾತಿ. ಹೀಗೆ ಭಾರತದ ಜಾತಿ ಪದ್ಧತಿಗೆ ವಿಶಿಷ್ಟ ವ್ಯಾಖ್ಯಾನವನ್ನು ಕಾನ್ಶಿರಾಮ್ ನೀಡಿದರು. ಜೊತೆಗೆ, ಇದನ್ನು ಬದಲಾಯಿಸುವ ಮತ್ತು ಬದಲಾವಣೆಯ ಮೇಲೆ ಹತೋಟಿ ಸಾಧಿಸಲು ಬೇಕಾದ ಸಾಮಾಜಿಕ ಹಾಗೂ ರಾಜಕೀಯ ಯೋಜನೆಗಳನ್ನು ಸೂಚಿಸಿದರು.

ಜಾತಿ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರುವಲ್ಲಿ ಕಾನ್ಶಿರಾಮ್ ಒಂದು ದೊಡ್ಡ ಜಿಗಿತವನ್ನು ಮಾಡಿದರು. ಬ್ರಾಹ್ಮಣ ಬನಿಯಾ ವೈಶ್ಯ ಮತ್ತು ಪ್ರಬಲ ಜಾತಿಗಳಿಗೆ ಹೊರತಾದ ಜನಸಮೂಹವನ್ನು ‘ಬಹುಜನ’ ಎಂದು ಕರೆದು ವಿಶಾಲವಾದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ವೇದಿಕೆಯನ್ನು ಸಿದ್ಧಪಡಿಸಿದರು.

ಅಂಬೇಡ್ಕರ್ ಅವರ ಆಧುನಿಕ ಚಿಂತನಾ ಕ್ರಮದಲ್ಲಿ ಸಾಂಸ್ಕೃತಿಕ ರಾಜಕಾರಣವು ಸಾಪೇಕ್ಷವಾಗಿ ಹಿನ್ನೆಲೆಗೆ ಸರಿದಿತ್ತು. ಅದನ್ನು ಮುನ್ನೆಲೆಗೆ ತರುವ ಮೂಲಕ ಬಹುಜನರ ಜೊತೆ ಸಾಮೂಹಿಕ ನೆನಪು ಮತ್ತು ಸಾವಯವ ಸಂಬಂಧವನ್ನು ಗಾಢಗೊಳಿಸಿದರು. ದಲಿತರಲ್ಲಿ ಆತ್ಮಗೌರವವನ್ನು ಹೆಚ್ಚಿಸುವ ಸಲುವಾಗಿ ಬಹುಜನರ ಸಾಂಸ್ಕೃತಿಕ ಹಿನ್ನೆಲೆಯ ನೆನಪುಗಳನ್ನು ಹೆಕ್ಕಿ ತೆಗೆದರು. ಬಹುಜನ ಸಮಾಜ ಪಕ್ಷದ ಚಿಹ್ನೆಯಾದ ಆನೆಯನ್ನು ಕೂಡ ಬೌದ್ಧ ಧರ್ಮದಿಂದ ಪಡೆದದ್ದಾಗಿತ್ತು. ಬೌದ್ಧ ಸಾಹಿತ್ಯದಲ್ಲಿ ಬರುವ ಜಾತಕ ಕತೆಗಳಲ್ಲಿ ಆನೆಯ ಪ್ರಸ್ತಾಪ ಬರುತ್ತದೆ. ಹಾಗೆ ಆನೆಯು ಮತ್ತೊಂದು ರೀತಿಯಲ್ಲಿ ಅಂಬೇಡ್ಕರ್‌ರವರ ಚಳವಳಿಯ ನೆನಪನ್ನು ಮಾಡಿಕೊಟ್ಟಿತು. ಅವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಚಿಹ್ನೆಯೂ ಆನೆಯೇ ಆಗಿತ್ತು. ಅದರ ಜೊತೆಗೆ, ಬಹುಜನ ಸಮಾಜ ಪಕ್ಷದ ಬಾವುಟದ ಬಣ್ಣವು ನೀಲಿ ಹಿನ್ನೆಲೆಯಲ್ಲಿ ಆನೆಯ ಚಿತ್ರವನ್ನು ಒಳಗೊಂಡಿತ್ತು. ನೀಲಿ ಬಣ್ಣವು ಬೌದ್ಧ ಧರ್ಮದಲ್ಲಿ ಶಾಂತಿ, ಕರುಣೆ ಮತ್ತು ಪ್ರೀತಿಯ ಸಂಕೇತವಾಗಿದೆ.

ಸಾಂಸ್ಕೃತಿಕ ರಾಜಕಾರಣದ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡಿದ್ದ ಕಾನ್ಶಿರಾಮ್‌ರವರು ದಲಿತ ಬಹುಜನರ ಸ್ಥಳೀಯ ಸಂತರು, ಗುರುಗಳು, ಮೌಖಿಕ ಪರಂಪರೆಯ ಲಾವಣಿಯಲ್ಲಿ ಕಂಡುಬರುವ ಜನಪದ ನಾಯಕರನ್ನು ಜನಸಾಮಾನ್ಯರ ಹೀರೋಗಳಂತೆ ಬಿಂಬಿಸಲು ಆರಂಭಿಸಿದರು. ಈ ತಂತ್ರವು ಬಹುಜನರು ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳಲು ನೆರವಾಯಿತು. ಕಾನ್ಶಿರಾಮ್ ರವರು ಹೋಬಳಿ, ಬ್ಲಾಕ್ ಮಟ್ಟದಲ್ಲಿ ಸ್ಥಳೀಯ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳ ಸಮಿತಿಗಳನ್ನು ರಚಿಸಿದ್ದರು. ಪ್ರತಿಯೊಂದು ಸಮಿತಿಯು ತನ್ನ ಜಾತಿಯ ಅಥವಾ ಇತರ ಹಿಂದುಳಿದ ಜಾತಿಗಳ ಬಗ್ಗೆ ಸಂಶೋಧನೆ ಮಾಡಿ. ಮಾಹಿತಿ ಸಂಗ್ರಹಿಸಿ ಅವರ ಹೀರೋಗಳನ್ನು ಗುರುತಿಸುವ ಜವಾಬ್ದಾರಿಯನ್ನು ಕೊಟ್ಟಿದ್ದರು. ಇದರ ಭಾಗವಾಗಿಯೇ ಸಂತ ರವಿದಾಸ್, ಸಂತ ಕಬೀರ್ ಮತ್ತು ಶಿವನಾರಾಯಣ್ ಅವರ ಭಾವಚಿತ್ರಗಳು ಎಲ್ಲೆಡೆ ಕಂಡುಬರತೊಡಗಿದವು. ಬಹುಜನ ಸಮಾಜ ಪಕ್ಷವು ಇವರನ್ನು ಕುರಿತ ಸಣ್ಣ ಸಣ್ಣ ಪುಸ್ತಕಗಳನ್ನು ಪ್ರಕಟಿಸಿತು. ಎಷ್ಟೋ ಬಾರಿ ಮೌಖಿಕ ಪರಂಪರೆ ಮತ್ತು ಜನಪದರ ನೆನಪಿನಲ್ಲಿದ್ದ ದಲಿತ ಮತ್ತು ಹಿಂದುಳಿದ ಜಾತಿಗಳ ಹೀರೋಗಳ ಯಾವುದೇ ಭಾವಚಿತ್ರ ಲಭ್ಯವಿರಲಿಲ್ಲ. ಅಂಥ ಸಂದರ್ಭದಲ್ಲಿ ಕಾನ್ತಿ ರಾಮ್‌ರವರು ಗೆಳೆಯರು ಮತ್ತು ಕಲಾವಿದರ ಜೊತೆ ಕೂತು ಅವರ ಕುರಿತ ವಿವರಗಳನ್ನು ಸಂಗ್ರಹಿಸಿ ಚಿತ್ರಗಳನ್ನು ರಚಿಸಲು ಪ್ರೇರೇಪಿಸುತ್ತಿದ್ದರು. ಇದರಿಂದ ಮಹತ್ತರವಾದ ಸಾಂಸ್ಕೃತಿಕ ಜಿಗಿತ ದೊರೆಯಿತು. ಇಲ್ಲಿಯವರೆಗೆ ದಲಿತರು ಮತ್ತು ಹಿಂದುಳಿದ ಜಾತಿಗಳ ಮನೆಗಳಲ್ಲಿ ಗಣೇಶ, ಗೌರಿ, ಶಿವ, ಹನುಮಂತ, ದುರ್ಗಾ ಮಾತೆಯ ಕ್ಯಾಲೆಂಡರ್ ಅಥವಾ ಫೋಟೋಗಳು ಗೋಡೆಗಳ ಮೇಲೆ ರಾರಾಜಿಸುತ್ತಿದ್ದವು. ಅವುಗಳ ಜೊತೆಗೆ ಅಂಬೇಡ್ಕರ್, ಫುಲೆ, ಸಾಹು ಮಹಾರಾಜ್, ರವಿದಾಸರ ಫೋಟೋಗಳು ಜೊತೆಯಾದವು. ಪ್ರತಿ ಕುಟುಂಬದಲ್ಲೂ ಜಾತಿ ಮತ್ತು ದಲಿತ ಅಸ್ಮಿ ತೆಯನ್ನು ಅವರಿಗೆ ನೆನಪಿಸುತ್ತಿದ್ದವು.

ಈ ಹೆಮ್ಮೆಯು ಇಡೀ ಭಾರತದಾದ್ಯಂತ ಬಹಳ ಜನಪ್ರಿಯವಾಗಿದೆ. ಈಗಲೂ ಕರ್ನಾಟಕದಾದ್ಯಂತ ಜನರ ಬಳಿ ಹೋಗುವಾಗ ದಲಿತ ಸಂಘಟನೆಗಳಾಗಲಿ ಅಥವಾ ರಾಜಕೀಯ ಪಕ್ಷಗಳಾಗಲಿ ಒಂದು ನಿಯಮದಂತೆ ಬುದ್ಧ, ಬಸವ, ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಟಿಪ್ಪುಸುಲ್ತಾನ್, ಫುಲೆ, ಪೆರಿಯಾರ್, ಸಾಹು ಮಹಾರಾಜ್ ಮೊದಲಾದವರ ಫೋಟೋಗಳನ್ನು ಹಾಕುವುದನ್ನು ನಾವು ಕಾಣಬಹುದು. ಸಾರ್ವಜನಿಕ ಮತ್ತು ಸಾಂಸ್ಕೃತಿಕ ಜಾಗಗಳನ್ನು ಪ್ರಬಲ ಜಾತಿಗಳು ಅತಿಕ್ರಮಿಸಿದ್ದ ರೀತಿಯನ್ನು ಮತ್ತೆ ಪಡೆದುಕೊಳ್ಳುವಲ್ಲಿ ಈ ಪ್ರಯತ್ನ ಯಶಸ್ವಿಯಾದವು. ಇವು ಕೇವಲ ಉದಾಹರಣೆಗಳು ಮಾತ್ರ, ಇಡೀ ಉತ್ತರ ಭಾರತದಲ್ಲಿ ನೂರಾರು ಕತೆಗಳನ್ನು ಮತ್ತು ಸಾಂಸ್ಕೃತಿಕ ನೆನಪುಗಳನ್ನು ನಿಜವಾದ ಅರ್ಥದಲ್ಲಿ ಮೂರ್ತಗೊಳಿಸಲಾಯಿತು. ಕಾನ್ಶಿರಾಮ್‌ ರವರು ಪುನರಾವರ್ತಿತವಾಗಿ ನಿರಂತರವಾಗಿ ಬಹುಜನರ ಪಾರಂಪರಿಕ ಕತೆಗಳನ್ನು, ನೆನಪುಗಳನ್ನು ಹೇಳುತ್ತಲೇ ಇರುತ್ತಿದ್ದರು. ಜೊತೆಗೆ, ಅವರ ನೆನಪಿನಲ್ಲಿ ಸ್ಮಾರಕಗಳನ್ನು ಸ್ಥಾಪಿಸಿ ಸಂಭ್ರಮಾಚರಣೆಗಳನ್ನು ಏರ್ಪಡಿಸಲಾಗುತ್ತಿತ್ತು. ಇದು ಬಹುಜನರ ಏಳಿಗೆಗೆ ಕಾರಣವಾಗುವುದನ್ನು ವಿವರಿಸಲಾಗುತ್ತಿತ್ತು.

ಅದರ ಭಾಗವಾಗಿ ಎಲ್ಲ ಕಡೆಯೂ ಜಾಗೃತಿ ಜಾಥಾಗಳನ್ನು ಏರ್ಪಡಿಸುತ್ತಿದ್ದರು. ಈ ಜಾಗೃತಿ ಜಾಥಾಗಳು ವರ್ಣರಂಜಿತವಾಗಿರುತ್ತಿದ್ದವು. ಕಲಾವಿದರನ್ನು ಬಳಸಿಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಬಹುಜನರು ಬಹಳ ಸಂಭ್ರಮದಿಂದ ಹೊಸ ಬಟ್ಟೆ ತೊಟ್ಟು, ನೃತ್ಯ ಮಾಡುತ್ತಾ ಸಾಂಸ್ಕೃತಿಕ ನಾಯಕರ ಟ್ಯಾಬ್ಲಾಯ್ಡ್ ಮತ್ತು ಕಟೌಟ್‌ಗಳನ್ನು ಹೊತ್ತು ಸಾಗುತ್ತಿದ್ದರು. ಇದು ನೋಡಲು ಕಣ್ಣಿಗೆ ಹಬ್ಬದಂತೆ ಕಾಣುತ್ತಿತ್ತು. ಇದರಿಂದಾಗಿ ಸಾರ್ವಜನಿಕವಾಗಿ ಬಹುಜನರ ಸೌಂದರ್ಯ ಪ್ರಜ್ಞೆ, ಅಸ್ಮಿತೆ ಮತ್ತು ಹೊಸ ರೂಪದ ದರ್ಶನವಾಗುತ್ತಿತ್ತು. ಈ ಜಾಗೃತಿ ಮೇಳಗಳಲ್ಲಿ ದಲಿತರ ಆಹಾರ ಪದ್ಧತಿಯನ್ನು ಪ್ರಜ್ಞಾಪೂರ್ವಕವಾಗಿ ಪರಿಚಯಿಸಲಾಗುತ್ತಿತ್ತು. ಹೀಗೆ ಬಹುಜನರ ಸಮಾಜ ಪಕ್ಷದ ಅಡಿಯಲ್ಲಿ ಸಾಂಸ್ಕೃತಿಕ ಅಸ್ಮಿತೆಯು ಸರಿಸಾಟಿಯಿಲ್ಲದಂತೆ ಪುಟಿದೇಳತೊಡಗಿತು. ಸಾಮಾಜಿಕ-ಮನಶಾಸ್ತ್ರೀಯ ಪರಿಭಾಷೆಯಲ್ಲಿ ಹೇಳುವುದಾದರೆ ಪ್ರಬಲ ಜಾತಿಗಳ ಚರಿತ್ರೆ ಮತ್ತು ಸಾಂಸ್ಕೃತಿಕ ಮೇಲರಿಮೆಯ ವಿರುದ್ಧ ಹೂಡಿದ ಮಾನಸಿಕ ಯುದ್ಧವಾಗಿತ್ತು. ಈ ಮಾನಸಿಕ ಯುದ್ಧದಲ್ಲಿ ಕಾನ್ಶಿರಾಮ್‌ ರವರು ಪೂರ್ಣ ಪ್ರಮಾಣದಲ್ಲಿ ಗೆಲ್ಲದೆ ಹೋದರೂ ಗ್ರಾಮ, ಪಟ್ಟಣ ಮತ್ತು ನಗರಗಳಲ್ಲಿ ದಲಿತರು ಮತ್ತು ಹಿಂದುಳಿದ ಜಾತಿಗಳ ಬಲವಾದ ಇರುವಿಕೆಯು ಸಾಬೀತಾಯಿತು. ಪ್ರಬಲ ಜಾತಿಗಳು ಭರತ ಖಂಡದ ಉದ್ದಕ್ಕೂ ಸಾರ್ವಜನಿಕ ಜಾಗಗಳಾದ ರಸ್ತೆ, ಗೋಡೆ, ದೇವಸ್ಥಾನಗಳು, ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿದ್ದರು. ಅವುಗಳಲ್ಲಿ ತಮ್ಮ ಪಾಲೂ ಇದೆ ಎಂಬುದನ್ನು ಒತ್ತಿ ಹೇಳಲಾಯಿತು. ಕಾನ್ಶಿರಾಮ್ ಅವರ ಪ್ರಕಾರ ಭಾರತದಲ್ಲಿ ಬಹುಜನರ ಮೂಲ ಸಮಸ್ಯೆಯು ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಅಂಶಗಳ ಜೊತೆಗೆ ತಳುಕು ಹಾಕಿಕೊಂಡಿದೆ. ಈ ಧಾರ್ಮಿಕ ಶಾಸ್ತ್ರಗಳು ಚಿತ್ರವಿಚಿತ್ರವಾದ ನಂಬಿಕೆಗಳನ್ನು ಹುಟ್ಟುಹಾಕಿವೆ. ಇವು ಕೇವಲ ಜನರ ಮೇಲೆ ಸವಾರಿ ಮಾಡುವುದಲ್ಲದೆ ಒಂದು ಸಂಸ್ಕೃತಿಯನ್ನು ರೂಪಿಸಿವೆ. ಈ ಸಂಸ್ಕೃತಿ ಮೌಲ್ಯಗಳು ಒಟ್ಟಾಗಿ ಸೇರಿ ಜಾತಿಗಳ ಸಂಸ್ಕೃತಿಯೊಂದನ್ನು ರೂಪಿಸಿವೆ. ಬೇರೆ ದೇಶಗಳಲ್ಲಿ ಧರ್ಮ ವೈಯಕ್ತಿಕ, ಸಂಸ್ಕೃತಿ ಎಲ್ಲರಿಗೂ ಸಮಾನವಾಗಿರುತ್ತದೆ. ಆದರೆ ಭಾರತದಲ್ಲಿ ಸಂಸ್ಕೃತಿ ಮತ್ತು ಜಾತಿ ಒಂದೇ ಆಗಿವೆ. ಆದುದರಿಂದಲೇ ಇದನ್ನು ಬುಡಮಟ್ಟದಿಂದಲೇ ಬದಲಾಯಿಸಬೇಕಾಗುತ್ತದೆ. ಏಕೆಂದರೆ ಜಾತಿ ಸಂಸ್ಕೃತಿಯು ಹಿಂದೂಗಳು ಅಥವಾ ಪ್ರಬಲ ಜಾತಿಗಳಿಗೆ ಐದು ಬಗೆಯ ಅಧಿಕಾರವನ್ನು ನೀಡಿದೆ. ರಾಜಕೀಯ, ಅಧಿಕಾರಶಾಹಿ, ಊಳಿಗಮಾನ್ಯ ಆರ್ಥಿಕ ಮತ್ತು ಸಾಂಸ್ಕೃತಿಕ. ಇತರ ಹಿಂದುಳಿದ ಜಾತಿಗಳು ಈ ಸಂಸ್ಕೃತಿಯ ಭಾಗವಾಗಿದ್ದರೂ ಸಹ ಶೂದ್ರರೆನಿಸಿಕೊಂಡವರು ಕೂಡ ಇದರ ಬಲಿಪಶುಗಳಾಗಿದ್ದಾರೆ. ಇಲ್ಲಿಯವರೆಗೆ ಎಷ್ಟೋ ಜನ ಸುಧಾರಕರು ಬಂದುಹೋಗಿದ್ದಾರೆ. ಆದರೆ ಜಾತಿ ಸಂಸ್ಕೃತಿಯಲ್ಲಿ ಬದಲಾವಣೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ನಾವು ಗೆರೆಕೊರೆದಂತೆ ಇರುವ ಅಸಮಾನ ಸ್ಥಿತಿಯಿಂದ ಪೂರ್ಣ ಸಮಾನತೆಯೆಡೆಗೆ ಚಲಿಸಬೇಕಾಗಿದೆ. ಪ್ರಬಲ ಜಾತಿಗಳ ಹತೋಟಿಯಲ್ಲಿರುವ ಸಂಸ್ಕೃತಿಯನ್ನು ಬಹುಜನರ ಕೈಗೆ ತೆಗೆದುಕೊಳ್ಳಬೇಕಾಗಿದೆ. ನಮ್ಮ ಸಂಸ್ಕೃತಿಯನ್ನು ವಿಕೃತ ಮಾಡುವ ಮತ್ತು ಅಪಹರಿಸುವ ಸ್ಥಿತಿಯಿಂದ ತಪ್ಪಿಸಿಕೊಳ್ಳಬೇಕು. ಏಕೆಂದರೆ ಮೌರ್ಯ ಸಾಮ್ರಾಜ್ಯದ ನಾಶದಿಂದ ಕಲಿತ ಬಹುದೊಡ್ಡ ಪಾಠ ಇದಾಗಿದೆ.

ಅಂಬೇಡ್ಕರ್ ಅವರು ಭಾರತದ ದಮನಿತ ಸಮುದಾಯಗಳ ನಾಯಕರಾಗಿ ಹೊರಹೊಮ್ಮುವವರೆಗೆ ಜಾತಿಯ ಪ್ರಶ್ನೆಯನ್ನು ಕಾಂಗ್ರೆಸ್ ಪಕ್ಷ, ಹಿಂದೂ ಮಹಾಸಭಾ ಮತ್ತು ಕಮ್ಯುನಿಸ್ಟರು ಸರಿಯಾಗಿ ಪರಿಗಣಿಸದೆ ಉದ್ದೇಶಪೂರ್ವಕವಾಗಿ ಜಾತಿಗುರುಡುತನವನ್ನು ಪ್ರದರ್ಶಿಸುತ್ತಿದ್ದರು. ಜಾತಿ ಕುರಿತ ಅಧ್ಯಯನವನ್ನು ಕೈಗೊಂಡ ಅಂಬೇಡ್ಕರ್ ಭಾರತೀಯ ಸಾಮಾಜಿಕ ಅಸಮಾನತೆಗೆ ವರ್ಗಕ್ಕಿಂತ ಜಾತಿಯು ಪ್ರಮುಖ ಕಾರಣವಾಗಿದೆ ಎಂಬುದನ್ನು ಪುರಾವೆ ಸಹಿತ ತೋರಿಸಿಕೊಟ್ಟರು. ಜಾತಿಯನ್ನು ದುರ್ಬಲಗೊಳಿಸಲು ಅದರ ಪ್ರಾಬಲ್ಯವನ್ನು ಕಡಿಮೆ ಮಾಡಲು ಬೇಕಾದ ಕ್ರಿಯಾ ಯೋಜನೆ ಮತ್ತು ಸಿದ್ಧಾಂತಗಳನ್ನು ರೂಪಿಸಿದರು. ಅವರ ಯೋಜನೆಯನ್ನು ಮುಂದುವರಿಸಿದ ಕಾನ್ಶಿರಾಮ್‌ ರವರು ಜಾತಿಯನ್ನು ದುರ್ಬಲಗೊಳಿಸುವುದರ ಜೊತೆಗೆ ಬಹುಜನರು ಮತ್ತು ದಮನಿತರು ಅದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಶೋಷಕ ಜಾತಿಗಳನ್ನು ನಿಯಂತ್ರಿಸುವ ಬಗೆಯನ್ನು ತೋರಿಸಿಕೊಟ್ಟರು. ಬಹುಜನರೊಂದಿಗಿನ ತಮ್ಮ ನಿರಂತರ ಒಡನಾಟ. ದಣಿವರಿಯದ ಕ್ರಿಯಾಶೀಲತೆ, ಬಲವಾದ ಸೈದ್ಧಾಂತಿಕ ತಳಹದಿಯಿಂದ ತಾವೊಬ್ಬರು ಭಾರತದ ಸಾವಯವ ಬುದ್ಧಿಜೀವಿ ಮತ್ತು ತತ್ವಜ್ಞಾನಿ ಎಂಬುದನ್ನು ಸಾಬೀತುಪಡಿಸಿದರು.

ಅಂಬೇಡ್ಕ‌ರ್ ಚಳವಳಿಯು ಇಡೀ ಭಾರತದಾದ್ಯಂತ ಜನಸಾಮಾನ್ಯರ ಹೃದಯದಲ್ಲಿ ಒಂದು ಭಾವನಾತ್ಮಕ ಅಂಶವಾಗಿ ಸ್ಫೂರ್ತಿಯ ಸೆಲೆಯಾಯಿತೇ ಹೊರತು ಒಂದು ರಾಜಕೀಯ ಸಿದ್ಧಾಂತವಾಗಿ ಮತ್ತು ಸಾಮಾಜಿಕ ಬದಲಾವಣೆಯ ಚಳವಳಿಯಾಗಿ ಹೊರಹೊಮ್ಮುವ ಸಾಧ್ಯತೆಯನ್ನು ಗುಪ್ತಗಾಮಿನಿಯನ್ನಾಗಿಸಿಕೊಂಡಿತು. ಅಂಬೇಡ್ಕರ್ ನೀಡಿದ ಹೋರಾಟದ ಜ್ಯೋತಿಯನ್ನು ಹೊತ್ತೊಯ್ಯುವವರು ಬೇಕಾಗಿತ್ತು. ಕಾನ್ಶಿರಾಮ್ ರವರ ಪ್ರಕಾರ ಚಮಚಾಗಳ ಕೈಯಲ್ಲಿ ಅದು ಸಾಧ್ಯವಿರಲಿಲ್ಲ. ಅಂಥ ನಿರ್ವಾತದ ನಿರ್ಣಾಯಕ ಸಂದರ್ಭದಲ್ಲಿ ಕಾನ್ಶಿರಾಮ್ ಭಾರತದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಬದುಕಿನೊಳಗೆ ಪ್ರವೇಶಿಸಿದರು.
ಲ್ಯಾಟಿನ್ ಭಾಷೆಯಲ್ಲಿ ‘ಪ್ರಾಕ್ಸಿಸ್’ ಎಂಬ ಪದ ಇದೆ. ಆ ಪದದ ಅರ್ಥ ಯಾವುದೇ ವಿಚಾರ ಅಥವಾ ಸಿದ್ಧಾಂತವನ್ನು ಕ್ರಿಯೆಗೆ ಇಳಿಸುವುದು. ಅಂಬೇಡ್ಕರರ ಸಿದ್ಧಾಂತ ಒಂದು ಸಂಕಥನ, ವಿಚಾರಗಳ ಗುಚ್ಛ, ಕ್ರಿಯೆಗಳ ಮೊತ್ತ. ಭಾರತದಂತಹ ಸಂಕೀರ್ಣ ಸಮಾಜದಲ್ಲಿ ವಿವಿಧ ಕಟ್ಟರ್ ಆಗಿ ಯಾವುದೇ ಸಿದ್ಧಾಂತವನ್ನು ಜಾರಿಗೆ ತರಲು ಕ್ರಿಯೆಯೇ ಮುಖ್ಯ. ಅಂಬೇಡ್ಕ‌ರ್ ವಾದವನ್ನು ಕ್ರಿಯೆಗಿಳಿಸಲು ಬೇಕಾದ ‘ಪ್ರಾಕ್ಸಿಸ್’ ಅನ್ನು ಕಾನ್ಶಿರಾಮ್ ಯಶಸ್ವಿಯಾಗಿ ರೂಪಿಸಿದರು.

ಕಾನ್ಶಿರಾಮ್ ಎದುರಿಸಿದ ದಲಿತ-ಬಹುಜನರ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭವು ವಿಶಿಷ್ಟವಾಗಿತ್ತು. ಫುಲೆ, ಅಂಬೇಡ್ಕರೈಟ್ ಚಳವಳಿಯು ಇದ್ದೂ ಇಲ್ಲದಂತಿತ್ತು. ಜೊತೆಗೆ ಕ್ರಾಂತಿಗೆ ಬೇಕಾದ ಸಾಂಪ್ರದಾಯಿಕ (ಮಾರ್ಕ್ಸ್‌ವಾದಿ ಪರಿಭಾಷೆಯಲ್ಲಿ) ವಾತಾವರಣವೂ ಇರಲಿಲ್ಲ. ದಲಿತ-ಬಹುಜನರಿಗೆ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಾತಿನಿಧ್ಯ ಸಂವಿಧಾನಾತ್ಮಕವಾಗಿ ಜಾರಿಯಲ್ಲಿತ್ತು. ಆದರೆ ಅದನ್ನು ನಿಜವಾದ ಅರ್ಥದಲ್ಲಿ ಜಾರಿಗೊಳಿಸಲು ಪ್ರಬಲ ಜಾತಿಗಳು ಅದೃಶ್ಯ ಗೋಡೆಯೊಂದನ್ನು ನಿರ್ಮಾಣ ಮಾಡಿದ್ದವು. ಸ್ತ್ರೀವಾದದಲ್ಲಿ ಮಹಿಳೆಯರ ಸಾಮಾಜಿಕ ಚಲನೆಗೆ ಸಂಬಂಧಿಸಿದಂತೆ ‘ಗ್ಲಾಸ್ ಸೀಲಿಂಗ್’ ಎಂಬ ಪರಿಕಲ್ಪನೆಯೊಂದನ್ನು ಬಳಸಲಾಗುತ್ತದೆ. ಅಂದರೆ ಯಾವುದೇ ಅಧಿಕೃತ ಕಾನೂನಿನ ಅಡೆತಡೆಗಳಿಲ್ಲದಿದ್ದರೂ ಕೂಡ ದುರ್ಮಾರ್ಗಗಳ ಮೂಲಕ, ನಕಾರಾತ್ಮಕ ದೃಷ್ಟಿಯಿಂದ ಮಹಿಳೆಯರನ್ನು ಉನ್ನತ ಸ್ಥಾನಗಳಿಗೆ ಏರದಂತೆ ನೋಡಿಕೊಳ್ಳುವುದು. ಸಾಮಾಜಿಕವಾಗಿ ಚಲಿಸದಂತೆ ತಡೆಯುವುದಾಗಿತ್ತು. ಅದನ್ನೇ ಇಲ್ಲಿ ಅನ್ವಯಿಸಬಹುದಾದರೆ ಪ್ರಬಲ ಜಾತಿಗಳು ‘ಕಾಸ್ಟ್ ಸೀಲಿಂಗ್’ ಅಥವಾ ಜಾತಿಯ ಅದೃಶ್ಯ ಗೋಡೆಯನ್ನು ನಿರ್ಮಿಸಿದ್ದರು ಎಂದು ಹೇಳಬಹುದು. ಮಡಿ, ಮೈಲಿಗೆ, ಪುಣ್ಯ, ಪಾಪ, ಪುರಾಣ, ಕರ್ಮ, ಧರ್ಮ ಮತ್ತು ಇತರ ಕಲ್ಪಿತ ಆಚರಣೆಗಳ ಮೂಲಕ ದಲಿತ ಬಹುಜನರ ಮುಂಚಲನೆಯನ್ನು ತಡೆಯುತ್ತಿದ್ದರು. ಸಂವಿಧಾನದ ಕಾನೂನು ಮತ್ತು ಅವಕಾಶಗಳು ತಲುಪದಂತೆ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದ ಮೂಲಕ ಮರೆಮಾಚಿದ ಕಾರ್ಯಾಚರಣೆ ನಡೆಸುವುದು. ಇಂತಹ ಪರಿಸ್ಥಿತಿಯಲ್ಲಿ ಕಾನ್ಶಿರಾಮ್‌ರವರು ಬಹುಜನರಿಗೆ ಮಾನಸಿಕ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಬಲೀಕರಣ ಮತ್ತು ಸಾಮರ್ಥ್ಯ ರೂಢಿಸಬೇಕಾಗಿತ್ತು. ಇದಕ್ಕಾಗಿ ಭಿನ್ನವಾದ ಪ್ರಬಲ ಜಾತಿಗಳಿಗೆ ಪ್ರತಿಯಾಗಿ ಒಂದು ‘ನರೆಟಿವ್’ ರೂಪಿಸಬೇಕಾಗಿತ್ತು. ದಲಿತ ಬಹುಜನರ ಹೊಸ ದೃಷ್ಟಿಕೋನವೊಂದನ್ನು ಆ ಪ್ರಬಲ ಜಾತಿಗಳ ಮುಂದಿಡಬೇಕಿತ್ತು. ಈಗಾಗಲೇ ಚಮಚಾ ಮಾದರಿಯ ‘ಸ್ಟಿರಿಯೋ ಟೈಪ್’ ರಾಜಕಾರಣವನ್ನು ಛಿದ್ರಗೊಳಿಸಬೇಕಿತ್ತು.
ಕಾನ್ಶಿರಾಮ್ ‘ಜಾತಿ ವಿನಾಶ’ವಾಗಬೇಕೆಂದು ಬಯಸಿದರು ಕೂಡ ಜಾತಿಯ ಅಸ್ತಿತ್ವ ದಿನೇ ದಿನೇ ಪ್ರಬಲವಾಗುತ್ತಿರುವುದನ್ನು ಅಲ್ಲಗಳೆಯಲು ಸಾಧ್ಯವಿರಲಿಲ್ಲ. ಆದುದರಿಂದ ಬಹುಜನರ ಹಿತಕ್ಕಾಗಿ ನಾನು ‘ಜಾತಿ’ಯನ್ನು ಉಪಕರಣವನ್ನಾಗಿ ಬಳಸುತ್ತೇನೆ ಎಂದು ಹೇಳಿದರು ಮತ್ತು ಹಾಗೆಯೇ ಮಾಡಿದರು ಕೂಡ.

231071 kanshiram

ಡಾ. ಬಿ.ಆರ್. ಅಂಬೇಡ್ಕರ್‌ರವರು 1944ನೇ ಇಸವಿಯಲ್ಲಿ ಮದರಾಸಿನಲ್ಲಿ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ರಾಜಕೀಯ ಅಧಿಕಾರ ಪಡೆಯುವುದೇ ದಲಿತರ ಗುರಿಯಾಗಬೇಕೆಂದು ಕರೆ ಕೊಟ್ಟಿದ್ದರು. ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದ ಅವರು ಪಾರ್ಲಿಮೆಂಟನ್ನು ಚುನಾವಣೆ ಮೂಲಕ ದಲಿತರು ವಶಪಡಿಸಿಕೊಳ್ಳಬೇಕೆಂದು ಕರೆ ಕೊಟ್ಟರು. ಅದರಿಂದ ಅಪಾರವಾಗಿ ಸ್ಫೂರ್ತಿಗೊಂಡಿದ್ದ ಕಾನ್ಶಿರಾಮ್ ದಲಿತ ಬಹುಜನರು ರಾಜಕೀಯ ಅಧಿಕಾರ ಪಡೆಯಲು ಅಗತ್ಯವಾದ ಹಂತಹಂತವಾದ ಚಳವಳಿ ರೂಪಿಸಿದರು.

1982ರ ಡಿಸೆಂಬರ್ 25ರಂದು ಡಿಎಸ್4 ವತಿಯಿಂದ ಜನ ಸಂಸತ್ತನ್ನು ಏರ್ಪಡಿಸಿದರು. ಒಬ್ಬ ಸಾರ್ವಜನಿಕ ಸಾವಯವ ಬುದ್ಧಿಜೀವಿಯಾಗಿ ಅವರು ಯಾವಾಗಲೂ ತಮ್ಮ ಜನರಿಂದಲೇ ಸ್ಫೂರ್ತಿ ಪಡೆಯುತ್ತಿದ್ದರು.

ಮಹಾತ್ಮಗಾಂಧಿ, ದೀನ ದಯಾಳ್ ಉಪಾಧ್ಯಾಯ, ಸಾವರ್ಕರ್ ಮುಂತಾದವರಿಗೆಲ್ಲಾ ಬಜಾಜ್ ಮತ್ತು ಬಿರ್ಲಾಗಳ ನೆರವಿತ್ತು. ಆದರೆ ಕಾನ್ಶಿರಾಮ್ ಆರ್ಥಿಕವಾಗಿ ಸ್ವಲ್ಪ ಉತ್ತಮವಾಗಿದ್ದ ದಲಿತ-ಬಹುಜನ ಸರ್ಕಾರಿ ನೌಕರರ ಸಂಘಟನೆಯನ್ನು ಕಟ್ಟಿ ‘ಪೇ ಬ್ಯಾಕ್ ಟು ಸೊಸೈಟಿ’ ಎಂಬ ಪರಿಕಲ್ಪನೆಯನ್ನು ಮುಂದಿಟ್ಟರು. ಬಿಎಸ್‌ಪಿ ಪಕ್ಷದ ಪ್ರಚಾರ, ಸಂಘಟನೆ ಮತ್ತು ಚುನಾವಣೆಗೆ ಅಗತ್ಯವಾದ ಸಂಪನ್ಮೂಲವನ್ನು ಸ್ವಲ್ಪಮಟ್ಟಿಗೆ ಒದಗಿಸುತ್ತಿತ್ತು. ಪ್ರತಿ ಮತದಾರನಿಂದಲೂ ಒಂದು ರೂಪಾಯಿ ಹಣ ಸಂಗ್ರಹಿಸುತ್ತಿದ್ದರು. ಇದರಿಂದ ಬಿಎಸ್‌ಪಿಗೆ ಮತ ಚಲಾಯಿಸುವ ಪ್ರತಿ ಮತದಾರನೂ ಏಕಕಾಲದಲ್ಲಿ ಆ ಪಕ್ಷದ ಮಾನಸಿಕ, ಸಾಮಾಜಿಕ ಮಾಲಿಕತ್ವವನ್ನು ಹೊಂದಿದ ಭಾವನೆ ತಳೆಯುತ್ತಿದ್ದರು.

ಭಾರತೀಯ ಆರ್ಮಿಗೆ ಸಂಬಂಧಿಸಿದ ವೈಜ್ಞಾನಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾನ್ಶಿರಾಮ್ ಪ್ರತಿಯೊಂದನ್ನು ಸೈನ್ಯದ ಶಿಸ್ತು, ವೈಜ್ಞಾನಿಕ ಮನೋಭಾವ, ಡಾ. ಅಂಬೇಡ್ಕರ್ ಪ್ರಾಗ್ನಟಿಸಂ ಮತ್ತು ಬುದ್ಧನ ಪ್ರೀತಿ ಮತ್ತು ಕರುಣೆಯ ತತ್ವಗಳಿಂದ ನಿರ್ವಹಿಸುತ್ತಿದ್ದರು.

ಬಿಎಸ್‌ಪಿ ಅಧ್ಯಕ್ಷ ಸ್ಥಾನದಿಂದ ಕಟ್ಟ ಕಡೆಯ ಬೂತ್ ಲೆವಲ್ ಕಾರ್ಯಕರ್ತನವರೆಗೆ ಪ್ರತಿಯೊಂದು ಸುಸಂಬದ್ಧವಾಗಿ ನಿರ್ವಹಿಸಲ್ಪಡುತ್ತಿತ್ತು. ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತಿಳಿವಳಿಕೆಯ ಸಂವಹನ ಕ್ರಮವು ಸ್ಪಷ್ಟವಾಗಿರುತ್ತಿತ್ತು. ‘ಅಗತ್ಯವಿದ್ದಾಗ ಪ್ರಚಾರ, ಇಲ್ಲವಾದರೆ ಮೌನ’ ಎಂಬ ತಂತ್ರವನ್ನು ಅನುಸರಿಸಿ ಬ್ರಾಹ್ಮಣವಾದಿ ಪ್ರಬಲ ಜಾತಿ ಮಾಧ್ಯಮಗಳನ್ನು ನಿಯಂತ್ರಿಸಲಾಗುತ್ತಿತ್ತು. ಕೇಂದ್ರ ಸರ್ಕಾರದ ಆಯಕಟ್ಟಿನ ಸ್ಥಾನಗಳಲ್ಲಿ ಗುಪ್ತಚರ ಸಂಸ್ಥೆಗಳಲ್ಲಿ ಬಹುಜನ ಪಕ್ಷದ ಕಾರ್ಯಕರ್ತರು ಇರುವಂತೆ ನೋಡಿಕೊಳ್ಳಲಾಗುತ್ತಿತ್ತು. ಆದುದರಿಂದ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದಲ್ಲಿನ ‘ಪವರ್ ಎಲೀಟ್’ ಗುಂಪಿನ ಕಾರ್ಯಾಚರಣೆ ಮಾಹಿತಿ ದೊರೆತು ಅದನ್ನು ಹಣಿಯಲು ಬೇಕಾದ ವ್ಯೂಹವನ್ನು ಕಾನ್ಶಿರಾಮ್ ರಚಿಸುತ್ತಿದ್ದರು. ಅವರ ವೈಯಕ್ತಿಕ ಬದುಕು ಕೂಡ ಒಂದು ರಾಜಕೀಯ ನೈತಿಕ ಸಂದೇಶವಾಗಿತ್ತು. ಅರ್ಜೆಂಟೀನಾದ ಕ್ರಾಂತಿಕಾರಿ ಚೆಗುವಾರ ಲ್ಯಾಟಿನ್ ಅಮೆರಿಕಾದ ಬಡವರ ಪರಿಸ್ಥಿತಿಯನ್ನು ನೋಡಿ ತನ್ನ ವೈದ್ಯ ವೃತ್ತಿಯನ್ನು ಬಿಟ್ಟು ಕ್ರಾಂತಿಕಾರಿಯಾಗಿ ಪರಿವರ್ತನೆಯಾಗುತ್ತಾರೆ.

ಅದನ್ನು ತನ್ನ ತಾಯಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸುತ್ತಾರೆ. ಅದೇ ರೀತಿಯಲ್ಲಿ ಕಾನ್ಶಿರಾಮ್‌ರವರು ತಮ್ಮ ಕುಟುಂಬಕ್ಕೆ ಪತ್ರವೊಂದನ್ನು ಬರೆದು, ಎಂದೂ ನಾನು ಕುಟುಂಬಕ್ಕೆ ಮರಳುವುದಿಲ್ಲ ಎಂದು ತಿಳಿಸಿದರು. ಅದರಂತೆ ನಡೆದುಕೊಂಡರು.
ಇದರಿಂದ ದಲಿತ-ಬಹುಜನರಿಗೆ ತಮ್ಮ ನಾಯಕ ಒಬ್ಬ ನಿಸ್ವಾರ್ಥಿ ಎನ್ನುವುದು ಮನವರಿಕೆಯಾಗಿತ್ತು. ಏಕೆಂದರೆ ಇತರ ಚಮಚಾಗಳ ಮಾದರಿಗೆ ವಿರುದ್ಧವಾದುದಾಗಿತ್ತು. ಚುನಾವಣೆಗಳನ್ನು ಗೆಲ್ಲಲು ಜಾತಿಯನ್ನು ‘ಸಾಮಾಜಿಕ’ ಮತ್ತು ‘ಸಾಂಸ್ಕೃತಿಕ’ ಬಂಡವಾಳವನ್ನಾಗಿ ಕಾನ್ಶಿರಾಮ್ ಬಳಸಿದರು. ‘ಸೋಶಿಯಲ್ ಇಂಜಿನಿಯರಿಂಗ್’ ಪ್ರಯೋಗದ ಮೂಲಕ ಖಚಿತ ಬಹುಜನ ಮಾದರಿಯನ್ನು ಮುಂದಿಟ್ಟು ದಲಿತ-ಬಹುಜನರನ್ನು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು.
ಕಾನ್ಶಿರಾಮ್‌ರವನ್ನು ಪ್ರಖರ ಪ್ರಾಯೋಗಿಕ ಅಂಬೇಡ್ಕರ್ ವಾದಿಯಾಗಿ ಮತ್ತು ರಾಜಕೀಯ ಮುತ್ಸದ್ದಿಯಾಗಿ ಮರುಪರಿಶೋಧಿಸಿಕೊಳ್ಳುವುದು ಈ ಕಾಲಮಾನಕ್ಕೆ ಬಹಳ ಸೂಕ್ತವಾದುದು. ಹಾಗೆಯೇ ಅವರನ್ನು ಯಾವುದೇ ರಾಜಕೀಯ ಪಕ್ಷದ ಆಸ್ತಿಯೆಂಬಂತೆ ನೋಡದೆ ವಿಶ್ವದ ಕ್ರಾಂತಿಕಾರಿ ಚಿಂತಕರು ಮತ್ತು ಬುದ್ಧಿಜೀವಿಗಳ ಸಾಲಿನಲ್ಲಿಟ್ಟು ಅರ್ಥಮಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X