ಕರ್ನಾಟಕ ಚುನಾವಣೆ: ಎಚ್ಚೆತ್ತ ಮತದಾರ ಕಲಿಸಿದ ನೂರೊಂದು ಪಾಠಗಳು

Date:

Advertisements
ರಾಜ್ಯದ ಮತದಾರರು ಕಾಂಗ್ರೆಸ್‌ ನತ್ತ ಒಲವು ತೋರಿಸಿದ್ದು ಯಾಕೆ? ಅದರ ಹಿಂದಿರಬಹುದಾದ ಕಾರಣಗಳು ಏನು? ಈ ಪ್ರಶ್ನೆಗೆ ಉತ್ತರ ಸರಳವಾಗಿರಲು ಸಾಧ್ಯವಿಲ್ಲ. ಕೋಟಿ ಕೋಟಿ ಮನಸ್ಸುಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿಯುವಷ್ಟೇ ಕಷ್ಟ ಈ ಪ್ರಶ್ನೆಗೆ ಉತ್ತರ ಹುಡುಕುವುದು. ಆದರೂ ಕೆಲವು ಸಾಮಾನ್ಯ ಸಂಗತಿಗಳ ಹಿನ್ನೆಲೆಯಲ್ಲಿ ಉತ್ತರ ಕಂಡುಕೊಳ್ಳಬಹುದು

ಇಡೀ ರಾಷ್ಟ್ರದ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನಿಚ್ಚಳ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ಪಕ್ಷವೇ ನಡೆಸಿದ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವ ಸೂಚನೆಗಳು ಇದ್ದವು. ಆದರೂ ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಅಧಿಕಾರದಲ್ಲಿದ್ದ ಬಿಜೆಪಿಯ ದುಷ್ಟ ರಾಜಕಾರಣದ ಎದುರು ತನ್ನ ಹೋರಾಟಕ್ಕೆ ಈ ಫಲ ಸಿಕ್ಕಬಹುದೇ ಎಂಬ ಅನುಮಾನದಲ್ಲಿಯೇ ಕಾಂಗ್ರೆಸ್‌ ಸೆಣಸಾಟ ನಡೆಸಿತ್ತು. ಬಿಜೆಪಿಗೂ ತನ್ನ ಗೆಲುವಿನ ಬಗ್ಗೆ ಅನುಮಾನಗಳೇ ಇದ್ದವು; ಒಳಗೇ ಸಣ್ಣ ಭಯವೂ ಇತ್ತು. ಕರ್ನಾಟಕದ ಈ ಚುನಾವಣೆ ಕೈಕೊಟ್ಟರೆ ಮುಂದಿನ ವರ್ಷದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ತನಗೆ ಎದುರಾಗಬಹುದಾದ ಕಷ್ಟಗಳ ನೆನೆದು ಈ ಚುನಾವಣೆಯನ್ನು ಗೆಲ್ಲಲೇಬೇಕೆಂದು ಹಟತೊಟ್ಟು ಕಣಕ್ಕೆ ಇಳಿದಿತ್ತು. ಈ ಒಳ ಭಯವೇ ಕಾರಣವಾಗಿ ಪ್ರಧಾನಿ ಮೋದಿ, ಚುನಾವಣೆಯ ಚಾಣಕ್ಯ ಎಂದೇ ಹೆಸರಾಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಷಾ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಗುಜರಾತಿನ ಮುಖ್ಯಮಂತ್ರಿ ಯೋಗಿ ಎಲ್ಲರೂ ಕರ್ನಾಟಕಕ್ಕೆ ಮೇಲಿಂದ ಮೇಲೆ ಬಂದು ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದರು. ಮೋದಿ ಮತ್ತು ಷಾ ನಡೆಸಿದ ರೋಡ್‌ ಶೋಗಳೂ ಅವರೊಳಗಿನ ಭಯವನ್ನೇ ಬಿಂಬಿಸುವಂತಿದ್ದವು. ರಾಷ್ಟ್ರದ ಪ್ರಧಾನಿ ತನ್ನ ಪಕ್ಷದ ಪ್ರಚಾರಕ್ಕಾಗಿ ಒಂದು ರಾಜ್ಯಕ್ಕೆ ಹತ್ತಾರು ಬಾರಿ ಬರುವುದೆಂದರೆ! ಒಂದು ಸಲ ಬಂದುಹೋಗುವ ಸುರಕ್ಷತೆಗೆ, ಪ್ರಯಾಣಕ್ಕೆ ಬೊಕ್ಕಸದಿಂದ ಖರ್ಚಾಗುವ ಹಣದ ಮೊತ್ತವನ್ನು ಗಮನಿಸಿದರೆ ಈ ಪ್ರಯಾಣ ಅಗತ್ಯವೇ ಎಂದು ಯೋಚಿಸಬೇಕಾಗುತ್ತದೆ. ಆದರೂ ಮೋದಿ ಹತ್ತಾರು ಸಲ ಬಂದು ಹೋದರು ಎಂದರೆ ಬಿಜೆಪಿಯಲ್ಲಿದ್ದ ಭಯ ಗೊತ್ತಾಗುತ್ತದೆ.

ಇಂಥ ಹಿನ್ನೆಲೆಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್‌ ನತ್ತ ಒಲವು ತೋರಿಸಿದ್ದು ಯಾಕೆ? ಅದರ ಹಿಂದಿರಬಹುದಾದ ಕಾರಣಗಳು ಏನು? ಈ ಪ್ರಶ್ನೆಗೆ ಉತ್ತರ ಸರಳವಾಗಿರಲು ಸಾಧ್ಯವಿಲ್ಲ. ಕೋಟಿ ಕೋಟಿ ಮನಸ್ಸುಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿಯುವಷ್ಟೇ ಕಷ್ಟ ಈ ಪ್ರಶ್ನೆಗೆ ಉತ್ತರ ಹುಡುಕುವುದು. ಆದರೂ ಕೆಲವು ಸಾಮಾನ್ಯ ಸಂಗತಿಗಳ ಹಿನ್ನೆಲೆಯಲ್ಲಿ ಉತ್ತರ ಕಂಡುಕೊಳ್ಳಬಹುದು:

ಮೋದಿ ಮತ್ತು ಬಿಜೆಪಿ ನಾಯಕರು ಮೇಲಿಂದ ಮೇಲೆ ಹೇಳುತ್ತಿದ್ದ ʼಡಬ್ಬಲ್‌ ಎಂಜಿನ್‌ ಸರ್ಕಾರʼ ಎನ್ನುವುದು ಎಷ್ಟು ಪೊಳ್ಳು ಎನ್ನುವುದು ಜನರಿಗೆ ತಿಳಿದುಹೋಗಿತ್ತು. ಬಿಜೆಪಿ ಆಡಳಿತಾವಧಿಯಲ್ಲಿ ಜನ ಕಷ್ಟ ನಷ್ಟಗಳನ್ನು ಅನುಭವಿಸಿದ್ದೇ ಹೆಚ್ಚು. ಬೆಲೆ ಏರಿಕೆಯ ಬಿಸಿ ಎಲ್ಲ ವರ್ಗದವರಿಗೂ ತಟ್ಟಿತ್ತು ಎಂಬುದು ನಿಜ. ಕೆಳ ಮಧ್ಯಮ ಮತ್ತು ಕೆಳ ವರ್ಗಗಳ ಜನರಂತೂ ಇನ್ನಿಲ್ಲದ ಬವಣೆ ಅನುಭವಿಸಿದರು. ಗ್ಯಾಸ್‌ ಬೆಲೆ, ಪೆಟ್ರೋಲ್‌ ಡೀಸೆಲ್‌ ಬೆಲೆಗಳು, ಆಹಾರ ಧಾನ್ಯಗಳ ಬೆಲೆಗಳು, ನಿತ್ಯ ಬಳಕೆಯ ವಸ್ತುಗಳ ಬೆಲೆಗಳು. ಬೆಲೆ ಏರಿಕೆಗೆ ಏನೇ ಸಮರ್ಥನೆ ಕೊಟ್ಟರೂ, ಅದನ್ನು ಅನುಭವಿಸಿದವರ ನೋವುಗಳು ಕಡಿಮೆಯಾಗುವುದಿಲ್ಲ. ಸಣ್ಣಪುಟ್ಟ ಪಟ್ಟಣಗಳಿಗೆ ಕೆಲಸಕ್ಕಾಗಿ ಬಸ್ ಗಳಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ದಿನದ ಕೂಲಿಗಾಗಿ ಬರುವವರಿಗೆ ಪ್ರಯಾಣವೇ ದುಬಾರಿಯಾದದ್ದು, ಎಷ್ಟೂ ಸಾವಿರ ಮಂದಿ ಉದ್ಯೋಗಕ್ಕಾಗಿ ಪರದಾಡಿದ್ದು, ಹೊಟ್ಟೆ ತುಂಬಿಸುವುದೇ ದಿನದ ಸಮಸ್ಯೆಯಾದದ್ದು ಇತ್ಯಾದಿ ಸಂಗತಿಗಳ ಬಿಸಿಯನ್ನು ಕೆಳ ವರ್ಗದ ಜನ ಸಹಿಸುವುದೇ ಕಷ್ಟವಾಯಿತು. ಇದರ ಮೇಲೆ ಬರೆ ಎಳೆದಂತೆ ಬಡತನ ರೇಖೆಯ ಕೆಳಗಿರುವ ಕಾರ್ಡುದಾರರ ಪಡಿತರಕ್ಕೆ ಕತ್ತರಿ ಹಾಕಿದ್ದು. ರಾಜ್ಯದಲ್ಲಿ ಹಿಂದಿದ್ದ ಕಾಂಗ್ರೆಸ್‌ ಸರ್ಕಾರ ನೀಡುತ್ತಿದ್ದ ಅಕ್ಕಿ, ಗೋಧಿ, ಸಕ್ಕರೆ, ಎಣ್ಣೆ, ಸೀಮೆಣ್ಣೆ ಇತ್ಯಾದಿಗಳ ಪ್ರಮಾಣವನ್ನು ಕಡಿಮೆಮಾಡಿದ್ದು ಈ ವರ್ಗಗಳ ಜನ ತತ್ತರಿಸುವಂತೆ ಮಾಡಿತು. ಮತ್ತು ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಈ ಪಡಿತರವೂ ಹೋಗಿಬಿಡುತ್ತದೆ ಎಂಬ ಗುಮಾನಿಯೂ ಉಂಟಾಯಿತು.

Advertisements

ಕೊರೋನಾ ನಂತರದ ದಿನಗಳು ಜನರ ಬವಣೆಯನ್ನು ಆತ್ಯಂತಿಕ ಸ್ಥಿತಿಗೆ ಕೊಂಡೊಯ್ದಾಗಲೂ ಈ ಡಬ್ಬಲ್‌ ಎಂಜಿನ್‌ ಸರ್ಕಾರ ಹೆಚ್ಚಿನ ನೆರವನ್ನು ನೀಡದೆ ಕೈ ಚೆಲ್ಲಿತು ಎಂಬುದರಿಂದಲೂ ಜನ ಅಸಹನೆಗೊಂಡಿದ್ದರು.

ಇಂಥ ಹೊತ್ತಿನಲ್ಲಿಯೇ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೊಸ ಭರವಸೆ ಹುಟ್ಟಿಸುವ ಐದು ಗ್ಯಾರಂಟಿಗಳು ಪ್ರಚಾರ ಪಡೆದುಕೊಂಡವು. ಇವು ಹೇಳಿಕೆಗಳಲ್ಲ, ನಾವು ಅಧಿಕಾರ ಹಿಡಿದ ಕೂಡಲೇ ಜಾರಿಗೆ ತರುತ್ತೇವೆ ಎಂಬ ಮಾತುಗಳು ಕೆಳವರ್ಗದ ಬಡವರಲ್ಲಿ ವಿಶ್ವಾಸ ಕುದುರಿಸಿದವು. ನೊಂದ ವರ್ಗಕ್ಕೆ ಈ ಗ್ಯಾರಂಟಿಗಳು ಹೊಸ ಬೆಳಕಿನಂತೆಯೇ ಕಂಡದ್ದು, ಕಾಂಗ್ರೆಸ್‌ ಬಗ್ಗೆ ನಂಬಿಕೆ ಹುಟ್ಟಿದ್ದು ಅಸಹಜವೇನಲ್ಲ. ಇಲ್ಲಿಯೂ ಉದ್ಯೋಗ, ಮಹಿಳೆಯರಿಗೆ ಉಚಿತ ಬಸ್‌ ಪಯಣ, ನಿರುದ್ಯೋಗ ಭತ್ಯ, ಉಚಿತ ವಿದ್ಯುತ್ತು ಇವೆಲ್ಲ ನಿತ್ಯ ಬದುಕಿನ ಅತ್ಯಗತ್ಯ ಸಂಗತಿಗಳಾಗಿದ್ದವು ಎಂಬುದನ್ನು ಮರೆಯಲಾಗದು.
ಮೋದಿ ಹಿಂದೆಯೇ ನೀಡಿದ್ದ ಈ ಮಾದರಿಯ ಭರವಸೆಗಳು ಯಾವುವೂ ಈಡೇರಲಿಲ್ಲ. ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ 15 ಲಕ್ಷ ರೂಪಾಯಿ ಎಂಬ ಭರವಸೆ ಸುಳ್ಳಾದದ್ದನ್ನೇ ಹಿಡಿದು ಕಾಂಗ್ರೆಸ್‌ ಪ್ರಚಾರ ಮಾಡಿತಲ್ಲದೆ, ಬಿಜೆಪಿ ನೀಡುವ ಭರವಸೆಗೆ ಯಾವ ಬೆಲೆಯೂ ಇಲ್ಲ, ಅದೆಲ್ಲ ಮತದಾರರನ್ನು ಮರುಳು ಮಾಡುವ, ಮೋಸಗೊಳಿಸುವ ತಂತ್ರಗಳು ಎಂಬ ಪ್ರಚಾರವನ್ನು ಕಾಂಗ್ರೆಸ್‌ ಮಾಡಿತು. ಜನಕ್ಕೂ ಅದು ತಿಳಿದು ಹೋಗಿತ್ತು.
ಮಧ್ಯಮವರ್ಗದ ನಂಬಿಕೆಗಳ ಮೇಲೂ ಪೆಟ್ಟುಬಿದ್ದಿತ್ತು. ಬಿಜೆಪಿ ಸರ್ಕಾರ 40% ಲಂಚದ ಸರ್ಕಾರ, ಭ್ರಷ್ಟಾಚಾರ ಹಿಂದೆಂದಿಗಿಂತಲೂ ಹೆಚ್ಚು ಮೆರೆಯುತ್ತಿದೆ ಎಂಬುದು ಸಾಬೀತಾಗುವ ಅನೇಕ ಪ್ರಕರಣಗಳು ನಡೆದು ಹೋದವು. ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಈ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆದರೂ, ಪ್ರಧಾನಿ ಮೌನವಹಿಸಿದ್ದು, ಈ ಭ್ರಷ್ಟಾಚಾರವನ್ನು ಒಪ್ಪಿಕೊಂಡಂತೆ ಕಾಣಿಸುತ್ತಿತ್ತು. ಎಲ್ಲ ಸರ್ಕಾರಗಳಲ್ಲೂ ಭ್ರಷ್ಟಾಚಾರ ಇತ್ತು ಎಂಬುದು ನಿಜವಾದರೂ, ಭ್ರಷ್ಟಾಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡು, ಸಮರ್ಥಿಸಿದ ಇಂಥ ನಡವಳಿಕೆ ಹಿಂದೆಂದೂ ಕಂಡಿರಲಿಲ್ಲ. ಭ್ರಷ್ಟಾಚಾರದ ಆರೋಪ ಬಂದಾಗ ಮರ್ಯಾದೆಗೆ ಹೆದರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಉದಾಹರಣೆಗಳು ಹಿಂದೆ ಇದ್ದುದನ್ನು ಗುರುತಿಸಬಹುದು. ಆದರೆ ಬಿಜೆಪಿ ಆಡಳಿತದಲ್ಲಿ ಒಂದೇ ಒಂದು ಉದಾಹರಣೆಯೂ ಸಿಕ್ಕದಾದಾಗ ಜನ ಈ ಸರ್ಕಾರದ ಬಗ್ಗೆ ನಂಬಿಕೆ ಕಳೆದುಕೊಂಡರು.

ಬಿಜೆಪಿ ಶಾಸಕರ ಮನೆಗಳಲ್ಲಿ,ಮನೆಗಳ ಕೋಟಿ ಕೋಟಿ ರೂಪಾಯಿಗಳ ಕಂತೆ ಕಂತೆ ನೋಟುಗಳು, ಅಪಾರ ಚಿನ್ನಾಭರಣ ಸಿಕ್ಕಾಗ ಬಿಜೆಪಿ ಸರ್ಕಾರ ಅಂಥವರ ರಕ್ಷಣೆಗೆ ಪರೋಕ್ಷವಾಗಿ ಮುಂದಾಯಿತೇ ಹೊರತು ಅವರನ್ನು ಶಿಕ್ಷಿಸುವ ಅಥವಾ ಪಕ್ಷದಿಂದ ಹೊರ ಹಾಕುವ ಪ್ರಯತ್ನವನ್ನು ಮಾಡಲೇ ಇಲ್ಲ. ಅಧಿಕಾರಿಗಳಿಗೂ ರಕ್ಷಣೆಯೇ ದೊರೆಯುತ್ತದೆ, ಸರ್ಕಾರದ ಪರವಾಗಿದ್ದರೆ ಎಂಬ ಭಾವನೆಯೂ ಬಲವಾಗಿ ಬೆಳೆಯಿತು. ಬಿಜೆಪಿ ಸರ್ಕಾರ ಎಲ್ಲ ಮೌಲ್ಯಗಳನ್ನೂ ಗಾಳಿಗೆ ತೂರಿ, ಮರ್ಯಾದೆಯ ಗೆರೆಯನ್ನು ದಾಟಿ ಕಾರ್ಯನಿರ್ವಹಿಸುತ್ತಿದೆ ಎಂಬ ಮಾತನ್ನು ಸಾಬೀತು ಪಡಿಸುವಂತೆ ಮೇಲಿಂದ ಮೇಲೆ ಇಂಥ ಪ್ರಕರಣಗಳು ಬಿಜೆಪಿ ಆಡಳಿತಾವಧಿಯಲ್ಲಿ ನಡೆದವು.

ಅಲ್ಪ ಸಂಖ್ಯಾತ ಸಮುದಾಯವನ್ನು ದ್ವೇಷಿಸುವ, ಅವರನ್ನು ಈ ರಾಷ್ಟ್ರದ ಪ್ರಜೆಗಳೇ ಅಲ್ಲ ಎಂದು ಅಪಮಾನಿಸುವ ಮಾತುಗಳನ್ನು ಆಡಿದ್ದು ಮಾತ್ರವಲ್ಲ, ಸೇಡಿನ ಕೃತ್ಯಗಳನ್ನು ಎಸಗಿ ತಮ್ಮ ಭದ್ರತೆಯ ಬಗೆಗೇ ಅಲ್ಪಸಂಖ್ಯಾತರಲ್ಲಿ ಆತಂಕ ಹುಟ್ಟಿಸಿದ್ದು ಬಿಜೆಪಿಯ ಬಹುದೊಡ್ಡ ಪ್ರಮಾದ. ಬಿಜೆಪಿಯ ದೊಡ್ಡ ದೊಡ್ಡ ನಾಯಕರಿಂದ ಹಿಡಿದು ಮರಿ ಪುಢಾರಿಗಳ ವರೆಗೆ ಎಲ್ಲರ ಮಾತುಗಳು ಅನ್ಯ ಧರ್ಮೀಯರ ಮೇಲೆ ಬೆಂಕಿಯನ್ನು ಉಗುಳುವಂತಿದ್ದವು. ನಿಜಕ್ಕೂ ಈ ರಾಷ್ಟದಲ್ಲಿ ಅಲ್ಪಸಂಖ್ಯಾತರು ಬದುಕುವುದೇ ಕಷ್ಟ ಎನ್ನುವ ಸನ್ನಿವೇಶಗಳು ದಿನಬೆಳಗಾದರೆ ಎದುರಾಗುತ್ತಿದ್ದವು. ನೆಮ್ಮದಿಯ ಬದುಕು ಅವರಿಗೆ ಬಿಸಿಲು ಕುದುರೆಯಾಗಿತ್ತು. ಇದು ಸಾಲದೋ ಎನ್ನುವಂತೆ ಮೇಲಿಂದ ಮೇಲೆ ಟಿಪ್ಪು ಅಂಥ ಸುಲ್ತಾನರನ್ನು ಹೀಗಳೆಯುವ, ಚರಿತ್ರೆಯನ್ನೇ ತಿರುಚುವ ಕೆಲಸವನ್ನು ಚರಿತ್ರೆಯ ಗಂಧಗಾಳಿಯೂ ಇಲ್ಲದವರು ಮಾಡಿದರು. ಅದಕ್ಕೆ ನೀರೆರೆಯುವಂತೆ ಮೋದಿ-ಷಾ ಜೋಡಿಯೂ ಇಂಥದನ್ನೇ ರಾಷ್ಟ್ರಮಟ್ಟದಲ್ಲಿ ಮುಂದವರಿಸಿತು. ಪಠ್ಯಗಳು ಬದಲಾದವು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತಮ್ಮ ಅಜೆಂಡಾವನ್ನೆ ತುರುಕಲು ಬಿಜೆಪಿ ಕೇಂದ್ರ ಸರ್ಕಾರ ಹುನ್ನಾರ ಮಾಡಿತು. ಶಿಕ್ಷಣ ಸಂಸ್ಥೆಗಳಲ್ಲೂ ಧರ್ಮವನ್ನು ಅಸ್ತ್ರ ಮಾಡಿ ವಿದ್ಯಾರ್ಥಿಗಳನ್ನು,ಪ್ರಗತಿಪರ ಸಂಘಟನೆಗಳನ್ನು ತುಳಿಯುವ ಕೆಲಸವನ್ನು ಮಾಡಲಾಯಿತು. ಆರ್‌ಎಸ್‌ ಎಸ್‌ ಚಟುವಟಿಕೆಗಳು ಅಂಕೆಮೀರಿ ಬೆಳೆದು ಶಿಕ್ಷಣ ಕ್ಷೇತ್ರದ ಸಾಮರಸ್ಯವನ್ನು ಕದಡಿದವು.

ಹಿಜಾಬ್‌, ಹಲಾಲ್‌ಗಳನ್ನು ಕತ್ತಿಗಳಂತೆ ಬಳಸಿ ಅಲ್ಪಸಂಖ್ಯಾತ ಸಮುದಾಯಗಳನ್ನು ಕತ್ತರಿಸಿ ಹಾಕಲು ನೋಡಲಾಯಿತು. ರಾಮ, ಹನುಮ ಎಲ್ಲರನ್ನೂ ಬಳಸಿ ಹಿಂದೂ ಭಾವನೆಗಳನ್ನು ಕೆರಳಿಸಿ ನೋಡಲಾಯಿತು. ಧರ್ಮ ಎನ್ನುವುದು ಸಮುದಾಯದ ನಂಬಿಕೆ ಎನ್ನುವುದನ್ನು ಮೂಲೆಗೊತ್ತಿ ರಾಜಕೀಯ ಆಯುಧವನ್ನಾಗಿ ಬಳಸಿ ಸಮುದಾಯ-ಸಮುದಾಯಗಳ ನಡುವೆ ದ್ವೇಷವನ್ನು ಬಿತ್ತಿ ಬೆಳೆಯಲು ನೋಡಲಾಯತು. ಇದು ತಮಗೇ ತಿರುಗುಬಾಣವಾಗಬಹುದೆಂಬ ಎಚ್ಚರವೂ ಬಿಜೆಪಿಗೆ ಇರಲಿಲ್ಲ ಎಂಬುದು ಅದರ ಚಿಂತನಾ ದಾರಿದ್ರ್ಯವನ್ನು ತೋರಿಸುತ್ತದೆ.

ಧರ್ಮ, ಸಂಸ್ಕೃತಿ, ಭಾಷೆ, ಆಚರಣೆ, ರಾಜ್ಯಗಳ ಅನನ್ಯತೆ ಇತ್ಯಾದಿ ಎಲ್ಲ ಬಹುಮುಖ್ಯ ಸಂಗತಿಗಳ ಮೇಲೂ ಬಿಜೆಪಿ ತನ್ನ ಕತ್ತಿಯನ್ನು ಬೀಸಲಾರಂಭಿಸಿತು. ಒಂದೇ ಧರ್ಮ, ಒಂದೇ ಸಂಸ್ಕೃತಿ, ಒಂದೇ ನಾಡು, ಒಂದೇ ಭಾಷೆ ಎಂಬ ಹಿಟ್ಲರ್ ಮತ್ತು ಸಾವರ್ಕರ್‌ ಸಿದ್ಧಾಂತವನ್ನು ಒಪ್ಪಿಕೊಂಡು ಅದನ್ನು ಜಾರಿಗೆ ತರಲು ಬಿಜೆಪಿ ದುಷ್ಟ ಪ್ರಯತ್ನ ಮಾಡಿದ್ದು ತನ್ನ ಗೋರಿಯನ್ನು ತಾನೇ ತೋಡಿಕೊಳ್ಳಲು ಬಿಜೆಪಿಗೆ ನೆರವಾಯಿತು.
ಇದಕ್ಕೆ ಪ್ರತಿಯಾಗಿ ರಾಹುಲ್‌ ಗಾಂಧಿ ಪ್ರೀತಿಯ, ಸಹನೆಯ, ಸಹಬಾಳ್ವೆಯ, ಸಾಮರಸ್ಯ ಬದುಕಿನ ಮಾತುಗಳನ್ನಾಡುತ್ತಿದ್ದರು. ಅವರ ಪ್ರಚಾರದಲ್ಲಿ ಈ ಮಾತಿನ ಕಡೆಗೇ ಹೆಚ್ಚಿನ ಒತ್ತು ಇತ್ತು. ಜೊತೆಗೆ ಕರ್ನಾಟಕ ಚುನಾವಣೆ ಪ್ರಣಾಳಿಕೆಯ ಐದು ಗ್ಯಾರಂಟಿಗಳು. ತಾವು ದ್ವೇಷದ ಬಜಾರ್‌ನಲ್ಲಿ ʼಮೊಹಬ್ಬತ್‌ ಕಾ ದುಕಾನ್‌ʼ ತೆರೆಯುತ್ತಿರುವುದಾಗಿ ಹೇಳುತ್ತಿದ್ದುದು ಜನರ ಮೆಚ್ಚುಗೆಯನ್ನು ಗಳಿಸಿತ್ತು.

ಚುನಾವಣೆಯ ಹೊತ್ತಿನಲ್ಲಿ ಇನ್ನೊಂದು ಮುಖ್ಯ ಸಂಗತಿಯೂ ಕಾಣಿಸಿಕೊಂಡಿತು. ರಾಜ್ಯದ ಹೆಮ್ಮೆಯ ನಂದಿನಿಯನ್ನು ಮೂಲೆಗೆ ತಳ್ಳಿ ಗುಜರಾತ್‌ನ ಅಮೂಲನ್ನುತರುವ ಹುನ್ನಾರವೂ ನಡೆಯಿತು. ಇದು ಕನ್ನಡಿಗರ ಅಸ್ಮಿತೆಗೇ ಬಿದ್ದ ಪೆಟ್ಟಿನಂತಾಗಿ ಜನ ಬಿಜೆಪಿಯನ್ನು, ಗುಜರಾತ್‌ನ ಮೋದಿ-ಷಾರನ್ನು ದ್ವೇಷಿಸಲು ಆರಂಭಿಸಿದರು. ನಂತರ ಈ ಗಾಯಕ್ಕೆ ಮುಲಾಮು ಹಚ್ಚುವ ಪ್ರಯತ್ನವನ್ನು ಬಿಜೆಪಿ ನಡೆಸಿದರೂ ಕನ್ನಡಿಗರು ಅದನ್ನು ನಂಬಲಿಲ್ಲ.
ಕೇಂದ್ರ ಸರ್ಕಾರ ಇಡಿ, ಆದಾಯ ತೆರಿಗೆ ಇಲಾಖೆ ಇತ್ಯಾದಿ ಇಲಾಖೆಗಳನ್ನು ಹತಾರಗಳಾಗಿ ಪರಿವರ್ತಿಸಿ, ತನ್ನ ವಿರೋಧಿಗಳನ್ನು ಹಣಿಯಲು ನೋಡಿದ್ದು; ಬಿಜೆಪಿಯಲ್ಲಿದ್ದರೆ ಅಥವಾ ಬಿಜೆಪಿಯನ್ನು ಬೆಂಬಲಿಸಿದರೆ ಯಾವ ತೊಡಕೂ ಇರುವುದಿಲ್ಲ ಎಂಬು ಭಯವನ್ನು ಬಿತ್ತಲು ನಡೆಸಿದ ತಂತ್ರ ಚುನಾವಣೆಯಲ್ಲಿ ತಿರುಗುಬಾಣವಾಗಿಯೇ ಪರಿವರ್ತನೆಗೊಂಡಿತು.

ರೈತರ ಬಗ್ಗೆ ಕೇಂದ್ರ ಸರ್ಕಾರ ತಳೆದ ಧೋರಣೆ, ಕಾನೂನುಗಳ ತಿದ್ದುಪಡಿ, ರಾಜ್ಯದಲ್ಲೂ ಅವುಗಳ ಜಾರಿಗೆ ನಡೆದ ಪ್ರಯತ್ನಗಳು, ದಿಲ್ಲಿಯಲ್ಲಿ ಮುಷ್ಕರ ನಿರತ ರೈತರನ್ನು ಕೇಂದ್ರ ಸರ್ಕಾರ ಹತ್ತಿಕ್ಕಿದ ರೀತಿ ಇವೆಲ್ಲ ರೈತ ಸಮುದಾಯದಲ್ಲಿ ಮರೆಯದ ಸಂಗತಿಗಳಾಗಿದ್ದವು. ಆಳವಾದ ಗಾಯಗಳನ್ನೂ ಮಾಡಿದ್ದವು.

ಅಂಬೇಡ್ಕರ್‌ ಅವರ ಬಗ್ಗೆ ಮತ್ತು ಸಂವಿಧಾನದ ಬಗ್ಗೆ ಬಿಜೆಪಿ ತಳೆದ ಧೋರಣೆ, ಸಂವಿಧಾನವನ್ನು ಬೇಕಾದಂತೆ ಬದಲಿಸುತ್ತೇವೆ, ಸುಡುತ್ತೇವೆ, ಮೂಲೆಗೆ ಎಸೆಯುತ್ತೇವೆ ಇತ್ಯಾದಿ ಹೊಣೆಗೇಡಿತನದ ಮಾತುಗಳು ಮತ್ತು ಕ್ರಿಯೆಗಳು ಇಡೀ ನಾಗರಿಕ ಸಮಾಜವನ್ನೇ ಬೆಚ್ಚಿಬೀಳಿಸಿತು.
ಶಾಸಕರನ್ನು ಕೊಳ್ಳುವ, ಮಾರುವ ಸರಕಾಗಿ ಮಾರ್ಪಡಿಸಿದ್ದು ಮತ್ತು ಅದನ್ನು ಬೆಂಬಲಿಸುವಂತೆ ನಡೆದುಕೊಂಡು, ಈ ಹೀನ ಕೃತ್ಯವನ್ನೇ ʼಚುನಾವಣೆಯ ಚಾಣಕ್ಯ ತಂತ್ರʼ ಎಂದು ಬೀಗಿದ್ದು, ಇಂಥ ಕೃತ್ಯಗಳಿಗೆ ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿದ್ದು ಬಿಜೆಪಿಯ ಸೋಲಗೆ ಇನ್ನೊಂದು ಕಾರಣವಾಗಿರಬಹುದು.

ಜಾತ್ಯತೀತ ಜನತಾ ದಳವನ್ನು ಮತದಾರರು ಕೈಬಿಡಲು (ಬಹುಪಾಲು) ಮುಖ್ಯ ಕಾರಣವೆಂದರೆ ಆ ಪಕ್ಷವನ್ನು ಕುಟುಂಬದ ರಾಜಕಾರಣಕ್ಕೇ ಸೀಮಿತ ಮಾಡಿದ್ದು. ತಂದೆ, ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಇವರೇ ಮುಖ್ಯವಾಗಿ ಉಳಿದದ್ದು ಗೌಣವಾದದ್ದನ್ನು ಜನ ಗಮನಿಸಿದರು.
ಜಾತಿ ಎನ್ನುವುದು ಎಲ್ಲ ರಾಜಕೀಯ ಪಕ್ಷಗಳೂ ಈವರೆಗೂ ಚುನಾವಣೆ ಗೆಲ್ಲಲು ಉಳಿಸಿಕೊಂಡು ಬಂದ ಒಂದು ಪ್ರಬಲ ಅಸ್ತ್ರ ಎಂಬುದು ನಿಜ. ಇದರ ಜೊತೆಗೆ ಬಿಜೆಪಿ ಧರ್ಮವನ್ನೂ ಸೇರಿಸಿಕೊಂಡಿತು. ಧರ್ಮ ಎನ್ನುವುದು ದ್ವೇಷ ರಾಜಕಾರಣಕ್ಕೆ ಪ್ರಮುಖ ಅಖಾಡವನ್ನಾಗಿ ಪರಿವರ್ತಿಸಿತು.
ರಾಹುಲ್‌ ಗಾಂಧಿ ಅವರು ನಡೆಸಿದ ʼಭಾರತ್‌ ಜೋಡೊʼ ರಾಹುಲ್‌ ಅವರ ಅನುಭವವನ್ನು ಮತ್ತು ಘನತೆಯನ್ನು ಹಿಗ್ಗಿಸಿತು; ಜೊತೆಗೆ ಕಾಂಗ್ರೆಸ್ಸಿನ ವರ್ಚಸ್ಸನ್ನು ಕೂಡಾ ಹೆಚ್ಚುವಂತೆ ಮಾಡಿತು. ರಾಹುಲ್‌ ಅವರ ಸರಳ ನಡೆ, ಸಮುದಾಯದ ಸಾಮಾನ್ಯರ ಜೊತೆಯಲ್ಲಿ ಅವರು ತೊರಿಸಿದ ಸ್ನೇಹದ ನಡೆ, ಈ ಚುನಾವಣೆಯಲ್ಲಿ ಪರಿಣಾಮಕಾರಿಯಾಯಿತು ಎಂಬುದನ್ನು ಕೂಡಾ ಅಲ್ಲಗಳೆಯಲಾಗದು.

ಪ್ರಧಾನಿ ಮೋದಿ ಅವರ ಈ ಮಾದರಿಯ ನಡೆ ಎಷ್ಟು ಕೃತಕ ಮತ್ತು ದುಬಾರಿ ಎಂಬುದನ್ನೂ ಜನ ಗಮನಿಸಿದರು. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದು-ಡಿಕೆಶಿ ನಡುವೆ ಇದ್ದ ಶೀತಲ ಸಮರವನ್ನು ಜನ ಅರಿಯದವರೇನೂ ಅಲ್ಲ. ಕಾಂಗ್ರೆಸ್ಸನ್ನು ಗೆಲ್ಲಿಸಿದರೆ ಇವರು ಕಿತ್ತಾಡಿಕೊಂಡು ಸರ್ಕಾರ ಬಿದ್ದುಹೋಗುತ್ತದೆ ಎಂಬ ಮಾತುಗಳೂ ಚಾಲ್ತಿಯಲ್ಲಿದ್ದವು. ಇದು ಸಾಧಾರಣ ಅಭಿಪ್ರಾಯವಾಗಿರಲಿಲ್ಲ. ಆದರೂ ಅಪಾಯಕಾರಿಯಾದ ಬಿಜೆಪಿಯ ಅಧಿಕಾರವನ್ನು ಕೊನೆಗಾಣಿಸಬೇಕೆಂಬ ಸಂಕಲ್ಪ ಜನರಲ್ಲಿತ್ತು. ಅದು ಕಾಂಗ್ರೆಸ್‌ಗೆ ವರದಾನವಾಯಿತು.

ಸಾರ್ವಜನಿಕ ಸಂಸ್ಥೆಗಳನ್ನು ಮುಚ್ಚುತ್ತಾ, ಖಾಸಗೀಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಬಿಜೆಪಿ ಸರ್ಕಾರ ಕೊಡುತ್ತಿದೆ ಎಂಬುದಕ್ಕಿಂತ ಹೆಚ್ಚಾಗಿ ಕೇವಲ ನಾಲ್ಕೈದು ಉದ್ಯಮಿಗಳನ್ನು, ಶ್ರೀಮಂತರನ್ನು ಓಲೈಸುತ್ತ ಅವರಿಗೆ ದೇಶವನ್ನು ಒತ್ತೆಯಿಡುತ್ತಿದೆ ಎಂಬ ಭಾವನೆ ಜನರಲ್ಲಿ ಹೆಚ್ಚಾಗುತ್ತ ಹೋಯಿತು. ಇದೇ ಸಂಗತಿಯನ್ನು ಕೇಂದ್ರ ಮಾಡಿಕೊಂಡು ಕೇಂದ್ರ ಸರ್ಕಾರವನ್ನು ಟೀಕಿಸುತ್ತ, ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಿದ್ದ ರಾಹುಲ್‌ ಗಾಂಧಿಯವರ ಬಾಯಯನ್ನು ಮುಚ್ಚಲು, ಅವರನ್ನು ಪಾರ್ಲಿಮೆಂಟಿನಿಂದ ಹೊರಗಟ್ಟಲು ಬಿಜೆಪಿ ನಡೆಸಿದ ಕುತಂತ್ರವನ್ನು ಜನ ಮೆಚ್ಚಲಿಲ್ಲ. ಅಷ್ಟೇ ಅಲ್ಲ, ಬಿಜೆಪಿಯ ಈ ಪ್ರಯತ್ನ ರಾಹುಲ್‌ ಅವರನ್ನು ಜನರ ಅನುಕಂಪೆಯ ಬಳಿಗೆ ಒಯ್ದಿತು. ಈ ಅನುಕಂಪ ಕೂಡಾ ಕರ್ನಾಟಕ ಚುನಾವಣೆಯಲ್ಲಿ ತನ್ನ ಪಾಲನ್ನು ನೀಡಿದೆ.
ಬಿಜೆಪಿಯ ಹೈಕಮಾಂಡ್‌ ಎನ್ನುವುದು ಮೋದಿ-ಷಾ ನಡ್ಡ ಅವರ ಅಡ್ಡೆಯಾಗಿ, ಈ ಮೂವರು ಮನಬಂದಂತೆ ವರ್ತಿಸಿ, ಪಕ್ಷದೊಳಗೇ ಬಿರುಕಿಗೆ ಕಾರಣರಾಗಿದ್ದಾರೆ. ಹಿರಿಯರನ್ನು, ದುಡಿದು ಪಕ್ಷ ಕಟ್ಟಿದವರನ್ನು ಕಾಲ ಕಸದಂತೆ ಕಂಡದ್ದೂ ಬಿಜೆಪಿಯ ಸೋಲಿಗೆ ಕಾರಣವಾಗಿದೆ. ಜಗದೀಶ್‌ ಶೆಟ್ಟರ್‌ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ: ನನಗೆ ಸ್ಥಾನಮಾನಗಳು ಬೇಕಾಗಿರಲಿಲ್ಲ. ಚುನಾವಣೆಯಲ್ಲಿ ಟಿಕೆಟ್‌ ಪಡೆಯುವುದೂ ನನ್ನ ಗುರಿಯಾಗಿರಲಿಲ್ಲ. ಆದರೆ ನನ್ನನ್ನು, ಪಕ್ಷಕ್ಕೆ ದುಡಿದವನನ್ನು ಗೌರವದಿಂದ ನಡೆಸಿಕೊಳ್ಳಲಿಲ್ಲ; ನನಗೆ ಅಪಮಾನ ಮಾಡಿದರು.

ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದ ಶೆಟ್ಟರ್‌ ಚುನಾವಣೆಯಲ್ಲಿ ಗೆಲ್ಲಲಿಲ್ಲ. ಆದರೆ ಅವರ ನೋವಿನ ನೆರಳು ಉತ್ತರ ಕರ್ನಾಟಕದ ಉದ್ದಕ್ಕೂ ಚಾಚಿರುವುದನ್ನು, ಅದರ ಬೆಂಬಲ ಕಾಂಗ್ರೆಸ್‌ಗೆ ದೊರಕಿರುವುದನ್ನು ಫಲಿತಾಂಶ ತೋರಿಸಿದೆ.

ಕಾಂಗ್ರೆಸ್‌ ಪಕ್ಷದಲ್ಲಿ ಇನ್ನೊಂದು ಮಹತ್ವದ ಬೆಳವಣಿಗೆಯೂ ಆಯಿತು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದು ಕರ್ನಾಟಕದ ಚುನಾವಣೆಯಲ್ಲಿ ದಲಿತರ ಮತಗಳನ್ನು ಕಾಂಗ್ರೆಸ್‌ನ ಕಡೆಗೆ ತಿರುಗಿಸಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗೆಯೇ ರಾಜ್ಯ ದಲಿತ ಸಂಘರ್ಷ ಸಮಿತಿಯ ಎಲ್ಲ ಘಟಕಗಳೂ ಒಂದಾಗಿ ಕಾಂಗ್ರೆಸ್‌ ಪರ ನಿಂತದ್ದು ಕೂಡಾ ಒಳ್ಳೆಯ ಬೆಳವಣಿಗೆಯೇ (ದಸಂಸದ ಶರತ್ತುಗಳು ಏನೇ ಇರಲಿ).
ಇವು ಮೇಲ್ನೋಟಕ್ಕೆ ಕಾಣುವ ಕಾರಣಗಳು.

ಈ ಚುನಾವಣೆಯಲ್ಲಿ ಪಕ್ಷಾಂತರಿಗಳನ್ನೂ ಜನ ಅಲ್ಲಲ್ಲಿಯಾದರೂ ಶಿಕ್ಷಿಸಿರುವ, ಅತಿ ಭ್ರಷ್ಟರನ್ನು ಬದಿಗೊತ್ತಿರುವ ಉದಾಹರಣೆಗಳಿವೆ. ಹಾಗೆಯೇ ಜಾತಿಯೊಂದನ್ನೇ ಪ್ರಮುಖ ಬೆಂಬಲ ಎಂದು ಬಗೆದು ಕಣಕ್ಕಿಳಿದವರಿಗೂ ಮತದಾರರು ಮನೆಯ ದಾರಿ ತೋರಿಸಿದ್ದಾರೆ. ಆಳಕ್ಕೆ ಇಳಿದು ನೋಡಿದಂತೆಲ್ಲ ಇನ್ನೆಷ್ಟೋ ಸೂಕ್ಷ್ಮ ಸಂಗತಿಗಳು ಕಾಣಿಸುತ್ತವೆ. ಇವನ್ನೆಲ್ಲ ಗಂಭೀರವಾಗಿ ನೋಡುವುದು ಮತ್ತು ಇವುಗಳು ಹೇಳುತ್ತಿರುವ ಪಾಠಗಳನ್ನು ಗಮನಿಸಿ, ತಪ್ಪುಗಳನ್ನು ತಿದ್ದಿಕೊಳ್ಳುವುದು ಎಲ್ಲ ಪಕ್ಷಗಳ ಮುಂದಿರುವ ಅವಕಾಶ. ಹಾಗೆಯೇ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಕೂಡಾ ಹೇಗೆ ನಡೆದುಕೊಳ್ಳಬೇಕು, ಹೇಗೆ ಸರ್ಕಾರವನ್ನು ಜನರ ಸರ್ಕಾರವಾಗಿ ಮಾರ್ಪಡಿಸಬೇಕು ಎಂಬುದಕ್ಕೂ ಇಲ್ಲಿ ಪಾಠಗಳಿವೆ.

3348
ಜಿ ಪಿ ಬಸವರಾಜು
+ posts

ಹಿರಿಯ ಪತ್ರಕರ್ತರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಜಿ ಪಿ ಬಸವರಾಜು
ಜಿ ಪಿ ಬಸವರಾಜು
ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X