ನಿದ್ದೆಯಲ್ಲಿ‌ ಮುಳುಗಿ ತನ್ನ ಶಿಕ್ಷಣ ನೀತಿ ಬರೆದುಕೊಳ್ಳುತ್ತಿರುವ ಕರ್ನಾಟಕ; ಕನ್ನಡದ ವಿದ್ವಜ್ಜನ ಮಾತೇ ಆಡುತ್ತಿಲ್ಲ‌!

Date:

Advertisements

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬಂದ ಆರಂಭದಲ್ಲೇ ಅಂದರೆ ಆಗಸ್ಟ್ ನಲ್ಲಿಯೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 2020ರ ಕೋವಿಡ್ ಅಂಧಯುಗದಲ್ಲಿ ಹೇರಲಾಗಿದ್ದ NEP 2020ನ್ನು ಕಿತ್ತೆಸೆದಿತ್ತು. ಸಂಸತ್ ಅಥವಾ ರಾಜ್ಯ ಶಾಸನ ಸಭೆಗಳ ಒಳಗಾಗಲಿ ಹೊರಗೆ ಸಾರ್ವಜನಿಕವಾಗಿಯಾಗಲಿ ಚರ್ಚಿಸದೆ ದೇಶದ ಮೇಲೆ ಹೇರಿದ್ದ ಈ ‘ರಾಷ್ಟ್ರೀಯ ಶಿಕ್ಷಣ ನೀತಿ’ ಯ ಅಡಿ ಪ್ರಾಯೋಗಿಕವಾಗಿ ಕರ್ನಾಟಕದಲ್ಲಿ ಜಾರಿ ಮಾಡಿದ್ದ NEP-2020ನ್ನು ತಿರಸ್ಕರಿಸಿತ್ತು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಐತಿಹಾಸಿಕವಾದ ವಿದ್ಯಮಾನವೊಂದು ಜರುಗುತ್ತಿದೆ. ಕರ್ನಾಟಕ ರಾಜ್ಯವು ತನ್ನ ಶಿಕ್ಷಣ ನೀತಿಯನ್ಜು ತಾನೇ ರೂಪಿಸಿಕೊಳ್ಳುತ್ತಿರುವುದೇ ಆ ವಿದ್ಯಮಾನ. ದುರದೃಷ್ಟಕರ ಸಂಗತಿ ಎಂದರೆ ಕರ್ನಾಟಕ ರಾಜ್ಯ ಸರ್ಕಾರದ ಈ ಐತಿಹಾಸಿಕ ಪ್ರಯತ್ನದ ಬಗ್ಗೆ, ಅದನ್ನು ಕರ್ನಾಟಕದ ಹಿತಾಸಕ್ತಿಗಳನ್ನು ಸಮರ್ಪಕವಾಗಿ ಬಿಂಬಿಸುವಂತೆ ರೂಪಿಸುವ ಬಗ್ಗೆ ಕನ್ನಡದ ವಿದ್ವಜ್ಜನ ಮಾತೇ ಆಡುತ್ತಿಲ್ಲ‌! ಇನ್ನು ಜನಸಾಮಾನ್ಯರ ಮಾತಂತು ದೂರವೇ ಉಳಿಯಿತು.

ಒಂದೆಡೆ, ಸಾರ್ವಜನಿಕರಿಗೆ ಅರ್ಥಾತ್ ಜನ ಸಾಮಾನ್ಯ ಕನ್ನಡಿಗನಿಗೆ ಈ ಬಗ್ಗೆ ಮಾಹಿತಿಯೇ ಇಲ್ಲವಾಗಿದೆ ಎಂಬಂತೆ ಕಂಡರೆ , ಸಾರ್ವಜನಿಕರಿಗೇ (ಅಂದರೆ ಕನ್ನಡಿಗರಿಗೇ) ಈ ಬಗೆಗೆ ಆಸಕ್ತಿ ಇಲ್ಲವೆಂಬಂತೆಯೂ ಈ ದೃಶ್ಯ ಕಾಣುತ್ತದೆ. ರಾಜ್ಯದ ಸಮಗ್ರ ಭವಿಷ್ಯವನ್ನು ರೂಪಿಸುವ ಶಿಕ್ಷಣ ನೀತಿ ಮೂರು ಕಾಸಿನ ಕಿಮ್ಮತ್ತೂ ಇಲ್ಲದ ಸಾರ್ವಜನಿಕ ನಿರ್ಲಕ್ಷ್ಯದ ನಡುವೆ ತಯಾರಾಗುತ್ತಿದ್ದು, ಈ‌ ನೀತಿಯಿಂದ ತನಗೇನೂ ಆಗಬೇಕಾದ್ದಿಲ್ಲ ಎಂಬಂತಿರುವ ಕರ್ನಾಟಕ ಕರುಣಾಜನಕವಾಗಿ ಕಾಣುತ್ತದೆ

Advertisements

ಕರ್ನಾಟಕದಲ್ಲಿ ಆಡಳಿತ ವಹಿಸಿಕೊಂಡ ಕಾಂಗ್ರೆಸ್ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬಂದ ಆರಂಭದಲ್ಲೇ ಅಂದರೆ ಆಗಸ್ಟ್ ನಲ್ಲಿಯೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 2020 ರ ಕೋವಿಡ್ ಅಂಧಯುಗದಲ್ಲಿ ಹೇರಲಾಗಿದ್ದ NEP 2020ನ್ನು ಕಿತ್ತೆಸೆದಿತ್ತು. ಸಂಸತ್ ಅಥವಾ ರಾಜ್ಯ ಶಾಸನ ಸಭೆಗಳ ಒಳಗಾಗಲಿ ಹೊರಗೆ ಸಾರ್ವಜನಿಕವಾಗಿಯಾಗಲಿ ಚರ್ಚಿಸದೆ ದೇಶದ ಮೇಲೆ ಹೇರಿದ್ದ ಈ ‘ರಾಷ್ಟ್ರೀಯ ಶಿಕ್ಷಣ ನೀತಿ’ ಯ ಅಡಿ ಪ್ರಾಯೋಗಿಕವಾಗಿ ಕರ್ನಾಟಕದಲ್ಲಿ ಜಾರಿ ಮಾಡಿದ್ದ NEP-2020ನ್ನು ತಿರಸ್ಕರಿಸಿದ ರಾಜ್ಯ ಸರ್ಕಾರ, ಕರ್ನಾಟಕಕ್ಕೇ ಪ್ರತ್ಯೇಕವಾದೊಂದು ಶಿಕ್ಷಣ ನೀತಿಯನ್ನು ರೂಪಿಸಿಕೊಳ್ಳುವ ಐತಿಹಾಸಿಕ ನಿರ್ಧಾರ ಮಾಡಿ ನಂತರ ಒಂದು ಆಯೋಗವನ್ನೂ ರಚಿಸಿತು. ಇದುವರೆಗೆ ಕಳೆದ ಐವತ್ತೈದು ವರ್ಷಗಳಿಂದಲೂ ಕರ್ನಾಟಕ, ಕೇಂದ್ರವೇ ರೂಪಿಸಿದ ನಾಲ್ಕು ಶಿಕ್ಷಣ ನೀತಿಗಳನ್ನೂ (1968…1986…1992, 2020) ಮರುಮಾತಾಡದೆ ಒಪ್ಪಿಕೊಂಡಿತ್ತು. ಈ ಕಾರಣದಿಂದಾಗಿ ಕರ್ನಾಟಕದ ಈ ನಿರ್ಧಾರ ಐತಿಹಾಸಿಕವೆಂದು ಪರಿಗಣಿಸಲ್ಪಡಲು ಅರ್ಹವಾಗಿದೆ.

ಈ ಹೊಸ ‘ನೀತಿ’ ಯನ್ನು ಕೇವಲ ನೂತನ ರಾಜ್ಯ ಶಿಕ್ಷಣ ನೀತಿ ರಚನಾ ಆಯೋಗ (KSEP) ವಷ್ಟೇ ಅಲ್ಲದೆ, 1968ರಿಂದ ಇಲ್ಲಿಯವರೆಗೆ ರಾಷ್ಟ್ರೀಯ ಶಿಕ್ಷಣ ನೀತಿಗಳ ಬಲಿಪಶುವಾಗಿರುವ ರಾಜ್ಯದ ಸಮಸ್ತ ಕನ್ನಡಿಗರೂ ಕೈಜೋಡಿಸಿ ಬರೆದುಕೊಳ್ಳಬೇಕಾಗಿದೆ.

ಇಲ್ಲೀವರೆಗಿನ ಶಿಕ್ಷಣ ನೀತಿಗಳು ಪ್ರತಿಪಾದಿಸಿದ ತ್ರಿಭಾಷಾ ಸೂತ್ರ ಎಡೆಗೊಟ್ಟಿರುವ ಇಂಗ್ಲಿಷ್ ಶಿಕ್ಷಣ ಮಾಧ್ಯಮದಂತಹ ತಾರತಮ್ಯದ ಶಿಕ್ಷಣದಿಂದ ಮೊದಲುಗೊಂಡು, ಬಹು ದೀರ್ಘಾವಧಿಯಿಂದ ಕನ್ನಡ ಸಾಂಸ್ಕೃತಿಕ ಅಸ್ಮಿತೆಗೆ ಹಾನಿಮಾಡಿಕೊಂಡಿರುವವರೆಗೆ ಬಹು ದೀರ್ಘಾವಧಿಯ ಸಂತ್ರಸ್ತ ಸಮಾಜವಾಗಿರುವ ಕರ್ನಾಟಕದ ಜನತೆಯ ಸ್ವಾಭಿಮಾನ ಶೂನ್ಯ ಜಡತೆಯ ಕಾರಣದಿಂದ ಸಕ್ರಿಯ ಪಾಲ್ಗೊಳ್ಳುವಿಕೆಯಿಲ್ಲದೆ ಮುಂಬರಲಿರುವ ನೀತಿ ಕನ್ನಡಿಗನ ಅಸ್ಮಿತೆಯನ್ನಾಗಲೀ, ಘನತೆಯ ಅಸ್ತಿತ್ವವನ್ನಾಗಲಿ ಎತ್ತಿಹಿಡಿಯುವ ಬಗೆಗೆ ಅಥವಾ ಕನ್ನಡಿಗನ ಸರ್ವತೋಮುಖ ಏಳಿಗೆಯನ್ನು ಪೂರೈಸುವ ಬಗೆಗೆ ಸಂಶಯಗಳಿವೆ.

ಯಾಕೆಂದರೆ ಶಿಕ್ಷಣ ನೀತಿಯಿಂದ ಪೂರೈಸಬೇಕಾಗಿರುವ ಕನ್ನಡ ಜನ ಸಾಮಾನ್ಯನ ಬೇಡಿಕೆಗಳು ನಿರೀಕ್ಷೆಗಳು ಹೊರಲಾರದ ಹೊರೆಯಷ್ಟಿವೆ.
೧. ಪ್ರತಿ ವರ್ಷವೂ ಲಕ್ಷಾಂತರ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳು (ಅಂದಾಜು 5 ಲಕ್ಷ) ಉನ್ನತ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವಿಲ್ಲದ ಕಾರಣ ಶಿಕ್ಷಣದಿಂದಲೇ ನಿವಾರಿಸಲ್ಪಡುತ್ತಿದ್ದಾರೆ.
೨. ತ್ರಿಭಾಷಾ ನೀತಿಯು ತನ್ನ ಹಿಂದಿ ಮತ್ತು ಸಂಸ್ಕೃತಗಳ ಹೇರಿಕೆಯ ಮೂಲಕ ಕನ್ನಡವನ್ನು ದ್ವಿತೀಯ ತೃತೀಯ ಸ್ಥಾನಗಳಿಗೆ ತಳ್ಳುತ್ತ, ಕರ್ನಾಟಕವನ್ನು ಶೈಕ್ಷಣಿಕವಾಗಿ, ನೈತಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ರಾಜಕೀಯವಾಗಿ ಹಣಿದು ಜರ್ಜರಿತಗೊಳಿಸುತ್ತಿದೆ.
೩. ಹತ್ತನೆಯ ತರಗತಿಯ ನಂತರ ಕನ್ನಡ ಮಾಧ್ಯಮದ ಶಿಕ್ಷಣ ನಿಲುಗಡೆಗೆ ಬರುವ ಕಾರಣದಿಂದ, ವಿದ್ಯಾರ್ಥಿಗಳ ಕೊರತೆಯಿಂದ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಮುಚ್ಚಿಹೋಗುತ್ತಿವೆ.
೪. ರಾಜ್ಯ ಪಠ್ಯಕ್ರಮ, ಸಿಬಿಎಸ್ಇ, ಐಸಿಎಸ್ ಇ, ಐಜಿಸಿಎಸ್ ಹೀಗೆ ಹಲವು ತೆರನಾದ ಪಠ್ಯಕ್ರಮಗಳು ತಾರತಮ್ಯವನ್ನು ಸೃಷ್ಟಿಸುತ್ತಿವೆ
೫. ಶಿಕ್ಷಣ ಹಕ್ಕು ಕಾಯ್ದೆಯು ಸಲಹೆ ಮಾಡುವ ರಚನಾತ್ಮಕ ಅಂಶಗಳನ್ನು ತೊರೆದು, ಸರ್ಕಾರಿ ಶಾಲೆಗಳ ಪ್ರವೇಶಾತಿ ಕುಸಿಯುವಂತೆ ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ಖಾಸಗಿ ಶಿಕ್ಷಣ ಕ್ಷೇತ್ರವನ್ನು ಬಲಿಷ್ಟಗೊಳಿಸುವ ಕೆಲಸವನ್ನು ಇದುವರೆಗಿನ ಸರ್ಕಾರಗಳು
ಮಾಡಿಕೊಂಡು ಬಂದವು.
೬.ಭಾಷಾವಾರು ತತ್ವಕ್ಕನುಸಾರವಾಗಿ ರೂಪು ತಳೆದಿದ್ದ ಸರ್ಕಾರಿ ಶಾಲೆಗಳ ಶಿಕ್ಷಣ ಮಾಧ್ಯಮ ನೀತಿಯನ್ನು ದುರ್ಬಲಗೊಳಿಸಿ ಅಲ್ಲೀಗ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳೆಂಬ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಆರಂಭಿಸಲಾಗುತ್ತಿದೆ.
೭.ಜೊತೆಗೆ ನಾಲ್ಕು ಸಾವಿರ ಸರ್ಕಾರಿ ಶಾಲೆಗಳನ್ನು ದ್ವಿಮಾಧ್ಯಮ ಶಾಲೆಗಳನ್ನಾಗಿ ಬದಲಿಸಲಾಗುತ್ತಿದೆ. ಈ ಮೂಲಕ ಈಗ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ‍ ಭಾಷಾವಾರು ರಾಜ್ಯ ರಚನೆಯ ಮೂಲ ತತ್ವಕ್ಕೂ, ಅ ತತ್ವದ ಅಡಿ ಕಟ್ಟಲಾದ ಸರ್ಕಾರಿ ಶಾಲೆಗಳ ಕನ್ನಡ ನುಡಿ ಮಾಧ್ಯಮದ ನೀತಿಗೂ ದ್ರೋಹ ಬಗೆದಿದೆ.

ಹೀಗೆ ‘ಕರ್ನಾಟಕ ಶಿಕ್ಷಣ ನೀತಿ ಆಯೋಗ’ದ ಎದುರು ಇಂತಹ ಹಲವು ಕುಂದು‌ಕೊರತೆ, ಬೇಡಿಕೆ, ಆಗ್ರಹ ಹಕ್ಕೊತ್ತಾಯಗಳನ್ನು ಇಡಬೇಕಾಗಿದ್ದ; ಚರ್ಚೆ ವಾಗ್ವಾದಕ್ಕೆ ಮುಂದಾಗಬೇಕಾಗಿದ್ದ ಕರ್ನಾಟಕ ರಾಜ್ಯದ ಜನತೆ, ಶಿಕ್ಷಣ ನೀತಿಯು ರೂಪುಗೊಳ್ಳುವ ಹೊತ್ತಿನಲ್ಲಿ ತನ್ನ ಬೇಕು ಬೇಡಗಳ ಬಗ್ಗೆ ಮಾತಾಡದೆ ಸದ್ದಿಲ್ಲದೆ ಮಲಗಿರುವುದು ಚಿಂತಾಜನಕವಾಗಿದೆ.

1980ರ ದಶಕದಲ್ಲಿ ಕೇವಲ ಪ್ರೌಢ ಶಾಲೆಯ ಪ್ರಥಮ ಭಾಷೆಯ ಬಗ್ಗೆ ವರದಿ ಸಲ್ಲಿಸಲು ನೇಮಕವಾಗಿದ್ದ ಗೋಕಾಕ್ ಸಮಿತಿ ಸಂಸ್ಕೃತದ ಪರವಾಗಿ ನಿಂತುಬಿಡಬಹುದೆಂಬ ಆತಂಕದಲ್ಲಿ ಆಯೋಗದ ಬಗ್ಗೆ ಸಂಶಯಗಳನ್ನು ತಳೆದಿದ್ದ ಕರ್ನಾಟಕದ ವಿದ್ವತ್ ವಲಯ ಪ್ರದರ್ಶಿಸಿದ ಎಚ್ಚರವನ್ನು ಕೆಳಗಿನ ಉಲ್ಲೇಖ ವಿವರಿಸುತ್ತದೆ. ಗೋಕಾಕ್ ಸಮಿತಿ ರಚನೆಗೊಂಡ ಬಳಿಕ ಅದು ಸಾರ್ವಜನಿಕರ ಸಲಹೆ, ನಿರೀಕ್ಷೆ, ಬೇಕು ಬೇಡಗಳನ್ನು ತಿಳಿದುಕೊಳ್ಳಲು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಸಾರ್ವಜನಿಕ ಸಭೆ ಸಂದರ್ಶನ ಭೇಟಿಗಳಿಗೆ ಮುಂದಾಗುತ್ತದೆ. ಆ ಸಂದರ್ಭದ ಚಿತ್ರಣವನ್ನು ಇಲ್ಲಿ ನೋಡಬಹುದಾಗಿದೆ.

“ಸರ್ಕಾರವು ೧೯೮೦ರ ಜುಲೈ ೫ರಂದು ‘ಭಾಷಾ ತಜ್ಞರ ಸಮಿತಿ’ಯ ರಚನೆಯನ್ನು ಕುರಿತ ಆಜ್ಞೆಯೊಂದನ್ನು ಹೊರಡಿಸಿತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಆಜ್ಞೆಯು ಹೊರಟಿದ್ದು ಆರ್. ಗುಂಡೂರಾವ್‌ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ. ಅವರನ್ನು ಸಂಸ್ಕೃತಪರವಾದಿಗಳೆಂದೂ, ಸ್ವಾಮೀಜಿಯೊಬ್ಬರ ಮಾತಿನ ಮೇರೆಗೆ (ಉಡುಪಿಯ ಪೇಜಾವರ ಶ್ರೀಗಳ ಮಾತಿನ ಮೇರೆಗೆ) ಸಂಸ್ಕೃತಕ್ಕೆ ಸ್ಥಾನ-ಮಾನಗಳನ್ನು ನಿರ್ಧರಿಸಲು ಈ ಸಮಿತಿಯನ್ನು ರಚಿಸಿದ್ದರೆಂದು ಜನರಲ್ಲಿ ಗುಮಾನಿಗಳು ಹುಟ್ಟಿಕೊಂಡವು. ಅಲ್ಲದೆ ಈ ಸಮಿತಿಯ ಅಧ್ಯಕ್ಷ ರಾಗಿದ್ದವರು ಸಹ ‘ಸಂಸ್ಕೃತ ಪರವಾದಿ’ಗಳೆಂದೇ ಶಂಕಿಸಲಾಗಿದ್ದ ಡಾ.ವಿ.ಕೃ.ಗೋಕಾಕ್ ಅವರು. ಉಳಿದಂತೆ ಸಮಿತಿಯ ಸದಸ್ಯರಾಗಿ ಜಿ.ನಾರಾಯಣ, ಎಸ್.ಕೆ.ರಾಮಚಂದ್ರರಾವ್‌, ತ.ಸು. ಶಾಮರಾವ್‌, ಡಾ.ಕೆ.ಕೃಷ್ಣಮೂರ್ತಿ, ಡಾ.ಎಚ್.ಪಿ. ಮಲ್ಲೇದೇವರು, ಸಾ.ಮಂಚಯ್ಯ ಅವರು ಇದ್ದರು. ಇವರಲ್ಲಿ ಬಹುಪಾಲು ಸಂಸ್ಕೃತ ಪರವಾಗಿ ವಾದಿಸುವ ಬ್ರಾಹ್ಮಣರ ಸಂಖ್ಯೆಯೇ ಹೆಚ್ಚೆಂದು ಕನ್ನಡ ಪರವಾಗಿ ವಾದಿಸುತ್ತಿದ್ದವರಿಗೆ ಗುಮಾನಿ ಬಂದಿತು. ಹೀಗಾಗಿ ಈ ಸಮಿತಿಯ ವಿರುದ್ಧವೇ ಮೊದಲ ಪ್ರತಿಭಟನೆಗಳು ಶುರುವಾದವು. “ಬೆಂಗಳೂರಿನಲ್ಲಿ ಗೋಕಾಕ್ ಸಮಿತಿಯ ವಿರುದ್ಧ ಬಂಡಾಯ ಸಂಘಟನೆಯು ಮೊಟ್ಟಮೊದಲ ಬಾರಿಗೆ ಧ್ವನಿ ಎತ್ತಿತು” ಡಿ.ಆ‌ರ್.ನಾಗರಾಜ, ಕಿರಂ.ನಾಗರಾಜ, ಅಗ್ರಹಾರ ಕೃಷ್ಣಮೂರ್ತಿ ಮೊದಲಾದ ಸಾಹಿತಿಗಳು ಗೋಕಾಕರನ್ನು ಭೇಟಿ ಮಾಡಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದೂ ಉಂಟು.

ಸರ್ಕಾರವು ಗೋಕಾಕ್ ಅವರ ಅಧ್ಯಕ್ಷತೆಯ ಸಮಿತಿಗೆ-

೧. ಸಂಸ್ಕೃತ ಶಾಲಾ ಪಠ್ಯವಸ್ತುವಿನಲ್ಲಿ ಅಭ್ಯಾಸದ ವಿಷಯವಾಗಿ ಉಳಿಯಬೇಕೆ?
೨. ಉಳಿಯಬೇಕಾದರೆ ಕನ್ನಡಕ್ಕೆ ಪರ್ಯಾಯವಾಗದೆ ಉಳಿಸುವುದು ಹೇಗೆ?
೩. ತ್ರಿಭಾಷಾ ಸೂತ್ರದಂತೆ ಕನ್ನಡ ಕಡ್ಡಾಯ ಮಾಡಿ ಉಳಿದೆರಡು ಭಾಷೆಗಳ ಆಯ್ಕೆಯ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳಿಗೆ ಬಿಡುವುದು ಸೂಕ್ತವೇ? – ಎಂಬ ಮೂರು ವಿಷಯಗಳ ಬಗ್ಗೆ ಪರಿಶೀಲನೆ, ಅಧ್ಯಯನ ನಡೆಸಿ ಮೂರು ತಿಂಗಳ ಒಳಗಾಗಿ ವರದಿ ನೀಡಲು ಸೂಚಿಸಿತ್ತು. ಅದರಂತೆ ಗೋಕಾಕ್ ಅವರು ಮೊಟ್ಟ ಮೊದಲು ಧಾರವಾಡದಲ್ಲಿ ಅಭಿಪ್ರಾಯ, ಮನವಿಗಳನ್ನು ಸಂಗ್ರಹಿಸಲು ಹೊರಟರು. ಈ ವೇಳೆಗಾಗಲೇ ಹುಬ್ಬಳ್ಳಿಯಲ್ಲಿನ ‘ಕರ್ನಾಟಕ ಕ್ರಾಂತಿ’ ಕೂಟದ ಸಂಘಟಕರು ‘ಗೋಕಾಕ್ ಸಮಿತಿ’ ವಿರುದ್ಧ ಧ್ವನಿ ಎತ್ತಿದ್ದರು.

ಧಾರವಾಡದಲ್ಲಿ ಸಮಿತಿಯ ವಿರುದ್ಧ ಪ್ರತಿಭಟನೆ

೧೯೮೦ರ ಅಕ್ಟೋಬ‌ರ್ ೨೩ರಂದು ಧಾರವಾಡದ ‘ಟ್ರೈನಿಂಗ್ ಕಾಲೇಜಿ’ನಲ್ಲಿ ಗೋಕಾಕ್ ಸಮಿತಿ ಬೈಠಕ್ ಮಾಡುವುದೆಂದು ತಿಳಿಯಿತು. ೨೩ರಂದು ಮುಂಜಾನೆ ೧೧ ಗಂಟೆಗೆ ಸಭೆ ಸೇರಿದ ಗೋಕಾಕ್ ಮತ್ತು ಸಮಿತಿಯ ಸದಸ್ಯರನ್ನು ವಿರೋಧಿಸುವ ಘೋಷಣೆಗಳು ಚಂದ್ರಶೇಖರ ಪಾಟೀಲ, ಬಸವರಾದ ಕಟ್ಟಿಮನಿ, ಎಂ.ಎಂ. ಕಲಬುರ್ಗಿ, ಚನ್ನವೀರ ಕಣವಿ, ಗುಂಜೆಟ್ಟಿ ಮೊದಲಾದವರಿಂದ ಕಾಲೇಜಿನ ಹೊರಗಡೆ ಶುರುವಾದವು. ಇಂಥ ಪ್ರತಿಭಟನೆಗಳನ್ನು ನಿರೀಕ್ಷಿಸದಿದ್ದ ಗೋಕಾಕ್ ಅವರು ಚಂದ್ರಶೇಖರ ಪಾಟೀಲ(ಚಂಪಾ)ರನ್ನು ಅವರಿದ್ದ ಕೊಠಡಿಗೆ ಕರೆಸಿ ವಿಚಾರಿಸಿದರು. ಅದಕ್ಕೆ ಚಂಪಾ ಅವರು ತಮ್ಮ ಪ್ರತಿಭಟನೆ ‘ಸಂಸ್ಕೃತ’ದ ಸ್ಥಾನ-ಮಾನ ಗಳನ್ನು ನಿರ್ಧರಿಸುವುದರ ವಿರುದ್ಧ ಎಂದು ಸ್ಪಷ್ಟಪಡಿಸಿದರು. ಆದರೆ ಸ್ಥಳದಲ್ಲಿಯೇ ಇದ್ದ ಡಿ.ಡಿ.ಪಿ.ಐ. ಅವರನ್ನು ಕರೆಸಿ ಸರ್ಕಾರಿ ಆದೇಶವನ್ನು ಓದಿಸಲಾಯಿತು. ಅದರಲ್ಲಿ (Circular ನಲ್ಲಿ) ಮೊದಲ ಆದ್ಯತೆ ಸಂಸ್ಕೃತಕ್ಕೂ, ಅನಂತರ ಕನ್ನಡ, ಇಂಗ್ಲಿಷ್ ಭಾಷೆಗಳಿಗೂ ನೀಡಿದ್ದುದು ಕಂಡುಬಂದಿತು. ಕೂಡಲೇ, ಸರ್ಕಾರಿ ಆಜ್ಞೆಯನ್ನು ಬಂದು ಓದಿದ ಡಿ.ಡಿ.ಪಿ.ಐ. ಅಧಿಕಾರಿಯ ಮೇಲೆ ಗೋಕಾಕ್ ಸಿಟ್ಟಾದದ್ದು ಕನ್ನಡಪರ ವಾದಿಗಳಿಗೆ ಮತ್ತಷ್ಟು ಸಂಶಯ ಮೂಡಲು ಕಾರಣವಾಗದಿರಲಿಲ್ಲ. ಚಂಪಾ ಅವರು ಗೋಕಾಕ್ ಅವರೊಂದಿಗಿನ ಸಂವಾದ, ಪರಿಸ್ಥಿತಿಯನ್ನು ಹೊರಗಡೆ ಇದ್ದ ಪ್ರತಿಭಟನಕಾರರಿಗೆ ವಿವರಿಸಿದರು.

ಗೋಕಾಕ್, ಗೋ ಬ್ಯಾಕ್’ ಘೋಷಣೆ

ಟ್ರೈನಿಂಗ್ ಕಾಲೇಜಿನ ಹೊರಗೆ ಕಾಯುತ್ತಿದ್ದ ಪ್ರತಿಭಟನಕಾರರು ಸಮಿತಿಗೆ ಮನವಿಗಳು ಸಂಗ್ರಹವಾಗದ ರೀತಿಯಲ್ಲಿ ಅಡ್ಡಿಪಡಿಸುತ್ತಿದ್ದರಷ್ಟೇ ಅಲ್ಲದೆ, ಸಂಸ್ಕೃತ ಪರವಾಗಿ ಈ ಪರಿಶೀಲನಾ ಸಮಿತಿ ಬಂದಿರುವುದೆಂದು ಶಂಕಿಸಿ ದಿಕ್ಕಾರಗಳನ್ನು ಕೂಗಿದ್ದೂ ಉಂಟು. ಚಂದ್ರಶೇಖರ ಪಾಟೀಲ, ಎಂ.ಎಂ. ಕಲಬುರ್ಗಿ ಮೊದಲಾದವರು ಗೋಕಾಕರು ಸಭೆ ಸೇರಿದ್ದ ಕೊಠಡಿಗೆ ನುಗ್ಗಿ ‘ಗೋಕಾಕ್, ಗೋ ಬ್ಯಾಕ್’ ಎಂಬ ಘೋಷಣೆಗಳನ್ನು ಕೂಗಿ ಪ್ರತಿಕ್ರಿಯಿಸಿದರು. ಇವರೊಂದಿಗೆ ಬಸವರಾಜ ಕಟ್ಟಿಮನಿ, ಚನ್ನವೀರ ಕಣವಿ ಹಾಗೂ ಇತರ ಪ್ರತಿಭಟನಕಾರರು ಸೇರಿಕೊಂಡಿದ್ದರು. ತೀವ್ರ ಸ್ವರೂಪದ ಪ್ರತಿಭಟನೆಗಳು ಗೋಕಾಕ್ ಸಮಿತಿಯವರನ್ನು ಬೆಳಗಾಂ, ಬಿಜಾಪುರಗಳಲ್ಲೂ ಸುತ್ತುವರೆದವು. ಧಾರವಾಡದ ಸ್ನೇಹಿತರಿಂದ ಬಿಜಾಪುರದ ಚಳವಳಿಗಾರರಿಗೆ ಎಲ್ಲ ರೀತಿಯ ಮಾಹಿತಿಗಳು ಸಮಿತಿ ಅಲ್ಲಿಗೆ ಬರುವ ಮೊದಲೇ ತಲುಪಿದ್ದವು. ಇಂಥ ಅನೇಕ ಪ್ರತಿರೋಧಗಳ ನಡುವೆಯೂ ಈ ಭಾಷಾ ತಜ್ಞರ ಸಮಿತಿ ತನ್ನ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೆ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತು. ಈ ‘ಭಾಷಾ ವರದಿ’ಯ ‘ಗೋಕಾಕ್ ವರದಿ’ (ಈ ವರದಿಯನ್ನು ಅಧ್ಯಾಯ ಮೂರರಲ್ಲಿ ಕೊಡಲಾಗಿದೆ). ಕನ್ನಡ ಪರವಾದಿಗಳು ಗುಮಾನಿ-ಶಂಕೆಗಳಿಂದ ಗಮನಿಸುತ್ತಿದ್ದ ಗೋಕಾಕ್ ವರದಿಯು ಅಂತಿಮವಾಗಿ ಕನ್ನಡಕ್ಕೆ ಮೊದಲ ಸ್ಥಾನವನ್ನು ಕೊಟ್ಟು ಸಂಸ್ಕೃತಕ್ಕೆ ಮೂರನೆಯ ಸ್ಥಾನವನ್ನೇ ನೀಡಿದ್ದು ಸಮಾಧಾನವನ್ನು ತಂದಿತು. (ಆಕರ: ‘ಗೋಕಾಕ್ ವರದಿ’, ಡಾ ಸಿ ಆರ್ ಗೋವಿಂದ ರಾಜು- ಕನ್ನಡ ಸಾಹಿತ್ಯ ಪರಿಷತ್ತು, 2022 )

ಗೋಕಾಕ್
ವಿ ಕೃ ಗೋಕಾಕ್‌

ಗೋಕಾಕ್ ಸಮಿತಿಯ ಮುಂದೆ ಇದ್ದ ಸರ್ಕಾರದ ಆದೇಶ, ಪ್ರೌಢ ಶಾಲೆಗಳಲ್ಲಿ ಕನ್ನಡ ಭಾಷೆಯ ವಿಷಯ (ಸಬ್ಜೆಕ್ಟ್) ವನ್ನು ಪ್ರಥಮ ಭಾಷೆಯ ಸ್ಥಾನ ನೀಡುವ ಸಂಬಂಧ ಇತ್ತಷ್ಟೆ. ಅಷ್ಟು ಸಾಧಾರಣವಾದ ವಿಷಯ ಅದಾಗಿತ್ತು. ಆದರೆ ಅದಕ್ಕಾಗಿ ಗೋಕಾಕ್ ಆಯೋಗ, ಕರ್ನಾಟಕದ ಜನತೆಯಿಂದ ಮನವಿ ಅಬಿಪ್ರಾಯಗಳನ್ನು ಪಡೆಯಲು ಸ್ವಯಂಪ್ರೇರಿತವಾಗಿ ಮುಂದಾಗಿದ್ದು, ಹಲವು ಸಂಶಯಗಳ ಕಾರಣದಿಂದ ಆ ಕಾಲದ ವಿದ್ವಜ್ಜನ ಪ್ರತಿಭಟಿಸಲು ಧಾರವಾಡ, ಮೈಸೂರು, ಬೆಂಗಳೂರು ಮುಂತಾದೆಡೆ ‘ಕನ್ನಡ ಕ್ರಿಯಾ ಸಮಿತಿ’ ಗಳನ್ನು ರಚಿಸಿ ಪ್ರತಿಭಟನಾ ಕಣಕ್ಕೆ ಇಳಿದಿದ್ದು…ಈ ಎಲ್ಲವನ್ನೂ ಮೇಲಿನ‌ ಉಲ್ಲೇಖವು ದಾಖಲಿಸುತ್ತದೆ.

ಕನ್ನಡಕ್ಕೆ ಪ್ರಥಮ ಭಾಷೆಯ ಸ್ಥಾನವನ್ನು ಕಲ್ಪಿಸಲು ನಡೆದ ಸಾಧಾರಣ ಬೇಡಿಕೆಗಾಗಿ ಅಂತಹ ದೊಡ್ಡ ಚಳವಳಿ, ತನ್ನ ಬೇಕು ಬೇಡಗಳನ್ನು ಆಗ್ರಹಗಳನ್ನು ಆಯೋಗದ ಗಮನಕ್ಕೆ ತರುವ ಉದ್ದೇಶದಿಂದ ನಡೆಯಿತೆಂದರೆ ಈಗ, ಕರ್ನಾಟಕದ ಶಿಕ್ಷಣದ ಹಣೆಬರೆಹವನ್ನು ತಿರ್ಮಾನಿಸುವ, ಸಮಸ್ತ ಕನ್ನಡಿಗರ ಆರ್ಥಿಕ ಸಾಮಾಜಿಕ ರಾಜಕೀಯ ಆಧ್ಯಾತ್ಮಿಕಾದಿ ಸಮಸ್ತ ಭವಿಷ್ಯವನ್ನು ರೂಪಿಸುವ, ಕನ್ನಡ ಭಾಷೆಯ ಬೆಳವಣಿಗೆಯನ್ನು ಪ್ರಬಾವಿಸುವ ‘ರಾಜ್ಯ ಶಿಕ್ಷಣ ನೀತಿ’ ರಚನೆಯಾಗುತ್ತಿರುವಾಗ ಆಯೋಗವೂ ಜನಾಭಿಪ್ರಾಯವನ್ನು ತೆಗೆದುಕೊಳ್ಳುವ ಕೆಲಸ ಮಾಡದೆ, ಜನತೆಯೂ ತನ್ನ ಅಭಿಪ್ರಾಯವನ್ನು ಆಯೋಗದ ಮುಂದಿಡಲು ಮುಂದೆ ಬಾರದೆ ಇಂತಹ ಸನ್ನಿವೇಶದಲ್ಲಿ ಎಂತಹ ‘ನೀತಿ’ ಸಿದ್ದವಾಗಬಹುದು ಎಂಬುದನ್ನು ಊಹಿಸಬಹುದಾಗಿದೆ.

ಶಿಕ್ಷಣದಂತಹ ವಿಷಯವು ರಾಜ್ಯಗಳ ಹಕ್ಕಿಗೆ ಬಿಟ್ಟ ಸಂಬಂಧಿಸಿದ ವಿಷಯವಾದರೂ, ಹೊಣೆ ಹೊತ್ತುಕೊಳ್ಳುವ ಯೋಗ್ಯತೆ ಇಲ್ಲದೆ, 1968,1986, 1992 ಮತ್ತು 2020ರ ರಾಷ್ಟ್ರೀಯ ಶಿಕ್ಷಣ ನೀತಿಗಳನ್ನು ಅಂದರೆ ಕೇಂದ್ರ ಸರ್ಕಾರಗಳ ನೀತಿಗಳನ್ನೇ ಕರ್ನಾಟಕ ವಿಧೇಯವಾಗಿ ಅನುಸರಿಸುತ್ತ ಬಂದಿದೆ. 1968ರಿಂದಲೇ ತಮಿಳುನಾಡು ರಾಷ್ಟ್ರೀಯ ಶಿಕ್ಷಣ ನೀತಿಗಳನ್ನು ಉದ್ದಕ್ಕೂ ಒಪ್ಪಿಕೊಳ್ಳದೆ ಅವೆಲ್ಲವುಗಳ ಅಂತರ್ಗತ ತ್ರಿಭಾಷಾ ನೀತಿಯನ್ನೂ ಮತ್ತು ಸಾಂಸ್ಕೃತಿಕ ಗುಲಾಮಗಿರಿಯನ್ನೂ ದೂರವಿಡುತ್ತಲೇ ಬಂದಿದೆ. ಬಂಗಾಳ, ಪಂಜಾಬ್ ಮತ್ತು ಗೋವಾದಂತಹ ರಾಜ್ಯಗಳೂ ದ್ವಿಭಾಷಾ ನೀತಿಯನ್ನು ಅನುಸರಿಸುತ್ತಿವೆ.

ಇನ್ನು, ಈ ರಾಜ್ಯ-ನಿರ್ದಿಷ್ಟ ಶಿಕ್ಷಣ ನೀತಿಯನ್ನು ರೂಪಿಸಲು ಅಕ್ಟೋಬರ್ 2023ರಲ್ಲಿ ಸ್ಥಾಪಿಸಲಾದ ಕರ್ನಾಟಕ ರಾಜ್ಯ ಶಿಕ್ಷಣ ನೀತಿ (SEP) ಆಯೋಗವು 15 ಸದಸ್ಯರ ಸಮಿತಿ ಮತ್ತು ಎಂಟು ವಿಷಯ ತಜ್ಞರು/ ಸಲಹೆಗಾರರ ​​ಹೆಚ್ಚುವರಿ ಗುಂಪನ್ನು ಒಳಗೊಂಡಿದೆ.

ಸಮಿತಿ ಪದಾಧಿಕಾರಿಗಳು :

Sukhadeo
ಸುಖದೇವ್‌ ಥೋರಟ್‌

ಸುಖದೇವ್ ಥೋರಟ್ – ಅಧ್ಯಕ್ಷರು: ಪ್ರಖ್ಯಾತ ಶಿಕ್ಷಣತಜ್ಞ, ಅರ್ಥಶಾಸ್ತ್ರಜ್ಞ, ಬರಹಗಾರ ಮತ್ತು ನವದೆಹಲಿಯ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾಜಿ ಅಧ್ಯಕ್ಷರು.

ಪ್ರೊ. ಎಸ್. ಜಾಫೆಟ್: ಯುಜಿಸಿ ಪ್ರಾಯೋಜಿತ ಸಾಮಾಜಿಕ ಹೊರಗಿಡುವಿಕೆ ಮತ್ತು ಒಳಗೊಳ್ಳುವ ನೀತಿಯ ಅಧ್ಯಯನ ಕೇಂದ್ರದ (CSSEIP) ಸ್ಥಾಪಕ ನಿರ್ದೇಶಕರು ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳು.

ಡಾ. ಸುಧೀರ್ ಕೃಷ್ಣಸ್ವಾಮಿ: ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ಭಾರತ ವಿಶ್ವವಿದ್ಯಾಲಯದ (NLSIU) ಉಪಕುಲಪತಿಗಳು.

ಪ್ರೊ. ಜೋಗನ್ ಶಂಕರ್: ಕುವೆಂಪು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ.

ಪ್ರೊ. ರಾಜೇಂದ್ರ ಚೆನ್ನಿ: ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು.

ಡಾ. ನಟರಾಜ್ ಬೂದಾಳು: ತುಮಕೂರು ಮೂಲದ ನಿವೃತ್ತ ಕನ್ನಡ ಪ್ರಾಧ್ಯಾಪಕರು ಮತ್ತು ಬರಹಗಾರರು.

ಪ್ರೊ. ಸುಧಾಂಶು ಭೂಷಣ್: ನವದೆಹಲಿಯ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯಲ್ಲಿ (NIEPA) ಉನ್ನತ ಮತ್ತು ವೃತ್ತಿಪರ ಶಿಕ್ಷಣ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು.

ಡಾ. ವಿ.ಪಿ. ನಿರಂಜನರಾಧ್ಯ: ಬೆಂಗಳೂರಿನ NLSIU ನಲ್ಲಿ ಶಿಕ್ಷಣ ತಜ್ಞ ಮತ್ತು ಸಾರ್ವತ್ರಿಕ ಶಿಕ್ಷಣದ ಕಾರ್ಯಕ್ರಮ ಮುಖ್ಯಸ್ಥರು.

ಡಾ. ಎಂ.ಎಸ್. ತಳವಾರ: ಬೆಂಗಳೂರು ವಿಶ್ವವಿದ್ಯಾಲಯದ ಯುಜಿಸಿ ಅಕಾಡೆಮಿಕ್ ಸ್ಟಾಫ್ ಕಾಲೇಜಿನ ನಿವೃತ್ತ ಶಿಕ್ಷಣ ಪ್ರಾಧ್ಯಾಪಕ ಮತ್ತು ನಿರ್ದೇಶಕ.

ಡಾ. ಸಂತೋಷ್ ನಾಯಕ್ ಆರ್: ಪ್ರಾಧ್ಯಾಪಕರು, ಸಮಾಜಶಾಸ್ತ್ರ ವಿಭಾಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು.

ಡಾ. ವಿನಯ ಒಕ್ಕುಂದ: ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾಂಡೇಲಿ, ಉತ್ತರ ಕನ್ನಡ; ಕನ್ನಡ ಬರಹಗಾರ ಮತ್ತು ಅಂಕಣಕಾರ.

ಡಾ. ಶರತ್ ಅನಂತ ಮೂರ್ತಿ: ಪ್ರಾಧ್ಯಾಪಕರು, ಭೌತಶಾಸ್ತ್ರ ಶಾಲೆ, ಹೈದರಾಬಾದ್ ವಿಶ್ವವಿದ್ಯಾಲಯ.

ಎ. ನಾರಾಯಣ: ಪ್ರಾಧ್ಯಾಪಕರು, ನೀತಿ ಮತ್ತು ಆಡಳಿತ ಶಾಲೆ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ.

ಡಾ. ಭಾಗ್ಯವಾನ ಎಸ್. ಮುದಿಗೌಡ್ರ: ವಿಶೇಷ ಅಧಿಕಾರಿ, ಉನ್ನತ ಶಿಕ್ಷಣ ಇಲಾಖೆ; ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾರೆ, ಸಭೆಗಳ ನಡಾವಳಿಗಳನ್ನು ಸಂಘಟಿಸುತ್ತಾರೆ ಮತ್ತು ನಿರ್ವಹಿಸುತ್ತಾರೆ.

ವಿಷಯ ತಜ್ಞರು/ಸಲಹೆಗಾರರು:

ಯೋಗೇಂದ್ರ ಯಾದವ್: ದೆಹಲಿಯ ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರದಲ್ಲಿ ಹಿರಿಯ ಸಹೋದ್ಯೋಗಿ.

    ಪ್ರೊ. ರಹಮತ್ ತರೀಕೆರೆ: ನಿವೃತ್ತ ಕನ್ನಡ ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ, ಹಂಪಿ.

    ಪ್ರೊ. ಜಾನಕಿ ನಾಯರ್: ಇತಿಹಾಸಕಾರ ಮತ್ತು ನಿವೃತ್ತ ಪ್ರಾಧ್ಯಾಪಕ, ಐತಿಹಾಸಿಕ ಅಧ್ಯಯನ ಕೇಂದ್ರ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು), ನವದೆಹಲಿ.

    ಸೋನಮ್ ವಾಂಗ್ಚುಕ್: ಎಂಜಿನಿಯರ್ ಆಗಿ ಬದಲಾದ ಶಿಕ್ಷಣ ಸುಧಾರಕರು ಮತ್ತು ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್, ಲಡಾಖ್ (HIAL) ನ ನಿರ್ದೇಶಕರು.

    ಪ್ರೊ. ವಲೇರಿಯನ್ ರೊಡ್ರಿಗಸ್: ಪ್ರೊಫೆಸರ್, ಸೆಂಟರ್ ಫಾರ್ ಪೊಲಿಟಿಕಲ್ ಸ್ಟಡೀಸ್, ಜೆಎನ್‌ಯು, ನವದೆಹಲಿ.

    ಸಬಿಹಾ ಭೂಮಿಗೌಡ: ಲೇಖಕಿ ಮತ್ತು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಕುಲಪತಿ, ವಿಜಯಪುರ; ನಿರ್ದೇಶಕರು (ನಿಮಿಷ ಅಧಿಕಾರಿ), ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ, ಧಾರವಾಡ.

    ಡಾ. ಎಸ್. ಚಂದ್ರಶೇಖರ ಶೆಟ್ಟಿ: ಮಾಜಿ ಕುಲಪತಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು.

    ಆಗಸ್ಟ್ 2023) ಈ ಸಮಿತಿ ರಚಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೀಗೆ ಹೇಳಿದ್ದರು

    “ಶಿಕ್ಷಣ ನೀತಿ ನಿರೂಪಣೆ ರಾಜ್ಯದ ವಿಷಯವಾಗಿದ್ದು, ಈ ಹಿನ್ನೆಲೆಯಲ್ಲಿ ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ರಾಜ್ಯಕ್ಕೆ ಹೊಸ ಶಿಕ್ಷಣ ನೀತಿ ರೂಪಿಸಲು ಒಂದು ಸಮಿತಿ ರಚಿಸಲಾಗುವುದು. ಶಿಕ್ಷಣಕ್ಕೆ ಕೇಂದ್ರ ಸರ್ಕಾರ ನೀತಿ ರೂಪಿಸಲು ಸಾಧ್ಯವಿಲ್ಲ. ಏಕೆಂದರೆ ಅದು ರಾಜ್ಯದ ವಿಷಯ. ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಶಿಕ್ಷಣ ನೀತಿಯನ್ನು ಕೇಂದ್ರ ಹೇರಲಾಗದು. ಹೇರಲು ಹೊರಟಿರುವುದು ಒಂದು ಹುನ್ನಾರ. ಬಹು ಸಂಸ್ಕೃತಿ, ಬಹುತ್ವ ಇರುವ ದೇಶದಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಮಾಡಲಾಗದು. ಆದ್ದರಿಂದ ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಒಂದು ಸಮಿತಿ ರಚಿಸಲಾಗುವುದು.

    ಸಿದ್ದರಾಮಯ್ಯ 115

    ಬಿಜೆಪಿ ಆಳ್ವಿಕೆಯ ಇತರ ರಾಜ್ಯಗಳೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಹಿಂದೇಟು ಹಾಕುತ್ತಿವೆ. ಕೇರಳ, ತಮಿಳುನಾಡು ರಾಜ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವುದಿಲ್ಲ ಎಂದು ಕೇಂದ್ರಕ್ಕೆ ಸ್ಪಷ್ಟಪಡಿಸಿವೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಕೇಂದ್ರ ಪುರಸ್ಕೃತ ಯೋಜನೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸುವುದರಿಂದ ರಾಜ್ಯಕ್ಕೆ ಅನ್ಯಾಯವಾಗಲಾರದು”

    ಈ ಎಲ್ಲ ಬೆಳವಣಿಗೆಗಳ ನಂತರ ಕರ್ನಾಟಕ ಶಿಕ್ಷಣ ಆಯೋಗವು ಈಗಾಗಲೇ ಎರಡು ಮಧ್ಯಂತರ ವರದಿಗಳನ್ನು ಸರ್ಕಾರಕ್ಕೆ ಕೊಟ್ಟಿದ್ದು, ಪೂರ್ಣವಾದ ವರದಿ ಈ ಮಾರ್ಚ್ (ಮಾರ್ಚ್, 2025) ಆರು ತಿಂಗಳ ಸಮಯಾವಕಾಶ ಕೇಳಿದ ಕಾರಣ ಸಲ್ಲಿಕೆ ಯಾಗಬೇಕಾಗಿದೆ. ವರದಿಗಳ ಪ್ರಕಾರ ಈಗಾಗಲೇ ನೀಡಲಾದ ಎರಡು ಮದ್ಯಂತರ ವರದಿಗಳಲ್ಲಿ ಕೆಳಕಂಡ ಅಂಶಗಳು ಇವೆಯೆಂದು ಪತ್ರಿಕಾ ವರದಿಗಳು ಹೇಳುತ್ತಿವೆ.

    ಮಧ್ಯಂತರ ವರದಿ: 1
    ರಾಜ್ಯ-ನಿರ್ದಿಷ್ಟ ಶಿಕ್ಷಣ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಸ್ಥಾಪಿಸಲಾದ ಕರ್ನಾಟಕ ರಾಜ್ಯ ಶಿಕ್ಷಣ ನೀತಿ (SEP) ಆಯೋಗವು ಮೇ 2024ರಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಿತು. ಈ ವರದಿಯ ಸಂಪೂರ್ಣ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿಲ್ಲವಾದರೂ, ಹಲವಾರು ಪ್ರಮುಖ ಕ್ರಮಗಳು ಮತ್ತು ಶಿಫಾರಸುಗಳು ಹೊರಹೊಮ್ಮಿವೆ.

    1. NEP 2020ರ ಸ್ಥಗಿತ ವೈಶಿಷ್ಟ್ಯಗಳು: ಮಧ್ಯಂತರ ಶಿಫಾರಸುಗಳ ಆಧಾರದ ಮೇಲೆ, ಕರ್ನಾಟಕ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಕೆಲವು ವೈಶಿಷ್ಟ್ಯಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿತು. ಗಮನಾರ್ಹವಾಗಿ, ನಾಲ್ಕು ವರ್ಷಗಳ ಪದವಿ ಗೌರವ ಕೋರ್ಸ್‌ಗಳು ಮತ್ತು ಬಹು ಪ್ರವೇಶ ಮತ್ತು ನಿರ್ಗಮನ ಆಯ್ಕೆಗಳನ್ನು ಕೈಬಿಡಲಾಯಿತು, ಇದು ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚು ಸಾಂಪ್ರದಾಯಿಕ ಪದವಿ ರಚನೆಯತ್ತ ಬದಲಾವಣೆಯನ್ನು ಸೂಚಿಸುತ್ತದೆ.
    2. ಥೀಮ್ ಆಧಾರಿತ ಕಾರ್ಯಪಡೆಗಳ ರಚನೆ: ವಿವಿಧ ಶೈಕ್ಷಣಿಕ ಸವಾಲುಗಳನ್ನು ಪರಿಹರಿಸಲು, SEP ಆಯೋಗವು 30 ಥೀಮ್ ಆಧಾರಿತ ಕಾರ್ಯಪಡೆಗಳನ್ನು ರಚಿಸಿತು – 17 ಉನ್ನತ ಶಿಕ್ಷಣದ ಮೇಲೆ ಕೇಂದ್ರೀಕರಿಸುತ್ತದೆ ಮತ್ತು 13 ಶಾಲಾ ಶಿಕ್ಷಣದ ಮೇಲೆ. ಈ ಕಾರ್ಯಪಡೆಗಳು ಬೋಧನಾ ಮಾಧ್ಯಮ, ಲಿಂಗ ತಾರತಮ್ಯ, ಕಲಿಕಾ ಪ್ರಕ್ರಿಯೆಗಳು, ಮೌಲ್ಯಮಾಪನ ವಿಧಾನಗಳು, ಸಾಂಸ್ಥಿಕ ರಚನೆಗಳು, ಶಾಲೆ ಬಿಡುವ ದರಗಳು ಮತ್ತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅನನುಕೂಲಕರ ಗುಂಪುಗಳ ಮೇಲೆ ಪರಿಣಾಮ ಬೀರುವ ಅಸಮಾನತೆಗಳಂತಹ ವಿಷಯಗಳ ಕುರಿತು ಸಮಗ್ರ ಅಧ್ಯಯನಗಳನ್ನು ನಡೆಸುವ ಕಾರ್ಯವನ್ನು ಹೊಂದಿದ್ದವು. ಈ ಅಧ್ಯಯನಗಳ ಒಳನೋಟಗಳು ಅಂತಿಮ ನೀತಿ ಶಿಫಾರಸುಗಳನ್ನು ತಿಳಿಸುವ ಉದ್ದೇಶವನ್ನು ಹೊಂದಿದ್ದವು.
    3. ದತ್ತಾಂಶ-ಚಾಲಿತ ನೀತಿ ನಿರೂಪಣೆಗೆ ಒತ್ತು: ಆಯೋಗವು ಊಹೆಗಳಿಗಿಂತ ಪ್ರಾಯೋಗಿಕ ದತ್ತಾಂಶವನ್ನು ಆಧರಿಸಿ ನೀತಿಗಳನ್ನು ರೂಪಿಸುವ ತನ್ನ ಬದ್ಧತೆಯನ್ನು ಒತ್ತಿಹೇಳಿತು. ಈ ವಿಧಾನವು ಪ್ರಸ್ತುತ ಶೈಕ್ಷಣಿಕ ಪರಿಸ್ತಿತಿ ಯನ್ನು ನಿಖರವಾಗಿ ನಿರ್ಣಯಿಸಲು ಮತ್ತು ಸುಧಾರಣೆಗೆ ಕ್ಷೇತ್ರಗಳನ್ನು ಗುರುತಿಸಲು ಆಲ್ ಇಂಡಿಯಾ ಸರ್ವೆ ಆಫ್ ಸ್ಕೂಲ್ ಅಂಡ್ ಹೈಯರ್ ಎಜುಕೇಶನ್ ವರದಿಗಳು, ನ್ಯಾಷನಲ್ ಸ್ಯಾಂಪಲ್ ಸರ್ವೆ ಡೇಟಾ ಮತ್ತು ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರಿಡಿಟೇಶನ್ ಕೌನ್ಸಿಲ್ ವರದಿಗಳು ಸೇರಿದಂತೆ ಅಸ್ತಿತ್ವದಲ್ಲಿರುವ ಡೇಟಾ ಮೂಲಗಳನ್ನು ಪರಿಶೀಲಿಸುವುದನ್ನು ಒಳಗೊಂಡಿತ್ತು.
    4. ಪಾಲುದಾರರ ಸಮಾಲೋಚನೆಗಳು: ಸಮಗ್ರ ನೀತಿ ನಿರೂಪಣೆಯ ಮಹತ್ವವನ್ನು ಗುರುತಿಸಿ, ಆಯೋಗವು ವಿವಿಧ ಪಾಲುದಾರರೊಂದಿಗೆ ವ್ಯಾಪಕವಾದ ಸಮಾಲೋಚನೆಗಳನ್ನು ಯೋಜಿಸಿತು. ಇವುಗಳಲ್ಲಿ ಉಪಕುಲಪತಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಶಾಲಾ ಮತ್ತು ಕಾಲೇಜು ಆಡಳಿತ ಮಂಡಳಿಗಳು, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಶಿಕ್ಷಣ ವಲಯದಲ್ಲಿ ತೊಡಗಿರುವ NGO ಗಳ ಸಂಘಗಳು ಸೇರಿವೆ. ಅಂತಹ ತೊಡಗಿಸಿಕೊಳ್ಳುವಿಕೆಗಳು ನೀತಿ ನಿರೂಪಣಾ ಪ್ರಕ್ರಿಯೆಯಲ್ಲಿ ವೈವಿಧ್ಯಮಯ ದೃಷ್ಟಿಕೋನಗಳು ಮತ್ತು ಒಳನೋಟಗಳನ್ನು ಸೇರಿಸುವ ಗುರಿಯನ್ನು ಹೊಂದಿವೆ. ಸೆಪ್ಟೆಂಬರ್ 2024ರ ಹೊತ್ತಿಗೆ, ಆಯೋಗವು ತನ್ನ ಸಮಗ್ರ ನೀತಿ ಶಿಫಾರಸುಗಳನ್ನು ಅಂತಿಮಗೊಳಿಸಲು ಆರು ತಿಂಗಳ ವಿಸ್ತರಣೆಯನ್ನು ಕೋರಿತು, ಇದು ಫೆಬ್ರವರಿ ಅಂತ್ಯ ಅಥವಾ ಮಾರ್ಚ್ 2025 ರ ವೇಳೆಗೆ ಅಂತಿಮ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಸೂಚಿಸುತ್ತದೆ.

    ಮದ್ಯಂತರ ವರದಿ:2

    ಕರ್ನಾಟಕ ರಾಜ್ಯ ಶಿಕ್ಷಣ ನೀತಿ (SEP) ಆಯೋಗವು ರಾಜ್ಯಕ್ಕೆ ಸಮಗ್ರ ಶಿಕ್ಷಣ ನೀತಿಯನ್ನು ರೂಪಿಸುವಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಪ್ರಯತ್ನದ ಭಾಗವಾಗಿ, ಆಯೋಗವು ವಿವಿಧ ಶೈಕ್ಷಣಿಕ ಅಂಶಗಳ ಕುರಿತು ಆಳವಾದ ಅಧ್ಯಯನಗಳನ್ನು ನಡೆಸಲು. ಏಪ್ರಿಲ್ 2024ರಲ್ಲಿ 30 ವಿಷಯಾಧಾರಿತ ಕಾರ್ಯಪಡೆಗಳನ್ನು ಸ್ಥಾಪಿಸಿತು. ಇದರಲ್ಲಿ 17 ಉನ್ನತ ಶಿಕ್ಷಣದ ಮೇಲೆ ಕೇಂದ್ರೀಕರಿಸಿದ ಮತ್ತು 13 ಶಾಲಾ ಶಿಕ್ಷಣದ ಮೇಲೆ ಕೇಂದ್ರೀಕರಿಸಿದವು.

    ಉನ್ನತ ಶಿಕ್ಷಣದಲ್ಲಿ ಅಸ್ತಿತ್ವದಲ್ಲಿರುವ ಕೋಟಾಗಳಿಗೆ ಹೋಲುವ ಪರಿಶಿಷ್ಟ ಜಾತಿಗಳು (SC), ಪರಿಶಿಷ್ಟ ಪಂಗಡಗಳು (ST) ಮತ್ತು ಇತರ ಹಿಂದುಳಿದ ವರ್ಗಗಳಿಗೆ (OBC) ಶಾಲಾ ಶಿಕ್ಷಣದಲ್ಲಿ ಮೀಸಲಾತಿಯನ್ನು ಪರಿಚಯಿಸುವುದು ಚರ್ಚೆಯಲ್ಲಿರುವ ಒಂದು ಗಮನಾರ್ಹ ಶಿಫಾರಸು ಇದಾಗಿದೆ. ಈ ಪ್ರಸ್ತಾವನೆಯನ್ನು ಕಾರ್ಯಪಡೆಯು ಚರ್ಚಿಸಿದೆ, ಇದು SEP ಆಯೋಗದ ಮುಂದೆ ಪರಿಗಣನೆಗೆ ಮಂಡಿಸಲು ಯೋಜಿಸಿದೆ.

    ಹೆಚ್ಚುವರಿಯಾಗಿ, ಶಿಕ್ಷಣ ಹಕ್ಕು (RTE) ಕಾಯ್ದೆಯ ಸೆಕ್ಷನ್ 12(1)(c) ಗೆ ತಿದ್ದುಪಡಿಗಳನ್ನು ಮರುಪರಿಶೀಲಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರವೇಶಕ್ಕೆ ಆದ್ಯತೆ ನೀಡಲು ಈ ಹಿಂದೆ ಬದಲಾಯಿಸಲಾದ ನಿಬಂಧನೆಯು ಖಾಸಗಿ ಶಾಲೆಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳ ಮಕ್ಕಳಿಗೆ 25% ಮೀಸಲಾತಿಯನ್ನು ಮರುಸ್ಥಾಪಿಸುವ ಬಯಕೆಯನ್ನು ಪಾಲುದಾರರು ವ್ಯಕ್ತಪಡಿಸಿದ್ದಾರೆ, ಈ ಹಿಂದೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರವೇಶಕ್ಕೆ ಆದ್ಯತೆ ನೀಡಲು ಈ ನಿಬಂಧನೆಯನ್ನು ಬದಲಾಯಿಸಲಾಗಿತ್ತು.

    ಗಮನಿಸಬೇಕಾದ ಅಂಶವೆಂದರೆ, ಸೆಪ್ಟೆಂಬರ್ 2024ರ ಹೊತ್ತಿಗೆ, SEP ಆಯೋಗವು ತನ್ನ ಅಂತಿಮ ವರದಿಯನ್ನು ಸಲ್ಲಿಸಲು ವಿಸ್ತರಣೆಯನ್ನು ಕೋರಿತ್ತು. ಫೆಬ್ರವರಿ ಅಥವಾ ಮಾರ್ಚ್ 2025ರೊಳಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಈ ವಿಸ್ತರಣೆಯು ಆಯೋಗವು ಇನ್ನೂ ತನ್ನ ಶಿಫಾರಸುಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ ಎಂದು ಸೂಚಿಸುತ್ತದೆ ಮತ್ತು ವರದಿ ಸಲ್ಲಿಕೆಯ ನಂತರ ಹೆಚ್ಚಿನ ವಿವರಗಳು ಲಭ್ಯವಾಗಬಹುದು.

    ಈ‌ ಎರಡೂ ವರದಿಗಳಲ್ಲೂ ನಾನು ಮೇಲೆ ಪ್ರಸ್ತಾಪಿಸಿದ, sslc ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕನ್ನಡದಲ್ಲಿಯೇ ನಿಡುವ ಬಗೆಗೆ, ಸರ್ಕಾರಿ ಶಾಲೆಗಳ ಕಣ್ಮರೆಯ ಸಮಸ್ಯೆಗೆ, ತ್ರಿಭಾಷಾ ನೀತಿಯ ಅಪಾಯಕಾರಿ ಅಂಶಗಳ ಬಗೆಗೆ, ದ್ವಿಭಾಷಾ ನೀತಿಯ ಅಳವಡಿಕೆಯ ತಾತ್ವಿಕಾಂಶಗಳ ವಿಚಾರದ ಬಗೆಗೆ ಯಾವ ಪರಿಹಾರಗಳೂ ಇದ್ದಂತೆ ಕಾಣುವುದಿಲ್ಲ.

    ಹಲವು ದಶಕಗಳ ಕಾಲ ತ್ರಿಭಾಷಾ ನೀತಿಯ ದಾಸತ್ವದಲ್ಲಿದ್ದ ಕರ್ನಾಟಕದಂತಹ ರಾಜ್ಯವೊಂದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸಿ ಪ್ರಥಮ ಬಾರಿಗೆ ತನ್ನ ಶಿಕ್ಷಣ ನೀತಿಯೊಂದನ್ನು ರೂಪಿಸುವಾಗ ತನ್ನ ಸಹ, ಸೋದರ ಭಾಷೆಯಾದ ತಮಿಳುನಾಡಿನ ಶಿಕ್ಷಣ ನೀತಿಯನ್ನು ಅನುಸರಿಸುವುದು ಹಾಗಿರಲಿ, ಅಧ್ಯಯನ ಮಾಡುವ ಅವಶ್ಯಕತೆ ಇತ್ತು. ಅದೂ ಕೂಡಾ ಸಾಧ್ಯವಾಗಿಲ್ಲ‌ ಅಂತಹ ಅವಶ್ಯಕತೆಯನ್ನೇ ಈ ಆಯೋಗ ಮನಗಂಡಂತೆ ಕಾಣುವುದಿಲ್ಲ‌.

    ಪರಿಸ್ಥಿತಿ ಹೀಗಿರುವಾಗ, ಕನ್ನಡಿಗರು ನಮಗೂ ಶಿಕ್ಷಣ ನೀತಿಗೂ ಸಂಬಂಧವೇ ಇಲ್ಲ ಎಂಬಂತೆ ಬೆಚ್ಚಗೆ ಹೊದ್ದುಕೊಂಡು ಮಲಗಿದ್ದೇವೆ. ನಮ್ಮ ಹಣೆಬರೆಹ ಬರೆಯುವ ರಾಜ್ಯ ಶಿಕ್ಷಣ ನೀತಿಯನ್ನು ಕೆಲವೇ ಕೆಲವರು ವಿಶ್ವ ವಿದ್ಯಾಲಯಗಳ ಶಿಕ್ಷಕ ವರ್ಗ ಸಿದ್ದಪಡಿಸುತ್ತಿದೆ. ಭಾಗಶಃ ವರದಿ ಈಗಾಗಲೇ ಸರ್ಕಾರಕ್ಕೆ ತಲುಪಿದೆ. ಈ ಶಿಕ್ಷಣ ನೀತಿ ರಚನಾ ಆಯೋಗದಲ್ಲಿರುವ ಬಹುತೇಕರು ದಿನಬೆಳಗಾದರೆ ಸ್ಥಳೀಯತಾ ವಾದಗಳ ಬಗೆಗೆ ಬರೆಯುವರೂ, ಭಾಷಣ ಮಾಡುವವರೂ ಆದರೂ ಕನ್ನಡ ಮಾಧ್ಯಮದ ವಿಷಯಕ್ಕೆ ಬಂದರೆ ತಮ್ಮ ಸ್ಥಳೀಯತಾ ವಾದಗಳಿಗೆ ತರ್ಪಣ ಬಿಟ್ಟು ಹಿಂದೆ ಸರಿದು, ಇಂಗ್ಲಿಷ್ ವಾದಿಗಳಾಗುವವರು ಮತ್ತು ಮಿಕ್ಕುಳಿದವರು ಆಯೋಗದ ಅಧ್ಯಕ್ಷರನ್ನು ಒಳಗೊಂಡು ಹಿಂದಿ‌ಲ್ಯಾಂಡಿನ ಮಂದಿ. ಯೋಗೇಂದ್ರ ಯಾದವ್ ಅವರಂತೂ ಇತ್ತೀಚೆಗೆ ತಮಿಳುನಾಡಿನ ತ್ರಿಭಾಷಾ ನೀತಿಯ ವಿರೋಧವನ್ನು ತೀಕ್ಷ್ಣವಾಗಿ ವಿರೋಧಿಸಿ ಉದ್ದದ ಲೇಖನ ಬರೆದವರು. ಕನ್ನಡಕ್ಕೆ ಇವರಿಂದ ಯಾವ ಬಗೆಯಲ್ಲಿ ಯಾವ ಪ್ರಮಾಣದಲ್ಲಿ ನ್ಯಾಯ ಸಿಕ್ಕುವುದೋ ಗೊತ್ತಿಲ್ಲ‌.

    k p nararaj
    ಕೆ ಪಿ ನಟರಾಜ್‌
    + posts

    ಲೇಖಕ

    ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

    ಪೋಸ್ಟ್ ಹಂಚಿಕೊಳ್ಳಿ:

    LEAVE A REPLY

    Please enter your comment!
    Please enter your name here

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

    ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

    ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

    ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

    ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

    ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

    ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

    ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

    Download Eedina App Android / iOS

    X