ಯುಪಿ ಮಾದರಿಯ ದ್ವೇಷೋತ್ಪಾದನೆಯಲ್ಲಿ ಕರ್ನಾಟಕದ ʼಸಂತರುʼ ಸಕ್ರಿಯ!

Date:

Advertisements

ಮುಸ್ಲಿಮರ ಪ್ರತಿಕ್ರಿಯೆ ಪ್ರಚೋದಿಸಿ, ಹಿಂಸಾತ್ಮಕಗೊಳಿಸುವ ಕಸರತ್ತನ್ನು ಸ್ವಾಮೀಜಿಗಳು ಮಾಡುತ್ತಿದ್ದಾರೆಯೇ?

ಬುದ್ಧ, ಸಿದ್ಧ, ಆರೂಢ, ನಾಥ, ವಚನ ಪರಂಪರೆಯ ಧಾರೆಗಳು ಹರಿಯುತ್ತಿರುವ ಕರ್ನಾಟಕದಲ್ಲಿ ಸಂತರೆನಿಸಿಕೊಂಡವರು ವಿಚಿತ್ರವಾಗಿ ವರ್ತಿಸುವುದು ಆರಂಭವಾಗಿದೆ. ಉತ್ತರ ಪ್ರದೇಶದಲ್ಲೋ, ಉತ್ತರದ ಯಾವುದೋ ರಾಜ್ಯದಲ್ಲೋ ಕಾಣುತ್ತಿದ್ದ ಸ್ವಾಮೀಜಿಗಳ ದ್ವೇಷ ಭಾಷಣಗಳ ಮಾದರಿ ಈಗ ಕರ್ನಾಟಕಕ್ಕೂ ಕಾಲಿಟ್ಟಿದೆ.

ಬಿಜೆಪಿ ಮತ್ತು ಸಂಘಪರಿವಾರ ವಕ್ಫ್ ವಿಚಾರದಲ್ಲಿ ಬಿತ್ತಿರುವ ಸುಳ್ಳುಗಳಿಗೆ ಅಧಿಕೃತತೆಯ ಮುದ್ರೆಯೊತ್ತಲು ಸ್ವಾಮೀಜಿಗಳೇ ಅಖಾಡಕ್ಕಿಳಿದಿದ್ದಾರೆ. ಪ್ರಬಲ ಜಾತಿಗಳ ಮುಖಗಳಾಗಿರುವ ಸಂತರೆನಿಸಿಕೊಂಡವರು ನೀಡುತ್ತಿರುವ ಹೇಳಿಕೆಗಳು, ಉತ್ತರ ಪ್ರದೇಶದಲ್ಲಿ ಕೆಲವು ವಿವಾದಾತ್ಮಕ ಧರ್ಮಗುರುಗಳು ಆಡುತ್ತಿರುವ ಮಾತುಗಳ ತದ್ರೂಪದಂತೆ ಕಾಣಿಸುತ್ತಿವೆ.

Advertisements

ಭಾಷಣಕ್ಕೆ ನಿಂತರೆ ಸಾಕು ಮುಸ್ಲಿಮರ ವಿರುದ್ಧ, ಪ್ರವಾದಿ ಮೊಹಮ್ಮದರ ವಿರುದ್ಧ ನಿಂದನಾತ್ಮಕವಾಗಿ ಮಾತನಾಡುವ ಉತ್ತರ ಪ್ರದೇಶದ ಗಾಝಿಯಾಬಾದ್‌ನ ಯತಿ ನರಸಿಂಗಾನಂದ ನಿಮಗೆ ಗೊತ್ತಿರಬಹುದು. ‘ಹೇಟ್ ಮಾಂಗರ್’ ಎಂದೇ ಕುಖ್ಯಾತಿ ಹೊಂದಿರುವ ಈ ವ್ಯಕ್ತಿ, ಸಂವಿಧಾನ ಮತ್ತು ಸುಪ್ರೀಂ ಕೋರ್ಟ್ ವಿರುದ್ಧ ತುಚ್ಛವಾಗಿ ಮಾತನಾಡಿದ ಉದಾಹರಣೆಗಳೂ ಇವೆ. ಪ್ರಕರಣಗಳ ಮೇಲೆ ಪ್ರಕರಣ ದಾಖಲಾದರೂ ನರಸಿಂಗಾನಂದ ದ್ವೇಷದ ಭಾಷಣ ಮಾಡುವುದು ನಿಲ್ಲಿಸಿಲ್ಲ. ಮುಸ್ಲಿಮರ ನರಮೇಧ ನಡೆಸಲು ಕರೆಕೊಟ್ಟಿದ್ದ ವ್ಯಕ್ತಿ ಈ ಯತಿನರಸಿಂಗಾನಂದ. ದೂರದ ದೆಹಲಿಯಲ್ಲೋ, ಯೂಪಿಯಲ್ಲೋ ವಿಷಕಾರಿ ಮಾತುಗಳನ್ನು ಸ್ವಾಮೀಜಿಗಳ ಬಾಯಿಯಿಂದ ಕೇಳುತ್ತಿದ್ದ, ಓದುತ್ತಿದ್ದ ಕನ್ನಡದ ಜನತೆಗೆ ಈಗ ಕರ್ನಾಟಕದಲ್ಲೇ ಅಂತಹ ದೃಷ್ಟಾಂತಗಳು ಢಾಳಾಗಿ ಕಾಣಿಸಿಕೊಳ್ಳಲಾರಂಭಿಸಿವೆ.

ಸಂಘಪರಿವಾರದ ಘಟಕವಾಗಿರುವ ‘ಭಾರತೀಯ ಕಿಸಾನ್ ಮೋರ್ಚಾ’ದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡುತ್ತಾ, “ಮುಸ್ಲಿಮರ ಮತದಾನದ ಹಕ್ಕನ್ನೇ ಕಿತ್ತುಕೊಳ್ಳಬೇಕು” ಎಂದುಬಿಟ್ಟರು. ಅದಕ್ಕೆ ಶಿಳ್ಳೆ, ಚಪ್ಪಾಳೆಯೂ ಬಿತ್ತು. ದೊಡ್ಡ ಮಟ್ಟದಲ್ಲಿ ಒಕ್ಕಲಿಗ ಸಮುದಾಯದ ಪ್ರಜ್ಞಾವಂತರು ತಿವಿದ ಮೇಲೆ, ಬಾಯಿ ತಪ್ಪಿನಿಂದ ಹೇಳಿಕೆ ನೀಡಿರುವುದಾಗಿ ಸ್ವಾಮೀಜಿ ದೋಸೆ ಮಗುಚಿ ಹಾಕಿದ್ದಾರೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಸೋಲು ಕಂಡ ಬೆನ್ನಲ್ಲೇ ಈ ಹೇಳಿಕೆಯು ಹೊರಬಿದ್ದಿದ್ದು, ಅಸಹನೆಯ ಎಲ್ಲೆಯನ್ನೇ ಮೀರಿರುವಂತೆ ತೋರಿತು.

ಇದನ್ನೂ ಓದಿರಿ: ಚಂದ್ರಶೇಖರ ಸ್ವಾಮೀಜಿ ಬಾಯಿ ತಪ್ಪಲಿಲ್ಲ, ಮನಸಿನ ಮಾತೇ ಹೊರಬಿದ್ದಿದೆ

ಮುಂದುವರಿದು ವಕ್ಫ್‌ ವಿರುದ್ಧ ಅವರು ಅಸಹನೆಯನ್ನು ಕಾರಿಕೊಂಡಿದ್ದರು. “ದೇಶದಲ್ಲಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಿದರೆ ಆಗ ಭಾರತೀಯರೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯವಾಗಲಿದೆ. ರೈತರ ಜಮೀನು ಉಳಿಸಲು ಎಲ್ಲರೂ ಒಂದಾಗಿ ಹೋರಾಟ ನಡೆಸುವ ತುರ್ತು ಸಂದರ್ಭ ಎದುರಾಗಿದೆ. ಸರ್ಕಾರ ಹೋದರೂ ತೊಂದರೆ ಇಲ್ಲ. ವಕ್ಫ್ ಮಂಡಳಿ ರದ್ದು ‌ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು” ಎಂಬ ಆಣಿಮುತ್ತುಗಳನ್ನು ಉದುರಿಸಿದ್ದಾರೆ.

ಹಿಂದೂಗಳಿಗೆ ಮುಜರಾಯಿ ಇರುವಂತೆ, ಮುಸ್ಲಿಮರಿಗೆ ವಕ್ಫ್‌ ಇದೆ. ಯಾರಾದರೂ ಮುಸ್ಲಿಂ ಧರ್ಮಗುರುಗಳು ಮುಜರಾಯಿ ಮುಚ್ಚಿಸಿ ಎಂದು ಹೋರಾಟಕ್ಕಿಳಿದರೆ ಏನಾಗಬಹುದು ಯೋಚಿಸಿ. ಇಡೀ ದೇಶ ಹೊತ್ತಿ ಉರಿದುಬಿಡುತ್ತದೆ. ಕಾಂಗ್ರೆಸ್ ಸರ್ಕಾರವನ್ನು ಕೇವಲ ಮುಸ್ಲಿಮರು ಆಯ್ಕೆ ಮಾಡಿದ್ದಾರೆಂಬಂತೆ ಮಾತನಾಡುವ ಸ್ವಾಮೀಜಿಗೆ ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದ ಒಟ್ಟು ಮತ ಪ್ರಮಾಣ ಎಷ್ಟೆಂಬ ಅರಿವೂ ಇಲ್ಲವಾಗಿದೆ. ಎಲ್ಲ ಜಾತಿ, ಜನಾಂಗದವರೂ ಎಲ್ಲಾ ಪಕ್ಷಕ್ಕೂ ಮತ ಹಾಕುತ್ತಾರೆಂಬ ಕನಿಷ್ಠ ಅರಿವು ಬೆಳೆಸಿಕೊಳ್ಳದೆ ಇರುವುದು ದುಃಖಕರವೇ ಸರಿ. ಬಹುಸಂಖ್ಯಾತವಾದದ ಹಿಂಸಾಪ್ರವೃತ್ತಿ ಉದ್ದೀಪನೆ ಹೆಚ್ಚಾದಷ್ಟೂ ಸಹಜವಾಗಿ ಅಲ್ಪಸಂಖ್ಯಾತರು ಧ್ರುವೀಕರಣವಾಗುತ್ತಾ ಹೋಗುತ್ತಾರೆ. ಕರ್ನಾಟಕದಲ್ಲಿ ಆಗುತ್ತಿರುವುದು ಇದೇ. ಮುಸ್ಲಿಮರು ಕಳೆದ ವಿಧಾನಸಭಾ ಚುನಾವಣೆಯವರೆಗೂ ಜೆಡಿಎಸ್ ಪಕ್ಷಕ್ಕೂ ಮತ ಹಾಕುತ್ತಾ ಬಂದಿದ್ದರು. ಆದರೆ ಕುಮಾರಸ್ವಾಮಿಯವರ ಸೈದ್ಧಾಂತಿಕ ಸ್ಥಿರತೆ ಅಲುಗಾಡುವುದು ಹೆಚ್ಚಾದಂತೆ ಅವರು ಕಾಂಗ್ರೆಸ್‌ನತ್ತ ಹೊರಳಿದರು. ಮುಸ್ಲಿಮರು ಕೇವಲ ಕಾಂಗ್ರೆಸ್ಸಿಗಷ್ಟೇ ಮತ ಹಾಕುತ್ತಾರೆಂದು ಭ್ರಮಿಸಿ, ವಿಷ ಕಾರಿಕೊಳ್ಳುವವರಿಗೆ, ಕಳೆದ ಎರಡು ದಶಕದಿಂದಲೂ ಬ್ರಾಹ್ಮಣ ಸಮುದಾಯ ಹೆಚ್ಚಿನದಾಗಿ ಬಿಜೆಪಿಯನ್ನೇ ಬೆಂಬಲಿಸುತ್ತಾ ಬಂದಿರುವುದು ಪ್ರಶ್ನೆ ಎಂದು ಅನಿಸದಿರುವುದು ಏತಕ್ಕೆ? ಇದನ್ನು ಚಂದ್ರಶೇಖರ ಸ್ವಾಮೀಜಿಯಂಥವರು ಪ್ರಶ್ನಿಸಿಕೊಳ್ಳಬೇಕಿದೆ. ಮಸ್ಲಿಮರು ಎಲ್ಲ ಪಕ್ಷಗಳನ್ನು ಬೆಂಬಲಿಸಬೇಕು, ಬ್ರಾಹ್ಮಣರು ಒಂದೇ ಪಕ್ಷದಲ್ಲಿ ಇರಬೇಕೆಂಬ ಲಾಜಿಕ್‌ನಲ್ಲಿ ಉರುಳಿಲ್ಲ.

ವಿಶ್ವ ಹಿಂದೂ ಪರಿಷತ್‌ ವತಿಯಿಂದ ನಡೆದ ‘ಸಂತ ಸಮಾವೇಶ’ದಲ್ಲಿ ಭಾಗಿಯಾಗಿದ್ದ ವೈದಿಕ ಮಠಾಧೀಶರು ಪಕ್ಕಾ ರಾಜಕಾರಣಿಗಳಂತೆ ಮಾತನಾಡಿದ್ದಾರೆ. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ನಮ್ಮ ಸಂವಿಧಾನವನ್ನೇ ಹೀಗಳೆದಿದ್ದಾರೆ. ಸ್ವಾಮೀಜಿ ಜಾಗದಲ್ಲಿ ಬೇರೆ ಯಾರಾದರೂ ರಾಜಕಾರಣಿ ಇದ್ದರೆ ಇಷ್ಟು ವೇಳೆಗೆ ‘ದೇಶದ್ರೋಹ’ದ ಕೇಸ್ ದಾಖಲಾಗುತ್ತಿತ್ತೇನೋ. ಸ್ವಾಮೀಜಿಗಳಿಗೆ ವಿಶೇಷ ಸ್ಥಾನಮಾನವೇನೂ ನಮ್ಮ ಸಂವಿಧಾನದಲ್ಲಿ ಇಲ್ಲವಾದರೂ ಪೇಜಾವರರ ಪೇಚಾಟದ ವಿರುದ್ಧ ಅಂತಹ ದೊಡ್ಡ ಆಕ್ರೋಶವೇನೂ ವ್ಯಕ್ತವಾದಂತೆ ಕಾಣುತ್ತಿಲ್ಲ.

“ಹಿಂದೂ ದೇವಾಲಯಗಳನ್ನು ಸರ್ಕಾರದ ವ್ಯಾಪ್ತಿಯಿಂದ ಹೊರಗಿಡಿ”, “ವಕ್ಫ್‌ನಿಂದ ಹಿಂದೂ ರೈತರ ಜಮೀನು ರಕ್ಷಿಸಿ” ಎಂಬಂತಹ ನಿರ್ಣಯಗಳನ್ನು ಬ್ರಾಹ್ಮಣ ಸ್ವಾಮೀಜಿಗಳು ಮುಂಚೂಣಿಯಲ್ಲಿದ್ದ ಸಂತ ಸಮಾವೇಶ ತೆಗೆದುಕೊಂಡಿದೆ. ವಕ್ಫ್ ವಿಚಾರದಲ್ಲಿ ಏನೆಲ್ಲ ಸುಳ್ಳು ಬಿತ್ತಿದ್ದಾರೆ, ಅದನ್ನೇ ಹೇಗೆ ಜನರಿಗೆ ನಂಬಿಸುತ್ತಿದ್ದಾರೆ ಎಂಬುದು ಬೇರೆಯೇ ಕಥೆ. ಆದರೆ ಸ್ವಾಮೀಜಿಗಳೇ ಹಿಂಸೆಯನ್ನು ಪ್ರಚೋದಿಸುವ ಹೆಜ್ಜೆ ಇಟ್ಟಿದ್ದಾರೆ. ಅಹಿಂದ ರಾಜಕಾರಣ ಮಾಡುತ್ತಾ ಬಂದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ಇವರಿಗೆ ಇವರೆಲ್ಲರಿಗೂ ಇರುವ ಅಸಹನೆ ಎಂತಹದ್ದು ಎಂಬುದು ‘ಹಿಂದೂಧರ್ಮ ರಕ್ಷಣೆ’ ನೆಪದಲ್ಲಿ ಹೊರಬಿದ್ದಿದೆ.

“ಸ್ವಾತಂತ್ರ್ಯಪೂರ್ವದಲ್ಲಿ ಭಾರತ ಹಿಂದೂ ರಾಷ್ಟ್ರವಾಗಿತ್ತು, ನಂತರ ಜಾತ್ಯತೀತ ರಾಷ್ಟ್ರವಾಯಿತು. ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ” ಎಂದಿದ್ದಾರೆ ವಿಶ್ವಪ್ರಸನ್ನ ತೀರ್ಥರು. ಈ ಹಿಂದೆ ಖಾಸಗಿ ಸುದ್ದಿ ಮಾಧ್ಯಮವೊಂದರ ಚರ್ಚೆಯ ವೇಳೆ, “ದಲಿತರಿಗೆ ಅರ್ಚಕ ಹುದ್ದೆ ನೀಡಬಾರದು” ಎಂದು ವಾದಿಸಿದ್ದು ಇದೇ ಸ್ವಾಮೀಜಿ. ಇವರು ಹೇಳುವ ಹಿಂದೂರಾಷ್ಟ್ರ ಯಾವುದೆಂದು ಬಿಡಿಸಿ ಹೇಳಬೇಕಿಲ್ಲ. ಶ್ರೇಣಿಕೃತ ಜಾತಿ ವ್ಯವಸ್ಥೆಯನ್ನು ಪ್ರತಿಪಾದಿಸುವ ವೈದಿಕಶಾಹಿತ್ವವೇ ಇವರು ಹೇಳುವ ಹಿಂದೂಧರ್ಮ. ಇಲ್ಲಿ ಸ್ವಾಮಿ ವಿವೇಕಾನಂದರು, ನಾರಾಯಣಗುರುಗಳು ಗೌಣ. ಇವರು ಹೇಳುವ ಹಿಂದೂಧರ್ಮದಲ್ಲಿ ಒಕ್ಕಲಿಗರ ಸ್ಥಾನವೇನು? ನಮ್ಮದು ಪ್ರತ್ಯೇಕ ಧರ್ಮ ಎನ್ನುವ ಲಿಂಗಾಯತರ ಸ್ಥಾನವೇನು? ಅಸ್ಪೃಶ್ಯತೆಯಿಂದ ನೊಂದಿರುವ ದಲಿತರ ಸ್ಥಾನವೇನು? ದೊಡ್ಡ ಮಟ್ಟದಲ್ಲಿರುವ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರ ಸ್ಥಾನವೇನು?- ಇದಕ್ಕೆಲ್ಲ ಸ್ವಾಮೀಜಿ ಉತ್ತರಿಸಲು ಹೋಗುವುದಿಲ್ಲ.

ಸಂವಿಧಾನ ಸುಡುವ, ಸಂವಿಧಾನ ಬದಲಿಸುವ ಮಾತನಾಡಿದವರಿಗೆ ಈ ನಾಡು ಪಾಠ ಕಲಿಸಿದೆ. ಆದರೆ ಪೇಜಾವರರು ಬೇರೊಂದು ರೀತಿಯಲ್ಲಿ ಸಂವಿಧಾನದ ಮೇಲೆ ವಿಷ ಕಾರುತ್ತಿದ್ದಾರೆ. ಇವರ ಸಮಸ್ಯೆ ಮುಸ್ಲಿಮರಷ್ಟೇ ಅಲ್ಲ. ಮುಸ್ಲಿಮರ ಹೆಗಲಮೇಲೆ ಬಂದೂಕು ಇಟ್ಟು, ಈ ದೇಶದ ಸಮಸ್ತ ಶೂದ್ರ ಸಮುದಾಯದತ್ತ, ಬಹುಸಂಖ್ಯಾತ ದಲಿತರತ್ತ ಗುರಿ ಇಟ್ಟಿದ್ದಾರೆ. ಯಾಕೆಂದರೆ ಬಾಬಾ ಸಾಹೇಬರು ರಚಿಸಿದ ಸಂವಿಧಾನ, ಎಲ್ಲ ಜನರನ್ನು ಸಮಾನವಾಗಿ ಕಂಡಿದೆ. ಪ್ರಾತಿನಿಧ್ಯ ಇಲ್ಲದವರಿಗೆ ಪ್ರಾತಿನಿಧ್ಯವನ್ನು ದೊರಕಿಸಿದೆ. ಮನುಧರ್ಮದ ತರತಮಗಳನ್ನು ಕಿತ್ತೊಗೆದಿದೆ. ಬಸವಾದಿ ಶರಣರು ಬಿತ್ತಿದ ಪ್ರಜಾಪ್ರಭುತ್ವದ ಕಲ್ಪನೆಗಳು ನಮ್ಮ ಸಂವಿಧಾನದಲ್ಲಿವೆ.

ಇದನ್ನೂ ಓದಿರಿ: ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅರೆಸ್ಟ್, ರೌಡಿ ಶೀಟರ್‌ ತೆರೆಯುವ ಬಗ್ಗೆ ನೋಟಿಸ್

ಆದರೆ, ವಚನ ಪರಂಪರೆಯನ್ನು ತುಳಿಯಬೇಕಾದ ಸ್ವಾಮೀಜಿಗಳು, ಸಂಘಪರಿವಾರದ ಆಡುಂಬುಲದಂತೆ ವರ್ತಿಸುತ್ತಿದ್ದಾರೆ. ವಿಜಯಪುರದ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರು ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಲಫಂಗ’ ಎಂದು ನಿಂದಿಸಿದ್ದರು. “ನಾನು ಆ ಜಾಗದಲ್ಲಿ ಇದ್ದಿದ್ದರೆ ಸಿದ್ದರಾಮಯ್ಯನ ಕಪಾಳಕ್ಕೆ ಹೊಡೆಯುತ್ತಿದ್ದೆ” ಎಂದು ಹಿಂಸಾತ್ಮಕವಾಗಿ ಮಾತನಾಡಿದ್ದರು.

ಕಲಬುರಗಿಯ ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಜೆಪಿಯ ಹಮ್ಮಿಕೊಂಡಿದ್ದ ʼವಕ್ಫ್ ಹಠಾವೋ ದೇಶ ಬಚಾವೋʼ ಪ್ರತಿಭಟನೆಯಲ್ಲಿ ಮಾತನಾಡಿದ್ದ ಮಾಶಾಳದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, “ಎಲ್ಲ ಯುವಕರ ಮನೆಯಲ್ಲಿ ತಲ್ವಾರ್‌ಗಳಿವೆ. ಯಾರೂ ಬರುತ್ತಾರೆ ಅವರನ್ನು ಕಡಿಯುತ್ತೇವೆ. ಇನ್ಮುಂದೆ ನಾವು ಮಕ್ಕಳ ಕೈಯಲ್ಲಿ ಪೆನ್ನು ಕೊಡುವುದರ ಬದಲು ತಲ್ವಾರ್ ಕೊಡಬೇಕಾಗುತ್ತದೆ” ಎಂದು ಪ್ರಚೋದಿಸಿದ್ದರು.

ಬೆಳಗಾವಿಯಲ್ಲಿ ವಕ್ಫ್ ಹಠಾವೋ ದೇಶ ಬಚಾವೋ ಸಮಾವೇಶದಲ್ಲಿ ಕನ್ನೆರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಪಾಲ್ಗೊಂಡು, “ವಕ್ಫ್‌ನವರು ಒಬ್ಬರೂ ಒಂದು ಶಬ್ದ ಎತ್ತಿಲ್ಲ, ಆದರೆ ಬಾಡಿಗೆ ನಾಯಿಗಳು ಬೊಗಳುತ್ತಿವೆ. ಇವರಿಗೆ ಅವರಿಗೆ ಏನ್ ಇದೆ ಗೊತ್ತಿಲ್ಲ, ಎಲ್ಲಿ ಡಿಎನ್ಎ ವ್ಯತ್ಯಾಸ ಆಗಿದೆಯೋ ಗೊತ್ತಿಲ್ಲ. ಯಾರನ್ನ ಬೇಕಾದ್ರು ಛೂ ಬಿಡ್ತಾರೆ. ನನ್ನದು ಯಾವುದೇ ಭೂಮಿ, ಮನೆ ಹೋಗಿಲ್ಲ, ಹೋದ್ರೆ ಅದು ನಮ್ಮ ಹಿಂದೂ ಸಮಾಜದ್ದೇ” ಎಂದರು. ಮುಂದುವರಿದು, “ಮಕ್ಕಳ ಕೈಗೆ ಗನ್ ಕೊಡಿ ಎಂದ ಮರುಳಾರಾಧ್ಯ ಸ್ವಾಮೀಜಿ ಮೇಲೆ ಕೇಸ್ ಹಾಕಿ ಎಂದ್ರು. ಆದರೆ ಹುಬ್ಬಳ್ಳಿಯಲ್ಲಿ ಕೈಯಲ್ಲಿ ಖಡ್ಗ, ಬಂದೂಕು ಹಿಡಿದು ಪೊಲೀಸ್ ವಾಹನದ ಮೇಲೆ ಕುಣಿದಾಡಿದ್ರು. ಅಂಥವರ ಮೇಲೆ ಕೇಸ್ ದಾಖಲು ಮಾಡಲಿಲ್ಲ. ವಕ್ಫ್‌ ಬೋರ್ಡ್‌ನಲ್ಲಿ7 ಜನ ಎಲ್ಲರೂ ಮುಸ್ಲಿಂ ಸಮಾಜದವರೇ ಇರಬೇಕು. ಎಲ್ಲರೂ ಎಲ್ಲಿ ಜಾಗ ತೋರಿಸುತ್ತಾರೆ, ಅದು ವಕ್ಫ್ ಬೋರ್ಡ್‌ಗೆ ಸೇರುತ್ತದೆ. ತಕರಾರು ಇತ್ಯರ್ಥ ಮಾಡಲು ವಕ್ಫ್ ಟ್ರಿಬ್ಯುನಲ್ ಮುಂದೆ ಹೋಗಬೇಕು. ತಕರಾರು ದಾಖಲು, ನಿರ್ಣಯ ಮಾಡೋವರು ಅವರೇ. ಕಟುಕನ ಮುಂದೆ ಹೋಗಿ ಕುರಿ ಬೇಡಿಕೊಂಡ್ರೇ ಸುಮ್ನೆ ಬಿಡ್ತಾನಾ?” ಎಂದು ಒಬ್ಬ ಬಿಜೆಪಿ ರಾಜಕಾರಣಿಯಂತೆ ಸ್ವಾಮೀಜಿ ಮಾತನಾಡಿದರು.

ಸ್ವಾಮೀಜಿಗೆ ವಕ್ಫ್‌ನ ತಳಬುಡ ಗೊತ್ತಿಲ್ಲ ಅಂತ ಸ್ಪಷ್ಟವಾಗುತ್ತದೆ. ವಕ್ಫ್ ಟ್ರಿಬ್ಯೂನಲ್‌ನಲ್ಲಿ ಅಧಿಕಾರಿಗಳು ಇರುತ್ತಾರೆಯೇ ಹೊರತು, ವಕ್ಫ್‌ ಬೋರ್ಡ್‌ನಲ್ಲಿ ಅಲ್ಲ. ಯಾಕೆಂದರೆ ಅದು ಧಾರ್ಮಿಕತೆಗೆ ಸಂಬಂಧಿಸಿದ್ದು. ದೇವಾಲಯದ ವಿಚಾರದಲ್ಲಿ ಹೇಗೆ ಮುಸ್ಲಿಮರು ಬರುವುದಿಲ್ಲವೋ ಹಾಗೆಯೇ ವಕ್ಫ್‌ನಲ್ಲೂ ಹಿಂದೂಗಳು ತಲೆ ತೂರಿಸಲು ಸಾಧ್ಯವಿಲ್ಲ. ಅದು ಧಾರ್ಮಿಕ ಹಕ್ಕಿಗೆ ಸಂಬಂಧಿಸಿದ್ದು ಎಂದು ಸ್ವಾಮೀಜಿಗೆ ಯಾರಾದರೂ ಬುದ್ಧಿ ಹೇಳಬೇಕಿತ್ತು.

ಇದನ್ನೆಲ್ಲ ನೋಡುತ್ತಿದ್ದರೆ ಒಂದು ಪ್ಯಾಟರ್ನ್ ಕಾಣುತ್ತಿದೆ. ಇದು ಕರ್ನಾಟಕ ನೆಲದ ಸೌಹಾರ್ದ ಪರಂಪರೆಗೆ ವಿರುದ್ಧವಾದ, ಉತ್ತರ ಪ್ರದೇಶದಲ್ಲಿ ಕಾಣುವ ಕೋಮು ದ್ವೇಷೋತ್ಪಾದನಾ ಮಾದರಿ. ಈ ಹಿಂದೆ ಸ್ವಾಮೀಜಿಗಳಾರೂ ರಾಜ್ಯದಲ್ಲಿ ಇಂತಹ ದ್ವೇಷದ ಮಾತುಗಳನ್ನು ಆಡಿಯೇ ಇಲ್ಲ ಎನ್ನಲಾಗದು. ಆದರೆ ಏಕಕಾಲದಲ್ಲಿ ಹಲವು ಸ್ವಾಮೀಜಿಗಳು ಒಂದೇ ತೆರನಾಗಿ ಮಾತನಾಡುತ್ತಿರುವುದು ಇದೇ ಮೊದಲು ಎಂಬಷ್ಟು ವಿದ್ಯಮಾನಗಳು ಜರುಗುತ್ತಿವೆ. ಇತ್ತ ಮುಸ್ಲಿಂ ಧರ್ಮಗುರುಗಳು ಮೌನಕ್ಕೆ ಸಂದಿರುವುದನ್ನು ಗಮನಿಸಿ. ಹಿಂದೂಧರ್ಮದ ವಕ್ತಾರೆನಿಸಿಕೊಂಡ ಸ್ವಾಮೀಜಿಗಳು ಬೀದಿಬೀದಿಯಲ್ಲಿ ದ್ವೇಷಕಾರಲು ಶುರು ಮಾಡಿದ್ದಾರೆ. ಮುಸ್ಲಿಮರ ಪ್ರತಿಕ್ರಿಯೆಯನ್ನು ಪ್ರಚೋದಿಸಿ ಹೆಣ ರಾಜಕಾರಣಕ್ಕೆ ಕಾತರಿಸಿ ಕೂತಕ್ಕೆ ಕಾಣುತ್ತಿದೆ. ಬಹುಸಂಖ್ಯಾತವಾದವು ಮನುಷ್ಯನಲ್ಲಿ ಎಂತಹ ವಿಕೃತಿಯನ್ನು ಬಿತ್ತಬಲ್ಲದು, ತಾವು ಏನು ಮಾಡಿದರೂ ನಡೆಯುತ್ತದೆ ಎಂದು ಮನೋಭಾವವನ್ನು ಬೆಳೆಸಬಹುದು ಎಂಬುದಕ್ಕೆ ಈ ಸ್ವಾಮೀಜಿಗಳ ಮಾತುಗಳು ಉದಾಹರಣೆಯಾಗಿ ನಿಂತಿವೆ. ಸಮಾಜದಲ್ಲಿ ಸ್ವಾಮೀಜಿಗಳಿಗೆ ವಿಶೇಷ ಮನ್ನಣೆ ಇರುವುದರಿಂದ ಇವರು ಹೇಳುವ ಮಾತುಗಳನ್ನೇ ಮುಗ್ಧ ಜನ ನಂಬುವ ಸಾಧ್ಯತೆ ಹೆಚ್ಚಿದೆ.

ಹಾಗೆಂದು ರಾಜ್ಯದಲ್ಲಿರುವ ಎಲ್ಲ ಸ್ವಾಮೀಜಿಗಳು ಇದೇ ಕ್ಯಾಟಗರಿಯವರಲ್ಲ. ಸೌಹಾರ್ದ ಪರಂಪರೆ, ವೈಚಾರಿಕತೆಯನ್ನು ಬಿತ್ತುವ ನಿಜ ಸಂತರು ಸಾಕಷ್ಟು ಇದ್ದಾರೆ. ಆದರೆ ಅವರು ಇಂತಹ ದುರಿತ ಕಾಲದಲ್ಲಿ ಮೌನಕ್ಕೆ ಸಂದಿದ್ದಾರೆ. ಸುಳ್ಳು, ದ್ವೇಷ ಬಿತ್ತನೆಯ ದನಿಗಳು ದೊಡ್ಡದಾಗುತ್ತಿವೆ. ನಿಜವಾದ ಸ್ವಾಮೀಜಿಗಳು ಬೀದಿಗಿಳಿದು ಸೌಹಾರ್ದತೆಯನ್ನು ಬಿತ್ತಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇಲ್ಲವಾದರೆ ಸಮುದಾಯಗಳ ನಡುವೆ ಅಪನಂಬಿಕೆಯನ್ನು ಹೆಚ್ಚಿಸುವ ಕ್ಷುದ್ರ ಮನಸ್ಥಿತಿ ಬೀದಿಬೀದಿಯಲ್ಲಿ ರಾರಾಜಿಸುತ್ತವೆ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

1 COMMENT

  1. ತಲೆ ಬುಡ ಇಲ್ಲದ ಲೇಖನ. ಬರೆಯುವ ಮೊದಲು ಸ್ವಲ್ಪ ವಿಷಯದ ಮಾಹಿತಿ ಪಡೆಯುವುದು ಉತ್ತಮ..

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X