ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಎಡವಟ್ಟಿನಿಂದ ನಡೆದ ಕೆಎಎಸ್ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಮರುಪ್ರರೀಕ್ಷೆಯಲ್ಲಿಯೂ ಮತ್ತೆ ಎಡವಟ್ಟಾಗಿದೆ. ಮರಪರೀಕ್ಷೆ ಬರೆದ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತಿಭಟನೆಯನ್ನೂ ನಡೆಸಿದ್ದಾರೆ.
ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಕೆಎಎಸ್ ಶ್ರೇಣಿಯ ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳ ಭರ್ತಿಗಾಗಿ ಈ ಹಿಂದೆ, ಆಗಸ್ಟ್ 27ರಂದು ಕೆಪಿಎಸ್‌ಸಿ ರಾಜ್ಯಾದ್ಯಂತ ಪರೀಕ್ಷೆಗಳನ್ನು ನಡೆಸಿತ್ತು. ಆದರೆ, ಪ್ರಶ್ನೆ ಪತ್ರಿಕೆಗಳಲ್ಲಿ ಕನ್ನಡ ಪ್ರಶ್ನೆಗಳನ್ನು ಇಂಗ್ಲಿಷ್‌ನಿಂದ ಗೂಗಲ್ ಟ್ರಾನ್ಸ್‌ಲೇಟ್ ಮಾಡಲಾಗಿತ್ತು. ಪ್ರಶ್ನೆಗಳು ಸರಿಯಾಗಿ ಅರ್ಥವಾಗದೆ, ಪರೀಕ್ಷೆಯನ್ನು ಬರೆಯಲಾಗದ ಅಭ್ಯರ್ಥಿಗಳು ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು. ಬಳಿಕ, ಮರುಪರೀಕ್ಷೆ ನಡೆಸಲು ಸರ್ಕಾರ ಸೂಚಿಸಿತ್ತು.
ಅದರಂತೆ, ಭಾನುವಾರ, ಮರುಪರೀಕ್ಷೆ ನಡೆಸಿದೆ. ಆದರೆ, ಕೆಪಿಎಸ್‌ಸಿ ಎಚ್ಚೆತ್ತುಕೊಂಡಿಲ್ಲ. ಈ ಬಾರಿಯೂ ಮತ್ತದೇ ಎಡವಟ್ಟು ಮುಂದುವರೆದಿದೆ. ಕೆಪಿಎಸ್‌ಸಿ ನಿರ್ಲಕ್ಷ್ಯ, ನಿರ್ಲಜ್ಜ, ಬೇಜವಾಬ್ದಾರಿತನದಿಂದಾಗಿ ಎರಡೆರಡು ಬಾರಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಆಕ್ರೋಶಗೊಂಡಿದ್ದಾರೆ.
ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾದ ನೋಂದಣಿ ಸಂಖ್ಯೆಗಳು ಮತ್ತು ಒಎಂಆರ್ ಶೀಟ್‌ಗಳು ಹೊಂದಿಕೆಯಾಗಿಲ್ಲ. ಇದರಿಂದಾಗಿ, ಅಭ್ಯರ್ಥಿಗಳು ಗೊಂದಲಕ್ಕೀಡಾಗಿ ಪ್ರತಿಭಟನೆ ನಡೆಸಿದ್ದಾರೆ. ವಿಜಯಪುರ ಮತ್ತು ಕೋಲಾರದಲ್ಲಿ ಅಭ್ಯರ್ಥಿಗಳಿಗೆ ನೀಡಲಾಗಿದ್ದ ನೋಂದಣಿ ಸಂಖ್ಯೆಗಳು ಮತ್ತು ಒಎಂಆರ್ ಶೀಟ್‌ಗಳಲ್ಲಿ ಮುದ್ರಿತವಾಗಿರುವ ಸಂಖ್ಯೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಪ್ರತಿಭಟನೆ ನಡೆಸಿದ್ದಾರೆ. ಬಳಿಕ, ಹಸ್ತಚಾಲಿತವಾಗಿ ನೋಂದಣಿ ಸಂಖ್ಯೆಯನ್ನು ಸರಿಪಡಿಸಿ, ಪರೀಕ್ಷೆ ಬರೆಸಲಾಗಿದೆ.
ಆದಾಗ್ಯೂ, ಪ್ರಶ್ನೆ ಪತ್ರಿಕೆಗಳಲ್ಲಿ ಮತ್ತೆ ಅನುವಾದ ದೋಷ ಕಂಡುಬಂದಿದ್ದು, ಪ್ರಶ್ನೆಗಳು ಸರಿಯಾಗಿ ಅರ್ಥವಾಗದೆ, ಸರಿಯಾದ ಉತ್ತರ ಬರೆಯಲಾಗದೆ ಅಭ್ಯರ್ಥಿಗಳು ಪರದಾಡಿದ್ದಾರೆ. ಕೆಪಿಎಸ್‌ಸಿ ಪದೇ-ಪದೇ ಎಡವಟ್ಟು ಮಾಡುತ್ತಿರುವುದರ ವಿರುದ್ಧ ಕಿಡಿಕಾರಿದ್ದಾರೆ. ಪ್ರಶ್ನೆಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವಲ್ಲಿ ಗಂಭೀರ ದೋಷಗಳು ಕಂಡುಬಂದಿವೆ. ಈ ಪರೀಕ್ಷೆಯನ್ನೂ ರದ್ದುಗೊಳಿಸಿ, ಮತ್ತೆ ಮರು ಪರೀಕ್ಷೆ ನಡೆಸುವಂತೆ ಅಭ್ಯರ್ಥಿಗಳು ಕೆಪಿಎಸ್‌ಸಿ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಕೆಪಿಎಸ್‌ಸಿ ನುರಿತ ವಿಷಯ ತಜ್ಞರಿಂದ ಪ್ರಶ್ನೆ ಪತ್ರಿಕೆಯನ್ನು ಸಿದ್ದಪಡಿಸುತ್ತಿದೆ. ತಜ್ಞರು ಇಂಗ್ಲಿಷ್‌ನಲ್ಲಿ ಪ್ರಶ್ನೆಗಳನ್ನು ಸಿದ್ದಪಡಿಸಿ ಕೊಡುತ್ತಾರೆ. ಅವುಗಳನ್ನು ಕನ್ನಡಕ್ಕೆ ಭಾಷಾಂತರ ಮಾಡುವ ಜವಾಬ್ದಾರಿ ಕೆಪಿಎಸ್‌ಸಿಯದ್ದೇ ಆಗಿದೆ. ಆದರೆ, ಕೆಪಿಎಸ್‌ಸಿ ಅಧಿಕಾರಿಗಳು ನುರಿತ ಭಾಷಾಂತರಕಾರರಿಂದ ಪ್ರಶ್ನೆಗಳನ್ನು ಅನುವಾದ ಮಾಡಿಸದೆ, ಗೂಗಲ್ ಟ್ರಾನ್ಸ್‌ಲೇಟ್ ಮೂಲಕ ಭಾಷಾಂತರ ಮಾಡಿದ್ದಾರೆ. ಹೀಗಾಗಿಯೇ ಇಂತಹ ಎಡವಟ್ಟುಗಳನ್ನು ಮತ್ತೆ-ಮತ್ತೆ ಮರುಕಳಿಸುತ್ತಿವೆ ಎಂದು ಆರೋಪಿಸಲಾಗಿದೆ.
ಪರೀಕ್ಷೆಯ ಪೇಪರ್ 1, ಸಾಮಾನ್ಯ ಜ್ಞಾನ 1-ಬಿ ಸಿರೀಸ್‌ನ ಪ್ರಶ್ನೆ ಪತ್ರಿಕೆಯಲ್ಲಿ ಹಲವಾರು ಪ್ರಶ್ನೆಗಳಲ್ಲಿ ಲೋಪಗಳು ಕಂಡುಬಂದಿವೆ. ಪ್ರಶ್ನೆಗಳು ಹಾಗೂ ಪ್ರಶ್ನೆಗಳಿಗೆ ನೀಡಲಾಗಿದ್ದ ಆಯ್ಕೆಯ ಉತ್ತರಗಳ ವಿವರಣೆಯು ಅತ್ಯಂತ ಗೊಂದಲದಿಂದ ಕೂಡಿವೆ. ಅವುಗಳನ್ನು ಗೂಗಲ್ ಟ್ರಾನ್ಸ್‌ಲೇಟ್ ಮಾಡಿರುವುದರಿಂದಲೇ ಪ್ರಶ್ನೆಗಳು ಮತ್ತು ಆಯ್ಕೆಯ ಉತ್ತರಗಳು ಗೊಂದಲದಿಂದ ಕೂಡಿವೆ ಎಂದು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉದಾಹರಣೆಗೆ, ಪ್ರಶ್ನೆ 3ರಲ್ಲಿ ‘ತಪ್ಪಾದ’ ಪದವನ್ನು ಬಳಸುವ ಬದಲು ‘ತಪ್ಪದ’ ಎಂದು ಬರೆಯಲಾಗಿದೆ.
ಪ್ರಶ್ನೆ 45ರಲ್ಲಿ ‘ವಿಧೇಯಕ’ವನ್ನು ‘ವಿಧೇಯತ’ ಎಂದು ಬರೆಯಲಾಗಿದೆ.
ಪ್ರಶ್ನೆ 97ಯಲ್ಲಿ ‘ಪುನರ್ ಪರಿಶೀಲನೆ’ಯನ್ನು ‘ಸ್ವಾಯಿಕ ಪುನರಂ’ ಎಂದು ನಮೂದಿಸಲಾಗಿದೆ.
ಪ್ರಶ್ನೆ 85ರಲ್ಲಿ ಅಮೆರಿಕದಲ್ಲಿ ‘ರಾಷ್ಟ್ರಪತಿ’ ಹುದ್ದೆಯೇ ಇಲ್ಲದಿದ್ದರೂ ‘ಅಮೆರಕ ರಾಷ್ಟ್ರಪತಿ’ ಅಧಿಕಾರದ ಬಗ್ಗೆ ವಿವರಣೆ ಕೊಡಲಾಗಿದೆ.
ಪ್ರಶ್ನೆ 95ರಲ್ಲಿ ‘SEBI’ಯನ್ನು ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ ಎಂದು ವಿವರಿಸುವ ಬದಲಿಗೆ ಭಾರತದ ಭದ್ರತೆಗಳು ಮತ್ತು ವಿನಿಮಯ ಮಂಡಳಿ ಎಂದು ಬರೆಯಲಾಗಿದೆ.
ಪ್ರಶ್ನೆ 92ರಲ್ಲಿ ‘ದ್ರವ್ಯತೆ ಹೊಂದಾಣಿಕೆ ಸೌಲಭ್ಯ’ ಎಂದು ಬರೆಯುವ ಬದಲು ‘ದ್ರವ್ಯ ಮೆಲುವಿನ ಹೊಂದಾಣಿಕೆ ಸೌಲಭ್ಯ’ವೆಂದು ಅರ್ಥವೇ ಇಲ್ಲದಂತೆ ಬರೆಯಲಾಗಿದೆ.
ಇದೇ ರೀತಿ ಸುಮಾರು 32 ಪ್ರಶ್ನೆಗಳು ಮತ್ತು ಅವುಗಳ ಆಯ್ಕೆಯ ಉತ್ತರಗಳಲ್ಲಿ ತಪ್ಪಾಗಿದೆ. ಇದರಲ್ಲಿ ಕೆಪಿಎಸ್‌ಸಿ ಅಧಿಕಾರಿಗಳ ಬೇಜವಾಬ್ದಾರಿತನವು ಎದ್ದುಕಾಣುತ್ತಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಡೆಸಲಾಗುವ ಪರೀಕ್ಷೆಗಳು ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಪದೇ-ಪದೇ ರದ್ದಾಗುತ್ತಿವೆ. ಪರಿಣಾಮ ಸರ್ಕಾರಕ್ಕೆ ಹೆಚ್ಚುವರಿ ಆರ್ಥಿಕ ಹೊಣೆಯಾಗುತ್ತಿದೆ. ಹಳ್ಳಿಗಳಿಂದ ಪರೀಕ್ಷೆ ಬರೆಯಲು ಪಟ್ಟಣಗಳಿಗೆ ಅಭ್ಯರ್ಥಿಗಳು ಪದೇ-ಪದೇ ಅಲೆದಾಡುವಂತಾಗಿದೆ. ಪರೀಕ್ಷೆ ಬರೆದು, ಪಾಸು ಮಾಡಿ ಸರ್ಕಾರಿ ಉದ್ಯೋಗ ಪಡೆಯಬೇಕೆಂದು ವರ್ಷಗಟ್ಟಲೆ ಅಧ್ಯಯನ ನಡೆಸುವ ಅಭ್ಯರ್ಥಿಗಳ ಕನಸು ಅಧಿಕಾರಿಗಳ ಬೇಜವಾಬ್ದಾರಿತನದಿಂದ ನುಚ್ಚುನೂರಾಗುತ್ತಿವೆ.
ಪ್ರಶ್ನೆ ಪತ್ರಿಕೆಗಳಲ್ಲಿ ಪುನಾರಾವರ್ತಿತ ತಪ್ಪುಗಳಿಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಸರ್ಕಾರವು ಶಿಸ್ತುಕ್ರಮ ಜರುಗಿಸಬೇಕಿದೆ. ಪರೀಕ್ಷೆ ನಡೆಸಲು ವೆಚ್ಚವಾಗುವ ಹಣವನ್ನು ಅಧಿಕಾರಿಗಳಿಂದಲೇ ಭರಿಸಿ, ಶಿಕ್ಷೆಗೆ ಗುರಿಪಡಿಸಬೇಕಿದೆ. ಪುನರಾವರ್ತಿತ ಎಡವಟ್ಟಿಗೆ ಅಧಿಕಾರಿಗಳ ತಲೆದಂಡ ಮಾಡಬೇಕಿದೆ. ಆಗ ಮಾತ್ರವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ. ಸರಿಯಾದ ರೀತಿಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸುತ್ತಾರೆ. ಕಟ್ಟುನಿಟ್ಟಾಗಿ ಪರೀಕ್ಷೆಗಳನ್ನು ನಡೆಸುತ್ತಾರೆ.