25ನೇ ವಯಸ್ಸಲ್ಲೇ 45 ಎಕರೆ ಜಮೀನು ಖರೀದಿಸಿದ್ದರಂತೆ ಕುಮಾರಸ್ವಾಮಿ, ನಿಜವೇ ಗೌಡ್ರೇ?

Date:

Advertisements
ʼನನ್ನ ಟಚ್ ಮಾಡಕ್ಕಾಗುತ್ತ?ʼ ಎನ್ನುವ ಕೇಂದ್ರ ಮಂತ್ರಿ ಕುಮಾರಸ್ವಾಮಿಯವರ ಈ ʼಧೈರ್ಯʼದ ಹಿಂದೆ ಮೋದಿ ಸರ್ಕಾರವಿದೆ. ಮೋದಿಯೊಂದಿಗೆ ದೇವೇಗೌಡರ ದೋಸ್ತಿ ಇದೆ. ಹೀಗಿರುವಾಗ ಸಿದ್ದರಾಮಯ್ಯನವರ ಸರ್ಕಾರ, ಅಕ್ರಮ ಒತ್ತುವರಿ ಭೂಮಿಯನ್ನು ವಾಪಸ್‌ ಪಡೆಯುವುದುಂಟೇ? ಸಾಧ್ಯವೇ?

ಎಚ್.ಡಿ ಕುಮಾರಸ್ವಾಮಿಯವರು ಶನಿವಾರ ಮಾಜಿ ಪ್ರಧಾನಿ ದೇವೇಗೌಡರ ತವರು ಜಿಲ್ಲೆ ಹಾಸನಕ್ಕೆ ಬಂದಿದ್ದರು. ಕೇಂದ್ರ ಸಚಿವರಾದ್ದರಿಂದ ಸಹಜವಾಗಿಯೇ ಸುದ್ದಿಗಾರರು ಮುತ್ತಿಕೊಂಡರು. ರಾಜ್ಯ ಕಾಂಗ್ರೆಸ್ ಸರ್ಕಾರದ ಹಗರಣಗಳ ಕುರಿತು ಪ್ರಶ್ನೆಗಳನ್ನು ಕೇಳಿದರು. ಅದರಲ್ಲೂ ಕೆಲವರು, ‘ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಕುಟುಂಬದ ಪಾತ್ರವಿಲ್ಲ ಎಂದು ಲೋಕಾಯುಕ್ತ ವರದಿ ಕೂಡ ಬಂದಿದೆ..’ ಎಂದು ಮಾತಿಗೆಳೆದರು.

ಮುಡಾ ಎಂದಾಕ್ಷಣ ಮಂದಸ್ಮಿತರಾದ ಕುಮಾರಸ್ವಾಮಿಯವರು, ‘ಮುಡಾ… ಲೋಕಾಯುಕ್ತ ವರದಿ… ನನ್ನದೇನ್ ತಕರಾರಿಲ್ಲ. ನಿಮ್ಮ ಲೋಕಾಯುಕ್ತ… ನಿಮ್‌ ಪೊಲೀಸ್ ಇಲಾಖೆ ಏನ್ ತನಿಖೆ ಮಾಡಿ ವರದಿ ಕೊಡ್ಲಿಕ್ಕೇಳಿದಾರೆ… ಏನ್ ವರದಿ ಕೊಟ್ಟಿದಾರೆ… ಅದರಲ್ಲೇನು ನಿರೀಕ್ಷೆ ಇಟ್ಕಳಂಗಿಲ್ಲ’ ಎಂದು, ಅದೆಲ್ಲವೂ ಸರ್ಕಾರದ ಪರ ಸಂಸ್ಥೆಗಳ ವರದಿ, ಅದರಿಂದೇನೂ ಆಗಲ್ಲ ಎಂಬ ದನಿಯಲ್ಲಿ ಮಾತನಾಡಿದರು.

ಬೈಟ್ ಬೇಕಾಗಿತ್ತು, ಅಲ್ಲಿಗೆ ಸುದ್ದಿಗಾರರ ‘ಸ್ಟಫ್’ ಖಾಲಿಯಾಗಿತ್ತು. ಆದರೆ, ಕುಮಾರಸ್ವಾಮಿಯವರಿಗೆ ಮಾತನಾಡುವ ಉಮೇದಿತ್ತು. ಅವರೇ ಮುಂದುವರೆಸಿ, ‘ಈಗ ನೋಡಿ, ನನ್ನ ವಿಷಯನೆ ತಗಳಿ, 1983, 84, 85ರಲ್ಲಿ ನಾನು ಚಿತ್ರರಂಗದಲ್ಲಿ ಹಂಚಿಕೆದಾರನಿದ್ದಾಗ ತೋಟ ಖರೀದಿ ಮಾಡಿದ್ದೆ. ಅದು ನನ್ನ ಭೂಮಿ. ಅದೇನೋ… 200 ಎಕರೆನೋ, 300 ಎಕರೆನೋ ಲಪಟಾಯಿಸ್ಬುಟಿದೀನಿ ಅಂತ ಎಸ್ಐಟಿ ರಚನೆ, ಐದು ಜನ ಅಧಿಕಾರಿಗಳ ತಂಡ, ಅದು ಎಂತಹ ಅಧಿಕಾರಿಗಳು.. ಆಯುಕ್ತರ ಲೆವೆಲ್‌ ನವರು, ನಿನ್ನೆ ಬಂದು ನನ್ನ ತೋಟಕ್ಕೆ ಹೋಗಬೇಕು ಅಂತರೆ- ಇದು ನನ್ಗ್ ಬಂದ ಇನ್ಫರ್ಮೇಷನ್ನು… ಸರ್ವೆ ಮಾಡಬೇಕು ಅಂತರೆ… ಅದೇನೋ ನೋಟಿಸ್ ಕೊಡಬೇಕಲ್ವ? ಕೋರ್ಟಲ್ಲಿದೆ, ಕುಮಾರಸ್ವಾಮಿ, ಕುಮಾರಸ್ವಾಮಿ ಸಂಬಂಧಿಕ್ರು ಅಂತ ಕೋರ್ಟಲ್ಲಿದೆ. ಅವರ ರಿಯಾಕ್ಷನ್… ಚರ್ಚೆ ಮಾಡಲ್ಲ. ದಾಖಲಾತಿಗಳು ಯಾರು ನೋಡಿದಿರಿ? 85ರಿಂದ ನಡೀತಾಯಿದೆ ಇದು. ಕಷ್ಟಪಟ್ಟು ಸಂಪಾದ್ನೆ ಮಾಡಿರೋ ಭೂಮಿ. ಇಲ್ಲ, ಅಲ್ಲೇನ್ ರೆಸಾರ್ಟ್ ಮಾಡಿಲ್ಲ, ತೆಂಗಿನ ಗಿಡ, ಅಡಿಕೆ ಗಿಡ ಹಾಕಿದೀನಿ. 40 ವರ್ಷದಿಂದ ನನ್ನ ಸುಪರ್ದಿನಲ್ಲಿದೆ. ಇವತ್ತು, ವಿರೋಧ ಪಕ್ಷಗಳನ್ನು ಬಗ್ಗುಬಡಿಯಕ್ಕೆ… ಹೆದರಿಸಕ್ಕಾಗುತ್ತ ನನ್ನನ್ನ? ಸರ್ಕಾರಕ್ಕೆ ಕೇಳ್ತೀನಿ… ನಿನ್ನೆ ಪೊಲೀಸ್ ಫೋರ್ಸು ಎಲ್ಲಾರ್ನು ತಗಂಡು… ಅಲ್ಲಪಾ, ಇಂಟರ್ ನ್ಯಾಷನಲ್ ಸರ್ವೆಯರನ್ನ ಕರೆಸ್ಕಬುಡಿ… ಆ ಭೂಮೀಲಿ ಏನಾದ್ರು ಒತ್ತುವರಿಯಾಗಿದ್ರೆ ತಗಳ್ರಪ್ಪ. ನೀವು ನನ್ಗೆ ನೋಟಿಸೇ ಕೊಡದೆ… ನನ್ನ ಪ್ರಾಪರ್ಟಿ, ನೀವೆಂಗ್ ಒಳಗಡೆ ಬರ್ತಿರಪ್ಪ? ಆ ಅಧಿಕಾರಿಗಳೋ… ಮೇಲ್ನ ಒತ್ತಡ ಅಂತರೆ. ಇದು ಸಿದ್ದರಾಮಯ್ಯನೋರ ಆಡಳಿತ…’ ಅಂದು ಅತ್ತ ಇತ್ತ ಕಣ್ಣಾಡಿಸಿದರು.

Advertisements

ಅದಕ್ಕೆ ತಕ್ಕಂತೆ ಪತ್ರಕರ್ತರೊಬ್ಬರು, ‘ಟಾರ್ಗೆಟ್…’ ಎಂದು ಅರ್ಧ ಉಸಿರು ನುಂಗಿದರು. ಅದಕ್ಕೆ ಕುಮಾರಸ್ವಾಮಿಯವರು, ‘ಏನ್ ಟಾರ್ಗೆಟ್ಟು… ಏನೂ ಮಾಡಕ್ಕಾಗದಿಲ್ಲ. ಡೂಪ್ಲಿಕೇಟ್ ತಗಂಡೋಗಿ ವಿಧಾನಸೌದದಲ್ಲಿ ಇಡ್ಲಿಲ್ವಾ? ಇಂಥೋರ್ ನನ್ನ ಟಚ್ ಮಾಡಕ್ಕಾಗುತ್ತ? ನೋಡನ…’ ಎಂದು ಹೇಳಿ ನಿರ್ಗಮಿಸಿದರು.

ಇದು ಕುಮಾರಸ್ವಾಮಿಯವರ ವರಸೆ. ಯಾವುದೂ ಸ್ಪಷ್ಟವಿಲ್ಲ. ಯಾರಿಗೆ ಏನು ಹೇಳಬೇಕೋ, ಎಲ್ಲಿಗೆ ಮುಟ್ಟಿಸಬೇಕೋ- ಅವರ ಒಳಾಸೆಯನ್ನು ಪತ್ರಕರ್ತರು ಪೂರೈಸುತ್ತಾರೆಂಬ ಆತ್ಮವಿಶ್ವಾಸ. ಆ ವಿಶ್ವಾಸವನ್ನು ಪತ್ರಕರ್ತರು ಕೂಡ ಉಳಿಸಿಕೊಂಡಿದ್ದಾರೆ!

ಇವರು ಕೇಂದ್ರ ಮಂತ್ರಿಗಳು. ಇವರು ಮಾತನಾಡಿದ್ದನ್ನು ಯಥಾವತ್ತಾಗಿ ವರದಿ ಮಾಡಿದರೆ, ಇವರ ʼʼಬಂಡವಾಳʼ ಬಯಲಾಗುತ್ತದೆ. ಆದರೆ, ಇವರ ಅದೃಷ್ಟವೋ ಏನೋ, ಇವತ್ತಿನ ಪತ್ರಕರ್ತರು ಕೂಡ ಅವರಂತೆಯೇ ಇದ್ದಾರೆ. ಇವರು ಏನು ಹೇಳಿದ್ರು… ಅದನ್ನು ಒಂದು ಸುದ್ದಿ ರೂಪಕ್ಕೆ ತಂದು, ಮಾನ ಮರ್ಯಾದೆ ಕಾಪಾಡ್ತಿದಾರೆ, ಇರಲಿ.

ಇಲ್ಲಿ, ಈ ನಾಲ್ಕು ನಿಮಿಷದ ಸುದ್ದಿಗಾರರೊಂದಿಗಿನ ಮಾತುಕತೆಯಲ್ಲಿ ಕುಮಾರಸ್ವಾಮಿಯವರು ಬಹಳ ಮುಖ್ಯವಾದ ಸಂಗತಿಯೊಂದನ್ನು ಹೊರಹಾಕಿದ್ದಾರೆ. ಸಾರ್ವಜನಿಕರ ಮುಂದೆ ಸತ್ಯ ಬಿಚ್ಚಿಟ್ಟಿದ್ದಾರೆ. ಅದೇನೆಂದರೆ, 1983-84ರಲ್ಲಿ- ಇವರ ವಯಸ್ಸು ಇಪ್ಪತ್ನಾಲ್ಕು-ಇಪ್ಪತ್ತೈದು (ಜನನ-ಡಿಸೆಂಬರ್‌ 19, 1959) ಇರುವಾಗ, ಅಂದರೆ ಡಿಗ್ರಿ ಮುಗಿಸಿದ ನಂತರ, ಇವರು ಸಿನೆಮಾ ಹಂಚಿಕೆದಾರರಾದರು. ಚಿತ್ರ ಹಂಚಿಕೆಯಿಂದ ದುಡಿದ ದುಡ್ಡಿನಿಂದ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ 45 ಎಕರೆ ಭೂಮಿ ಖರೀದಿಸಿದರು.

ಇದನ್ನು ಕರ್ನಾಟಕದ ಜನ ನಂಬಬೇಕು! ಏಕೆಂದರೆ, 1983ರಲ್ಲಿ, ಜನತಾ ಪಕ್ಷದ ಸರ್ಕಾರ ಅಧಿಕಾರದಲ್ಲಿತ್ತು. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದರು. ಅವರ ಸರ್ಕಾರದಲ್ಲಿ ಎಚ್.ಡಿ ದೇವೇಗೌಡರು (ಜನನ- ಮೇ 18, 1933) ಸಚಿವರಾಗಿದ್ದರು. ಅದು ಅವರು ರಾಜಕೀಯ ಬದುಕಿಗೆ ಅಡಿಯಿಟ್ಟು 21 ವರ್ಷಗಳ ನಂತರ, ಮೊದಲ ಬಾರಿಗೆ ಮಂತ್ರಿಯಾಗಿದ್ದರು. ಅಂದರೆ, ಗೌಡರಿಗೆ 50ನೇ ವಯಸ್ಸಿನಲ್ಲಿ ಮಂತ್ರಿಯಾಗುವ ಯೋಗ ಕೂಡಿಬಂದಿತ್ತು. ದೇವೇಗೌಡರ ಆಪ್ತರ ತಿಳಿವಳಿಕೆ ಪ್ರಕಾರ, ಆ ಸಂದರ್ಭದಲ್ಲಿ ಸ್ವಂತ ಮನೆ-ಕಾರು ಕೂಡ ಇರಲಿಲ್ಲ.

ಆ ಸಂದರ್ಭದಲ್ಲಿ, 1985ರಲ್ಲಿ ಎಚ್.ಡಿ. ಕುಮಾರಸ್ವಾಮಿಯವರು, ಅನಿತಾ ಅವರನ್ನು ವಿವಾಹವಾದರು. ಸಿನೆಮಾ ಹಂಚಿಕೆಯಿಂದ ದುಡಿದ ದುಡ್ಡಿನಲ್ಲಿ ಬಿಡದಿ ಬಳಿ 45 ಎಕರೆ ಜಮೀನು ಖರೀದಿಸಿದ್ದರು. ಇದನ್ನು ಕರ್ನಾಟಕದ ಜನ ನಂಬಬೇಕು!

ಅಸಲಿಗೆ, ಎಚ್.ಡಿ ಕುಮಾರಸ್ವಾಮಿಯವರು ಹೇಳುವಂತೆ ರಾಮನಗರ ಜಿಲ್ಲೆ ಬಿಡದಿ ಹೋಬಳಿ ಕೇತಗಾನಹಳ್ಳಿ ಬಳಿಯ ಜಮೀನು ಕೇವಲ 45 ಎಕರೆಯಲ್ಲ, ಅವರು ಮತ್ತು ಅವರ ಸಂಬಂಧಿಕರಿಗೆ ಸೇರಿದ ಒಟ್ಟು 110.32 ಎಕರೆ ಜಮೀನಿದೆ.
ಈ ಪೈಕಿ ಸುಮಾರು 54 ಎಕರೆಯಷ್ಟು ಸರ್ಕಾರಿ ಭೂಮಿ ಇದೆ. ಅದನ್ನು ಗೌಡರ ಕುಟುಂಬ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದೆ ಎಂದು ಆರೋಪಿಸಿ ಬಹಳ ಹಿಂದೆಯೇ ಮಂಡ್ಯದ ಮಾಜಿ ಸಂಸದ ಜಿ ಮಾದೇಗೌಡ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಸರ್ವೆ ನಂ.7, 8, 9, 10, 16, 17 ಮತ್ತು 79ರಲ್ಲಿ ಮಂಜೂರಾಗಿರುವ ಗೋಮಾಳದ ಕುರಿತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಸ್ತೃತ ತನಿಖೆ ನಡೆಸಬೇಕು. ಒಂದೊಮ್ಮೆ ಆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೆ ಅದನ್ನು ವಾಪಸ್‌ ಪಡೆಯಲು ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಬೇಕು. ಸರ್ಕಾರದ ಭೂಮಿಗೆ ಅತಿಕ್ರಮ ಪ್ರವೇಶ ಮಾಡಿರುವವರು ಮತ್ತು ಅದಕ್ಕೆ ಸಹಕರಿಸಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ದಾವೆ ದಾಖಲಿಸಿ, ನಾಲ್ಕು ತಿಂಗಳಲ್ಲಿ ಕ್ರಮ ಕೈಗೊಳ್ಳಬೇಕು. ಆನಂತರ 15 ದಿನಗಳಲ್ಲಿ ರಿಜಿಸ್ಟ್ರಾರ್‌ಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಲೋಕಾಯುಕ್ತರು 2014ರ ಆಗಸ್ಟ್‌ 4ರಂದು ಆದೇಶಿಸಿದ್ದರು.
ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಲೋಕಾಯುಕ್ತ ಆದೇಶವನ್ನು ಎತ್ತಿ ಹಿಡಿದಿತ್ತು. ಇದನ್ನು ಜಾರಿ ಮಾಡಲು ವಿಫಲವಾಗಿರುವ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ಎಸ್‌.ಆರ್‌ ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ, ನ್ಯಾಯಾಂಗ ನಿಂದನೆ ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಿತ್ತು. ಇದರ ವಿಚಾರಣೆ ಹಂತ ಹಂತವಾಗಿ ನಡೆಯುತ್ತಾ ಬರುತ್ತಿದೆ.

ಭೂ ಕಬಳಿಕೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖಾ ವರದಿಯನ್ನು ಲೋಕಾಯುಕ್ತ ಅಧಿಕಾರಿಗಳು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿದ್ದಾರೆ. ಸರ್ಕಾರದಿಂದ ಅನುಪಾಲನಾ ವರದಿ (ಕ್ರಮ ಜರುಗಿಸುವ ವರದಿ) ಹೈಕೋರ್ಟ್‌ಗೆ ಸಲ್ಲಿಕೆಯಾಗಬೇಕಿದೆ. ಈ ವರದಿ ಸಲ್ಲಿಕೆಗೆ 2023ರ ಜನವರಿ 19ರಂದು, ಸರ್ಕಾರಿ ವಕೀಲರು ಒಂದು ವಾರ ಕಾಲಾವಕಾಶ ಕೋರಿದ್ದರು. ಆದರೆ ಇಲ್ಲಿಯವರೆಗೂ ವರದಿ ಕೋರ್ಟ್‌ಗೆ ಸಲ್ಲಿಕೆಯಾಗಿಲ್ಲ. ಅಂದರೆ, ಸರ್ಕಾರದ ಈ ನಡೆ ಕುಮಾರಸ್ವಾಮಿಯವರ ಕುಟುಂಬದ ಪರವಾಗಿರುವ ಅನುಮಾನ ಹುಟ್ಟಿಸುತ್ತದೆ.

ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿ ಗ್ರಾಮದಲ್ಲಿ 7, 8, 9, 10, 16, 17 ಮತ್ತು 79ರ ಸರ್ವೆ ನಂಬರ್‌ಗಳಲ್ಲಿನ ಜಮೀನು ಪರಿಶೀಲಿಸಿ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಅವರು ಕೆಲವು ವಿಚಾರಗಳು ಮತ್ತು ವಾಸ್ತವಿಕ ಅಂಶಗಳನ್ನು ದಾಖಲಿಸಿದ್ದಾರೆ ಎಂದು 2023ರ ಫೆಬ್ರವರಿ 6ರಂದು ನ್ಯಾಯಾಲಯಕ್ಕೆ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಅಫಿಡವಿಟ್‌ನಲ್ಲಿ ಸರ್ವೆ ನಂಬರ್‌ 79 ಹೊರತುಪಡಿಸಿ ಕೇವಲ ಆರು ಸರ್ವೆ ನಂಬರ್‌ಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. 7, 8, 9, 10, 16 ಮತ್ತು 17ರ ಸರ್ವೆ ನಂಬರ್‌ಗಳಲ್ಲಿ ಒಟ್ಟು 14 ಎಕರೆ 4 ಗುಂಟೆ ಒತ್ತುವರಿಯಾಗಿದೆ ಎಂದು ಹೇಳಲಾಗಿದೆ.

ಸರ್ಕಾರದ ಭೂಮಿ ಒತ್ತುವರಿ ತೆರವು ಮಾಡುವಂತೆ ತಹಶೀಲ್ದಾರ್‌ ಅವರು ಒತ್ತುವರಿ ಮಾಡಿಕೊಂಡಿರುವವರಿಗೆ ನೋಟಿಸ್‌ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ಒತ್ತುವರಿದಾರರು ಉಪವಿಭಾಗಧಿಕಾರಿ ಅವರಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಆ ಮೇಲ್ಮನವಿಯನ್ನು ವಜಾ ಮಾಡಲಾಗಿದೆ. ಉಪವಿಭಾಗಾಧಿಕಾರಿಯ ಆದೇಶವನ್ನು ಜಿಲ್ಲಾಧಿಕಾರಿ ಎತ್ತಿ ಹಿಡಿದಿದ್ದಾರೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

ಏತನ್ಮಧ್ಯೆ, ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್‌ ಹಿರೇಮಠ್‌ ಅವರು, ʼಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣದಲ್ಲಿ ಕೇವಲ 14 ಎಕರೆ 4 ಗುಂಟೆ ಜಮೀನು ಒತ್ತುವರಿ ಅಂತ ತೋರಿಸಲಾಗಿದೆ. ಆದರೆ, ನಮ್ಮ ದಾಖಲೆಗಳ ಪ್ರಕಾರ 71 ಎಕರೆ 30 ಗುಂಟೆ ಒತ್ತುವರಿಯಾಗಿದೆ. ಇದರಲ್ಲಿ ಎಚ್‌.ಡಿ ಕುಮಾರಸ್ವಾಮಿ ಅವರದ್ದು ಸಿಂಹಪಾಲು. ಅವರ ಚಿಕ್ಕಮ್ಮ ಸಾವಿತ್ರಮ್ಮ, ಮದ್ದೂರಿನ ಮಾಜಿ ಶಾಸಕ ಡಿ.ಸಿ ತಮ್ಮಣ್ಣ, ಅವರ ಹೆಂಡತಿ ಹಾಗೂ ಮಕ್ಕಳು ಕೂಡ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈಗಿನ ಸಂಸದ ಡಾ. ಸಿ.ಎನ್‌ ಮಂಜುನಾಥ್‌ ಅವರು ಕೂಡ ಕೆಲವು ಗುಂಟೆ ಒತ್ತುವರಿ ಮಾಡಿಕೊಂಡಿದ್ದಾರೆ. ಇವರೆಲ್ಲರೂ ಪ್ರಭಾವಿಗಳೇ ಆಗಿದ್ದರಿಂದ ಕ್ರಮಕೈಗೊಳ್ಳಬೇಕಾದ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲದಾಗಿದೆʼ ಎಂದು ಆರೋಪಿಸುತ್ತಾರೆ.

ಕುಮಾರಸ್ವಾಮಿ, ಅವರ ಚಿಕ್ಕಮ್ಮ ಸಾವಿತ್ರಮ್ಮ, ಸಂಬಂಧಿಕ ಮಾಜಿ ಶಾಸಕ ಡಿ.ಸಿ ತಮ್ಮಣ್ಣ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ. ಸಿ.ಎನ್‌ ಮಂಜುನಾಥ್‌ ಸೇರಿ ಮತ್ತಿತರರು ಕೇತಗಾನಹಳ್ಳಿಯಲ್ಲಿ ಒತ್ತುವರಿ ಮಾಡಿರುವ 14 ಎಕರೆ 4 ಗುಂಟೆ ಸರ್ಕಾರಿ ಜಮೀನನ್ನು ಎರಡು ವಾರದಲ್ಲಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ಕಟ್ಟುನಿಟ್ಟಿನ ಸೂಚನೆ ನೀಡಿದೆ. ತಪ್ಪಿದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಹೈಕೋರ್ಟ್‌ ಎಚ್ಚರಿಕೆ ನೀಡಿದೆ.

ಈ ವರದಿ ಓದಿದ್ದೀರಾ?: ಚುನಾವಣಾ ಪಾರದರ್ಶಕತೆ ನಗೆಪಾಟಲಿಗೀಡಾಯಿತೇ?

ಇದರ ಫಲವಾಗಿ ಸರ್ಕಾರ, ಸಮಗ್ರ ಮತ್ತು ನಿಷ್ಪಕ್ಷಪಾತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎಸ್‌ಐಟಿ ರಚಿಸಿದೆ. ತನಿಖೆಗಾಗಿ ಐವರು ಉನ್ನತಾಧಿಕಾರಿಗಳ ತಂಡವನ್ನು ನೇಮಿಸಿದೆ. ಈ ಎಸ್‌ಐಟಿ ತಂಡ ಕುಮಾರಸ್ವಾಮಿಯವರ ಜಮೀನಿನ ಸರ್ವೆಗೆ ಹೋದರೆ, ಅವರು, ʼನೀವು ನನ್ಗೆ ನೋಟಿಸೇ ಕೊಡದೆ… ನನ್ನ ಪ್ರಾಪರ್ಟಿ, ನೀವೆಂಗ್ ಒಳಗಡೆ ಬರ್ತಿರಪ್ಪʼ ಎಂದು ಧಿಮಾಕಿನಿಂದ ಪ್ರಶ್ನಿಸುತ್ತಾರೆ. ಮುಂದುವರೆದು, ʼಇದು ಸಿದ್ದರಾಮಯ್ಯನೋರ ಆಡಳಿತʼ ಎಂದು ವ್ಯಂಗ್ಯವಾಡುತ್ತಾರೆ. ಅಷ್ಟೇ ಅಲ್ಲ, ʼನನ್ನ ಟಚ್ ಮಾಡಕ್ಕಾಗುತ್ತ?ʼ ಎಂದು ಧಮ್ಕಿ ಹಾಕುತ್ತಾರೆ.

ಕೇಂದ್ರ ಮಂತ್ರಿ ಕುಮಾರಸ್ವಾಮಿಯವರ ಈ ʼಧೈರ್ಯʼದ ಹಿಂದೆ ಮೋದಿ ಸರ್ಕಾರವಿದೆ. ಮೋದಿಯೊಂದಿಗೆ ದೇವೇಗೌಡರ ದೋಸ್ತಿ ಇದೆ. ಹೀಗಿರುವಾಗ ಸಿದ್ದರಾಮಯ್ಯನವರ ಸರ್ಕಾರ, ಅಕ್ರಮ ಒತ್ತುವರಿ ಭೂಮಿಯನ್ನು ವಾಪಸ್‌ ಪಡೆಯುವುದುಂಟೇ? ಸಾಧ್ಯವೇ?

ಬಡವರ ಭೂಮಿ-ಮನೆಯನ್ನು ಕಣ್ಣುಮುಚ್ಚಿ ಬಿಡುವುದರೊಳಗೆ ವಾಪಸ್‌ ಪಡೆಯುವ ಸರ್ಕಾರ, ಉಳ್ಳವರ-ಅಧಿಕಾರಸ್ಥರ ಒತ್ತುವರಿಯನ್ನು ವಶಕ್ಕೆ ಪಡೆದ ಉದಾಹರಣೆ ಇಲ್ಲ. ವಸ್ತುಸ್ಥಿತಿ ಹೀಗಿರುವಾಗ, ಕುಮಾರಸ್ವಾಮಿಯವರಿಗೆ ಇಪ್ಪತ್ನಾಲ್ಕು ವರ್ಷವಾಗಿದ್ದಾಗ, ಸಿನೆಮಾ ವಿತರಕರಾಗಿದ್ದರೇ? ಆ ಸಿನೆಮಾ ವ್ಯವಹಾರದಿಂದ ಕೋಟಿಗಟ್ಟಲೆ ಹಣ ಸಂಪಾದಿಸಿದ್ದರೇ? ಅದರಿಂದ 45 ಎಕರೆ ಜಮೀನು ಖರೀದಿಸಿದ್ದರೇ? ಅದು ಅವರು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೇ?
ಈ ಪ್ರಶ್ನೆಗಳಿಗೆ ಮಾಜಿ ಪ್ರಧಾನಿ ದೇವೇಗೌಡರು ಉತ್ತರಿಸುವರೇ, ನಾಡಿನ ಜನತೆಗೆ ಸತ್ಯ ತಿಳಿಸುವರೇ?

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

2 COMMENTS

  1. ಮಾನ್ಯ ಕೇಂದ್ರ ಮಂತ್ರಿ ಶ್ರೀ ಕುಮಾರಸ್ವಾಮಿ ನ್ಯಾಯಾಲಯದ ಆದೇಶವನ್ನು ದಿಕ್ಕರಿಸುವ ದುಸ್ಸಾಹಸಕ್ಕೆ ಇಳಿದಿದ್ದಾರೆ

  2. If Mr.HDK is in possession of only the land he has purchased then why should he bother? He knows he has illegally occupied Hovtt land, with political strength he knows how to come out. Is he ready to disclose the property he owns.He & his family definitely has unauthorised properties. God gave the result to Revanna. Now all will get the result. There is delay in God’s court but there is no darkness in His Court.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X