ಕುಂಭಮೇಳ | ಗಂಗೆಯಲ್ಲಿ ಪಾಪ ತೊಳೆಯುವ ಭಕ್ತರಿಗೆ ರೋಗವೇ ಪ್ರಸಾದ!

Date:

Advertisements
ಗಂಗಾ ನದಿ ಮತ್ತೊಂದು ಕುಂಭಮೇಳದವರೆಗೆ ಬದುಕಬಹುದೇ? ನದಿ ಬದುಕಿರುತ್ತದೆ. ಆದರೆ, ಅದರ ಪರಿಸರ- ಮನುಷ್ಯರು, ಸಸ್ಯಗಳು ಮತ್ತು ಜಲಚರಗಳಿಗೆ ಬದುಕುವುದು ಕಷ್ಟವಾಗುತ್ತದೆ. 

ಉತ್ತರ ಪ್ರದೇಶದ ಪ್ರಯಾಗ್‌ ರಾಜ್ ನಗರದಲ್ಲಿ ಕುಂಭಮೇಳ ನಡೆಯುತ್ತಿದೆ. ಫೆಬ್ರವರಿ 26ರವರೆಗೂ ಕುಂಭಮೇಳದ ಉತ್ಸವ ನಡೆಯಲಿದೆ. ದೀರ್ಘ ಅವಧಿಯ ಉತ್ಸವದಲ್ಲಿ ಸುಮಾರು 4 ಕೋಟಿ ಜನರು ಸೇರುವ ಸಾಧ್ಯತೆ ಇದೆ. ಇಷ್ಟೊಂದು ಮಂದಿ ಸೇರುತ್ತಿರುವ ಪ್ರಯಾಗ್‌ರಾಜ್‌ನಲ್ಲಿ ಗಂಗಾ ಮತ್ತು ಯಮುನಾ ನದಿಗಳು ಹೇಗೆ ಹರಿಯುತ್ತಿವೆ ಎಂಬುದನ್ನು ಗಮನಿಸಲೇಬೇಕು.

ಪ್ರಯಾಗ್‌ರಾಜ್‌ ನಗರ ಗಂಗಾ ಮತ್ತು ಯಮುನಾ ನದಿ ಸೇರುವ ತಾಣ. ಇತ್ತೀಚೆಗೆ, ದೆಹಲಿಯಲ್ಲಿ ಯಮುನಾ ನದಿ ವಿಷಕಾರಿ ನೊರೆಯಿಂದ ತುಂಬಿತ್ತು. ಕೈಗಾರಿಕೆ ಮತ್ತು ನಗರ ತ್ಯಾಜ್ಯವನ್ನು ನದಿಯು ಹೊತ್ತೊಯ್ಯುತ್ತಿದೆ. ನದಿಗೆ ಸಂಸ್ಕರಿಸದ ಕೊಳಚೆ ನೀರನ್ನು ನೇರವಾಗಿ ಹರಿಬಿಡಲಾಗುತ್ತಿದೆ ಎಂಬುದರ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅಸಮಾಧಾನ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಆದೇಶಿಸಿತ್ತು. ಆದೇಶದ ಹೊರತಾಗಿಯೂ ಯಾವುದೇ ಕ್ರಮಗಳು ಜಾರಿಯಾಗಿಲ್ಲ. ಯಮುನಾ ನದಿ ಈಗಲು ತ್ಯಾಜ್ಯ ಮತ್ತು ಕೊಳಚೆಯನ್ನು ಹೊತ್ತು ಸಾಗುತ್ತಿದೆ. ವಿಷಕಾರಿಯಂತೆ ಹರಿಯುತ್ತಿದೆ.

ಯಮುನಾ ದಿನ
ದೆಹಲಿ ಬಳಿ ವಿಷಕಾರಿ ಕೊಳಚೆ ನೀರಿನಿಂದ ಕಲುಷಿತಗೊಂಡಿರುವ ಯಮುನಾ ನದಿ

ಗಂಗಾ ನದಿಯದ್ದೂ ಅದೇ ಕತೆ. ಮೋದಿ ಸರ್ಕಾರ ಗಂಗಾ ನದಿಯನ್ನು ಸ್ವಚ್ಛಗೊಳಿಸಲು ‘ನಮಾಮಿ ಗಂಗೆ’ ಯೋಜನೆಯನ್ನು ಘೋಷಿಸಿತು. ಕೋಟ್ಯಂತರ ರೂ. ಹಣವನ್ನು ಮಂಜೂರು ಮಾಡಿತು. ಆದಾಗ್ಯೂ, ಗಂಗಾ ನದಿ ಕಲುಷಿತವಾಗಿಯೇ ಹರಿಯುತ್ತಿದೆ. ನದಿಯ ಮೇಲ್ಭಾಗ ಕೊಳಚೆಯಿಂದ ಆವೃತವಾಗಿದೆ.

Advertisements

ಈ ಎರಡೂ ನದಿಗಳು ಪ್ರಯಾಗ್‌ರಾಜ್‌ ನಗರದಲ್ಲಿ ಸೇರುತ್ತವೆ. ಗಮನಾರ್ಹ ಸಂಗತಿ ಎಂದರೆ, ನದಿಗಳು ಸೇರುವ ತ್ರಿವೇಣಿ ಸಂಗಮಕ್ಕೂ ಮೊದಲು ನದಿಗಳು ಹರಿದುಬರುವ ಪ್ರಯಾಗ್‌ರಾಜ್‌ ನಗರದಲ್ಲಿಯೂ ಸಾಕಷ್ಟು ಕೊಳಚೆ ನೀರು ನದಿಗಳಿಗೆ ಸೇರುತ್ತಿದೆ. ನಗರದ ಬುಲುವಾ ಘಾಟ್‌ನಿಂದ ರಸೂಲಾಬಾದ್ ಘಾಟ್‌ವರೆಗಿನ ಅನೇಕ ಪ್ರದೇಶದಲ್ಲಿನ ಕೊಳಚೆ ನೀರು ನದಿಗೆ ಪ್ರವೇಶಿಸುತ್ತಿದೆ. ಅವು ಸಂಸ್ಕರಿಸದ ತ್ಯಾಜ್ಯವನ್ನು ಹೊತ್ತೊಯ್ಯುತ್ತಿವೆ.

ಗಂಗಾ ನದಿ 1
ಕೊಳಚೆ ನೀರು, ತ್ಯಾಜ್ಯಗಳಿಂದ ಕಲುಷಿತಗೊಂಡಿರುವ ಗಂಗಾ ನದಿ

ವಿಷಾದನೀಯ ಸಂಗತಿ ಎಂದರೆ, ಈ ಕೊಳಚೆ ನೀರು ಒಳಚರಂಡಿಗಳ ಮೂಲಕ ನದಿಗೆ ಸೇರುವ ಸ್ಥಳಗಳ ಸಮೀಪದಲ್ಲಿಯೇ ‘ಪವಿತ್ರ ಸ್ನಾನ’ಕ್ಕೆ ಜಾಗವನ್ನು ಗೊತ್ತುಪಡಿಸಲಾಗಿದೆ. ಧಾರ್ಮಿಕ ಸ್ನಾನಕ್ಕೆ ಅವಕಾಶ ನೀಡಲಾಗಿದೆ. ನದಿಯ ಇನ್ನೊಂದು ದಡದಲ್ಲಿ ಆರೇಲ್ ಘಾಟ್ ಇದೆ. ಅಲ್ಲಿಯೂ ಇದೇ ಕತೆ. ಇದು ಕುಂಭಮೇಳದ ಆಯೋಜಕರು, ಆಳುವವರು- ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ನದಿಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಯಲು ಯಾವುದೇ ಗಂಭೀರ ಪ್ರಯತ್ನಗಳು ನಡೆದಿಲ್ಲ. ನಡೆದಿರುವ ಪ್ರಯತ್ನಗಳೂ ಫಲಪ್ರದವಾಗಿಲ್ಲ.

ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂದರೆ, ಗಂಗಾ ಮತ್ತು ಯಮುನಾ ನದಿಗಳಲ್ಲಿ ಸತ್ತ ಮೀನುಗಳು ತೇಲುವ ದೃಶ್ಯಗಳು ಈಗ ಸಾಮಾನ್ಯ ಎಂಬಂತಾಗಿವೆ. ಮೀನುಗಳ ಮಾರಣಹೋಮ ನಡೆಯುತ್ತಿದ್ದರೂ, ಕೊಳಚೆ ನೀರು ನದಿಗೆ ಸೇರಿ, ನದಿಗಳು ಕೊಳಚೆ ಗುಂಡಿಗಳಂತೆ ಹರಿಯುತ್ತಿದ್ದರೂ, ಸ್ವಚ್ಛತೆಯ ಜವಾಬ್ದಾರಿ ಯಾರಿಗೂ ಇಲ್ಲ.

ಮೋದಿ ಪ್ರಧಾನಿಯಾದ ಬಳಿಕ, ಕಳೆದೊಂದು ದಶಕದಲ್ಲಿ ನಮಾಮಿ ಗಂಗಾ ಕಾರ್ಯಕ್ರಮಕ್ಕಾಗಿ ಖರ್ಚು ಮಾಡಿದ 40,000 ಕೋಟಿ ರೂ. ಏನಾಯಿತು ಎಂದು ಹಲವರು ಆಶ್ಚರ್ಯದಿಂದ ಪ್ರಶ್ನಿಸುತ್ತಾರೆ. ಸಾರ್ವಜನಿಕ ಸಂಪರ್ಕ ಮತ್ತು ಜಾಗೃತಿ ಕಾರ್ಯಕ್ರಮಗಳು, ಅಭಿಯಾನಗಳು ನದಿಯನ್ನು ಸ್ವಚ್ಛಗೊಳಿಸುವಲ್ಲಿ ವಿಫಲವಾಗಿವೆ. ಗಂಗಾ ನದಿಯನ್ನು ಸ್ವಚ್ಛಗೊಳಿಸುವ ಬದಲು, ಅದರ ಉಪನದಿಗಳಲ್ಲಿ ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡುವ ಮೂಲಕ ನದಿಯನ್ನು ಮತ್ತಷ್ಟು ಹಾನಿಗೊಳಿಸಲು ಮೋದಿ ಸರ್ಕಾರ ಮುಂದಾಗಿದೆ. ಇದು, ಗಂಗಾ ನದಿಯ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ನಾಶಪಡಿಸುತ್ತದೆ.

ಇದನ್ನು ಓದಿದ್ದೀರಾ?: ಮಹಾ ಕುಂಭಮೇಳ ಯಾರಿಗಾಗಿ, ಯಾತಕ್ಕಾಗಿ?

ದೆಹಲಿಯಿಂದ ಕೊಳಚೆಯನ್ನು ಹೊತ್ತುತರುವ ಯಮುನಾ, ಉತ್ತರ ಪ್ರದೇಶದ ನಾನಾ ನಗರಗಳ ಕೊಳಕನ್ನು ಹೊತ್ತೊಯ್ಯುವ ಗಂಗಾ – ಎರಡೂ ನದಿಗಳು ಸೇರುವ ಪ್ರಯಾಗ್‌ರಾಜ್‌ ನಗರದಲ್ಲಿ ನದಿಯ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಹೆಚ್ಚು ಮಾಲಿನ್ಯದಿಂದ ಕೂಡಿದೆ. ಸಾಲದು ಎಂದು, ಈ ನದಿಗಳ ಮಾಲಿನ್ಯಕ್ಕೆ ಪ್ರಯಾಗ್‌ರಾಜ್ ನಗರ ಕೂಡ ಕೊಡುಗೆ ನೀಡುತ್ತಿದೆ. ನಗರವು ತನ್ನ ಕೊಳಚೆ ನೀರನ್ನು ನಿಭಾಯಿಸಲು ಸಜ್ಜಾಗಿಲ್ಲ. ಹೀಗಿರುವಾಗ, ಕೋಟ್ಯಂತರ ಜನರು ಬಂದು-ಹೋದ ಬಳಿಕ ನದಿಯ ಪರಿಸ್ಥಿತಿ ಏನಾಗಬಹುದು? ಮತ್ತು ಇಷ್ಟೊಂದು ಕೊಳಕಿನಿಂದ ಹರಿಯುತ್ತಿರುವ ನದಿಗಳಲ್ಲಿ ಧಾರ್ಮಿಕ ಸ್ನಾನ ಮಾಡಿ, ಪಾಪ ತೊಳೆದುಕೊಳ್ಳುತ್ತೇವೆಂದು ಭಾವಿಸುವ ಜನರ ಆರೋಗ್ಯ ಏನಾಗಬಹುದು?

ಉತ್ತರವು ತುಂಬಾ ಸರಳ ಮತ್ತು ನೇರವಾಗಿದೆ. ಕುಂಭಮೇಳ ಮುಗಿದ ನಂತರ, ಗಂಗಾ ನದಿಯ ನೀರು ಅತ್ಯಂತ ಕಲುಷಿತವಾಗಲಿದ್ದು, ಅದರಲ್ಲಿ ಸ್ನಾನ ಮಾಡುವವರ ಆರೋಗ್ಯ ಹಾಳಾಗಬಹುದು. ಚರ್ಮ ರೋಗ ಅಥವಾ ಇತರ ನಾನಾ ರೋಗಗಳಿಗೆ ತುತ್ತಾಗಬಹುದು.

ನದಿಗಳಿಗೆ ಸೇರುವ ಕೊಳಚೆ ನೀರು ಮತ್ತು ಮಾಲಿನ್ಯಕಾರಕಗಳನ್ನು ಕಡಿಮೆ ಮಾಡುವ ಯಾವುದೇ ಯೋಜನೆಗಳಿಲ್ಲ. ಇದ್ದರೂ, ಕಾರ್ಯರೂಪದಲ್ಲಿಲ್ಲ. ಹೀಗಿರುವಾಗ ನದಿ ಹೆಚ್ಚು ವಿಷಕಾರಿಯಾಗುತ್ತದೆ. ಇದು ಸಸ್ಯಗಳು ಮತ್ತು ಮೀನುಗಳಿಗೆ ಅಪಾಯವನ್ನುಂಟು ಮಾಡುತ್ತದೆ. ಪ್ರಯಾಗ್‌ರಾಜ್‌ ನಗರವು ಮಾಲಿನ್ಯ ಮತ್ತು ರೋಗಗ್ರಸ್ತ ನದಿ ವ್ಯವಸ್ಥೆಯಿಂದ ತಿಂಗಳುಗಟ್ಟಲೆ ಬಳಲಬೇಕಾಗುತ್ತದೆ.

image 39 1

ಮೋದಿ ನದಿಯನ್ನು ಸ್ವಚ್ಛಗೊಳಿಸುವ ಬಗ್ಗೆ ಗಂಭೀರವಾಗಿದ್ದರೆ, ಉತ್ತರ ಪ್ರದೇಶ ಸರ್ಕಾರವು ನಮಾಮಿ ಗಂಗಾ ಕಾರ್ಯಕ್ರಮವನ್ನು ಗಂಭೀರವಾಗಿ ಜಾರಿಗೊಳಿಸಿದ್ದರೆ, ಕಳೆದ 10 ವರ್ಷಗಳು ಮತ್ತು 40,000 ಕೋಟಿ ರೂ.ಗಳಲ್ಲಿ ನದಿಯನ್ನು ಸ್ವಚ್ಛ ಮತ್ತು ಸುಂದರಗೊಳಿಸಬಹುದಿತ್ತು. ಕಾರ್ಯಕ್ರಮ ಯಶಸ್ವಿಯಾಗುತ್ತಿತ್ತು. ನದಿ ವ್ಯವಸ್ಥೆ ಆರೋಗ್ಯಕರವಾಗಿರುತ್ತಿತ್ತು. ಪ್ರಯಾಗ್‌ರಾಜ್ ಮತ್ತು ಕಾನ್ಪುರ ನಗರಗಳು ಪ್ರತಿದಿನ ಲಕ್ಷಾಂತರ ಗ್ಯಾಲನ್‌ಗಳಷ್ಟು ಸಂಸ್ಕರಿಸದ ಕೊಳಚೆ ನೀರನ್ನು ನೇರವಾಗಿ ನದಿಗೆ ಹರಿಸದಂತೆ ತಡೆಯಬಹುದಿತ್ತು. ಆದರೆ, ಅದಾವುದೂ ನಡೆದಿಲ್ಲ. ಬದಲಾಗಿ, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.

ಹೆಚ್ಚಿನ ಧಾರ್ಮಿಕ ಪಂಥಗಳು ನದಿ ವ್ಯವಸ್ಥೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿವೆ. ಪರಿಸರ ಕಾಳಜಿಯನ್ನು ಮೋದಿ ಸರ್ಕಾರ ಮರೆತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿವೆ. ಅಲ್ಲದೆ, ಪ್ರಸ್ತುತ ನಡೆಯುತ್ತಿರುವ ಕುಂಭಮೇಳ ಧಾರ್ಮಿಕ ಕುಂಭಮೇಳವಲ್ಲ. ಇದು ಮೊದಲ ‘ಕಾರ್ಪೊರೇಟ್’ ಕುಂಭಮೇಳವೆಂದು ಆರೋಪಿಸಿವೆ. ಯಾಕೆಂದರೆ, ಕುಂಭಮೇಳವನ್ನು ‘ಅರ್ನ್ಸ್ಟ್ ಅಂಡ್‌ ಯಂಗ್’ ಎಂಬ ಸಂಸ್ಥೆಯ ಸಹಾಯದಿಂದ ಆಯೋಜಿಸಲಾಗಿದೆ. ಇದೇ ಸಂಸ್ಥೆ ಚುನಾವಣಾ ಬಾಂಡ್‌ ಮೂಲಕ ಬಿಜೆಪಿಗೆ ಹೆಚ್ಚು ದೇಣಿಗೆಯನ್ನೂ ನೀಡಿತ್ತು ಎಂಬುದು ಗಮನಾರ್ಹ.

ಈ ವರದಿ ಓದಿದ್ದೀರಾ?: ಕುಂಭಮೇಳ | ಭಕ್ತರ ಪಾಪ ತೊಳೆಯುತ್ತಿದ್ದಾರೆ ಶೌಚಾಲಯ ಸ್ವಚ್ಛಗೊಳಿಸುವವರು!

ಅನೇಕ ಹಿಂದುಗಳು ಗಂಗಾ ನದಿಯನ್ನು ಹೆತ್ತ ತಾಯಿ ಎಂದೇ ಪರಿಗಣಿಸುತ್ತಾರೆ. ಧಾರ್ಮಿಕ ನಂಬಿಕೆಗಳ ಹೊರತಾಗಿ, ಇದು ಬಹುಪಾಲು ಭಾರತೀಯರಿಗೆ ಜೀವನಾಡಿಯಾಗಿದೆ. ಆದರೆ, ಈ ಜೀವನಾಡಿ ಜೀವ ಕಳೆದುಕೊಂಡು, ವಿಷವಾಗಿ ಪರಿವರ್ತನೆಯಾಗುತ್ತಿದೆ. ನಮಾಮಿ ಗಂಗೆಯ ಅಭಿಯಾನದ ಅಡಿಯಲ್ಲಿ ಸಾರ್ವಜನಿಕ ಸಂಪರ್ಕ ಮತ್ತು ಪೋಸ್ಟರ್‌ಗಳಿಗಾಗಿ ಖರ್ಚು ಮಾಡಿದ ಸಾವಿರಾರು ಕೋಟಿಗಳನ್ನೇ ನದಿ ಸ್ವಚ್ಛಗೊಳಿಸಲು ಮತ್ತು ಒಳಚರಂಡಿಗಳನ್ನು ನಿರ್ವಹಿಸಲು ಖರ್ಚು ಮಾಡಿದ್ದರೆ, ನದಿಯ ಪರಿಸರ ಉತ್ತಮವಾಗಿರುತ್ತಿತ್ತು. ಗಂಗಾ ನದಿಯನ್ನು ಅವಲಂಬಿಸಿರುವ ಮತ್ತು ಪೂಜಿಸುವ ಎಲ್ಲರೂ ತುಂಬಾ ಸಂತೋಷಪಡುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.

ಆದರೆ, ಮೋದಿ ಆಗಲೀ, ಕುಂಭಮೇಳದ ಸಂಘಟಕರಾಗಲೀ ಗಂಗಾ ನದಿಯ ಆರೋಗ್ಯದ ಬಗ್ಗೆ ಸ್ವಲ್ಪವೂ ಕಾಳಜಿ ಹೊಂದಿಲ್ಲ. ಮೋದಿ ತನ್ನ ರಾಜಕೀಯ ಲಾಭಕ್ಕಾಗಿ ಕುಂಭಮೇಳವನ್ನು ಬಳಸಿಕೊಳ್ಳುತ್ತಿದ್ದರೆ, ಸಂಘಟಕರು ಧಾರ್ಮಿಕತೆ ಮೇಲೆ ತಮ್ಮ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ.

ಹೀಗಿರುವಾಗ, ಗಂಗಾ ನದಿ ಮತ್ತೊಂದು ಕುಂಭಮೇಳದವರೆಗೆ ಬದುಕಬಹುದೇ? ನದಿ ಬದುಕಿರುತ್ತದೆ. ಆದರೆ, ಅದರ ಪರಿಸರ- ಮನುಷ್ಯರು, ಸಸ್ಯಗಳು ಮತ್ತು ಜಲಚರಗಳಿಗೆ ಬದುಕುವುದು ಕಷ್ಟವಾಗುತ್ತದೆ. ಇದು ಮಾರಕ ಸೋಂಕುಗಳಿಗೆ ಆವಾಸ ಸ್ಥಾನವಾಗುತ್ತದೆ. ಮತ್ತಷ್ಟು-ಮೊಗದಷ್ಟು ಕಲುಷಿತಗೊಳ್ಳುತ್ತಲೇ ಸಾಗುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X