1924ರ ಕಾಂಗ್ರೆಸ್‌ ಅಧಿವೇಶನದಲ್ಲಿ ಕುವೆಂಪು ಕಂಡ ಗಾಂಧೀಜಿ

Date:

Advertisements
1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನಕ್ಕೆ ಡಿ.26ರಂದು ನೂರು ವರ್ಷಗಳಾಗಿವೆ. ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಆಚರಿಸುತ್ತಿದೆ. ಅಂದು, 1924ರಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಅಧಿವೇಶನದಲ್ಲಿ ಭಾಗಿಯಾಗಲು, ಗಾಂಧೀಜಿಯವರನ್ನು ನೋಡಲು ಹುರುಪಿನಿಂದ ಬೆಳಗಾವಿಗೆ ಹೋಗಿದ್ದವರು ಕುವೆಂಪು. ಬೆಳಗಾವಿ ಅಧಿವೇಶನದಲ್ಲಿ ತಾವು ಕಂಡ, ಅರಿತ ವಿಚಾರಗಳನ್ನು ತಮ್ಮ 'ನೆನಪಿನ ದೋಣಿಯಲಿ' ಪುಸ್ತಕದಲ್ಲಿ ವಿವರಿಸಿದ್ದಾರೆ. ಆ ಭಾಗವನ್ನು ಇಲ್ಲಿ ಪ್ರಕಟಿಸಿದ್ದೇವೆ. ಓದಿರಿ...

ನಾನು ಮೊದಲನೆ ವರ್ಷದ ಬಿ.ಎ ತರಗತಿಯಲ್ಲಿ ಓದುತ್ತಿದ್ದಾಗ 1924ರ ಡಿಸೆಂಬರ್ ತಿಂಗಳ ಉತ್ತರಾರ್ಧದಲ್ಲಿ ಬೆಳಗಾವಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆಯುತ್ತದೆಂದು ಗೊತ್ತಾಯಿತು. ಶಸ್ತ್ರ ಚಿಕಿತ್ಸೆಯ ನಂತರ ಆಗತಾನೆ ಸೆರೆಮನೆಯಿಂದ ಬಿಡುಗಡೆಯಾಗಿದ್ದ ಮಹಾತ್ಮಾಗಾಂಧಿಯವರು ಆ ಅಧಿವೇಶನದ ಅಧ್ಯಕ್ಷತೆ ವಹಿಸುತ್ತಾರೆ ಎಂಬ ವಾರ್ತೆ ನಮ್ಮನ್ನೆಲ್ಲ ಆಕರ್ಷಿಸಿತು. ಭರತಖಂಡದ ಬದುಕನ್ನೆಲ್ಲ ತುಂಬಿಕೊಂಡಿದ್ದರು ಗಾಂಧೀಜಿ. ಅವರಿಗೆ ಶಿಕ್ಷೆಯಾಗಿದ್ದು, ಶಸ್ತ್ರ ಚಿಕಿತ್ಸೆಯಾಗಿದ್ದು, ಸೆರೆಯ ಅವಧಿ ಮುಗಿಯುವ ಮುನ್ನವೆ ಅವರು ಬಿಡುಗಡೆ ಹೊಂದಿ ಹೊರಗೆ ಬಂದದ್ದು ಎಲ್ಲವೂ ಪತ್ರಿಕೆಗಳಲ್ಲಿ ದಿನವೂ ಅನೇಕ ತಿಂಗಳುಗಳಿಂದ ದಪ್ಪಕ್ಷರದ ಮೊದಲನೆಯ ಪುಟದ ವಾರ್ತೆಗಳಾಗಿ, ಜನತೆಯ ಹೃದಯ ಸಮುದ್ರ ಕಡೆದಂತಾಗಿ, ದೇಶದ ಬದುಕು ವಿಕ್ಷುಬ್ಧವಾಗಿತ್ತು. ಕಾಂಗ್ರೆಸ್ ಅಧಿವೇಶನದ ಸಮಯಕ್ಕೆ ಸರಿಯಾಗಿ ಕ್ರಿಸ್‌ಮಸ್ ರಜವೂ ಪ್ರಾರಂಭವಾಗುತಿತ್ತಾದ್ದರಿಂದ ನಾವು ಕೆಲವರು ವಿದ್ಯಾರ್ಥಿ ಮಿತ್ರರು ಬೆಳಗಾವಿಗೆ ಹೋಗಲು ನಿಶ್ಚಯಿಸಿದೆವು.

ರೈಲು ಪ್ರಯಾಣವೂ ಒಂದು ಸಾಹಸವೆ ಆಗಿತ್ತು. ಗಾಂಧೀಜಿ ಅಧ್ಯಕ್ಷತೆ ವಹಿಸುವ ಕಾಂಗ್ರೆಸ್ ಅಧಿವೇಶನಕ್ಕೆ ಹೊರಟ ಅಕ್ಷರಶಃ ಲಕ್ಷಾಂತರ ಜನರ ನೂಕುನುಗ್ಗಲು ಉಸಿರುಕಟ್ಟಿಸುತ್ತಿತ್ತು. ಚಳಿಗಾಲವಾಗಿದ್ದರೂ ರೈಲಿನ ಕಾಂಪಾರ್ಟುಮೆಂಟಿನ ಒಳಗೆ ಕುದಿಯುವ ಸೆಕೆ! ಪ್ರತಿಯೊಂದು ನಿಲ್ದಾಣದಲ್ಲಿಯೂ ಆಗಲೆ ಕಿಕ್ಕಿರಿದಿದ್ದ ಗಾಡಿಗೆ ಹತ್ತಲು ಪ್ರಯತ್ನಿಸುವವರ ಮತ್ತು ಮೊದಲೇ ಹತ್ತಿ ನಿಲ್ಲಲು ಕೂಡ ಜಾಗವಿಲ್ಲದೆ ಜೋತುಬಿದ್ದವರ ನಡುವೆ ಜಗಳ, ಬೈಗುಳ, ಗುದ್ದಾಟ, ಆ ಕಿಕ್ಕಿರಿಕೆ, ನುಗ್ಗಾಟ, ಕೆಟ್ಟ ಉಸಿರಿನ ಬೆವರಿನ ಕೊಳಕುವಾಸನೆ ಇವುಗಳನ್ನು ತಡೆಯಲಾರದೆ, ರೈಲನ್ನು ಹೊರಡಲು ಬಿಡದಂತೆ ಸರಪಣಿ ಎಳೆದದ್ದೂ ಎಳೆದದ್ದೆ! ನಮ್ಮ ಗುಂಪಿನವರೆ ಮೂರು ನಾಲ್ಕು ಸಲ ಹಾಗೆ ಮಾಡಬೇಕಾಯ್ತು. ಕಡೆಗೆ ಗಾರ್ಡು-ಸ್ಟೇಷನ್ ಮಾಸ್ಟರು ಬಂದು ಕೇಳಿಕೊಂಡ ಮೇಲೆಯೇ, ದಾಕ್ಷಿಣ್ಯಕ್ಕೆ, ಸರಪಣಿ ಎಳೆಯುವುದನ್ನು ನಿಲ್ಲಿಸಿದೆವು. ಹೂಜಿಗಳಲ್ಲಿ, ರೈಲುತಂಬಿಗೆಗಳಲ್ಲಿ ಇದ್ದ ನೀರೆಲ್ಲ ಖಾಲಿಯಾಗಿ ದಗೆಗೆ ಮೂರ್ಛೆ ಹೋಗುವುದೊಂದು ಬಾಕಿ! ಅಂತೂ ಹೋಗಿ ಇಳಿದೆವು ಬೆಳಗಾವಿ ಸ್ಟೇಷನ್ನಿನಲ್ಲಿ: ಭೂಪಾಳಂ ಚಂದ್ರಶೇಖರಯ್ಯ, ಎಸ್.ವಿ.ಕನಕಶೆಟ್ಟಿ, ರಾಮಚಂದ್ರಶೆಟ್ಟಿ, ನಾನು, ಇನ್ನೂ ಕೆಲವರು ಹೆಸರು ನೆನಪಿಗೆ ಬಾರದು.

ಅಧಿವೇಶನದ ಜಾಗಕ್ಕೆ ಸ್ವಲ್ಪ ದೂರವಾಗಿದ್ದ ಬೆಳಗಾವಿಯ ಊರಿನಲ್ಲಿ ಮಿತ್ರರೊಬ್ಬರ ಬಂಧುಗಳ ಮನೆಯಲ್ಲಿಯೆ ನಾವೆಲ್ಲ ಇಳಿದುಕೊಳ್ಳುವಂತೆ ಏರ್ಪಾಡಾಗಿತ್ತು. ಅಲ್ಲಿ ಸ್ನಾನಗೀನ ಮುಗಿಸುತ್ತಿದ್ದೆವು; ಊಟಗೀಟಕ್ಕೆಲ್ಲ ಅಧಿವೇಶನದ
ಮಹಾ ಬೃಹತ್ ಭೋಜನ ಶಾಲೆಗೆ ಹೋಗುತ್ತಿದ್ದೆವು. ಅಧಿವೇಶನದ ಭಾಷಣ ವೇದಿಕೆಯ ಸುವಿಸ್ತ್ರತವಾದ ಪ್ರಧಾನ ಮಂಟಪದಷ್ಟೆ ಭವ್ಯವಾಗಿತ್ತು ಆ ಭೋಜನ ಶಾಲೆ. ನನಗಂತೂ ಆ ಊಟ ತಿಂಡಿಯ ಔತಣವನ್ನು ಕಂಡು ಬೆರಗು ಬಡಿದಿತ್ತು. ಕೇಳಿದಷ್ಟು ಸಿಹಿ, ಕೇಳಿದಷ್ಟು ಹಾಲು, ತುಪ್ಪ, ಚಪಾತಿ, ಶ್ರೀಖಂಡ ಮತ್ತೂ ಏನೇನೊ ನಾನಾ ಪ್ರಾಂತಗಳ ತರತರದ ಭಕ್ಷ್ಯಭೋಜ್ಯಗಳು. ನಾನಾ ಪ್ರಾಂತಗಳ ನಾನಾ ರೀತಿಯ ಜನರ ಪರಿಚಯ ಅಧಿವೇಶನದ ಮುಖ್ಯಸ್ಥಾನದಲ್ಲಿ ಆಗುವುದಕ್ಕಿಂತಲೂ ಅತಿಶಯವಾಗಿ ಈ ಭೋಜನಶಾಲೆಯಲ್ಲಿ ನಮಗೆ ಅತಿನಿಕಟವಾಗಿ ಲಭಿಸಿತು. ನಮ್ಮ ಎದುರು ಪಂಕ್ತಿಯಲ್ಲಿಯೆ ಕುಳಿತು ಉಣ್ಣುತ್ತಿದ್ದ ಉತ್ತರದ ಕಡೆಯ ಜನರ ಭೀಮಾಕಾರ, ಭೀಮೋದರ, ಭೀಮಾಭಿರುಚಿ, ಭೋಜನದಲ್ಲಿ ಅವರಿಗಿದ್ದ ಭೀಮೋತ್ಸಾಹ ಇವುಗಳನ್ನೆಲ್ಲ ಬೆಕ್ಕಸ ಬೆರಗಾಗಿ ನೋಡುತ್ತಿದ್ದೆವು ನಾವು!

Advertisements

ಆ ಅಧಿವೇಶನದಲ್ಲಿ ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಸುಪ್ರಸಿದ್ದರಾಗಿದ್ದ ಅನೇಕ ವ್ಯಕ್ತಿಗಳು ನೆರೆದಿದ್ದರು. ಆದರೆ ನಮಗಿದ್ದುದು ಮುಖ್ಯವಾಗಿ ಒಂದೇ ಲಕ್ಷ್ಯ: ಗಾಂಧೀಜಿಯ ದರ್ಶನ! ಆದರೆ ಆ ಜನಜಂಗುಳಿಯ ನೂಕುನುಗ್ಗಲಲ್ಲಿ ಅದೇನು ಸುಲಭ ಸಾಧ್ಯವಾಗಿತ್ತೇ? ಅಧಿವೇಶನದ ವೇದಿಕೆಯ ಮೇಲೆ ಅವರನ್ನೇನೋ ನೋಡಬಹುದಾಗಿತ್ತು. ಆದರೆ ಅದು ನಾವು ಕೊಂಡಿದ್ದ ಟಿಕೆಟ್ಟಿನ ಸ್ಥಳಕ್ಕೆ ಬಹುಬಹುದೂರವಾಗಿತ್ತು. ಅಲ್ಲಿಂದ ಗಾಂಧೀಜಿ ಸಣ್ಣದೊಂದು ಪುತ್ಥಲಿಯ ಗೊಂಬೆಯಷ್ಟೆ ಆಕಾರದಲ್ಲಿ ಕಾಣಿಸುತ್ತಿದ್ದರು. ಅದಕ್ಕಾಗಿ ನಾವು ಅವರು ಅಧಿವೇಶನಕ್ಕೆ ಬರುವ ಹೊತ್ತನ್ನೂ ಅವರು ಪ್ರವೇಶಿಸುವ ಮಹಾದ್ವಾರವನ್ನೂ ಪತ್ತೆ ಹಚ್ಚಿ ಬಿಸಿಲಿನಲ್ಲಿ ಕಾದೆವು.

ಕಾದೆವು ಎಂದರೆ ಎರಡು ಅರ್ಥದಲ್ಲಿಯೂ: ಬಹಳ ಹೊತ್ತು ಕಾದೆವು ಎಂಬುದು ಗೌಣಾರ್ಥ. ಆದರೆ ಬಿಸಿಲಿನಲ್ಲಿ ಕಾದೆವು ಎಂದರೆ, ಕಾದು ಕೆಂಪಾದೆವು! ಅಕ್ಷರಶಃ ಮುಖಕ್ಕೆ ರಕ್ತವೇರಿ ಕೆಂಪಾದದ್ದು ಮಾತ್ರವೆ ಅಲ್ಲ, ಬಟ್ಟೆ ಬರೆ ಎಲ್ಲವೂ ಕೆಂಪು ಬಣ್ಣಕ್ಕೆ ತಿರುಗಿದುವು.

ಈ ವರದಿ ಓದಿದ್ದೀರಾ?: ಜಾಣರ ಜಗುಲಿಯಲ್ಲಿ ಇದೇನಿದು?

ಅಧಿವೇಶನದ ವಲಯವನ್ನು ಸಮೀಪಿಸುತ್ತಿರುವಾಗಲೆ ಒಂದು ಧೂಳೀಧೂಸರ ವಾದ ಆಕಾಶಮಂಡಲ ಕಾಣಿಸುವುದರ ಜೊತೆಗೆ ಜನಸ್ತೋಮದ ಚಲನವಲನದಿಂದ ಹೊಮ್ಮಿದ ತುಮುಲ ಶಬ್ದಮಂಡಲವೂ ಕರ್ಣಗೋಚರವಾಯಿತು. ತುಸು ಹೊತ್ತು ಅಧಿವೇಶನದ ದೃಶ್ಯಾವಳಿಗಳನ್ನು ವೀಕ್ಷಿಸುತ್ತಾ ಅಲ್ಲಿ ಇಲ್ಲಿ ಅಲೆದೆವು. ನೋಡುತ್ತೇನೆ: ನನ್ನ ಮಿತ್ರರೊಬ್ಬರು ಇದ್ದಕ್ಕಿದ್ದಂತೆಯೆ ಸನ್ಯಾಸಿಯಾದಂತೆ ಕಾವಿಧಾರಿಯಾಗಿದ್ದಾರೆ! ಅಚ್ಚರಿಯಿಂದ ನೋಡುತ್ತೇನೆ: ಮತ್ತೂ ಒಬ್ಬರು ಹಾಗೆಯೇ ಬಣ್ಣ ಬದಲಾಯಿಸಿದ್ದಾರೆ! ನೋಡಿಕೊಳ್ಳುತ್ತೇನೆ: ನನ್ನ ಉಡುಪೂ ಕೆಮ್ಮಣ್ಣು ಬಣ್ಣಕ್ಕೆ ತಿರುಗಿದೆ! ಕಡೆಗೆ ಗೊತ್ತಾಯಿತು, ಅಲ್ಲಿನ ಮಣ್ಣಿನ ಬಣ್ಣವೇ ಕೆಂಪು ಎಂದು; ಅಲ್ಲಿ ಬಿಳಿಬಟ್ಟೆ ಹಾಕಿಕೊಂಡು ಶುಚಿಯಾಗಿ ಕಾಣುವುದೇ ಅಸಾಧ್ಯ ಎಂದು. ಒಂದೆರಡು ದಿನವೇನೋ ಬೆಳ್ಳಗೆ ಮಡಿಯಾಗಿರಲು ಪ್ರಯತ್ನಪಟ್ಟೆವು. ಏನೇನೂ ಪ್ರಯೋಜನವಾಗಲಿಲ್ಲ, ಶುಚಿತ್ವವನ್ನೆ ಕೈಬಿಟ್ಟೆವು, ಮೈಸೂರಿಗೆ ಮತ್ತೆ ಬರುವವರೆಗೆ!

ಮೈಗೆಂಪಾಗಿ ಬಟ್ಟೆಗೆಂಪಾಗಿ ಒಂದು ಮಹಾದ್ವಾರದೆಡೆ ನೂಕು ನುಗ್ಗಲಿನಲ್ಲಿ ನಿಂತು ನೋಡುತ್ತಿದ್ದವು. ನೆರೆದ ಜಾತ್ರೆಯ ಜನಜಂಗುಳಿಯ ನಡುವೆ ಆನೆಯೊಂದು ನಡೆದು ಬರುತ್ತಿದ್ದರೆ ಹೇಗೆ ಮೇಲೆದ್ದು ಕಾಣಿಸುವುದೂ ಹಾಗೆ ಜನಸಮುದ್ರದಲ್ಲಿ ತೇಲಿ ಬರುವ ಹಡಗುಗಳಂತೆ ಇಬ್ಬರು ಬೃಹದ್ ವ್ಯಕ್ತಿಗಳು ಬರುತ್ತಿದ್ದುದು ಕಾಣಿಸಿತು. ಗುಸುಗುಸು ಹಬ್ಬಿತು, ಗಾಂಧೀಜಿ ಬರುತ್ತಿದ್ದಾರೆ ಎಂದು ಕತ್ತು ನಿಕ್ಕುಳಿಸಿ ನೋಡಿದೆ. ಗಾಂಧೀಜಿ ಎಲ್ಲಿ?

ಪಕ್ಕದಲ್ಲಿದ್ದವರು ಹೇಳಿದರು: “ಮೇಲೆದ್ದು ಕಾಣಿಸುತ್ತಾ ಬರುತ್ತಿದ್ದಾರಲ್ಲ ಅವರಿಬ್ಬರು ಆಲಿ ಸಹೋದರರು ಕಣ್ರೀ! ಅವರ ಮಧ್ಯೆ ನಡೆದು ಬರುತ್ತಿದ್ದಾರೆ ಗಾಂಧೀಜಿ.”

ಮಹಾತಾಮಸ ಮತ್ತು ಮಹಾರಾಜಸಗಳ ಮಧ್ಯೆ ನಡೆದುಬರುವ ಮಹಾ ಸಾತ್ವಿಕದಂತೆ ಕಾಣಿಸಿಕೊಂಡರು ಗಾಂಧೀಜಿ. ಮೌಲಾನಾ ಮಹಮ್ಮದಾಬಿ ಮತ್ತು ಮೌಲಾನಾ ಷೌಕತಾಲಿ ಇಬ್ಬರೂ ಪ್ರಾಚೀನ ಪೌರಾಣಿಕ ಅಸುರರಂತೆ ದೈತ್ಯ ಗಾತ್ರರಾಗಿದ್ದರು. ಅವರಿಬ್ಬರ ನಡುವೆ ತದ್ವಿರುದ್ಧವಾಗಿತ್ತು ಅಣುರೂಪಿ ಗಾಂಧೀಜಿಯ ಆಕೃತಿ. ನಮ್ಮ ಗೌರವಸಮಸ್ತವೂ ಸಾಷ್ಟಾಂಗವೆರಗಿತ್ತು ಅವರ ಪದತಲದಲ್ಲಿ: ‘ವಂದೇ ಮಾತರಂ! ಭಾರತ ಮಾತಾಕೀ ಜೈ! ಮಹಾತ್ಮಾ ಗಾಂಧೀ ಕೀ ಜೈ!’ ಮೊದಲಾದ ಘೋಷಗಳು ಕಿವಿ ಬಿರಿಯುವಂತೆ ಗಗನದೇಶವನ್ನೆಲ್ಲ ತುಂಬಿದುವು. ಆ ಉತ್ಸಾಹ ಸಾಗರಕ್ಕೆ ನನ್ನ ಕೀಚು ಕೊರಳೂ ತನ್ನ ದನಿಹನಿಯ ನೈವೇದ್ಯವನ್ನು ನೀಡಿ ಧನ್ಯವಾಗಿತ್ತು!

ಮೂರು ನಾಲ್ಕು ದಿನಗಳ ಅಧಿವೇಶನದಲ್ಲಿ ನಾವು ಪ್ರೇಕ್ಷಕ ಭಾಗಿಗಳಾಗಿದ್ದೆವು. ನನ್ನ ನೆನಪಿನಲ್ಲಿ ಆ ಸ್ವಾರಸ್ಯದ ವಿವರಗಳಾವುವೂ ಇಲ್ಲ. ಆದರೆ ಸ್ವಾತಂತ್ರ್ಯ ದೀಕ್ಷೆಯನ್ನು ತೊಟ್ಟು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮ್ಮಿಕ್ಕುವ ಭಾರತೀಯ ಸಮಷ್ಟಿ ಚೈತನ್ಯದ ಅಗ್ನಿಸ್ಪರ್ಶ ನನ್ನ ಕವಿಚೇತನಕ್ಕೂ ತಗುಲಿತ್ತು. ತತ್ಕಾಲದಲ್ಲಿ ರಚಿಸಿದ ಕೆಲವು ಇಂಗ್ಲಿಷ್ ಕವನಗಳೂ, ತರುವಾಯ ರಚಿತವಾಗಿ ಸುಪ್ರಸಿದ್ಧವಾಗಿರುವ ಕನ್ನಡ ಕವನಗಳೂ ಆ ದೀಕ್ಷೆಗೆ ಸಾಕ್ಷಿ ನಿಂತಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X