ಜಾಣರ ಜಗುಲಿಯಲ್ಲಿ ಇದೇನಿದು?

Date:

Advertisements
ಮಹಿಳೆಯರ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಕ್ಕಾಗಿ ಬಾಬಾ ಸಾಹೇಬರೇ ವಿರೋಧವನ್ನು ಅನುಭವಿಸಿದ್ದರು. ರಾಜಕಾರಣದಲ್ಲಿರುವ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಸಿಗುವುದೇ ಕಷ್ಟ. ಅದರಲ್ಲೂ ಅಕಸ್ಮಾತ್ ಸ್ಥಾನಮಾನ ದೊರಕಿದಾಗಲೆಲ್ಲ ವಾರೆ ನೋಟದಿಂದ ನೋಡುವ, ಆ ಹೆಣ್ಣು ಮಕ್ಕಳ ಚಾರಿತ್ರ್ಯದ ಬಗ್ಗೆ ತೀರಾ ಸಡಿಲವಾದ ಲಜ್ಜೆಗೆಟ್ಟ ಮಾತುಗಳು ಹೆಚ್ಚಾಗಿ ಕೇಳಿಬರುತ್ತವೆ

ಬೀದಿ ಜಗಳ ಮಾಡುವ ಗಂಡಸರ ನಡುವೆ ವಾದ ಮಾಡಲು ತೂಕದ ವಿಚಾರ ಇಲ್ಲದೆ ಇದ್ದಾಗ ಅಥವಾ ವಾಗ್ವಾದದಲ್ಲಿ ಸೋಲುವ ಸಂದರ್ಭ ಎದುರಾದಾಗ ಎದುರಾಳಿಯ ಮನೆಯ ಹೆಣ್ಣುಮಕ್ಕಳ ಚಾರಿತ್ರ್ಯಹರಣಕ್ಕೆ ಇಳಿದು ಬಿಡುತ್ತಾರೆ. ಇಂತವನ್ನು ಬಹುತೇಕ ನಾವೆಲ್ಲರು ನೋಡಿರುತ್ತೇವೆ. ಇದಕ್ಕೆ ಮಹಿಳೆಯರ ನಡುವಿನ ಜಗಳಗಳು ಹೊರತೇನಲ್ಲ. ಇಂತಹ ಬೀದಿ ಜಗಳಕ್ಕೂ ಮೀರಿದ ರೀತಿಯಲ್ಲಿ ಜಾಣರ ಜಗುಲಿ ಎಂದೆ ಕರೆಯಲ್ಪಡುವ ವಿಧಾನ ಪರಿಷತ್ತಿನಲ್ಲಿ ನಡೆದ ಮಹಿಳಾ ಸಚಿವೆಯ ನಿಂದನೆಯ ಘಟನೆ ‘ರಾಜಕಾರಣವೆಂದರೆ ಹೊಲಸು, ಅಲ್ಲಿ ನಮ್ಮ ಮನೆಯ ಹೆಣ್ಣು ಮಕ್ಕಳು ಇರಕೂಡದು’ ಎನ್ನುವ ಸಾಮಾನ್ಯ ಕುಟುಂಬಗಳ ಆಲೋಚನೆಗೆ ಇಂಬು ಕೊಟ್ಟಂತಾಗಿದೆ.

ಏಪ್ರಿಲ್ 2024ರ ರಾಷ್ಟ್ರೀಯ ಸಂಸತ್ತಿನ ಜಾಗತಿಕ ಸಂಸ್ಥೆಯಾದ ಇಂಟರ್ ಪಾರ್ಲಿಮೆಂಟರಿ ಯೂನಿಯನ್ ಪ್ರಕಟಿಸಿದ ‘ರಾಷ್ಟ್ರೀಯ ಸಂಸತ್ತುಗಳಲ್ಲಿ ಮಹಿಳೆಯರ ಮಾಸಿಕ ಶ್ರೇಯಾಂಕ’ದ ಪಟ್ಟಿಯಲ್ಲಿ ಭಾರತವು 143ನೇ ಸ್ಥಾನದಲ್ಲಿದೆ. ಪ್ರಸ್ತುತ ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಅತೀ ಹೆಚ್ಚು ಮಹಿಳಾ ಸಂಸದರನ್ನು ಹೊಂದಿದೆ. ಅಂದರೆ ಶೇಕಡ 38. ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ಪ್ರಧಾನ ವಿರೋಧ ಪಕ್ಷ ಕಾಂಗ್ರೆಸ್ ಪಕ್ಷವು ತಲಾ ಶೇಕಡಾ 13 ರಷ್ಟು ಮಾತ್ರ ಮಹಿಳಾ ಸಂಸದರನ್ನು ಹೊಂದಿದೆ. ಕರ್ನಾಟಕ ವಿಧಾನಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಒಟ್ಟು ಬಲದಲ್ಲಿ ಶೇ 4.5 ರಷ್ಟು ಮಾತ್ರ. ಈ ಮೂಲಕ ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ದಕ್ಷಿಣ ಭಾರತದಲ್ಲಿ ಕರ್ನಾಟಕ ಆರನೇ ಸ್ಥಾನದಲ್ಲಿದೆ. ದೇಶದ ಮಹಿಳೆಯರ ಭಾಗವಹಿಸುವಿಕೆ ಇತರ ಕ್ಷೇತ್ರಗಳಿಗೆ ಹೋಲಿಸಿಕೊಂಡರೆ ರಾಜಕೀಯದಲ್ಲೇ ಕಡಿಮೆ ಎನ್ನುತ್ತವೆ ವರದಿಗಳು.

ಇದಕ್ಕೆ ಕಾರಣ ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬಂತೆ ರಾಜಕೀಯವೆಂದರೆ ಹೊಲಸು, ಪುರುಷಾಧಿಪತ್ಯ ಮತ್ತು ಮಹಿಳಾ ಪ್ರತಿನಿಧಿಗಳು ಚುನಾಯಿತ ಕ್ಷೇತ್ರಗಳನ್ನು ನಿಭಾಯಿಸಲು ಅನರ್ಹರು ಎಂಬ ಭಾವನೆ. ಈ ಮನೋಭಾವ ಇಂದು ನಿನ್ನೆಯದಲ್ಲ. ಮಹಿಳೆಯರ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಕ್ಕಾಗಿ ಬಾಬಾ ಸಾಹೇಬರೇ ವಿರೋಧವನ್ನು ಅನುಭವಿಸಿದ್ದರು. ಇನ್ನು ಮಹಿಳೆಯರಿಗೆ ಮತದಾನದ ಹಕ್ಕು ನೀಡುವುದರಿಂದ ಹಿಡಿದು ಪಂಚಾಯತ್ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ ನೀಡುವುದರವರೆಗೂ ಉಭಯ ಸದನಗಳಲ್ಲಿ ಜೊತೆಗೆ ಜನಸಾಮಾನ್ಯರಲ್ಲಿ ಈ ರೀತಿಯ ಮನೋಭಾವನೆಯನ್ನು ಮಹಿಳೆ ಅಬಲೆ ಎಂದುಕೊಂಡವರು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು. ಅದರಾಚೆಗೂ ನಿರಂತರ ಹೋರಾಟದ ಫಲವಾಗಿಯೇ ರಾಜಕೀಯದಲ್ಲಿ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಪಂಚಾಯತ್ ಮತ್ತು ಸ್ಥಳಿಯ ಸಂಸ್ಥೆಯ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿಯನ್ನು ನೀಡಲಾಯಿತು.

Advertisements

ರಾಜಕಾರಣದಲ್ಲಿರುವ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಸಿಗುವುದೇ ಕಷ್ಟ. ಅದರಲ್ಲೂ ಅಕಸ್ಮಾತ್ ಸ್ಥಾನಮಾನ ದೊರಕಿದಾಗಲೆಲ್ಲ ವಾರೆ ನೋಟದಿಂದ ನೋಡುವ, ಆ ಹೆಣ್ಣು ಮಕ್ಕಳ ಚಾರಿತ್ರ್ಯದ ಬಗ್ಗೆ ತೀರಾ ಸಡಿಲವಾಗಿ ಮಾತನಾಡುವ ‘ಅವಳ ಬಿಡು, ಅವಳ ಕಥೆ ನನಗೆ ಗೊತ್ತಿಲ್ವ, ಅವಳೇನೇನು ಮಾಡಿ ಈ ಹಂತಕ್ಕೆ ಬಂದಿರೋದು ಗೊತ್ತಾ’ ಇಂತಹ ಲಜ್ಜೆಗೆಟ್ಟ ಮಾತುಗಳು ಹೆಚ್ಚಾಗಿ ಕೇಳಿಬರುತ್ತವೆ. ಅದರಲ್ಲೂ ಯಾವುದೇ ಕೌಟುಂಬಿಕ ರಾಜಕೀಯ ಹಿನ್ನೆಲೆ ಇಲ್ಲದ ಹೆಣ್ಣು ಮಕ್ಕಳ ಸ್ಥಿತಿಯಂತು ಬಣ್ಣಿಸಲಾಗಲು. ಇದಕ್ಕೆ ಪುರಾವೆ ಬೇಕಾದರೆ ಸ್ವಸಾಮರ್ಥ್ಯಯದಿಂದ ರಾಜಕಾರಣ ಮಾಡುತ್ತಿರುವ ಕೆಲವು ಹೆಣ್ಣುಮಕ್ಕಳ ಫೇಸ್ಬುಕ್, ಇನ್ಸ್ಟಾಗ್ರಾಮ್ ಕಾಮೆಂಟುಗಳ ಕಡೆಗೊಮ್ಮೆ ಕಣ್ಣುಹಾಯಿಸಿ.

ಇದುವರೆಗೆ ಆ ರೀತಿಯ ಕಾಮೆಂಟುಗಳು ಕೆಲಸವಿಲ್ಲದೆ ಖಾಲಿ ಕುಳಿತ ಖಾಲಿ ಪೋಲಿಗಳ ಅಸಂಬದ್ಧ ಮಾತು ಎಂದು ಸುಮ್ಮನಾಗುತ್ತಿದ್ದವರಿಗೆ, ಕರ್ನಾಟಕದ ಮಹಿಳೆಯರ ಹಾಗೂ ಮಕ್ಕಳ ಕಲ್ಯಾಣ ಮತ್ತು ಹಕ್ಕುಗಳ ಹೊಣೆ ಹೊತ್ತಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರಿಗೆ ಈಗ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಸುವರ್ಣಸೌಧದಲ್ಲೆ ನಿಂತು ಅಸಂಬದ್ಧ, ಅಸಂವಿಧಾನಿಕ ಪದಗಳನ್ನು ಬಳಸಿದ್ದು ಮತ್ತದಕ್ಕೆ ಇಡೀ ಭಾಜಪ ಬೆಂಬಲಕ್ಕೆ ನಿಂತಿದ್ದು ಗಮನಿಸಿದರೆ ಮಹಿಳೆಯರ ಬಗೆಗಿರುವ ಕೀಳರಿಮೆಯನ್ನು ತೋರಿಸುತ್ತಿದೆ.

“ಮಹಿಳೆಯರ ಸಹಭಾಗಿತ್ವವಿಲ್ಲದ ಏಕತೆಯು ಅರ್ಥಹೀನ. ಮಹಿಳೆಯರನ್ನು ವಿದ್ಯಾವಂತರನ್ನಾಗಿಸದಿದ್ದರೆ ಶಿಕ್ಷಣ ಫಲಪ್ರದವಾಗುವುದಿಲ್ಲ ಮತ್ತು ಮಹಿಳೆಯರು ಪಾಲ್ಗೊಳ್ಳುವಿಕೆ ಇಲ್ಲದ ಯಾವುದೇ ಆಂದೋಲನವು ಅಪೂರ್ಣವಾಗುತ್ತದೆ” ಎಂದು ಹೇಳಿ ಮಹಿಳೆಯರಿಗೆ ಘನತೆಯ ಬದುಕನ್ನು ಕಟ್ಟಿಕೊಡಲು ಶ್ರಮಿಸಿದ ಬಾಬಾ ಸಾಹೇಬರ ಫೋಟೋ ಹಿಡಿದು ಪ್ರತಿಭಟಿಸುತ್ತಿದ್ದ ಮಹಿಳಾ ಸಚಿವೆಯೊಬ್ಬರನ್ನು ಅತ್ಯಂತ ಕೀಳು ಪದಗಳಲ್ಲಿ ನಿಂದಿಸಿದ ಸಿ.ಟಿ ರವಿ ವಿಧಾನ ಪರಿಷತ್ತಿನ ಘನತೆ, ಭುವನೇಶ್ವರಿಯನ್ನು ಆರಾಧಿಸುವ ಕನ್ನಡ ನಾಡಿನ ಮರ್ಯಾದೆ, ಬಾಬಾ ಸಾಹೇಬರ ಆಶಯಗಳಿಗೆ ಅವಮಾನ ಎಸಗಿದ್ದಾರೆ.

ಈ ವರದಿ ಓದಿದ್ದೀರಾ?: ಸಿಯಾಂಗ್ ಅಣೆಕಟ್ಟು: ರಾಷ್ಟ್ರೀಯ ಭದ್ರತೆ ಹೆಸರಿನಲ್ಲಿ ಹಳ್ಳಿಗರ ಮೇಲೆ ಕೇಂದ್ರದ ಕ್ರೌರ್ಯ!

ಸಂಸ್ಕೃತಿ, ಮಹಿಳಾ ರಕ್ಷಣೆಯ ಬಗೆಗೆ ಭಾಷಣ ಮಾಡುವ ಭಾಜಪ ಮತ್ತು ಅದರ ಅಂಗಸಂಸ್ಥೆಗಳು ಈ ಹಿಂದೆಯು ಬ್ರಿಜ್ ಭೂಷಣ್ ಎಂಬ ಮಹಿಳಾ ಪೀಡಕನ ಪರವಾಗಿ ನಿಂತಿದ್ದು, ಉನ್ನಾವೋ ಮತ್ತು ಕಥುವಾ ಸೇರಿದಂತೆ ದೇಶದ ಹಲವಾರು ಕಡೆ ಅತ್ಯಾಚಾರಕ್ಕೊಳಗಾದ ಮಹಿಳೆಯರ ವಿರುದ್ಧವಾಗಿ ಮತ್ತು ಅತ್ಯಾಚಾರಿಗಳ ಪರವಾಗಿ ನಿಂತ ಭಾಜಪ ಮತ್ತು ಸಂಘಪರಿವಾರ ಮಹಿಳಾ ವಿರೋಧಿ ನಿಲುವನ್ನು ಹೊಂದಿದೆ ಎಂಬುದು ನಿಚ್ಚಳವಾಗಿ ಅರ್ಥವಾಗುತ್ತಿದೆ. ಆರ್.ಎಸ್.ಎಸ್ ಪರಿಚಾರಕರಾದ ಸಿ.ಟಿ ರವಿಯ ಗುರು ಕಲ್ಲಡ್ಕ ಪ್ರಭಾಕರರು ಕೆಲವೇ ತಿಂಗಳುಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಕುರಿತು ಆಡಿದ ಮಾತುಗಳಿಗೆ ಸರ್ಕಾರ ಸೊಮೋಟೋ ದಾಖಲಿಸಿ ಅಥವಾ ಕೇಸು ದಾಖಲಾದ ಸಂದರ್ಭದಲ್ಲಿ ಬಂಧಿಸಿರುತ್ತಿದ್ದರೆ ಇಂದು ಕಾಂಗ್ರೆಸಿನ ಸಚಿವೆಯೊಬ್ಬರನ್ನು ಸಾರ್ವಜನಿಕವಾಗಿ ಹೀಗೆ ಅವಮಾನಿಸುವುದನ್ನು ತಡೆಯಬಹುದಾಗಿತ್ತು. ಕಲ್ಲಡ್ಕ ಪ್ರಭಾಕರರ ವಿರುದ್ಧ ದಾಖಲಾದಷ್ಟು ಕಠಿಣ ದೂರು ಸಿ.ಟಿ ರವಿಯ ವಿರುದ್ಧ ದಾಖಲಾಗಿರಲಿಲ್ಲ ಎನ್ನುವುದು ಕೂಡ ಇಲ್ಲಿ ಗಮನಿಸಬೇಕಾದ ಅಂಶ.

ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಪರವಾಗಿ ನಿಂತು, ಸಿ.ಟಿ. ರವಿಯನ್ನು ಬಂಧಿಸಿದ ರಾಜ್ಯ ಸರ್ಕಾರವೇ ಅಂದು ಮುಸ್ಲಿಂ ಹೆಣ್ಣು ಮಕ್ಕಳ ಬಗ್ಗೆ ಅವಾಚ್ಯ ಮತ್ತು ಅಸಂಬದ್ಧವಾಗಿ ಮಾತನಾಡಿದ್ದ ಕಲ್ಲಡ್ಕ ಪ್ರಭಾಕರರನ್ನು ಬಂಧಿಸುವ ಯಾವ ಇರಾದೆಯು ರಾಜ್ಯ ಸರ್ಕಾರಕ್ಕಿಲ್ಲ ಎಂಬ ಮಾತನ್ನು ಉಚ್ಛ ನ್ಯಾಯಾಲಯದಲ್ಲಿ ಸರ್ಕಾರಿ ವಕೀಲರ ಮೂಲಕ ಹೇಳಿಸಿತ್ತು. ಆ ಸಂದರ್ಭದಲ್ಲಿ ನಾಡಿನ ನಲವತ್ತು ಲಕ್ಷಕ್ಕೂ ಅಧಿಕ ಮುಸ್ಲಿಂ ಹೆಣ್ಣುಮಕ್ಕಳ ಪರವಾಗಿ ರಾಜ್ಯ ಸರ್ಕಾರವಾಗಲಿ ಮಹಿಳೆಯರ ಪ್ರತಿನಿಧಿಯಾದ ಲಕ್ಷ್ಮಿ ಹೆಬ್ಬಾಳ್ಕರ್ ಆಗಲಿ ತುಟಿ ಬಿಚ್ಚಿರಲಿಲ್ಲ ಎಂಬುದು ಮುಸ್ಲಿಂ ಮಹಿಳೆಯರಲ್ಲಿ ಮತ್ತಷ್ಟು ಅಭದ್ರತೆ ಮತ್ತು ದ್ವಿತೀಯ ದರ್ಜೆಯ ಪ್ರಜೆಗಳೆಂಬ ಭಾವನೆಯನ್ನು ಹುಟ್ಟುಹಾಕಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.

ಕಾಂಗ್ರೆಸ್ ಪಕ್ಷವು ರಾಜಕಾರಣದಲ್ಲಿರುವ ಮಹಿಳೆಯರ ಅಥವಾ ಮಹಿಳಾ ಜನಪ್ರತಿನಿಧಿಗಳ ಘನತೆಯ ಬಗ್ಗೆ ಮಾತ್ರ ಯೋಚಿಸಿದರೆ ಸಾಲದು. ಸಾಮಾನ್ಯ ಮಹಿಳೆಯರ ಘನತೆಗೆ ಧಕ್ಕೆಯಾದಾಗಲು ಇಷ್ಟೇ ಗಟ್ಟಿ ನಿಲುವನ್ನು ತಾಳಬೇಕು. ಮಹರಾಷ್ಟ್ರ ಕಾಂಗ್ರೆಸ್‌ನ ವಕ್ತಾರೆಯಾಗಿದ್ದ ಪ್ರಿಯಾಂಕಾ ಚತುರ್ವೇದಿ ತನ್ನ ವಿರುದ್ಧ ಲಿಂಗೀಯ ಮತ್ತು ರೌಡಿಗಿರಿಯಂಥ ದೌರ್ಜನ್ಯಗಳನ್ನು ಮಾಡಿದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡದ್ದನ್ನು ಆಕ್ಷೇಪಿಸಿ ಕಾಂಗ್ರೆಸನ್ನು ತೊರೆದು ಶಿವಸೇನೆಯನ್ನು ಸೇರಿದಂತಹ ಸಂದರ್ಭದಲ್ಲಿ ಕಾಂಗ್ರೆಸ್ ತೆಗೆದುಕೊಂಡ ನಿಲುವು ಕೂಡ ಪ್ರಶ್ನಾರ್ಹವೆ. ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲು ಮಹಿಳಾ ಮೀಸಲಾತಿ ಕಾಯ್ದೆಗೆ ಅಸ್ತು ಎಂದರಷ್ಟೆ ಸಾಲದು. ಮಹಿಳಾ ಮೀಸಲಾತಿಯ ಉದ್ದೇಶವು ರಾಜಕೀಯದಲ್ಲಿ ಮಹಿಳೆಯರ ಭೌತಿಕ ಪ್ರಾತಿನಿಧ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ ಬದಲಿಗೆ ಲಿಂಗ ಅಸಮಾನತೆ, ಪುರುಷಾತಿರೇಕವಾದಗಳಿಂದ ತುಂಬಿಹೋಗಿರುವ ಪ್ರಧಾನಧಾರೆ ರಾಜಕಾರಣವನ್ನು ಬದಲಿಸುವಂತೆ ಪ್ರಭಾವಿಸುವುದು ಕೂಡ ಮುಖ್ಯವಾಗುತ್ತದೆ. ಭೇಟಿ ಪಡಾವ್ ಬೇಟಿ ಬಚಾವ್ ಎಂದರೆ ಕೇವಲ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಮತ್ತು ಹೆಣ್ಣು ಭ್ರೂಣ ಹತ್ಯೆ ತಡೆಯುವುದಷ್ಟೆ ಅಲ್ಲ, ಹೆಣ್ಣಿಗೆ ಘನತೆಯ ಬದುಕನ್ನು ಬದುಕಲು ಅವಕಾಶ ಮಾಡಿಕೊಡುವುದು ಎನ್ನುವುದನ್ನು ಭಾಜಪ ಮರು ಮಂಥನ ಮಾಡಿಕೊಳ್ಳಲು ಇದು ಸುಸಮಯ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X