ಮರಕುಂಬಿ ದಲಿತರಿಗೆ ನ್ಯಾಯ; ಕೋರ್ಟ್‌ನಲ್ಲಿ ಕೊಳೆಯುತ್ತಿವೆ ದಲಿತ ಹತ್ಯೆಯ ಸಾವಿರ ಕೇಸ್‌ಗಳು!

Date:

Advertisements

ಮರಕುಂಬಿ ದಲಿತರಿಗೆ ನ್ಯಾಯ ಸಿಕ್ಕಿದೆ. ದಲಿತ ಮೇಲೆ ದೌರ್ಜನ್ಯ ಎಸಗಿದ್ದ ಆ ಪ್ರಕರಣದಲ್ಲಿ 98 ಜನರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ದಲಿತರಿಗೆ ನ್ಯಾಯ ಸಿಕ್ಕಿದೆ ಎಂಬುದಕ್ಕಿಂತ 98 ಆರೋಪಿಗಳಿಗೆ ಶಿಕ್ಷೆಯಾಗಿಬಿಟ್ಟಿದೆ ಎಂದು ಮಾಧ್ಯಮಗಳು ಮರುಕ ವ್ಯಕ್ತಪಡಿಸುತ್ತಿದೆ. ಇದು, ದಲಿತರ ಮೇಲಿನ ದೌರ್ಜನ್ಯವನ್ನು ಸಮರ್ಥಿಸುವ ದಾಟಿಯಲ್ಲಿ. ಇದೇ ಸಮಾಜದಲ್ಲಿ ದಲಿತರ ಮೇಲಿನ ದೌರ್ಜನ್ಯದ ಸಾವಿರಾರು ಪ್ರಕರಣಗಳು ನ್ಯಾಯಾಲಯಗಳ ಮುಂದಿವೆ. ಅಂತಹ ಸಾವಿರಾರು ಪ್ರಕರಣಗಳಲ್ಲಿ ಮರಕುಂಬಿಯ ಪ್ರಕರಣವೂ ಒಂದು. ಆ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಸಂತ್ರಸ್ತ ದಲಿತರಿಗೆ ನ್ಯಾಯ ಸಕ್ಕಿದೆ. ಆದರೆ, ಅದನ್ನೂ ಈ ಜಾತಿಗ್ರಸ್ತ ವ್ಯವಸ್ಥೆ ಸಹಿಸುತ್ತಿಲ್ಲ.

ಹತ್ತು ವರ್ಷದ ಹಿಂದೆ, 2015ರಲ್ಲಿ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ನಡೆದ ಜಾತಿ ಸಂಘರ್ಷ ಪ್ರಕರಣದಲ್ಲಿ 101 ಜನ ಅಪರಾಧಿಗಳಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ, ತಲಾ ಐದು ಸಾವಿರ ರೂ. ದಂಡ ಹಾಗೂ ಮೂರು ಅಪರಾಧಿಗಳಿಗೆ ಐದು ವರ್ಷ ಜೈಲು ಹಾಗೂ 2 ಸಾವಿರ ರೂಪಾಯಿ ದಂಡ ವಿಧಿಸಿ ಕೊಪ್ಪಳದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐತಿಹಾಸಿಕ ಆದೇಶ ನೀಡಿದೆ. ಗುರುವಾರ ಸಂಜೆ ನ್ಯಾಯಾಧೀಶ ಚಂದ್ರಶೇಖರ ಸಿ ಅವರು ತೀರ್ಪು ನೀಡಿದ್ದಾರೆ. ಜಾತಿ ಸಂಘರ್ಷ ಪ್ರಕರಣವೊಂದರಲ್ಲಿ 101 ಅಪರಾಧಿಗಳಿಗೆ ಶಿಕ್ಷೆ ನೀಡಿದ ದೇಶದ ಮೊದಲ ಪ್ರಕರಣ ಇದಾಗಿದೆ. 101 ಆರೋಪಿಗಳ ವಿರುದ್ಧ ಅ.21ಕ್ಕೆ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿತ್ತು. ಇವರಲ್ಲಿ ಮೂರು ಜನ ಅಪರಾಧಿಗಳು ಪರಿಶಿಷ್ಡ ಜಾತಿ, ಪಂಗಡಕ್ಕೆ ಸೇರಿದ್ದವರಾಗಿದ್ದರಿಂದ ಇವರಿಗೆ ಜಾತಿ ನಿಂದನೆ ಕೇಸ್ ಅನ್ವಯವಾಗಿಲ್ಲ. ಹೀಗಾಗಿ, ಶಿಕ್ಷೆ ಪ್ರಮಾಣ ಕಡಿಮೆಯಾಗಿದ್ದು, ಜೀವವಾಧಿ ಶಿಕ್ಷೆ ಆದೇಶದಿಂದ ವಿನಾಯಿತಿ ಸಿಕ್ಕಿದೆ. ಆದರೆ, ಗಲಬೆ ಹಬ್ಬಿಸಿದ ಕಾರಣಕ್ಕೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ದಲಿತರ ಮೇಲೆ ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ. ಪಬ್ರಲ ಜಾತಿಗಳ ತುಳಿತಕ್ಕೆ ಸಿಕ್ಕಿ ದಲಿತ ಸಮುದಾಯಗಳು ನಲುಗುತ್ತಲೇ ಇವೆ. ‘ಹಿಂದು ನಾವೆಲ್ಲ ಒಂದು’ ಅಂತ ಕರೆದು ಅದರಿಂದ ಲಾಭಪಡೆಯುತ್ತಿರುವ ಆರ್‌ಎಸ್‌ಎಸ್‌, ಬಜರಂಗದಳ, ಶ್ರೀರಾಮ ಸೇನೆ, ವಿಶ್ವ ಹಿಂದೂ ಪರಿಷತ್‌ನಂತಹ ಹಿಂದುತ್ವ ಕೋಮುವಾದಿ ಸಂಘಟನೆಗಳು ದಲಿತರನ್ನು ರಾಜಕೀಯವಾಗಿ ಮಾತ್ರ ಓಲೈಸುತ್ತಿವೆ. ಆದರೆ, ದಲಿತರ ಹತ್ಯೆ, ಶೋಷಣೆ, ಹಲ್ಲೆಗಳನ್ನು ಅವು ಪ್ರತಿಭಟಿಸುವುದಿಲ್ಲ. ಮನುವಾದವನ್ನೇ ಜೀವಾಳವಾಗಿಸಿಕೊಂಡಿರುವ ಈ ಸಂಘಟನೆಗಳು ದಲಿತರು ಪ್ರಬಲ ಜಾತಿಗಳಿಂದ ಶೋಷಣೆಗೆ ಅರ್ಹರು ಎಂಬುದನ್ನೇ ಒಳ ಅಜೆಂಡಾ ಮಾಡಿಕೊಂಡಿವೆ.

Advertisements

ಜಾತಿಗ್ರಸ್ತ ಸಮಾಜದಲ್ಲಿ ದಲಿತರ ಮೇಲಿನ ದೌರ್ಜನ್ಯ

ಭಾರತದಲ್ಲಿ ದಲಿತರ ಮೇಲಿನ ಶೋಷಣೆ, ದಲಿತರ ಹತ್ಯೆಯ ರಕ್ತಸಿಕ್ತ ಘಟನೆಗಳು ಇತಿಹಾಸದ ಪುಟದಲ್ಲಿ ಇವೆ. ಮರಕುಂಬಿ ದೌರ್ಜನ್ಯ ಪ್ರಕರಣಕ್ಕಿಂತಲೂ ಕ್ರೂರವಾದ ದಲಿತ ದೌರ್ಜನ್ಯ ಪ್ರಕರಣಗಳಿವೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 99% ಪ್ರಕರಣಗಳಲ್ಲಿ ಅಪರಾಧಿಗಳು ಶಿಕ್ಷೆಯಿಂದ ಪಾರಾಗಿದ್ದಾರೆ ಎಂಬುದು ಗಮನಾರ್ಹ. ಚಿಕ್ಕಬಳ್ಳಾಪುರ ಜಿಲ್ಲೆಯ ಕಂಬಾಲಪಲ್ಲಿ ದಲಿತರ ಸಜೀವ ದಹನದ ಘೋರ ಪ್ರಕರಣದಲ್ಲಿ ಸಹ ಅಪರಾಧಿಗಳಿಗೆ ಶಿಕ್ಷೆ ಆಗಲಿಲ್ಲ. ದಲಿತರ ಮೇಲೆ ಎಂತಹುದೇ ದೌರ್ಜನ್ಯ ನಡೆದರೂ ನ್ಯಾಯಾಲಯಗಳಿಂದ ತಪ್ಪಿಸಿಕೊಳ್ಳಬಹುದು ಎಂಬ ಅಭಿಪ್ರಾಯ ಮೂಡಿದ್ದ ಸನ್ನಿವೇಶದಲ್ಲಿ ಕೊಪ್ಪಳ ಜಿಲ್ಲಾ ನ್ಯಾಯಾಲಯದ ತೀರ್ಪು ಬಹಳ ಮಹತ್ವ ಪಡೆದಿದೆ.

1968ರಲ್ಲಿ ತಮಿಳುನಾಡಿನಲ್ಲಿ 44 ದಲಿತರ ಸಜೀವ ದಹನ, 1977ರಲ್ಲಿ ಬಿಹಾರದಲ್ಲಿ17 ಜನರ ಹತ್ಯೆ, 1979ರಲ್ಲಿ ಪಶ್ಚಿಮ ಬಂಗಾಳದ ಸುಂದರವನದಲ್ಲಿ ಸರ್ಕಾರದಿಂದ ದಲಿತ ನಿರಾಶ್ರಿತರ ಹತ್ಯೆ, 1985- ಆಂಧ್ರ ಪ್ರದೇಶದಲ್ಲಿ 6 ಮಂದಿ ದಲಿತರ ಹತ್ಯೆ ಮತ್ತು 3 ದಲಿತ ಮಹಿಳೆಯರ ಮೇಲೆ ಅತ್ಯಾಚಾರ, 1991- 9 ಮಂದಿ ದಲಿತರನ್ನು ಕೊಂದು ಕಾಲುವೆಗೆ ಎಸೆಯಲಾಯಿತು. 1997ರಲ್ಲಿ ತಮಿಳುನಾಡಿನಲ್ಲಿ ದಲಿತ ಪಂಚಾಯತಿ ಪ್ರತಿನಿಧಿ ಹಾಗೂ ಅವರ 6 ಬೆಂಬಲಿಗರ ಕೊಲೆ, 2000ನೇ ಇಸವಿಯಲ್ಲಿ ಕರ್ನಾಟಕದಲ್ಲಿ 6 ದಲಿತರ ಸಜೀವ ದಹನ, 2003ರಲ್ಲಿ 5 ಜನ ದಲಿತರನ್ನು ಪೊಲೀಸ್ ಠಾಣೆಯ ಎದುರು ಕೊಚ್ಚಿ ಕೊಂದದ್ದು, 2018 ಉತ್ತರ ಪ್ರದೇಶದಲ್ಲಿ 4 ಜನ ದಲಿತರನ್ನು ವಾಹನಕ್ಕೆ ಕಟ್ಟಿ ಥಳಿಸಿದ್ದು, ಜೈಪುರದಲ್ಲಿ ದಲಿತ ಪೊಲೀಸ್ ಪೇದೆ ಕುದುರೆ ಸವಾರಿ ಮಾಡಿದಕ್ಕೆ ಶೋಷಣೆ, ರಾಜ್ ಕೋಟ್‌ನಲ್ಲಿ ದಲಿತನೋರ್ವ ಮಲಗುಂಡಿ ಶುಚಿಗೊಳಿಸಲು ನಿರಾಕರಿಸಿದ್ದಕ್ಕೆ ಕೊಲೆ, ಗೋಸಾಗಾಣಿಕೆ ನೆಪದಲ್ಲಿ ದಲಿತರ ಹತ್ಯೆ, ಚಿಕ್ಕಬಳ್ಳಾಪುರ ಜಿಲ್ಲೆಯ ಕಂಬಾಲಪಲ್ಲಿಯಲ್ಲಿ ದಲಿತ ಮಹಿಳೆಯರು ಬೌದ್ಧ ಧರ್ಮಕ್ಕೆ ಸೇರಿ ಶಿಕ್ಷಣ ಪಡೆದಿದ್ದಕ್ಕೆ ಅತ್ಯಾಚಾರ ಕೃತ್ಯಗಳು ನಡೆದಿವೆ.

ತಮಿಳುನಾಡಿನಲ್ಲಿ ದಲಿತನೋರ್ವನ ಶವಸಂಸ್ಕಾರಕ್ಕೆ ಮೇಲ್ವರ್ಗದವರು ದಾರಿ ಬಿಡದೆ ಸೇತುವೆ ಕೆಳಗಿನಿಂದ ಶವ ಸಾಗಿಸಿದ್ದು, ಗುಜರಾತಿನಲ್ಲಿ ದಲಿತನೋರ್ವನ ಬಟ್ಟೆ ಬಿಚ್ಚಿ ಸಾಮೂಹಿಕವಾಗಿ ಥಳಿಸಿದ್ದು, ರೋಣಾ ತಾಲೂಕಿನಲ್ಲಿ ದಲಿತ ಹತ್ಯೆ, ಉಡುಪಿಯಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ದಲಿತ ಎಂಬ ಕಾರಣಕ್ಕೆ ಹಿಂದೂ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಲು ನಿರಾಕರಿಸಲಾಗಿತ್ತು. 2019-20ರಲ್ಲಿ ಯುಪಿಯಲ್ಲಿ ದಲಿತ ಯುವತಿ ಮನಿಷಾ ಅತ್ಯಾಚಾರ ಮಾಡಿ ಹತ್ಯೆಗೈದಿದ್ದು, ನಂಜನಗೂಡಿನಲ್ಲಿ ದಲಿತರ ಕ್ಷೌರ ಮಾಡಿದಕ್ಕೆ ಕ್ಷೌರಿಕನಿಗೆ ಬಹಿಷ್ಕಾರ ಹಾಕಿದ್ದು, 2022ರಲ್ಲಿ ಚಾಮರಾಜನಗರದಲ್ಲಿ ಸಾರ್ವಜನಿಕ ನೀರಿನ ಟ್ಯಾಂಕ್‌ ನಿಂದ ದಲಿತರು ನೀರು ಕುಡಿದಿದ್ದಕ್ಕೆ ಬಹಿಷ್ಕಾರ, ಕೋಲಾರದಲ್ಲಿ ದಲಿತ ಯುವಕ ದೇವರ ಕೋಲು ಮುಟ್ಟಿದ್ದಕ್ಕೆ 50 ಸಾವಿರ ದಂಡ, ಚಿಕ್ಕಮಗಳೂರಿನಲ್ಲಿ ದಲಿತ ಕೆಲಸಗಾರನನ್ನು ಕೂಡಿ ಹಾಕಿ ಮಾಲೀಕ ಹಿಂಸೆ ನೀಡಿದ್ದ ಘಟನೆಗಳನ್ನು ಭಾರತ ಕಂಡಿದೆ.

ಮಹಾರಾಷ್ಟ್ರದಲ್ಲಿ ಅಂಬೇಡ್ಕರ್ ಜಯಂತಿಯ ಮುಂದಾಳ್ತನ ವಹಿಸಿದ ಕಾರಣಕ್ಕೆ ದಲಿತ ಹುಡುಗನ ಹತ್ಯೆ, ಗುಜರಾತಿನಲ್ಲಿ ಬೆಂಡು ಮುಟ್ಟಿದಕ್ಕೆ ದಲಿತ ಹುಡುಗನ ಹೆಬ್ಬರಳು ಕತ್ತರಿಸಿರುವುದು, ತಮಿಳುನಾಡಿನಲ್ಲಿ ದಲಿತರು ದೇವಸ್ಥಾನಕ್ಕೆ ಹೋಗಬಾರದೆಂದು ಜಿಲ್ಲಾಡಳಿತದಿಂದ ಬೀಗ ಜಡಿದಿರುವುದು, ಮುಂಬೈನಲ್ಲಿ ದಲಿತ ಹುಡುಗಿಯ ಮೇಲೆ ಪ್ರಾಂಶುಪಾಲನ ನಿರಂತರ ಅತ್ಯಾಚಾರ,‌ ಊನಾ ಪ್ರಕರಣದಲ್ಲಿ ದಲಿತ ಸಮುದಾಯದ ಸಂತ್ರಸ್ತೆ ಸಾಕ್ಷಿ ಹೇಳಿದಕ್ಕೆ ಅವರ ಮನೆಯನ್ನು ಸುಟ್ಟಿರುವುದು, 2017ರಲ್ಲಿ ತುಮಕೂರಿನ ಗುಬ್ಬಿಯಲ್ಲಿ ಅಭಿಷೇಕ್‌ ಎಂಬ ಯುವಕನನ್ನು ಬೆತ್ತಲುಗೊಳಿಸಿ, ಚಪ್ಪಲಿ ಹಾರ ಹಾಕಿ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದು – ಹೀಗೇ ಭಾರತದುದ್ದಕ್ಕೂ ದಲಿತರನ್ನು ಜಾತಿ ಆಧಾರದ ಮೇಲೆ ನಿರಂತವಾಗಿ ಹತ್ಯೆ, ಶೋಷಣೆಗಳು ನಡೆದಿವೆ. ಆದರೆ, ಇದೀಗ ಕೊಪ್ಪಳದ ಮರಕುಂಬಿಯಲ್ಲಿ ನ್ಯಾಯಾಲಯ ಕೊಟ್ಟ ತೀರ್ಪು ನಮ್ಮ ದೇಶದ ಇತಿಹಾಸ ಪುಟಗಳಲ್ಲಿ ಇಷ್ಟು ವರ್ಷಗಳಲ್ಲಿ ಕಾಣಿಸದೇ ಇದ್ದ ತೀರ್ಪಾಗಿದೆ.

ಈ ವರದಿ ಓದಿದ್ದೀರಾ?: ಅಯೋಧ್ಯೆ ವಿವಾದ | ಮೂಲದಾವೆಯಲ್ಲಿ ದೇವರೇ ಕಕ್ಷಿದಾರ; ದೇವರನ್ನೇ ಪರಿಹಾರ ಕೇಳಿದ ಸಿಜೆಐ

ಪರಿಶಿಷ್ಟ ಜಾತಿಗಳ (ಎಸ್‌ಸಿ) ವಿರುದ್ಧದ ದೌರ್ಜನ್ಯಗಳು ಅಥವಾ ಅಪರಾಧಗಳು 2021ರಲ್ಲಿ 1.2% ರಷ್ಟು ಹೆಚ್ಚಾಗಿದೆ ಅಂತ ಎನ್‌ಸಿಆರ್‌ಬಿ ವರದಿ ಹೇಳಿದೆ. ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಉತ್ತರಪ್ರದೇಶದಲ್ಲಿ 25.82%, ರಾಜಸ್ಥಾನ 14.7% ಮತ್ತು ಮಧ್ಯಪ್ರದೇಶ 14.1%ರಷ್ಟು ಪ್ರಕರಣಗಳು ದಾಖಲಾಗಿವೆ. ಇದಲ್ಲದೆ, ಪರಿಶಿಷ್ಟ ಪಂಗಡಗಳ (ST) ವಿರುದ್ಧದ ದೌರ್ಜನ್ಯಗಳು 2021ರಲ್ಲಿ 6.4%ರಷ್ಟು ಹೆಚ್ಚಾಗಿದೆ ಅಂತ ವರದಿ ಬಹಿರಂಗಪಡಿಸುತ್ತದೆ. ಮಧ್ಯಪ್ರದೇಶವು 29.8% ರಷ್ಟು ಪ್ರಕರಣಗಳು ದಾಖಲಾಗಿದ್ದರೆ, ರಾಜಸ್ಥಾನ 24% ಮತ್ತು ಒಡಿಶಾದಲ್ಲಿ 7.6% ರಷ್ಟು ಪ್ರಕರಣಗಳು ದಾಖಲಾಗಿವೆ.

ಅಷ್ಟೇ ಅಲ್ಲ, 2021ರ ಅಂತ್ಯದ ವೇಳೆಗೆ ಎಸ್‌ಸಿಗಳ ಮೇಲಿನ ಒಟ್ಟು 70,818 ದೌರ್ಜನ್ಯ ಪ್ರಕರಣಗಳು ಹಾಗೂ ಎಸ್‌ಟಿಗಳ ಮೇಲಿನ 12,159 ದೌರ್ಜನ್ಯ ಪ್ರಕರಣಗಳು ತನಿಖೆಯಾಗದೇ ಹಾಗೇ ಉಳಿದಿವೆ ಎಂದೂ ವರದಿ ಗಮನ ಸೆಳೆದಿದೆ. ಒಟ್ಟಾರೆ ಕಳೆದ ಒಂದು ದಶಕದಲ್ಲಿ ದಲಿತರ ಮೇಲಿನ ಅಪರಾಧಗಳು 37% ರಷ್ಟು ಏರಿಕೆಯಾಗಿವೆ. ದೇಶದಲ್ಲಿ ಕಳೆದ ವರ್ಷ, ದಿನಕ್ಕೆ ಸರಾಸರಿ 10 ದಲಿತ ಮಹಿಳೆಯರ ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, ರಾಜಸ್ಥಾನದಲ್ಲಿ ಅತಿ ಹೆಚ್ಚು ಅಂದರೆ 554 ಪ್ರಕರಣಗಳು ವರದಿಯಾಗಿವೆ. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಕ್ರಮವಾಗಿ 537 ಮತ್ತು 510 ಅತ್ಯಾಚಾರ ಪ್ರಕರಣಗಳು ನಡೆದಿವೆ. ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಸುಮಾರು 45% ಹೆಚ್ಚಾಗಿದೆ. ಅದರಲ್ಲೂ ಸುಮಾರು 80% ಲೈಂಗಿಕ ದೌರ್ಜನ್ಯವನ್ನು ಪ್ರಬಲ ಜಾತಿಯ ಪುರುಷರೇ ಎಸಗಿದ್ದಾರೆ. 2018 ಮತ್ತು 2021ರ ನಡುವೆ 1.8 ಲಕ್ಷಕ್ಕೂ ಹೆಚ್ಚು ದಲಿತರ ಮೇಲಿನ ಅಪರಾಧ ಪ್ರಕರಣಗಳು ದಾಖಲಾಗಿವೆ.

ಏನಿದು ಮರಕುಂಬಿ ಪ್ರಕರಣ?

ಮರಕುಂಬಿ ಗ್ರಾಮದಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ದೊಡ್ಡ ಮಟ್ಟದ ಘರ್ಷಣೆಗೆ ಕಾರಣ, ಗ್ರಾಮದಲ್ಲಿದ್ದ ಅಸ್ಪ್ರಶ್ಯತೆ. ಗ್ರಾಮದಲ್ಲಿ ಸವರ್ಣೀಯರು ನಡೆಸುತ್ತಿದ್ದ ಅಸ್ಪ್ಪಶ್ಯತೆಯನ್ನು ಗ್ರಾಮದ ದಲಿತರು ಖಂಡಿಸಿದ್ದರು. ಇದರಿಂದ ಸವರ್ಣೀಯರು ಮತ್ತು ದಲಿತರ ನಡುವೆ ಆರೋಪ, ಪ್ರತ್ಯಾರೋಪ, ದೂರು ಪ್ರತಿದೂರು ದಾಖಲಾಗುತ್ತಿದ್ದವು. ಆದರೆ, 2014ರ ಆಗಸ್ಟ್ 28ರಂದು ಕ್ಷೌರದಂಗಡಿಗೆ ಮತ್ತು ಹೋಟೆಲ್‌ನಲ್ಲಿ ದಲಿತರಿಗೆ ಪ್ರವೇಶ ನೀಡದ ಕಾರಣಕ್ಕೆ ದಲಿತರು ಮತ್ತು ಸವರ್ಣೀಯರ ನಡುವೆ ಗಲಾಟೆ ನಡೆದಿತ್ತು. ಅದೇ ದಿನ ಗಂಗಾವತಿಯಲ್ಲಿ ಮರಕುಂಬಿ ಗ್ರಾಮದ ಕೆಲ ಸವರ್ಣೀಯರು ಸಿನಿಮಾ ನೋಡಲು ಹೋದಾಗ ದಲಿತ ಯುವಕರು ಮತ್ತು ಸವರ್ಣೀಯರ ನಡುವೆ ಚಿತ್ರಮಂದಿರ ಬಳಿಯೂ ಗಲಾಟೆ ನಡೆದಿತ್ತು. ಇದರಿಂದ ಉದ್ರಿಕ್ತಗೊಂಡಿದ್ದ ಪ್ರಬಲ ಜಾತಿಗರ ಗುಂಪು ರಾತ್ರಿಯ ವೇಳೆಯಲ್ಲಿ ದಲಿತರ ಕೇರಿಗೆ ನುಗ್ಗಿ ದಲಿತರ ಮೇಲೆ ಹಲ್ಲೆ ನಡೆಸಿ, ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು.

ಸವರ್ಣೀಯರ ಕ್ರೌರ್ಯದ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಗ್ರಾಮಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದರು. ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಭೀಮೇಶ್ ಎಂಬವರು 2014ರ ಆಗಸ್ಟ್‌ 29ರಂದು ಗಂಗಾವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಡನೆಸಿ, 117 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಅವರಲ್ಲಿ, 16 ಮಂದಿ ಈಗಾಗಲೇ ಮೃತಪಟ್ಟಿದ್ದು, ಉಳಿದ 101 ಆರೋಪಿಗಳ ವಿರುದ್ಧ ಅಪರಾಧ ಸಾಬೀತಾಗಿದೆ. ನ್ಯಾಯಾಲಯವು ಅವರನ್ನು ಅಪರಾಧಿಗಳೆಂದು ಶಿಕ್ಷೆ ವಿಧಿಸಿದೆ.

ಮತ್ತೊಂದು ಮುಖ್ಯ ವಿಚಾರವೆಂದರೆ, ದಲಿತರ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಹೋರಾಟ ನಡೆಸುತ್ತಿದ್ದ ಸಿಪಿಐಎಂನ ವೀರೇಶ ಮರಕುಂಬಿ ಅವರನ್ನು ಕೊಪ್ಪಳದ ರೈಲು ನಿಲ್ದಾಣದ ಬಳಿ ಕೊಲೆ ಮಾಡಲಾಗಿತ್ತು. ಮರಕುಂಬಿ ಪ್ರಕರಣದಲ್ಲಿ ವೀರೇಶ್‌ ಅವರು ಪ್ರಮುಖ ಸಾಕ್ಷಿದಾರರೂ ಆಗಿದ್ದರು. “2015ರ ಜುಲೈ 10ರಂದು ಅವರು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ಹೇಳಬೇಕಾಗಿತ್ತು. ಆದರೆ, ಅಂದು ಬೆಳಿಗ್ಗೆಯೇ ಅವರ ಹತ್ಯೆಯಾಗಿತ್ತು. ವೀರೇಶ್‌ ಅವರನ್ನು ಕೊಲೆ ಮಾಡಿ, ರೈಲ್ವೇ ಹಳಿ ಮೇಲೆ ಎಸೆಯಲಾಗಿತ್ತು. ಆದರೆ, ಪೊಲೀಸರು ಮೃತರ ಪ್ಯಾಂಟಿನಲ್ಲಿ ಡೆತ್‌ನೋಟ್‌ ಸಿಕ್ಕಿದೆಯೆಂದು ಹೇಳಿ, ಕೊಲೆಯನ್ನು ಆತ್ಮಹತ್ಯೆಯನ್ನಾಗಿ ಬಿಂಬಿಸಿ, ಪ್ರಕರಣವನ್ನು ಮುಚ್ಚಿ ಹಾಕಿದ್ದರೆಂದು ಮರಕುಂಬಿಯ ಸಂತ್ರಸ್ತರು ಆರೋಪಿಸಿದ್ದಾರೆ.

ಅಂದು ಮರಕುಂಬಿ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ಕೃತ್ಯ ನಡೆದು 10 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಶಿಕ್ಷೆ ಪ್ರಕಟವಾಗಿದೆ. ಅಪರಾಧಿಗಳನ್ನು ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಇಷ್ಟು ಜನರಿಗೆ ಜೀವಾವಧಿ ಶಿಕ್ಷೆಯಾಗಿರುವುದು ದೇಶದಲ್ಲೇ ಮೊದಲ ಪ್ರಕರಣ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X