ಸಣ್ಣವಯಸ್ಸಿನಲ್ಲೇ ಅವರು ಶಾಲೆಯಲ್ಲಿ ಗರ್ಲ್ ಗೈಡ್ ಸೇರಿದಾಗ ಬ್ರಿಟಿಷ್ ಸಾಮ್ರಾಜ್ಯದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಬೇಕೆಂಬ ನಿಯಮವಿತ್ತು. ತಾನು ಪ್ರಮಾಣವಚನ ಸ್ವೀಕರಿಸುವುದಾದರೆ ಅದು ಕೇವಲ ತನ್ನ ತಾಯಿನಾಡಿನ ಹೆಸರಿನಲ್ಲಿ ಮಾತ್ರ ಎಂದು ಸಿಡಿದೆದ್ದವಳು ಈ ಬಾಲಕಿ!
“ಮಹಿಳೆಯರು ಹಿಂದುಳಿದಿದ್ದಾರೆ ಏಕೆಂದರೆ ಅವರನ್ನು ಆ ಸ್ಥಿತಿಗೆ ತಳ್ಳಲಾಗಿದೆ. ಇಂದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುನ್ನುಗ್ಗುವ ದೃಢ ಸಂಕಲ್ಪವನ್ನು ಅವರು ತೊಟ್ಟಿದ್ದಾರೆ ಇನ್ನು ಮುಂದೆ ನನ್ನ ಅಕ್ಕ ತಂಗಿಯರು ತಮ್ಮನ್ನು ತಾವು ಅಬಲೆಯರ ಎಂದು ಪರಿಗಣಿಸುವುದಿಲ್ಲವೆಂಬ ಅಚಲ ವಿಶ್ವಾಸದಿಂದ ನಾನು ನಮ್ಮ ದೇಶಕ್ಕಾಗಿ ಪ್ರಾಣವನ್ನೀಯಲು ಮುನ್ನುಗ್ಗುತ್ತಿದ್ದೇನೆ”. ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಕ್ಕೆ ಹೆಚ್ಚೆಚ್ಚು ಮಹಿಳೆಯರು ಸೇರ್ಪಡೆಗೊಳ್ಳಲಿ ಎಂಬ ಮಹಾನ್ ಉದ್ದೇಶಕ್ಕಾಗಿ ಹೀಗೆ ಸಾರಿ ಹೇಳಿದವರು ಪ್ರೀತಿಲತಾ.
ಇಂದು ಅವರ ಜನ್ಮದಿನ. ಪ್ರೀತಿಲತಾ ಅವರು ಚಿತ್ತಗಾಂಗಿನ ಬಡಕುಟುಂಬವೊಂದರಲ್ಲಿ ಜಗತ್ ಬಂಧು ಹಾಗೂ ಪ್ರತಿಭಾಮಯಿಯವರ ಮಗಳಾಗಿ ಜನಿಸಿದರು. ಸಣ್ಣವಯಸ್ಸಿನಲ್ಲೇ ಅವರು ಶಾಲೆಯಲ್ಲಿ ಗರ್ಲ್ ಗೈಡ್ ಸೇರಿದಾಗ ಬ್ರಿಟಿಷ್ ಸಾಮ್ರಾಜ್ಯದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಬೇಕೆಂಬ ನಿಯಮವಿತ್ತು. ತಾನು ಪ್ರಮಾಣವಚನ ಸ್ವೀಕರಿಸುವುದಾದರೆ ಅದು ಕೇವಲ ತನ್ನ ತಾಯಿನಾಡಿನ ಹೆಸರಿನಲ್ಲಿ ಮಾತ್ರ ಎಂದು ಸಿಡಿದೆದ್ದಳು ಈ ಬಾಲಕಿ!
ಬಾಲ್ಯದಿಂದಲೇ ಝಾನ್ಸಿರಾಣಿ ಲಕ್ಷ್ಮೀಬಾಯಿ, 19ನೇ ವಯಸ್ಸಿಗೆ ಪ್ರಾಣವನ್ನರ್ಪಿಸಿದ ಕ್ರಾಂತಿಕಾರಿ ಖುದಿರಾಮ್ ಬೋಸ್ ಅವರ ಕಥೆಗಳನ್ನು ಕೇಳಿ ಬೆಳೆದ ಪ್ರೀತಿಲತಾ ತಮ್ಮ ಆರಂಭಿಕ ಶಿಕ್ಷಣವನ್ನು ಚಿತ್ತಗಾಂಗ್ ಮತ್ತು ಡಾಕಾದಲ್ಲಿ ಪೂರೈಸಿದರು. ಮುಂದೆ ತತ್ವಶಾಸ್ತ್ರದಲ್ಲಿ ಬಿ.ಎ. ಪದವಿಯ ವ್ಯಾಸಂಗ ಮಾಡಲು ಕಲ್ಕತ್ತಾ ವಿಶ್ವವಿದ್ಯಾನಿಲಯಕ್ಕೆ ಸೇರಿದರು. ಕ್ರಾಂತಿಕಾರಿಗಳ ಕಾರ್ಯಗಾರವೆಂದೆ ಪ್ರಸಿದ್ಧಿ ಪಡೆದಿದ್ದ ಛಾತ್ರ್ (ವಿದ್ಯಾರ್ಥಿ) ಸಂಘ ಹಾಗೂ ದೀಪಾಲಿ ಸಂಘಗಳಲ್ಲಿ ಸದಸ್ಯರಾಗಿ ಸಕ್ರಿಯ ಪಾತ್ರವಹಿಸಿದರು.
ಅಂದಿನ ಕಾಲದಲ್ಲಿ ಮಹಿಳೆಯೊಬ್ಬಳು ಬಿ.ಎ. ಪದವಿ ಪಡೆಯುವುದು ಸಣ್ಣ ಮಾತಾಗಿರಲಿಲ್ಲ. ನಂತರ ಅವರು ಸ್ಥಳೀಯ ನಂದನ್ ಕಾನನ್ ಬಾಲಕಿಯರ ಪ್ರೌಢಶಾಲೆಯ ಪ್ರಾಚಾರ್ಯರಾಗಿ ವೃತ್ತಿಜೀವನವನ್ನು ಆರಂಭಿಸಿದರೂ ಪ್ರವೃತ್ತಿಯಲ್ಲಿ ಕ್ರಾಂತಿಕಾರಿಯಾಗಿ ಮುಂದುವರಿದರು. ಈ ನಡುವೆ ಭಾರತದ ಕ್ರಾಂತಿಕಾರಿ ಇತಿಹಾಸದಲ್ಲಿ “ಮಾಸ್ಟರ್ ದಾ” ಎಂದೇ ಪರಿಗಣಿಸಲ್ಪಟ್ಟ ಸೂರ್ಯಸೇನ್ ರ ಪರಿಚಯವಾಯಿತು.
ಕ್ರಾಂತಿಕಾರಿ ಮಾರ್ಗದ ಮೂಲಕ ಚಿತ್ತಗಾಂಗ್ ನ್ನು ಸಂಪೂರ್ಣವಾಗಿ ಸ್ವತಂತ್ರಗೊಳಿಸಿ ಕ್ರಮೇಣ ಈ ಹೋರಾಟವನ್ನು ದೇಶದಾದ್ಯಂತ ಮುಂದುವರಿಸಿಕೊಂಡು ಹೋಗಿ ದೇಶವನ್ನು ಸ್ವತಂತ್ರ ಗೊಳಿಸಬೇಕು ಎಂಬ ಉದ್ದೇಶವನ್ನು ಸೂರ್ಯಸೇನ್ ಹೊಂದಿದ್ದರು. ಈ ಉದ್ದೇಶಕ್ಕಾಗಿ ಅವರು ಪ್ರೀತಿಲತರನ್ನೊಳಗೊಂಡ ದೇಶಪ್ರೇಮದಿಂದ ಪ್ರೇರಿತರಾದ ನವ ಯುವಕ-ಯುವತಿಯರನ್ನೊಡಗೂಡಿದಿ ಇಂಡಿಯನ್ ರಿಪಬ್ಲಿಕನ್ ಆರ್ಮಿಯನ್ನು ಕಟ್ಟಿ ಬ್ರಿಟಿಷ್ ಸರ್ಕಾರಿ ಶಸ್ತ್ರಾಗಾರದ ದರೋಡೆ, ಬ್ರಿಟಿಷ್ ಕ್ಲಬ್ ಗಳ ಮೇಲಿನ ದಾಳಿ, ಜೈಲುಗಳ ಮೇಲಿನ ಆಕ್ರಮಣ ಹಾಗೂ ರಾಜಕೀಯ ಕೈದಿಗಳ ಬಿಡುಗಡೆ ಸ್ಥಳೀಯ ಆಡಳಿತಾಂಗಕ್ಕೆ ಇತರೆಡೆಯಿಂದ ತಕ್ಷಣದ ನೆರವು ಸಿಗದಂತೆ ರೈಲು ಹಳಿ ಸ್ಪೋಟ, ಮುಂತಾದ ಕಾರ್ಯಯೋಜನೆಯನ್ನು ತನ್ನ ಪಡೆಯೊಂದಿಗೆ ಸೂರ್ಯಸೇನ್ ರು ಸಿದ್ಧಗೊಳಿಸಿದರು.
ಅದೊಂದು ಅಪೂರ್ವ ಮೈ ನವಿರೇಳಿಸುವ ದಿನ, ಸೂರ್ಯಸೇನರ ನೇತೃತ್ವದ ಪಡೆ ತಮ್ಮ ಯೋಜನೆಯಂತೆ ಬ್ರಿಟಿಷ್ ಶಸ್ತ್ರಾಗಾರಗಳ ಹಾಗೂ ಇನ್ನಿತರೆ ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿ ಯಶಸ್ವಿಗೊಳಿಸಿ ಅನೇಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿತು. ಚಿತ್ತಗಾಂಗಿನಿಂದ 50 ಮೈಲು ದೂರದಲ್ಲೇ ರೈಲ್ವೆ ಹಳಿಯನ್ನು ಸ್ಫೋಟಿಸಿ ಬ್ರಿಟಿಷ್ ಆಡಳಿತಾಂಗವನ್ನು ನಿಷ್ಕ್ರಿಯಗೊಳಿಸಿದ ಇಂಡಿಯನ್ ರಿಪಬ್ಲಿಕನ್ ಅರ್ಮಿ 1930 ಏಪ್ರಿಲ್ 18ರಂದು ಸೂರ್ಯಸೇನ್ ನೇತೃತ್ವದಲ್ಲಿ ಅವಿಭಜಿತ ಭಾರತದ ಭಾಗವಾಗಿದ್ದ ಚಿತ್ತಗಾಂಗ್ ನಲ್ಲಿ ಪ್ರಾಂತೀಯ ಕ್ರಾಂತಿಕಾರಿ ಸರ್ಕಾರವನ್ನೇ ರಚಿಸಿತು. ಬ್ರಿಟೀಷರ ವಿರುದ್ಧದ ಕ್ರಾಂತಿಕಾರಿಗಳ ಈ ಗೆಲುವು ಈಡಿ ದೇಶವನ್ನೇ ರೋಮಾಂಚನಗೊಳಿಸಿತು.

ಅದಾಗಲೇ ಸೆರೆ ಹಿಡಿಯಲ್ಪಟ್ಟು ಗಲ್ಲುಶಿಕ್ಷೆಗೆ ಗುರಿಯಾಗಿದ್ದ ರಾಮಕೃಷ್ಣ ವಿಶ್ವಾಸ್ ರನ್ನು ಭೇಟಿ ಮಾಡಿ ಕ್ರಾಂತಿಕಾರಿಗಳಿಗೆ ಬೇಕಾದ ವಿಷಯಗಳನ್ನು ಅವರಿಂದ ಸಂಗ್ರಹಿಸುವ ಅವಶ್ಯಕತೆ ಎದುರಾಯಿತು. ತೀರಾ ಅಪಾಯಕಾರಿಯಾದ ಕೆಲಸಕ್ಕೆ “ಮಾಸ್ಟರ್ ದಾ”ಆಯ್ಕೆ ಮಾಡಿದ್ದು ಪ್ರೀತಿಲತಾ ರನ್ನು. ರಾಮಕೃಷ್ಣ ವಿಶ್ವಾಸ್ ರವರ ತಂಗಿಯಂತೆ ಮಾರುವೇಷದಲ್ಲಿ ಒಂದಿನಿತೂ ಪೊಲೀಸರಿಗೆ ಶಂಕೆ ಬರದಂತೆ ಭೇಟಿ ಮಾಡಿದ್ದು ಒಂದಲ್ಲ 40 ಬಾರಿ!
ಯುರೋಪಿಯನ್ನರು ಮೋಜು-ಮಸ್ತಿಗೆ ಬಳಸುತ್ತಿದ್ದ ಷಹರ್ ಕಾಲಿಯಾ ಯುರೋಪಿಯನ್ ಕ್ಲಬ್ ನ ಮುಂದೆ ದೊಡ್ಡ ಬೋರ್ಡ್ ನಲ್ಲಿ ಭಾರತೀಯರಿಗೂ ನಾಯಿಗಳಿಗೂ ಪ್ರವೇಶವಿಲ್ಲ ಎಂದು ಬರೆಯಲಾಗಿತ್ತು. ಇದು ಕ್ರಾಂತಿಕಾರಿಗಳ ಆತ್ಮಾಭಿಮಾನವನ್ನೇ ಕೆರಳಿಸಿತು. ಕ್ಲಬ್ ಮೇಲೆ ದಾಳಿಯ ಯೋಜನೆಯನ್ನು ಸಿದ್ಧಪಡಿಸಿದ ಸೂರ್ಯಸೇನ್, 12 ಜನರ ತಂಡವನ್ನು ರಚಿಸಿ ಅದರ ನೇತೃತ್ವವನ್ನು ಪ್ರೀತಿಲತಾರಿಗೇ ವಹಿಸಿದರು. ಇನ್ನೊಂದು ಕಡೆ ಆ ಪ್ರದೇಶದವರಿಗೆಲ್ಲಾ ಉಳಿದ ಕ್ರಾಂತಿಕಾರಿಗಳು ತಮ್ಮ ಉದ್ದೇಶಗಳನ್ನು ತಿಳಿಸುವ ಕರಪತ್ರಗಳನ್ನು ಹಂಚುತ್ತಿದ್ದರು. ಇದರಿಂದಾಗಿ ತಮ್ಮ ಹೋರಾಟಕ್ಕೆ ಹೆಚ್ಚೆಚ್ಚು ಯುವಕ ಯುವತಿಯರು ಧುಮುಕುತ್ತಾರೆ ಎಂಬುದು ಅವರ ನಂಬಿಕೆಯಾಗಿತ್ತು.
1932 ಸೆಪ್ಟಂಬರ್ 24ರಂದು ಮಧ್ಯ, ನೃತ್ಯ ಸಂಗೀತಗಳಲ್ಲಿ ಲೋಲುಪ್ತರಾಗಿದ್ದ ಯುರೋಪಿಯನ್ನರ ಮೇಲೆ ಪ್ರೀತಿಲತಾ ನೇತೃತ್ವದ ತಂಡ ರಾತ್ರಿ 10:45ರ ವೇಳೆಗೆ ತಮಗಿನ್ನು ಭಯವಿಲ್ಲವೆಂದು ಅಲ್ಲಿ ತನಕ ಉನ್ಮತ್ತರಾಗಿದ್ದ ಯುರೋಪಿಯನ್ನರು ಈಗ ಎಚ್ಚೆತ್ತುಕೊಂಡು ಕ್ಲಬ್ಬಿನೊಳಗಿಂದ ಗುಂಡುಹಾರಿಸಲಾರಂಭಿಸಿದರು. ಇದರಿಂದ ತಪ್ಪಿಸಿಕೊಳ್ಳುತ್ತಿರುವಾಗ ಪ್ರೀತಿ ಲತಾಗೆ ಒಂದು ಗುಂಡು ತಗುಲಿ ಅವರು ತಪ್ಪಿಸಿಕೊಳ್ಳಲಾಗದಂತಾಯಿತು. ತಾನೆಂದೂ ಜೀವಂತವಾಗಿ ಬ್ರಿಟಿಷರಿಗೆ ಸಿಕ್ಕಿ ಹಾಕಿಕೊಳ್ಳುವುದಿಲ್ಲವೆಂಬ ಪೂರ್ವ ನಿರ್ಧಾರದಂತೆ ತನ್ನ ಬಳಿ ಇರಿಸಿಕೊಂಡಿದ್ದ ವಿಷವನ್ನು ಆ ಸ್ಥಳದಲ್ಲೇ ಸೇವಿಸಿ ಪ್ರಾಣಾರ್ಪಣೆ ಮಾಡಿದರು. ಆಗಿನ್ನೂ ಅವರ ವಯಸ್ಸು ಕೇವಲ 21!
ಇದನ್ನು ಓದಿ ಏಕರೂಪ ನಾಗರಿಕ ಸಂಹಿತೆ | ಶೋಷಿತ ವರ್ಗಗಳನ್ನು ನಿರಂತರ ದಾಸ್ಯಕ್ಕೆ ದಬ್ಬುವ ಹುನ್ನಾರ
ಮರುದಿನ ಈ ಘಟನೆ ನಡೆದ ಸ್ಥಳಕ್ಕೆ ಬಂದ ಪೊಲೀಸರಿಗೆ ಅವರ ದೇಹವು ಸಿಕ್ಕಿತು. ಸ್ಥಳೀಯ ನಂದನ್ ಕಾನನ್ ಬಾಲಕಿಯರ ಪ್ರೌಢ ಶಾಲೆಯ ಪ್ರಾಚಾರ್ಯೆ, ಕಲ್ಕತ್ತಾ ವಿಶ್ವವಿದ್ಯಾಲಯದ ಪದವೀಧರೆ ಪ್ರೀತಿಲತಾ ವದ್ದೇದಾರ್ ಎಂದು ಅವರನ್ನು ಗುರುತಿಸಿದರು. ಜೇಬಿನಲ್ಲಿ ಸಿಕ್ಕಿದ ಕೆಂಪು ಶಾಯಿಯಲ್ಲಿ ಬರೆದ ಕರಪತ್ರವೊಂದು ಸಾಯುವ ಮುನ್ನ ತಮ್ಮ ದೇಶದ ಸಹೋದರಿಯರಿಗೆ ಅವರಿತ್ತ ಸಂದೇಶವೇನೊ ಎಂಬಂತಿದೆ. ಅದರ ಒಕ್ಕಣೆ ಹೀಗಿದೆ “1930 ಆಗಸ್ಟ್ 18ರಂದು ಬ್ರಿಟಿಷರ ವಿರುದ್ಧ ನಮ್ಮ ಯುದ್ಧ ಆರಂಭವಾಗಿದೆ ಹಾಗೂ ಅದು ಮುಂದುವರೆಯಲಿರುವುದು. ಭಾರತಮಾತೆಯ ಶೃಂಖಲೆಗಳಲ್ಲಿರುವಷ್ಟು ಕಾಲವು ಭಾರತದ ನಾರಿಯರು ಸಾವಿರಾರು ಸಂಖ್ಯೆಯಲ್ಲಿ ಮುಂದೆ ಬಂದು ಶತ್ರುಗಳ ವಿರುದ್ಧ ಹೋರಾಟ ನಿರತರಾಗಿರುವ ತಮ್ಮ ಕ್ರಾಂತಿಕಾರಿ ಸಹೋದರರಿಗೆ ಸಹಾಯಕರಾಗಿ ನಿಲ್ಲಬೇಕು. ವಂದೇ ಮಾತರಂ -ಪ್ರೀತಿಲತಾ ವದ್ದೇದಾರ್”
ಭಾರತ ಸ್ವತಂತ್ರ ಸಂಗ್ರಾಮದಲ್ಲಿ ಹುತಾತ್ಮರಾದ ಪ್ರಥಮ ಕ್ರಾಂತಿಕಾರಿ ಮಹಿಳೆ ಎನಿಸಿಕೊಂಡಿರುವ ಪ್ರೀತಿಲತಾರಂತೆ ಲಕ್ಷಾಂತರ ಮಂದಿ ತಮ್ಮ ಜೀವನವನ್ನೇ ಬ್ರಿಟಿಷರನ್ನು ಈ ದೇಶದಿಂದ ಹೊಡೆದೋಡಿಸಲು ಮುಡುಪಾಗಿಟ್ಟಿದ್ದರು. ಅವರ ತ್ಯಾಗ ಬಲಿದಾನದ ಫಲವಾದ ಸ್ವತಂತ್ರ ಭಾರತವನ್ನು ಮುನ್ನಡೆಸುತ್ತಿರುವ ಸರ್ಕಾರಗಳು ಇಂತಹ ಹುತಾತ್ಮರ ಜನನ-ಮರಣ ದಿನಾಚರಣೆಗಳನ್ನು ಇನ್ನಾದರೂ ಆಚರಣೆಗೆ ತರುವ ಮುಖಾಂತರ ಅವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಲಿ ಆ ಮೂಲಕ ಇಂದಿನ ತಲೆಮಾರಿನ ಜನತೆ ಅವರನ್ನು ಸ್ಮರಿಸುವಂತಾಗಲಿ.

ಎಲ್ದೊ ಹೊನ್ನೇಕುಡಿಗೆ
ಎಲ್ದೋ ಹೊನ್ನೇಕುಡಿಗೆ. ಪ್ರಗತಿಪರ ಚಿಂತಕ, ಸಾಮಾಜಿಕ ಕಾರ್ಯಕರ್ತ