ಅಂಬೇಡ್ಕರ್ ವಾದಿಗಳು ಹಿಂದುತ್ವದ ಇಂತಹ ನಡೆಗಳ ವಿರುದ್ಧ ಮೌನವಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಿಂದುತ್ವ ಯಾವ ರೂಪದಲ್ಲಿ, ಯಾವ ಆಕಾರದಲ್ಲಿ ತನ್ನ ಕಬಂಧ ಬಾಹುಗಳನ್ನು ಚಾಚುತ್ತದೋ! ಊಹಿಸುವುದು ಕಷ್ಟ. ಹಿಂದುತ್ವದ ಇಂತಹ ನಡೆಗಳ ವಿರುದ್ಧ ಅಂಬೇಡ್ಕರ್ ವಾದಿಗಳ ನಿರಂತರ ಎಚ್ಚರಿಕೆ ಮತ್ತು ಜಾಗೃತಿಯಿಂದ ಇರಬೇಕಿದೆ.
ಕಳೆದ ಅಕ್ಟೋಬರ್ 27 ಮೈಸೂರಿನಲ್ಲಿ ಹಿಂದುತ್ವವಾದಿಗಳು ಬಾಬಾಸಾಹೇಬ್ ಅಂಬೇಡ್ಕರರ ಚಿಂತನೆಗಳ ಹೆಸರಿನಲ್ಲಿ ಬೆಳಕು ಹೊಳಪು ಎಂಬ ಕಾರ್ಯಕ್ರಮ ಏರ್ಪಡಿಸಿದ್ದರು. ಉದ್ದೇಶ ಎಲ್ಲರಿಗೂ ತಿಳಿದಿರುವುದೇ. ದಲಿತ ಸಮುದಾಯವನ್ನು ವಿಶೇಷವಾಗಿ ಅಂಬೇಡ್ಕರ್ ವಾದಿಗಳನ್ನು ಹಿಂದುತ್ವದೊಳಕ್ಕೆ ಎಳೆದುಕೊಳ್ಳುವ, ಆ ಮೂಲಕ ದಲಿತರನ್ನು ಬಿಜೆಪಿ ವೋಟ್ ಬ್ಯಾಂಕ್ ಆಗಿ ಪರಿವರ್ತಿಸುವ ಮತ ರಾಜಕಾರಣ ಅದು. ಚಕ್ರವರ್ತಿ ಸೂಲಿಬೆಲೆ, ಪ್ರಕಾಶ್ ಬೆಳವಾಡಿ ಇತ್ಯಾದಿ ಸದಾ ಅಂಬೇಡ್ಕರರ ಬಗ್ಗೆ ಸುಳ್ಳು ಅಥವಾ ತಿರುಚಿದ ವಿಚಾರ ಹೇಳುವ ಒಂದು ತಂಡ ಇದರ ಹಿಂದಿತ್ತು. ಹಾಗೆಯೇ ಹಿಂದೆ ಬಹುಜನ ಚಳವಳಿ ಕಟ್ಟಿದ್ದ ಹಾಲಿ ರಾಜ್ಯ ಬಿಜೆಪಿ ಪದಾಧಿಕಾರಿ ಆಗಿರುವ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮತ್ತು ಆತನ ಚಮಚಾಗಳು ಇದ್ದರು ಎಂಬ ಮಾಹಿತಿಯು ಇದೆ. ಈ ನಿಟ್ಟಿನಲ್ಲಿ ಬಾಬಾಸಾಹೇಬ್ ಅಂಬೇಡ್ಕರರ ವಿಚಾರಗಳು ಹಿಂದುತ್ವವನ್ನು ಹೇಗೆ ಹೇಳುತ್ತವೆ ಯಾವ ಧಾಟಿಯಲ್ಲಿ ವಿವರಿಸುತ್ತವೆ ಎಂಬುದರ ಮರು ಪ್ರಸ್ತುತಿ ಇಲ್ಲಿ ಅಗತ್ಯ. ನೇರ ಹೇಳುವುದಾದರೆ ಡಾ.ಅಂಬೇಡ್ಕರ್ ಅವರು ಹಿಂದುತ್ವದ ಕಟು ವಿರೋಧಿಯಾಗಿದ್ದರು. ಯಾವ ರೀತಿ? ಅವರ ಒಂದಷ್ಟು ಬರಹಗಳನ್ನು ಪ್ರಸ್ತಾಪಿಸುವ ಮೂಲಕ ಇದಕ್ಕೆ ಉತ್ತರ ಕಂಡುಕೊಳ್ಳಬಹುದು.
ಮೊದಲಿಗೆ ಅತ್ಯಂತ ಸರಳ ಮತ್ತು ಅಗತ್ಯದ ಅಂಶವಾದ, ಹಿಂದೂಗಳು ಏಕೆ ಅಸ್ಪೃಶ್ಯತೆ ಆಚರಿಸುತ್ತಾರೆ? ಈ ಪ್ರಶ್ನೆಗೆ ಅಂಬೇಡ್ಕರರು ಹೇಳುವ ಉತ್ತರ ಹಾಗೆ ಅಸ್ಪೃಶ್ಯತೆ ಆಚರಿಸುವವರ ಮತ್ತು ಅಂತಹ ಸಿದ್ಧಾಂತವಾದಿಗಳ ವಿಶೇಷವಾಗಿ ಹಿಂದುತ್ವವಾದಿಗಳ ಬೆವರಿಳಿಸುತ್ತದೆ. ಡಾ.ಅಂಬೇಡ್ಕರರು ಹೇಳುತ್ತಾರೆ “ಅಸ್ಪೃಶ್ಯರು ಹಿಂದೂಗಳ ಸಮಾಜಕ್ಕೆ ಸೇರುವುದಿಲ್ಲ. ಹಿಂದೂಗಳೂ ಅಷ್ಟೆ ತಾನು ಮತ್ತು ಅಸ್ಪೃಶ್ಯರು ಇಬ್ಬರು ಒಂದೇ ಸಮಾಜಕ್ಕೆ ಸೇರಿದವರು ಎಂದು ಭಾವಿಸುವುದಿಲ್ಲ. ಈ ನಿಟ್ಟಿನಲ್ಲಿ ಅಸ್ಪೃಶ್ಯರ ಸಮಸ್ಯೆಯ ಬಗ್ಗೆ ಹಿಂದೂಗಳಲ್ಲಿ ನೈತಿಕವಾಗಿಯೂ ನಿರಾಸಕ್ತಿ ಏಕೆ ಕಂಡುಬರುತ್ತದೆ ಎಂಬುದಕ್ಕೆ ಇದೇ ಪ್ರಮುಖ ಕಾರಣ. ಆತ್ಮಸಾಕ್ಷಿ ಇಲ್ಲದ ಕಾರಣ ಹಿಂದೂವೊಬ್ಬನಲ್ಲಿ ಅಸ್ಪೃಶ್ಯರು ಅನುಭವಿಸುವ ಇಂತಹ ನಿರಂತರ ಅನ್ಯಾಯ ಮತ್ತು ಅಸಮಾನತೆಯ ವಿರುದ್ಧ ದನಿ ಎತ್ತುವ ಪ್ರಾಮಾಣಿಕ ಆಕ್ರೋಶ ಕೂಡ ಇರುವುದಿಲ್ಲ. ಒಟ್ಟಾರೆ ಆತ(ಹಿಂದೂ) ಅಸ್ಪೃಶ್ಯರು ಅನುಭವಿಸುವ ಇಂತಹ ಅನ್ಯಾಯ ಮತ್ತು ಅಸಮಾನತೆಯಲ್ಲಿ ಎಳ್ಳಷ್ಟು ತಪ್ಪು ಕಾಣುವುದಿಲ್ಲ. ಅದನ್ನು ಆಚರಿಸುವ ತನ್ನ ನಿಲುವಿನಿಂದ ಕೂಡ ಆತ ಹಿಂದೆ ಸರಿಯುವುದಿಲ್ಲ. ಈ ನಿಟ್ಟಿನಲ್ಲಿ ಆತ್ಮಸಾಕ್ಷಿಯ ಸ್ಪಷ್ಟ ಕೊರತೆಯ ಕಾರಣದಿಂದಾಗಿ ಅಸ್ಪೃಶ್ಯತೆಯನ್ನು ನಿರ್ಮೂಲನೆಗೊಳಿಸುವ ಈ ಹಾದಿಯಲ್ಲಿ ಇರುವ ಅತಿದೊಡ್ಡ ತೊಡಕೆಂದರೆ ಅದು ಹಿಂದೂ ಅಷ್ಟೆ”. (ಡಾ.ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.5, ಪು.99). ಅಂದ ಹಾಗೆ ಡಾ.ಅಂಬೇಡ್ಕರರ ಎಲ್ಲಾ ಬರಹಗಳ ಬುಟ್ಟಿಗೆ ಕೈಹಾಕಿದಾಗ ಸಾಮಾನ್ಯವಾಗಿ ಸಿಗುವ ಬರಹ ಮತ್ತು ಆ ಮಾದರಿಯ ಒಂದು ಹಣ್ಣು ಇದು! ಈ ಹಣ್ಣು ಮತ್ತು ಅದರ ರುಚಿ ಹಿಂದುತ್ವದ ಪರ ಇರುವ ವಿಚಾರವಾಗಿ ಕಾಣುತ್ತದೆಯೇ? ಹಿಂದುತ್ವವಾದಿಗಳು ಉತ್ತರಿಸಬೇಕು.

ಇನ್ನು ತಮ್ಮನ್ನು(ಅಸ್ಪೃಶ್ಯರನ್ನು) ವರ್ಣಾಶ್ರಮದೊಳಕ್ಕೆ ಸೇರಿಸದಿದ್ದರ ಉದ್ದೇಶವನ್ನು ಡಾ.ಅಂಬೇಡ್ಕರರು ಒಂದೆಡೆ ಬಿಡಿಸಿ ಹೇಳುತ್ತಾರೆ. (ಅದೇ ಕೃತಿ, ಪು.100). ಅದನ್ನು ಉಲ್ಲೇಖಿಸುವುದಾದರೆ, “ಮನು ಚಾತುರ್ವರ್ಣವನ್ನು ಪಂಚವರ್ಣವನ್ನಾಗಿ ವಿಸ್ತರಿಸಲು ಸಿದ್ಧನಿರಲಿಲ್ಲ. ಹೀಗೆ ಐದನೆಯ ವರ್ಣ ಇಲ್ಲ ಎನ್ನುವ ಮೂಲಕ, ಆತನ ಈ ಹೇಳಿಕೆಯ ರೂಪದ ಸಲಹೆಯ ಅರ್ಥ ಏನೆಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಆ ನಾಲ್ಕು ವರ್ಣಗಳ ಆಚೆ ಇರುವಂತಹವರನ್ನು ಆತ ಹಿಂದೂ ಸಮಾಜದೊಳಕ್ಕೆ ಸೇರಿಸಲು ಸಿದ್ಧನಿರಲಿಲ್ಲ ಎಂಬುದು! ಈ ಕಾರಣಕ್ಕಾಗಿ ಆತ ಹಾಗೆ ವರ್ಣಗಳ ಆಚೆ ಇರುವವರನ್ನು ‘ಬಾಹ್ಯರು’,‘ “ವರ್ಣಬಾಹ್ಯರು’, ‘ಹೀನರು’,‘ ’ಅಂತ್ಯವಾಸಿಗಳು’ ಎಂದು ಕರೆದ. ಹೀಗೆ ಹೇಳುತ್ತ ಡಾ.ಅಂಬೇಡ್ಕರರು ವ್ಯಂಗ್ಯವಾಗಿ “ಈ ನಿಟ್ಟಿನಲ್ಲಿ ಅಸ್ಪೃಶ್ಯತೆಯನ್ನು ಪೋಷಿಸಿಕೊಂಡು ಬರಲು ಇಚ್ಛಿಸುವ ಸಂಪ್ರದಾಯವಾದಿ ಹಿಂದೂವಿಗೆ ಮನುಸ್ಮೃತಿ ಕೂಡ ಮೋಸ ಮಾಡಿಲ್ಲ!” ಎನ್ನುವರು. ಈ ಹಿನ್ನೆಲೆಯಲ್ಲಿ ಪ್ರಶ್ನೆಯೇನೆಂದರೆ ಹಿಂದೂ ಧರ್ಮದ ಆಧಾರಸ್ತಂಭವಾದ ಚಾತುರ್ವರ್ಣ ಮತ್ತು ಮನುಸ್ಮೃತಿ ವಿಶ್ಲೇಷಣೆ ಕುರಿತಾದ ಡಾ.ಅಂಬೇಡ್ಕರರ ಬರಹದ ಈ ಸಾಲುಗಳು ಹಿಂದುತ್ವದ ಪರವಾಗಿ ಇರುವ ನುಡಿಗಳಾಗಿ ಕಾಣುತ್ತದೆಯೇ ಎಂಬುದು!
ಇನ್ನು ಅಸ್ಪೃಶ್ಯತೆಯ ಕ್ರೂರ ವಾಸ್ತವವನ್ನು ಡಾ.ಅಂಬೇಡ್ಕರರು ನೇರಾನೇರ ಹಿಂದೂಗಳ ದೃಷ್ಟಿಕೋನದಲ್ಲಿ ಬಿಡಿಸುತ್ತಾ, “ಅಸ್ಪೃಶ್ಯತೆಯು ಅಸ್ಪೃಶ್ಯರಿಗೆ ದುರದೃಷ್ಟಕರವಿರಬಹುದು. ಆದರೆ ಅನುಮಾನವೇ ಬೇಡ, ಹಿಂದೂಗಳಿಗೆ ಅದು ಅದೃಷ್ಟಕರ! ಅದು ಕೀಳಾಗಿ ನೋಡಲು ಸಾಧ್ಯವಾಗುವುದಕ್ಕೆ ಅವರಿಗೆ ಒಂದು ವರ್ಗವನ್ನು ಸೃಷ್ಟಿಸಿಕೊಡುತ್ತದೆ. ಅಂತೆಯೇ ಹಿಂದೂಗಳಿಗೆ ಒಂದು ಪದ್ಧತಿ ಬೇಕು. ಆ ಪದ್ಧತಿಯಲ್ಲಿ ಯಾರು ಕೂಡ ಎಲ್ಲವೂ ಆಗಿರಬಾರದು. ಪ್ರತಿಯೊಬ್ಬರು ಕೂಡ ಏನಾದರೊಂದು ಕೂಡ ಆಗಿರಬಾರದು. ಅದಲ್ಲದೆ ಆ ಪದ್ಧತಿಯಲ್ಲಿ ಅವರಿಗೆ ‘ಒಂದಷ್ಟು ಜನರಿರಬೇಕು’ ಮತ್ತು ಉಳಿದವರು ‘ಏನೇನಕ್ಕೂ ಆಗಬಾರದವರಾಗಿರಬೇಕು’. ಇಲ್ಲಿ ‘ಆ ಏನೇನಕ್ಕೂ ಆಗಬಾರದವರೆಂದರೆ ಅದು ಅಸ್ಪೃಶ್ಯರು’ ಮತ್ತು ಇದು ‘ಹಿಂದೂಗಳನ್ನು ಆ ಒಂದಷ್ಟು ಜನರನ್ನಾಗಿ’ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಇದು ಅವರಲ್ಲಿ ಅಹಂ ಭಾವವನ್ನು ಉಂಟುಮಾಡುತ್ತದೆ. ಪರಿಣಾಮ ಹಿಂದೂಗಳಲ್ಲುಂಟಾಗುವ ಇಂತಹ ಸಹಜ ಅಹಂ ಭಾವ ಅಸ್ಪೃಶ್ಯತಾಚರಣೆಯ ಈ ಪದ್ಧತಿಯನ್ನು ಹಾಗೆಯೇ ಉಳಿಸಿಕೊಂಡು ಹೋಗುವ ಮತ್ತು ಅವರನ್ನು ಅಂದರೆ ಹಿಂದುಗಳನ್ನು ತಮಗೆ ತಾವೇ ತಾನು ಇತರರಿಗಿಂತ ದೊಡ್ಡವ ಎಂದುಕೊಳ್ಳುವಂತೆ ಮಾಡುವ ಭಾವ ಸೃಷ್ಟಿ ಮಾಡುತ್ತದೆ. ಈ ನಿಟ್ಟಿನಲ್ಲಿ ಯಾಕೆ ಹಿಂದೂಗಳು ಅಸ್ಪೃಶ್ಯತಾಚರಣೆ ಆಚರಿಸುವುದನ್ನು ಬಿಟ್ಟುಕೊಡಲು ಇಚ್ಛಿಸುವುದಿಲ್ಲ ಎಂಬುದಕ್ಕೆ ಇದೇ ಪ್ರಮುಖ ಕಾರಣ.” (ಡಾ.ಅಂಬೇಡ್ಕರ್ ಬರಹಗಳು, ಇಂಗ್ಲೀಷ್ ಸಂ.5, ಪು.102).
ಅಸ್ಪೃಶ್ಯತೆ ಅದು ಹೇಗೆ ನಿರ್ಮೂಲನೆಯಾಗಬಹುದು ಎಂದು ಹೇಳುತ್ತಾ ಡಾ.ಅಂಬೇಡ್ಕರರು ಕೇಳುವುದು, “ಅಸ್ಪೃಶ್ಯತೆ ಮಾಯವಾಗುತ್ತದೆ. ಅದು ಯಾವಾಗ ಅಂದರೆ, ಹಿಂದೂ ಸಾಮಾಜಿಕ ಶ್ರೇಣೀಕರಣ ವಿಶೇಷವಾಗಿ ಜಾತಿಪದ್ಧತಿ ವಿಸರ್ಜನೆಯಾದಾಗ, ನಾಶವಾದಾಗ. ಪ್ರಶ್ನೆ ಎಂದರೆ ಇದು ಸಾಧ್ಯವೇ?” ಹಾಗೆ ಇದು ಸಾಧ್ಯವಿಲ್ಲ ಎಂದು ಹೇಳುತ್ತಲೇ ಅವರು “ಯಾಕೆಂದರೆ ಜಾತಿಪದ್ಧತಿಗೆ ಇರುವ ಅನುಮೋದನೆ ಅದು ಧಾರ್ಮಿಕ ಅನುಮೋದನೆ. ಹೇಗೆಂದರೆ ವರ್ಣವ್ಯವಸ್ಥೆಯ ನವರೂಪವಾದ ಈ ಜಾತಿ, ಹಿಂದೂಗಳ ಪವಿತ್ರ ಗ್ರಂಥಗಳಾದ, ದೋಷಾತೀತವೆನಿಸಿದ ವೇದಗಳ ಅನುಮೋದನೆ ಪಡೆದಿದೆ. ದುರದೃಷ್ಟಕರವೆಂದರೆ ಯಾವುದೇ ವಿಷಯವಾಗಲಿ ಹೀಗೆ ಅದು ಧಾರ್ಮಿಕತೆಯ ಅನುಮೋದನೆ ಪಡೆದರೆ, ಅದು ಅಂಥ ಅನುಮೋದನೆಯ ಕಾರಣಕ್ಕಾಗಿಯೇ ಪವಿತ್ರವಾಗಿಬಿಡುತ್ತದೆ. ಶಾಶ್ವತದ್ದಾಗಿಬಿಡುತ್ತದೆ. ಆ ಕಾರಣಕ್ಕಾಗಿ ಹಿಂದೂಗಳಿಗೆ ಜಾತಿ ಎಂದರೆ ಪವಿತ್ರ, ಜಾತಿ ಎಂದರೆ ಶಾಶ್ವತ”. ಹೀಗಿರುವಾಗ ಇಂಥ ಪವಿತ್ರ ಪದ್ಧತಿಯನ್ನು, ಹಿಂದೂ ಧರ್ಮದ ಆಧಾರ ಸ್ತಂಭವಾಗಿರುವ ಈ ಜಾತಿವ್ಯವಸ್ಥೆಯನ್ನು ಹಿಂದೂಗಳು ನಾಶಗೊಳಿಸುವರೇ? ಪ್ರಾಕ್ಟಿಕಲ್ ಆಗಿ ಅಂಬೇಡ್ಕರರು ಕೇಳುವ ಈ ಪ್ರಶ್ನೆ ಇದು.
ಪ್ರಶ್ನೆಯೇನೆಂದರೆ ಡಾ.ಅಂಬೇಡ್ಕರರು ಕೇಳುವ ಈ ಪ್ರಶ್ನೆ ಅದ್ಯಾವ ದೃಷ್ಟಿಕೋನದಲ್ಲಿ ಹಿಂದುತ್ವವಾದಿಗಳು ಮೆಚ್ಚುವ ವಿಚಾರವಾಗುತ್ತದೆ? ಅಂತಿಮವಾಗಿ ಡಾ.ಅಂಬೇಡ್ಕರರು ಹೇಳುತ್ತಾರೆ, ‘ಫ್ಯಾಸಿಸ್ಟ್ ಮತ್ತು ಅಥವಾ ನಾಝಿ ಸಿದ್ಧಾಂತದ ಲಕ್ಷಣದಂತೆಯೇ ಹಿಂದುತ್ವ ಕೂಡ ಒಂದು ರಾಜಕೀಯ ಸಿದ್ಧಾಂತ. ಎಲ್ಲಕ್ಕಿಂತ ಹೆಚ್ಚಾಗಿ ಅದು ಪ್ರಜಾಪ್ರಭುತ್ವ ವಿರೋಧಿ’ (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.17, ಭಾಗ.1, ಪು.346). ಅಂದಹಾಗೆ ಪ್ರಜಾಪ್ರಭುತ್ವ ವಿರೋಧಿ ಈ ಚಿಂತನೆಯ ಉದ್ದೇಶವಾದರೂ ಏನಿರುತ್ತದೆ? ವಿರೋಧಿಗಳನ್ನು ಬಗ್ಗುಬಡಿಯುವುದು. ಬಗ್ಗು ಬಡಿಯುವುದು ಅದು ಹೇಗೆ? ವಿರೋಧಿಗಳನ್ನು ಒಳಕ್ಕೆಳೆದುಕೊಳ್ಳುವುದು ಅಥವಾ ಅವರ ವಿಚಾರಗಳು ಮತ್ತು ನಮ್ಮ ವಿಚಾರಗಳು ಎರಡೂ ಒಂದೇ ಎಂದುಬಿಡುವುದು! ತನ್ಮೂಲಕ ಡಾ.ಅಂಬೇಡ್ಕರರ ಅದಮ್ಯ ವಿಚಾರಗಳ ಪ್ರಸ್ತುತತೆಯನ್ನು, ಅದರಿಂದ ಉಂಟಾಗಬಹುದಾದ ವೈಚಾರಿಕ ವಿಪ್ಲವವನ್ನು ಇನ್ನಿಲ್ಲವಾಗಿಸುವುದು! ಈ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್ 27 ರಂದು ಮೈಸೂರಿನಲ್ಲಿ ನಡೆದ ಹಿಂದುತ್ವವಾದಿಗಳ ಡಾ.ಅಂಬೇಡ್ಕರರ ಕುರಿತಾದ ಬೆಳಕು ಹೊಳಪು ವಿಚಾರಸಂಕಿರಣದ ‘ಸದುದ್ದೇಶ’ ಇದಿಷ್ಟೇ ಆಗಿತ್ತು.
ಇದನ್ನೂ ಓದಿ ಶಿಗ್ಗಾಂವಿ ಚುನಾವಣೆ | ಸೋಲಲು ನಿರ್ಧರಿಸಿದೆ ಕಾಂಗ್ರೆಸ್; ಗೆಲ್ಲುವ ಹಠದಲ್ಲಿ ಸತೀಶ್
ಮುಂದುವರಿದು ಪ್ರಶ್ನಿಸುವುದಾದರೆ, ಹಿಂದುತ್ವವಾದಿಗಳ ಇಂತಹ ಉದ್ದೇಶ ಅದು ಯಶ ಕಾಣುತ್ತದೆಯೇ? ಅಥವಾ ಡಾ.ಅಂಬೇಡ್ಕರರ ವಿಚಾರಗಳು ಅವರು ವಶಪಡಿಸಿಕೊಳ್ಳುವಷ್ಟು ದುರ್ಬಲವೇ? ಖಂಡಿತ ಇಲ್ಲ. ಆದರೆ ಅಂಬೇಡ್ಕರ್ ವಾದಿಗಳು ಹಿಂದುತ್ವದ ಇಂತಹ ನಡೆಗಳ ವಿರುದ್ಧ ಮೌನವಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಿಂದುತ್ವ ಯಾವ ರೂಪದಲ್ಲಿ ಯಾವ ಆಕಾರದಲ್ಲಿ ತನ್ನ ಕಬಂಧ ಬಾಹುಗಳನ್ನು ಚಾಚುತ್ತದೋ! ಊಹಿಸುವುದು ಕಷ್ಟ. ಆಗಬೇಕಾದ್ದೆಂದರೆ ಹಿಂದುತ್ವದ ಇಂತಹ ನಡೆಗಳ ವಿರುದ್ಧ ಅಂಬೇಡ್ಕರ್ ವಾದಿಗಳ ನಿರಂತರ ಎಚ್ಚರಿಕೆ ಮತ್ತು ಜಾಗೃತಿ. ಇಂತಹ ಜಾಗೃತಿ ಮೂಡಿಸದೇ ಮೈ ಮರೆತರೆ ಅಂಬೇಡ್ಕರ್ ವಾದಿಗಳು ಮತ್ತು ಈ ದೇಶದ ಶೋಷಿತ ಸಮುದಾಯಗಳ ಭವಿಷ್ಯ ಅಕ್ಷರಶಃ ಗಂಡಾಂತರಕ್ಕೆ ಸಿಲುಕುತ್ತದೆ. ಹಾಗಾಗದಿರಲಿ. ದಲಿತ ಸಮುದಾಯ ಮತ್ತು ಬಾಬಾಸಾಹೇಬ್ ಅಂಬೇಡ್ಕರರ ಅನುಯಾಯಿಗಳು ಎಚ್ಚೆತ್ತುಕೊಳ್ಳಲಿ ಎಂಬುದೇ ಕಳಕಳಿ.
ಮನುವ್ಯಾದಿಗಳು ಅಂಬೇಡ್ಕರ್ ಹಿಂದೆ ಬಿದ್ದಿರುವುದು,, ತಮ್ಮ ಗುಪ್ತ ಕಾರ್ಯಸೂಚಿ ಭಾಗವಾಗಿ,,ದಲಿತರ ಶಕ್ತಿಯನ್ನು ಒಡೆದು ಚೂರು ಚೂರು ಮಾಡಿ ಅವರನ್ನು ಖಾಯಂ ಆಗಿ ಪುರೋಹಿತರ ಗುಲಾಮಗಿರಿಯಲ್ಲಿ ಹಿಡಿದಿಟ್ಟುಕೊಳ್ಳುವ ಕುತಂತ್ರವೇ ಬೇರೇನೂ ಅಲ್ಲ,, ಪುಂಗ್ಲಿ ಬೆಳವಾಡಿ ಅಂಬೇಡ್ಕರ್ ಬಗ್ಗೆ ವ್ಯಾಖ್ಯಾನ ಮಾಡುವುದೇ ಒಂದು ಆತಂಕಕಾರಿ ಬೆಳವಣಿಗೆ
ಕಾನಿಷ್ಕ ಮೈಸೂರು ರವರು ಒಂದು ಉತ್ತಮ ಲೇಖನವನ್ನೂ ಬರೆದಿದ್ದಾರೆ; ಹಾಗೆಯೇ ಮಹಾ ಪುಸ್ತಕ ಪ್ರೇಮಿ ಹಾಗೂ ಜ್ಞಾನ ದಾಹಿ ಓದುಗರಿಗಾಗಿದ್ದ ಅಂಬೇಡ್ಕರ್ ರವರ ಒಂದೆರಡು ಅದ್ಭುತ ಒಳನೋಟಗಳನ್ನು ನೆನಪು ಮಾಡುತ್ತಿದ್ದಾರೆ.
ಜೈ ಭೀಮ್.
ಇಂದಿನ ಯುವ ದಲಿತ ಜನರಾದ ನಾವುಗಳು ಬಹಳ ಎಚ್ಚರದಿಂದಿದ್ದೇವೆ; ಭಾರತದ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳಿಂದ ೨೧ನೇ ಶತಮಾನದ ಆಧುನಿಕ ಕಾಲದಲ್ಲೂ ನಮ್ಮನ್ನು ಮನುಸ್ಮೃತಿ ಆಳುತ್ತಿದೆ, ಮತ್ತು ಹಾಳುಮಾಡುತ್ತಿದೆ. ಮನುಸ್ಮೃತಿ ಪೋಷಕರು ನಿಧಾನವಾಗಿ ಮತ್ತೆ ನಮ್ಮನ್ನು ಹಾಳುಮಾಡಲು ಯತ್ನಿಸುತ್ತಿರುವುದು ಎದ್ದು ಕಾಣುತ್ತಿದೆ. ಆದರೆ ನಾವು ಹಿಂಧೂ ಹಿಂಧೂ ಎಂದು ಹೇಳಿಕೊಂಡು ಮನುಸ್ಮೃತಿಯಲ್ಲಿ ಶೂದ್ರರೆನಿಸಿಕೊಂಡು ಅವರ ತುಳಿತಕ್ಕೆ ಬೆನ್ನು ಕೊಟ್ಟವರಿಗಿದು ಏಕೆ ಅರ್ಥವಾಗುತ್ತಿಲ್ಲ? ಇಂತಹ ಹೊಲಸು ರಾಜಕಾರಣಿಗಳ ಮುಖವಾಡ ತಿಳಿಯದೆ ಪೋಷಿಸುತ್ತಿರುವವರು ನಿಜವಾಗಿಯೂ ನಾವು ಹಿಂಧೂಗಳೇ? ನಮ್ಮ ಧರ್ಮ ಮಾನವ ಧರ್ಮವಾಗಬೇಕು, ನಮ್ಮ ಭಕ್ತಿ ದೇಶ ಭಕ್ತಿಯಾಗಬೇಕು ದೇವರ ಭಕ್ತಿಯಾಗಬಾರದು! ದೇಶದ ಪ್ರಜಾಪ್ರಭುತ್ವ, ಸಾರ್ವಭೌಮತ್ವವನ್ನು ಸಾರುವ ನಮ್ಮ ಸಂವಿಧಾನ ಉಳಿಯಬೇಕು ಇಲ್ಲವಾದರೆ ಭಾರತ ದೇಶ ಬ್ರಿಟೀಷರ ವಶವಾದಂತೆ ಮನುವಾದಿಗಳ ವಶವಾಗುವುದು.
“ಸಂವಿಧಾನ ವುಳಿಸಿ”