ಅದಾನಿ ವ್ಯಾಪಾರೋದ್ಯಮ ಸಾಮ್ರಾಜ್ಯ ವಿಸ್ತರಣೆಗೆ ಮೋದಿ ಸಕ್ರಿಯ ಸಹಕಾರ; ಇಲ್ಲಿದೆ ಸಂಪೂರ್ಣ ವಿವರ

Date:

Advertisements

2014ರಲ್ಲಿ ಮೋದಿಯವರು ಪ್ರಧಾನಿ ಆಗುವ ತನಕ ಹೊರದೇಶಗಳಲ್ಲಿನ ಅದಾನಿ ಯೋಜನೆಗಳು ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಿಲ ಗಣಿಗಾರಿಕೆಗಷ್ಟೇ ಸೀಮಿತವಾಗಿದ್ದವು. ಇದೀಗ ಏಷ್ಯಾದಿಂದ ಆಫ್ರಿಕಾದವರೆಗೆ ವ್ಯಾಪಕ ಶ್ರೇಣಿಯ ಮೂಲಸೌಲಭ್ಯ ಯೋಜನೆಗಳು ಅದಾನಿ ಪಾಲಾಗಿವೆ.

ಹೊರದೇಶಗಳಲ್ಲಿಯೂ ವಿಮಾನ ನಿಲ್ದಾಣಗಳನ್ನು ವಹಿಸಿಕೊಂಡು ನಡೆಸುವ ಅದಾನಿ ಗ್ರೂಪ್ ನ ಸನ್ನಾಹಗಳಿಗೆ ದೊಡ್ಡ ಹಿನ್ನಡೆಯಾಗಿದೆ. ನೈರೋಬಿಯ ವಿಮಾನ ನಿಲ್ದಾಣವನ್ನು 30 ವರ್ಷಗಳ ಕಾಲ ನಡೆಸುವ ಹಕ್ಕುಗಳ ಅದಾನಿ ಪ್ರಸ್ತಾವವೊಂದನ್ನು ಕೆನ್ಯಾ ದೇಶದ ಹೈಕೋರ್ಟ್ ಅಮಾನತುಗೊಳಿಸಿದೆ. ಪೂರ್ವ ಆಫ್ರಿಕೆಯ ಕೆನ್ಯಾ ದೇಶದ ರಾಜಧಾನಿ ನೈರೋಬಿ.  

ಹೊರದೇಶಗಳಲ್ಲಿನ ಬಹುತೇಕ ಅದಾನಿ ಯೋಜನೆಗಳಲ್ಲಿ ನಿಗದಿತ ನಮೂನೆಯೊಂದನ್ನು ಗುರುತಿಸಬಹುದು. ಪ್ರಧಾನಿಯ ಹೆಜ್ಜೆಗುರುತುಗಳಲ್ಲೇ ಹೆಜ್ಜೆಯಿರಿಸಿ ಮುನ್ನಡೆದು ಯೋಜನೆಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತದೆ ಅದಾನಿ ಉದ್ಯಮ ಸಮೂಹ.  ಪ್ರಧಾನಿ ನರೇಂದ್ರ ಮೋದಿಯವರು ಆಯಾ ದೇಶಗಳಿಗೆ ಭೇಟಿ ನೀಡಿರುತ್ತಾರೆ ಇಲ್ಲವೇ ಆಯಾ ದೇಶಗಳ ಮುಖ್ಯಸ್ಥರನ್ನು ಭೇಟಿ ಮಾಡಿರುತ್ತಾರೆ. ಆನಂತರ ತಿಂಗಳುಗಳ ಒಳಗಾಗಿ ಯೋಜನೆಗಳು ಅದಾನಿ ಕೈವಶ ಆಗಿರುತ್ತವೆ. ಈ ದೇಶಗಳು ನಮ್ಮದೇ ನೆರೆಹೊರೆ ಆಗಿರಬಹುದು ಇಲ್ಲವೇ ದೂರದೇಶಗಳೇ ಇದ್ದಿರಬಹುದು.

scroll.in ಸುದ್ದಿ ಜಾಲತಾಣ ಈ ನಮೂನೆಯನ್ನು ಗುರುತಿಸಿ ವಿಶ್ಲೇಷಿಸಿದೆ.
ಉದಾಹರಣೆಗೆ ಕೆನ್ಯಾದ ಪ್ರಧಾನಮಂತ್ರಿ 2023ರ ಡಿಸೆಂಬರ್ ತಿಂಗಳಿನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಮೂರು ತಿಂಗಳ ನಂತರ ಮಾರ್ಚ್ ನಲ್ಲಿ ನೈರೋಬಿ ವಿಮಾನನಿಲ್ದಾಣವನ್ನು ವಿಸ್ತರಿಸಿ ಮೇಲ್ದರ್ಜೆಗೇರಿಸಿ ನಡೆಸುವ ಪ್ರಸ್ತಾವವನ್ನು ಅದಾನಿ ಕಂಪನಿ ಸಲ್ಲಿಸಿತು. ಅಲ್ಲಿಂದ ಮೂರು ತಿಂಗಳೊಳಗಾಗಿ 2024ರ ಜೂನ್ ನಲ್ಲಿ ಕೆನ್ಯಾ ಸರ್ಕಾರ ತನ್ನ ವಿಮಾನಯಾನ ನೀತಿಯನ್ನೇ ಬದಲಿಸಿ ಅದಾನಿ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಿತು.

adani power line

ಸಂಬಂಧಿತ ದಾಖಲೆ ದಸ್ತಾವೇಜುಗಳು ಬಯಲಿಗೆ ಬಿದ್ದ ನಂತರ ಕೆನ್ಯಾದ ಮಾನವ ಹಕ್ಕುಗಳ ಆಯೋಗ ಮತ್ತು ಆ ದೇಶದ ವಕೀಲರ ಸಂಘ (ಬಾರ್ ಅಸೋಸಿಯೇಷನ್) ಕಾನೂನು ಸಮರ ಸಾರಿದವು. ಲಾಭದಾಯಕವಾಗಿ ನಡೆಯುತ್ತಿರುವ ಆಯಕಟ್ಟಿನ ರಾಷ್ಟ್ರೀಯ ವಿಮಾನ ನಿಲ್ದಾಣವೊಂದನ್ನು ಮೂವತ್ತು ವರ್ಷಗಳ ಕಾಲ ಖಾಸಗಿಯವರಿಗೆ ಯಾವುದೇ ಸ್ಪರ್ಧಾತ್ಮಕ ಟೆಂಡರ್ ಇಲ್ಲದೆ ಗುಟ್ಟುಗುಟ್ಟಾಗಿ ಗುತ್ತಿಗೆ ನೀಡುವುದಕ್ಕೆ ಅರ್ಥವೇ ಇಲ್ಲ ಎಂದು ವಾದಿಸಿದವು. ಉದ್ದೇಶಿತ ಪ್ರಸ್ತಾವವನ್ನು ಇದೇ ಸೆ.9ರಂದು ಕೆನ್ಯಾದ ಹೈಕೋರ್ಟು ಹಂಗಾಮಿಯಾಗಿ ತಡೆ ಹಿಡಿದಿದೆ.

ಕೆನ್ಯಾ ದೇಶದ ಸಂಸತ್ತಿನಲ್ಲಿ ಈ ಕುರಿತು ಪ್ರಶ್ನೆಗಳೆದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಯ ಪ್ರವಾಹ ಉಕ್ಕಿತು. ವಿಮಾನನಿಲ್ದಾಣ ನಡೆಸಲು ಅದಾನಿ ಗುಂಪಿಗೆ ಯಾವುದೇ ಗುತ್ತಿಗೆಯನ್ನು ನೀಡಲಾಗಿಲ್ಲ. ಆದರೆ ಕೆನ್ಯಾದಲ್ಲಿ ಹೈವೋಲ್ಟೇಜ್ ವಿದ್ಯುತ್ ಲೈನುಗಳನ್ನು ನಿರ್ಮಿಸಲು 1.3 ಶತಕೋಟಿ ಡಾಲರುಗಳಷ್ಟು (ಸುಮಾರು 130 ಕೋಟಿ ರುಪಾಯಿ) ಮೌಲ್ಯದ ರಿಯಾಯಿತಿಗಳನ್ನು ನೀಡಲಾಗಿದೆ ಎಂದು ಕೆನ್ಯಾ ಸರ್ಕಾರ ಹೇಳಿತು.

Advertisements

ನೆರೆಯ ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಹೊಸ ಹಂಗಾಮಿ ಸರ್ಕಾರ ಕೂಡ ಅದಾನಿ ಕಂಪನಿಯಿಂದ ವಿದ್ಯುತ್ ಖರೀದಿಯ ಒಪ್ಪಂದವನ್ನು ಪುನರ್ ಪರಿಶೀಲಿಸಲು ಹೊರಟಿದೆ. ಈ ಪ್ರಕಟಣೆಯ ಬೆನ್ನಿನಲ್ಲೇ ಕೆನ್ಯಾ ದೇಶದಲ್ಲಿ ಅದಾನಿ ವಿರುದ್ಧ ಕ್ಷೋಭೆ ಎದ್ದಿದೆ. ಶೇಖ್ ಹಸೀನಾ ಸರ್ಕಾರದೊಂದಿಗೆ ನಡೆದಿದ್ದ ವಿದ್ಯುತ್ ಖರೀದಿ ಒಪ್ಪಂದವು ಅದಾನಿ ಕಂಪನಿಯ ಪರವಾಗಿ ವಾಲಿತ್ತು. ಈ ಒಪ್ಪಂದ ಕೂಡ ಮೋದಿಯವರ ರಾಯಭಾರದ ನಂತರವೇ ಜರುಗಿತ್ತು.

2015ರ ಜೂನ್ ತಿಂಗಳಿನಲ್ಲಿ ಪ್ರಧಾನಿ ಮೋದಿ ಢಾಕಾಗೆ ಭೇಟಿ ನೀಡಿದ್ದರು. ಬಾಂಗ್ಲಾದೇಶದ ವಿದ್ಯುತ್ ಅಗತ್ಯಗಳ ಪೂರೈಕೆಯಲ್ಲಿ ಭಾರತ ದೊಡ್ಡ ಪಾಲುದಾರಿಕೆ ವಹಿಸಬಹುದು ಎಂದು ಸಾರಿದ್ದರು. ಎರಡೇ ತಿಂಗಳ ನಂತರ ಝಾರ್ಖಂಡ್‌ನ ತಮ್ಮ ವಿದ್ಯುತ್ ಸ್ಥಾವರದಿಂದ ಬಾಂಗ್ಲಾದೇಶಕ್ಕೆ ವಿದ್ಯುಚ್ಛಕ್ತಿ ಪೂರೈಸುವ ಒಪ್ಪಂದ ಜ್ಞಾಪನಾ ಪತ್ರಕ್ಕೆ ಸಹಿ ಮಾಡಿದ್ದರು ಅದಾನಿ. ಆದರೆ ಒಪ್ಪಂದ ಜಾರಿ ಆಗಿದ್ದು ಶೇಖ್ ಹಸೀನಾ ಅವರು 2017ರ ಏಪ್ರಿಲ್ ನಲ್ಲಿ ನವದೆಹಲಿಗೆ ಭೇಟಿ ನೀಡಿದ ನಂತರ.

ಮೋದಿ ಒತ್ತಡದ ಮೇರೆಗೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಬಾಂಗ್ಲಾದೇಶದ ಪ್ರತಿಪಕ್ಷವು ವರ್ಷಗಳವರೆಗೆ ಸತತ ಆರೋಪ ಮಾಡಿತ್ತು. ಇದೀಗ ಆ ದೇಶದ ಸರ್ಕಾರ ಬದಲಾಗಿದೆ. ಅದಾನಿ ಜೊತೆಗಿನ ಒಪ್ಪಂದ ಮುರಿದು ಬೀಳುವ ಸಾಧ್ಯತೆಯಿದೆ. ಬಾಂಗ್ಲಾದೇಶದ ಸರ್ಕಾರ ನಮ್ಮ ವಿದ್ಯುಚ್ಛಕ್ತಿ ಖರೀದಿ ಒಪ್ಪಂದವನ್ನು ಮರು ಪರಿಶೀಲಿಸುತ್ತಿರುವ ಯಾವುದೇ ಸುಳಿವು ನಮಗೆ ದೊರೆತಿಲ್ಲ. ದೊಡ್ಡ ಮೊತ್ತದ ಬಾಕಿಯನ್ನು ಉಳಿಸಿಕೊಂಡಿದ್ದರೂ ಭಾಗೀದಾರಿಕೆಯ ಭಾವನೆಯಿಂದಾಗಿ ಬಾಂಗ್ಲಾ ದೇಶಕ್ಕೆ ವಿದ್ಯುಚ್ಛಕ್ತಿ ಪೂರೈಕೆಯನ್ನು ಮುಂದುವರೆಸಿದ್ದೇವೆ ಎಂದು ಅದಾನಿ ಗುಂಪಿನ ವಕ್ತಾರರೊಬ್ಬರು ಸ್ಕ್ರೋಲ್ ಜಾಲತಾಣದ ಸುಪ್ರಿಯಾ ಶರ್ಮಾ ಮತ್ತು ಆಯುಷ್ ತಿವಾರಿ ಅವರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಕೆನ್ಯಾ ದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಈ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೋದಿಯವರ ರಾಯಭಾರವು ಹೊರದೇಶಗಳಲ್ಲಿ ಅದಾನಿ ವ್ಯಾಪಾರ-ಉದ್ಯಮಗಳ ಹಿತಾಸಕ್ತಿಯನ್ನು ಕಾಯುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಗಳಿಗೂ ಉತ್ತರ ನೀಡಿಲ್ಲ.

2014ರಲ್ಲಿ ಮೋದಿಯವರು ಪ್ರಧಾನಿ ಆಗುವ ತನಕ ಹೊರದೇಶಗಳಲ್ಲಿನ ಅದಾನಿ ಯೋಜನೆಗಳು ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಗಣಿಗಾರಿಕೆಗಷ್ಟೇ ಸೀಮಿತವಾಗಿದ್ದವು. ಇದೀಗ ಏಷ್ಯಾದಿಂದ ಆಫ್ರಿಕಾದವರೆಗೆ ವ್ಯಾಪಕ ಶ್ರೇಣಿಯ ಮೂಲಸೌಲಭ್ಯ ಯೋಜನೆಗಳು ಅದಾನಿ ಪಾಲಾಗಿವೆ.

Rajapakse
ಗೋಟಬ್ಯಾ ರಾಜಪಕ್ಸ

ದಕ್ಷಿಣ ಏಷ್ಯಾದಲ್ಲಿ ಅದಾನಿ ಯೋಜನೆಗಳ ಕುರಿತ ವಿವಾದ ಬಾಂಗ್ಲಾಕ್ಕೆ ಮಾತ್ರವೇ ಸೀಮಿತವಲ್ಲ. ಗಾಳಿವಿದ್ಯುತ್ ಉತ್ಪಾದನೆ ಯೋಜನೆಯೊಂದನ್ನು ಅದಾನಿ ಕಂಪನಿಗೆ ನೀಡುವಂತೆ ಮೋದಿಯವರು ಶ್ರೀಲಂಕೆಯ ಮೇಲೆ ಒತ್ತಡ ಹೇರಿದ್ದರೆಂದು ವರದಿಯಾಗಿದೆ. 2021ರ ನವೆಂಬರ್‌ನಲ್ಲಿ ಶ್ರೀಲಂಕೆಯ ಅಂದಿನ ಅಧ್ಯಕ್ಷ ಗೋಟಬ್ಯಾ ರಾಜಪಕ್ಸ ಅವರು ತಮಗೆ ತಿಳಿಸಿದ್ದರೆಂದು ಶ್ರೀಲಂಕಾ ವಿದ್ಯುಚ್ಛಕ್ತಿ ಮಂಡಳಿಯ ಅಧಿಕಾರಿಯೊಬ್ಬರು ಆ ದೇಶದ ಸಂಸದೀಯ ಸಮಿತಿಯ ಮುಂದೆ ಸಾಕ್ಷ್ಯ ನುಡಿದಿದ್ದರು. ಗ್ಲ್ಯಾಸ್ಗೋದ ಪರ್ಯಾವರಣ ಬದಲಾವಣೆ ಸಮಾವೇಶದ ಸಂದರ್ಭದಲ್ಲಿ ರಾಜಪಕ್ಸ ಮೋದಿಯವರನ್ನು ಭೇಟಿಯಾದ ಕೆಲವೇ ದಿನಗಳಲ್ಲಿ ಈ ಸಾಕ್ಷ್ಯದ ವಿವರಗಳು ವರದಿಯಾಗಿದ್ದವು. ತಿಂಗಳುಗಳ ನಂತರ ಕೊಲಂಬೋ ಬಂದರಿನ ಪೂರ್ವ ಕಂಟೇನರ್ ಟರ್ಮಿನಲ್ ನಿರ್ವಹಣೆಯನ್ನು ಅದಾನಿ ಕಂಪನಿಗೆ ಒಪ್ಪಿಸುವ ಸಾಧ್ಯತೆ ಹೊರಬಿದ್ದಿತ್ತು. ಕಾರ್ಮಿಕ ಸಂಘಟನೆಗಳು ಮತ್ತು ಬೌದ್ಧ ಧರ್ಮಗುರುವಿನ ಪ್ರತಿಭಟನೆಗಳ ನಂತರ ಶ್ರೀಲಂಕಾ ಸರ್ಕಾರ ಈ ಒಪ್ಪಂದದಿಂದ ಹಿಂದೆ ಸರಿಯಿತು. ಅದರೆ ಅದೇ ಬಂದರಿನ ಮತ್ತೊಂದು ಟರ್ಮಿನಲ್ ನಿರ್ವಹಣೆಯ ಹಕ್ಕುಗಳು ಅದಾನಿ ಕಂಪನಿಯ ವಶವಾದವು.

ಈ ವರ್ಷ ನೇಪಾಳದ ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳನ್ನು ವಹಿಸಿಕೊಳ್ಳುವ ಕುರಿತು ಅದಾನಿ ಕಂಪನಿ ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ. ಚೀನೀ ಸಾಲಗಳ ನೆರವಿನಿಂದ ನಿರ್ಮಿಸಲಾಗಿರುವ ಪೋಖರ ಮತ್ತು ಭೈರಾಹವಾ ವಿಮಾನ ನಿಲ್ದಾಣಗಳು ಈವರೆಗೆ ಆರ್ಥಿಕವಾಗಿ ಕಾರ್ಯಸಾಧು ಆಗಿಲ್ಲ. ಜೆಟ್ ವಿಮಾನಗಳಿಗೆ ಅತಿ ಎತ್ತರದ ವಾಯು ಮಾರ್ಗಗಳನ್ನು ಭಾರತ ಈವರೆಗೆ ತೆರೆಯದೆ ಇರುವುದೇ ಇದಕ್ಕೆ ಕಾರಣ. ನೇಪಾಳದ ಪ್ರಧಾನಿಯವರು 2023ರ ಜೂನ್ ತಿಂಗಳಿನಲ್ಲಿ ಮೋದಿಯವರೊಡನೆ ಈ ವಿಚಾರ ಪ್ರಸ್ತಾಪಿಸಿದ್ದರು. ಈ ಭೇಟಿಯ ಬೆನ್ನಲ್ಲೇ ಅದಾನಿ ಕಂಪನಿಯ ಅಧಿಕಾರಿಗಳು ನೇಪಾಳದ ನಾಗರಿಕ ವಿಮಾನಯಾನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲು ಕಾಠ್ಮಂಡುವಿಗೆ ತೆರಳಿದ್ದರು. ನೇಪಾಳದ ಅರ್ಥಮಂತ್ರಿಯೇ ಈ ಸಂಗತಿಯನ್ನು ತಿಳಿಸಿದ್ದರು. ದಕ್ಷಿಣ ಏಷ್ಯಾದ ಹೊರಗೂ ಅದಾನಿ ಉದ್ಯಮ ಸಾಮ್ರಾಜ್ಯ ವಿಸ್ತರಣೆಯು ಮೋದಿ ರಾಯಭಾರದ ಬಾಲಂಗೋಚಿ.

2017ರ ಮಾರ್ಚ್ ತಿಂಗಳಲ್ಲಿ ಮಲೇಷ್ಯಾದ ಪ್ರಧಾನಮಂತ್ರಿಯವರು ಮೋದಿಯವರ ಆಹ್ವಾನದ ಮೇರೆಗೆ ನವದೆಹಲಿಗೆ ಭೇಟಿ ನೀಡಿದ್ದರು. ಭಾರತೀಯ ಉದ್ಯಮ ಕಂಪನಿಗಳಿಗೆ ಮಲೇಷ್ಯಾದಲ್ಲಿ ಹೂಡಿಕೆಯ ಅವಕಾಶಗಳು ಮತ್ತು ಉಭಯ ದೇಶಗಳ ನಡುವಣ ಆರ್ಥಿಕ ಸಂಬಂಧಗಳ ಸುಧಾರಣೆ ಕುರಿತು ಮಾತುಕತೆ ನಡೆಯಿತು. ತಿಂಗಳ ನಂತರ ಮಲೇಷ್ಯಾದ ಕೇರಿ ದ್ವೀಪದಲ್ಲಿ ಬೃಹತ್ ಕಂಟೇನರ್ ಪೋರ್ಟ್ ಪ್ರಾಜೆಕ್ಟನ್ನು ನಿರ್ಮಿಸುವ ಒಪ್ಪಂದವೊಂದಕ್ಕೆ ಅದಾನಿ ಗ್ರೂಪ್‌ ಸಹಿ ಹಾಕಿತು.

2018ರ ಜೂನ್ ತಿಂಗಳಿನಲ್ಲಿ ಮೋದಿಯವರು ಸಿಂಗಪುರಕ್ಕೆ ತೆರಳಿ ಅಲ್ಲಿನ ಪ್ರಧಾನಿಯನ್ನು ಭೇಟಿ ಮಾಡಿದರು. ತಿಂಗಳ ನಂತರ ಅಲ್ಲಿನ ಸರ್ಕಾರಿ ಒಡೆತನದ ಉದ್ಯಮವಾದ ಟೆಮಾಸೆಕ್ ಅದಾನಿ ಬಂದರುಗಳಲ್ಲಿ 10 ಸಾವಿರ ಕೋಟಿ ರುಪಾಯಿಗಳ ಬಂಡವಾಳ ಹೂಡಿತು.

Samiha suluha
ತಾಂಜಾನಿಯಾ ಅಧ್ಯಕ್ಷೆ ಸಮಿಹಾ ಸುಲುಹ ಜೊತೆ ಮೋದಿ

2023ರ ಅಕ್ಟೋಬರ್ ನಲ್ಲಿ ತಾಂಜಾನಿಯಾದ ಅಧ್ಯಕ್ಷೆ ಸಮಿಹಾ ಸುಲುಹ ಅವರು ಭಾರತಕ್ಕೆ ಭೇಟಿ ನೀಡಿ ಮೋದಿಯವರೊಂದಿಗೆ ಮಾತುಕತೆ ನಡೆಸಿದರು. ಎಂಟು ತಿಂಗಳ ನಂತರ 2014ರ ಮೇ ತಿಂಗಳಲ್ಲಿ ತಾಂಜಾನಿಯಾದ ದಾರ್ ಎಸ್ ಸಲಾಮ್ ಬಂದರು ನಿರ್ವಹಣೆಯ 30 ವರ್ಷಗಳ ಅವಧಿಯ ರಿಯಾಯಿತಿ ಒಪ್ಪಂದಕ್ಕೆ ಅದಾನಿ ಗುಂಪು ಅಂಕಿತ ಹಾಕಿತು. ಅಬುಧಾಬಿಯ ಎ.ಡಿ.ಪೋರ್ಟ್ಸ್ ಗ್ರೂಪ್ ಜೊತೆಗೆ ಕೈ ಜೋಡಿಸಿ ಟರ್ಮಿನಲ್ ಸೇವೆಗಳನ್ನು ಒದಗಿಸುವ ಒಪ್ಪಂದವನ್ನೂ ಮಾಡಿಕೊಂಡಿತು. ಎ.ಡಿ. ಪೋರ್ಟ್ಸ್ ಕಂಪನಿಯ ಶೇ.95ರಷ್ಟು ಶೇರು ಬಂಡವಾಳವನ್ನು ಖರೀದಿಸಿತು.

ಇತ್ತೀಚೆಗೆ 2024ರ ಜುಲೈ-ಆಗಸ್ಟ್‌ನಲ್ಲಿ ವಿಯೆಟ್ನಾಮ್ ದೇಶದ ಪ್ರಧಾನಿ ದೆಹಲಿಗೆ ಬಂದಿದ್ದರು. ಮೋದಿಯವರನ್ನು ಭೇಟಿಯಾದ ದಿನವೇ ಗೌತಮ್ ಅದಾನಿಯವರನ್ನೂ ಭೇಟಿಯಾಗಿದ್ದರು. ವಿಯೆಟ್ನಾಮಿನ ಎರಡು ವಿಮಾನನಿಲ್ದಾಣಗಳಲ್ಲಿ ಬಂಡವಾಳ ಹೂಡಿಕೆಯನ್ನು ಅದಾನಿ ಗುಂಪು ಪರಿಗಣಿಸಿದೆ ಎಂಬುದಾಗಿ ಪ್ರಕಟಿಸಿದರು. ಆ ದೇಶದಲ್ಲಿ ಸೀಪೋರ್ಟ್ ನಿರ್ಮಿಸುವ ಅದಾನಿ ಯೋಜನೆಗೆ ಈಗಾಗಲೇ ಅನುಮೋದನೆ ದೊರೆತಿದೆ.

2017ರಲ್ಲಿ ಮೋದಿಯವರು ಇಸ್ರೇಲ್‌ಗೆ ಭೇಟಿ ನೀಡಿದ್ದರು. ಆನಂತರ ಅದಾನಿ ಕಂಪನಿಯು ಇಸ್ರೇಲ್ ಜೊತೆಗೆ ಗಣನೀಯ ವ್ಯಾಪಾರ ಸಂಬಂಧಗಳನ್ನು ಬೆಳೆಸಿಕೊಂಡಿದೆ. 2018ರ ಜನವರಿಯಲ್ಲಿ ಇಸ್ರೇಲ್ ಪ್ರಧಾನಿ ದೆಹಲಿಗೆ ಭೇಟಿ ನೀಡಿದ್ದರು. ಅದೇ ವರ್ಷದ ಡಿಸೆಂಬರಿನಲ್ಲಿ ಇಸ್ರೇಲಿನ ಎಲ್ಬಿಟ್ ಸಿಸ್ಟಮ್ಸ್ ಜೊತೆ ಕೈಜೋಡಿಸಿ ತೆಲಂಗಾಣದಲ್ಲಿ ವೈಮಾನಿಕ ಮಿಲಿಟರಿ ಡ್ರೋನ್ ತಯಾರಿಕೆ ಸ್ಥಾವರವನ್ನು ಅದಾನಿ ಕಂಪನಿ ಉದ್ಘಾಟಿಸಿತು. 2022ರಲ್ಲಿ ಇಸ್ರೇಲಿನ ಹೈಫಾ ವಿಮಾನ ನಿಲ್ದಾಣ ನಿರ್ವಹಣೆಯನ್ನು ವಹಿಸಿಕೊಂಡಿತು.

Rahul gandhi 42
ಗೌತಮ್‌ ಅದಾನಿ ಮತ್ತು ಪ್ರಧಾನಿ ಮೋದಿ ಸ್ನೇಹವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದ ರಾಹುಲ್‌ ಗಾಂಧಿ

ಗೌತಮ್ ಅದಾನಿಯವರು ಪ್ರಧಾನಿ ಮೋದಿಯವರ ಸಮೀಪವರ್ತಿ ಎಂಬುದು ಜನಜನಿತ. ಇಬ್ಬರೂ ಗುಜರಾತಿನವರು. ಮೋದಿಯವರು 2014ರಲ್ಲಿ ಪ್ರಧಾನಿ ಆದಾಗಿನಿಂದ ಅದಾನಿ ಗ್ರೂಪ್ ತನ್ನ ವ್ಯಾಪಾರೋದ್ಯಮದ ಹಸ್ತಗಳನ್ನು ಆಕ್ರಮಣಕಾರಿಯಾಗಿ ಚಾಚಿದೆ.  ಭಾರತದಲ್ಲಿ ಅತಿ ಹೆಚ್ಚಿನ ವಿಮಾನನಿಲ್ದಾಣಗಳು, ಸೀಪೋರ್ಟುಗಳು, ಕಲ್ಲಿದ್ದಿಲು ಗಣಿಗಳು, ವಿದ್ಯುಚ್ಛಕ್ತಿ ಸ್ಥಾವರಗಳು ಹಾಗೂ ಗ್ಯಾಸ್ ಸ್ಟೇಷನ್‌ಗಳ ಒಡೆತನದ ಖಾಸಗಿ ಕಂಪನಿಯಾಗಿ ಹೊರಹೊಮ್ಮಿದೆ.

2023ರ ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ ಮಾತನಾಡುತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇದು ಭಾರತದ ವಿದೇಶಾಂಗ ನೀತಿ ಅಲ್ಲ, ಇದು ಅದಾನಿಯವರ ವಿದೇಶಾಂಗ ನೀತಿ ಎಂದು ಟೀಕಿಸಿದ್ದರು.

ತನ್ನ ಎಲ್ಲ ಪ್ರಭಾವವನ್ನು ಕೇವಲ ಒಬ್ಬ ಖಾಸಗಿ ಉದ್ಯಮಿಯ ಏಳಿಗೆಗೆ ಬಳಸುತ್ತಿರುವ ಮೋದಿ ಸರ್ಕಾರದ ವಿವೇಕವನ್ನು ಹಲವರು ಪ್ರಶ್ನಿಸಿದ್ದಾರೆ. ಕಳೆದ ವರ್ಷ ಅದಾನಿ ಗ್ರೂಪ್ ಮೇಲೆ ಕಾರ್ಪೊರೇಟ್ ವಂಚನೆಗಳು ಮತ್ತು ಕಪ್ಪು ಹಣವನ್ನು ಬಿಳಿಯಾಗಿಸುವ ಆರೋಪಗಳನ್ನು ಅಮೆರಿಕದ ಹಿಂಡನ್ ಬರ್ಗ್ ಮಾಡಿದ ನಂತರ ಈ ಪ್ರಶ್ನೆಗಳು ಮತ್ತಷ್ಟು ದಟ್ಟವಾಗಿವೆ. ಅದಾನಿ ಗುಂಪಿನ ಪರವಾಗಿ ಕಪ್ಪು ಹಣವನ್ನು ಬಿಳಿಯಾಗಿಸಿ ತೈವಾನ್ ನಾಗರಿಕನೊಬ್ಬನು ಸ್ವಿಸ್ ಬ್ಯಾಂಕ್‌ನಲ್ಲಿ ಇರಿಸಿದ್ದ 311 ದಶಲಕ್ಷ ಡಾಲರುಗಳನ್ನು ಸ್ವಿಸ್ ಸರ್ಕಾರ ಇತ್ತೀಚೆಗಷ್ಟೇ ‘ಫ್ರೀಜ್’ ಮಾಡಿತ್ತು. ಈ ಹಣಕ್ಕೂ ತನಗೂ ಸಂಬಂಧವಿಲ್ಲ ಎಂದು ಅದಾನಿ ಕಂಪನಿ ಆಪಾದನೆಯನ್ನು ತಳ್ಳಿ ಹಾಕಿದೆ.
ಕೃಪೆ: scroll.in

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X