ಹಿರಿಯ ಸಾಹಿತಿ, ಪರಿಸರವಾದಿ ನಾ ಡಿಸೋಜ(87) ಅವರು ನಿನ್ನೆ(ಜ.5) ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಂದು ಹುಟ್ಟೂರು ಸಾಗರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಇವರನ್ನು 2024ರಲ್ಲಿ ಕರ್ನಾಟಕ ಸರ್ಕಾರವು ಪಂಪ ಪ್ರಶಸ್ತಿ ನೀಡಿ ಗೌರವಿಸಿತ್ತು
ಹೊಸವರ್ಷದ ಮೊದಲ ವಾರವೇ ನಾಡಿನ ಶ್ರೇಷ್ಠ ವ್ಯಕ್ತಿಗಳು ಅಸ್ತಂಗತರಾಗಿದ್ದಾರೆ. ದಲಿತ ಹೋರಾಟಗಾರ ಲಕ್ಷ್ಮೀನಾರಾಯಣ್, ಖ್ಯಾತ ರಾಜ್ಯಶಾಸ್ತ್ರಜ್ಞ- ಸಾಹಿತಿ ಪ್ರೊ ಮುಜಾಫರ್ ಅಸ್ಸಾದಿ, ರೈತ ಹೋರಾಟಗಾರ ಜಿ ಸಿ ಬೈಯಾರೆಡ್ಡಿ, ಈಗ ಅವರ ಹಿಂದೆಯೇ ಮಕ್ಕಳ ಸಾಹಿತಿ, ಕಾದಂಬರಿಕಾರ, ನಾಟಕಕಾರ, ಪರಿಸರ ಹೋರಾಟಗಾರ ನಾ ಡಿಸೋಜ ಸದ್ದಿಲ್ಲದೇ ಹೊರಟಿದ್ದಾರೆ. ಕನ್ನಡಿಗರಿಗೆ ಆಘಾತದ ಮೇಲೆ ಆಘಾತ. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾ ಡಿಸೋಜ ಭಾನುವಾರ ಸಂಜೆ ಉಸಿರು ಚೆಲ್ಲಿದ್ದಾರೆ.
ಮಲೆನಾಡಿನ ಸುಪುತ್ರ ನಾ ಡಿಸೋಜ ಅವರು ಸಾಗರದಲ್ಲಿ 6 ಜೂನ್ 1937ರಂದು ಜನಿಸಿದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೇಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಉನ್ನತ ಶಿಕ್ಷಣವನ್ನು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ನಂತರ ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ 37 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಪತ್ನಿ ಫಿಲೋಮಿನಾ ಡಿಸೋಜ ಮತ್ತು ಮಕ್ಕಳಾದ ಶೋಭಾ, ನವೀನ್ ಮತ್ತು ಸಂತೋಷ್ ಇದ್ದಾರೆ.
ನಾ ಡಿಸೋಜ ಅವರು ಮಕ್ಕಳಿಗಾಗಿ 40ಕ್ಕೂ ಹೆಚ್ಚು ಕಾದಂಬರಿ, ಅನೇಕ ಸಣ್ಣ ಕಥೆಗಳು, ನಾಟಕಗಳನ್ನು ಬರೆದಿದ್ದಾರೆ. ಅವರ ಪ್ರಕಟಿತ ಪುಸ್ತಕಗಳ ಒಟ್ಟು ಸಂಖ್ಯೆ 115. ಮಕ್ಕಳ ಕಾದಂಬರಿ ʼಮುಳುಗಡೆʼ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಪಡೆದಿದೆ. ಅವರ ಎರಡು ಕಾದಂಬರಿಗಳಾದ ದ್ವೀಪ ಮತ್ತು ಕಾಡಿನ ಬೆಂಕಿ ಚಲನಚಿತ್ರಗಳಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿವೆ. ದ್ವೀಪ ಸೇರಿದಂತೆ ಕೆಲವು ಕೃತಿಗಳು ಇಂಗ್ಲಿಷ್‌ಗೆ ಅನುವಾದವಾಗಿವೆ.

ಸುಮಾರು ಆರು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ಇವರ ಪೂರ್ಣ ಹೆಸರು ನಾರ್ಬರ್ಟ್ ಡಿಸೋಜ. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಇವರು ಮಂಗಳೂರಿನವರು, ಕೆಲಸದ ನಿಮಿತ್ತ ಸಾಗರದಲ್ಲಿ ನೆಲೆನಿಂತಿದ್ದರು.
ಡಿಸೋಜ ಅವರು ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರ ಮಾತ್ರವಲ್ಲ, ಮಕ್ಕಳ ಸಾಹಿತ್ಯಕ್ಕೆ ಅವರ ಕೊಡುಗೆ ಅನನ್ಯ. ಪ್ರಾರಂಭದ ದಿನಗಳಲ್ಲಿ ‘ಪ್ರಪಂಚ’ ಪತ್ರಿಕೆಗೆ ಕಥೆಗಳನ್ನು ಬರೆಯುತ್ತಿದ್ದರು. ಅವರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ ಪ್ರಕಟವಾದದ್ದು 1964ರಲ್ಲಿ. ನಂತರ ಮಂಜಿನ ಕಾನು, ಈ ನೆಲ ಈಜಲ, ಕೆಂಪು ತ್ರಿಕೋನ, ನೆಲೆ, ಮಾನವ – ಹೀಗೆ ಇವರು ಬರೆದಿರುವ ಕಾದಂಬರಿಗಳು ಸುಮಾರು 75! ಪರಿಸರ ನಾಶ, ಭ್ರಷ್ಟಾಚಾರ, ಹಿಂದುಳಿದ ಬುಡಕಟ್ಟು ಜನಾಂಗದ ಚಿತ್ರಣ ಹೀಗೆ ಹಲವು ಹತ್ತು ವಿಷಯಗಳನ್ನೊಳಗೊಂಡ ಅವರ ಕಾದಂಬರಿಗಳು ಹೆಚ್ಚು ಜನಪ್ರಿಯಗೊಂಡಿವೆ. ನಾ ಡಿಸೋಜ ಅವರ ದ್ವೀಪ, ಮುಳುಗಡೆ, ಕಾಡಿನ ಬೆಂಕಿ, ಬಳುವಳಿ, ಬೆಟ್ಟದಪುರದ ದಿಟ್ಟ ಮಕ್ಕಳು, ಆಂತರ್ಯ ಕೃತಿಗಳು ಚಲನಚಿತ್ರಗಳಾಗಿ ತೆರೆಮೇಲೆಯೂ ಮೂಡಿ ಪ್ರಶಸ್ತಿ ಪುರಸ್ಕಾರಕ್ಕೂ ಭಾಜನವಾಗಿದೆ. ಮಕ್ಕಳ ಸಾಹಿತ್ಯದಲ್ಲಿ ಸುಮಾರು ಹನ್ನೆರಡು ಕೃತಿಗಳನ್ನು ರಚಿಸಿದ್ದಾರೆ.
ಅಜ್ಞಾತ, ಒಂದು ಜಲಪಾತದ ಸುತ್ತ, ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ, ಜೀವಕಳೆ, ಪ್ರೀತಿಯೊಂದೆ ಸಾಲದೇ? ಬಂಜೆ ಬೆಂಕಿ, ಪ್ರಜ್ಞಾಬಲಿ, ನೆಲೆ, ನಡುವೆ ನಿಂತ ಜನ, ಗಾಂಧಿ ಬಂದರು, ಒಡ್ಡು, ಮಾನವ, ಮುಳುಗಡೆ, ವಿಷಾನಿಲ ಇನ್ನೂ ಅನೇಕ ಕಾದಂಬರಿಗಳನ್ನೊಳಗೊಂಡಂತೆ ಮಕ್ಕಳ ಸಾಹಿತ್ಯವನ್ನೂ, ರೇಡಿಯೋ ನಾಟಕಗಳನ್ನೂ ನಾ ಡಿಸೋಜ ಅವರು ರಚಿಸಿದ್ದಾರೆ.
ಡಿಸೋಜರ ಬರವಣಿಗೆಗಳಲ್ಲಿ ಮಾತ್ರ ಪರಿಸರ ಕಾಳಜಿ ತೋರಿಸಿಲ್ಲ, ಪರಿಸರ ಹಾಳು ಮಾಡುವ ರೈಲ್ವೆ ಯೋಜನೆ, ಗಣಿಗಾರಿಕೆ, ಹೆದ್ದಾರಿ ನಿರ್ಮಾಣ, ಮಲೆನಾಡಿನಿಂದ ಬೆಂಗಳೂರಿಗೆ ನೀರು ಹರಿಸುವ ಯೋಜನೆಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ್ದರು.
ಇದನ್ನೂ ಓದಿ ನುಡಿ ನಮನ | ಅಗಲಿದ ಗೆಳೆಯ ಅಸ್ಸಾದಿ ಕುರಿತು ರಹಮತ್ ತರೀಕೆರೆ ಮಾತುಗಳು
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗುಲ್ವಾಡಿ ವೆಂಕಟರಾವ್ ಪ್ರಶಸ್ತಿ, ನಿರಂಜನ ಸಾಹಿತ್ಯ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ನವದೆಹಲಿ ಕಲಾ ಪ್ರಶಸ್ತಿ, ಕೇಂದ್ರಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರಕ್ಕೆ ನಾ ಡಿಸೋಜ ಭಾಜನರಾಗಿದ್ದಾರೆ. 2013ರಲ್ಲಿ ಮಡಿಕೇರಿಯಲ್ಲಿ ಆಯೋಜನೆಗೊಂಡಿದ್ದ 80ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 2024ರಲ್ಲಿ ಕರ್ನಾಟಕ ಸರ್ಕಾರವು ಪಂಪ ಪ್ರಶಸ್ತಿ ನೀಡಿ ಗೌರವಿಸಿದೆ.
ಲೋಕೋಪಯೋಗಿ ಇಲಾಖೆಯಂತಹ ನಿರ್ಜೀವ ವ್ಯಾವಹಾರಿಕ ಕಚೇರಿಯಲ್ಲಿ ಅಧಿಕಾರಿಯಾಗಿದ್ದರೂ ಸಾಗರದಷ್ಟು ಬರೆದಿದ್ದಾರೆ ನಾ ಡಿಸೋಜ. ಅವರೊಳಗೊಬ್ಬ ಪರಿಸರವಾದಿಯಿದ್ದ, ಪ್ರೇಮ ಕವಿಯಿದ್ದ, ಮಾನವತಾವಾದಿಯಿದ್ದ, ಅಸಹಾಯಕರಿಗೆ ಮರುಗುವ ಕರುಣಾಮಯಿ ಇದ್ದ. ಹೀಗಾಗಿಯೇ ಅವರ ಎಲ್ಲ ಕೃತಿಗಳು ಪರಮ ಜೀವಪರವೂ, ಪರಿಸರ ಪರವೂ ಆಗಿದ್ದವು. ಅಷ್ಟೇ ಅಲ್ಲ ಮಗು ಮನಸ್ಸಿನ ಕವಿಯೂ ಆಗಿದ್ದರು. ಮಕ್ಕಳ ಸಾಹಿತ್ಯ ಪರಂಪರೆ ಕೊನೆಯಾಗುತ್ತಿರುವ ಕಾಲಘಟ್ಟದಲ್ಲಿ ನಾ ಡಿಸೋಜ ಅವರು ಮಕ್ಕಳ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ.
ಜೀವಬೆದರಿಕೆ ಪತ್ರದ ಭೂತ ಡಿಸೋಜರನ್ನೂ ಕಾಡಿತ್ತು
ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಬೇರೆಲ್ಲ ಪ್ರಗತಿಪರ ಸಾಹಿತಿಗಳಿಗೆ ಬಂದಂತೆ, ನಾ ಡಿಸೋಜ ಅವರಿಗೂ ಅನಾಮಧೇಯ ಜೀವ ಬೆದರಿಕೆ ಪತ್ರ ಬಂದಿತ್ತು. 2022ರಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯ ಸಂಬಂಧ ರಾಜ್ಯದಲ್ಲಿ ವಿವಾದ ನಡೆಯುತ್ತಿದ್ದಾಗ ಬಂದ ಜೀವ ಬೆದರಿಕೆ ಪತ್ರವನ್ನು ಬಹಿರಂಗಪಡಿಸದೇ, ಪೊಲೀಸರಿಗೂ ತಿಳಿಸದೇ ಸುಮ್ಮನಿದ್ದರು. ನಂತರ ಯಾವುದೋ ಒಂದು ಸಭೆಯಲ್ಲಿ ಪ್ರಸ್ತಾಪಿಸಿದ ಕಾರಣ ಬಹಿರಂಗಗೊಂಡಿತ್ತು.
‘ನಾ ಡಿಸೋಜ ಅವರೇ, 61 ಎಡೆಬಿಡಂಗಿ ಸಾಹಿತಿಗಳೇ..! ನೀವು ಪಕ್ಕಾ ದೇಶದ್ರೋಹಿಗಳು ಎಂದು ಈಗ ಗೊತ್ತಾಯ್ತು..! ಮೊನ್ನೆ ರಾಜಸ್ಥಾನದಲ್ಲಿ ಮುಸ್ಲಿಮರು ಓರ್ವನ ಶಿರಚ್ಛೇಧನ ಮಾಡಿದಾಗ ಇಡೀ ದೇಶವೇ ಘಟನೆ ಖಂಡಿಸಿತು. ಆದರೆ, ನೀವ್ಯಾರೂ ಸಾಹಿತಿಗಳು ಖಂಡಿಸಲಿಲ್ಲ. ಆವಾಗಲೇ ನಿಮ್ಮ ಬಗ್ಗೆ ತಿಳಿಯಿತು. ಭಯೋತ್ಪಾದಕರ, ಮತಾಂಧ ಮುಸ್ಲಿಮರ, ನಕ್ಸಲ್-ಮಾವೋವಾದಿಗಳು ಹಾಗೂ ಕ್ರೈಸ್ತ ಮಿಷನರಿಗಳ ಬೆಂಬಲಿಗರೂ ನೀವು. ನಿಮ್ಮನ್ನ ಕ್ರೈಸ್ತನ ಲೋಕಕ್ಕೆ ಕಳಿಸಲು ಬರುತ್ತೇನೆ ಸಿದ್ಧರಾಗಿ…’ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.