ನಕ್ಸಲ್ ಹೋರಾಟ | ಭಾರತಕ್ಕೆ ಮಾದರಿ ಸೃಷ್ಟಿಸಿದ ಕರ್ನಾಟಕ

Date:

Advertisements

ಮೂಲಸೌಕರ್ಯ, ಭೂಮಿ ಹಕ್ಕು, ಆದಿವಾಸಿಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಹಲವಾರು ವರ್ಷಗಳಿಂದ ಸರ್ಕಾರಗಳ ಮುಂದೆ ಬೇಡಿಕೆ ಇಟ್ಟು ಹೋರಾಟಗಳು ನಡೆಯುತ್ತಲೇ ಇವೆ. ಅಂತಹ ಹೋರಾಟಗಳನ್ನು ಮಾಡುತ್ತಾ ಬಂದ ಹಲವರು ಅರಣ್ಯ ಇಲಾಖೆಯ ಕಿರುಕುಳಗಳನ್ನು ವಿರೋಧಿಸಿ, ಸರ್ಕಾರಗಳ ಅಸಡ್ಡೆಯನ್ನು ಖಂಡಿಸಿ ಶಸ್ತ್ರಸಜ್ಜಿತ ಹೋರಾಟದ ಮಾದರಿಯಾದ ನಕ್ಸಲ್ ಚಳುವಳಿ ಅಥವಾ ಮಾವೋವಾದಿ ಹೋರಾಟದ ಕಡೆಗೆ ಒಲವು ತೋರಿಸಿದ್ದರು. ನಾಡನ್ನು ತ್ಯಜಿಸಿ, ತಮ್ಮ ಕುಟುಂಬ ಪರಿವಾರವನ್ನು ತ್ಯಜಿಸಿ, ತಮ್ಮ ಯೌವನವನ್ನು, ಸುಖ ಸಂತೋಷಗಳನ್ನು ತ್ಯಜಿಸಿ ಕಾಡಿನ ಪಾಲಾಗಿ ಭೂಗತರಾಗಿದ್ದರು. ಅಂತಹವರಲ್ಲಿ ಕರ್ನಾಟಕದ ಅದೆಷ್ಟೋ ಜನರಿದ್ದಾರೆ.

ನಕ್ಸಲ್ ಹೋರಾಟ ಕರ್ನಾಟಕದಲ್ಲಿ ಮಾತ್ರವಲ್ಲದೇ ಭಾರತದಲ್ಲಿಯೇ ಅತ್ಯಂತ ಗಂಭೀರವಾಗಿ ಹೆಚ್ಚಾಗಿತ್ತು. ಮಾವೋವಾದಿ ಹೋರಾಟಗಾರರು ಆಳುವ ಸರ್ಕಾರಗಳಿಗೆ ಒತ್ತಡವನ್ನು ನಿರ್ಮಾಣ ಮಾಡಿದ್ದರು. ಕರ್ನಾಟಕದಲ್ಲಿ ವಿಶೇಷವಾಗಿ ಚಿಂತಕರು ಮತ್ತು ಹೋರಾಟಗಾರರು – ನಕ್ಸಲ್ ಹೋರಾಟಗಾರರು ಎತ್ತುತ್ತಿರುವ ಜನರ ಸಮಸ್ಯೆಗಳ ನೈಜತೆಯನ್ನು ಅರಿತು, ನಕ್ಸಲರು ಅನುಸರಿಸಿದ ಶಸ್ತ್ರಸಜ್ಜಿತ ಹೋರಾಟಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಲೇ ಅವರ ಜೊತೆಗೆ ನಿಂತಿದ್ದರಿಂದ ಕರ್ನಾಟಕದಲ್ಲಿ ನಕ್ಸಲ್ ಹೋರಾಟಗಾರರನ್ನು ಸರ್ಕಾರಗಳು ಬಂದೂಕುಗಳ ಮೂಲಕ ಅಂತ್ಯ ಮಾಡಲು ಅಡ್ಡಿಯಾಗಿದ್ದರು.

ಕರ್ನಾಟಕ ಕಂಡ ಚಿಂತಕರು, ಮಾನವತಾವಾದಿಗಳು ಹಾಗೂ ಅನೇಕರು ನಕ್ಸಲ್ ಹೋರಾಟಗಳಲ್ಲಿ ನೇರವಾಗಿ ಪಾಲ್ಗೊಂಡು ಹೋರಾಟಕ್ಕೆ ಬಲ ತುಂಬಿದ್ದರು. ಅದರಲ್ಲಿ ಪ್ರಮುಖರು ಸಾಕೇತ್ ರಾಜನ್, ನೂರ್ ಶ್ರೀಧರ್, ನೀಲಗುಳಿ ಪದ್ಮನಾಭ, ಪಾರ್ವತಿ ಹಾಜಿಮಾ ಇನ್ನೂ ಅನೇಕರು,

Advertisements

1990ರ ದಶಕದಲ್ಲಿ, ಕರ್ನಾಟಕದಲ್ಲಿ ಆರಂಭವಾದ ನಕ್ಸಲ್ ಹೋರಾಟವು ಹಲವು ಜನಪರ ಹೋರಾಟಗಳನ್ನು ರೂಪಿಸುವ ಮೂಲಕ ಸರ್ಕಾರಗಳು ಅನಿವಾರ್ಯವಾಗಿ ಗುಡ್ಡಗಾಡು ಪ್ರದೇಶಗಳ ಆದಿವಾಸಿ, ದಲಿತರ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವ ಇಕ್ಕಟ್ಟಿಗೆ ಸಿಕ್ಕಿಕೊಂಡವು.

ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡಕ್ಕೆ ಸೀಮಿತವಾಗಿದ್ದ ಹೋರಾಟವು ರಾಯಚೂರು, ಬಳ್ಳಾರಿ ಭಾಗದ ಜಿಲ್ಲೆಗಳ ಜನರ ಸಮಸ್ಯೆಗಳ ಕಡೆಗೆ ಗಮನ ಹರಿಸಿದರು. ಒಟ್ಟಾರೆ ಕರ್ನಾಟಕದಲ್ಲಿ ಅತ್ಯಂತ ನಿರ್ಲಕ್ಷಕ್ಕೆ ಒಳಗಾದ ಪ್ರದೇಶಗಳ ಜನರ ಸಮಸ್ಯೆಗಳನ್ನು ಸರ್ಕಾರಗಳು ಬಗೆಹರಿಸಲೇಬೇಕು ಎಂಬ ಒತ್ತಡವನ್ನು ಹಲವು ರೀತಿಗಳಲ್ಲಿ ಮಾಡಿದ್ದವು.

ನಕ್ಸಲ್ ಹೋರಾಟಗಾರರು ಮುಂದಿಡುತ್ತಿರುವ ಜನರ ಸಮಸ್ಯೆಗಳನ್ನು ಕೆಲವು ಸರ್ಕಾರಗಳು, ಅಧಿಕಾರಿಗಳು ಪರಿಹರಿಸಿ ನಕ್ಸಲ್ ಹೋರಾಟಕ್ಕೆ ಅಂತ್ಯ ಹಾಡಲು ಮುಂದಾಗದೇ ತಾವೂ ಪೋಲೀಸರ ಮೂಲಕ ಉತ್ತರ ಕೊಡಲು ಮುಂದಾದರು. ಇದರ ಫಲವಾಗಿ ಕರ್ನಾಟಕದಲ್ಲಿ ಹಲವು ಗುಂಡಿನ ಚಕಮಕಿಗಳು, ಎನ್‌ಕೌಂಟರ್‌ಗಳು ನಡೆದವು. ಜನಪರವಾಗಿ ದ್ವನಿ ಎತ್ತುತ್ತಿದ್ದ ಹಲವು ಜೀವಗಳು ಬಲಿಯಾದವು. ಇನ್ನೊಂದು ಕಡೆಗೆ ಸಮಾಜದ ಶೋಷಿತ ಸಮುದಾಯಗಳ ಹಿನ್ನೆಲೆಯ ಪೋಲೀಸರ ರಕ್ತವೂ ಚೆಲ್ಲಿತ್ತು.

ಪೋಲೀಸರು ‘ನಕ್ಸಲ್ ನಿಗ್ರಹ ಪಡೆ’ ಹೆಸರಿನಲ್ಲಿ ನಕ್ಸಲ್ ಹೋರಾಟವನ್ನು ಬೆಂಬಲಿಸುತ್ತಿದ್ದ ಹಾಗೂ ಬೆಂಬಲಿಸದೇ ಇದ್ದ ಆಯಾ ಭಾಗದ ಜನರ ಮನೆಗಳ ಮುಂದೆ, ನಕ್ಸಲ್ ಹೋರಾಟಗಾರರ ಕುಟುಂಬಗಳ ಮನೆಗಳ ಮುಂದೆ ಬೀಡುಬಿಟ್ಟು ಕಿರುಕುಳ ನೀಡಲು ಮುಂದಾದರು. ಇದಕ್ಕೆ ಬೇಸತ್ತ ಜನರು ಯಾವ ಸಮಸ್ಯೆಗಳೂ ಬೇಡವೆಂದು ನಕ್ಸಲ್ ಹೋರಾಟವನ್ನು ಬೆಂಬಲಿಸುವುದನ್ನೇ ಬಿಟ್ಟರು. ಹಿಂದೆ ಸರಿದರು.

ಇದರಿಂದ, ಯಾವ ಜನರ ಪರವಾಗಿ ತಮ್ಮ ಹೋರಾಟವನ್ನು ಆರಂಭಿಸಿದರೋ ಅದೇ ಜನರು ತಮ್ಮಿಂದ ದೂರ ಸರಿಯಲಾರಂಭಿಸಿದ್ದನ್ನು ಕಂಡು, ಮಾವೋವಾದಿ ಹೋರಾಟಗಾರರು ತಮ್ಮ ಹೋರಾಟದ ಮಾದರಿಗಳನ್ನು ವಿಮರ್ಶೆ ಮಾಡಿಕೊಳ್ಳಲಾರಂಭಸಿದರು. ತಮ್ಮೊಳಗೆ ಚರ್ಚೆ ಆರಂಭಿಸಿದರು. ಸಾಕೇತ್ ರಾಜನ್ ಎನ್‌ಕೌಂಟರ್‌ ನಂತರದಲ್ಲಿ ಹಲವರು ಹಲವರು ನಕ್ಸಲ್ ಹೋರಾಟದಿಂದ ಹೊರಬಂದು ಪ್ರಜಾತಾಂತ್ರಿಕ ಹೋರಾಟಗಳಲ್ಲಿ ತೊಡಗಿಸಿಕೊಂಡರು. ಇದರಲ್ಲಿ ಪ್ರಮುಖರು ನೂ‌ರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್.

2014ರಲ್ಲಿ ಕರ್ನಾಟಕದ ಸಾಕ್ಷಿಪ್ರಜ್ಞೆಗಳಾದ ಹೆಚ್.ಎಸ್ ದೊರೆಸ್ವಾಮಿ, ದೇವನೂರ ಮಹಾದೇವ, ಎ.ಕೆ ಸುಬ್ಬಯ್ಯ, ಬರಗೂರು ರಾಮಚಂದ್ರಪ್ಪ, ಜಿ ರಾಮಕೃಷ್ಣ, ಗೌರಿ ಲಂಕೇಶ್, ಶಿವಸುಂದರ್, ಪ್ರೊ ವಿ.ಎಸ್ ಶ್ರೀಧರ್, ನಗರಗೆರೆ ರಮೇಶ್ ಮುಂತಾದವರು ಅಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನಕ್ಸಲ್ ಹೋರಾಟಗಾರರ ಕುರಿತು ಮನವರಿಕೆ ಮಾಡಿಕೊಟ್ಟು ಮುಖ್ಯವಾಹಿನಿ ಬಂದು ಪ್ರಜಾತಾಂತ್ರಿಕ ಹೋರಾಟಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಒದಗಿಸಬೇಕೆಂದು ಒತ್ತಡ ತಂದರು.

ಸಿದ್ದರಾಮಯ್ಯರ ಸರ್ಕಾರವು ನಕ್ಸಲ್ ಹೋರಾಟಗಾರರು ಎತ್ತುತ್ತಿರುವ ಪ್ರಶ್ನೆಗಳನ್ನು ಗಂಭಿರವಾಗಿ ಪರಿಗಣಿಸಿ ಹೋರಾಟದ ಮಾದರಿಯನ್ನು ವಿರೋಧಿಸುತ್ತಲೇ, ಶಸ್ತ್ರ ತ್ಯಜಿಸಿ ಪ್ರಜಾತಾಂತ್ರಿಕ ಹೋರಾಟ ಮಾಡಲು, ಮುಖ್ಯವಾಹಿನಿಗೆ ಬರಲು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿಯ ವಿಶೇಷ ಪ್ಯಾಕೇಜನ್ನು ರಚಿಸಿತು. ಇದರ ಮೂಲಕ 2014ರಲ್ಲಿ ನಕ್ಸಲ್ ನಾಯಕ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಅವರು ಮುಖ್ಯವಾಹಿನಿಗೆ ಬಂದರು.

ಆನಂತರ, ಹಲವು ನಕ್ಸಲ್ ಹೋರಾಟಗಾರರು ಮುಖ್ಯವಾಹಿನಿಗೆ ಬಂದರು. ಅವರಲ್ಲಿ ಪ್ರಮುಖರು ಹಾಗಲಗಂಚಿ ವೆಂಕಟೇಶ್, ಮಲ್ಲಿಕಾ, ನೀಲಗುಳಿ ಪದ್ಮನಾಭ, ಭಾರತಿ, ರಿಜ್ಞಾನಾ, ಕನ್ಯಾಕುಮಾರಿ, ಚನ್ನಮ್ಮ, ಪರಶುರಾಮ್ ಪ್ರಮುಖರು.

ಶಸ್ತ್ರಸಜ್ಜಿತ ಹೋರಾಟವನ್ನು ತ್ಯಜಿಸಿ ಮುಖ್ಯವಾಹಿನಿಗೆ ಬಂದ ಅನೇಕರು ಪ್ರಜಾತಾಂತ್ರಿಕ ಹೋರಾಟಗಳಲ್ಲಿ ತೊಡಗಿಸಿಕೊಂಡರೆ, ಇನ್ನೂ ಅನೇಕರು ತಮ್ಮ ಮೇಲಿನ ಕೇಸುಗಳ ಕಾರಣಕ್ಕೆ ಪ್ರತಿನಿತ್ಯ ಕೋರ್ಟುಗಳಿಗೆ ಅಲೆಯತೊಡಗಿದರು. ಸರ್ಕಾರವು ನಕ್ಸಲ್ ಪ್ಯಾಕೇಜ್ ಅಡಿಯಲ್ಲಿ ಸುಳ್ಳು ಕೇಸುಗಳನ್ನು ವಜಾಗೊಳಿಸುವುದು ಸೇರಿದಂತೆ ಎಲ್ಲ ಕೇಸುಗಳನ್ನು ಶೀಘ್ರವಾಗಿ ವಿಚಾರಣೆ ನಡೆಸಿಕೊಡುವುದಾಗಿ ಕೊಟ್ಟ ಮಾತಿಗೆ ತಪ್ಪಿತ್ತು.

ಪರಿಣಾಮ, ಕನ್ಯಾಕುಮಾರಿ ಸೇರಿದಂತೆ ಹಲವರು ಇನ್ನೂ ಜೈಲುಗಳಲ್ಲೇ ಇದ್ದರೆ, ನೀಲಗುಳಿ ಪದ್ಮನಾಭ ಸೇರಿದಂತೆ ಹಲವರು ಕೋರ್ಟುಗಳಿಗೆ ಅಲೆಯುವ ಶಿಕ್ಷೆಗೆ ಒಳಗಾಗಿದ್ದಾರೆ. ಸರ್ಕಾರಗಳು ಶರಣಾಗತಿ ಹೆಸರಿನಲ್ಲಿ ಮುಖ್ಯವಾಹಿನಿಗೆ ಕರೆಸಿ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ನಿರ್ಲಕ್ಷ್ಯ ಧೋರಣೆ ತಳೆದಿವೆ. ಈ ಧೋರಣೆ ಬದಲಾಗಬೇಕು. ತಮ್ಮ ಭರವಸೆಗಳನ್ನು ಈಡೇರಿಸಲು ಮುಂದಾಗಬೇಕು.

ಈ ವರದಿ ಓದಿದ್ದೀರಾ?: ಮಣಿಪುರ ಹೊತ್ತಿ ಉರಿದಿದ್ದಕ್ಕೆ ಪ್ರಧಾನಿ ಮೋದಿ ಏಕೆ ಕ್ಷಮೆ ಕೇಳಬೇಕು?

ಇದೀಗ ಕರ್ನಾಟಕದಲ್ಲಿ ಉಳಿದ ನಕ್ಸಲ್ ಹೋರಾಟಗಾರರನ್ನು ನಾಗರಿಕ ಸಮಾಜ ಮನವೊಲಿಸಿ ಮುಖ್ಯವಾಹಿನಿಗೆ ಬರುವಂತೆ ಮನವಿ ಮಾಡಿದ್ದರು. ಇದರ ಭಾಗವಾಗಿ ಕಾಡಿನ ಒಳಗಿರುವ ಅನೇಕ ನಕ್ಸಲ್ ಹೋರಾಟಗಾರರು ಮುಖ್ಯವಾಹಿನಿಗೆ ಬರಲು ತೀರ್ಮಾನಿಸಿದ್ದಾರೆ.

ಇದಕ್ಕೆ ಪೂರಕವಾಗಿ ಸ್ಪಂಧಿಸಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಸ್ತ್ರ, ತ್ಯಜಿಸಿ ಪ್ರಜಾತಾಂತ್ರಿಕ ಹೋರಾಟಕ್ಕೆ ಮರಳುವುದಾದರೆ ಎಲ್ಲ ರೀತಿಯ ಅವಕಾಶಗಳನ್ನು ಒದಗಿಸಲಾಗುವುದು ಎಂದು ಘೋಷಿಸಿದ್ದಾರೆ. ಇದರ ಮೂಲಕ ಭಾರತದಲ್ಲೇ ನಕ್ಸಲ್ ಸಮಸ್ಯೆಯಿಂದ ಮುಕ್ತಗೊಂಡ ಮೊದಲ ರಾಜ್ಯ ಎಂಬ ಮಾದರಿ ನಿರ್ಮಾಣವಾಗಲಿದೆ.

ನಾಗರಿಕ ಸಮಾಜ ಮತ್ತು ಸರ್ಕಾರಗಳು ಒಗ್ಗೂಡಿದರೆ ಏನೆಲ್ಲ ಮಾದರಿಗಳನ್ನು ಸೃಷ್ಟಿಸಬಹುದು ಎಂಬುದಕ್ಕೆ ಕರ್ನಾಟಕವು ಹಲವು ವಿಷಯಗಳಲ್ಲಿ ಮುಂದಿದೆ. ಅದರಲ್ಲಿ ನಕ್ಸಲ್ ಹೋರಾಟಗಾರರು ಮುಖ್ಯವಾಹಿನಿಗೆ ಬರುತ್ತಿರುವುದೂ ಒಂದು ಸಾಕ್ಷಿ.

ಮುಂಡಗಾರು ಲತಾ, ಸುಂದರಿ ಕುತ್ತೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ. ವಸಂತ, ಟಿ.ಎನ್ ಜೇಶ್ ತಂಡ ಮುಖ್ಯ ವಾಹಿನಿಗೆ ಬರಲು ತೀರ್ಮಾನಿಸಿದೆ. ಮುಖ್ಯವಾಹಿನಿಗೆ ಬರುತ್ತಿರುವ ನಕ್ಸಲ್ ಹೋರಾಟಗಾರರು ಸರ್ಕಾರಗಳ ಮುಂದೆ ಕೆಲವು ಹಕ್ಕೊತ್ತಾಯಗಳನ್ನಿಟ್ಟಿದ್ದಾರೆ.

ಈ ಎಲ್ಲ ಹಕ್ಕೊತ್ತಾಯಗಳೂ ನಿಜಕ್ಕೂ ಇಂದಿಗೂ ಸಮಾಜ ಎದುರಿಸುತ್ತಿರುವ ವಾಸ್ತವ ಸಮಸ್ಯೆಗಳೇ ಆಗಿವೆ. ಈ ಹಕ್ಕೊತ್ತಾಯಗಳನ್ನು ಸರ್ಕಾರವು ಬಗೆಹರಿಸುವ ಕಡೆಗೆ ಗಂಭಿರವಾಗಿ ಚಿಂತಿಸಬೇಕಿದೆ. ಜೊತೆಗೆ, ಈ ಹಿಂದೆ ಮುಖ್ಯವಾಹಿನಿಗೆ ಬಂದು ಇಂದಿಗೂ ಕೋರ್ಟುಗಳಿಗೆ ಅಲೆಯುತ್ತಿರುವವರ ಸಮಸ್ಯೆಗಳನ್ನು ನಿವಾರಿಸಬೇಕಿದೆ. ಈಗ ಮುಖ್ಯವಾಹಿನಿಗೆ ಬರುತ್ತಿರುವವರೂ ಸುಧಿರ್ಘ ಕಾಲ ಕೋರ್ಟುಗಳಿಗೆ ಅಲೆಯದಂತೆ ಮಾಡಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X