ಪ್ರಶಸ್ತಿಯ ವಿಚಾರ ದಿನೇ ದಿನೇ ದೊಡ್ಡದಾಗುತ್ತ ಸಾಗಿದೆ. ಅಕಾಡೆಮಿಯನ್ನೇ ಬಹಿಷ್ಕರಿಸುವ ಮಾತುಗಳು ಬರುತ್ತಿವೆ. ಆದರೆ ಈ ಎಲ್ಲಾ ನಿಲುವುಗಳಲ್ಲಿ ಸಂಗೀತದ ಅಂಶವಿರದೆ, ದೇಶದಲ್ಲಿ ಪ್ರಚಲಿತವಿರುವ ನಾವು ಮತ್ತು ಅವರು ಎನ್ನುವ ಅಸ್ಮಿತೆಯ ರಾಜಕಾರಣದ ಅಂಶವಿದೆ. ಇವತ್ತಿನ ಸತ್ಯೋತ್ತರ ಕಾಲದಲ್ಲಿ ”ಎಲ್ಲದರ ಹಿಂದೆಯೂ ಒಂದು ಅವ್ಯಕ್ತ ಉದ್ದೇಶವಿರುತ್ತದೆ” (ಹಿಡನ್ ಅಜೆಂಡಾ) ಎನ್ನುವ ಗ್ರಹಿಕೆ ಮೌಲ್ಯ ಪಡೆದುಕೊಂಡಿದೆ.
ಸಂಗೀತ ಕಲಾನಿಧಿ ಪ್ರಶಸ್ತಿಯು ಚೆನ್ನೈನ ದ ಮ್ಯೂಸಿಕ್ ಅಕಾಡೆಮಿ ಕರ್ನಾಟಕ ಸಂಗೀತದ ಹಾಡುಗಾರರಿಗೆ ನೀಡುವ ವಾರ್ಷಿಕ ಪ್ರಶಸ್ತಿಯಾಗಿದೆ. ಸದರಿ ಪ್ರಶಸ್ತಿ ಪುರಸ್ಕೃತರು ಅಕಾಡೆಮಿಯಲ್ಲಿ ಆ ವರ್ಷ ನಡೆಯುವ ವಾರ್ಷಿಕ ಸಂಗೀತ ಸಮ್ಮೇಳನದ ಅಧ್ಯಕ್ಷರಾಗುವುದರ ಜೊತೆಗೆ, ಡಿಸೆಂಬರ್ ಮಾಸದಲ್ಲಿ(ಮಾರ್ಗಳಿ) ನಡೆಯುವ ಸಂಗೀತ ಕಛೇರಿಗಳ ಅಧ್ಯಕ್ಷರಾಗುವ ಗೌರವವನ್ನು ಪಡೆಯುವರು. ಟಿ.ಎಂ.ಕೃಷ್ಣ ಅವರಿಗೆ 2024ರ ಕಲಾನಿಧಿ ಪ್ರಶಸ್ತಿಯನ್ನು ನೀಡಲಾಗಿದೆ. ಆದರೆ ಅಕಾಡೆಮಿ ಪ್ರಶಸ್ತಿಯನ್ನು ಘೋಷಿಸಿದ ತರುವಾಯ, ಕೆಲವು ಪ್ರಮುಖ ಸಂಗೀತಗಾರರು 2024ರ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲವೆಂದು ಘೋಷಿಸಿದ್ದಾರೆ. ಕರ್ನಾಟಕ ಸಂಗೀತ ಕ್ಷೇತ್ರದ ಮೇಲೆ ಬ್ರಾಹ್ಮಣರ ಹಿಡಿತವಿದೆ ಮತ್ತು ಇತರ ಜಾತಿಯ ಹಾಡುಗರಿಗೆ ಅವಕಾಶ ನೀಡದೆ ಜಾತಿ ಆಚರಣೆಯಲ್ಲಿ ತೊಡಗಿದ್ದಾರೆಂದು ಆರೋಪಿಸಿರುವ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ನಾವು ಭಾಗವಹಿಸಲು ಸಿದ್ಧವಿಲ್ಲ ಎನ್ನುವುದು ಇವರ ನಿಲುವು.
ಒಮ್ಮೆ ನಾನು ಚೆನ್ನೈನ ಹೆಸರಾಂತ ಸಭಾವೊಂದರ ಸಂಗೀತ ಸ್ಪರ್ಧೆಯ ತೀರ್ಪುಗಾರಳಾಗಿ ಭಾಗವಹಿಸಿದ್ದೆ. ಸ್ಪರ್ಧೆಯಲ್ಲಿ ಹಾಡುತ್ತಿದ್ದ ಗಾಯಕಿಯೊಬ್ಬಳನ್ನು ಕುರಿತು ಸಹ ತೀರ್ಪುಗಾರರು ಆಡಿದ ಮಾತು ಕೇಳಿ ನಾನು ದಂಗಾಗಿಹೋಗಿದ್ದೆ. ಅವರು ”ಈಕೆ ನೋಡಲು ಬ್ರಾಹ್ಮಣಳಂತೆ ಕಾಣುವುದಿಲ್ಲವಲ್ಲ. ಈಕೆಯ ಶಾರೀರಕ್ಕೂ ಶರೀರಕ್ಕೂ ಸಂಬಂಧವೇ ಇಲ್ಲ” ಎಂದರು. ನಾನು ಗೊಂದಲಕ್ಕೆ ಬಿದ್ದೆ. ನಾನು ಹೀಗೆ ಬಹಿರಂಗವಾಗಿ ಜಾತಿ ಆಚರಣೆ ನಡೆಯಬಹುದೆಂದು ನಿರೀಕ್ಷಿಸಿರಲಿಲ್ಲ. ನನ್ನ ಪಟ್ಟಿಯಲ್ಲಿ ಈ ಸ್ಪರ್ಧಿ ಮೊದಲ ಐವರಲ್ಲಿ ಒಬ್ಬಳಾಗಿದ್ದಾಳೆಂದು ಅವರಿಗೆ ಹೇಳಿದೆ. ಆಗವರು ”ನೋಡಿ, ನಾವು ಇಂತಹವರಿಗೆ ಬಹುಮಾನ ನೀಡಲು ಆಗುವುದಿಲ್ಲ” ಎಂದು ಕಟುವಾಗಿ ನುಡಿದರು. ನಾನಂದು ಯಾವುದೇ ಪ್ರತಿರೋಧ ವ್ಯಕ್ತಪಡಿಸದೇ ಸುಮ್ಮನಾಗಿದ್ದರ ಕುರಿತು ಇಂದಿಗೂ ನನಗೆ ನೋವಿದೆ. ಆ ಸಹ ತೀರ್ಪುಗಾರರು ಬಹಿರಂಗವಾಗಿ ಜಾತಿವಾದಿಯಾಗಿದಷ್ಟೇ ಅಲ್ಲದೆ, ನಾನೂ ಸಹಾ ಅದೇ ಗುಂಪಿಗೆ ಸೇರಿದವಳೆಂದು ನಿರ್ಧರಿಸಿದ್ದರು.
ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಬ್ರಾಹ್ಮಣರು ಮೇಲುಗೈ ಹೊಂದಿದ್ದಾರೆಯೇ? ಉತ್ತರ ಹೌದು. ಇದರಲ್ಲಿ ಯಾವುದೇ ಸಂಶಯವಿಲ್ಲ. ಇವರಲ್ಲಿ ಬಹುತೇಕರು ಅನ್ಯ ಜಾತಿಯವರನ್ನು ಸಹ ಸಂಗೀತಗಾರರಾಗಿ ಸ್ವೀಕರಿಸಲು ಸಿದ್ಧರಿಲ್ಲ ಎನ್ನುವುದು ಸತ್ಯವೇ? ಉತ್ತರ ಹೌದು. ಸತ್ಯ. ಆದರೆ ಇದ್ಯಾವುದೂ ಇಲ್ಲವೆಂದು ಅವರು ವಾದಿಸುವುದು ಸಹಾ ಸತ್ಯವೇ.
ಕರ್ನಾಟಕ ಸಂಗೀತದ ಪ್ರಚಂಡ ಪ್ರತಿಭೆಯಾದ ಟಿ.ಎಂ.ಕೃಷ್ಣ ಬ್ರಾಹ್ಮಣ ಸಮುದಾಯವು ಜಾತಿಯಾಧಾರಿತ ಭೇದಭಾವ ಮಾಡುವುದೆಂದು ನೇರವಾಗಿ ಹೇಳಿದ್ದಾರೆ. ಹಿತವಾದ ತಾಳ ಮತ್ತು ಲಯಗಳ ನಿನಾದವನ್ನು ಹೊಂದಿರುವ ಕರ್ನಾಟಕ ಸಂಗೀತದ ಒಡಲಿನಲ್ಲಿ ಇಂತಹುದೊಂದು ಕಠೋರ ವಾಸ್ತವ ಇರುವುದನ್ನು ಕೃಷ್ಣ ಬೆಟ್ಟು ಮಾಡಿ ತೋರಿಸುತ್ತಲೇ ಬಂದಿದ್ದಾರೆ. ಈ ಆರೋಪಗಳನ್ನು ಮಾಡುವ ಮೊದಲು, ಬಹುಶಃ ಕೃಷ್ಣ ಅವರು ಇನ್ನೊಂದು ಕೆಲಸ ಮಾಡಬಹುದಾಗಿತ್ತು: ಜಾತಿವಾದಿ ನಡತೆಯ ಕುರಿತು ಇತರರ ಅನುಭವವನ್ನು ಒಂದೆಡೆ ದಾಖಲಿಸಿ, ಅದರ ಆಧಾರದ ಮೇಲೆ ಆನಂತರ ಆರೋಪ ಮಾಡಬಹುದಿತ್ತು (ಉದಾಹರಣೆಗೆ ಮೇಲೆ ದಾಖಲಿಸಿರುವ ನನ್ನ ವೈಯಕ್ತಿಕ ಅನುಭವ). ಜೊತೆಗೆ ತಮ್ಮ ವೈಯಕ್ತಿಕ ಅನುಭವವನ್ನು ಮೊದಲಿಗೆ ದಾಖಲಿಸಿ, ಆನಂತರ ಇಡೀ ಸಮುದಾಯವನ್ನು ದೂರಬಹುದಾಗಿತ್ತು. ತನ್ಮೂಲಕ ನಾನು ಹೇಳುತ್ತಿರುವ ಆರೋಪಗಳಿಗೆ ‘ನೋಡಿ ಇಲ್ಲಿದೆ ಆಧಾರ’ ಎನ್ನಲು ಅವಕಾಶವಿತ್ತು. ಜಾತಿಯ ಸಂಕೀರ್ಣತೆ ಎಷ್ಟಿದೆಯೆಂದರೆ, ಸಾಕಷ್ಟು ಸಂಶೋಧನೆಯ ಆಧಾರದ ಮೇಲೆ ಮಂಡಿತವಾಗುವ ಪಾಂಡಿತ್ಯಪೂರ್ಣ ಹೇಳಿಕೆಯೂ ವಿವಾದ ರಹಿತವಾಗಿರಲು ಅವಕಾಶವಾಗುವುದಿಲ್ಲ.
ಕರ್ನಾಟಕ ಸಂಗೀತ ಪ್ರಕಾರದಲ್ಲಿ ಜಾತಿಯ ಪ್ರಭಾವವನ್ನು ನಾವು ನಿರಾಕರಿಸಲು ಸಾಧ್ಯವೇ ಇಲ್ಲ. ”ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಯಾರು ಯಾರನ್ನು ಜಾತಿಯ ಆಧಾರದ ಮೇಲೆ ಭೇದಭಾವ ಎಣಿಸುವುದಿಲ್ಲ” ಎನ್ನುವ ಹರಿಕಥಾ ಕಲಾವಿದ ದುಷ್ಯತ್ ಶ್ರೀಧರ್ ಅವರು ಸುಳ್ಳು ಹೇಳುತ್ತಿದ್ದಾರೆ ಅಥವಾ ನಿರಾಕರಣೆಯ ಸುಳಿಯಲ್ಲಿದ್ದಾರೆ ಎಂದಷ್ಟೇ ಹೇಳಬಹುದು. ಜಾತಿಯ ಮೇಲರಿಮೆ, ನಿರ್ದಿಷ್ಟವಾದ ವರ್ತನೆಯ ಅಳವಡಿಕೆಗಳು ಇತರರಿಗೆ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಪ್ರವೇಶ ಪಡೆಯಲು ಅವಕಾಶ ನೀಡುವುದಿಲ್ಲ.
”ಕೃಷ್ಣ ಅವರು ರಾಮನ ಕುರಿತು ಭಕ್ತಿಸುಧೆ ಹರಿಸುವ ತ್ಯಾಗರಾಜರ ಕೀರ್ತನೆಯ ನಂತರ ರಾಮನಿಗೆ ಚಪ್ಪಲಿ ಹಾರಹಾಕಬೇಕೆಂದ ಪೆರಿಯಾರ್ ಕುರಿತು ಹಾಡುವುದನ್ನು ಯಾವ ಆಸ್ತಿಕ ಒಪ್ಪಲು ಸಾಧ್ಯ?” ಎನ್ನುವ ಶ್ರೀಧರ್ ಅವರ ನೋವನ್ನು ಸ್ವಲ್ಪಮಟ್ಟಿಗೆ ಅರಿಯಲು ಅವಕಾಶವಿದೆ. ಆದರೆ ಕೃಷ್ಣರಿಗೆ ಇದು ಮುಖ್ಯವೇ ಅಲ್ಲ. ಅವರ ಪ್ರಕಾರ ”ಹಾಡು ರಾಮನ ಕುರಿತಾಗಿರಲಿ ಇಲ್ಲವೇ ಒಂದು ಗೋಡೆಯ ಕುರಿತಾಗಿರಲಿ-ಇಲ್ಲಿ ಮುಖ್ಯವಾಗುವುದು ರಾ ಮತ್ತು ಮ ನಡುವೆ ಇರುವ ಸಂಗೀತ ಅಷ್ಟೆ”. ಈ ನಿಲುವು ಟೀಕೆಗೆ ಒಳಪಡುತ್ತದೆ. ಏಕೆಂದರೆ ಕೃಷ್ಣರು ಪೆರಿಯಾರ್ ಕುರಿತು ಹಾಡಿ, ”ನನಗೆ ಪೆರಿ ಮತ್ತು ಯಾರ್ ನಡುವೆ ಇರುವ ಸಂಗೀತವಷ್ಟೆ ಮುಖ್ಯವೆಂದು” ಹೇಳಿದರೆ, ಪೆರಿಯಾರ್ ಅವರು ಆಚರಿಸಿದ ಪ್ರತಿರೋಧ ರಾಜಕೀಯವನ್ನು ಹಾಡಿನ ಮೂಲಕ ಪ್ರತಿಪಾದಿಸುತ್ತಿರುವುದನ್ನು ನಿರಾಕರಿಸಲು ಅವಕಾಶವಿಲ್ಲ ಅಲ್ಲವೇ?
ಜೊತೆಗೆ, ಕರ್ನಾಟಕ ಸಂಗೀತ ಪ್ರಕಾರದಲ್ಲಿ ಸಾಹಿತ್ಯಕ್ಕೆ ಆದ್ಯತೆಯಿರುತ್ತದೆ ಎನ್ನುವುದನ್ನು ಗಮನಿಸಬೇಕಿದೆ. ಈ ಸಂಗೀತ ಪ್ರಕಾರ ಭಕ್ತಿ ಚಳುವಳಿಯೊಂದಿಗೆ ಕಳ್ಳುಬಳ್ಳಿ ಸಂಬಂಧವನ್ನು ಹೊಂದಿದೆ. ಕರ್ನಾಟಕ ಸಂಗೀತ ಪ್ರಕಾರದ ತ್ರಿಮೂರ್ತಿಗಳ (ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶಾಮ ಶಾಸ್ತ್ರಿ) ರಚನೆಗಳು ಭಕ್ತಿಯನ್ನು ಪ್ರಮುಖ ಅಂಶವಾಗಿ ಹೊಂದಿವೆ. ಹಾಗೆ ಕರ್ನಾಟಕ ಸಂಗೀತ ಪ್ರಕಾರ ಹರಿಕಥಾ ಪ್ರಕಾರದೊಂದಿಗೆ ಹತ್ತಿರದ ಸಂಬಂಧವನ್ನು ಇರಿಸಿಕೊಂಡಿದೆ. ಹೀಗಾಗಿ ಕರ್ನಾಟಕ ಸಂಗೀತ ಪ್ರಕಾರವು ಭಕ್ತಿ ಮತ್ತು ಧರ್ಮದೊಂದಿಗೆ ಸಹಸಂಬಂಧವನ್ನು ಪಡೆದಕೊಂಡಿರುವುದು ವಾಸ್ತವ.
ಆದರೆ ಇದರರ್ಥ ನೀವು ಹಿಂದು ಧರ್ಮದ ಅನುಯಾಯಿಗಳಾಗಿದ್ದರೆ ಮಾತ್ರ ಈ ಸಂಗೀತ ಪ್ರಕಾರದ ಸದಸ್ಯರಾಗಿರಲು ಸಾಧ್ಯ ಎಂದೇ? ಉತ್ತರ ಖಂಡಿತ ಇಲ್ಲ. ಏಕೆಂದರೆ ಸುಬ್ಬರಾಮ ದೀಕ್ಷಿತರಿಗೆ ದುಂಬಾಲು ಬಿದ್ದು ‘ಸಂಗೀತ ಸಂಪ್ರದಾಯ ಪ್ರದರ್ಶಿನಿ’ ಗ್ರಂಥ ರಚನೆಯಾಗಲು ಕಾರಣಕರ್ತರಾದ ಚಿನ್ನಸ್ವಾಮಿ ಮೊದಲಿಯಾರ್ ಅವರು ಕ್ಯಾಥೋಲಿಕ್ ಕ್ರಿಶ್ಚಿಯನ್ನರು! ಕರ್ನಾಟಕ ಸಂಗೀತದ ತ್ರಿಮೂರ್ತಿಗಳ ರಚನೆಗಳ ಜೊತೆಗೆ ಇತರರ ರಚನೆಗಳನ್ನು ಹೊಂದಿರುವ ಈ ಗ್ರಂಥ ಕರ್ನಾಟಕ ಸಂಗೀತಗಾರರ ಪಾಲಿಗೆ ಅಮೂಲ್ಯವಾದ ಗ್ರಂಥವಾಗಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸರ್ವಾಧಿಕಾರದತ್ತ ದೇಶ ದಾಪುಗಾಲು ಹಾಕುತ್ತಿಲ್ಲವೇ? ಅವರಿಗಾದದ್ದು ನಮಗಾಗುವುದಿಲ್ಲವೇ?
ಒರ್ವ ಸಂಗೀತಗಾರ ಹಿಂದು ಸಂಪ್ರದಾಯದಲ್ಲಿ ನಂಬಿಕೆ ಇದೆಯೋ ಇಲ್ಲವೋ ಅನ್ನುವುದು ಅವನ ಹಾಡುಗಾರಿಕೆಯ ಮೇಲೆ ಪರಿಣಾಮ ಬೀರುತ್ತದೆಯೇ? ಉದಾಹರಣೆಗೆ ರಾಮನ ಕುರಿತಾದ ಹಾಡಿನ ಚರಣವಾದ ”ಪರಿಪೂರ್ಣ ನಿಷ್ಕಳಂಕ ನಿರ್ವಾದಿ ಸುಖದಾಯಕ” ಸಾಲನ್ನು ಹಾಡುವವ ಧರ್ಮದಲ್ಲಿ ನಂಬಿಕೆಯಿರುವವನಾದರೆ ಭಿನ್ನವಾಗಿ ಧ್ವನಿಸುತ್ತದೆಯೇ? ಆಸ್ತಿಕ ಹಾಡುಗಾರ ಈ ಸಾಲಿಗೊಂದು ವಿಶೇಷ ಆಯಾಮವನ್ನು ಭರಿಸುತ್ತಾನೆಯೇ? ಉತ್ತರ ಹೌದು ಎಂದಾದಲ್ಲಿ, ಕೃಷ್ಣರ ಹಾಡುಗಳಲ್ಲಿ ಇಷ್ಟೇ ಅಥವಾ ಇದಕ್ಕಿಂತಲೂ ಉತ್ತಮವಾದ ಭಾವ ಹೊರಹೊಮ್ಮವುದು ಹೇಗೆ ಸಾಧ್ಯವಾಗುತ್ತಿದೆ? ಅನೇಕ ಪ್ರಸಿದ್ಧ ಹಾಡುಗಾರರು ಬಹಿರಂಗವಾಗಿ ತಾವು ನಾಸ್ತಿಕರೆಂದು ಹೇಳಿಕೊಳ್ಳದವರು ಎಂದು ನಮಗೆಲ್ಲ ತಿಳಿದಿದೆ. ”ಕರ್ನಾಟಕ ಸಂಗೀತದಲ್ಲಿ ಭಕ್ತಿ ಮುಖ್ಯ. ಆದರೆ ಈ ಭಕ್ತಿ ಯಾವುದೇ ದೇವರ ಕುರಿತಾಗಿರದೆ, ಸಂಗೀತದ ಕುರಿತಾಗಿರಬೇಕೆಂದು” ಶ್ರೇಷ್ಠ ಸಂಗೀತಗಾರರಾದ ಶ್ರೀ ಸೆಮ್ಮನಗುಡಿ ಶ್ರೀನಿವಾಸ ಐಯ್ಯರ್ ಸಂದರ್ಶನವೊಂದರಲ್ಲಿ ಪ್ರತಿಪಾದಿಸಿದ್ದರು.
ಯೇಸುವಿನ ದಾಸನೆಂಬ ಅರ್ಥ ನೀಡುವ ಹೆಸರಿನ ಕೆ.ಜೆ. ಯೇಸುದಾಸ್ ಕರ್ನಾಟಕ ಸಂಗೀತ ಪ್ರಕಾರವನ್ನು ಬಹುವಾಗಿ ಪ್ರೀತಿಸುತ್ತಾರೆ ಮತ್ತು ತೀವ್ರವಾದ ಭಾವವನ್ನು ತಮ್ಮ ಹಾಡಿನಲ್ಲಿ ಹೊಮ್ಮಿಸುತ್ತಾರೆ. ಇದೇ ರೀತಿಯಲ್ಲಿ ನಾಗಸ್ವರ ನುಡಿಸುವ ಶೇಖ್ ಮೌಲಾನ ಕುಟುಂಬದವರು ಸಹಾ. ಇವರು ಹಿಂದುಗಳಲ್ಲ ಅನ್ನುವ ಕಾರಣಕ್ಕೆ, ಇವರ ಸಂಗೀತ ಕಳಪೆ ಗುಣಮಟ್ಟದ್ದು ಎನ್ನಲು ಬರುತ್ತದೆಯೇ?
ಈ ವಿಚಾರವೂ ಸಹಾ ಜಾತಿಯಷ್ಟೇ ಸಂಕೀರ್ಣವಾದ ವಿಷಯವಾಗಿದೆ. ಸರಳವಾದ ಹೌದು ಅಲ್ಲಗಳ ಮೂಲಕ ಉತ್ತರಿಸುವುದು ಸಾಧ್ಯವಿರದ ಮಾತು.
ಟಿ.ಎಂ.ಕೃಷ್ಣ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಅಕಾಡೆಮಿ ಸಂಗೀತ ಕಲೆಯನ್ನು ಗೌರವಿಸುವ ಗಟ್ಟಿ ನಿಲುವನ್ನು ತಳೆದಿದೆ. ಕೃಷ್ಣರ ವೈಯಕ್ತಿಕ ನಿಲುವುಗಳಾಚೆಗೆ ಅವರಲ್ಲಿರುವ ಕಲಾಕಾರನನ್ನು ಗುರುತಿಸುವ ಕಾರ್ಯವನ್ನು ಅದು ನಿರ್ವಹಿಸಿದೆ. ಚೆನ್ನೈ ನಗರದಲ್ಲಿ ಆಯೋಜನೆಗೊಳ್ಳುವ ಡಿಸೆಂಬರ್ ಮಾಸದ ಸಂಗೀತೋತ್ಸವದ ಪ್ರಮುಖ ಶಕ್ತಿಗಳಲ್ಲಿ ಒಂದು ದ ಮ್ಯೂಸಿಕ್ ಅಕಾಡೆಮಿಯಾಗಿದೆ. ಈ ಡಿಸೆಂಬರ್ ಮಾಸದ ಸಂಗೀತ ಕಛೇರಿಗಳು ಸಾಮಾಜಿಕವಾಗಿ ಸಂಕುಚಿತವಾದ ನಿಲುವಿನ ಕಛೇರಿಗಳೆಂದು 2015ರಲ್ಲಿ ಟಿ.ಎಂ.ಕೃಷ್ಣರು ಘೋಷಿಸಿ ಅವುಗಳಲ್ಲಿ ಭಾಗವಹಿಸದಿರುವ ನಿರ್ಧಾರವನ್ನು ಪ್ರಕಟಿಸಿದರು. ಈ ಅಪರಾಧದ ಕ್ರಿಯೆಯಲ್ಲಿ ದ ಮ್ಯೂಸಿಕ್ ಅಕಾಡೆಮಿಯೂ ಪಾಲುದಾರನಾಗಿತ್ತೆನ್ನುವುದು ಕೃಷ್ಣ ನಿಲುವಾಗಿತ್ತು. ಪರಿಸ್ಥಿತಿ ಹೀಗಿದ್ದರೂ, ಟಿ.ಎಂ.ಕೃಷ್ಣರಿಗೆ ಪ್ರಶಸ್ತಿಯನ್ನು ನೀಡುವ ಅಕಾಡೆಮಿಯ ನಿರ್ಧಾರ ನಿಜಕ್ಕೂ ಅಭಿನಂದನಾರ್ಹವಾಗಿದೆ.
ಕೃಷ್ಣರ ಟೀಕೆಯಲ್ಲಿ ಒಂದಿಷ್ಟು ವಾಸ್ತವದ ತಿರುಳು ಇದೆ ಎನ್ನುವುದನ್ನು ಅಕಾಡೆಮಿ ಒಪ್ಪಿದೆ ಎನ್ನುವುದು ಪ್ರಶಸ್ತಿಯ ಘೋಷಣೆಯಲ್ಲಿ ಅಂತರ್ಗತವಾಗಿದೆ. ಒಂದು ವೇಳೆ ಆಧಾರರಹಿತವಾದ ಆರೋಪಗಳನ್ನು ಕೃಷ್ಣರು ಮಾಡಿದ್ದ ಪಕ್ಷದಲ್ಲಿ, ಅಕಾಡೆಮಿ ಪ್ರಶಸ್ತಿ ನೀಡಲು ಖಂಡಿತಾ ಮುಂದಾಗುತ್ತಿರಲಿಲ್ಲ. ಇದುವೆ ಇತರ ಸಂಗೀತಗಾರರ ಸಿಟ್ಟಿಗೂ ಕಾರಣವಾಗಿದೆ. ಕರ್ನಾಟಕ ಸಂಗೀತ ಪ್ರಕಾರದ ಮಹಾ ಪೋಷಕರಲ್ಲಿ ಒಂದಾದ ದ ಮ್ಯೂಸಿಕ್ ಅಕಾಡೆಮಿ ಕೃಷ್ಣರ ನಿಲುವಿಗೆ ಬೆಂಬಲ ನೀಡುವುದು ಸರಿಯೇ? ಕ್ಷಮೆಗೆ ಅರ್ಹವಲ್ಲದ ಚಿಂತನೆಗಳಿಗೆ ಅಕಾಡೆಮಿ ಮನ್ನಣೆಯನ್ನು ನೀಡಿದಂತೆ ಆಗಲಿಲ್ಲವೇ? ಎನ್ನುವ ಪ್ರಶ್ನೆ ಇವರದ್ದು. ಕೃಷ್ಣರ ನಿಲುವುಗಳಿಗೆ ಅಕಾಡೆಮಿ ಬಹಿರಂಗವಾಗಿ ಬೆಂಬಲ ನೀಡಿಲ್ಲವಾದರೂ, ಪ್ರಶಸ್ತಿ ನೀಡುವುದರ ಮೂಲಕ ಅವರ ನಿಲುವುಗಳಿಗೆ ಬೆಂಬಲ ನೀಡಿದಂತೆ ಆಯಿತಲ್ಲವೆ?
ತಮ್ಮ ಸಂಗೀತದ ಕಾರಣದಿಂದ, ಕೃಷ್ಣರು ಈ ಪ್ರಶಸ್ತಿಯಷ್ಟೇ ಅಲ್ಲದೆ, ಇನ್ನೂ ಅನೇಕ ಪ್ರಶಸ್ತಿಗಳನ್ನು ಸ್ವೀಕರಿಸಲು ಅರ್ಹರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದುವರೆಗಿನ ಅವರ ಬೌದ್ಧಿಕ ಪ್ರಯಾಣವನ್ನು ಅನುಸರಿಸಿ ನೋಡಿದಾಗ, ಈ ಪ್ರಶಸ್ತಿಯನ್ನು ಅವರು ಒಪ್ಪಿಕೊಳ್ಳುವುದು ಎಷ್ಟು ಸೂಕ್ತ ಅನ್ನೋ ಪ್ರಶ್ನೆಯೂ ಮೂಡುತ್ತದೆ. ಕೃಷ್ಣರು ಹೀಗೆ ಘರ್ ವಾಪ್ಸಿಯಾಗಿದ್ದು ಗಾಬರಿ ಮೂಡಿಸಿದೆ ಎಂದು ಓರ್ವ ಸಂಗೀತಾಸಕ್ತರ ಮಾತು ಕೂಡ ಸತ್ಯವೆ. ಹಾಗೆ ನೋಡಿದರೆ, ಕೃಷ್ಣ ಆಡಿದನ್ನು ಮಾಡಿ ತೋರದೇ ಇರುವುದು ಇದೇ ಮೊದಲ ಬಾರಿಯೇನು ಅಲ್ಲ.

ಪ್ರಶಸ್ತಿಯನ್ನು ವಿರೋಧಿಸುತ್ತಿರುವ ನಿಲುವುಗಳು ಕಂಡಾಗ ಇನ್ನಷ್ಟು ಗಾಬರಿಯಾಗುತ್ತದೆ. ರಾಗಾ ಸಹೋದರಿಯರು (ರಂಜನಿ ಮತ್ತು ಗಾಯತ್ರಿ) ಪ್ರಶಸ್ತಿಯನ್ನು ವಿರೋಧಿಸಿ ಬರೆದಿರುವ ಪತ್ರದಲ್ಲಿ ಪೆರಿಯಾರ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯನ್ನು ನೀಡಿರುವ ಅಕಾಡೆಮಿಯ ಕಾರ್ಯದರ್ಶಿ ಮುರಳಿ ”ರಾಗಾ ಸಹೋದರಿಯರ ಪತ್ರ ಅನಪೇಕ್ಷಿತ ಮತ್ತು ಅಸಮ್ಮತವಾದ ಪತ್ರ” ಎಂದಿದ್ದಾರೆ. ಪೆರಿಯಾರ್ ಅವರು ಉಗ್ರವಾದ ಬ್ರಾಹ್ಮಣ ವಿರೋಧಿ ನಿಲುವುಗಳನ್ನು ಹೊಂದಿದ್ದರೆನ್ನುವುದು ಒಪ್ಪಿತವಾದ ವಿಚಾರ. ಆದರೆ ಕರ್ನಾಟಕ ಸಂಗೀತ ಪ್ರಕಾರಕ್ಕೆ ನೀಡುವ ಪ್ರಶಸ್ತಿಯ ವಿಚಾರದಲ್ಲಿ ಪೆರಿಯಾರ್ ಅವರ ಹೆಸರು ತರುವುದು ಅನಪೇಕ್ಷಿತವಾದ ಮತ್ತು ಆತಂಕ ಮೂಡಿಸುವ ವಿಚಾರವಾಗಿದೆ.
ಇದೇ ಸಮಯದಲ್ಲಿ, ರಾಗಾ ಸಹೋದರಿಯರನ್ನು ಸನಾತನ ಧರ್ಮದ ಕಾವಲುಗಾರರೆಂದು ಸಾಮಾಜಿಕಜಾಲ ತಾಣಗಳಲ್ಲಿ ಹೊಗಳುವ ದೊಡ್ಡ ಗುಂಪು ಸೃಷ್ಟಿಯಾಗಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ದೇಶದ ಉದ್ದಗಲಕ್ಕೂ ಹರಡಿ ನಿಂತಿರುವ ಹಿಂದುತ್ವ ರಾಜಕಾರಣದ ಹಿನ್ನೆಲೆಯಲ್ಲಿ ಕರ್ನಾಟಕ ಸಂಗೀತ ಪ್ರಕಾರವನ್ನು ಮತ್ತಷ್ಟು ವಿರೋಚಿತ ಮಾತುಗಳಲ್ಲಿ ಹೊಗಳುವುದು ಮತ್ತು ಪರಿಭಾವಿಸುವುದು ಸಹಜ ಪ್ರಕ್ರಿಯೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪೆರಿಯಾರ್ ಹೆಸರನ್ನು ಮುನ್ನೆಲೆಗೆ ತರುವುದು ಪರಿಸ್ಥಿತಿ ಇನ್ನಷ್ಟು ಧ್ರುವೀಕರಣಗೊಳ್ಳಲು ಇಂಬು ನೀಡಿದಂತಾಗುತ್ತದೆ.
ಇದನ್ನು ಓದಿದ್ದೀರಾ?: ನಮ್ ಜನ | ಸಕಲೆಂಟು ಸಾಮಾನು ಮಾರುವ ಸೈಕಲ್ ಸಿದ್ದೇಗೌಡ್ರು
ಪ್ರಶಸ್ತಿಯ ವಿಚಾರ ದಿನೇ ದಿನೇ ದೊಡ್ಡದಾಗುತ್ತ ಸಾಗಿದೆ. ಅಕಾಡೆಮಿಯನ್ನೇ ಬಹಿಷ್ಕರಿಸುವ ಮಾತುಗಳು ಬರುತ್ತಿವೆ. ಆದರೆ ಈ ಎಲ್ಲಾ ನಿಲುವುಗಳಲ್ಲಿ ಸಂಗೀತದ ಅಂಶವಿರದೆ, ದೇಶದಲ್ಲಿ ಪ್ರಚಲಿತವಿರುವ ನಾವು ಮತ್ತು ಅವರು ಎನ್ನುವ ಅಸ್ಮಿತೆಯ ರಾಜಕಾರಣದ ಅಂಶವಿದೆ. ಇವತ್ತಿನ ಸತ್ಯೋತ್ತರ ಕಾಲದಲ್ಲಿ ”ಎಲ್ಲದರ ಹಿಂದೆಯೂ ಒಂದು ಅವ್ಯಕ್ತ ಉದ್ದೇಶವಿರುತ್ತದೆ” (ಹಿಡನ್ ಅಜೆಂಡಾ) ಎನ್ನುವ ಗ್ರಹಿಕೆ ಮೌಲ್ಯ ಪಡೆದುಕೊಂಡಿದೆ. ಇದರ ಪ್ರಭಾವ ಎಷ್ಟರಮಟ್ಟಿಗೆ ಇದೆ ಎಂದರೆ, ಈ ಲೇಖನ ಬರವಣಿಗೆಯ ಹಿಂದೆಯೂ ಒಂದು ಅವ್ಯಕ್ತ ಉದ್ದೇಶ ಇದ್ದೇ ಇದೆ ಎಂದು ಗ್ರಹಿತವಾಗುತ್ತದೆ.
ಇದೊಂದು ವಿಚಿತ್ರವಾದ ಸ್ಥಿತಿ: ಭಕ್ತಿ ಚಳುವಳಿಯ ಭಾಗವಾಗಿ ಮೂಡಿ ಬಂದ ಕರ್ನಾಟಕ ಸಂಗೀತ ಪ್ರಕಾರ, ಒಂದು ಕಲಾ ಪ್ರಕಾರವೂ ಹೌದು. ಇದರ ಪರಿಣಾಮ ಪದೇ ಪದೇ ಸಂಘರ್ಷ ಸ್ಫೋಟಗೊಳ್ಳುತ್ತಿರುತ್ತದೆ. ಕರ್ನಾಟಕ ಸಂಗೀತಗಾರರು ಕ್ರಿಶ್ಚಿಯನ್ ಹಾಡುಗಳನ್ನು ಹಾಡಿದ ವಿಚಾರ ಕುರಿತು ಉಂಟಾದ ಕ್ಷೋಭೆಯನ್ನು ಇತ್ತೀಚಿನ ಉದಾಹರಣೆಯಾಗಿ ನೋಡಬಹುದು. ಕರ್ನಾಟಕ ಸಂಗೀತ ಪ್ರಕಾರ ಒಂದು ಕಲಾ ಪ್ರಕಾರವೇ ಅಥವಾ ಅದೊಂದು ಭಕ್ತಿ ಪ್ರಕಾರವೇ? ಅನ್ನುವ ಪ್ರಶ್ನೆಯೇ ಇದಕ್ಕೆಲ್ಲಾ ಮೂಲ ಕಾರಣವಾಗಿದೆ. ಹಾಡುಗಾರ ಮತ್ತು ಕೇಳುಗರ ನಿಲುವನ್ನು ಆಧರಿಸಿ ಇದು ಕೇವಲ ಸಂಗೀತ ಪ್ರಕಾರ ಇಲ್ಲವೇ ಭಕ್ತಿ ಪ್ರಕಾರ ಆಗಬಹುದು ಅಥವಾ ಎರಡೂ ಏಕ ಕಾಲಕ್ಕೆ ಆಗಬಹುದು. ಆದರೆ ಇದು ಹೀಗೆಯೇ ಇರಬೇಕೆಂದು ಹೇರುವುದು ಸರಿಯೇ ಎನ್ನುವುದು ಚರ್ಚೆಗೆ ಯೋಗ್ಯವಾದ ವಿಚಾರವಾಗಿದೆ. ಆದರೆ ಈ ಎರಡೂ ನಿಲುವುಗಳ ಸಹಜೀವನ ನಡೆಸುವುದು ಇಂದಿನ ಬಿರುಕುಗಳಿರುವ ಕಾಲಘಟ್ಟದಲ್ಲಿ ಸ್ವಲ್ಪ ಕಷ್ಟದ ವಿಷಯವಾಗಿದೆ.
(ಮೂಲ: ಲಕ್ಷ್ಮೀ ಶ್ರೀರಾಮ್. ಕನ್ನಡಕ್ಕೆ: ಸದಾನಂದ ಆರ್)
(ಲಕ್ಷ್ಮೀ ಶ್ರೀರಾಮ್, ಸಂಗೀತದ ಪ್ರೊಫೆಸರ್, ಅಹಮದಬಾದ್ ವಿಶ್ವವಿದ್ಯಾನಿಲಯ. ಫ್ರಂಟ್‌ಲೈನ್, 6-19, 2024)