ಬಾಶೋ ನಮ್ಮನ್ನು ಕಾವ್ಯದ ತಿರುಳನ್ನು ಅರಸಲು ಪ್ರೇರೇಪಿಸುತ್ತಾನೆ. ತಿರುಳೇ ಕಾವ್ಯದ ಇರುವಿಕೆ. ಈ ತಿರುಳನ್ನು ಓದುಗನಿಗೆ ದಾಟಿಸಬೇಕಾದರೆ ಕವಿ ತನ್ನನ್ನು ತಾನೇ ಇಲ್ಲವಾಗಿಸಿಕೊಳ್ಳಬೇಕಾಗುತ್ತದೆ. ಅಮುಖ್ಯನಾಗಬೇಕಾಗುತ್ತದೆ. ಆಗ ಕಾವ್ಯದ ತಿರುಳು ಕಡೆದ ಬೆಣ್ಣೆಯಂತೆ ತೇಲಿಬಂದು ಓದುಗನ ಹೃದಯ ತಟ್ಟುತ್ತದೆ. ಇದನ್ನು ಸಾಧಿಸಲು ಕವಿಗೆ ನಮ್ರತೆ ಹಾಗೂ ಆತ್ಮವಿಶ್ವಾಸ ಬೇಕಾಗುತ್ತದೆ. ಬಾಶೋನ ಹಾಯ್ಕುಗಳು ಈ ಹಾದಿಯನ್ನು ನಮಗೆ ತೋರಿಸುತ್ತವೆ.
ಜಪಾನಿನ ಪಶ್ಚಿಮದ ಕಡಲ ತೀರ. ಕತ್ತಲ ರಾತ್ರಿಯಲ್ಲಿ ಭೋರ್ಗರೆವ ಕಡಲು. ಮೇಲೆ ಕಿಕ್ಕಿರಿದ ನಕ್ಷತ್ರಗಳ ನಡುವೆ ಹಾಲು ಚೆಲ್ಲಿದಂತೆ ಆಕಾಶಗಂಗೆ. ಅಲ್ಲೊಬ್ಬ ಅಲೆಗಳನ್ನೇ ದಿಟ್ಟಿಸುತ್ತ ನಿಂತಿರುವ ಕವಿ. ಕವಿ ಮನಸ್ಸು ಬೇರೆ ಏನನ್ನೋ ಧ್ಯಾನಿಸುತ್ತಿದೆ. ದೂರದಲ್ಲಿ ಅಲೆಗಳ ನಡುವೆ ಮಸುಕು ಮಸುಕಾಗಿ ಕಾಣಿಸುತ್ತಿರುವ ಸ್ಯಾಡೋ ದ್ವೀಪ. ಅತ್ತಲಿಂದ ಬರುತ್ತಿರುವ ನೋವಿನ ಅಲೆಗಳು. ಅವು ಪ್ರಭುತ್ವದಿಂದ ಗಡೀಪಾರು ಶಿಕ್ಷೆಗೊಳಗಾಗಿರುವ ಕಲಾವಿದರು, ವಿಚಾರವಾದಿಗಳು, ಸಂತರು ಮತ್ತು ಸಾಮಾನ್ಯರ ನಿಟ್ಟುಸಿರು. ಕವಿ ತಲೆ ಎತ್ತಿ ನೋಡುತ್ತಾನೆ. ನಕ್ಷತ್ರಗಳ ನದಿ ಈ ಕಡಲ ತಡಿಯಿಂದ ಆ ದ್ವೀಪದಂಚಿನವರೆಗೆ ಸಾಂತ್ವನದ ಆಕಾಶಗಂಗೆಯಾಗಿ ಹರಿಯುತ್ತಿದೆ. ಅಪಾರ ನೋವು ಮತ್ತು ಕರುಣೆಯ ಭಾವದೊಂದಿಗೆ ಕವಿ ಅಲ್ಲಿಯೇ ಹಾಯ್ಕು ಕಾವ್ಯವೊಂದನ್ನು ರಚಿಸುತ್ತಾನೆ.
ಭೋರ್ಗರೆವ ಕಡಲು
ಚಾಚಿಕೊಂಡಿದೆ ಆ ದ್ವೀಪದಂಚಿಗೆ
ಆಕಾಶಗಂಗೆ
ಅಂದಿನಿಂದ ಇಂದಿನವರೆಗೂ ಕಾಲ ದೇಶಗಳನ್ನು ದಾಟಿ ಸಾಗಿಬಂದಿವೆ ಈ ಮೂರು ಸಾಲುಗಳು. ಇದನ್ನು ಬರೆದ ಕವಿ ಜಪಾನಿನ ಮಾಟ್ಸುವೋ ಬಾಶೋ. ಜಪಾನಿನಲ್ಲಿ ಹುಟ್ಟಿ ಜಗತ್ತಿನಾದ್ಯಂತ ಹರಡಿದ ಹಾಯ್ಕು ಎಂಬ ಕಾವ್ಯಪ್ರಕಾರದ ಪ್ರಮುಖ ಕವಿ. ಕಾವ್ಯದ ಕಡು ವ್ಯಾಮೋಹಿ. ಹಾಯ್ಕು ಬರೆಯುತ್ತ ಇಡೀ ಜಪಾನ್ ತಿರುಗಿದ ಅಲೆಮಾರಿ.
ಜಪಾನಿನ ಕಾವ್ಯಕ್ಕೆ ಹೊಸದಿಕ್ಕನ್ನು ಕೊಟ್ಟ ಬಾಶೋ ಹುಟ್ಟಿದ್ದು 1644ರಲ್ಲಿ. ಉನೋ ಎಂಬ ಹಳ್ಳಿಯ ಶರತ್ಕಾಲದ ಒಂದು ಬೆಳದಿಂಗಳ ರಾತ್ರಿಯಲ್ಲಿ. ನದಿ ಪಾತ್ರದಲ್ಲಿರುವ ಆ ಹಳ್ಳಿ ಸುಜುಕಾ ಮತ್ತು ಮುರೋ ಪರ್ವತಗಳಿಂದ ಸುತ್ತುವರೆದಿದೆ. ಪ್ರಕೃತಿಯ ಮಡಿಲಲ್ಲಿ ಬೆಳೆದ ಬಾಶೋನ ಮೊದಲ ಹೆಸರು ಕಿನ್ಸಾಕು. ನಂತರ ಅವನಿಗೆ ಮುನೆಫುಸಾ ಎಂದು ಕರೆಯಲಾಯಿತು. ಕೆಳಹಂತದ ಸಮುರಾಯ್ ಯೋಧರ ಮನೆತನ ಅವನದು. ಆ ಪ್ರದೇಶದ ಸಾಮಂತನೊಬ್ಬನ ಸಂಬಂಧಿಕನ ಬೆಂಗಾವಲು ಪಡೆಯಲ್ಲಿ ಸೇರಿಕೊಳ್ಳುವ ಬಾಶೋನಿಗೆ, ಯೋಶಿಟಾಡಾ ಎಂಬ ಮಾಲೀಕನ ಮಗನ ಸ್ನೇಹ ದೊರೆಯುತ್ತದೆ. ಹೆಚ್ಚುಕಡಿಮೆ ಒಂದೇ ವಯಸ್ಸಿನವರಾದ ಇಬ್ಬರಿಗೂ ಇದ್ದ ಸಮಾನ ಆಸಕ್ತಿಯೆಂದರೆ ಕಾವ್ಯ ರಚಿಸುವುದು. ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ಬಾಶೋ ರೆಂಗಾ ಕಾವ್ಯ ಪ್ರಕಾರದಲ್ಲಿ ಕವನ ರಚಿಸುತ್ತಿದ್ದ.
ಈ ಸಮಯದಲ್ಲಿ ನಡೆದ ಒಂದು ಘಟನೆ ಬಾಶೋನ ಜೀವನವನ್ನೇ ಬದಲಾಯಿಸಿಬಿಡುತ್ತದೆ. ಆ ಘಟನೆ ಬಾಶೋನ ಗೆಳೆಯ ಯೋಶಿಟಾಡಾನ ಅಕಾಲಿಕ ಮರಣ. ಇದರಿಂದ ತೀವ್ರವಾಗಿ ಆಘಾತಕ್ಕೊಳಗಾದ ಬಾಶೋ, ಆ ದುಃಖದಿಂದ ಹೊರಬರಲಾಗದೆ ಮೊದಲು ತನ್ನ ಕೆಲಸವನ್ನು ನಂತರ ಊರನ್ನೂ ತೊರೆದು ಹೊರಟುಬಿಡುತ್ತಾನೆ. ಬಾಶೋನ ಈ ವರ್ತನೆಗೆ ಹಲವು ಕಾರಣಗಳಿರಬಹುದೆಂದು ಊಹಿಸಲಾಗಿದೆ. ಖಚಿತ ಮಾಹಿತಿ ಇಲ್ಲ. ಇದರಲ್ಲಿ ಒಂದು ಕಾರಣ ಬಾಶೋ ತನ್ನ ಗೆಳೆಯನ ಹೆಂಡತಿಯನ್ನು ಪ್ರೀತಿಸುತ್ತಿದ್ದ ಎಂಬುದು. ಯೋಶಿಟಾಡಾನ ಮರಣದ ನಂತರ ಅವನ ತಮ್ಮ ಆ ಬೆಂಗಾವಲು ಪಡೆಯ ಮುಖ್ಯಸ್ಥನಾಗುತ್ತಾನೆ ಹಾಗೂ ಅಲ್ಲಿಯ ಪದ್ಧತಿಯಂತೆ ಅಣ್ಣನ ಹೆಂಡತಿಯನ್ನು ಮದುವೆಯಾಗುತ್ತಾನೆ. ಬಾಶೋನನ್ನು ಕೆಲಸದಿಂದ ತೆಗೆದುಹಾಕುತ್ತಾನೆ. ಈ ಎಲ್ಲ ವಿಷಯಗಳಿಂದ ತೀವ್ರ ಹತಾಶೆಗೊಳಗಾದ ಬಾಶೋ ಆತ್ಮಹತ್ಯೆಗೂ ಮುಂದಾಗುತ್ತಾನೆ. ಆದರೆ ಆತ್ಮಹತ್ಯೆ ಧರ್ಮಸಮ್ಮತವಲ್ಲ ಎಂಬ ಕಾರಣಕ್ಕೆ ಅದನ್ನು ಕೈಬಿಡುವ ಬಾಶೋ ತನ್ನ ಊರಿನಿಂದ ಆಗ ಜಪಾನಿನ ರಾಜಧಾನಿಯಾಗಿದ್ದ ಕಿಯೋಟೋಗೆ ಬಂದು ನೆಲೆಸುತ್ತಾನೆ.
ಒಂದು ಐತಿಹ್ಯದ ಪ್ರಕಾರ ಬಾಶೋ ಕಿಯೋಟೋ ನಗರದ ಕಿನ್ಪುಕು ಮಂದಿರದಲ್ಲಿ ನೆಲೆಸಿ ತತ್ವಶಾಸ್ತ್ರ, ಕಾವ್ಯ ಹಾಗೂ ಕ್ಯಾಲಿಗ್ರಫಿಗಳ ಕುರಿತು ಆಳವಾದ ಅಧ್ಯಯನ ನಡೆಸುತ್ತಾನೆ. ಅಲ್ಲಿಯ ಹೆಸರಾಂತ ರೆಂಗ ಕಾವ್ಯದ ಗುರುಗಳು ಸಂಪಾದಿಸುತ್ತಿದ್ದ ಸಂಕಲನಗಳಲ್ಲಿ ಇವನ ಕವನಗಳು ಪ್ರಕಟವಾಗುತ್ತವೆ. ತನ್ನ ಕಾವ್ಯದ ನಿಷ್ಠುರ ಸ್ವವಿಮರ್ಶೆ ಮಾಡಿಕೊಳ್ಳುವ ಗುಣವೂ ಬಾಶೋನಿಗಿತ್ತು. ಒಮ್ಮೆ ಕಾವ್ಯ ಕಟ್ಟುವ ಸ್ಪರ್ಧೆಯಲ್ಲಿ ತನ್ನ ಕವನ ಬರೆದು ಸ್ವತಃ ತೀರ್ಪುಗಾರನೂ ಆಗಿದ್ದ ಬಾಶೋ ತೀರ್ಪಿನಲ್ಲಿ ತನ್ನ ಕವನದ ಕುರಿತು ಹೀಗೆ ಹೇಳುತ್ತಾನೆ, ”ಈ ಹೊಕ್ಕು(ಹಾಯ್ಕುವಿನ ಮೊದಲ ಹೆಸರು) ತೀರ ಕಳಪೆಯಾಗಿ ರಚಿಸಲ್ಪಟ್ಟಿದೆ, ಅಲ್ಲದೆ ಶಬ್ದಗಳ ಬಳಕೆಯೂ ಪೇಲವವಾಗಿದೆ. ಇದಕ್ಕೆ ಕಾರಣ ಕವಿಯ ಕಸುಬುದಾರಿಕೆಯ ಕೊರತೆ”. 1672ರಲ್ಲಿ ಬಾಶೋ ‘ಕಾಯಿ ಓಯಿ’ (ದಿ ಶೆಲ್ ಗೇಮ್) ಎಂಬ ಹಾಯ್ಕು ಸಂಕಲನವನ್ನು ಪ್ರಕಟಿಸುತ್ತಾನೆ. ಇದು ಬಾಶೋ ಸ್ವತಃ ಬರೆದು ಪ್ರಕಟಿಸಿದ ಏಕಮಾತ್ರ ಸಂಕಲನ. ನಂತರ ಅವನ ಶಿಷ್ಯರು ಬಾಶೋನ ಬಿಡಿ ಹೊಕ್ಕುಗಳನ್ನು, ಬೇರೆ ಕವಿಗಳೊಂದಿಗೆ ಸೇರಿ ರಚಿಸಿದ ಕಾವ್ಯಮಾಲೆಯನ್ನು ಪ್ರಕಟಿಸುತ್ತ ಬಂದರು. ಹಾಯ್ಕು ಲೋಕದಲ್ಲಿ ತನ್ನದೇ ಆದ ನೆಲೆಯನ್ನು, ತನ್ನತನವನ್ನು ಕಂಡುಕೊಳ್ಳಲು ಬಾಶೋ ಕಿಯೋಟೋ ನಗರದಿಂದ ಸಾಂಸ್ಕೃತಿಕವಾಗಿ ಸಮೃದ್ಧವಾಗಿದ್ದ, ವಿಪುಲ ಅವಕಾಶಗಳನ್ನು ಹೊಂದಿದ್ದ ಎಡೋ ನಗರಕ್ಕೆ (ಈಗಿನ ಟೋಕಿಯೋ) ಬರುತ್ತಾನೆ. ಇಲ್ಲಿ ಅವನಿಗೆ ಸುಗಿಯಾಮಾ ಸನ್ಪು (1647-1732) ಎಂಬ ಮೀನು ವ್ಯಾಪಾರಿಯ ಪರಿಚಯ ಹಾಗೂ ಸಹಾಯ ದೊರಕುತ್ತದೆ. ಮುಂದೆ ಸನ್ಪು ಬಾಶೋನ ಶಿಷ್ಯನಾಗಿ ಒಳ್ಳೆಯ ಹಾಯ್ಕು ಕವಿ ಎನಿಸಿಕೊಳ್ಳುತ್ತಾನೆ.
ಬಾಶೋ ರೆಂಗ ಗುರು. ಝೆನ್ ತಾತ್ವಿಕತೆಯನ್ನು ತಳಹದಿಯಾಗಿಸಿಕೊಂಡು ಕಾವ್ಯ ರಚಿಸಿದವನು. ರೆಂಗ ಕಾವ್ಯ ಪ್ರಕಾರದ ಮೊದಲ ಮೂರು ಸಾಲುಗಳಿಗೆ ಒಂದು ಸ್ವತಂತ್ರ ಅಸ್ತಿತ್ವ ನೀಡಿ ಅವುಗಳನ್ನು ಭೂತ ಹಾಗೂ ಭವಿಷ್ಯತ್ತನ್ನು ಒಳಗೊಂಡ ವರ್ತಮಾನದ ಸಾರ್ಥಕ ಕ್ಷಣಗಳನ್ನಾಗಿಸಿದವನು. ಹಾಯ್ಕುಗಳನ್ನು ಜನಮುಖಿಯಾಗಿಸಿದವನು. ಬಾಶೋ ನಮ್ಮನ್ನು ಕಾವ್ಯದ ತಿರುಳನ್ನು ಅರಸಲು ಪ್ರೇರೇಪಿಸುತ್ತಾನೆ. ತಿರುಳೇ ಕಾವ್ಯದ ಇರುವಿಕೆ. ಈ ತಿರುಳನ್ನು ಓದುಗನಿಗೆ ದಾಟಿಸಬೇಕಾದರೆ ಕವಿ ತನ್ನನ್ನು ತಾನೇ ಇಲ್ಲವಾಗಿಸಿಕೊಳ್ಳಬೇಕಾಗುತ್ತದೆ. ಅಮುಖ್ಯನಾಗಬೇಕಾಗುತ್ತದೆ. ಆಗ ಕಾವ್ಯದ ತಿರುಳು ಕಡೆದ ಬೆಣ್ಣೆಯಂತೆ ತೇಲಿಬಂದು ಓದುಗನ ಹೃದಯ ತಟ್ಟುತ್ತದೆ. ಇದನ್ನು ಸಾಧಿಸಲು ಕವಿಗೆ ನಮ್ರತೆ ಹಾಗೂ ಆತ್ಮವಿಶ್ವಾಸ ಬೇಕಾಗುತ್ತದೆ. ಬಾಶೋನ ಹಾಯ್ಕುಗಳು ಈ ಹಾದಿಯನ್ನು ನಮಗೆ ತೋರಿಸುತ್ತವೆ.
ಜಪಾನಿನ ಅರಮನೆಯ ಆವರಣದಲ್ಲಿ ಮತ್ತು ಶ್ರೀಮಂತರ ಪಡಸಾಲೆಗಳಲ್ಲಿ ಶ್ರೇಷ್ಠತೆಯ ಅಹಂಕಾರದಿಂದ ವಿಹರಿಸುತ್ತಿದ್ದ ಕಾವ್ಯವನ್ನು ಬಾಶೋ ಸಾಮಾನ್ಯ ಜನರ ನಡುವೆ ತಂದ. ಕೆಲವು ನಿರ್ದಿಷ್ಟ ಶಬ್ದಗಳು ಮತ್ತು ಪ್ರತಿಮೆಗಳನ್ನು ಬಳಸುವುದರಿಂದ ಮಾತ್ರ ಒಳ್ಳೆಯ ಹಾಯ್ಕು ಬರೆಯಲು ಸಾಧ್ಯ ಎಂಬ ಮಿಥ್ ಅನ್ನು ಬಾಶೋ ಒಡೆದ. ಕ್ಲೀಷೆ ಎನ್ನುವ ಮಟ್ಟಕ್ಕೆ ತಲುಪಿದ ಹಳಸಲು ಶಬ್ದಗಳನ್ನು ತ್ಯಜಿಸಿದ ಬಾಶೋ ತನ್ನ ಕಾವ್ಯ ಕೃಷಿಗೆ ದೈನಂದಿನ ಸಾಮಾನ್ಯ ವಸ್ತುಗಳನ್ನೇ ಪ್ರತಿಮೆಗಳನ್ನಾಗಿ ಬಳಸಿಕೊಂಡ. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಬಾಶೋನ ಪ್ರಸಿದ್ಧ ಕಪ್ಪೆ ಹಾಯ್ಕು. ಆವರೆಗೆ ಕಾವ್ಯದಲ್ಲಿ ಸಾಮಾನ್ಯವಾಗಿ ಬಳಸುತ್ತಿದ್ದ ಕಪ್ಪೆಯ ಧ್ವನಿಯನ್ನು ಬಿಟ್ಟು ಬಾಶೋ ನೀರಿನಲ್ಲಿ ಕಪ್ಪೆಯ ನೆಗೆತದ ಸದ್ದನ್ನು ತನ್ನ ಹಾಯ್ಕುವಿಗೆ ಪ್ರತಿಮೆಯನ್ನಾಗಿ ಬಳಸಿಕೊಂಡ. ಇದು ಅವನ ಅತ್ಯುತ್ತಮ ಹಾಯ್ಕುಗಳಲ್ಲಿ ಒಂದಾಗಿದೆ.
ಹಳೆಯ ಕೊಳ
ಕಪ್ಪೆಯೊಂದು ಜಿಗಿಯಿತು
ಸದ್ದಿನಾಳಕ್ಕೆ-ಡುಳುಕ್
ಯಾವಾಗಲೂ ಬಳಸುವ ಪ್ಲಮ್ ಮತ್ತು ಚರ್‍ರಿ ಹೂವುಗಳ ಜೊತೆಗೆ ಬಾರ್ಲಿ, ಕಳೆಗಿಡಗಳ ಕುರಿತೂ ಬರೆದ. ಈ ಜೀವ ಜಗತ್ತಿನ ಬೃಹತ್ ಜಾಲದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿವೆ ಮತ್ತು ಇಲ್ಲಿ ಯಾವುದೂ ಯಕಃಶ್ಚಿತವಲ್ಲ ಎಂದ ಬಾಶೋ, ನಿರ್ಲಕ್ಷ್ಯಕ್ಕೊಳಗಾದ ಎಲ್ಲ ವಿಷಯಗಳ ಬಗ್ಗೆ ಧ್ಯಾನಿಸಿದ. ಆಡಂಬರದ ಚೀನೀ ಶಬ್ದಗಳನ್ನು ಬಿಟ್ಟು ದೇಸಿ ಜಪಾನಿ ಶಬ್ದಗಳನ್ನು ಬಳಸಿದ.
ಬಾಶೋ ಶಬ್ದಗಳ ಮಹತ್ವ ಅರಿತವನು. ಸರಿಯಾದ ಸಮಯದಲ್ಲಿ, ಸರಿಯಾದ ಸಾಲಿನಲ್ಲಿ, ಸರಿಯಾದ ಶಬ್ದ ಬಳಸುತ್ತಿದ್ದ. ಕಾವ್ಯದ ಎಲ್ಲೆಗಳನ್ನು ವಿಸ್ತರಿಸುವ, ಹಾಯ್ಕುವನ್ನು ವಿವಿಧ ಸ್ತರಗಳಲ್ಲಿ ಗ್ರಹಿಸಬಹುದಾದ, ಹಲವು ಸಮಾನಾರ್ಥಕಗಳಿರುವ ಶಬ್ದಗಳನ್ನು ಪ್ರಜ್ಞಾಪೂರ್ವಕವಾಗಿ ಬರೆಯುತ್ತಿದ್ದ. ಕೆಲವೊಮ್ಮೆ ಒಂದೊಂದು ಶಬ್ದಕ್ಕೂ ಹಲವು ತಿಂಗಳುಗಳ ಹುಡುಕಾಟ ನಡೆಸುತ್ತಿದ್ದ. ಕೇವಲ ಆ ಕ್ಷಣದ ಒಳನೋಟ ಹಾಯ್ಕು ಬರೆಯಲು ಸಾಕೆ? ವಾಸ್ತವ ಮತ್ತು ಅನಂತತೆಗಳ ಕುರಿತ ಅರಿವು ವಿಸ್ತಾರವಾಗುತ್ತ ಹೋದಂತೆ ನಮ್ಮ ಕಾವ್ಯದ ಮಿತಿಗಳು ಸ್ಪಷ್ಟವಾಗುತ್ತ ಹೋಗುತ್ತವೆ. ಇದನ್ನು ಅರಿತಿದ್ದ ಬಾಶೋ ತನ್ನ ಕಾವ್ಯವನ್ನು ಪುನರ್ವ್ಯಾಖ್ಯಾನಿಸುತ್ತ ಪುನರ್ವಿಮರ್ಶಿಸುತ್ತ ತಿದ್ದುಪಡಿ ಮಾಡುತ್ತಿದ್ದ. ಹಾಯ್ಕುವಿನ ಭಾವ ಹಾಗೂ ದರ್ಶನವನ್ನು ಓದುಗನಿಗೆ ದಾಟಿಸಬಲ್ಲ ಸಮರ್ಥ ಶಬ್ದದ ಹುಡುಕಾಟದಲ್ಲಿ ತೊಡಗುತ್ತಿದ್ದ. ಝೆನ್ ತತ್ವದ ಗಾಢ ಪ್ರಭಾವ ಹೊಂದಿದ್ದ ಬಾಶೋನಿಗೆ ಬದುಕಿನ ಬಗ್ಗೆ ಗೌರವ ಭಾವವಿತ್ತು. ಕರುಣೆ ತುಂಬಿದ ಪ್ರೀತಿ ಇತ್ತು. ಈ ಒಂದು ಘಟನೆ ಬಾಶೋನ ಜೀವನಪ್ರೀತಿಯನ್ನು ನಮಗೆ ತೋರಿಸುತ್ತದೆ. ಬಾಶೋ ಶಿಷ್ಯ ಕಿಕಾಕು, ರೆಕ್ಕೆಗಳನ್ನು ಕಿತ್ತುಹಾಕಿದಾಗ ಕೆಂಪು ಮೆಣಸಿನ ಹಾಗೆ ಕಾಣುವ ಏರೋಪ್ಲೇನ್ ಚಿಟ್ಟೆಯ ಬಗ್ಗೆ ಹಾಯ್ಕು ಬರೆದು, ತನ್ನ ಹಾಯ್ಕುವಿನ ಕುರಿತು ತಾನೇ ರೊಮಾಂಚನಗೊಳ್ಳುತ್ತ ಅದನ್ನು ಬಾಶೋಗೆ ತೋರಿಸಿದ. ಹಾಯ್ಕುವನ್ನು ಒಂದು ಕ್ಷಣ ನೋಡಿದ ಬಾಶೋ ಏನೂ ಹೇಳದೆ ಅದನ್ನು ತಿದ್ದಿ ಕೆಂಪು ಮೆಣಸಿಗೆ ರೆಕ್ಕೆಗಳನ್ನು ಅಂಟಿಸಿ ಅದನ್ನು ಹಾರಾಡುವ ಏರೋಪ್ಲೇನ್ ಚಿಟ್ಟೆಯನ್ನಾಗಿಸಿದ.
ಬಾಶೋ ಸರಳ ಜೀವನ ಬಯಸಿದ್ದ. ಹಾಗೆಯೇ ಬದುಕಿದ. ಬರೆದ. ಬದುಕಿನ ಅವಶ್ಯಕತೆಗಳನ್ನು ಕಡಿಮೆಗೊಳಿಸಿಕೊಂಡ ಅವನು ಉಟ್ಟ ಬಟ್ಟೆಯಲ್ಲಿಯೇ ಪ್ರವಾಸ ಕೈಗೊಳ್ಳುತ್ತಿದ್ದ.
ಮರಳುವ ಅಕ್ಕಿಯ ಗಂಜಿ
ಸತ್ಕರಿಸುತ್ತಿದ್ದಾಳೆ ಮನೆಯೊಡತಿ
ತಂಪು ಸಂಜೆ
ಬಹುತೇಕ ತಿರುಗಾಟವನ್ನು ಬರಿಗಾಲಿನಲ್ಲಿಯೇ ಮಾಡುತ್ತಿದ್ದ ಬಾಶೋ ಅತಿ ಕಡಿಮೆ ಪ್ರಮಾಣದಲ್ಲಿ ಶಿಷ್ಯರು ಕೊಡುತ್ತಿದ್ದ ಆಹಾರ ಮತ್ತು ಬಟ್ಟೆಗಳನ್ನು ಸ್ವೀಕರಿಸುತ್ತಿದ್ದ. ತನಗಿಂತ ಐದುನೂರು ವರುಷಗಳ ಹಿಂದೆ ಬದುಕಿದ್ದ ಪ್ರಸಿದ್ಧ ವಾಕಾ ಗುರು ಸಾಯಿಗಿಯೋನನ್ನು ತನ್ನ ಆದರ್ಶವನ್ನಾಗಿ ಮಾಡಿಕೊಂಡಿದ್ದ. ಬಾಶೋ ತನ್ನ ಪ್ರಯಾಣದಲ್ಲಿ ಹಲವು ಜನರನ್ನು ಭೇಟಿಯಾಗುತ್ತಿದ್ದ. ಆ ಸಮಯಕ್ಕಾಗಲೆ ಹಾಯ್ಕು ಕವಿಯಾಗಿ ಹೆಸರಾಗಿದ್ದ ಬಾಶೋಗೆ ಹೋದಲ್ಲೆಲ್ಲಾ ಒಳ್ಳೆಯ ಸ್ವಾಗತ ದೊರಕುತ್ತಿತ್ತು. ಅಲ್ಲಿಯ ಕವಿಗಳೆಲ್ಲ ಸೇರಿ ರೆಂಗಾ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು. ಮುಖ್ಯ ಅತಿಥಿಯನ್ನಾಗಿ ಬಾಶೋನನ್ನು ಆಹ್ವಾನಿಸಲಾಗುತ್ತಿತ್ತು. ರೆಂಗಾ ಕಾವ್ಯಮಾಲೆಯ ಮೊದಲ ಹೊಕ್ಕುವನ್ನು ಬಾಶೋ ಬರೆಯುತ್ತಿದ್ದ. ಐದು-ಏಳು-ಐದು ಉಚ್ಛಾರಾಂಶದ (ಫೊನೆಟಿಕ್ ಸಿಲಬಲ್) ಈ ಮೊದಲ ಹೊಕ್ಕು ಇಡೀ ಕಾವ್ಯಮಾಲೆಯ ದಿಕ್ಕನ್ನು ನಿರ್ಧರಿಸುವಂತಿರುತ್ತಿತ್ತು. ಇದರಲ್ಲಿ ಹೊಕ್ಕು ಬರೆದ ಕಾಲವನ್ನು ಸೂಚಿಸುವ (ಉದಾ: ವಸಂತಕಾಲ, ಶರತ್ಕಾಲ) ಶಬ್ದ ಇರಬೇಕಾಗಿತ್ತು. ಬಾಶೋ ಮೊದಲ ಹೊಕ್ಕು ಬರೆದ ನಂತರ ಆತಿಥೇಯ ಇದಕ್ಕೆ ಉತ್ತರವಾಗಿ ಹೊಕ್ಕು ಬರೆಯುತ್ತಿದ್ದ. ಉಳಿದ ಕವಿಗಳು ಇದಕ್ಕೆ ಸಂವಾದಿಯಾಗಿ ಏಳು-ಏಳು ಅಥವ ಐದು-ಏಳು-ಐದು ರಲ್ಲಿ ಕವನ ಕಟ್ಟುತ್ತಿದ್ದರು. ಈ ಕಾವ್ಯಮಾಲೆಯ ನಿಯಮಗಳಿಂದ ಹೊರಬಂದ ಬಾಶೋ ಮೊದಲ ಮೂರು ಸಾಲಿನ ಹೊಕ್ಕುವನ್ನು ಸ್ವತಂತ್ರ ಅಸ್ತಿತ್ವದ ಕಾವ್ಯಪ್ರಕಾರವನ್ನಾಗಿಸಿದ.
(ಡಾ. ಸಿ. ರವೀಂದ್ರನಾಥ್ ಅವರ ಪ್ರಸ್ತಾವನೆಯ ಆಯ್ದ ಭಾಗ)

ಬಾಶೋ ಹಾಯ್ಕು
500 ಹಾಯ್ಕುಗಳ ಅನುವಾದ
ಕನ್ನಡಕ್ಕೆ: ಡಾ. ಸಿ. ರವೀಂದ್ರನಾಥ್
ಪ್ರಕಾಶನ: ಆಕೃತಿ ಪುಸ್ತಕ, ಬೆಂಗಳೂರು
ಬೆಲೆ: ರೂ. 150. ಸಂಪರ್ಕ: 98866 94580