ನೋಟಾ ಅಭಿಯಾನ ನಡೆಸುತ್ತಿರುವವರು ಸೌಜನ್ಯಪರ ಹೋರಾಟಗಾರರು. ಇವರೆಲ್ಲರೂ ಬಿಜೆಪಿ,ಆರೆಸ್ಸೆಸ್, ಭಜರಂಗದಳ, ವಿಎಚ್‌ಪಿ ಮುಂತಾದ ಸಂಘಟನೆಗಳಲ್ಲಿ ದುಡಿದವರು. ಆದರೆ ಸೌಜನ್ಯಳ ಕುಟುಂಬಕ್ಕೆ ನ್ಯಾಯ ಕೊಡಿಸಲು ಜಿಲ್ಲೆಯಲ್ಲಿ ಎರಡೆರಡು ಬಾರಿ ಗೆದ್ದು ಬಂದಿರುವ ಬಿಜೆಪಿ ಶಾಸಕರು, ಸಂಸದರು ಪ್ರಯತ್ನಿಸಿಲ್ಲ ಎಂಬ ಸಿಟ್ಟಿದೆ.
ಪ್ರತಿ ಚುನಾವಣೆ ನಡೆಯುವಾಗಲೂ ಊರಿನ ಸಮಸ್ಯೆಯೊಂದನ್ನು ಮುಂದಿಟ್ಟುಕೊಂಡು ಇಡೀ ಗ್ರಾಮವೇ ಮತದಾನ ಬಹಿಷ್ಕರಿಸುವ ಬೆದರಿಕೆ ಹಾಕುವುದನ್ನು ನೋಡಿರುತ್ತೇವೆ. ಈ ಸಲದ ಚುನಾವಣೆ ಮಂಗಳೂರು ಕ್ಷೇತ್ರದ ಚುನಾವಣೆ NOTA (None Of The Above) ಅಭಿಯಾನದಿಂದಾಗಿ ಸುದ್ದಿಯಾಗಿದೆ. ಅದೂ ಬಿಜೆಪಿಯ ಭದ್ರಕೋಟೆ ಎಂದೇ ಕರೆಯುವ ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಹಿಂದುತ್ವದ ಪ್ರತಿಪಾದಕರೇ ಈ ಬಾರಿ ನೋಟಾ ಎನ್ನುತ್ತಿದ್ದಾರೆ.
ನಿಜಕ್ಕೂ ಅವರ ಸಿಟ್ಟಿರುವುದು ಯಾರ ಮೇಲೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜಿಲ್ಲೆಯ ಶಾಸಕರು, ಸಂಸದರ ಮೇಲೆಯೇ ಅವರ ಸಿಟ್ಟು. ಅವರು ತಾವು ಬೆಂಬಲಿಸಿದ ಪಕ್ಷದವರೇ ಎಂಬುದು ಅಷ್ಟೇ ಸತ್ಯ. ಜೊತೆಗೆ ಸೌಜನ್ಯ ಅತ್ಯಾಚಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ, ಅಧಿಕಾರಿಗಳ ಮೇಲೆ ಒತ್ತಡ ತಂದು ಸಾಕ್ಷ್ಯನಾಶ ಮಾಡಿಸಿದ್ದಾರೆ ಎಂದು ತಾವು ಹನ್ನೊಂದು ವರ್ಷಗಳಿಂದ ಆರೋಪಿಸುತ್ತಿರುವ ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿರುವ ಮೋದಿ ಅವರ ಮೇಲೂ ಸಿಟ್ಟಿದೆ. ಆದರೆ, ಅವರು ಎಲ್ಲೂ ಮೋದಿಯವರ ವಿರುದ್ಧ ಮಾತಾಡಿಲ್ಲ. ಆ ಸಿಟ್ಟನ್ನು ನೋಟಾ ಬಟನ್ ಒತ್ತುವ ಮೂಲಕ ಹೊರ ಹಾಕಲಿದ್ದಾರೆ. ಹೋರಾಟಗಾರರ ನೋಟಾದ ಕರೆಗೆ ಎಷ್ಟು ಬೆಂಬಲ ಸಿಗುತ್ತದೆ, ಎಷ್ಟು ಮಂದಿ ನೋಟಾ ಗುಂಡಿ ಒತ್ತಿದ್ದಾರೆ ಎಂಬುದು ಫಲಿತಾಂಶದ ದಿನ ಗೊತ್ತಾಗಲಿದೆ.
ಈ ಅಭಿಯಾನ ಸಂಘಪರಿವಾರ, ಬಿಜೆಪಿಯಲ್ಲಿ ಗುರುತಿಸಿಕೊಂಡವರಿಂದಲೇ ನಡೆಯುತ್ತಿದೆ. ನಿಮಗೆಲ್ಲ ಗೊತ್ತಿರುವಂತೆ 2012ರ ಅಕ್ಟೋಬರ್ 4ರಂದು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಕೊಲೆ ನಡೆದಿತ್ತು. ಅದರ ತನಿಖೆಯನ್ನು2013 ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಸಿಬಿಐಗೆ ವಹಿಸಿತ್ತು. ಈ ಪ್ರಕರಣದಲ್ಲಿ ಕೊಲೆ ನಡೆದ ಮರುದಿನ ಧರ್ಮಸ್ಥಳದ ಗೊಮ್ಮಟಗಿರಿಯ ಬಳಿಯಿಂದ ಸಂತೋಷ್ ರಾವ್ ಎಂಬ ವ್ಯಕ್ತಿಯನ್ನು ದೇವಸ್ಥಾನದ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಸ್ಥಳೀಯ ಪೊಲೀಸರ ಮುಂದೆ ಆತ ತಪ್ಪೊಪ್ಪಿಕೊಂಡಿದ್ದ. ನಂತರ ತನಿಖೆ ಕೈಗೆತ್ತಿಕೊಂಡ ಸಿಐಡಿ ಕೂಡಾ ಬೇರೆ ಯಾರೊಬ್ಬ ಆರೋಪಿಗಳನ್ನೂ ಬಂಧಿಸಿರಲಿಲ್ಲ. ಪೊಲೀಸರು ಸಂತೋಷ್ ರಾವ್ ಆರೋಪಿ ಎಂದು ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈ ಚಾರ್ಜ್‌ಶೀಟ್ ಆಧರಿಸಿ ಸುಧೀರ್ಘ ಹನ್ನೊಂದು ವರ್ಷಗಳ ಕಾಲ ಸಿಬಿಐ ವಿಚಾರಣೆ ನಡೆಸಿ ಸಂತೋಷ್ ರಾವ್ ನಿರಪರಾಧಿ ಎಂಬ ತೀರ್ಪನ್ನು ಕಳೆದ ಜೂನ್ 16ರಂದು ಕೊಟ್ಟಿತ್ತು. ಇದಕ್ಕೂ ಮೊದಲೇ ಸೌಜನ್ಯ ಮನೆಯವರು, ಹೋರಾಟಗಾರರು ಸಂತೋಷ್ ರಾವ್ ಅಮಾಯಕ ಎಂದು ಹೇಳುತ್ತಲೇ ಬಂದಿದ್ದರು. ಅಷ್ಟೇ ಅಲ್ಲ ಶಂಕಿತ ಕೆಲ ಆರೋಪಿಗಳ ಹೆಸರು ಹೇಳಿದ್ದರು. ಅದನ್ನು ತನಿಖಾಧಿಕಾರಿಗಳು, ಏಜೆನ್ಸಿಗಳು ಪರಿಗಣಿಸಲೇ ಇಲ್ಲ.
ಸಂತೋಷ್ ರಾವ್ ನಿರಪರಾಧಿ ಎಂಬ ತೀರ್ಪು ಬಂದ ನಂತರ ನಿಜವಾದ ಅಪರಾಧಿಗಳು ಯಾರು ಎಂಬ ಬಗ್ಗೆ ಸಹಜವಾಗಿಯೇ ಪ್ರಶ್ನೆ ಮೂಡಿತ್ತು. ತಕ್ಷಣವೇ ಸೌಜನ್ಯ ಪರ ಹೋರಾಟಗಾರರು ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಪ್ರತಿಭಟನಾ ಸಭೆಗಳನ್ನು ನಡೆಸುವುದಕ್ಕೆ ಶುರು ಮಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬ ನಿಜವಾದ ಅಪರಾಧಿಗಳನ್ನು ರಕ್ಷಿಸುತ್ತಿದೆ ಎಂಬ ಆರೋಪ ಒಂದೆಡೆಯಾದರೆ, ಹಿಂದುತ್ವದ ಹೆಸರಿನಲ್ಲಿ ಮತ ಪಡೆದು ಅಧಿಕಾರ ಹಿಡಿದ ಜಿಲ್ಲೆಯ ಬಿಜೆಪಿ ಶಾಸಕರು ಸಂಸದರು ಸೌಜನ್ಯ ಕುಟುಂಬಕ್ಕೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಿಲ್ಲ ಎಂದು ಅಸಮಾಧಾನ ಪ್ರತಿಭಟನಾ ಸಭೆಗಳಲ್ಲಿ ವ್ಯಕ್ತವಾಗಿತ್ತು. ಬಿಜೆಪಿಯಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಡಾ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಮಾತನಾಡಲು ಯಾವುದೇ ರಾಜಕಾರಣಿಗಳು ಸಿದ್ಧರಿಲ್ಲ.
ತೀರ್ಪು ಬಂದು ಮೂರು ತಿಂಗಳು ಮುಗಿಯುತ್ತಿದ್ದಂತೆ ಸಿಬಿಐ ಮೇಲ್ಮನವಿ ಸಲ್ಲಿಸಿದೆ. ಆ ನಂತರ ಸೌಜನ್ಯ ಕುಟುಂಬದಿಂದಲೂ ಮರುತನಿಖೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ಈಗ ನಡೆಯುತ್ತಿರುವ ನೋಟಾ ಅಭಿಯಾನ ನಡೆಸುತ್ತಿರುವವರು ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ಮುಂದಾಳತ್ವ ವಹಿಸಿದವರು, ಬೆಂಬಲಿಗರು ಎಲ್ಲರೂ ಬಿಜೆಪಿಯವರೇ. ಅವರೆಲ್ಲ ಬಿಜೆಪಿ, ಆರೆಸ್ಸೆಸ್, ಭಜರಂಗದಳ, ವಿಎಚ್‌ಪಿ ಮುಂತಾದ ಸಂಘಟನೆಗಳಲ್ಲಿ ದುಡಿದವರೇ. ಆದರೆ ಅವರಿಗೆ ಹಿಂದುತ್ವದ ಹೆಸರಿನಲ್ಲಿ ಮತ ಪಡೆದು, ಶಾಸಕರಾಗಿ, ಸಂಸದರಾಗಿ ಆಯ್ಕೆಯಾಗಿರುವ ಬಿಜೆಪಿಗರು ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿಲ್ಲ. ಘಟನೆ ನಡೆದ ಸಮಯದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇತ್ತು. ಆರಂಭದಲ್ಲೇ ತನಿಖೆ ಹಾದಿ ತಪ್ಪಲು ಪ್ರಭಾವಿಗಳ ಒತ್ತಡದಿಂದಾಗಿ ಪೊಲೀಸರು, ವೈದ್ಯರು ಎಲ್ಲರೂ ಸಾಕ್ಷ್ಯ ನಾಶ ಮಾಡಿದ್ದಾರೆ. ಸಿಒಡಿ ಅಧಿಕಾರಿಗಳೂ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಸಿಟ್ಟು ಇದೆ.
ಆ ನಂತರ ಬಂದ ಸಿದ್ದರಾಮಯ್ಯ ಸರ್ಕಾರ ತಕ್ಷಣ ಈ ಪ್ರಕರಣವನ್ನು ಸಿಬಿಐಗೆ ನೀಡಿತ್ತು. ಆದರೆ ಸಿಬಿಐ ಕೂಡಾ ಪ್ರಭಾವಿಗಳ ಒತ್ತಡಕ್ಕೆ ಮಣಿದಿದೆ. ಸಿಬಿಐ ಹತ್ತು ವರ್ಷದಿಂದ ಮೋದಿ ಸರ್ಕಾರದ ಅಧೀನದಲ್ಲೇ ಇದೆ. ಆದರೂ ನ್ಯಾಯ ದೊರಕಿಲ್ಲ ಎಂಬ ಸಿಟ್ಟು ಸೌಜನ್ಯ ಪರ ಹೋರಾಟಗಾರರಲ್ಲಿದೆ. ಸಿಬಿಐ ತೀರ್ಪು ಬರುವ ವೇಳೆಗೆ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮರು ತನಿಖೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ. ಆದರೆ ಸಿದ್ದರಾಮಯ್ಯ ಸರ್ಕಾರ ಮರುತನಿಖೆಗೆ ಆಸಕ್ತಿ ತೋರಿಲ್ಲ ಎಂಬ ಅಸಮಾಧಾನವೂ ಅವರಲ್ಲಿದೆ. ಆದರೆ, ಹೈಕೋರ್ಟಿಗೆ ಮರುತನಿಖೆ ಕೋರಿ ಅರ್ಜಿ ಸಲ್ಲಿಸುವುದೊಂದೇ ದಾರಿ ಎಂದು ಸರ್ಕಾರ ಹೇಳಿತ್ತು.
ಈ ಮಧ್ಯೆ ನೋಟಾಗೆ ಮತದಾನ ಮಾಡುವ ಮೂಲಕ ಎರಡೂ ಪಕ್ಷಗಳಿಗೆ ಬೆಂಬಲಿಸದಿರಲು ಮಹೇಶ ಶೆಟ್ಟಿ ತಿಮರೋಡಿ, ತಮಣ್ಣ ಶೆಟ್ಟಿ, ಗಿರೀಶ್ ಮಟ್ಟಣ್ಣನವರ್ ತಂಡ ನಿರ್ಧಾರ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅದರ ಬಗ್ಗೆ ಅಭಿಯಾನವನ್ನೂ ಶುರು ಮಾಡಲಾಗಿದೆ. ಅಷ್ಟೇ ಅಲ್ಲ ಸುಳ್ಯ, ಪುತ್ತೂರು, ಬೆಳ್ತಂಗಡಿ, ಮಂಗಳೂರಿನ ಹಲವು ಕಡೆ ನೋಟಾ ಅಭಿಯಾನವನ್ನು ಬೆಂಬಲಿಸಿ ಸಭೆಗಳನ್ನು ನಡೆಸಲಾಗುತ್ತಿದೆ.
ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಬ್ರಿಜೇಶ್ ಚೌಟ(ಬಂಟ) ಮತ್ತು ಕಾಂಗ್ರೆಸ್‌ನಿಂದ ಪದ್ಮರಾಜ್ ರಾಮಯ್ಯ(ಬಿಲ್ಲವ) ಸ್ಪರ್ಧಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಬಿಲ್ಲವ- ಬಂಟರ ನಡುವೆ ಸ್ಪರ್ಧೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದುವರೆಗೆ ಕರಾವಳಿಯಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಮಾತ್ರ ಪೈಪೋಟಿ ಇತ್ತು. ಆದರೆ ಇದೇ ಮೊದಲ ಬಾರಿಗೆ ಎರಡು ಜಾತಿಗಳ ಬಲಾಬಲದ ಸ್ಪರ್ಧೆ ಎಂಬಂತಾಗಿದೆ.
ಈ ಮಧ್ಯೆ ಒಕ್ಕಲಿಗ ಸಮುದಾಯದ ಸೌಜನ್ಯ ಕುಟುಂಬದ ಪರವಾಗಿ ಹೋರಾಟದಲ್ಲಿ ಬಂಟರೇ ಮುಂಚೂಣಿಯಲ್ಲಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ, ತಮ್ಮಣ್ಣ ಶೆಟ್ಟಿ ಇಬ್ಬರೂ ಬಂಟ ಸಮುದಾಯದವರು. ಇದು ಜಾತಿ ಲೆಕ್ಕಾಚಾರದಾಚೆಗೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇವರ ಒಂದಷ್ಟು ಬೆಂಬಲಿಗರು ನೋಟಾಕ್ಕೆ ಮತ ಚಲಾಯಿಸಿದರೆ ಖಂಡಿತವಾಗಿಯೂ ಅದು ಬಿಜೆಪಿಗೆ ನಷ್ಟವಾಗಲಿದೆ ಎಂಬ ಆತಂಕ ಬಿಜೆಪಿಯವರಲ್ಲಿದೆ. ಅದಕ್ಕಾಗಿಯೇ ಇದು ಕಾಂಗ್ರೆಸ್‌ಗೆ ಲಾಭ ತಂದುಕೊಡುವ ಉದ್ದೇಶದ ಅಭಿಯಾನ ಎಂಬ ಆರೋಪ ಹೋರಾಟಗಾರರ ಮೇಲೆ ಬಂದಿದೆ.
ಸೌಜನ್ಯಪರ ಹೋರಾಟದ ಮುಂಚೂಣಿ ನಾಯಕ ಮಹೇಶ್ ಶೆಟ್ಟಿ ತಿಮರೋಡಿ, “ಇದು ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ಸೌಜನ್ಯಳ ಪರ ಅಷ್ಟೇ” ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದಾರೆ. ನೋಟಾದ ದಾಖಲೆ ಇಟ್ಟುಕೊಂಡು ಮೋದಿಯವರ ಬಳಿ ಹೋಗುತ್ತೇವೆ ಎಂದು ಗಿರೀಶ್ ಮಟ್ಟಣ್ಣನವರ್ ಹೇಳುತ್ತಿದ್ದಾರೆ. ನೋಟಾ ದೊಡ್ಡದೊಂದು ಜಾದೂ ಮಾಡಲಿದೆ ಎಂಬುದು ಅವರ ಅಭಿಪ್ರಾಯ.
ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಧರ್ಮಸ್ಥಳಕ್ಕೆ ತೆರಳಿ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದಿದ್ದರು. ಇದು ಸೌಜನ್ಯ ಪರ ಹೋರಾಟಗಾರರನ್ನು ಕೆರಳಿಸಿದೆ. ಅದು ನೋಟಾ ಅಭಿಯಾನಕ್ಕೆ ಪ್ರೇರಣೆಯಾಗಿದೆ ಎಂದು ಮಟ್ಟಣ್ಣನವರ್ ಹೇಳಿದ್ದಾರೆ.
ಒಟ್ಟಿನಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಮಂಗಳೂರು ಲೋಕಸಭಾ ಕ್ಷೇತ್ರ ನೋಟಾ ಅಭಿಯಾನದ ಮೂಲಕ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇದೇ ಸಮಯದಲ್ಲಿ ಸೌಜನ್ಯ ಪರ ಹೋರಾಟಗಾರರಿಗೆ ತಮ್ಮ ಶತ್ರು ಅಥವಾ ವಂಚಕರು ಯಾರು ಎಂಬುದು ಗೊತ್ತಿದ್ದ ಮೇಲೆ ಅವರನ್ನು ಸೋಲಿಸುವ ಮೂಲಕ ತಮ್ಮ ಶಕ್ತಿ ಏನೆಂಬುದನ್ನು ತೋರಿಸಬಹುದಲ್ಲವೇ ಎಂಬ ಪ್ರಶ್ನೆಯೂ ಎದ್ದಿದೆ.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.