ಹಿಂದುತ್ವ ಪ್ರೇರಿತ ರಾಜಕಾರಣವನ್ನು ಜೀವಂತವಾಗಿಟ್ಟುಕೊಳ್ಳಲು ದಲಿತ ಹಿಂದುಳಿದ ವರ್ಗಗಳ ಹಿತರಕ್ಷಣೆಯ ಮಾತಾಡುತ್ತಿರುವ ಬಿಜೆಪಿಗೆ, ಜಾತಿಗಣತಿಯನ್ನು ನಿರಾಕರಿಸುವುದು ಸಾಧುವಲ್ಲ ಎಂಬುದು ಅರ್ಥವಾಗಿ ಬಹುಜನರ ಮತ ರಾಜಕಾರಣವನ್ನು ಮೆಚ್ಚಿಸುವ ಪ್ರಯತ್ನದಲ್ಲಿದೆ
ಜಾತಿ ಗಣತಿ ಎಂದೇ ಗುರುತಿಸಲ್ಪಡುತ್ತಿರುವ ’ಕರ್ನಾಟಕ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ’ಯ ಕಾಂತರಾಜ ವರದಿ ಅಧಿಕೃತವಾಗಿ ಸರ್ಕಾರದ ಕೈ ಸೇರುವ ಮುಂಚೆಯೇ ಬಲಾಢ್ಯ ಜಾತಿಗಳು ವರದಿಯನ್ನು ವಿರೋಧಿಸಲು ನಿರ್ದಯವಾಗಿ ಟೊಂಕ ಕಟ್ಟಿ ನಿಂತಿವೆ.
ಕಾಂತರಾಜ ವರದಿ ಇನ್ನೂ ರಾಜ್ಯ ಸರ್ಕಾರದ ಕೈ ಸೇರಿಲ್ಲ. ಕಾಂತರಾಜ ವರದಿಯಲ್ಲಿ ಏನಿದೆ? ಏನಿಲ್ಲ ? ಎಂಬುದು ಇದುವರೆಗೂ ಅಧಿಕೃತವಾಗಿ ಬಹಿರಂಗಗೊಂಡಿಲ್ಲ. ಸರ್ಕಾರ ವರದಿಯನ್ನು ಸ್ವೀಕರಿಸಿ ಅದರ ಸಾಧಕ-ಬಾಧಕಗಳನ್ನು ಚರ್ಚಿಸಬೇಕು, ಎಲ್ಲಾ ಜಾತಿಗಳ ಅಭಿಪ್ರಾಯಗಳನ್ನು ಆಲಿಸಬೇಕು ಆ ನಂತರವಷ್ಟೆ ಅದರ ಅನುಷ್ಠಾನಕ್ಕೆ ಮುಂದಾಗಬೇಕಾದದ್ದು ಒಂದು ಪ್ರಜಾಸತ್ತಾತ್ಮಕ ಪ್ರಕ್ರಿಯೆ. ಆದರೆ ಕೇವಲ ಸಮೀಕ್ಷೆಯ ವರದಿಯನ್ನು ಸರ್ಕಾರ ಸ್ವೀಕರಿಸುವುದೇ ಸಮಾಜ ಒಡೆಯುವ ಕೆಲಸ ಎಂದು ಬೊಬ್ಬೆ ಹಾಕುತ್ತಿರುವವರು ಪ್ರಜ್ಞಾಪೂರ್ವಕವಾಗಿ ಸಾಮಾಜಿಕ ವಂಚನೆಯನ್ನು ಎಸಗುತ್ತಿದ್ದಾರೆ.
ಕಾಂತರಾಜ ವರದಿಯಿಂದ ಸೋರಿಕೆಯಾಗಿದೆ ಎನ್ನಬಹುದಾದ ಮಾಹಿತಿಗಳನ್ನೆ ಆಧರಿಸಿ ವರದಿಯನ್ನು ವಿರೋಧಿಸುವುದರಲ್ಲಿ ಪ್ರಯೋಜನವಿಲ್ಲ. ಕಾಂತರಾಜ ವರದಿಯ ಮುಖ್ಯಾಂಶಗಳನ್ನೆ ಆಧರಿಸಿದೆ ಎನ್ನಬಹುದಾದ ಅಂಶಗಳೆಂದರೆ ಕರ್ನಾಟಕದಲ್ಲಿ ದಲಿತರ ಜನಸಂಖ್ಯೆ ಶೇ. 19ರಷ್ಟು ಇದ್ದು, ಎಲ್ಲಾ ಜಾತಿಗಳಿಗಿಂತ ಮುಂದಿದೆ. ಶೇ. 16ರಷ್ಟು ಮುಸ್ಲಿಮರು. ಶೇ. 14ರಷ್ಟು ಲಿಂಗಾಯಿತರು. ಶೇ.11ರಷ್ಟು ಒಕ್ಕಲಿಗರಿದ್ದು, ಉಳಿದಂತೆ ಶೇ. 40ರಷ್ಟು OBCಗಳು ರಾಜ್ಯದಲ್ಲಿದ್ದಾರೆ. ಈ ಅಂಕಿ ಅಂಶಗಳು ನಿಖರವಲ್ಲ ಎನ್ನಬಹುದಾದರೂ ಅಷ್ಟೇನೂ ವ್ಯತ್ಯಾಸವಿಲ್ಲ ಎಂಬುದನ್ನು ಕಾಣುತ್ತದೆ. ಸಾಮಾಜಿಕ ನ್ಯಾಯದ ಹಕ್ಕಿನ ಪಾಲನ್ನು ಆಯಾ ಜಾತಿಗಳ ಜನಸಂಖ್ಯೆಗನುಗುಣವಾಗಿ ಹಂಚುಣ್ಣಬೇಕೆಂಬ ಉದಾತ್ತ ಮನೋಭಾವ ಎಲ್ಲಾ ಜಾತಿಗಳಿಗೂ ಮತ್ತು ಜಾತಿಯ ನಾಯಕರೆನಿಸಿಕೊಂಡವರಿಗೂ ಇರಬೇಕಾಗುತ್ತದೆ. ಅದಕ್ಕಾಗಿಯೇ ಎಲ್ಲರೂ ದುಡಿಯಬೇಕಾಗುತ್ತದೆ. ಆದರೆ ಇಲ್ಲೇನಾಗುತ್ತಿದೆ ! ಸರ್ಕಾರದ ಭಾಗವಾದವರೇ ಸಂವಿಧಾನಕ್ಕಿಂತ ಜಾತಿ ಮುಖ್ಯ ಎಂದು ಘೋಷಿಸುವುದು ನಾಚಿಕೆಗೇಡಲ್ಲವೆ?
ಕಾಂತರಾಜ ವರದಿ ಸಿದ್ದರಾಮಯ್ಯ ಅವರ ಕನಸಿನ ಕೂಸು. 2015ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ ಅವರಿಂದ ಕರ್ನಾಟಕ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಿತ್ತು. ಇದಕ್ಕಾಗಿ 162 ಕೋಟಿ .ರೂಗಳಿಗೂ ಹೆಚ್ಚಿನ ಹಣವನ್ನು ವ್ಯಯಿಸಲಾಗಿದೆ. ಆದರೆ ವರದಿ ಸಿದ್ದವಾಗುವ ವೇಳೆಗೆ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿ ಮುಗಿದು ಹೋಗಿದ್ದು ಈ ಐದು ವರ್ಷಗಳ ಕಾಲ ಕಾಂತರಾಜ ವರದಿಯನ್ನು ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿ ಸರ್ಕಾರ ಕಣ್ಣೆತ್ತಿಯೂ ನೋಡಲಿಲ್ಲ. ಯಾಕೆ ನೋಡಲಿಲ್ಲ ಎಂದರೆ ಸರ್ಕಾರವನ್ನೇ ಪ್ರಬಲ ಜಾತಿಗಳು ನಡೆಸುತ್ತಿದ್ದು, ಅವರಿಗೆ ಸಾಮಾಜಿಕ ನ್ಯಾಯದಾನದ ಅರಿವು ಇರಲಿಲ್ಲ ಎಂದು ಅರ್ಥೈಸಿಕೊಳ್ಳುವುದೇ ಒಳಿತು.
ಸಿದ್ದರಾಮಯ್ಯ ಅವರ ಅಹಿಂದ ರಾಜಕಾರಣದ ಇಚ್ಛಾಶಕ್ತಿಯ ಫಲವೇ ಕಾಂತರಾಜ ವರದಿ ಎಂದು ವಿಶ್ಲೇಷಣೆಗಳು ಜಿಲೇಬಿ (ಒಕ್ಕಲಿಗ, ಲಿಂಗಾಯಿತ, ಬ್ರಾಹ್ಮಣ) ಸಮುದಾಯಗಳನ್ನು ಕೆರಳಿ ಕಂಗಾಲಾಗಿಸಿದ್ದು ಸುಳ್ಳಲ್ಲ. ಇದೀಗ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಿರುವುದು ಕಾಂತರಾಜ ವರದಿಯ ಮೂಲಕ ಅಹಿಂದ ರಾಜಕಾರಣಕ್ಕೆ ಜೀವ ಬಂದಿದೆ.
ದೇಶದಲ್ಲೆ ಜಾತಿಗಣತಿಯ ಅಗತ್ಯತೆ ಈಗ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಜಾತಿಗಣತಿ ಮೂಲಕ ಈ ದೇಶದ ಬಹುಜನರಿಗೆ ಸಾಮಾಜಿಕ ನ್ಯಾಯ ದಕ್ಕಬೇಕೆಂದು ಪ್ರತಿಪಾದಿಸುತ್ತಿದ್ದಾರೆ. ಅವರದ್ದೇ ಪಕ್ಷದ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಂಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕಾಂತರಾಜ ವರದಿಗೆ ತಾರ್ಕಿಕ ಅಂತ್ಯಗಾಣಿಸಲೇ ಬೇಕಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಭಾಗವಾಗಿರುವ ಶಾಸಕರು, ಸಚಿವರು ತಮ್ಮನ್ನು ತಮ್ಮ ಜಾತಿಗಳ ಗೂಟಕ್ಕೆ ಕಟ್ಟಿಕೊಳ್ಳುವುದೆಂದರೆ ಅದಕ್ಕಿಂತ ಮಿಗಿಲಾದ ದ್ರೋಹ ಇನ್ನೊಂದಿರಲಾರದು.
ದಲಿತರು ಜನಸಂಖ್ಯೆಯಲ್ಲಿ ಇತರೆ ಜಾತಿಗಳಿಗಿಂತ ಮುಂಚೂಣಿಯಲ್ಲಿದ್ದರೂ ಈ ಜಾತಿಗಳಿಗೆ ರಾಜಕೀಯ ಮೀಸಲಾತಿ ಕಾರಣ ಪ್ರಾತಿನಿಧ್ಯ ಸಿಕ್ಕಿದೆಯೇ ಹೊರತು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಈ ಜಾತಿಗಳ ಪ್ರಗತಿ ಅನ್ನೋದು ದುರ್ಬೀನು ಹಾಕಿ ಹುಡುಕಬೇಕಾಗಿದೆ. ದಲಿತರು ತೊಟ್ಟಿಯ ನೀರು ಕುಡಿದರೆಂದು ಗೋಮೂತ್ರ ಚೆಲ್ಲಿ ತೊಟ್ಟಿಯನ್ನು ಸ್ವಚ್ಚಗೊಳಿಸುವುದು, ದೇವರ ಗೊಜ್ಜುಗೋಲು ಮುಟ್ಟಿದ್ದಕ್ಕೆ ಥಳಿಸುವುದು, ಮರ್ಯಾದೆಗೇಡು ಹತ್ಯೆ, ದೇವಸ್ಥಾನ ಪ್ರವೇಶ ನಿರಾಕರಣೆ, ಹಲ್ಲೆ- ಹತ್ಯೆಯಂತಹ ಜಾತಿ ದ್ವೇಷಗಳು ಪ್ರತಿದಿನವೂ ನಡೆಯುತ್ತಿವೆ.
ಇನ್ನೂ ಮುಸ್ಲಿಂ ಸಮುದಾಯ ತಮಗಿದ್ದ ಶೇ.4ರಷ್ಟು ಮೀಸಲಾತಿಯನ್ನು ಕಳೆದುಕೊಂಡು ಎರಡನೆ ದರ್ಜೆಯ ನಾಗರೀಕರಂತೆ ಬದುಕುವ ರಾಜಕೀಯ ದಾಳಿಗಳಿಗೆ ತುತ್ತಾಗುತ್ತಿವೆ. ಶೇ. 40 ರಷ್ಟಿರುವ OBC ಸಮುದಾಯ ಎಲ್ಲಾ ಬಗೆಯ ಅನ್ಯಾಯವನ್ನು ಅನುಭವಿಸುತ್ತಾ ಕೊರಗುತ್ತಿದೆ. ಇವುಗಳಿಗೆಲ್ಲಾ ನ್ಯಾಯ ದಕ್ಕಬೇಕಾದರೆ ಜಾತಿಗಣತಿ ನಡೆಯಬೇಕು. ಈ ಹಿನ್ನಲೆಯಲ್ಲೇ ಕಾಂತರಾಜ ವರದಿಯ ಮಂಡನೆ ಒಂದು ನ್ಯಾಯದ ಬಾಗಿಲು ತೆರೆದಂತೆ.
ಯಾವ ಜಾತಿಗಳು ಶತಮಾನಗಳಿಂದ ಜಾತಿಯ ಕಾರಣಕ್ಕಾಗಿ ಹಸಿವು, ಅವಮಾನ, ಅನಕ್ಷರತೆ, ನಿರುದ್ಯೋಗ, ವನ್ನು ಅನುಭವಿಸುತ್ತಾ ಬಂದಿವೆಯೋ ಅಂತಹ ಜಾತಿಗಳನ್ನು ಸಂವಿಧಾನದ ನ್ಯಾಯ ಮತ್ತು ಹಕ್ಕುಗಳಿಂದ ಮೇಲೆತ್ತುವ ಕೆಲಸ ಇನ್ನೂ ಮುಗಿದಿಲ್ಲ. ಅವರ ಪಾಲಿನ ತುತ್ತನ್ನು ವಂಚಿಸಲಾಗುತ್ತಿದೆ. ಇಲ್ಲವೆ ದೋಚಲಾಗುತ್ತಿದೆ. ದಲಿತರು, ಆದಿವಾಸಿಗಳು, ನಿರ್ಲಕ್ಷಿತ ಸಣ್ಣ ಸಣ್ಣ ಸಮುದಾಯಗಳು ಇನ್ನೂ ಮುಖ್ಯವಾಹಿನಿಗೆ ತೆವಳಲು ಸಾಧ್ಯವಾಗದಷ್ಟು ಅಶಕ್ತವಾಗಿದ್ದು, ಇಂತಹ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಅನ್ನದ ಬಟ್ಟಲಿನಂತೆ ಕಾಣುತ್ತಿರುವ ಕಾಂತರಾಜ ವರದಿಯನ್ನು ನಿರಾಕರಿಸುವ ಬಲಾಢ್ಯ ಜಾತಿಗಳ ಧೋರಣೆಯೇ ನಿರ್ಲಜ್ಜ ಜಾತಿವಾದದ ನಗ್ನ ಪ್ರದರ್ಶನವಾಗಿದೆ.
ಕಾಂತರಾಜ ವರದಿಯನ್ನು ವಿರೋಧಿಸುತ್ತಿರುವ ಬಲಾಢ್ಯ ಜಾತಿಗಳು ಪರಂಪರಾಗತವಾಗಿ ಜಾತಿ ಹೆಸರಿನಲ್ಲಿ ನಡೆಸಿರುವ ಶೋಷಣೆ, ಕ್ರೌರ್ಯಗಳಿಗೆ ಪಶ್ಚಾತ್ತಾಪಪಡಬೇಕು. ಈ ಜಾತಿಗಳ ನಾಯಕರುಗಳೆನಿಸಿಕೊಂಡವರು, ಮಠಾಧಿಪತಿಗಳು, ವಿದ್ಯಾವಂತರು ತಮ್ಮ ತಮ್ಮ ಸಮುದಾಯಗಳಲ್ಲಿ ಸಣ್ಣ ಪಾಪಪ್ರಜ್ಞೆಯನ್ನಾದರೂ ಮೂಡಿಸುವ ಮೂಲಕ ಈ ಸಮಾಜದ ದಮನಿತ ಅವಕಾಶ ವಂಚಿತ ಸಮುದಾಯಗಳನ್ನು ಕನಿಷ್ಠ ಅಂತಃಕರಣದಿಂದ ಕಾಣುವ ಅರಿವಿನಿ ಕಣ್ಣುಗಳನ್ನಾದರೂ ತೆರಸಬೇಕು. ಅದು ಅನಾದಿಕಾಲದಿಂದ ದುರ್ಬಲ ಜಾತಿಗಳನ್ನು ವಂಚಿಸಿದ್ದಕ್ಕೆ ಕನಿಷ್ಠ ನ್ಯಾಯವನ್ನಾದರೂ ಒದಗಿಸಿದಂತಾಗುತ್ತದೆ.
ಈ ನಡುವೆ ಕಳೆದ ವಾರ ಮಧ್ಯಪ್ರದೇಶದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಒಬಿಸಿ ಸಮುದಾಯಕ್ಕೆ ಸೇರಿದ ನನ್ನನ್ನು ಕಾಂಗ್ರೆಸ್ಸಿಗರು ಅವಮಾನ ಮಾಡುತ್ತಿದ್ದಾರೆ ಎಂದು ಅವಲತ್ತುಕೊಂಡಿದ್ದರು. ಗೃಹಮಂತ್ರಿ ಅಮಿತ್ ಶಾ ಅವರು ಛತ್ತೀಸ್ ಗಡದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡುತ್ತಾ ಜಾತಿಗಣತಿಯನ್ನು ಬಿಜೆಪಿ ವಿರೋಧಿಸುವುದಿಲ್ಲ ಎಂದು ಘೋಷಿಸಿದರು. ಆದರೆ ಕರ್ನಾಟಕದಲ್ಲಿ ಕಾಂತರಾಜ ವರದಿಯ ವಿರೋಧಿ ಹೋರಾಟಕ್ಕೆ ತೆರೆಯ ಮರೆಯಲ್ಲಿ ಬಲಾಢ್ಯ ಜಾತಿಗಳಿಗೆ ಬೆಂಗಾವಲಾಗಿ ನಿಂತಿರುವ ತಮ್ಮ ಪಕ್ಷದ ನಾಯಕರುಗಳ ಹಿಕ್ಮತ್ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಕಾಂತರಾಜ ವರದಿ ಜಾರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಪುಟ ಸಹದ್ಯೋಗಿಗಳೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನನ್ನ ಜಾತಿಯ ಸ್ವಾಭಿಮಾನ, ಗೌರವ ಉಳಿಸಿಕೊಳ್ಳಬಾರದೆ ಎಂದು ಕಾಂತರಾಜ ವರದಿ ವಿರೋಧಿಸಿ ಒಕ್ಕಲಿಗ ಸಂಘದ ಮನವಿ ಪತ್ರಕ್ಕೆ ಸಹಿ ಹಾಕಿದ್ದನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುವ ಉಪಮಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಾವು ಹೊಂದಿರುವ ಸಂವಿಧಾನಿಕ ಪದವಿಯನ್ನು ಘನತೆಯನ್ನೆ ಕಳೆದಿದ್ದಾರೆ. ಇನ್ನೂ ಉಳಿದವರ ಇದಕ್ಕಿಂತ ಭಿನ್ನರಲ್ಲ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕಾಂತರಾಜ ವರದಿಯ ಮೂಲಕ ಸಮಾಜವನ್ನು ಒಡೆಯುತ್ತಿದ್ದಾರೆ ಎಂಬ ಆರೋಪವನ್ನು ಸಿದ್ದರಾಮಯ್ಯ ಅವರ ಮೇಲೆ ಎಸೆಯುತ್ತಿರುವುದು ಪರಮ ಅಜ್ಞಾನದ ಸಂಕೇತ.
ಬಹುಸಂಖ್ಯೆಯಲ್ಲಿರುವ ದಲಿತರು, ದಮನಿತರು ಮೊದಲಿನಿಂದಲೂ ನಿರ್ಲಕ್ಷ್ಯಕ್ಕೊಳಗಾಗುತ್ತಲೆ ಬಂದಿದ್ದಾರೆ. ಸೀಮಿತ ಸಂಖ್ಯೆಯಲ್ಲಿರುವ ಬಲಾಢ್ಯ ಜಾತಿಗಳು ಸಣ್ಣ ಮೀನು ದೊಡ್ಡ ಮೀನನ್ನು ನುಂಗಿತು ಎಂಬಂತೆ ಬಹುಜನರನ್ನು ಬದಿಗೊತ್ತಿ ಎಲ್ಲಾ ಸವಲತ್ತುಗಳನ್ನು ಕಬಳಿಸುತ್ತಾ ಬಂದಿವೆ. ಇದು ಸಾಮಾಜಿಕ ನ್ಯಾಯದ ಹಗಲು ದರೋಡೆ. ರಾಜಕೀಯ ಅಧಿಕಾರವೂ ಬಲಾಢ್ಯಜಾತಿಗಳ ಕೈಗಳ ನಡುವೆಯ ಬದಲಾವಣೆಯಾಗುತ್ತಿರುವುದು ಈ ತಾರತಮ್ಯ ನಿರಾತಂಕವಾಗಿ ಮುಂದುವರೆಯುತ್ತ ಬಂದಿದೆ. ಇದನ್ನು ಕೊನೆಗಾಣಿಸದ ಹೊರತು ಸಾಮಾಜಿಕ ನ್ಯಾಯ ಎನ್ನುವುದು ಬಹುಜನರನ್ನು ಮರುಳು ಮಾಡುವ ಭಾಷಣಗಳೇ ಆಗಿರುತ್ತವೆ.
ಜಾತಿ ವ್ಯವಸ್ಥೆ ಉಗಮ, ಸಂರಚನೆ, ಚಲನೆಯನ್ನು ಸ್ಪಷ್ಟವಾಗಿ ಗುರುತಿಸದ ಹೊರತು ಸಾಮಾಜಿಕ ನ್ಯಾಯ ಎಂಬುದು ಅರ್ಥವಾಗುವುದಿಲ್ಲ. ಈ ಮಾತು ಡಿ.ಕೆ ಶಿವಕುಮಾರ್, ಹೆಚ್.ಡಿ ಕುಮಾರಸ್ವಾಮಿ, ಆರ್. ಅಶೋಕ್, ಶಾಮನೂರು ಶಿವಶಂಕರಪ್ಪ ಮತ್ತು ಜಾತಿ ಆಧಾರಿತ ಮಠಗಳಿಗೆ ಅನ್ವಯಿಸುತ್ತದೆ. ದೇಶದಲ್ಲಿ ಮೀಸಲಾತಿ ಎಂಬುದನ್ನೆ ಅಪ್ರಸ್ತುತಗೊಳಿಸುವ ಹುನ್ನಾರಗಳು ನಡೆಯುತ್ತಿರುವ ಹೊತ್ತಿಗೆ ಪ್ರತಿಯೊಬ್ಬರು ತಮ್ಮ ಪಾಲಿನ ತುತ್ತನ್ನು ದಕ್ಕಿಸಿಕೊಳ್ಳುವ ರುಜುಮಾರ್ಗವಾಗಿ ಕಾಣುತ್ತಿರುವ ಜಾತಿಗಣತಿಯನ್ನೂ ಅಪ್ರಸ್ತುತಗೊಳಿಸುವ ಷಡ್ಯಂತ್ರಗಳು ನಡೆಯುತ್ತಿವೆ. ಇದಕ್ಕೆ ಪಕ್ಷ ಬೇಧವೆಂಬುದಿಲ್ಲ. ಜಾತಿಗಣತಿಯಿಂದ ಸಮಾಜವನ್ನು ಒಡೆಯಲಾಗುತ್ತದೆ ಎನ್ನುವವರೆ ಅಸಲಿಗೆ ಸಮಾಜವನ್ನು ಜಾತಿ ಆಧಾರದ ಮೇಲೆ ಒಡೆದು ಹೋಳು ಮಾಡಿರುವ ಸತ್ಯವನ್ನು ಪ್ರಜ್ಞಾಪೂರ್ವಕವಾಗಿ ಮರೆಮಾಚುತ್ತಿದ್ದಾರೆ.
ಕಾಂತರಾಜ ವರದಿ ಅವೈಜ್ಞಾನಿಕ ಎಂದು ಜರಿಯುವುದರ ಹಿಂದೆ ಜಾತಿಗಣತಿಯನ್ನು ವಿರೋಧಿಸುವ ಜಾತಿಕೋರ ಮನಃಸ್ಥಿತಿ ಅಡಗಿದೆ. ಕಾಂತರಾಜ ವರದಿಯನ್ನು ವಿರೋಧಿಸುತ್ತಿರುವ ಸಣ್ಣ ಗುಂಪಿನ ಬಲಾಢ್ಯ ಜಾತಿಗಳ ಅಬ್ಬರದೊಳಗೆ ಅಸಂಘಟಿತ ಮತ್ತು ಬಹುಸಂಖ್ಯೆಯ ಬಹುಜನರ ನ್ಯಾಯದ ಬೇಡಿಕೆ ಕೇಳಿಸದಂತಾಗಿದೆ.
ಹಿಂದುತ್ವ ಪ್ರೇರಿತ ರಾಜಕಾರಣವನ್ನು ಜೀವಂತವಾಗಿಟ್ಟುಕೊಳ್ಳಲು ದಲಿತ ಹಿಂದುಳಿದ ವರ್ಗಗಳ ಹಿತರಕ್ಷಣೆಯ ಮಾತಾಡುತ್ತಿರುವ ಬಿಜೆಪಿಗೆ ಜಾತಿಗಣತಿಯನ್ನು ನಿರಾಕರಿಸುವುದು ಸಾಧುವಲ್ಲ ಎಂಬುದು ಅರ್ಥವಾಗಿ ಬಹುಜನರ ಮತ ರಾಜಕಾರಣವನ್ನು ಮೆಚ್ಚಿಸುವ ಪ್ರಯತ್ನದಲ್ಲಿವೆ.
ಕಳೆದ ಒಂಬತ್ತೂವರೆ ವರ್ಷಗಳಿಂದ ಶೇ. 40 ರಷ್ಟಿರುವ OBC ಸಮುದಾಯಗಳಿಗೆ ಯಾವ ಬಗೆಯ ನ್ಯಾಯ, ಸವಲತ್ತನ್ನು ಕೊಡಲಾರದೇ, ಕೇವಲ ಶೇ. 3ರಷ್ಟು ಇರುವ ಮೇಲ್ಜಾತಿಗಳಿಗೆ ಶೇ. 10 ರಷ್ಟು ಮೀಸಲಾತಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ ತಾನೊಬ್ಬ OBC, ಈ ಕಾರಣಕ್ಕಾಗಿಯೇ ಕಾಂಗ್ರೇಸ್ಸಿಗರು ನನ್ನನ್ನು ಅವಮಾನಿಸುತ್ತಿದ್ದಾರೆ ಎಂದು ಗೋಳಿಡುತ್ತಿರುವುದು ಸೋಜಿಗ. ಪ್ರಧಾನಿ ಮೋದಿ ಅವರು ಇಂತಹ ಗೋಳಾಟ ಬಿಟ್ಟು ಕರ್ನಾಟಕದಲ್ಲಿ ಕಾಂತರಾಜ ವರದಿ ಪರ ನಿಲ್ಲಲ್ಲು ತಮ್ಮ ಪಕ್ಷದ ನಾಯಕರಿಗೆ ಕಟ್ಟಪ್ಪಣೆ ಹೊರಡಿಸಬೇಕು.
ಇದನ್ನೂ ಓದಿ ಜಾತಿ ಸಮೀಕ್ಷೆಯ ಪರ-ವಿರೋಧಗಳ ಸುತ್ತಮುತ್ತ…
ಕರ್ನಾಟಕದಲ್ಲಿ ಕಾಂತರಾಜ ವರದಿ ಮಂಡನೆಯಾಗಬೇಕು. ಜಾತಿ ಜಾತಿಗಳ ನಡುವೆ ಸಮಾನತೆ ಮತ್ತು ನ್ಯಾಯ ಹಂಚಿಕೆಯಾಗಬೇಕು ಇದಕ್ಕೆ ಸಿದ್ದರಾಮಯ್ಯ ಅವರು ಬದ್ದರಾಗಿರಬೇಕು. ಅದನ್ನು ಯಾರಾದರೂ ಅಹಿಂದ ರಾಜಕಾರಣ ಎಂದು ಕರೆದರೂ ಅದು ಸರಿಯೇ ಆಗಿರುತ್ತದೆ. ಮತ್ತು ನ್ಯಾಯವೂ ಆಗಿರುತ್ತದೆ.

ಎನ್ ರವಿಕುಮಾರ್
ಪತ್ರಕರ್ತ, ಲೇಖಕ