ಅತೀ ಹೆಚ್ಚು ರಾಸಾಯನಿಕಗಳ ಬಳಕೆಯಿಂದಾಗಿ ತಿನ್ನುವ ಆಹಾರವೂ ಕೆಮಿಕಲ್ ಆಗಿ ಮಾರ್ಪಡುತ್ತಿದೆ. ಇದು ಮನುಷ್ಯನ ಮೇಲೆ ನೇರ ಪರಿಣಾಮ ಬೀಡುತ್ತಿದ್ದು, ಹಲವು ರೋಗಗಳಿಗೆ ಜನರು ತುತ್ತಾಗುತ್ತಿರುವುದು ಒಂದೆಡೆಯಾದರೆ, ಮನುಷ್ಯದ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಕುಂದುತ್ತಿವೆ. ಹೀಗಾಗಿ, ಕೃಷಿ ತಜ್ಞರು ಸಾವಯವ ಕೃಷಿಯನ್ನು ಉತ್ತೇಜಿಸಬೇಕು ಎಂದು ಹಲವಾರು ವರ್ಷಗಳಿಂದ ಹೇಳುತ್ತಲೇ ಇದ್ದರೂ, ಸರ್ಕಾರಗಳು ಅದಕ್ಕೆ ಕಿವಿಗೊಡುತ್ತಿಲ್ಲ ಎಂಬುದು ಆರೋಪ.
ಅಲ್ಲದೆ, ಸಾವಯವ ಕೃಷಿಯಿಂದ ಹೆಚ್ಚಿನ ಇಳುವರಿ ಬರುವುದಿಲ್ಲ, ಹೆಚ್ಚಿನ ಲಾಭ ಸಿಗುವುದಿಲ್ಲ ಎಂಬ ಊಹಾಪೋಹವೂ ರೈತರ ಮನಸ್ಸಿನದಲ್ಲಿ ಗಾಢವಾಗಿದ್ದು, ಸಾವಯವ ಕೃಷಿ ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ.
ಇದೆಲ್ಲದರ ನಡುವೆ, ಸಾವಯವ ಕೃಷಿಯ ಮೂಲಕ ಅತ್ಯುತ್ತಮ ಇಳುವರಿ ಪಡೆದು, ಲಾಭ ಗಳಿಸಿರುವ ಕೆಲವು ರೈತರು ದೇಶಕ್ಕೆ ಹೊಸ ಮಾದರಿಯನ್ನು ಸೃಷ್ಟಿಸುತ್ತಿದ್ದಾರೆ.
2004ರ ನಂತರ ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳ ಸಾವಯವ ಕೃಷಿಗೆ ಒತ್ತು ಕೊಡಲು ಮುಂದಾಗಿವೆಯಾದರೂ, ಉತ್ತರಾಖಂಡ ಹೊರತು ಪಡಿಸಿದರೆ, ಉಳಿದ ಯಾವ ರಾಜ್ಯಗಳಲ್ಲೂ ಅಂತಹ ಪ್ರಗತಿ ಏನೂ ಕಂಡಿಲ್ಲ. ಉತ್ತರಾಖಂಡ ರಾಜ್ಯದಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತುಕೊಡಲಾಗುತ್ತಿದ್ದು, ಆರ್ಗ್ಯಾನಿಕ್ ಕೃಷಿಯಲ್ಲಿ ಉತ್ತರಾಖಂಡ ಅಭೂತಪೂರ್ವ ಸಾಧನೆಯನ್ನು ಮಾಡುತ್ತಿದೆ.
ಕರ್ನಾಟಕದಲ್ಲಿ ಸಾವಯವ ಕೃಷಿಗಾಗಿ 2004ರಲ್ಲಿ ಅಧಿಕೃತ ನೀತಿಯನ್ನು ಜಾರಿಗೆ ತರಲಾಯಿತು. ಆದರೆ, ರಾಜ್ಯದಲ್ಲಿ ಅದನ್ನು ಜಾರಿ ನಿರೀಕ್ಷಿತ ಮಟ್ಟಕ್ಕೆ ಸಾಧ್ಯವಾಗಲಿಲ್ಲ. ಅದಕ್ಕಾಗಿ, ಸರ್ಕಾರವು 2013 ರಲ್ಲಿ ಸಾವಯವ ಭಾಗ್ಯ ಯೋಜನೆ ಅಡಿಯಲ್ಲಿ, ಕರ್ನಾಟಕ ರಾಜ್ಯ ಸಾವಯವ ಪ್ರಮಾಣೀಕರಣ ಸಂಸ್ಥೆ ಮೂಲಕ ರೈತರ ಕೃಷಿ ಭೂಮಿಗೆ ಸಾವಯವ ಕೃಷಿ ಪ್ರಮಾಣಪತ್ರವನ್ನು ನೀಡಲು ಪ್ರಾರಂಭಿಸಿತು. ನಂತರ 2015ರಲ್ಲಿ ಕೇಂದ್ರ ಪ್ರಾಯೋಜಿತ ಪರಂಪರಾಗತ್ ಕೃಷಿ ವಿಕಾಸ್ ಯೋಜನೆಯೂ ಸಹ ಜಾರಿಗೆ ಬಂದಿತು. ಇದೆಲ್ಲದರ ಭಾಗವಾಗಿ 1.1% ಕೃಷಿ ಭೂಮಿಯನ್ನು ಸಾವಯವ ಕೃಷಿ ಭೂಮಿಯನ್ನಾಗಿ ಪರಿವರ್ತಿಸಲಾಯಿತು.
ಬಳಿಕ, 2004ರಲ್ಲಿ ತರಲಾಗಿದ್ದ ಕಾಯ್ದೆಗೆ 2017ರಲ್ಲಿ ತಿದ್ದುಪಡಿ ತಂದು ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡಲು ಸರ್ಕಾರ ಮುಂದಾಗಿತ್ತು. ತಿದ್ದುಪಡಿ ಯೋಜನೆಯು ರಾಜ್ಯದಲ್ಲಿ ಕೃಷಿ ಮಾಡಲಾಗುತ್ತಿರುವ ಒಟ್ಟು 121.7 ಲಕ್ಷ ಹೆಕ್ಟೇರ್‌ಗಳ ಕೃಷಿ ಭೂಮಿಯ ಪೈಕಿ 10% ಭೂಮಿಯನ್ನು 2022ರ ವೇಳೆಗೆ ಸಾವಯವ ಕೃಷಿ ಭೂಮಿಯನ್ನಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿತ್ತು. ಆದರೆ, ಆ ಮಟ್ಟಕ್ಕೆ ಪ್ರಗತಿ ಸಾಧ್ಯವಾಗಿಲ್ಲ.
ಆದರೆ, ಉತ್ತರಾಖಂಡವು ಸಾವಯವ ಕೃಷಿಯಲ್ಲಿ ಮುನ್ನುಗ್ಗುತ್ತಿದೆ. ಉತ್ತರಾಖಂಡದಲ್ಲಿ ‘ಸಾವಯವ ಕೃಷಿ ಕಾಯಿದೆ-2019 ಜಾರಿಯಲ್ಲಿದ್ದು, ಇದು ಸಾವಯವ ಕೃಷಿಗೆ ಹೆಚ್ಚಿನ ಉತ್ತೇಜನವನ್ನು ನೀಡುತ್ತಿದೆ. ದೇಶದಲ್ಲಿ ಸಾವಯವ ಕೃಷಿ ಮಾಡುತ್ತಿರುವ ಕೃಷಿ ಭೂಮಿಯ ಪೈಕಿ, ಉತ್ತರಾಖಂಡವು ಸುಮಾರು 40% ನಷ್ಟು ಪಾಲನ್ನು ಹೊಂದಿದೆ.
ಉತ್ತರಾಖಂಡದಲ್ಲಿ ಸಾವಯವ ಕೃಷಿ ವಿಧಾನಗಳಲ್ಲಿ ಬೆಳಗಳನ್ನು ಬೆಳೆಯುವ ಪ್ರದೇಶವು 2017ರಿಂದ ಇಲ್ಲಿಯವರೆಗೆ ಆರು ಪಟ್ಟು ಹೆಚ್ಚು ಹೆಚ್ಚಾಗಿದೆ. 2018ರಲ್ಲಿ ಕೇವಲ 35,106 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿ ಮಾಡಲಾಗಿತ್ತು. ಇದು ಈಗ 2.30 ಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ. ರಾಜ್ಯದ ಒಟ್ಟು 6.48 ಲಕ್ಷ ಹೆಕ್ಟೇರ್ ಕೃಷಿಭೂಮಿಯ ಪೈಕಿ 2.30 ಲಕ್ಷ ಹೆಕ್ಟೇರ್ (34%) ಸಾವಯವ ಕೃಷಿ ಸಾಗುವಳಿ ಪ್ರದೇಶವಾಗಿ ಮಾರ್ಪಟ್ಟಿದೆ. ಈ ಭೂಮಿಯಲ್ಲಿ ದ್ವಿದಳ ಧಾನ್ಯಗಳು, ತರಕಾರಿಗಳು, ರಾಗಿ, ಗೋಧಿ ಮತ್ತು ಇತರ ಅನೇಕ ಬೆಳೆಗಳನ್ನು ಬೆಳೆಯಲಾಗುತ್ತಿದೆ.
ಈ ವರದಿ ಓದಿದ್ದೀರಾ?: ಉನ್ನತ ಹುದ್ದೆಗಳ ನೇಮಕಾತಿಯ ನಂತರ ಒಳಮೀಸಲಾತಿ ಜಾರಿ ನ್ಯಾಯ ಸಮ್ಮತವೇ?
ಸುಮಾರು 4.5 ಲಕ್ಷ ರೈತರು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾವಯವ ಕೃಷಿಯಿಂದ ರೈತರಿಗೆ ಆರ್ಥಿಕ ಹಾಗೂ ಇತರ ಲಾಭಗಳು ಶೀಘ್ರವೇ ಸಿಗುತ್ತವೆ. ಮಾತ್ರವಲ್ಲದೆ, ಗ್ರಾಹಕರ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಉತ್ತರಾಖಂಡದ ಅರ್ಗಾನಿಕ್ ಕಮಾಂಡಿಟಿ ಬೋರ್ಡ್‌ನ ವ್ಯವಸ್ಥಾಪಕ ನಿರ್ದೇಶಕ ವಿನಯ್ ಕುಮಾರ್ ಹೇಳುತ್ತಾರೆ.
ಉತ್ತರಾಖಂಡದ ಡೆಹ್ರಾಡೂನ್‌ನ ಚಕ್ರತಾ ಪ್ರದೇಶದ ಉತ್ಪಲ್ಟಾ ಗ್ರಾಮದ ರೈತ ಗೋಪಾಲ್ ದಿಂಟಾ ಅವರು 2017ರಲ್ಲಿ ಸಾವಯವ ಕೃಷಿಯನ್ನು ಆರಂಭಿಸಿದರು, ಅಂದಿನಿಂದ ಇಂದಿನವರೆಗೆ ಅವರ ಕೃಷಿ ಭೂಮಿಯಲ್ಲಿನ ಇಳುವರಿ ಹೆಚ್ಚಾಗಿದ್ದು, 40%ರಷ್ಟು ಆದಾಯ ಹೆಚ್ಚಾಗಿದೆ.
“ನಾನು ಉತ್ತರಾಖಂಡ ಆರ್ಗಾನಿಕ್ ಕಮಾಂಡಿಟಿ ಬೋರ್ಡ್‌ನ ಮಾಗದರ್ಶನದಲ್ಲಿ ಸಾವಯವ ಕೃಷಿಯನ್ನು ಆರಂಭಿಸಿದೆ. ಹಂತ ಹಂತವಾಗಿ ಕೃಷಿಯಲ್ಲಿ ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡಲು ಆರಂಭಿಸಿದೆ. ಈಗ ನಾನು 40% ಕ್ಕಿಂತ ಹೆಚ್ಚು ಆದಾಯವನ್ನು ಪಡೆಯುತ್ತಿದ್ದೇನೆ. ಅಲ್ಲದೆ, ಯಾವುದೇ ಮಧ್ಯವರ್ತಿಗಳಿಲ್ಲದೆ ಮಾರುಕಟ್ಟೆಯಲ್ಲಿ ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಸಾಧ್ಯವಾಗುತ್ತಿದೆ” ಎಂದು ದಿಂಟಾ ಹೇಳಿದ್ದಾರೆ.
“ರಾಸಾಯನಿಕಗಳನ್ನು ಬಳಸಿ ಬೆಳೆಯುವ ರಾಜ್ಮಾ ಕೆಜಿಗೆ 80 ರೂ.ಗೆ ಮಾರಾಟವಾದರೆ, ನಾವು ಬೆಳೆಯುವ ಸಾವಯವ ರಾಜ್ಮಾ ಕಾಳುಗಳು ಕೆಜಿಗೆ 120 ರೂ.ಗೆ ಮಾರಾಟವಾಗುತ್ತವೆ. ಆರ್ಗಾನಿಕ್ ಕಮಾಂಡಿಟಿ ಬೋರ್ಡ್ ಆರ್ಗಾನಿಕ್ ಕಮಾಂಡಿಟಿ ಬೋರ್ಡ್ ನಡೆಸುವ ‘Organic Uttarakhand’ ಮಳಿಗೆಗಳು ನಮ್ಮ ಉತ್ಪನ್ನಗಳನ್ನು ಖರೀದಿಸುತ್ತವೆ. ಅವುಗಳನ್ನು ಎನ್‌ಜಿಒಗಳು ಮತ್ತು ಇತರ ಸಂಸ್ಥೆಗಳ ಮೂಲಕ ನೇರವಾಗಿ ದೆಹಲಿ ಮತ್ತು ಮುಂಬೈನ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ” ಎಂದು ರೈತ ಮನೋಹರ್ ಸೋಲಂಕಿ ಹೇಳುತ್ತಾರೆ.