ಅರಮನೆ ಮೈದಾನ ಸ್ವಾಧೀನ | BBMPಯ ಒಂದು ಪತ್ರದಿಂದ ಸರ್ಕಾರಕ್ಕೆ 3 ಸಾವಿರ ಕೋಟಿಯ ಭಾರೀ ಹೊರೆ!

Date:

Advertisements

ಬೆಂಗಳೂರು ಬೆಳೆಯುತ್ತಿರುವ ನಗರ. ಈಗಾಗಲೇ ಕಾಲಿಡಲು ಜಾಗವಿಲ್ಲ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನಗಳು ದಿನನಿತ್ಯ ಹೆಚ್ಚುತ್ತಿವೆ. ರಸ್ತೆಗಳು ಕಿಕ್ಕಿರಿಯುತ್ತಿವೆ. ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿ, ಬಿಡಿಎ ಮುಂದಾಗಿವೆ. ಅದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸುತ್ತಿವೆ. ಈ ಪ್ರಕ್ರಿಯೆಯಿಂದ ಬೆಂಗಳೂರಿನ ಅರಮನೆ ಮೈದಾನದ ಒಡೆತನ ಹೊಂದಿರುವ ಮೈಸೂರು ರಾಜಮನೆತನವು ಭಾರೀ ಲಾಭ ಪಡೆಯಲು ಎದುರು ನೋಡುತ್ತಿದೆ. ಅದು ಸರ್ಕಾರಕ್ಕೆ ಭಾರೀ ಹೊರೆಯಾಗಲಿದೆ. ರಾಜಮನೆತನ ಲಾಭ ಮತ್ತು ಸರ್ಕಾರದ ಹೊರೆಗೆ ಬಿಬಿಎಂಪಿಯ ಹಿಂದಿನ ಆಯುಕ್ತರೊಬ್ಬರು ಬರೆದಿದ್ದ ಒಂದು ಪತ್ರವೇ ಕಾರಣವೆಂದು ತಿಳಿದುಬಂದಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯನ್ನು ಅಗಲೀಕರಿಸುವ ಪ್ರಸ್ತಾಪ ಹಲವಾರು ವರ್ಷಗಳಿಂದ ಸರ್ಕಾರದ ಮುಂದಿದೆ. ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ಅಗಲೀಕರಣಕ್ಕೆ ಬಿಬಿಎಂಪಿ ಪದೇ-ಪದೇ ಸರ್ಕಾರಕ್ಕೆ ಒತ್ತಾಯಿಸುತ್ತಿದೆ. ಸದ್ಯ, ಆ ರಸ್ತೆಗಳ ಅಗಲೀಕರಣಕ್ಕೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಅದಕ್ಕಾಗಿ, ರಾಜಮನೆತನದ ಒಡೆತನದಲ್ಲಿರುವ ಬೆಂಗಳೂರು ಅರಮನೆ ಮೈದಾನದ 15.39 ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಬೇಕಿದೆ. ಇದರಲ್ಲಿ, ಜಯಮಹಲ್ ರಸ್ತೆ ಬಳಿಯ 9 ಎಕರೆ 18 ಗುಂಟೆ, ಬಳ್ಳಾರಿ ರಸ್ತೆಯ 6 ಎಕರೆ 21 ಗುಂಟೆ (ಒಟ್ಟು 15.39 ಎಕರೆ) ಸೇರಿದೆ. ಆದರೆ, 2009ರಲ್ಲಿ ಬಿಬಿಎಂಪಿ ಆಯುಕ್ತರು ಮಾಡಿದ್ದ ಎಡವಟ್ಟಿನಿಂದಾಗಿ ರಾಜಮನೆತನದ ಒಡೆತನದ 15.39 ಎಕರೆ ಭೂಮಿಗೇ 3,011.66 ಕೋಟಿ ರೂ. ನೀಡಬೇಕಾಗಿದೆ.

ಅಂದಹಾಗೆ, 2009ರಲ್ಲಿಯೇ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ಅಗಲೀಕರಣಕ್ಕೆ ನಿರ್ಧರಿಸಲಾಗಿತ್ತು. ಭೂಸ್ವಾಧೀನಕ್ಕೆ ಪ್ರಕ್ರಿಯೆಗಳನ್ನು ಆರಂಭಿಸಲಾಗಿತ್ತು. ಆಗ, ಬಿಬಿಎಂಪಿ/ಸರ್ಕಾರ ಮತ್ತು ರಾಜಮನೆತನದ ನಡುವೆ ವ್ಯಾಜ್ಯ ಉಂಟಾಗಿ, ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಇದೀಗ, ಬಿಬಿಎಂಪಿ ಮತ್ತೆ ಪ್ರಕ್ರಿಯೆಯನ್ನು ಆರಂಭಿಸಲು ಮುಂದಾಗಿದೆ.

Advertisements

2024ರ ಮೇ 5ರಂದು ಅರಮನೆ ಮೈದಾನದ ಭೂಮಿಯನ್ನು ಸ್ವಾಧೀನಕ್ಕೆ ಪಡೆಯುವ ಬಗ್ಗೆ ಸರ್ಕಾರವು 2024ರ ಮೇ 5ರಂದು ಆದೇಶ ಹೊರಡಿಸಿತ್ತು. ಆ ಆದೇಶದ ಪ್ರಕಾರ, ಸ್ವಾಧೀನಕ್ಕೆ ಗುರುತಿಸಲಾಗಿರುವ ಅರಮನೆ ಮೈದಾನದ 15.39 ಎಕರೆ ಭೂಮಿಯ ಟಿಡಿಆರ್ ಮೊತ್ತವು 1,50,79,007.03 ಕೋಟಿ ರೂ.ಗಳಾಗಿತ್ತು.

ಅದರಂತೆ, 2024ರ ಡಿಸೆಂಬರ್ 16ರಂದು ಸರ್ಕಾರಕ್ಕೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್‌ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆ ಪತ್ರದಲ್ಲಿ, ಅರಮನೆ ಮೈದಾನದ ಭೂಮಿಯನ್ನು ‘ಬೆಂಗಳೂರು ಪ್ಯಾಲೆಸ್‌ ಆ್ಯಕ್ಟ್‌-1996’ರ ಅಡಿಯಲ್ಲಿ ಪ್ರತಿ ಚದರ ಮೀಟರ್‌ ಭೂಮಿಗೆ ಮೂಲ ಮೊತ್ತ (ಪ್ರಿನ್ಸಿಪಲ್ ಅಮೌಂಟ್) 57.47 ರೂ. ಮತ್ತು 4% ಬಡ್ಡಿ ಸೇರಿ ಒಟ್ಟು 120 ರೂ.ಗಳಂತೆ ಖರೀದಿಸಬೇಕು ಎಂದು ಶಿಫಾರಸ್ಸು ಮಾಡಿದ್ದರು. ಅಂದರೆ, 15.39 ಎಕರೆ ಭೂಮಿಗೆ 1.5 ಕೋಟಿ ರೂ.ಗಳನ್ನು ರಾಮಮನೆತನಕ್ಕೆ ಪಾವತಿಸಿ ಸ್ವಾಧೀನಕ್ಕೆ ಪಡೆದುಕೊಳ್ಳಲು ಸೂಚಿಸಲಾಗಿತ್ತು.

ಆದರೆ, ಈ ನಡುವೆ, ಆ ಭೂಮಿಯನ್ನು ‘ಕರ್ನಾಟಕ ಮುದ್ರಾಂಕ ಕಾಯ್ದೆ-1957’ ಅಡಿಯಲ್ಲಿ ಮಾರುಕಟ್ಟೆ ಮೌಲ್ಯದ ಪ್ರಕಾರ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್) ನೀಡಿಯೇ ಸ್ವಾಧೀನಕ್ಕೆ ಪಡೆದುಕೊಳ್ಳಬೇಕೆಂದು ಸರ್ಕಾರ ಮತ್ತು ಬಿಬಿಎಂಪಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಹೀಗಾಗಿ, ಸರ್ಕಾರವು ಇಂದಿನ ಮಾರುಕಟ್ಟೆ ಮೌಲ್ಯದಲ್ಲಿಯೇ ಅರಮನೆ ಮೈದಾನದ ಜಾಗವನ್ನು ಭೂಸ್ವಾಧೀನ ಮಾಡಿಕೊಳ್ಳಬೇಕಿದೆ.

ಪ್ರಸ್ತುತ, 2023-24ರಲ್ಲಿ ಪರಿಷ್ಕೃತ ಮೌಲ್ಯಗಳ ಪ್ರಕಾರ, ಭೂಸ್ವಾಧೀನಕ್ಕೆ ಉದ್ದೇಶಿತ ಪ್ರದೇಶದ ಮಾರುಕಟ್ಟೆ ಮೌಲ್ಯವು ಬಳ್ಳಾರಿ ರಸ್ತೆಯಲ್ಲಿ ಪ್ರತಿ ಚದರ ಮೀಟರ್‌ಗೆ 2.83 ಲಕ್ಷ ರೂ. ಮತ್ತು ಜಯಮಹಲ್ ರಸ್ತೆಯಲ್ಲಿ ಪ್ರತಿ ಚದರ ಮೀಟರ್‌ಗೆ 2.04 ಲಕ್ಷ ರೂ. ಇದೆ. ಅಂದರೆ, ಒಟ್ಟು 15.39 ಎಕರೆ ಭೂಸ್ವಾಧೀನಕ್ಕೆ 3,011 ಕೋಟಿ ರೂ.ಗಳಾಗಲಿವೆ. 1.5 ಕೋಟಿ ರೂ.ಗೆ ಪಡೆಯಬಹುದಾಗಿದ್ದ 15 ಎಕರೆ ಭೂಮಿಗೆ ಈಗ 3,011 ಕೋಟಿ ರೂ. ಭರಿಸಬೇಕಾಗಿದೆ. ಇದು, ಸರ್ಕಾರಕ್ಕೆ ಭಾರೀ ಹೊರೆಯಾಗಲಿದೆ. ಈ ಬಗ್ಗೆಯೂ ತುಷಾರ್ ಗಿರಿನಾಥ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಪತ್ರ ಬರೆದು ವಿವರಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಶಾಲಿನಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ವರದಿಯಾಗಿದೆ.

ಈ ಹೊರೆ ಮತ್ತು ಸುಪ್ರೀಂ ಕೋರ್ಟ್‌ ಆದೇಶಕ್ಕೆ 2009ರಲ್ಲಿ ರಾಜಮನೆತನದ ‘ಪ್ರಿನ್ಸಸ್ ಅಕಾಡೆಮಿ’ಯ ಮೀನಾಕ್ಷಿ ದೇವಿ ಅವರಿಗೆ ಬಿಬಿಎಂಪಿಯ ಅಂದಿನ ಆಯುಕ್ತರಾಗಿದ್ದ ಭರತ್‌ಲಾಲ್‌ ಮೀನಾ ಅವರು ಬರೆದಿದ್ದ ಒಂದು ಪತ್ರವೇ ಕಾರಣವೆಂದು ಆಪಾದಿಸಲಾಗಿದೆ. ಮೀನಾ ಅವರು ಅರಮನೆ ಮೈದಾನದ ಭೂಮಿಯನ್ನು ‘ಬೆಂಗಳೂರು ಪ್ಯಾಲೆಸ್‌ ಆ್ಯಕ್ಟ್‌-1996’ರ ಅಡಿಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಹೇಳುವ ಬದಲು, ಭೂಮಿಗೆ ಮಾರುಕಟ್ಟೆ ಬೆಲೆಯಲ್ಲಿ ಟಿಡಿಆರ್‌ ನೀಡಲಾಗುವುದು ಎಂದು ಪ್ರಮೋದಾ ದೇವಿ ಅವರಿಗೆ ಪತ್ರ ಬರೆದಿದ್ದರು. ಆ ಪತ್ರದ ಕಾರಣಕ್ಕಾಗಿ ಈಗ ಸರ್ಕಾರಕ್ಕೆ ಹೊರೆಯಾಗಲಿದೆ.

ಈ ವರದಿ ಓದಿದ್ದೀರಾ?: ಕರ್ನಾಟಕದಲ್ಲಿ ವಕ್ಫ್‌ ವಿವಾದ: ಅಂತಿಮವಾಗಿ ಗೆದ್ದಿದ್ದು ಯಾರು?

ಗಮನಾರ್ಹ ಸಂಗತಿ ಎಂದರೆ, ಟಿಡಿಆರ್‌ ನೀಡಲು ಬಿಬಿಎಂಪಿಗೆ ಅಧಿಕಾರವಿಲ್ಲ. ಸರ್ಕಾರ ಅಥವಾ ಆಯಾ ಪಟ್ಟಣಗಳಲ್ಲಿನ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಾತ್ರವೇ ಟಿಡಿಆರ್‌ ನೀಡುವ ಅಧಿಕಾರವಿರುತ್ತದೆ. ಅದರಂತೆ, ಬೆಂಗಳೂರಿನಲ್ಲಿ ಟಿಡಿಆರ್‌ ನೀಡುವ ಅಧಿಕಾರಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಸರ್ಕಾರಕ್ಕೆ ಮಾತ್ರವೇ ಇದೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ಬೆಂಗಳೂರಿನ ಕೆಲವು ರಸ್ತೆಗಳ ಅಗಲೀಕರಣದ ವೇಳೆ ಟಿಡಿಆರ್ ನೀಡುವ ಅಧಿಕಾರವನ್ನು ಬಿಬಿಎಂಪಿಗೆ ನೀಡಲಾಗುತ್ತದೆ. ಆದರೆ, ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಯ ಅಗಲೀಕರಣದಲ್ಲಿ ಭೂಸ್ವಾಧೀನಕ್ಕೆ ಪರ್ಯಾಯವಾಗಿ ಟಿಡಿಆರ್ ನೀಡುವ ಅಧಿಕಾರವನ್ನು ಬಿಬಿಎಂಪಿಗೆ ಎಂದಿಗೂ ನೀಡಲಾಗಿಲ್ಲ.

ಆದರೂ, 2009ರಲ್ಲಿ ಅಂದಿನ ಬಿಬಿಎಂಪಿ ಆಯುಕ್ತ ಭರತ್‌ಲಾಲ್ ಮೀನಾ ಅವರು ಅರಮನೆ ಮೈದಾನದ ಆಸ್ತಿಯ ಭಾಗಶಃ ಆಸ್ತಿಯನ್ನು ಸ್ವಾಧೀನಕ್ಕೆ ಪಡೆದು ರಸ್ತೆ ಅಗಲೀಕರಣ ಮಾಡುವ ಪ್ರಕ್ರಿಯೆ ಆರಂಭಿಸಲು ತಾವೇ ಸ್ವಯಂ ನಿರ್ಧಾರ ತೆಗೆದುಕೊಂಡು ಏಕಾಏಕಿ ಮುಂದಾಗಿದ್ದರು ಎಂದು ಆರೋಪಿಸಲಾಗಿದೆ.

ಈ ಪ್ರಕ್ರಿಯೆಯಲ್ಲಿ, ಅರಮನೆ ಮೈದಾನದ ಭೂಮಿಯ ಸ್ವಾಧೀನಕ್ಕೆ ಟಿಡಿಆರ್‌ ನೀಡುವ ಸಂಬಂಧ 2009ರ ನವೆಂಬರ್ 20ರಲ್ಲಿ ಡಿಪಿಎಆರ್‍‌ನ ಪ್ರಧಾನ ಕಾರ್ಯದರ್ಶಿಗೂ ಪತ್ರ ಬರೆದಿದ್ದರು. ಆದರೆ, ಅವರ ಪತ್ರಕ್ಕೆ ಸರ್ಕಾರ ಉತ್ತರಿಸಿರಲಿಲ್ಲ. ಆದಾಗ್ಯೂ, ಸರ್ಕಾರದ ಪ್ರತಿಕ್ರಿಯೆಗೂ ಕಾಯದೆ, ಮೀನಾ ಅವರು 2009ರ ಡಿಸೆಂಬರ್ 26ರಂದು ಬೆಂಗಳೂರು ಅರಮನೆ ಮೈದಾನದ ಪ್ರಿನ್ಸಸ್ ಅಕಾಡೆಮಿಯ ಮೀನಾಕ್ಷಿ ದೇವಿ ಅವರಿಗೆ ಟಿಡಿಆರ್‌ ನೀಡುವ ಬಗ್ಗೆ ಪತ್ರವನ್ನೂ ಬರೆದಿದ್ದರು.

ಆ ನಂತರದಲ್ಲಿ, ಅರಮನೆ ಮೈದಾನದ ಭೂಮಿಗೆ ಟಿಡಿಆರ್ ನೀಡಲು ಸರ್ಕಾರ ನಿರಾಕರಿಸಿತು. ಅಲ್ಲದೆ, ಟಿಡಿಆರ್‌ ಕಾರಣಕ್ಕಾಗಿ ವಿವಾದಕ್ಕೊಳಗಾದ ಭೂಮಿಯ ಸ್ವಾಧೀನಕ್ಕೆ ಪ್ರತಿಯಾಗಿ 13.91 ಲಕ್ಷ ಚದರ ಅಡಿ ಅಭಿವೃದ್ಧಿ ಪಡಿಸಿದ ಪ್ರದೇಶ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಸರ್ಕಾರದ ಪರ್ಯಾಯ ಪ್ರಸ್ತಾಪವನ್ನು ರಾಜಮನೆತನ ತಿರಸ್ಕರಿಸಿತ್ತು. ಹೀಗಾಗಿ, ವ್ಯಾಜ್ಯವು ಹೈಕೋರ್ಟ್‌ ಮೆಟ್ಟಿಲೇರಿತ್ತು. ಟಿಡಿಆರ್ ಮೂಲಕವೇ ಅರಮನೆ ಮೈದಾನ ಭೂಮಿಯನ್ನು ಸ್ವಾಧೀನಕ್ಕೆ ಪಡೆಯುವಂತೆ ಹೈಕೋರ್ಟ್‌ ಆದೇಶಿಸಿತ್ತು.

ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ರಾಜಮನೆತನದವರು ಬಿಬಿಎಂಪಿ ಆಯುಕ್ತರೇ ಬರೆದಿದ್ದ ಆ ಪತ್ರವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಹೀಗಾಗಿ, ‘ಬಿಬಿಎಂಪಿಯೇ ಟಿಡಿಆರ್ ಕೊಡಲು ಮುಂದೆ ಬಂದಿತ್ತು’ ಎಂಬುದನ್ನು ಸುಪ್ರೀಂ ಕೋರ್ಟ್‌ ಗಮನಿಸಿದೆ.

ಬಿಬಿಎಂಪಿಯ ಹಿಂದಿನ ಆಯುಕ್ತರ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್‌, ಟಿಡಿಆರ್‌ ಕೊಟ್ಟು ಭೂಮಿಯನ್ನು ಸ್ವಾಧೀನಕ್ಕೆ ಪಡೆಯಬೇಕೆಂದು ಸರ್ಕಾರ ಮತ್ತು ಬಿಬಿಎಂಪಿಗೆ ಆದೇಶ ನೀಡಿದೆ. ಸುಪ್ರೀಂ ಕೋರ್ಟ್‌ನ ಆದೇಶವು ಬಿಬಿಎಂಪಿ ಮತ್ತು ಸರ್ಕಾರಕ್ಕೆ ಕಬ್ಬಿಣದ ಸರಪಣಿಯಾಗಿ ಪರಿಣಮಿಸಿದೆ.

ಆದರೆ, ರಾಜಮನೆತನ ಭೂಮಿಗೆ ಟಿಡಿಆರ್‌ ನೀಡುವುದಕ್ಕೆ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರು ಅಸಮ್ಮತಿ ವ್ಯಕ್ತಪಡಿಸಿದ್ದರು. ಅಲ್ಲದೇ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ತಿರಸ್ಕರಿಸಲಾಗಿತ್ತು ಎಂದು ತಿಳಿದುಬಂದಿದೆ.

ಆದರೂ, ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ, ಈಗ, ರಾಜ್ಯ ಸರ್ಕಾರವು ಟಿಡಿಆರ್‌ ನೀಡುವ ಕ್ರಮಗಳನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಭೂಸ್ವಾಧೀನಕ್ಕೆ ವ್ಯಯಿಸಬೇಕಾದ ಅದೇ 3,011 ಕೋಟಿ ರೂ.ಗಳಲ್ಲಿ ಕುಮಾರಕೃಪಾ ರಸ್ತೆಯಿಂದ ಹೆಬ್ಬಾಳ ಫ್ಲೈಓವರ್‌ವರೆಗೆ ಮತ್ತೊಂದು ಮೇಲುರಸ್ತೆಯನ್ನೇ ನಿರ್ಮಾಣ ಮಾಡಬಹುದು ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ.

ಆದಾಗ್ಯೂ, ಕಳೆದ ವರ್ಷ ಮಾರ್ಚ್‌ನಲ್ಲಿ, ರಾಜಮನೆತನದ ಭೂಮಿಗೆ ಟಿಡಿಆರ್‌ ನೀಡಲು ಸಚಿವ ಸಂಪುಟವು ತೀರ್ಮಾನಿಸಿತ್ತು ಎಂದು ಹೇಳಲಾಗುತ್ತಿದೆ. ಟಿಡಿಆರ್‌ ನೀಡಲು ಮತ್ತೆ ನಿರ್ಧಾರದ ಮಾಡುವುದರ ಹಿಂದೆ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಪ್ರಭಾವವಿದೆ ಎಂದು ಆರೋಪಿಸಲಾಗಿದೆ.

ರಾಜಮನೆತನದ ಭೂಮಿಗೆ ಟಿಡಿಆರ್ ನೀಡುವುದರ ನಿರ್ಧಾರದ ಹಿಂದಿರುವ ರಾಜಕೀಯದ ಬಗ್ಗೆ ಮಾಹಿತಿ ಕಲೆ ಹಾಕಲು ಕೆಲವು ಐಎಎಸ್‌ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ. ಅವರು ಪ್ರತಿಕ್ರಿಯೆ ದೊರೆತ ನಂತರ ಲೇಖನವನ್ನು ‘ಅಪ್‌ಡೇಡ್’ ಮಾಡಲಾಗುವುದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X