ಪೋಕ್ಸೊ ಪ್ರಕರಣ | ಮಂಜಪ್ಪನಂಥವರು ಶಾಲೆ ನಡೆಸಲು ಯೋಗ್ಯರೇ?; ಸರ್ಕಾರ ʼವನಶ್ರೀ ವಿದ್ಯಾಲಯʼಕ್ಕೆ ಶಾಶ್ವತ ಬೀಗ ಹಾಕಲಿ

Date:

Advertisements

ನಾಗರಿಕ ಸಮಾಜದಲ್ಲಿ ಮಂಜಪ್ಪನಂತಹ ಕಳಂಕಿತರು ಮಕ್ಕಳ ಮನಸ್ಸು, ಬುದ್ದಿ, ಜ್ಞಾನವನ್ನು ಉದ್ದೀಪನಗೊಳಿಸಬೇಕಾದ ಶಾಲೆಗಳ ಮುಖ್ಯಸ್ಥರಾಗುವುದು ಅಪಾಯಕಾರಿ. ಶಿಕ್ಷಣ ಇಲಾಖೆ ಮಂಜಪ್ಪನ ಶಾಲೆಯ ಪರವಾನಗಿಯನ್ನು ತಕ್ಷಣ ರದ್ದುಪಡಿಸಬೇಕು

ಸಾಗರದ ʼನಮ್ಮ ವನಶ್ರೀ ವಸತಿ ವಿದ್ಯಾಲಯʼದ ಮುಖ್ಯಸ್ಥ ಹಾಗೂ ಆರೆಸ್ಸೆಸ್‌ ಮುಖಂಡ ಮಂಜಪ್ಪನ ವಿರುದ್ಧ ದಲಿತ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೊ ಮತ್ತು ದಲಿತ ದೌರ್ಜನ್ಯ ಕಾಯ್ದೆಯಡಿ ಸಾಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಬಂಧನಕ್ಕೆ ಮುಂದಾಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಬೆಂಗಳೂರು ಮೂಲದ ವಿದ್ಯಾರ್ಥಿನಿ ವನಶ್ರೀ ವಸತಿ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ನಾಲ್ಕು ತಿಂಗಳಿಂದ ಶಾಲೆಯ ಮುಖ್ಯಸ್ಥ ಮಂಜಪ್ಪ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಮಂಜಪ್ಪ ಕಳೆದ ಜೂನ್‌ನಲ್ಲಿ ತನ್ನದೇ ವನಶ್ರೀ ವಿದ್ಯಾಲಯದ ಹಾಸ್ಟೆಲ್‌ ವಿದ್ಯಾರ್ಥಿನಿಯ ಸಾವಿಗೆ ಸಂಬಂಧಿಸಿದಂತೆ ಪೋಕ್ಸೊ ಪ್ರಕರಣದಡಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಆಸಾಮಿ. ವಿದ್ಯಾರ್ಥಿನಿಗೆ ಯೋಗ ಕಲಿಸಿಕೊಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿ, ಯಥೇಚ್ಛವಾಗಿ ನೀರು ಕುಡಿಸಿ ಆಕೆಯ ಸಾವಿಗೆ ಕಾರಣವಾಗಿದ್ದ ಎಂಬ ಆರೋಪ ಆತನ ಮೇಲಿದೆ. ಪ್ರಕರಣ ನ್ಯಾಯಾಲಯದಲ್ಲಿದೆ.

Advertisements

ನಮ್ಮ ವ್ಯವಸ್ಥೆ, ನ್ಯಾಯಾಲಯಗಳು ಇಂತಹ ವ್ಯಕ್ತಿಗಳ ವಿರುದ್ಧ ಮೃದು ಧೋರಣೆ ತಳೆದಿರುವ ಕಾರಣ ಯಾರಿಗೂ ಕಾನೂನು, ಶಿಕ್ಷೆಯ ಬಗ್ಗೆ ಭಯವಿಲ್ಲದಂತಾಗಿದೆ. ಮಂಜಪ್ಪನಿಗೆ ಕಾನೂನಿನ ಭಯವಿದ್ದಿದ್ದರೆ ಮತ್ತೆ ಬಾಲಕಿಯರಿಗೆ ಕಿರುಕುಳ ಕೊಡುವ ಕೃತ್ಯಕ್ಕೆ ಕೈ ಹಾಕುತ್ತಿರಲಿಲ್ಲವೇನೋ. ಆದರೆ ಬಂಧನವಾಗಿ ವಾರದೊಳಗೆ ಆತನಿಗೆ ಬಿಡುಗಡೆಯ ಭಾಗ್ಯವನ್ನು ನಮ್ಮ ಘನ ನ್ಯಾಯಪೀಠಗಳು ಕರುಣಿಸಿವೆ.

vanashree
ವನಶ್ರೀ ಮಂಜಪ್ಪ ನಡೆಸುತ್ತಿರುವ ವಸತಿ ಶಾಲೆ

ತನ್ನ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ, ಅದೇ ಹಾಸ್ಟೆಲಿನಲ್ಲಿ ಆಶ್ರಯ ಪಡೆದಿದ್ದ ವಿದ್ಯಾರ್ಥಿನಿಯ ಸಾವಿಗೆ ಕಾರಣನಾದ ವ್ಯಕ್ತಿಗೆ ಶಾಲೆ ನಡೆಸಲು ಬಿಟ್ಟಿದ್ದೇ ವ್ಯವಸ್ಥೆಯ ತಪ್ಪು. ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ಹೆಣ್ಣುಮಕ್ಕಳ ಹಾಸ್ಟೆಲ್‌ ನಡೆಸುತ್ತ ತಮ್ಮ ಕಾಮವಾಂಛೆಗೆ ಪುಟ್ಟ ಬಾಲಕಿಯರನ್ನು ಬಳಸಿಕೊಳ್ಳುವ ವ್ಯಕ್ತಿಗಳಿಗೆ, ಅವರ ಮೇಲೆ ಆರೋಪ ಬಂದಾಗಲೂ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಲು ಅವಕಾಶ ನೀಡುವುದು ಎಷ್ಟು ಸರಿ? ಐದು ತಿಂಗಳ ಹಿಂದೆಯಷ್ಟೇ ಕ್ರಿಮಿನಲ್‌ ಪ್ರಕರಣದಲ್ಲಿ ಬಂಧನಕ್ಕೊಳಗಾದ ಮಂಜಪ್ಪ ಮತ್ತೆ ಅದೇ ಚಾಳಿ ಮುಂದುವರಿಸಿದ್ದಾನೆ. ಅದಕ್ಕೆ ಅವಕಾಶ ಕಲ್ಪಿಸಿದ್ದು ಯಾರು? ಈ ಸಮಾಜ ಅಲ್ಲವೇ? ಅಂದು ನೂರಾರು ಮಹಿಳೆಯರು ಶಾಲೆಯ ಮುಂದೆ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದರು. ಆ ಆಕ್ರೋಶ ಆತ ಜಾಮೀನಿನ ಮೇಲೆ ಹೊರ ಬಂದು ಮತ್ತೆ ಶಾಲೆ ನಡೆಸುವಾಗ ಎಲ್ಲ ಹೋಯಿತು? ಈಗ ಮತ್ತೆ ಆತನ ಬಂಧನವಾಗಬಹುದು, ಜಾಮೀನೂ ಸಿಗಬಹುದು, ಮತ್ತೆ ಆತ ಶಾಲೆಯನ್ನೂ ಯಥಾ ಪ್ರಕಾರ ನಡೆಸಬಹುದು. ಹೀಗಾದರೆ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವವರು ಯಾರು?

ಎರಡು ವರ್ಷಗಳ ಹಿಂದೆ ಮುರುಘಾ ಮಠದ ಸ್ವಾಮೀಜಿ ಮೇಲೆ ಇಬ್ಬರು ಹೆಣ್ಣುಮಕ್ಕಳು ಅತ್ಯಾಚಾರದ ಆರೋಪ ಮಾಡಿ ಪ್ರಕರಣ ದಾಖಲಿದ ನಂತರ ಹಲವು ಆಘಾತಕಾರಿ ವಿಷಯಗಳು ಹೊರಬಂದಿದ್ದವು. “ಶಿವಮೂರ್ತಿ ಸ್ವಾಮಿಯಿಂದ ಮೂರು ದಶಕಗಳಲ್ಲಿ ಹಲವಾರು ಅಪ್ರಾಪ್ತ ಬಾಲಕಿಯರ ಅತ್ಯಾಚಾರ ನಡೆದಿದೆ. ಹಲವರು ಕಾಣೆಯಾಗಿದ್ದಾರೆ. ಕೆಲವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಆತನ ಈ ಚಾಳಿಗೆ ಸಿಬ್ಬಂದಿಗಳು ಸಹಕಾರ ನೀಡುತ್ತಾ ಬಂದಿದ್ದರು. ಅಷ್ಟೇ ಅಲ್ಲ ಹಲವರಿಗೆ ಬೆದರಿಕೆಗಳಿದ್ದವು. ಕೆಲವರಿಗೆ ಸ್ವಾಮಿಯೇ ಮದುವೆ ಮಾಡಿಸಿದ್ದಾರೆ” ಎಂಬ ಗಂಭೀರ ಆರೋಪಗಳನ್ನು ಹಲವರು ಮಾಡಿದ್ದರು. ಸ್ವಾಮೀಜಿಯ ರೂಮಿಗೆ ರಾತ್ರಿವೇಳೆ ಹಾಸ್ಟೆಲ್‌ನಿಂದ ವಿದ್ಯಾರ್ಥಿನಿಯರನ್ನು ವಾರ್ಡನ್‌ ರಶ್ಮಿಯೇ ಕಳುಹಿಸುತ್ತಿದ್ದಳು ಎಂಬ ಆರೋಪ ಬಾಲಕಿಯರು ಮಾಡಿದ್ದರು. ವಾರ್ಡನ್‌ ರಶ್ಮಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಸ್ವಾಮೀಜಿಯ ಬಂಧನವಾದ ನಂತರ ಮುರುಘಾ ಮಠದ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯರನ್ನು ರಾಜ್ಯದ ಬೇರೆ ಬೇರೆ ವಸತಿ ಶಾಲೆಗಳಿಗೆ ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖೆಯೇ ವರ್ಗಾಯಿಸಿತ್ತು. ಆರೋಪಿ ಜಾಮೀನಿನಲ್ಲಿ ಬಿಡುಗಡೆಯಾಗಿ ಬರುತ್ತಿದ್ದಂತೆ ಆತನ ಬೆಂಬಲಿಗರು ಸಂಭ್ರಮಿಸಿದ್ದಾರೆ. ಕಾವಿಕಾಮಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ! ಇದು ಈ ಸಮಾಜ ತಲುಪಿದ ಅಧಃಪತನಕ್ಕೆ ಹಿಡಿದ ಕನ್ನಡಿ.

ಮುರುಘಾಶ್ರೀ
ಮುರುಘಾಮಠದ ಶಿವಮೂರ್ತಿ ಸ್ವಾಮಿ

ಶಾಲಾ ಕೊಠಡಿ, ಹಾಸ್ಟೆಲ್‌, ಶಾಲಾ ವಾಹನಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಪುಟ್ಟ ಪುಟ್ಟ ಮಕ್ಕಳ ಮೇಲೆ ವಿಕೃತ ರಾಕ್ಷಸರು ದಾಳಿ ಮಾಡುತ್ತಲೇ ಇರುತ್ತಾರೆ. ಇದು ಇಂದಿನ ಬೆಳವಣಿಗೆಯಲ್ಲ, ಲಾಗಾಯ್ತಿನಿಂದ ನಡೆಯುತ್ತಲೇ ಇದೆ. ಪ್ರಕರಣ ಬೆಳಕಿಗೆ ಬಂದಾಗ ಒಂದಷ್ಟು ಮಾಧ್ಯಮಗಳಲ್ಲಿ ಸೆನ್ಸೇಷನಲ್‌ ಸುದ್ದಿಯಾಗುತ್ತದೆ. ಮತ್ತೆ ಯಥಾಪ್ರಕಾರ ಜನರೂ ಮರೆತು ಬಿಡುತ್ತಾರೆ. ನ್ಯಾಯಾವಾದಿಗಳು ವಾದಿಸುತ್ತಾರೆ, ನ್ಯಾಯಾಧೀಶರು ಜಾಮೀನು ಕೊಡುತ್ತಾರೆ. ಅಂತಿಮವಾಗಿ ದಶಕಗಳ ನಂತರ ಪೂರಕ ಸಾಕ್ಷ್ಯಗಳ ಕೊರತೆಯಿಂದ ಖುಲಾಸೆಯಾಗಿ ಹೊರಬರುತ್ತಾರೆ. ಇದು ನಮ್ಮ ನ್ಯಾಯ ವ್ಯವಸ್ಥೆ. ಹೀಗಿರುವಾಗ ಮಂಜಪ್ಪನಂತಹ ವಿಕೃತರು ಮತ್ತೆ ಮತ್ತೆ ಇಂತಹ ಅಪರಾಧ ಮಾಡುತ್ತಲೇ ಇರುತ್ತಾರೆ.

ಬಿಜೆಪಿಯ ಹಿರಿಯ ಮುಖಂಡ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಪೋಕ್ಸೊ ಪ್ರಕರಣ ದಾಖಲಾಗಿ ಏಳು ತಿಂಗಳಾದರೂ ಒಂದು ದಿನಕ್ಕೂ ಬಂಧನವಾಗಿಲ್ಲ. ಬಂಧಿಸದೇ ವಿಚಾರಣೆ ನಡೆಸಬೇಕು ಎಂದು ಹೈಕೋರ್ಟ್‌ನ ನ್ಯಾಯಪೀಠ ಹೇಳಿದೆ. “ಬಂಧಿಸಿ ವಿಚಾರಣೆ ನಡೆಸಲು ಅವರು ಯಂಕ, ಸೀನ, ನಾಣಿ ಅಲ್ಲ, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು” ಎಂದು ನ್ಯಾಯಾಧೀಶರು ಹೆಮ್ಮೆಯಿಂದ ಹೇಳಿರುವುದು ನಮ್ಮ ನ್ಯಾಯ ವ್ಯವಸ್ಥೆಯ ಅಣಕ.

ಪೋಕ್ಸೊ ಕಾಯ್ದೆ ಜಾರಿಯಾಗಿ ಹನ್ನೆರಡು ವರ್ಷಗಳೇ ಕಳೆದಿವೆ. ಇಡೀ ದೇಶದಲ್ಲಿ ಪೋಕ್ಸೊ ಕಾಯ್ದೆಯಡಿ ದಾಖಲಾದ ಲಕ್ಷಾಂತರ ಪ್ರಕರಣಗಳು ಇನ್ನೂ ಇತ್ಯರ್ಥವಾಗದೇ ಕೊಳೆಯುತ್ತಿವೆ. ವರ್ಷದಲ್ಲಿ ಸಾವಿರಾರು ಪ್ರಕರಣಗಳು ದಾಖಲಾಗುತ್ತಿವೆ. ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಾಲಯ, ನ್ಯಾಯಾಧೀಶರ ಕೊರತೆಯಿಂದ ವಿಚಾರಣೆಗಳು ಕಾಲಮಿತಿಯಲ್ಲಿ ಆಗುತ್ತಿಲ್ಲ ಎಂಬುದು ಒಂದು ಕಾರಣವಾದರೆ, ಪೋಕ್ಸೊ ಬಗ್ಗೆ ಜನರಿಗೆ ಭಯವೇ ಇಲ್ಲದಂತಾಗಿದೆ ಎಂಬುದಕ್ಕೆ 2020-21ರಲ್ಲಿ ಮಕ್ಕಳ ಮೇಲಿನ ಅಪರಾಧವು 16.2% ರಷ್ಟು ಹೆಚ್ಚಾಗಿದೆ ಎಂಬ ಅಂಕಿಅಂಶವೇ ಸಾಕ್ಷಿ. ಆ ಪ್ರಮಾಣ ಈಗ ಇನ್ನೂ ಹೆಚ್ಚಿಸುತ್ತದೆ.

ನೇಹಾ ಮನೆಗೆ ಅಮಿತ್ ಶಾ
ಕೊಲೆಯಾದ ಹುಬ್ಬಳ್ಳಿಯ ನೇಹಾ ಮನೆಯಲ್ಲಿ ಗೃಹಸಚಿವ ಅಮಿತ್‌ ಶಾ, ಪ್ರಲ್ಹಾದ್‌ ಜೋಶಿ

ಇನ್ನು ಆರೋಪಿಗಳನ್ನು ಆತನ ಜಾತಿ, ಧರ್ಮ, ಸಂಘಟನೆ, ಪಕ್ಷದ ನಂಟಿನ ಆಧಾರದಲ್ಲಿ ವಿರೋಧಿಸುವ ಅಥವಾ ಬೆಂಬಲಿಸುವ ಅಪಾಯಕಾರಿ ನಡವಳಿಕೆ ಇತ್ತೀಚೆಗೆ ಹೆಚ್ಚಿದೆ. ಈ ಮಂಜಪ್ಪ ಆರೆಸ್ಸೆಸ್‌ನವನು ಎಂಬ ಕಾರಣಕ್ಕೆ ಬಿಜೆಪಿ ಸಂಘ ಪರಿವಾರ ಈತನ ವಿರುದ್ಧ ಯಾವುದೇ ಪ್ರತಿಭಟನೆ ನಡೆಸುವುದಿಲ್ಲ. ಹಿಂದೂ ಹೆಣ್ಣು ಮಕ್ಕಳೇ ಬಲಿಪಶುಗಳು. ಮಂಜಪ್ಪ ಹಾಸ್ಟೆಲ್‌ನ ಮಹಿಳಾ ಸಿಬ್ಬಂದಿಗೂ ಕಿರುಕುಳ ಕೊಡುತ್ತಿದ್ದ ಎಂಬ ಆರೋಪವಿದ್ದರೂ ಬಿಜೆಪಿ, ಸಂಘ ಪರಿವಾರ ಮೌನವಾಗಿದೆ. ಒಂದು ವೇಳೆ ಆರೋಪಿ ಅನ್ಯ ಧರ್ಮದವನಾಗಿದ್ದು, ಬಾಲಕಿ ಹಿಂದೂವಾಗಿದ್ದರೆ ಇಡೀ ರಾಜ್ಯದ ಬಿಜೆಪಿ ನಾಯಕರು ಒಂದಾಗಿ ಪ್ರತಿಭಟನೆಗೆ ಹಾಜರಾಗುತ್ತಿದ್ದರು. ಬಿಜೆಪಿಯವರ ಇಂತಹ ಎಡಬಿಡಂಗಿ ನಡವಳಿಕೆಗೆ ನೂರಾರು ಉದಾಹರಣೆಗಳು ಸಿಗುತ್ತವೆ.

ಲೋಕಸಭಾ ಚುನಾವಣೆಯ ಸಮಯದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ನೇಹಾಳ ಕೊಲೆಗಾರ ಮುಸ್ಲಿಂ ಎಂಬ ಕಾರಣಕ್ಕೆ ಬಿಜೆಪಿಯ ಸಕಲ ನಾಯಕರು ಆಕೆಯ ಮನೆಗೆ ಎಡತಾಕಿದ್ದರು. ಲೋಕಸಭಾ ಚುನಾವಣೆಯ ಫಸಲು ಪಡೆಯುವ ಉದ್ದೇಶದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ದೇಶದ ಗೃಹಸಚಿವ ಅಮಿತ್‌ ಶಾ ನೇಹಾ ಮನೆಗೆ ಓಡೋಡಿ ಬಂದು ಸಾಂತ್ವನ ಹೇಳಿದ್ದರು. ಅದಾಗಿ ವಾರದಲ್ಲೇ ಅದೇ ಮಾದರಿಯಲ್ಲಿ ಹುಬ್ಬಳ್ಳಿಯ ಮತ್ತೊಬ್ಬ ಹಿಂದೂ ಯುವತಿಯನ್ನು ಯುವಕನೊಬ್ಬ ಚಾಕುವಿನಿಂದ ಇರಿದು ಸಾಯಿಸಿದ್ದ. ಆರೋಪಿ ಸ್ವತಃ ಹಿಂದೂ ಆಗಿದ್ದ ಕಾರಣ ಯಾವುದೇ ಪ್ರತಿಭಟನೆ ನಡೆಯಲಿಲ್ಲ. ಕೊಡಗಿನಲ್ಲೂ ಯುವತಿ ಮೀನಾಳ ರುಂಡ ಕತ್ತರಿಸಿದವ ಕೂಡಾ ಹಿಂದೂವೇ ಆಗಿದ್ದ. ಯಾವ ನಾಯಕರೂ ಆ ಮನೆ ಕಡೆ ಮುಖ ಮಾಡಿಲ್ಲ. ಬಿಜೆಪಿಯ ಕಾರ್ಯಕರ್ತರು, ಮುಖಂಡರು ಅತ್ಯಾಚಾರ ಪ್ರಕರಣಗಳಲ್ಲಿ ಸಿಕ್ಕಿ ಹಾಕಿಕೊಂಡಾಗ ಹಿಂದೂ ಹೆಣ್ಣುಮಕ್ಕಳ ರಕ್ಷಕರು ಬರುವುದೇ ಇಲ್ಲ. ಹಿಂದೂ ಕಾರ್ಯಕರ್ತರ ಕೊಲೆಗಳಾದಾಗ ಓಡೋಡಿ ಬಂದು ಮುಸ್ಲಿಮರ ಮೇಲೆ ಆರೋಪಿಸುವ ಬಿಜೆಪಿ- ಸಂಘಪರಿವಾರದ ಮಂದಿ, ನಿಜ ಆರೋಪಿ ಹಿಂದೂ ಎಂದು ಗೊತ್ತಾಗುತ್ತಲೇ “ಕಾನೂನು ಕ್ರಮ ಕೈಗೊಳ್ಳಲಿ” ಎಂದುಬಿಡುತ್ತಾರೆ.

ಇದನ್ನೂ ಓದಿ ಡೊನಾಲ್ಡ್ ಟ್ರಂಪ್‌ ಪುನರಾಗಮನ; ಜಾಗತಿಕ ನಾಯಕರಿಗೆ ಶುರುವಾಯಿತೆ ಆತಂಕ?

ವನಶ್ರೀ ಮಂಜಪ್ಪನ ಮೇಲಿನ ಹಿಂದಿನ ಪ್ರಕರಣದಲ್ಲೂ ಬಿಜೆಪಿ, ಆರೆಸ್ಸೆಸ್‌ ನಾಯಕರು ತುಟಿ ಬಿಚ್ಚಿರಲಿಲ್ಲ. ಆತ ಜಾಮೀನಿನ ಮೇಲೆ ಹೊರಬಂದು ಮತ್ತೆ ಶಾಲೆ ನಡೆಸುತ್ತ ಅದೇ ಚಾಳಿ ಮುಂದುವರಿಸಿದ್ದಾನೆ. ನಾಗರಿಕ ಸಮಾಜದಲ್ಲಿ ಇಂತಹ ಕಳಂಕಿತರು ಮಕ್ಕಳ ಮನಸ್ಸು, ಬುದ್ದಿ, ಜ್ಞಾನವನ್ನು ಉದ್ದೀಪನಗೊಳಿಸಬೇಕಾದ ಶಾಲೆಗಳ ಮುಖ್ಯಸ್ಥರಾಗಿರುವುದು ಅಪಾಯಕಾರಿ. ಅತ್ಯಾಚಾರದ ಆರೋಪಿ ಮಂಜಪ್ಪನ ಒಡೆತನದ ಶಿಕ್ಷಣ ಸಂಸ್ಥೆಯನ್ನು ಶಾಶ್ವತವಾಗಿ ಮುಚ್ಚಿಸುವ ಕೆಲಸ ಸರ್ಕಾರ ಮಾಡಬೇಕಿದೆ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X