ಇತ್ತೀಚಿನ ದಿನಗಳಲ್ಲಿ ಬಿಜೆಪಿಯೊಳಗೆ ಯಡಿಯೂರಪ್ಪನವರ ಸ್ಥಾನಮಾನ ಏನಾಗುತ್ತಿದೆ ಎಂಬುದು ರಹಸ್ಯವಾಗೇನೂ ಉಳಿದಿಲ್ಲ. ಹೆಜ್ಜೆಹೆಜ್ಜೆಗೂ ಅವರನ್ನು ಮಟ್ಟಹಾಕಲು ಯತ್ನಿಸಲಾಗುತ್ತಿದೆ. ಸಂಸದ ಪ್ರತಾಪ ಸಿಂಹರ ‘ಹೊಂದಾಣಿಕೆಯ’ ಬೀಸುಗಲ್ಲು ಗುರಿಯಾಗಿಸಿಕೊಂಡಿರುವುದು ಕೂಡಾ ಅದೇ ಯಡಿಯೂರಪ್ಪನವರನ್ನು ಅನ್ನೋದು ಮೇಲ್ನೋಟಕ್ಕೇ ಕಂಡುಬರುತ್ತಿದೆ.
ಸಂಸದ ಪ್ರತಾಪ್ ಸಿಂಹ ಇತ್ತೀಚೆಗೆ ತಮ್ಮದೇ ಪಕ್ಷದ ಬಗ್ಗೆ ಮಾಡಿರೋ ಆರೋಪ ಹೆಚ್ಚು ಚರ್ಚೆಯಾಗುತ್ತಿದೆ. ಬಿಜೆಪಿಯ ಕೆಲ ನಾಯಕರು ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದರಿಂದ ಬಿಜೆಪಿಗೆ ಹಿನ್ನಡೆಯಾಯ್ತು ಎಂಬುದು ಅವರ ಅಳಲಿನ ಸಾರಾಂಶ. ಈ ಬಗ್ಗೆ ಮೀಡಿಯಾಗಳು ಅತ್ಯುತ್ಸಾಹದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಖಕ್ಕೆ ಮೈಕು ಹಿಡಿಯುತ್ತಿವೆ! ಮೀಡಿಯಾಗಳು ತಲುಪಿರುವ ಅಧಃಪತನದ ಆಳ ಎಷ್ಟಿದೆ ನೋಡಿ; ಆರೋಪ ಮಾಡಿದ್ದು ಒಬ್ಬ ಬಿಜೆಪಿ ಸಂಸದ, ಆರೋಪಿಸಿದ್ದು ತಮ್ಮದೇ ಪಕ್ಷದ ಕೆಲವು ನಾಯಕರ ಮೇಲೆ, ಮೀಡಿಯಾಗಳು ಆ ಪಕ್ಷವನ್ನು ಜಾಲಾಡುವ ಬದಲು ಸಿದ್ದರಾಮಯ್ಯನವರ ಮೇಲೆ ದೊಣ್ಣೆ ಎತ್ತಿಕೊಂಡು ಕೂತಿವೆ. ಎಲ್ಲಿ, ಯಾರು, ಏನೇ ತಪ್ಪು ಮಾಡಿದರೂ ಸಿದ್ದರಾಮಯ್ಯನವರ ಬಳಿಗೆ ಓಡೋಡಿ ಬರುವ ಈ ಮೀಡಿಯಾಗಳ ಬದ್ಧತೆಯನ್ನು ಮೆಚ್ಚಿಕೊಳ್ಳಲೇಬೇಕು! ವಿಷಯ ಇದಲ್ಲ, ಯಾಕೆಂದರೆ ಸುದ್ದಿ ಮಾಡಬೇಕಿದ್ದ ಮೀಡಿಯಾಗಳು ಸ್ವತಃ ತಾವೇ ನಗೆಪಾಟಲಿನ ಸುದ್ದಿಯಾಗಲು ಶುರುವಾಗಿ ಬಹಳ ದಿನಗಳೇ ಆಗಿಹೋಗಿವೆ.
ಹೊಂದಾಣಿಕೆ ರಾಜಕಾರಣದಂತಹ ಅಡ್ಡಹಾದಿಯ ರಾಜಕಾರಣವನ್ನು ನಾವು ಗಂಭೀರವಾಗಿ ಚರ್ಚಿಸುವಷ್ಟು, ಇಡೀ ರಾಜಕೀಯ ವ್ಯವಸ್ಥೆ ತನ್ನ ನೈತಿಕತೆಯನ್ನು ಉಳಿಸಿಕೊಂಡಿದೆಯೇ? ಜನರಿಂದ ಚುನಾಯಿತರಾದ ಜನಪ್ರತಿನಿಧಿಗಳನ್ನು ಹೆದರಿಸಿಯೋ, ಆಮಿಷ ಒಡ್ಡಿಯೋ ಅಕ್ಷರಶಃ ಅಪಹರಿಸಿದಂತೆ ದೂರದ ರೆಸಾರ್ಟ್‌ಗಳಲ್ಲಿಟ್ಟು, ಅಸ್ತಿತ್ವದಲ್ಲಿರುವ ಸರ್ಕಾರಗಳನ್ನೇ ಕೆಡವಿ ತಮ್ಮ ಸರ್ಕಾರಗಳನ್ನು ರಚಿಸಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ ‘ಹೊಂದಾಣಿಕೆ ರಾಜಕಾರಣದ’ ದಾಳವನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕು? ಬಸ್ ನಿಲ್ದಾಣವೊಂದರ ಕಟ್ಟಡದ ಆಕಾರ ಗುಂಬಜ್ ಹೋಲುವಂತಿದೆ ಎಂಬ ಒಂದೇ ಕಾರಣಕ್ಕೆ ಜನರ ತೆರಿಗೆ ಹಣದಲ್ಲಿ ನಿರ್ಮಿಸಿದ್ದ ಅದನ್ನು ಹೊಡೆದುರುಳಿಸಿದ ಪ್ರತಾಪ್ ಸಿಂಹನಂತವರ ದ್ವೇಷ ರಾಜಕಾರಣದ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡೇ, ಆತ ಈಗ ಆರೋಪಿಸಿರುವ ಹೊಂದಾಣಿಕೆ ರಾಜಕಾರಣದ ಒಳಹುಗಳೇನಿರಬಹುದು? ಎಂಬ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಿದೆ.
ಮೊದಲ ಎರಡು ಪ್ರಶ್ನೆಗಳೇ ನಮಗೆ ಸ್ಪಷ್ಟ ಉತ್ತರಗಳನ್ನೂ ನೀಡಿಬಿಡುತ್ತವೆ. ಕೆಮ್ಮು, ನೆಗಡಿ, ಜ್ವರ, ಶೀತಗಳು ಕಾಯಿಲೆಗಳೇನೋ ನಿಜ; ಅವುಗಳಿಗೆ ಉಪಚಾರ ಮಾಡಿಕೊಳ್ಳಬೇಕಾದ್ದೂ ಒಳ್ಳೆಯದು; ಆದರೆ, ಇಡೀ ದೇಹಕ್ಕೆ ಕ್ಯಾನ್ಸರ್ ವ್ಯಾಪಿಸಿ, ಸಾವುಬದುಕಿನ ನಡುವೆ ಹೋರಾಡುತ್ತಿರುವ ರೋಗಿಗೆ ಚಿಕಿತ್ಸೆ ನೀಡುವಾಗ ವೈದ್ಯರ ಆದ್ಯತೆಗಳನುಸಾರ ಈ ಥರದ ಕಾಯಿಲೆಗಳಿಗೆ ಎಷ್ಟು ಮಾತ್ರ ಪ್ರಾಧಾನ್ಯತೆ ನೀಡಲಾಗುತ್ತೆ ಅನ್ನೋದನ್ನು ನಾವು ರಾಜಕಾರಣಕ್ಕೂ ಅನ್ವಯಿಸಿಕೊಳ್ಳಬೇಕಾಗುತ್ತದೆ. ಈ ಕಾಯಿಲೆಯ ಲಕ್ಷಣಗಳಿಗೆ ಕಡಿಮೆ ಆದ್ಯತೆ ಕೊಟ್ಟಾಕ್ಷಣ ವೈದ್ಯರು ರೋಗಿಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಲಾಗದು. ಯಾಕೆಂದರೆ ಗಂಭೀರ ರೋಗದಿಂದ ರೋಗಿಯನ್ನು ಬಚಾವು ಮಾಡುವುದು ಅವರ ಗಮನದ ಕೇಂದ್ರವಾಗಿರುತ್ತದೆ. ಒಮ್ಮೊಮ್ಮೆ, ಗಂಭೀರ ರೋಗಗಳಿಗೆ ಚಿಕಿತ್ಸೆ ನೀಡುವಾಗ, ಇಂತಹ ಸಣ್ಣಪುಟ್ಟ ಕಾಯಿಲೆಗಳು ಸೈಡ್‌ಎಫೆಕ್ಟ್ ರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಉಂಟು. ಅದನ್ನೂ ನಾವು ಮರೆಯಬಾರದು.
ಇಡೀ ರಾಜಕಾರಣಕ್ಕೆ ಕೋಮುವಾದ, ಜಾತಿವಾದ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅನೈತಿಕ ಆಪರೇಷನ್ ಕುತಂತ್ರದಂತಹ ಕ್ಯಾನ್ಸರ್‌ಕಾರಕಗಳು ಮುತ್ತಿಕೊಂಡು, ರಾಜಕೀಯ ವ್ಯವಸ್ಥೆ ಗಂಭೀರವಾಗಿ ನರಳಾಡುತ್ತಿರುವಾಗ ನೆಗಡಿಯಂತಹ ಕಾಯಿಲೆಯ ಬಗ್ಗೆ ಸಂಸದರು ಬೊಟ್ಟು ಮಾಡುತ್ತಿದ್ದಾರೆ!
ಅಭಿವೃದ್ಧಿ ಮತ್ತು ಜನರ ಕಲ್ಯಾಣಗಳೇ ಮೂಲಾಧಾರವಾಗಬೇಕಿದ್ದ ರಾಜಕಾರಣದೊಳಕ್ಕೆ ಧರ್ಮ ಮತ್ತು ದ್ವೇಷವನ್ನು ತುಂಬಿ ಸಂಪೂರ್ಣ ಹಾಳು ಮಾಡಲಾಗಿದೆ. ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ‘ಬಿಟ್ಟಿ’ ಎಂದು ಬ್ರ್ಯಾಂಡ್ ಮಾಡುವಷ್ಟು ವ್ಯವಸ್ಥೆಯನ್ನು ಮತಿಹೀನಗೊಳಿಸಲಾಗಿದೆ. ಕೇವಲ ರಾಜಕೀಯ ಜಿದ್ದಾಜಿದ್ದಿಗಾಗಿ ಕೊಲೆಗಳೇ ನಡೆಯುತ್ತಿರುವ ವಾತಾವರಣ ನಿರ್ಮಾಣ ಮಾಡಲಾಗಿದೆ.
ಇದನ್ನು ಓದಿದ್ದೀರಾ?: ಅಂದಿನ ʼಅನ್ನಭಾಗ್ಯʼ, ಇಂದಿನ ʼಗ್ಯಾರಂಟಿʼ; ಟೀಕೆಗಳು ಬದಲಾಗಿಲ್ಲ, ಬದಲಾಗೋದೂ ಇಲ್ಲ
ಈ ಹಂತದಲ್ಲಿ ಜೆ.ಎಚ್. ಪಟೇಲರ ರಾಜಕೀಯ ಜೀವನದ ಒಂದು ಘಟನೆ ನೆನಪಾಗುತ್ತದೆ. ಪಟೇಲರು ಸಿಎಂ ಆಗಿದ್ದ ಅವಧಿ. ದೇವೇಗೌಡರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದು ವಾಪಾಸಾಗಿದ್ದಂತಹ ಸಂದರ್ಭ. ರಾಜ್ಯ ರಾಜಕಾರಣದಲ್ಲಿ ಒಂದಷ್ಟು ಏರುಪೇರುಗಳಾಗತೊಡಗಿದ್ದವು. ಪಟೇಲರ ವಿರುದ್ಧ ಒಂದು ಗುಂಪು ಬಂಡಾಯವನ್ನು ಮೊಳಗಿಸಲು ಅಣಿಯಾಗಿತ್ತು. ಪಟೇಲರ ಸಂಪುಟದಲ್ಲಿದ್ದ ಹಲವು ಮಂತ್ರಿಗಳೂ ಅದರಲ್ಲಿ ಜೊತೆಗೂಡಿದ್ದರು. ಅಂತಹ ಒಬ್ಬ ಮಂತ್ರಿಯ ಮೇಲೆ ಆಗ ಒಂದು ಆರೋಪ ಕೇಳಿಬಂತು. ಆ ಮಂತ್ರಿಗೆ ನಿಕಟಸಂಪರ್ಕದಲ್ಲಿದ್ದ ಹುಡುಗನೊಬ್ಬ ದಿಢೀರನೆ ಕಾಣೆಯಾದ. ಮಂತ್ರಿಯೇ ಕೊಲೆ ಮಾಡಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದವು. ಆದರೆ ಆ ಹುಡುಗನ ಶವ ಪತ್ತೆಯಾಗಿರಲಿಲ್ಲ. ಪಟೇಲರ ಆಪ್ತ ಬಳಗದಲ್ಲಿದ್ದ ಒಂದಿಬ್ಬರು ಶಾಸಕರು, ಈ ಆರೋಪವನ್ನು ಬಳಸಿಕೊಂಡು ಆ ಮಂತ್ರಿಯ ಮೇಲೆ ಕೊಲೆ ಪ್ರಕರಣ ದಾಖಲಿಸಿ ಆತನನ್ನು ರಾಜಕೀಯವಾಗಿ ಮಟ್ಟಹಾಕಬಹುದು ಎಂಬ ಲೆಕ್ಕಾಚಾರದಲ್ಲಿ, ಸಿಎಂ ಪಟೇಲರ ಮೇಲೆ ಒತ್ತಡ ತಂದರು. ಸರಿಯಾದ ಹಿನ್ನೆಲೆ ತಿಳಿಯದ ಪಟೇಲರು ಮಾಹಿತಿಗಾಗಿ ಪ್ರಕರಣ ನಡೆದ ಭಾಗದ ಎಸ್‌ಪಿಯ ಜೊತೆ ಮಾತಾಡಿದಾಗ, ಅವರು ಘಟನೆಯನ್ನು ವಿವರಿಸಿ ’ಶವ ಪತ್ತೆಯಾಗದ ಹೊರತು ನಾವು ಕೊಲೆ ಕೇಸು ದಾಖಲಿಸಿಕೊಳ್ಳಲು ಬರುವುದಿಲ್ಲ. ಹುಡುಗನ ಶವ ಸಿಕ್ಕಿಲ್ಲ’ ಎಂದು ಹೇಳಿದರು. ಆಗ ಪಟೇಲರು, ’ಕ್ಷಮಿಸಿ, ನನಗೆ ಸರಿಯಾದ ಮಾಹಿತಿ ಇರಲಿಲ್ಲ. ಹುಡುಗ ನಿಜಕ್ಕೂ ಕೊಲೆಯಾಗಿದ್ದಾನೇನೊ, ಈ ನಮ್ಮ ಮಂತ್ರಿ ನಿಮ್ಮ ಮೇಲೆ ಒತ್ತಡ ತಂದು ಪ್ರಕರಣ ದಾಖಲಾಗದಂತೆ ನೋಡಿಕೊಳ್ಳುತ್ತಿದ್ದಾನೇನೊ ಎಂದು ವಿಚಾರಿಸಿದೆ. ಆತ ರಾಜಕೀಯವಾಗಿ ನನಗೆ ಎದುರಾಳಿಯಾಗಿರಬಹುದು, ಅದನ್ನು ರಾಜಕೀಯವಾಗಿಯೇ ನಾನು ಎದುರಿಸುತ್ತೇನೆಯೇ ವಿನಾ, ಅಧಿಕಾರ ದುರ್ಬಳಕೆ ಮಾಡಿಕೊಂಡು ಸುಳ್ಳು ಕೇಸು ದಾಖಲಿಸಿ ರಾಜಕಾರಣದ ಮತ್ತು ಸಿಎಂ ಸ್ಥಾನದ ನೈತಿಕತೆ ಕಳೆಯುವುದಿಲ್ಲ. ಕ್ಷಮಿಸಿ’ ಎಂದು ಎಸ್‌ಪಿಗೆ ಹೇಳಿದ್ದರು. ವಾಸ್ತವದಲ್ಲಿ ಆ ಹುಡುಗ ಕೊಲೆಯಾಗಿರಲೇ ಇಲ್ಲ, ಸ್ವಲ್ಪ ದಿನಗಳ ನಂತರ ಮುಂಬೈನಲ್ಲಿ ಪತ್ತೆಯಾದ!

ಪಟೇಲರು ಪರಿಶುದ್ಧ ರಾಜಕಾರಣಿ, ಅವರ ಕಾಲಮಾನದಲ್ಲಿ ರಾಜಕಾರಣದ ನೈತಿಕತೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂದು ನಾನು ಹೇಳುತ್ತಿಲ್ಲ. ಆದರೆ ರಾಜಕಾರಣದ ಸಚ್ಚ್ಯಾರಿತ್ರದ ಬಗ್ಗೆ ಮಾತನಾಡುವಾಗ, ನಮ್ಮ ಸಮರ್ಥನೆಗೆ ಇಂತಹ ಒಂದೆರಡು ಸಮಕಾಲೀನ ಉಲ್ಲೇಖಗಳಾದರೂ ದೊರಕುವಂತಿರಬೇಕಾಗುತ್ತದೆ. ಪಟೇಲರ ಕಾಲ ಸರಿದು, ಇಲ್ಲಿಗೆ ಇಪ್ಪತ್ತು ವರ್ಷಗಳ ಮೇಲಾಗಿದೆ. ಸಾಕಷ್ಟು ನೀರೂ ಹರಿದಿದೆ. ಹರಿದ ನೀರೆಲ್ಲ, ರಾಜಕಾರಣದ ಅಳಿದುಳಿದ ನೈತಿಕತೆಯನ್ನು ಇನ್ನಷ್ಟು ಕೊಚ್ಚಿ ಹೊಯ್ದಿದೆ. ಅಧಿಕಾರ ದುರ್ಬಳಕೆಯ ಬಗ್ಗೆ ಹಾಗೂ ಸಿಎಂ ಸ್ಥಾನದ ಘನತೆಯ ಬಗ್ಗೆ ಪಟೇಲರು ಆಡಿದ ಮಾತಿಗೂ, ಇವತ್ತಿನ ಸಿಬಿಐ-ಐಟಿ-ಇಡಿ ತರಹದ ತನಿಖಾ ಸಂಸ್ಥೆಗಳ ಕಾರ್ಯವೈಖರಿಗೂ ತಾಳೆ ಹಾಕಿ ನೋಡಿದಾಗ ರಾಜಕಾರಣ ಈ ಅವಧಿಯಲ್ಲಿ ಅದೆಷ್ಟು ನೈತಿಕ ಅಧಃಪತನಕ್ಕೆ ತುತ್ತಾಗಿದೆ ಅನ್ನೋದು ಅರ್ಥವಾಗುತ್ತದೆ. ಯಾವ ಸಂಸದರು ‘ಹೊಂದಾಣಿಕೆ ರಾಜಕಾರಣ’ವನ್ನು ಟೀಕಿಸುತ್ತಾ ಸಚ್ಚ್ಯಾರಿತ್ರದ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೋ, ರಾಜಕಾರಣದ ನೈತಿಕ ಅಧಃಪತನದಲ್ಲಿ ಅದೇ ಸಂಸದರ ಪಕ್ಷದ ಪಾಲು ಎಷ್ಟಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅವರ ಆರೋಪವನ್ನು ಪರಿಗಣಿಸಬೇಕಾಗುತ್ತದೆ. ಇಲ್ಲವಾದರೆ ನಮ್ಮ ಗ್ರಹಿಕೆಯೆಲ್ಲ ತೀರಾ ಮೇಲ್ಮಟ್ಟದ್ದೆನಿಸಿಬಿಡುತ್ತದೆ.
ಆರೋಪ ಮಾಡುತ್ತಿರುವ ಸಂಸದರಿಗೆ ಇದೆಲ್ಲ ಗೊತ್ತಿಲ್ಲ ಅಂತೇನಲ್ಲ. ಚೆನ್ನಾಗಿಯೇ ತಿಳಿದಿದೆ. ಆದರೆ ಬಲಶಾಲಿ ಎದುರಾಳಿಯನ್ನು ಎದುರಿಸಬೇಕಾದಾಗ, ನಾವೆಷ್ಟೇ ಅನೈತಿಕ ಉಸುಕಿನಲ್ಲಿ ಹೂತುಹೋಗಿದ್ದರೂ, ಎದುರಾಳಿಯ ಕಾಲ ಬೆರಳಿಗೆ ಅಂಟಿರುವ ಕೆಸರನ್ನು ದೊಡ್ಡದು ಮಾಡಿ ಜಗತ್ತಿಗೆ ತೋರಿಸಬೇಕೆನ್ನುವುದು ಆ ಸಂಸದರ ಮಾತೃಪಕ್ಷದ ಸರಳ ಸೂತ್ರ. ಅದನ್ನೇ ಅವರು ಮಾಡಿದ್ದಾರಷ್ಟೆ. ಅಲ್ಲಿಯೂ ಸಹಾ, ಸಂಸದರ ಆರೋಪದ ಹಿಂದೆ ಒಂದು ಸ್ಪಷ್ಟ ರಾಜಕೀಯ ನಡೆಯಿದ್ದಂತಿದ್ದು, ನಿರ್ದೇಶನ ಮತ್ತೊಮ್ಮೆ ‘ಸಂತೋಷ’ದಿಂದಲೇ ಬಂದಂತಿದೆ.
ಇದನ್ನು ಓದಿದ್ದೀರಾ?: ಅಕ್ಕಿ ಪೂರೈಕೆ ನಿರಾಕರಣೆ: ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಗೆ ಕಲ್ಲು ಹಾಕಿದ ಕೇಂದ್ರ ಸರಕಾರ
ಇತ್ತೀಚಿನ ದಿನಗಳಲ್ಲಿ ಬಿಜೆಪಿಯೊಳಗೆ ಯಡಿಯೂರಪ್ಪನವರ ಸ್ಥಾನಮಾನ ಏನಾಗುತ್ತಿದೆ ಎಂಬುದು ರಹಸ್ಯವಾಗೇನೂ ಉಳಿದಿಲ್ಲ. ಹೆಜ್ಜೆಹೆಜ್ಜೆಗೂ ಅವರನ್ನು ಮಟ್ಟಹಾಕಲು ಯತ್ನಿಸಲಾಗುತ್ತಿದೆ. ಸಂಸದರ ‘ಹೊಂದಾಣಿಕೆಯ’ ಬೀಸುಗಲ್ಲು ಗುರಿಯಾಗಿಸಿಕೊಂಡಿರುವುದು ಕೂಡಾ ಅದೇ ಯಡಿಯೂರಪ್ಪನವರನ್ನು ಅನ್ನೋದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪಕ್ಷದಲ್ಲಿ ತಮ್ಮ ಕಡಗಣನೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಯಡಿಯೂರಪ್ಪನವರು ಕಾಂಗ್ರೆಸ್‌ನೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದರಿಂದ ನಮಗೆ ಸೋಲಾಯ್ತು ಎಂದು ಸಂಸದರು ಆರೋಪಿಸುತ್ತಿರುವಂತಿದೆ. ಅದು ನಿಜವೇ ಆಗಿದ್ದಲ್ಲಿ ಆ ಮೂಲಕ, ಪಕ್ಷದ ಸೋಲನ್ನು ಯಡಿಯೂರಪ್ಪನವರ ತಲೆಗೆ ಕಟ್ಟಿ; ತಮ್ಮ ಸರ್ಕಾರದ ಅವಧಿಯಲ್ಲಿ ತಮ್ಮ ಪಕ್ಷದ ದುರಾಡಳಿತದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಜನರಲ್ಲಿ ರೂಪುಗೊಂಡಿರುವ ಅಭಿಪ್ರಾಯವನ್ನು ಕೊಂಚ ಮಟ್ಟಿಗಾದರೂ ಗೊಂದಲಗೊಳಿಸುವುದು ಸಂಸದರ ಹೇಳಿಕೆಯ ಹಿಂದಿರುವ ರಾಜಕಾರಣವಿದ್ದೀತು! ಲೋಕಸಭಾ ಚುನಾವಣೆಯ ಹೊತ್ತಿಗೆ ಹೇಗಾದರೂ ಸರಿ ತಮ್ಮ ಪಕ್ಷಕ್ಕೆ ಮೆತ್ತಿಕೊಂಡಿರುವ ಕಳಂಕಗಳನ್ನು ತೊಳೆದುಕೊಳ್ಳಬೇಕಿರುವುದು ಒಂದು ರಾಜಕೀಯ ಪಕ್ಷವಾಗಿ ಬಿಜೆಪಿಗೆ ಅನಿವಾರ್ಯವೇನೊ ನಿಜ, ಆದರೆ ಅದಕ್ಕಾಗಿ ಅವರು ಆಯ್ಕೆ ಮಾಡಿಕೊಳ್ಳುತ್ತಿರುವ ಇಂತಹ ದಾರಿಗಳು ಅವರ ಮುಂದಿನ ಭವಿಷ್ಯವನ್ನು ಮತ್ತಷ್ಟು ಕಗ್ಗಂಟಾಗಿಸುತ್ತವೆ ಅನ್ನೋದು ಮಾತ್ರ ಸತ್ಯ.
ಇದೆಲ್ಲಾ ಅವರ ಪಕ್ಷದ ಆಂತರಿಕ ಸಂಗತಿ. ಆದರೆ, ಹೊಂದಾಣಿಕೆ ರಾಜಕಾರಣದ ನೆಪದಲ್ಲಿ ಸಂಸದರು ಎತ್ತಿರುವ ನೈತಿಕ ರಾಜಕಾರಣದ ಪ್ರಶ್ನೆ ಸಾರ್ವಜನಿಕವಾದುದು. ಹಾಗಾಗಿ ಸಾರ್ವಜನಿಕವಾಗಿಯೇ ನಾವು ಅವರನ್ನು ಕೇಳಬೇಕಾಗುತ್ತದೆ, ‘ರಾಜಕಾರಣದ ನೆಗಡಿಯ ಬಗ್ಗೆ ಮಾತಾಡುತ್ತಿರುವ ತಾವು, ಅದೇ ರಾಜಕಾರಣಕ್ಕೆ ಧರ್ಮ ಮತ್ತು ದ್ವೇಷಗಳನ್ನು ತುಂಬಿದ ಕೋಮುವಾದವೆಂಬ ಕ್ಯಾನ್ಸರ್ ರೋಗವನ್ನು ತಂದೊಡ್ಡಿದ ತಮ್ಮದೇ ಪಕ್ಷದ ಬಗ್ಗೆ ಹೇಗೆ ಆತ್ಮವಿಮರ್ಶೆ ಮಾಡಿಕೊಳ್ಳುತ್ತೀರಿ?’.
- ಗಿರೀಶ್ ತಾಳಿಕಟ್ಟೆ

ಗಿರೀಶ್ ತಾಳಿಕಟ್ಟೆ
ಪತ್ರಕರ್ತ, ಲೇಖಕ
ಹಾವಿನಪುರದ ನಾಯಕರಿಗೆ ಮೈಕ್ ಹಿಡಿಯಲು ತಥಾಕಥಿತ ಪತ್ರಕರ್ತರ ಚಡ್ಡಿಯೇ ತರಗುಟ್ಟುತಿರಬೇಕು!