ಜೈ ಶ್ರೀರಾಮ್ ಎಂದು ದೇವಸ್ಥಾನದಲ್ಲಿ ಘೋಷಣೆ ಹಾಕಬೇಕೇ ಹೊರತು ಮಸೀದಿಯಲ್ಲಿ ಅಲ್ಲ. ಹಾಗಾಗಿ ಈ ಘೋಷಣೆಯ ಹಿಂದೆ ಧಾರ್ಮಿಕ ಭಾವನೆ, ನಂಬಿಕೆಯನ್ನು ಅವಮಾನವಿಸುವ ಉದ್ದೇಶ ಅಲ್ಲದೇ ಇನ್ನೇನೂ ಇಲ್ಲ ಎಂಬುದನ್ನು ಮೇಲ್ಮನವಿ ಮೂಲಕ ನ್ಯಾಯಾಂಗಕ್ಕೆ ಅರ್ಥ ಮಾಡಿಸುವ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ತೆಗೆದುಕೊಳ್ಳಬೇಕಿದೆ
ಮಸೀದಿ ಆವರಣಕ್ಕೆ ನುಗ್ಗಿ ಜೈ ಶ್ರೀರಾಮ್ ಘೋಷಣೆ ಕೂಗಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಇಬ್ಬರು ವ್ಯಕ್ತಿಗಳ ವಿರುದ್ಧದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿರುವ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಮೇಲ್ಮನವಿ ಸಲ್ಲಿಸಬೇಕಿದೆ. ಕೋಮು ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸರ್ಕಾರವೊಂದರ ಪ್ರಾಥಮಿಕ ಜವಾಬ್ದಾರಿ ಇದು.
ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಈ ಒಂದು ವರ್ಷದಲ್ಲಿ 30 ಹೆಚ್ಚು ಕೋಮುವಾದ ಪ್ರಕರಣಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅದನ್ನು ಕರ್ನಾಟಕ ಸರ್ಕಾರ ತೆರವುಗೊಳಿಸಲು ಯತ್ನಿಸಿಲ್ಲ. ಅದು ಒತ್ತಟ್ಟಿಗಿರಲಿ. ಮಸೀದಿ ಆವರಣಕ್ಕೆ ನುಗ್ಗಿ ಜೈ ಶ್ರೀರಾಮ್ ಘೋಷಣೆ ಹಾಕಿದ ಪ್ರಕರಣವನ್ನು ರದ್ದುಗೊಳಿಸಿರುವುದನ್ನು ಸರ್ಕಾರ ಮೇಲ್ಮನವಿ ಸಲ್ಲಿಸಲೇಬೇಕು. ಯಾಕೆಂದರೆ, ಭವಿಷ್ಯದಲ್ಲಿ ಮಸೀದಿಗೆ ನುಗ್ಗಿ ಘೋಷಣೆ ಕೂಗುವುದು, ಆ ಮೂಲಕ ಕೋಮುಗಲಭೆ ಸೃಷ್ಟಿಸುವ ಚಾಳಿ ಬೆಳೆಯುತ್ತದೆ. ಇಂತಹ ತೀರ್ಪುಗಳನ್ನು ಕಾನೂನು ಪ್ರಕಾರ ಪ್ರಶ್ನಿಸದಿದ್ದರೆ ಸರ್ಕಾರವು ಜನತೆಗೆ ದ್ರೋಹ ಬಗೆದಂತೆಯೇ ಸರಿ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮರ್ದಾಳ ಎಂಬಲ್ಲಿ ಬದ್ರಿಯಾ ಜುಮ್ಮಾ ಮಸೀದಿಯ ಆವರಣದಲ್ಲಿ 2023 ಸೆಪ್ಟೆಂಬರ್ 24 ರಂದು ರಾತ್ರಿ ಆರೋಪಿಗಳಾದ ಪುತ್ತೂರಿನ ಬಿಳಿನೆಲೆ ಗ್ರಾಮದ ಕೀರ್ತನ್ ಮತ್ತು ಕೈಕಂಬದ ಸಚಿನ್ ಎಂಬವರು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು. ಮಸೀದಿಯೊಳಗೆ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೇ “ಬ್ಯಾರಿಗಳನ್ನು ಬದುಕಲು ಬಿಡುವುದಿಲ್ಲ” ಎಂದು ಬೊಬ್ಬೆ ಹಾಕಿದ್ದರು. ಈ ಬಗ್ಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮತ್ತು ದೂರನ್ನು ಆಧರಿಸಿ ಎಫ್ಐಆರ್ ಮಾಡಿದ್ದರು.
ಆರೋಪಿಗಳು ಪ್ರಕರಣ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದಾಗ, ವಾದ ವಿವಾದ ಆಲಿಸಿದ ನ್ಯಾಯಮೂರ್ತಿಗಳು
”ದೂರುದಾರರು ಖುದ್ದು ಹೇಳಿರುವಂತೆ ಆ ಭಾಗದಲ್ಲಿ ಹಿಂದೂ – ಮುಸ್ಲಿಮರು ಒಟ್ಟಾಗಿ ಸೌಹಾರ್ದತೆಯಿಂದ ಜೀವಿಸುತ್ತಿರುವುದಾಗಿ ಹೇಳಿದ್ದಾರೆ. ಆದರೆ, ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 295 ‘ಎ’ (ಧಾರ್ಮಿಕ ಭಾವನೆ, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದು) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ಧಾರ್ಮಿಕ ಭಾವನೆಗೆ ಹೇಗೆ ಧಕ್ಕೆಯಾಗುತ್ತದೆಂದು ಅರ್ಥವಾಗುತ್ತಿಲ್ಲ. ಜತೆಗೆ, ಪ್ರಕರಣದಲ್ಲಿ ಯಾವುದೇ ಅಪರಾಧ ಕಂಡು ಬರುತ್ತಿಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧ ಮುಂದಿನ ಪ್ರಕ್ರಿಯೆಗಳಿಗೆ ಅನುಮತಿ ನೀಡುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ” ಎಂದು ಹೇಳಿದ್ದಾರೆ.
ಮಸೀದಿಯೊಳಗೆ ನುಗ್ಗಿ ಜೈ ಶ್ರೀರಾಮ್ ಎಂದು ಇಬ್ಬರು ಯುವಕರು ಘೋಷಣೆ ಕೂಗಿದ್ದು ನಿಜ ಎಂದು ಹೈಕೋರ್ಟ್ ತನ್ನ ವಿಚಾರಣೆಯಲ್ಲಿ ಒಪ್ಪಿಕೊಂಡಿದೆ. ‘ಮರ್ದಾಳದಲ್ಲಿ ನಾವು ಎಲ್ಲಾ ಧರ್ಮದವರು ಸೌಹಾರ್ದತೆಯಿಂದ ಬಾಳುತ್ತಿದ್ದೇವೆ ಎಂದು ದೂರುದಾರರೇ ಹೇಳಿದ್ದಾರೆ’ ಎಂದು ಹೈಕೋರ್ಟ್ ದೂರು ಅರ್ಜಿಯ ವಾಕ್ಯವನ್ನು ಎಫ್ಐಆರ್ ರದ್ದುಗೊಳಿಸಲು ಬಳಕೆ ಮಾಡಿದೆ.
“ಕೇವಲ ಇಬ್ಬರು ಯುವಕರು ಮಸೀದಿಯೊಳಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ ಕೂಗಿದರೂ ಅವರಿಬ್ಬರ ಮೇಲೆ ಹಲ್ಲೆಯಾಗಿಲ್ಲ. ಮಸೀದಿಯೊಳಗೆ ಜೈ ಶ್ರೀರಾಮ್ ಘೋಷಣೆ ಕೂಗಿದರೂ ಕೋಮುಗಲಭೆ ಆಗಲಿಲ್ಲ ಎಂದರೆ ಕರಾವಳಿಯ ಮುಸ್ಲಿಮರು ಶಾಂತಿ ಪ್ರಿಯರು ಮತ್ತು ಕ್ಷಮಾಶೀಲರು” ಎಂದು ಹೈಕೋರ್ಟ್ ಶ್ಲಾಘಿಸಿ ಆರೋಪಿಗಳ ಅರ್ಜಿಯನ್ನು ವಜಾ ಮಾಡಬೇಕಿತ್ತು. ಅದಾಗಲಿಲ್ಲ ಎಂಬುದು ವಿಪರ್ಯಾಸ !
ಮಸೀದಿಯೊಳಗೆ ಜೈ ಶ್ರೀರಾಮ್ ಎಂದು ಕೂಗುವುದು ಐಪಿಸಿ ಸೆಕ್ಷನ್ 295 ‘ಎ’ (ಧಾರ್ಮಿಕ ಭಾವನೆ, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದು) ಅಡಿಯಲ್ಲಿ ಈ ಪ್ರಕರಣ ಬರುವುದಿಲ್ಲ ಎಂದರೆ ಏನರ್ಥ? ಕೀರ್ತನ್ ಮತ್ತು ಸಚಿನ್ ಎಂಬ ಹಿಂದೂ ಸಂಘಟನೆಯ ಯುವಕರಿಗೆ ಮಸೀದಿ ಕಂಡಾಕ್ಷಣ ತನ್ನ ದೇವರ ಮೇಲೆ ಭಕ್ತಿಯುಕ್ತಿ ಪ್ರಾರ್ಥನೆಗೆ ಮಸೀದಿಯಾದರೇನು? ದೇವಸ್ಥಾನವಾದರೇನು ಎಂದುಕೊಂಡು ಪ್ರಾರ್ಥಿಸಲು ಮಸೀದಿಗೆ ಬಂದರೇ? ಜೈ ಶ್ರೀರಾಮ್ ಎಂದು ದೇವಸ್ಥಾನದಲ್ಲಿ ಘೋಷಣೆ ಹಾಕಬೇಕೇ ಹೊರತು ಮಸೀದಿಯಲ್ಲಿ ಅಲ್ಲ. ಹಾಗಾಗಿ ಈ ಘೋಷಣೆಯ ಹಿಂದೆ ಧಾರ್ಮಿಕ ಭಾವನೆ, ಧರ್ಮ, ಧಾರ್ಮಿಕ ನಂಬಿಕೆಯನ್ನು ಅವಮಾನವಿಸುವ ಉದ್ದೇಶ ಅಲ್ಲದೇ ಇನ್ನೇನೂ ಇಲ್ಲ ಎಂಬುದನ್ನು ಮೇಲ್ಮನವಿ ಮೂಲಕ ನ್ಯಾಯಾಂಗಕ್ಕೆ ಅರ್ಥ ಮಾಡಿಸುವ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ತೆಗೆದುಕೊಳ್ಳಬೇಕಿದೆ.
ಇದನ್ನೂ ಓದಿ ವಕ್ಫ್ ಆಸ್ತಿ ಮಾತ್ರವಲ್ಲ, ಅಗತ್ಯಬಿದ್ದರೆ ದೇಶದಿಂದಲೇ ಓಡಿಸುತ್ತೇವೆ: ಮುಸ್ಲಿಮರ ವಿರುದ್ಧ ಸೂಲಿಬೆಲೆ ದ್ವೇಷ ಭಾಷಣ
ಮಸೀದಿಯೊಳಗೆ ಜೈ ಶ್ರೀರಾಮ್ ಘೋಷಣೆ ಕೂಗಿದ ಪ್ರಕರಣ ರದ್ದುಗೊಳಿಸಲು ಪೂರಕವಾಗಿ ಹೈಕೋರ್ಟ್ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಪ್ರಕರಣದ ತೀರ್ಪನ್ನು ಬಳಸಿಕೊಂಡಿದೆ. “2016ರಲ್ಲಿ ಬ್ಯುಸಿನೆಸ್ ಸ್ಟಾಂಡರ್ಡ್ ಪತ್ರಿಕೆಯ ಕವರ್ ಪೇಜ್‌ನಲ್ಲಿ ಮಹೇಂದ್ರ ಸಿಂಗ್ ಧೋನಿಯವರ ಫೋಟೋವನ್ನು ಕಲಾತ್ಮಕವಾಗಿ ಬದಲಾಯಿಸಿ ಅವರನ್ನು ವಿಷ್ಣುವಿನಂತೆ ಚಿತ್ರಿಸಿ ನಾಲ್ಕು ಕೈಗಳನ್ನು ಧೋನಿಗೆ ಹೊಂದಿಸಿತ್ತು. ಒಂದೊಂದು ಕೈಯ್ಯಲ್ಲೂ ಕೂಲ್ ಡ್ರಿಂಕ್ಸ್ ಬಾಟಲಿ, ಚಿಪ್ಸ್ ಪ್ಯಾಕೆಟ್ ಇತ್ಯಾದಿಗಳನ್ನು ಇಡಲಾಗಿತ್ತು. ಈ ಮೂಲಕ, ಧೋನಿಯವರು ಹಲವಾರು ಬ್ರ್ಯಾಂಡ್‌ಗಳ ಜಾಹೀರಾತು ಸರದಾರ ಎಂದು ಬಣ್ಣಿಸಲಾಗಿತ್ತು. ಇದರ ವಿರುದ್ದ ವಿಶ್ವಹಿಂದೂ ಪರಿಷತ್ ಪ್ರಕರಣ ದಾಖಲಿಸಿತ್ತು. ಆದರೆ ಈ ರೀತಿಯ ಕಲಾತ್ಮಕತೆಯ ಹಿಂದೆ ಧಾರ್ಮಿಕ ಭಾವನೆ ಕೆರಳಿಸುವ, ನಂಬಿಕೆಗೆ ಘಾಸಿ ಮಾಡುವ ಉದ್ದೇಶವಿಲ್ಲ. ಹಾಗಾಗಿ ಐಪಿಸಿ ಸೆಕ್ಷನ್ 295 ‘ಎ’ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ಸುಪ್ರಿಂ ಕೋರ್ಟ್ ಹೇಳಿತ್ತು. ಈ ಧೋನಿ ಪ್ರಕರಣಕ್ಕೂ ಮಸೀದಿಯೊಳಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ ಕೂಗಿದ ಪ್ರಕರಣಕ್ಕೂ ಏನು ಸಂಬಂಧ? ಧೋನಿಯನ್ನು ವಿಷ್ಣುವನ್ನಾಗಿ ಚಿತ್ರಿಸಿ ಅವರ ನಾಲ್ಕು ಕೈಯ್ಯಲ್ಲಿ ಬ್ರಾಂಡ್‌ಗಳನ್ನು ಇರಿಸಿದ್ದು ‘ಧೋನಿ ಜಾಹೀರಾತುಗಳ ಸರದಾರ’ ಎಂದು ಹೇಳುವ ಕಲಾತ್ಮಕತೆಯೇ ಹೊರತು ಹಿಂದೂಗಳ ನಂಬಿಕೆಗೆ ಘಾಸಿಗೊಳಿಸಲು ಅಲ್ಲ ಎನ್ನುವುದು ಸರಿ ಇರಬಹುದು. ಹಿಂದೂ ಸಂಘಟನೆಯ ಕೀರ್ತನ್ ಮತ್ತು ಸಚಿನ್ ಮಸೀದಿಯೊಳಗೆ ನುಗ್ಗಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದು ಒಂದು ಕಲಾತ್ಮಕತೆಯೇ? ಅಥವಾ ಧರ್ಮ ದ್ವೇಷದ ಕಾರಣಕ್ಕೋ ?
ಕೋಮು ದ್ವೇಷಗಳನ್ನು ತಡೆಗಟ್ಟುವ ಭರವಸೆ ನೀಡಿ ಅಧಿಕಾರಕ್ಕೆ ಬಂದ, ಈಗಲೂ ಅವಕಾಶ ಸಿಕ್ಕಾಗ ಕೋಮು ಸೌಹಾರ್ದತೆಯ ಬಗ್ಗೆ ಮಾತನಾಡುವ ಕಾಂಗ್ರೆಸ್ ಸರ್ಕಾರ ಈ ತೀರ್ಪನ್ನು ಗಂಭೀರವಾಗಿ ಕಂಡು ಮೇಲ್ಮನವಿ ಸಲ್ಲಿಸಬೇಕಿದೆ.

ನವೀನ್ ಸೂರಿಂಜೆ
ಪತ್ರಕರ್ತ, ಲೇಖಕ
ಮಸಿದಿಯಲ್ಲಿ ಜೈ ಶ್ರೀರಾಮ್ ಅನ್ನಬಹುದಾದ ರೆ.ಮಂದಿರ ಮತ್ತು ದೇವಸ್ಥಾನದ ಲ್ಲಿ ಅಲ್ಲಾ ಹು ಅಕ್ಬರ್ ಅಂತಾ ಅನ್ನಬಹುದೇ.ಇದಕ್ಕೆ ಹೈಕೋರ್ಟ್ ಏನು ಹೇಳುತ್ತದೆ
ದೇವಸ್ಥಾನ ಮತ್ತು ಮಸೀದಿಯ ಹಿಂದೂ ಹೆಸರಿಟ್ಟುಕೊಂಡ ನಿನಗೇ ಗೊತ್ತಿಲ್ಲದ ಮೇಲೆ ಉಳಿದವರ ಕಥೆ tiliduko. Moda ಅದನ್ನು ತಿಳಿದುಕೊಂಡು ಅ ಮೇಲೆ ಈ ರೀತಿ comments ಹಾಕಿ ಹೀರೋ ಆಗುವ ಬದಲು ಎಡಬಿಡಂಗಿ ಅಗಬೇಡ