ಭಾರತದ ಬೀದಿ ಬೀದಿಗಳಲ್ಲಿ ಸಂವಿಧಾನದ ಮಹತ್ತನ್ನು ಸಾರುತ್ತಾ ನಡೆದ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕೈಯಲ್ಲೊಂದು ಸಂವಿಧಾನದ ಹೊತ್ತಿಗೆ ಹಿಡಿದೆ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಆಡಳಿತ ರೂಢರಿಗೆ ಸಂವಿಧಾನವನ್ನು ಎದುರಿಸಬೇಕಾದ ಪಂಥಾಹ್ವಾನ ಎಸೆದಿದ್ದಾರೆ.
18ನೇ ಲೋಕಸಭಾ ಚುನಾವಣೆ ಕಾಲಕ್ಕೆ ಈ ದೇಶದ ಜನ ದ್ವೇಷದ ಭಾಷಣ, ಹಿಂಸೆಯ ಪ್ರಚೋದನೆ. ರಾಜಕೀಯ ಕೇಡು-ಸೇಡಿಗೆ ಕಡಿವಾಣ ಹಾಕಿರುವುದು ಸಣ್ಣನೆ ನಿಟ್ಟುಸಿರನ್ನು ಬಿಡುವಂತಾಗಿದೆ. ’ಅಭೀ ಪಿಕ್ಚರ್ ಬಾಕೀ ಹೈ …’ ’ಸಂವಿಧಾನವನ್ನು ಬದಲಾಯಿಸುತ್ತೇವೆ’, ’ಅಬ್ ಕೀ ಬಾರ್ ಚಾರ್ಸೋ ಪಾರ್’ ಎಂಬ ಆತ್ಮರತಿಯ ಬೆದರಿಕೆಗಳನ್ನೆಲ್ಲಾ ಮತದಾರ ಮೂಟೆ ಕಟ್ಟಿ ಸರಯೂ ನದಿಗೆ ಎಸೆದು ಬಿಟ್ಟಿದ್ದಾರೆ. ಅಂತಿಮವಾಗಿ ಸಂವಿಧಾನದ ಮೂಲ ತತ್ವಗಳೆ ಸತ್ಯ ಮತ್ತು ಅಂತಿಮ ಎನ್ನುವುದರ ಪಾಠವನ್ನು ಕಲಿಸಬೇಕಾದವರಿಗೆ ಕಲಿಸಿದ್ದಾರೆ.
ನಂಬರ್ ಲೆಕ್ಕದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಕೂಟ ಅಧಿಕಾರಕ್ಕೆ ಬರುವುದನ್ನು ತಡೆಯಲಾಗಲಿಲ್ಲ ನಿಜ, ಆದರೆ ರಾಜಕೀಯ ಆತ್ಮರತಿಯಲ್ಲಿ ಮಿಂದು ಮೆರೆಯುತ್ತಿದ್ದ ನರೇಂದ್ರಮೋದಿಯವರ ಸೊಕ್ಕಿಗೆ ದೇಶದ ಜನ ಸಂವಿಧಾನದ ಮದ್ದು ಅರೆದಿರುವುದಂತೂ ನಿಜ. ’ಸಂವಿಧಾನ’ ದ ಮಹತ್ವ ಮನವರಿಕೆ ಮತ್ತು ಅದನ್ನು ಜನಜಾಗೃತಿಯಾಗಿ ದುಡಿಸಿಕೊಂಡ ಪರಿಣಾಮವೇ ಮೋದಿಯ ಸೋಲು, ಕೋಮುವಾದಿಗಳ ಸೋಲು ಎಂಬುದು ಮಾತ್ರ ನಿಚ್ಚಳವಾಗಿ ಕಾಣುತ್ತಿದೆ. ಸಂವಿಧಾನವನ್ನು ಉಳಿಸಿ ಚಳವಳಿಯನ್ನು ತಾರ್ಕಿಕ ಅಂತ್ಯದ ಕಡೆಗೆ ಕೊಂಡೊಯ್ದ ಶ್ರಮಕೀರ್ತಿ ರಾಹುಲ್ ಗಾಂಧಿಗೆ ಸಲ್ಲಲೇ ಬೇಕು.
ಮೊನ್ನೆ ನಡೆದ ಹೊಸ ಸಂಸದರ ಪ್ರತಿಜ್ಞಾವಿಧಿ ಸಂದರ್ಭದಲ್ಲಿ ರಾಹುಲ್ ಗಾಂಧಿ ತಮ್ಮ ಸರದಿ ಬಂದಾಗ ಸ್ಪೀಕರ್ ಅವರ ಜೊತೆಗೆ ಪ್ರತಿಜ್ಞಾವಿಧಿ ನಿರ್ವಹಣೆ ಅಧಿಕಾರಿ ಮತ್ತು ಸಹಾಯಕನಿಗೂ ಹಸ್ತಲಾಘವ, ವಂದನೆಗಳನ್ನು ಸಲ್ಲಿಸುವ ಮೂಲಕ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಮುಖ್ಯರೇ ಎಂಬ ಸಮಾನತೆ- ಸಮಷ್ಟಿಯ ಅರಿವನ್ನು ಕಾಣಿಸಿದರು. ಇದೇ ಸಂವಿಧಾನದ ಜೀವದ್ರವ್ಯ ಎಂಬುದನ್ನು ಸೂಚ್ಯವಾಗಿ ಪ್ರತಿಪಾದಿಸಿದರೂ ಕೂಡ.
ಸುಳ್ಳುಗಳ ಸಮೂಹ ಸನ್ನಿಯನ್ನು ಬಿತ್ತಿ ಅಧಿಕಾರ ಹಿಡಿದ ಬಲಾಢ್ಯ ಶಕ್ತಿಗಳ ವಿರುದ್ದ ಸತ್ಯವನ್ನು ಪ್ರತಿಪಾದಿಸುವುದು ಅಪಾಯಕಾರಿ ಎಂತಾದಾಗ ಅದರ ವಿರುದ್ದ ಜನಪರ ಚಳವಳಿ ಕಟ್ಟುವುದೂ ಕೂಡ ಒಂದು ಕಠಿಣ ಸವಾಲಿನ ಕೆಲಸ. ಇಂತಹ ಸವಾಲನ್ನು ಎದುರಿಸಲು ಹೊರಟ ರಾಹುಲ್ಗಾಂಧಿ ಅವಮಾನ,ಬೈಗುಳಗಳ ನುಂಗಿಕೊಳ್ಳುತ್ತಲೇ ಸಂವಿಧಾನವೇ ಪ್ರಬಲ, ಪ್ರಖರ ಅಸ್ತ್ರ -ಶಸ್ತ್ರ ಎಂಬುದನ್ನು ಅರಿತುಕೊಂಡಿದ್ದರು. ಅದನ್ನು ಈ ದೇಶದ ಜನರಿಗೆ ಮನವರಿಕೆ ಮಾಡಿಕೊಟ್ಟ ಮಾತ್ರವೇ ಗೆಲುವು ಸಾಧ್ಯ ಎಂಬುದರಲ್ಲಿ ಯಶಸ್ವಿಯಾಗಿದ್ದಾರೆ.
ಮತೀಯ ಶಕ್ತಿಗಳು ದೇಶದ ಜನರನ್ನು ಜಾತಿ, ದೇವರು- ಧರ್ಮಗಳ ಹೆಸರಿನಲ್ಲಿ ವಿಂಗಡಿಸಿದ್ದರು, ಸುಳ್ಳುಗಳಿಂದ ಭ್ರಮೆಯ ಲೋಕಕ್ಕೆ ನೂಕಿದ್ದರು, ಸತ್ಯವನ್ನು ಹೇಳುವುದೇ ಅಪರಾಧವಾಗಿ ಅಧಿಕಾರ ವಿಜೃಂಭಿಸುತ್ತಿತ್ತು. ಸೈದ್ಧಾಂತಿಕ ಬದ್ದತೆ, ಹೊಸತನ, ಉತ್ಸಾಹ ಯಾವೊಂದೂ ಇಲ್ಲದೆ ಸವೆದ ಕಾಂಗ್ರೆಸ್ಸಿಗರ ನಡುವೆಯೇ ರಾಹುಲ್ ಕಾಂಗ್ರೆಸನ್ನು ಕಟ್ಟುವ ಸಂಕಲ್ಪ ಮಾಡಿದರು. ಅದಕ್ಕಾಗಿ ನೇರ ಜನರ ಬಳಿಗೆ ನಡೆದು ಹೋದರು, ಅಲ್ಲಿ ಕಂಡದ್ದು ಎಷ್ಟೊಂದು ರೂಪಗಳು, ಸತ್ಯಗಳು ಮತ್ತು ಭ್ರಮೆಯ ವಿಕಸಿತ ಭಾರತದೊಳಗಿನ ವಿಕಲ್ಪ ಭಾರತವನ್ನು ಕಾಣಿಸಿದವು.
’ಭಾರತ್ ಜೋಡೋ’ ಮತ್ತು ಭಾರತ್ ʼಜೋಡೋ ನ್ಯಾಯ ಯಾತ್ರೆʼಗಳ ಮೂಲಕ ಒಟ್ಟು 212 ದಿನಗಳ ಕಾಲ ಭಾರತವೆಂಬ ಬಹುತ್ವದದ ನೆಲವನ್ನು ತಿರುಗಿದರು, ಅರಿತರು, ಜನರ ಸಂಕಷ್ಟಗಳಿಗೆ ಕಿವಿಯಾದರು, ಕಣ್ಣೀರಿಗೆ ಕೈವೊಡ್ಡಿದರು. ದಿಕ್ಕು ದಿಸೆಯಿಲ್ಲದೆ ಅನಾಥ ಪ್ರಜ್ಞೆಯಲಿ ಬೇಯುತ್ತಿದ್ದವರಿಗೆ ’ನಾನಿದ್ದೇನೆ’ ಎಂಬ ಆತ್ಮಬಲವನ್ನು ತುಂಬಿದರು. ಬದಲಾವಣೆಯ ಕಾಲವೊಂದಿದೆ ಅದಕ್ಕೆ ನೀವು ಜೊತೆಯಾಗಿ ಎಂದು ಕರೆ ಕೊಟ್ಟರು. ಅದು ಅಂತಿಂಥ ಕರೆಯಲ್ಲ. ದೇಶದ ತುಂಬೆಲ್ಲಾ ದ್ವೇಷದ ಮಾತು-ಕೃತ್ಯಗಳೇ ನಡೆದಿರುವಾಗ ಪ್ರೇಮದ ಅಂಗಡಿ ತೆರೆದಿದ್ದೇನೆ. ಜಾತಿ,ಧರ್ಮ, ಬಡವ- ಬಲ್ಲಿದ ಬೇಧವಿಲ್ಲದೆ ಬನ್ನಿ ಎಂದು ಕೈ ಹಿಡಿದು ಮಳೆ-ಗಾಳಿ,ಚಳಿಗೆ ಅಂಜದೆ ಬುದ್ಧ ಭೂಮಿಯ ಪ್ರೇಮದ ಪ್ರಮೇಯವನ್ನೆ ಗಡಿ ಗಡಿಗೂ ಚೆಲ್ಲಿದರು. ಎದೆ ಎದೆಗೂ ದಾಟಿಸಿದರು.
ಬಹುತ್ವ ಭಾರತದ ಮಹೋನ್ನತ ನೈಜ ರಾಷ್ಟ್ರೀಯವಾದಕ್ಕೆ ನಾಗಪುರ ಪ್ರಾಯೋಜಿತ ಬಂಚ್ ಆಫ್ ಥಾಟ್ಸ್ ನ ಮತೀಯ ರಾಷ್ಟ್ರೀಯವಾದದ ಮುಖವಾಡ ತೊಡಿಸಿಲಾಗಿತ್ತು. ಅಂತಹ ವಿಭಜಕ, ವಿಧ್ವಂಸಕರ ಕಣ್ಣಿಗೆ ಕಣ್ಣಿಟ್ಟು ವಿಚಾರ ಸಂಘರ್ಷಕ್ಕಿಳಿದ ರಾಹುಲ್ಗಾಂಧಿ ತಾನು ’ಪಪ್ಪು ಅಲ್ಲ’ ಎಂಬುದನ್ನು ಸಾಬೀತು ಪಡಿಸುತ್ತಲೇ ಬಂದಿದ್ದರು. ಆದರೆ ಭಾರತದ ಗಲಾಮಿ ಪತ್ರಿಕೋದ್ಯಮ, ಸೋಷಿಯಲ್ ಮೀಡಿಯಾದ ಭಕ್ತಗಣ, ಸುಪಾರಿ ಕೂಲಿಯಾಳುಗಳು ರಾಹುಲ್ ವ್ಯಕ್ತಿತ್ವನ್ನು ಸುಡುವಲ್ಲೇ ಹಗಲಿರುಳು ಶ್ರಮವಹಿಸುತ್ತಲೆ ಬಂದವು. ಹಿಂದುತ್ವ, ಹುಸಿ ರಾಷ್ಟ್ರೀಯವಾದ, ಸುಳ್ಳುಗಳು ಮತ್ತು ಮೋದಿ ಎಂಬ ಕುಶಲಮತಿ ನಟನ ಅಮೋಘ ನಟನೆಯ ಅಬ್ಬರದಲ್ಲಿ ರಾಹುಲ್ ಗಾಂಧಿಯಲ್ಲಿಡಗಿದ್ದ ನೈಜ ನಾಯಕತ್ವಕ್ಕೆ ಗಾಢಪರದೆಗಳನ್ನು ಎಳೆಯಲಾಗಿತ್ತು.
ತೆಲುಗಿನ ಖ್ಯಾತ ಕವಿ ಅಪ್ಪರಾವ್ ಹೇಳಿದಂತೆ ದೇಶಮಂಟೆ ಮಟ್ಟಿ ಕಾದು, ದೇಶಮಂಟೆ ಜನಾಲು (ದೇಶವೆಂದರೆ ಬರೀ ಮಣ್ಣಲ್ಲ,ದೇಶವೆಂದರ ಜನ) ಎಂಬ ಸತ್ಯವನ್ನು ಸಾರುತ್ತಾ ದೇಶಕ್ಕಾಗಿ ಅಂದರೆ ’ಜನರಿಗಾಗಿ’ ರಾಹುಲ್ ಗಾಂಧಿ ಹೋರಾಡಿದ್ದು ಎಲ್ಲಾ ಕಾಲಕ್ಕೂ ಜನಪರ ಚಳವಳಿಯ ಐತಿಹಾಸಿಕ ಪುಟಗಳೇ ಆಗಿ ಉಳಿದು ಹೋಗಿವೆ.
ಭಾರತದ ಬೀದಿ ಬೀದಿಗಳಲ್ಲಿ ಸಂವಿಧಾನದ ಮಹತ್ತನ್ನು ಸಾರುತ್ತಾ ನಡೆದ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕೈಯಲ್ಲೊಂದು ಸಂವಿಧಾನದ ಹೊತ್ತಿಗೆ ಹಿಡಿದೆ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಆಡಳಿತ ರೂಢರಿಗೆ ಸಂವಿಧಾನವನ್ನು ಎದುರಿಸಬೇಕಾದ ಪಂಥ್ವಾಹವನ್ನು ಎಸೆದಿದ್ದಾರೆ.
ಅಭೀ ಪಿಕ್ಚರ್ ಬಾಕೀ ಹೈ…
ಕೊನೆಯ ಮಾತು
2018 ಜುಲೈ ನಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ದ ವಿಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದವು. ಈ ಸಂದರ್ಭವನ್ನು ಸಮರ್ಥವಾಗಿ ಬಳಸಿಕೊಂಡ ರಾಹುಲ್ ಗಾಂಧಿ ಮೋದಿಯ ಸರ್ವಾಧಿಕಾರ, ದೇಶಾವರಿತನಗಳನ್ನು ದೇಶದ ಮುಂದೆ ಬಟಾಬಯಲು ಮಾಡಿದರು.
ಸತತ 11 ಗಂಟೆಗಳ ಕಾಲದ ಕಲಾಪದಲ್ಲಿ ಯುವಕರಿಗೆ ಉದ್ಯೋಗ ವಂಚನೆ, ಆದಿವಾಸಿಗಳು. ಮಹಿಳೆಯರ ಮೇಲಿನ ದೌರ್ಜನ್ಯ, ನೋಟು ಅಮಾನ್ಯೀಕರಣ, ಜಿಎಸ್ಟಿ, ರೆಫೇಲ್ ಹಗರಣ, ಡೊಕ್ಲೋಮಾ ಗಡಿ ವಿವಾದ, ರೈತರ ಸಾಲಮನ್ನಾ, ಗುಂಪು ಹತ್ಯೆ , ದಲಿತರ ಮೇಲಿನ ಹಲ್ಲೆ -ಹತ್ಯೆ , ಕಪ್ಪುಹಣ ವಾಪಾಸ್, ಗೋಹತ್ಯೆ ಆರೋಪದಲ್ಲಿ ಸಂಘಟಿತ ಅಪರಾಧಗಳ ನಿರ್ಲಜ್ಜತನದ ಕಿಲುಬುಗಟ್ಟಿದ ಆಡಳಿತಕ್ಕೆ ಕನ್ನಡಿ ಹಿಡಿದ ರಾಹುಲ್ಗಾಂಧಿ ಮೋದಿ ಮತ್ತವರ ಬಳಗಕ್ಕೆ ಪ್ರೇಮದ ವಿಶ್ವರೂಪವನ್ನೆ ತೋರಿದ್ದು ಹೀಗೆ.
’ನನಗಾಗಿ ನಿಮ್ಮಲ್ಲಿ ದ್ವೇಷವಿದೆ
ನನಗಾಗಿ ನಿಮ್ಮಲ್ಲಿ ಸಿಟ್ಟಿದೆ.
ನನಗಾಗಿ ನಿಮ್ಮಲ್ಲಿ ಬಗೆ ಬಗೆಯ ಬೈಗಳಗಳಿವೆ
ನಿಮಗಾಗಿ ನಾನು ಪಪ್ಪು
ಆದರೆ ನಿಮಗಾಗಿ ನನ್ನಲ್ಲಿ ಪ್ರೀತಿ ಇದೆ.
ನಿಮಗಾಗಿ ನನ್ನಲ್ಲಿ ಸ್ಪಲ್ಪವೂ ದ್ವೇಷವಿಲ್ಲ, ಸಿಟ್ಟಿಲ್ಲ,
ನಿಮ್ಮಲ್ಲೂ ಪ್ರೀತಿಯ ಭಾವವಿದೆ ಅದನ್ನು ನಾನು ಹೊರತೆಗೆಯುತ್ತೇನೆ
ಪ್ರತಿಯೊಬ್ಬರಲ್ಲೂ ಆ ಪ್ರೀತಿಯನ್ನು ಹೊರತೆಗೆಯುತ್ತೇನೆ.
ಇದೆ ನಿಜವಾದ ಹಿಂದೂ ಧರ್ಮ’
ಈ ಮಾತುಗಳ ಬೆನ್ನಲ್ಲೆ ತಮ್ಮ ಸ್ಥಾನದಿಂದ ನಡೆದು ಹೋದ ರಾಹುಲ್ಗಾಂಧಿ ಪ್ರಧಾನಿ ನರೇಂದ್ರ ಮೋದಿಯನ್ನು ಅಲಂಗಿಸಿಕೊಂಡರು. ಪ್ರೇಮದ ಅಂಗಡಿಯ ಪ್ರವರ್ತಕ ರಾಹುಲ್ ಗಾಂಧಿಯ ಅಕಾಲಿಕ ಆಲಿಂಗನ ದ್ವೇಷ, ಸುಳ್ಳು, ಹಿಂಸೆಯನ್ನೆ ಉಸಿರಾಡುತ್ತಿದ್ದವರನ್ನು ಕಂಗಾಲಾಗಿಸಿತು.
ಮೊನ್ನೆ ಸಂಸತ್ತಿನಲ್ಲಿ ವಿಪಕ್ಷ ನಾಯಕನಾಗಿ ಆಯ್ಕೆಯಾದ ರಾಹುಲ್ ಗಾಂಧಿಯವರನ್ನು ಪ್ರಧಾನಿ ಮೋದಿ ಕೈ ಕುಲುಕಿದ ದೃಶ್ಯ ನೋಡಿದಾಗ 2018ರ ಈ ಘಟನೆ ನೆನಪಾಯಿತು.

ಎನ್ ರವಿಕುಮಾರ್
ಪತ್ರಕರ್ತ, ಲೇಖಕ
Anta anisike iddare adu shuddha s s aullu.turtu paristitiyalli samvidanavanne galige turidavarinda enannu apekshe maduvadu tappu.nija helala Mr Ravi avaru 50 varushada titi acharisutiddare aste