ಅಯೋಧ್ಯೆ ಸುತ್ತಮುತ್ತ ರಿಯಲ್ ಎಸ್ಟೇಟ್ ದಂಧೆ- ʼಇಂಡಿಯನ್ ಎಕ್ಸ್‌ಪ್ರೆಸ್‌ʼ ಆಸ್ಫೋಟಕ ವರದಿ!

Date:

Advertisements

ಸುಪ್ರೀಮ್ ಕೋರ್ಟ್ ತೀರ್ಪು 2019ರಲ್ಲಿ ಹೊರಬಿದ್ದಿತ್ತು. ಅಂದಿನಿಂದ 2024ರ ಮಾರ್ಚ್ ತಿಂಗಳವರೆಗೆ ಅಯೋಧ್ಯೆಯ ಸುತ್ತಮುತ್ತಲ 25 ಗ್ರಾಮಗಳ ಜಮೀನು ಮಾರಾಟ-ಖರೀದಿ ವ್ಯವಹಾರಗಳಲ್ಲಿ ಶೇ.30ರಷ್ಟು ಏರಿಕೆ ಕಂಡು ಬಂದಿದೆ. ಈ ಪೈಕಿ ಗಣನೀಯ ಸಂಖ್ಯೆಯ ವ್ಯವಹಾರಗಳಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಕುಟುಂಬಗಳ ಸದಸ್ಯರಿದ್ದಾರೆ.

 

ಅಯೋಧ್ಯೆಯ ಬಾಬರಿ ಮಸೀದಿ-ರಾಮಜನ್ಮಭೂಮಿಯ 2.77 ಎಕರೆಗಳಷ್ಟು ವಿವಾದಿತ ಜಮೀನನ್ನು ರಾಮಮಂದಿರ ಕಟ್ಟಿಕೊಳ್ಳಲು ಸುಪ್ರೀಮ್ ಕೋರ್ಟು 2019ರ ನವೆಂಬರ್ ನಲ್ಲಿ ಹಿಂದೂಗಳಿಗೆ ಒಪ್ಪಿಸಿತ್ತು. ಸುಪ್ರೀಮ್ ತೀರ್ಪಿನ ಅನ್ವಯ ರಚಿಸಲಾದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ 2.77 ಎಕರೆಗಳ ಸುತ್ತಮುತ್ತ ಈವರೆಗೆ 70 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿತು. ತರುವಾಯದ ವರ್ಷಗಳಲ್ಲಿ ಅಯೋಧ್ಯೆಯ ರಿಯಲ್ ಎಸ್ಟೇಟ್ ದಂಧೆ ಅತಿಶಯವಾಗಿ ಗರಿಗೆದರಿತು. ಭವ್ಯ ರಾಮಮಂದಿರ ಸಮುಚ್ಚಯದ ಸುತ್ತಮುತ್ತಲ ಜಮೀನಿನ ಖರೀದಿ ದರ ಆಕಾಶಕ್ಕೇರುವ ನಿರೀಕ್ಷೆ ಹೊಂದಿರುವ ಖಾಸಗಿ ಖರೀದಿದಾರರೂ ಈ ಜಮೀನಿನ ಮೇಲೆ ಕಣ್ಣು ಹಾಕಿದರು. ರಾಜಕಾರಣಿಗಳು, ಉನ್ನತ ಅಧಿಕಾರಿಗಳು, ಕಾರ್ಪೊರೇಟ್ ಕಂಪನಿಗಳು, ಟ್ರಸ್ಟ್ ಗಳು ಕೂಡ ಈ ಪೈಪೋಟಿಗೆ ಬಿದ್ದವು.

ದಲಿತರಿಂದ ಅಕ್ರಮವಾಗಿ ದಕ್ಕಿಸಿಕೊಂಡಿದ್ದ ಕೋಟ್ಯಂತರ ರುಪಾಯಿ ಬೆಲೆಯ ಜಮೀನಿನ ಅವ್ಯವಹಾರವೂ ಇಲ್ಲಿ ನಡೆದಿದೆ. ಅಯೋಧ್ಯೆಯ ಭೂ ಮಾಫಿಯಾ ಕುರಿತು ವಿಶೇಷ ಕಾರ್ಯದಳದಿಂದ ತನಿಖೆ ಮಾಡಿಸುವಂತೆ ಖುದ್ದು ಫೈಜಾಬಾದ್ ಬಿಜೆಪಿ ಸಂಸದರಾಗಿದ್ದ ಲಲ್ಲೂ ಸಿಂಗ್ ಆಗ್ರಹಪಡಿಸಿದ್ದರು. ಇತ್ತೀಚಿನ ಚುನಾವಣೆಯಲ್ಲಿ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿಯ ವಿರುದ್ಧ ಸೋತಿದ್ದಾರೆ. ಸರ್ಕಾರಿ ಜಮೀನು ಮತ್ತು ನದೀದಂಡೆಯ ಮೇಲೆ ಕೂಡ ಅಕ್ರಮ ನಿವೇಶನಗಳನ್ನು ಮಾಡಿ ಮಾರಾಟ  ಮಾಡುವಷ್ಟು ಶಕ್ತಿಶಾಲಿಯಾಗಿದೆ ಈ ಮಾಫಿಯಾ ಎಂಬುದು ಅವರು ಅಂದು ಸಂಸದರಾಗಿದ್ದಾಗ ಮಾಡಿದ್ದ ಆಪಾದನೆಯಾಗಿತ್ತು.

Advertisements

ಭವ್ಯ ರಾಮಮಂದಿರದ ಸುತ್ತಮುತ್ತಣ ಈ ಆಪಾದನೆಗಳ ಮೈಲಿಗೆಯನ್ನು ಬಿಜೆಪಿ ಶೀಘ್ರವೇ ತೊಳೆದುಕೊಳ್ಳಬೇಕಿತ್ತು. ಅಪ್ಪಟ ವ್ಯಾಪಾರಕ್ಕೆ ರಾಜಕಾರಣಕ್ಕೆ ಧರ್ಮದ ದುರ್ಬಳಕೆಯನ್ನು ತಪ್ಪಿಸಬೇಕಿತ್ತು. ಶ್ರೀರಾಮಚಂದ್ರಮೂರ್ತಿಗೆ ಭವ್ಯ ಮಂದಿರ ಕಟ್ಟಿಸಿದ ಹೆಸರಿನಲ್ಲಿ ಬಿಜೆಪಿಯ ಮತಯಾಚನೆ ಮುಗಿಲು ಮುಟ್ಟಿತ್ತು. ಮತಯಾಚನೆ. ಧರ್ಮ-ವ್ಯಾಪಾರ-ರಾಜಕಾರಣದ ತ್ರಿವೇಣಿ ಸಂಗಮಕ್ಕೆ ಸಾಕ್ಷಿಯಾಯಿತು ಅಯೋಧ್ಯೆ.

Ayodhya 1 1

ಒಂದು ಅಂದಾಜಿನ ಪ್ರಕಾರ ನಿತ್ಯ 50 ಸಾವಿರದಿಂದ ಹತ್ತು ಲಕ್ಷ ಮಂದಿ ಯಾತ್ರಾರ್ಥಿಗಳನ್ನು ಬರಮಾಡಿಕೊಳ್ಳಲು ಆಯೋಧ್ಯೆ ಸಜ್ಜಾಗತೊಡಗಿತು. 50 ಸಾವಿರ ಕೋಟಿ ರುಪಾಯಿಗಳಿಗೂ ಹೆಚ್ಚಿನ ಬಂಡವಾಳ ಹೂಡಿಕೆಯ ಅಂದಾಜಿತ್ತು. ಅಗತ್ಯ ಮೂಲಸೌಲಭ್ಯಗಳು ನಿರ್ಮಾಣ ಭರದಿಂದ ಜರುಗಿದವು. ವಿಮಾನನಿಲ್ದಾಣ, ರೇಲ್ವೆ ನಿಲ್ದಾಣ, ರಸ್ತೆಗಳು, ತ್ರಿತಾರಾ ಪಂಚತಾರಾ ಹೊಟೆಲುಗಳು, ಹೊಸ ಟೌನ್ ಶಿಪ್ ಗಳಿಂದ ರಾಮಮಂದಿರದ ಐದು ಕಿ.ಮೀ. ಸುತ್ತಳತೆ ಈಗಲೇ ಗಿಜಿಗುಟ್ಟಿದೆ. ಐದು ಕಿಲೋಮೀಟರುಗಳ ಆಚೆಗೆ 18 ಕಿ.ಮೀ.ತನಕ ಜಮೀನು ಖರೀದಿ ನಡೆದಿದೆ.

ಬಿಜೆಪಿ ಸೇರುವ ಭ್ರಷ್ಟ ರಾಜಕಾರಣಿಗಳು ಆ ಪಕ್ಷದ ‘ವಾಶಿಂಗ್ ಮಷೀನ್’ ನಲ್ಲಿ ಶುಚಿಗೊಂಡು ಪರಿಶುದ್ಧರಾಗುವ ‘ಚಮತ್ಕಾರ’ ಕುರಿತು ದಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಇತ್ತೀಚೆಗೆ ಪ್ರಕಟಿಸಿದ್ದ ತನಿಖಾ ವರದಿ ವೈರಲ್ ಆಗಿ ಹರಡಿ ಹಬ್ಬಿತ್ತು. ಅಯೋಧ್ಯೆಯ ಸುತ್ತಮುತ್ತ ಜಮೀನಿನ ಬೆಲೆ ಏರಿಕೆಯ ಲಾಭ ಗಳಿಕೆಯ ನೂಕುನುಗ್ಗಲಿನಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ರಿಯಲ್ ಎಸ್ಟೇಟ್ ಕಂಪನಿಗಳು, ಕಾರ್ಪೊರೇಟ್ ಕಂಪನಿಗಳು ಯಾವಾಗ ಎಷ್ಟು ಜಮೀನನ್ನು ಎಷ್ಟು ಮೊತ್ತಕ್ಕೆ ಖರೀದಿಸಿದವು ಎಂಬ ಕುರಿತು ಎಕ್ಸ್ ಪ್ರೆಸ್ ಮತ್ತೊಂದು ಆಸ್ಫೋಟಕ ತನಿಖಾ ವರದಿ ಪ್ರಕಟಿಸಿದೆ.

ಅರುಣಾಚಲದ ಉಪಮುಖ್ಯಮಂತ್ರಿಯಿಂದ ಹಿಡಿದು ಉತ್ತರಪ್ರದೇಶದ ವಿಶೇಷ ಟಾಸ್ಕ್ ಫೋರ್ಸ್ ಮುಖ್ಯಸ್ಥ, ಬಿಜೆಪಿ ಸಂಸದನೂ ಆಗಿರುವ ಬ್ರಿಜಭೂಷಣ ಶರಣ ಸಿಂಗ್ ಪುತ್ರನ ತನಕ ರಾಜಕಾರಣಿಗಳು, ಅದಾನಿ ಗ್ರೂಪ್ ನಿಂದ ಮೊದಲುಗೊಂಡು ಲೋಧಾ ರಿಯಲ್ ಎಸ್ಟೇಟ್ ವರೆಗೆ ಎಲ್ಲರೂ ಮುಗಿಬಿದ್ದು ಅಯೋಧ್ಯೆ ಸುತ್ತಮುತ್ತ ಜಮೀನು ಖರೀದಿಸಿದ್ದಾರೆ ಎಂಬುದು ಈ ವರದಿಯ ಶೀರ್ಷಿಕೆ.

ಎಕ್ಸ್‌ಪ್ರೆಸ್‌ನಲ್ಲಿ ದೀರ್ಘ ಕಾಲದಿಂದ ಕೆಲಸ ಮಾಡುತ್ತಿರುವ ಹಿರಿಯ ಪತ್ರಕರ್ತ ಶ್ಯಾಮಲಾಲ್ ಯಾದವ್ ಸಿದ್ಧಪಡಿಸಿರುವ ವರದಿಯಿದು. ಈ ವರದಿಯನ್ನು ತಮ್ಮ ಮಗಳು ಶ್ರೀತು ಯಾದವ್ ಗೆ ಸಮರ್ಪಿಸಿದ್ದಾರೆ. “ಕಂದಾ ಶ್ರೀತೂ, ಈ ವರದಿ ತಯಾರಿಸಲು ನಾನು ಕಳೆದ ನವೆಂಬರ್ 25ರಂದು ಅಯೋಧ್ಯೆಯಲ್ಲಿದ್ದೆ. ನಿನ್ನನ್ನು ಅಂದು ತುರ್ತಾಗಿ ಆಸ್ಪತ್ರೆಗೆ ಸೇರಿಸಲಾಯಿತು. ನಾನು ವಾಪಸು ಬರ್ತಿದ್ದೇನೆ ಎಂದೆ. ಆದರೆ ಮಗಳೇ, ನೀನು ಹೇಳಿದ್ದೆ- ಇಲ್ಲ ಪಾಪಾ, ನಿಮ್ಮ ಕೆಲಸ ಕಾರ್ಯವನ್ನು ಮುಗಿಸಿಕೊಂಡು ಬನ್ನಿ ಅಂತ. ನಾನೇನೋ ವಾಪಸು ಬಂದೆ, ಆದರೆ ನಿನ್ನನ್ನು ಉಳಿಸಿಕೊಳ್ಳಲು ಆಗಲಿಲ್ಲ. ತನಿಖಾ ವರದಿ ಈಗ ಪ್ರಕಟವಾಗುತ್ತಿದೆ. ಇದು ನಿನಗೇ ಸಮರ್ಪಿತ”  ಎಂದು ಶ್ಯಾಮಲಾಲ್ ಭಾವಪೂರ್ಣ ಟ್ವೀಟ್ ಮಾಡಿದ್ದಾರೆ.

ರಾಮಮಂದಿರದ ಸುತ್ತಮುತ್ತಲ 25 ಹಳ್ಳಿಗಳ 2,500 ಗ್ರಾಮಗಳ ರಿಜಿಸ್ಟ್ರಿಗಳನ್ನು ಶ್ಯಾಮಲಾಲ್ ಶೋಧಿಸಿ ಈ ರಿಯಲ್ ಎಸ್ಟೇಟ್ ವ್ಯಾಪಾರದ ಮೇಲಿನ ಮುಸುಕನ್ನು ಸರಿಸಿ ಓದುಗರ ಮುಂದೆ ಇರಿಸಿದ್ದಾರೆ. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನೆಲಸಮಗೊಳಿಸಿದ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಮ್ ಕೋರ್ಟು 2019ರಲ್ಲಿ ತೀರ್ಪು ನೀಡಿ ಹಸಿರು ನಿಶಾನೆ ತೋರಿತು.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಗಳಲ್ಲಿ ಅಯೋಧ್ಯೆ (ಫೈಜಾಬಾದ್) ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಘೋರ ಪರಾಭವ ಎದುರಿಸಿತು. ಈ ಸೋಲಿನ ಆಘಾತದಿಂದ ಬಿಜೆಪಿ ಮತ್ತು ಆ ಪಕ್ಷದ ಬೆಂಬಲಿಗರು ಈಗಲೂ ಚೇತರಿಸಿಕೊಂಡಿಲ್ಲ. ರಾಮಮಂದಿರ ಆಂದೋಲನದ ಕೇಂದ್ರಬಿಂದುವಾಗಿದ್ದ ಈ ಜನರಲ್ ಕ್ಷೇತ್ರದಿಂದ ಪಾಸಿ ಎಂಬ ದಲಿತ ಸಮುದಾಯಕ್ಕೆ ಸೇರಿದ ಅವಧೇಶ್ ಪಾಸಿ ಗೆದ್ದರು. ಅವಧೇಶ್ ಸಮಾಜವಾದಿ ಪಾರ್ಟಿಯ ಹಿರಿಯ ನಾಯಕರಲ್ಲೊಬ್ಬರು. ಬಾಬರಿ ಮಸೀದಿಯನ್ನು ಕೆಡವಿ ಅದೇ ಜಾಗದಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಭರವಸೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಬಹುದೊಡ್ಡ ಪಾತ್ರ ವಹಿಸಿದೆ. ಈ ಭರವಸೆಯನ್ನು ಸಾಕಾರಗೊಳಿಸಿದ್ದೇವೆಂದು ಲೋಕಕ್ಕೆ ಸಾರಿ 2024ರ ಲೋಕಸಭಾ ಚುನಾವಣೆಗಳಲ್ಲಿ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ರಾಜಕೀಯ ತಂತ್ರವಾಗಿತ್ತು.

GEbbNGMaYAA7abL

2024ರ ಜನವರಿಯಲ್ಲಿ ಅರ್ಧಂಬರ್ಧ ನಿರ್ಮಾಣವಾಗಿರುವ ರಾಮಮಂದಿರದ ಪ್ರಾಣಪ್ರತಿಷ್ಠಾಪನೆಯನ್ನು ನೆರವೇರಿಸಲಾಯಿತು. ಆನಂತರದಲ್ಲಿ ಅಯೋಧ್ಯೆಯನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಸಾಲು ಸಾಲು ಪ್ಯಾಕೇಜುಗಳು ಪ್ರಕಟವಾಗಿವೆ. ಅಯೋಧ್ಯಾನಗರಿ ಇದೀಗ ಭರಪೂರ ರಿಯಲ್ ಎಸ್ಟೇಟ್ ವ್ಯವಹಾರದ ಆಡುಂಬೊಲ ಆಗಿ ಹೋಗಿದೆ.

ಸುಪ್ರೀಮ್ ಕೋರ್ಟ್ ತೀರ್ಪು 2019ರಲ್ಲಿ ಹೊರಬಿದ್ದಿತ್ತು. ಅಂದಿನಿಂದ 2024ರ ಮಾರ್ಚ್ ತಿಂಗಳವರೆಗೆ ಅಯೋಧ್ಯೆಯ ಸುತ್ತಮುತ್ತಲ 25 ಗ್ರಾಮಗಳ ಜಮೀನು ಮಾರಾಟ-ಖರೀದಿ ವ್ಯವಹಾರಗಳಲ್ಲಿ ಶೇ.30ರಷ್ಟು ಏರಿಕೆ ಕಂಡು ಬಂದಿದೆ. ಈ ಪೈಕಿ ಗಣನೀಯ ಸಂಖ್ಯೆಯ ವ್ಯವಹಾರಗಳಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಕುಟುಂಬಗಳ ಸದಸ್ಯರಿದ್ದಾರೆ.

ಅರುಣಾಚಲ ಪ್ರದೇಶದ ಉಪಮುಖ್ಯಮಂತ್ರಿ ಚೌನಾ ಮೇಂ ಅವರ ಇಬ್ಬರು ಪುತ್ರರು ರಾಮಮಂದಿರದಿಂದ ಎಂಟು ಕಿ.ಮೀ.ದೂರದಲ್ಲಿ 3.99 ಹೆಕ್ಟೇರುಗಳನ್ನು 3.72 ಕೋಟಿ ರುಪಾಯಿಗೆ ಖರೀದಿಸಿದ್ದಾರೆ. ಹೊಟೇಲ್ ನಿರ್ಮಿಸುವುದು ಅವರ ಉದ್ದೇಶ.

ದೇಶದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ ಮಹಿಳಾ ಕುಸ್ತಿಪಟುಗಳ ಲೈಂಗಿಕ ಶೋಷಣೆಯ ಆರೋಪ ಹೊತ್ತಿರುವ ಬಿಜೆಪಿ ನಾಯಕ ಬ್ರಿಜಭೂಷಣ ಶರಣ ಸಿಂಗ್ ಮಗ ಕರಣ್ ಭೂಷಣ್ ಸಿಂಗ್ ಇದೀಗ ಬಿಜೆಪಿ ಸಂಸದ. ಈತನ ಒಡೆತನದ ನಂದಿನಿ ಇನ್‌ಫ್ರಾಸ್ಟ್ರಕ್ಚರ್ ರಾಮಮಂದಿರದಿಂದ 8 ಕಿ.ಮೀ. ದೂರದಲ್ಲಿ 0.97 ಹೆಕ್ಟೇರು ಜಮೀನನ್ನು 1.15 ಕೋಟಿ ರುಪಾಯಿಗೆ ಖರೀದಿಸಿದೆ.

ಉತ್ತರಪ್ರದೇಶದ ಪೊಲೀಸ್ ಎಸ್.ಟಿ.ಎಫ್. ಹೆಚ್ಚುವರಿ ಡಿಜಿಪಿ ಅಮಿತಾಭ್ ಯಶ್ ಅವರ ತಾಯಿ ಗೀತಾ ಸಿಂಗ್ ಅವರು 9.955 ಹೆಕ್ಟೇರುಗಳಷ್ಟು ಕೃಷಿ ಜಮೀನನ್ನು ಮಂದಿರದಿಂದ ಎಂಟರಿಂದ- ಹದಿಮೂರು ಕಿ.ಮೀ.ದೂರಗಳ ಎರಡು ತಾಣಗಳಲ್ಲಿ ಖರೀದಿಸಿದ್ದಾರೆ. 2022 ಮತ್ತು 2024ರಲ್ಲಿ 4.04 ಕೋಟಿ ರುಪಾಯಿಗಳನ್ನು ಪಾವತಿಸಿ ನಡೆದಿರುವ ಖರೀದಿಯಿದು.

ಉತ್ತರಪ್ರದೇಶದ ಗೃಹಕಾರ್ಯದರ್ಶಿ ಸಂಜೀವ್ ಗುಪ್ತ ಅವರ ಪತ್ನಿ ಚೇತನಾ ಗುಪ್ತ 14 ಕಿ.ಮೀ.ದೂರದಲ್ಲಿ 35.92 ಲಕ್ಷ ರುಪಾಯಿಗಳಿಗೆ 253 ಚದರಗಜಗಳಷ್ಟು ಜಮೀನನ್ನು ಖರೀದಿಸಿದ್ದಾರೆ. ಆಕೆ ಅದನ್ನು ಮಾರಾಟ ಮಾಡಿದ್ದಾರೆ ಎಂದು ಸಂಜೀವ್ ಗುಪ್ತ ತಿಳಿಸಿದ್ದಾರೆ.

ಉತ್ತರಪ್ರದೇಶದ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ಅರವಿಂದ ಕುಮಾರ್ ಪಾಂಡೆ ಮತ್ತು ಅವರ ಪತ್ನಿ ಮಮತಾ ಅವರು ಏಳು ಕಿ.ಮೀ.ದೂರದಲ್ಲಿ 1,051 ಚದರ ಗಜಗಳಷ್ಟು ಜಮೀನನ್ನು 64.57 ಲಕ್ಷ ರುಪಾಯಿಗಳಿಗೆ ಖರೀದಿಸಿದ್ದಾರೆ. ಭ್ರಷ್ಟಾಚಾರದ ಆಪಾದನೆಯ ಮೇರೆಗೆ ಪಾಂಡೆ ಅಮಾನತಿನಲ್ಲಿದ್ದಾರೆ. ಪತ್ನಿ ಮಮತಾ ಬಿಜೆಪಿಯ ನಾಯಕಿ. 2022ರಲ್ಲಿ ಅಯೋಧ್ಯೆಯಲ್ಲಿ ತೆರೆಯಲಾದ ‘ರಾಮಾಯಣ’ ಹೊಟೇಲಿನ ವ್ಯವಸ್ಥಾಪಕ ನಿರ್ದೇಶಕಿ. ಖರೀದಿಸಿರುವ ಜಮೀನು ಹೊಟೇಲ್ ಪಕ್ಕದಲ್ಲಿದೆ. ಹೊಟೇಲ್ ವಿಸ್ತರಣೆಗೆಂದು ಖರೀದಿ ಮಾಡಿದ್ದೆವು ಎಂದು ಅರವಿಂದ ಕುಮಾರ್ ಪಾಂಡೆ ತಿಳಿಸಿದ್ದಾರೆ.

Ayodhya map investigation 1
ರಾಮಮಂದಿರದ 15ಕಿಲೋಮೀಟರ್‌ ವ್ಯಾಪ್ತಿಯಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಖರೀದಿಸಿದ ಭೂಮಿ

ಭಾರತೀಯ ರೇಲ್ವೆಯ ಡೆಪ್ಯೂಟಿ ಚೀಫ್ ಎಂಜಿನಿಯರ್ ಮಹಾಬಲ ಪ್ರಸಾದ್ ಅವರ ಮಗ ಅನ್ಶುಲ್ ಏಳು ಕಿ.ಮೀ.ದೂರದಲ್ಲಿ 0.034 ಹೆಕ್ಟೇರ್ ಕೃಷಿ ಜಮೀನನ್ನು ಮತ್ತೊಬ್ಬ ವ್ಯಕ್ತಿಯ ಜೊತೆಗೂಡಿ 24 ಲಕ್ಷ ರುಪಾಯಿಗೆ ಖರೀದಿಸಿದ್ದಾರೆ.

ಅಲೀಗಢದ ಹೆಚ್ಚುವರಿ ಪೊಲೀಸ್ ಸೂಪರಿಂಟಿಂಡೆಂಟ್ ಪಲಾಶ್ ಬನ್ಸಲ್ ಅವರ ತಂದೆ ದೇಶರಾಜ್ ಬನ್ಸಲ್ ಭಾರತೀಯ ಅರಣ್ಯ ಸೇವೆಯ ನಿವೃತ್ತ ಅಧಿಕಾರಿ. 15 ಕಿ.ಮೀ.ದೂರದಲ್ಲಿ 178.103 ಕಿ.ಮೀ.ಗಳಷ್ಟು ವಸತಿ ಜಮೀನನ್ನು ಈಶ್ವರ್ ಬನ್ಸಲ್ ಜೊತೆಗೂಡಿ 67.68 ಲಕ್ಷ ರುಪಾಯಿಗಳಿಗೆ ಖರೀದಿಸಿದ್ದಾರೆ. ಈಶ್ವರ್ ಬನ್ಸಲ್ 2013ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದವರು. ಪಲಾಶ್ ಬನ್ಸಲ್ 2022ರ ಮೇ ತನಕ ಅಯೋಧ್ಯೆಯಲ್ಲಿ ಐಪಿಎಸ್ ಅಧಿಕಾರಿ ಆಗಿದ್ದರು.
ಅಮೇಠಿಯ ಎಸ್.ಪಿ. ಅನೂಪ್ ಕುಮಾರ್ ಸಿಂಗ್ ಎಂಬ ಮತ್ತೊಬ್ಬ ಐ.ಪಿ.ಎಸ್. ಅಧಿಕಾರಿಯ ಪತ್ನಿಯ ತಂದೆ ತಾಯಿ ಶೈಲೇಂದ್ರ ಸಿಂಗ್ ಮತ್ತು ಮಂಜು ಸಿಂಗ್ ಅವರು ಜಂಟಿಯಾಗಿ ಒಂಬತ್ತು ಕಿ.ಮೀ.ದೂರದಲ್ಲಿ 20 ಲಕ್ಷ ರುಪಾಯಿಗಳಿಗೆ 4 ಹೆಕ್ಟೇರುಗಳಷ್ಟು ಕೃಷಿ ಜಮೀನು ಖರೀದಿಸಿದ್ದಾರೆ. ತಮಗೂ ಈ ಖರೀದಿಗೂ ಯಾವುದೇ ಸಂಬಂಧ ಇಲ್ಲವೆಂದು ಅನೂಪ್ ಕುಮಾರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಉತ್ತರಪ್ರದೇಶದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಯಶಪಾಲ್ ಸಿಂಗ್ 14 ಕಿ.ಮೀ.ದೂರದಲ್ಲಿ 132.7137 ಚದರಗಜಗಳಷ್ಟು ವಸತಿ ಜಮೀನನ್ನು 73 ಲಕ್ಷ ರುಪಾಯಿ ನೀಡಿ ಖರೀದಿಸಿದ್ದಾರೆ. ಇವರ ಪತ್ನಿ ಗೀತಾ ಸಿಂಗ್ ಅವರು ಬಲರಾಂಪುರದ ಮಾಜಿ ಶಾಸಕಿ (ಸಮಾಜವಾದಿ ಪಾರ್ಟಿ).

ಭಾರತೀಯ ರೇಲ್ವೆಯ ಚೀಫ್ ಪರ್ಸನಲ್ ಆಫೀಸರ್ ಅನುರಾಗ್ ತ್ರಿಪಾಠಿ ಅವರ ತಂದೆ ಮದನಮೋಹನ ತ್ರಿಪಾಠಿ 15 ಕಿ.ಮೀ.ದೂರದಲ್ಲಿ  1.57 ಹೆಕ್ಟೇರಿನಷ್ಟು ಕೃಷಿ ಜಮೀನು ಮತ್ತು 640 ಚದರ ಗಜಗಳಷ್ಟು ವಸತಿ ಜಮೀನನ್ನು 2.33 ಕೋಟಿ ರುಪಾಯಿಗಳನ್ನು ನೀಡಿ ಖರೀದಿಸಿದ್ದಾರೆ. ಈ ಪೈಕಿ 1.2324 ಹೆಕ್ಟೇರ್ ನಷ್ಟು ಜಾಗವನ್ನು 2023ರ ಮಾರ್ಚ್ ತಿಂಗಳಿನಲ್ಲಿ ತಾವು ಕಾರ್ಯದರ್ಶಿಯಾಗಿರುವ ವಿದ್ಯಾ ಗುರುಕುಲಂ ಎಜುಕೇಶನಲ್ ಟ್ರಸ್ಟ್ ಗೆ 3.98 ಕೋಟಿ ರುಪಾಯಿಗೆ ವರ್ಗಾಯಿಸಿದ್ದಾರೆ. ಶಾಲೆಯೊಂದನ್ನು ತೆರೆಯಲಿದ್ದೇನೆ ಎಂಬುದು ಅವರ ಹೇಳಿಕೆ.

ಉತ್ತರಪ್ರದೇಶದ ಬಿಜೆಪಿ ಶಾಸಕ ಅಜಯಸಿಂಗ್ ಅವರ ಸೋದರ ಕೃಷ್ಣಕುಮಾರ್ ಸಿಂಗ್ ತಮ್ಮ ಸೋದರ ಸಂಬಂಧಿ ಸಿದ್ಧಾರ್ಥ ಜೊತೆಗೂಡಿ ಎಂಟು ಕಿ.ಮೀ.ದೂರದಲ್ಲಿ ಸುಮಾರು ಅರ್ಧ ಹೆಕ್ಟೇರ್ ಕೃಷಿ ಜಮೀನನ್ನು 47 ಲಕ್ಷ ರುಪಾಯಿಗಳಿಗೆ ಖರೀದಿಸಿದ್ದಾರೆ. ತಮಗೂ ಈ ಜಮೀನು ಖರೀದಿಸಿದ ಸಂಸ್ಥೆಗೂ ಸಂಬಂಧ ಇಲ್ಲವೆಂದು ಶಾಸಕರು ತಿಳಿಸಿದ್ದಾರೆ.

ಹರಿಯಾಣ ಯೋಗ ಆಯೋಗದ ಅಧ್ಯಕ್ಷ ಜೈದೀಪ್ ಆರ್ಯ ಇತರೆ ನಾಲ್ವರ ಜೊತೆಗೂಡಿ ಆರು ಕಿ.ಮೀ.ದೂರದಲ್ಲಿ 3.035 ಹೆಕ್ಟೇರುಗಳನ್ನು 32 ಲಕ್ಷ ರುಪಾಯಿಗೆ ಖರೀದಿಸಿದ್ದಾರೆ. ಆರ್ಯ ಅವರು ಈ ಮೊದಲು ಬಾಬಾ ರಾಮದೇವ್ ಜೊತೆಗಿದ್ದವರು. ಯೋಗ ಆಯೋಗವು ಹರಿಯಾಣ ಸರ್ಕಾರ ರಚಿಸಿದ ಸಂಸ್ಥೆ. ಇತರೆ ನಾಲ್ವರ ಪೈಕಿ ರಾಕೇಶ್ ಮಿತ್ತಲ್ ಎಂಬವರು ಬಾಬಾ ರಾಮದೇವ್ ಅವರ ಭಾರತ ಸ್ವಾಭಿಮಾನ ಟ್ರಸ್ಟ್ ಜತೆಗಿದ್ದಾರೆ.

ಗೋಸಾಯಿಗಂಜ್ ನಗರ ಪಂಚಾಯಿತಿ ಅಧ್ಯಕ್ಷ ವಿಜಯಲಕ್ಷ್ಮೀ ಜೈಸ್ವಾಲ್ ಬಿಜೆಪಿಯವರು. ಇವರ ಸಂಬಂಧಿಕರಾದ ಮದನ್ ಜೈಸ್ವಾಲ್ ಅಯೋಧ್ಯೆಯ ನಿವಾಸಿ. ಕುಟುಂಬದ ಇತರೆ ಸದಸ್ಯರ ಜೊತೆಗೂಡಿ 7ರಿಂದ 12 ಕಿ.ಮೀ.ದೂರದಲ್ಲಿ 8.71 ಹೆಕ್ಟೇರುಗಳಷ್ಟು ಕೃಷಿ ಜಮೀನನ್ನು 1.3 ಕೋಟಿ ರುಪಾಯಿಗೆ ಖರೀದಿಸಿದ್ದಾರೆ.

ಅಮೇಠಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜೇಶ್ ಅಗ್ರಹಾರಿ ಬಿಜೆಪಿಯವರು. ಅವರದೇ ಆದ ಅಗ್ರಹಾರಿ ಮಸಾಲಾ ಉದ್ಯೋಗ್ ಲಿಮಿಟೆಡ್ ಹೆಸರಿನಲ್ಲಿ ಹತ್ತು ಕಿ.ಮೀ.ದೂರದಲ್ಲಿ 0.79 ಹೆಕ್ಟೇರಿನಷ್ಟು ಕೃಷಿ ಜಮೀನನ್ನು 8.35 ಕೋಟಿ ರುಪಾಯಿಗಳಿಗೆ ಖರೀದಿಸಿದ್ದಾರೆ. ಯಾತ್ರಾರ್ಥಿಗಳ ವಸತಿಗೆಂದು ಈ ಜಮೀನನ್ನು ಬಳಸಲಿದ್ದೇನೆ ಎನ್ನುತ್ತಾರೆ.

ಬಹುಜನ ಸಮಾಜ ಪಾರ್ಟಿಯ ಮಾಜಿ ಶಾಸಕ ಜಿತೇಂದ್ರ ಕುಮಾರ್ ಅಲಿಯಾಸ್ ಬಬಲೂ ಭಯ್ಯಾ ಅವರ ಸೋದರ ವಿನೋದ್ ಸಿಂಗ್ 8ರಿಂದ 15 ಕಿ.ಮೀ.ದೂರದಲ್ಲಿ 0.272 ಮತ್ತು 370 ಚದರಗಜಗಳಷ್ಟು ಜಮೀನನ್ನು ಖರೀದಿಸಿದ್ದಾರೆ.

ಬಿಜೆಪಿಯ ಮಾಜಿ ಶಾಸಕ ಚಂದ್ರಪ್ರಕಾಶ್ ಶುಕ್ಲಾ ಅವರು ಪಾಲುದಾರರಾಗಿರುವ ಟೈಮ್ ಸಿಟಿ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ 6 ಕಿ.ಮೀ.ದೂರದಲ್ಲಿ 1.34 ಹೆಕ್ಟೇರಿನಷ್ಟು ಕೃಷಿ ಜಮೀನನ್ನು ಖರೀದಿಸಿದೆ. 1,985.6 ಚದರ ಗಜಗಳಷ್ಟು ವಸತಿ ಜಮೀನನ್ನೂ 1.12 ಕೋಟಿ ರುಪಾಯಿಗಳಿಗೆ 2020-2023ರ ನಡುವೆ ಖರೀದಿಸಿದೆ. ಟೈಮ್ಸ್ ಸಿಟಿ ಕಂಪನಿಗೆ ತಾವು 2017ರಲ್ಲೇ ರಾಜೀನಾಮೆ ನೀಡಿದ್ದಾಗಿ ಶುಕ್ಲಾ ತಿಳಿಸಿದ್ದಾರೆ.
ಸಮಾಜವಾದಿ ಪಾರ್ಟಿಯ ಮಾಜಿ ಶಾಸಕ ರಾಕೇಶ್ ರಾಣಾ ಅವರ ಮಗ ರಿಶಭ್ 9 ಕಿ.ಮೀ.ದೂರದಲ್ಲಿ  0.42 ಹೆಕ್ಟೇರನ್ನು 25 ಲಕ್ಷ ರುಪಾಯಿಗೆ ಖರೀದಿಸಿದ್ದಾರೆ. ಶಾಸಕ ಅವಧಿಯ ನಂತರ ರಾಣಾ ಅವರನ್ನು ಅಶಿಸ್ತಿನ ಆಪಾದನೆಗಳ ಮೇರೆಗೆ ಪಕ್ಷದಿಂದ ಹೊರಹಾಕಲಾಯಿತು.

ಬಿ.ಎಸ್.ಪಿ. ಮಾಜಿ ಶಾಸಕ ಶ್ಯಾಮ್ ನಾರಾಯಣ ಸಿಂಗ್ ಅಲಿಯಾಸ್ ವಿನೀತ್ ಸಿಂಗ್ ಈಗ ಬಿಜೆಪಿಯಲ್ಲಿದ್ದಾರೆ. ಅವರ ಮಗಳು ಪ್ರಮೀಳಾ ಸಿಂಗ್ 12 ಕಿ.ಮೀ.ದೂರದಲ್ಲಿ 2,693.08 ಚದರ ಗಜಗಳಷ್ಟು ವಸತಿ ಜಮೀನನ್ನು 80 ಲಕ್ಷ ರುಪಾಯಿಗೆ ಖರೀದಿಸಿದ್ದಾರೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಮಾತ್ರವಲ್ಲ, ದೇಶದ ನಾನಾ ಭಾಗಗಳ ಟ್ರಸ್ಟುಗಳು, ರಿಯಲ್ ಎಸ್ಟೇಟ್ ಕುಳಗಳು ಅಯೋಧ್ಯೆಯಲ್ಲಿ ಜಮೀನು ಖರೀದಿಸಿವೆ. ಅದಾನಿ ಗ್ರೂಪ್ ನಿಂದ ಲೋಧಾ ಹೌಸ್ ಕೂಡ ಈ ಪಟ್ಟಿಯಲ್ಲಿ ಸೇರಿವೆ.

Gautam Adani House Address Delhi

ಹೌಸ್ ಆಪ್ ಅಭಿನಂದನ್ ಲೋಧಿ (ಎಚ್.ಓ.ಎ.ಬಿ.ಎಲ್) ಮುಂಬಯಿ ಎಂಬ ರಿಯಲ್ ಎಸ್ಟೇಟ್ ಕಂಪನಿ 12 ಕಿ.ಮೀ.ದೂರದಲ್ಲಿ ಸರಯೂ ನದಿ ತೀರದಲ್ಲಿ 25.27 ಎಕರೆಗಳಷ್ಟು ಜಮೀನನ್ನು 105.39 ಕೋಟಿ ರುಪಾಯಿಗೆ ಖರೀದಿಸಿದೆ. ಮಹಾರಾಷ್ಟ್ರದ ಸಚಿವ ಮಂಗಳ ಪ್ರಭಾತ್ ಲೋಧಾ ಅವರ ಮಗ ಅಭಿನಂದನ್ ಲೋಧಿ.  ಗೌಹಾಟಿ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗುಮನ್ ಮಲ್ ಲೋಧಾ ಅವರ ಮೊಮ್ಮಗ. ಗುಮನ್ ಮಲ್ ಲೋಧಾ ಬಿಜೆಪಿ ಸಂಸದರಾಗಿದ್ದರು. ರಾಮಮಂದಿರ ಆಂದೋಲನದ ಮುಂಚೂಣಿಯಲ್ಲಿದ್ದವರು.

ಅದಾನಿ ಗ್ರೂಪ್, ರಾಮಮಂದಿರಕ್ಕೆ ಆರು ಕಿ.ಮೀ.ದೂರದಲ್ಲಿ ಮೂರೂವರೆ ಕೋಟಿ ರುಪಾಯಿಗೆ ಒಂದೂವರೆ ಎಕರೆ ಜಮೀನನ್ನು ಖರೀದಿಸಿದೆ. ಕರ್ನಾಟಕದ ವ್ಯಕ್ತಿ ವಿಕಾಸ ಕೇಂದ್ರ ಎಂಬ ಟ್ರಸ್ಟ್ ಕೂಡ ಮಂದಿರಕ್ಕೆ ಆರು ಕಿ.ಮೀ.ದೂರದಲ್ಲಿ ಐದೂವರೆ ಹೆಕ್ಟೇರುಗಳನ್ನು ಖರೀದಿಸಿದೆ. ಈ ಟ್ರಸ್ಟು ಶ್ರೀ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಗೆ ಸೇರಿದ್ದು. ದೆಹಲಿಯ ಗಲ್ಗೋಟಿಯಾ ಹೊಟೇಲ್ ಅಂಡ್ ರೆಸಾರ್ಟ್ಸ್ ಕಂಪನಿಯು ಮಂದಿರದಿಂದ ಎಂಟು ಕಿ.ಮೀ.ದೂರದಲ್ಲಿ 3,432 ಚದರ ಗಜಗಳಷ್ಟು ಜಮೀನನ್ನು ಏಳೂವರೆ ಕೋಟಿಗೆ ಖರೀದಿಸಿದೆ.

ಇನ್ನೋವೇಟರ್ಸ್ ಡಿಜಿಟಲ್ ಆಡ್ಸ್ 14 ಕಿ.ಮೀ ದೂರದಲ್ಲಿ 20,030 ಚದರ ಗಜಗಳಷ್ಟು ಜಮೀನನ್ನು 29 ಕೋಟಿ ರುಪಾಯಿಗಳಿಗೆ ಖರೀದಿಸಿದೆ. ಸಮಾಜವಾದಿ ನಾಯಕ ಸಾಲೀಗ್ರಾಮ ಜೈಸ್ವಾಲ್ ಅವರ ಮೊಮ್ಮಗ ಮಯಂಕ್ ಜೈಸ್ವಾಲ್ ಈ ಕಂಪನಿಯ ಒಡೆಯ. ಪಂಚತಾರಾ ಹೊಟೆಲು ನಿರ್ಮಿಸಲು ಈಗಾಗಲೆ ಆರಂಭಿಸಿದ್ದಾರೆ.

ಕರ್ನಾಟಕದ ಸವಾರ್ಥಿಯಾ ಡೆವೆಲಪರ್ಸ್ ಕಂಪನಿ ರಾಮಮಂದಿರದಿಂದ ಏಳೆಂಟು ಕಿ.ಮೀ.ದೂರದಲ್ಲಿ 12.82 ಹೆಕ್ಟೇರುಗಳಷ್ಟು ಕೃಷಿ ಜಮೀನನ್ನು, 1,100 ಚದರ ಗಜಗಳಷ್ಟು ವಸತಿ ಜಮೀನನ್ನು ಹಾಗೂ 3,638 ಚದರಗಜಗಳಷ್ಟು ಕೈಗಾರಿಕೆ ಜಮೀನನ್ನು ಖರೀದಿಸಿದೆ. ಧರ್ಮಶಾಲೆ ಮತ್ತು ವಸತಿ ವಿಲ್ಲಾಗಳನ್ನು ಕಟ್ಟಿಸುವ ಉದ್ದೇಶವನ್ನು ಕಂಪನಿ ಪ್ರಕಟಿಸಿದೆ.

ಉತ್ತರಪ್ರದೇಶದ ರಾಮಕುಲಂ ರೀಜೆನ್ಸಿ 6-10 ಕಿ.ಮೀ.ದೂರದಲ್ಲಿ 5.0553 ಹೆಕ್ಟೇರುಗಳಷ್ಟು ಕೃಷಿ ಭೂಮಿಯನ್ನು ಖರೀದಿಸಿದೆ. ಉತ್ತರಪ್ರದೇಶದ ಶ್ರೀ ರಾಮಜಯಂ ಆಸ್ಪೈರ್ ಕಂಪನಿಯು 16 ಕಿ.ಮೀ.ದೂರದಲ್ಲಿ 5.60 ಕೋಟಿ ರುಪಾಯಿಗೆ 1.48 ಹೆಕ್ಟೇರುಗಳ ಕೃಷಿ ಮತ್ತು 3,726.9 ಚದರಗಜಗಳಷ್ಟು ವಸತಿ ಜಮೀನನ್ನು ಖರೀದಿಸಿದೆ.

ರಾಷ್ಟ್ರೀಯ ರಾಜಧಾನಿ ಕ್ಷೇತ್ರದ ತ್ರಿವೇಣಿ ಟ್ರಸ್ಟ್ 5.91 ಕೋಟಿ ರುಪಾಯಿಗೆ ಒಂಬತ್ತು ಕಿ.ಮೀ.ದೂರದಲ್ಲಿ 2.1 ಹೆಕ್ಟೇರು ಜಮೀನು ಖರೀದಿಸಿದೆ. ಮಹಾರಾಷ್ಟ್ರದ ಎಬಿಎಂಎಂ ಮಾಹೇಶ್ವರಿ ಫೌಂಡೇಶನ್ ರಾಮಮಂದಿರದಿಂದ ಎಂಟು ಕಿ.ಮೀ.ದೂರದಲ್ಲಿ ಜಮೀನು ಖರೀದಿಸಿದೆ. ನಮ್ಮ ಸಮಾಜಕ್ಕಾಗಿ ಟ್ರಸ್ಟ್ ಮೂಲಕ ಕಟ್ಟಡ ಕಟ್ಟಿಸುತ್ತೇವೆ ಎಂದಿದ್ದಾರೆ ವ್ಯಾಪಾರೋದ್ಯಮಿ ಶ್ಯಾಮಸುಂದರ್ ಮದನಲಾಲ್ ಸೋನಿ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X