ಭಾರತದ ಮಾಧ್ಯಮಗಳ ʼಆತ್ಮʼ ಯಾವ ಪರಿ ಕೊಳೆತಿದೆ ಎಂಬುದಕ್ಕೆ ಲೇಟೆಸ್ಟ್ ಉದಾಹರಣೆ. ಈಗ ಎರಡು ದಿನಗಳಿಂದ ದೇಶದಾದ್ಯಂತ ಎಲ್ಲ ಪ್ರಮುಖ ಪತ್ರಿಕೆಗಳೂ ವರದಿ ಮಾಡಿರುವ ʼದಕ್ಷಿಣ ಕೊರಿಯಾದ ರೋಬೊಟ್ ಆತ್ಮಹತ್ಯೆʼ ಸುದ್ದಿ. ಹೀಗೆ ಕೊಳೆತ ʼಆತ್ಮಗಳುʼ ಅದೇ ರೊಬೊ ರೀತಿಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದು ಕೂಡ ಸಾಧ್ಯವಾಗುವುದಿಲ್ಲವಲ್ಲಾ ಎಂಬುದು ಸದ್ಯಕ್ಕೆ ನನ್ನ ವ್ಯಥೆ!
ನನ್ನ ತಮ್ಮ, ಕಲಾವಿದ ತಲ್ಲೂರು ಎಲ್ ಎನ್ ಕೊರಿಯಾ ವಾಸಿ. ಆತ ವಾಸವಿರುವ ದಕ್ಷಿಣ ಕೊರಿಯಾದ ದೆಗು ನಗರ. ಈ ರೊಬೊ ಆತ್ಮಹತ್ಯೆ ಸಂಭವಿಸಿರುವ ʼಗುಮೆʼ ಪಟ್ಟಣದಿಂದ ಹದಿನೈದು ಕಿ.ಮೀ. ದೂರದಲ್ಲಿದೆ. ಹಾಗಾಗಿ, ನಾನು ಆತನ ಬಳಿ ಏನದು ಆತ್ಮಹತ್ಯೆಯ ಮಹಾಸುದ್ದಿ ಎಂದು ಕೇಳಿದಾಗ, ಆತ ಅಲ್ಲಿನ ವೆಬ್ ಪತ್ರಿಕೆಗಳ ಸುದ್ದಿಗಳನ್ನೆಲ್ಲ ಕಳುಹಿಸಿಕೊಟ್ಟಿದ್ದಾನೆ. ಅವನ್ನು ಭಾಷಾಂತರಿಸಿ ಓದಿದಾಗ ಸಿಕ್ಕಿದ ಮಾಹಿತಿ ಇಷ್ಟು:
ಗುಮೆ ಪಟ್ಟಣದ ನಗರಪಾಲಿಕೆಯ ಕಚೇರಿ ನಾಲ್ಕು ಮಹಡಿಗಳದಾಗಿದ್ದು, ಅಲ್ಲಿ ಕಳೆದ ವರ್ಷ ಆಗಸ್ಟ್ ತಿಂಗಳಿನಿಂದೀಚೆಗೆ, ಅಮೆರಿಕ ನಿರ್ಮಿತ (ಸಿಲಿಕಾನ್ ವ್ಯಾಲಿಯ ಬೇರ್ ರೊಬೊಟಿಕ್ಸ್ ಉತ್ಪಾದಕ ಸಂಸ್ಥೆ) ರೊಬೊ ಒಂದನ್ನು ತಿಂಗಳಿಗೆ ಎರಡು ಮಿಲಿಯ ವನ್ (ತಿಂಗಳಿಗೆ ಅಂದಾಜು 12 ಲಕ್ಷ ರೂ.) ಮೊತ್ತದಲ್ಲಿ ಬಾಡಿಗೆಗೆ ಪಡೆದಿದ್ದರು. ಕಡತಗಳನ್ನು ಮೇಜಿನಿಂದ ಮೇಜಿಗೆ ಸಾಗಿಸುವ ಜವಾನರ ಕೆಲಸಗಳಿಗೆ ಸಾಮಾನ್ಯವಾಗಿ ರೋಬೊ ಬಳಸುವ ಕೊರಿಯಾದಲ್ಲಿ ಇಲ್ಲಿಯ ತನಕ ಒಂದೇ ಫ್ಲೋರಿನಲ್ಲಿ ತಿರುಗಾಡುವ ರೊಬೊಗಳಿದ್ದು, ಈ ಹೊಸ ರೋಬೊ AI ಆಧರಿಸಿ ಕೆಲಸ ಮಾಡುವಂತಹದು. (ಅದರ ಸಂಪೂರ್ಣ ಉಪಯೋಗ ಪಡೆಯುವ ಬದಲು), ಅದು ತಾನೇ ಲಿಫ್ಟ್ ಬಳಿ ಹೋಗಿ, ಬೇಕಾದ ಫ್ಲೋರ್ ನಂಬರ್ ಒತ್ತಿ ಅಲ್ಲಿಗೆ ಹೋಗಿ ಕಡತ ಕೊಟ್ಟು ಬರಬಲ್ಲ ಸಾಮರ್ಥ್ಯ ಹೊಂದಿದ್ದುದರಿಂದ, ಕೇವಲ ಆ ಕೆಲಸಕ್ಕೆ ಅದನ್ನು ಬಳಸಲಾಗುತ್ತಿತ್ತು. ನಗರಪಾಲಿಕೆ ಅದನ್ನು ಬಳಸುತ್ತಿರುವುದರಿಂದ, ಅದಕ್ಕೂ ಒಂದು ಸಿಬ್ಬಂದಿ ಸಂಖ್ಯೆ, ಗುರುತು ಬ್ಯಾಡ್ಜ್ ಎಲ್ಲ ಇತ್ತು. ಅದು ಬೆಳಗ್ಗೆ 9.00ರಿಂದ ಸಂಜೆ 6.00ರ ತನಕ ಕಚೇರಿ ಅವಧಿಯಲ್ಲಿ ಸೇವೆ ಸಲ್ಲಿಸುತ್ತಿತ್ತು.

ರಿಮೋಟ್ ನಿಯಂತ್ರಿತವಾದ ಈ ರೊಬೊ ಘಟನೆಯ ದಿನ, ಲಿಫ್ಟ್ ಬಳಿ ಸಾಗುವಾಗ ತಾಂತ್ರಿಕ ತೊಂದರೆಯಿಂದಾಗಿ ಅಲ್ಲೇ ಗರಗರನೆ ತಿರುಗಿ, ಸ್ಟೇರ್‌ಕೇಸಿನ ಒಂದು ಫ್ಲೈಟ್ ಕೆಳಗೆ (ಸುಮಾರು 2ಮೀ) ಬಿದ್ದಿತ್ತು. ಸಾಮಾನ್ಯವಾಗಿ ಚಲಿಸಬಲ್ಲ ರೊಬೊಗಳಿಗೆ ಬಿದ್ದರೂ ಏಳುವ ಸಾಮರ್ಥ್ಯ ಇರುತ್ತದೆ. ಆ ಕೆಲಸಕ್ಕಲ್ಲದ ರೊಬೊ ಇಲ್ಲಿ ಚಲನೆಗೆ ಬಳಕೆ ಆದದ್ದರಿಂದ ಎಲ್ಲೋ ಲೆಕ್ಕಾಚಾರ ತಪ್ಪಿ ಬಿದ್ದು, ತನ್ನ ಭಾರದ ಕಾರಣಕ್ಕೆ ಪುಡಿಪುಡಿ ಆಯಿತು.
ಹೆಚ್ಚಿನಂಶ ಇದನ್ನು ಮೊದಲು ವರದಿ ಮಾಡಿದ್ದು, ದೆಗು ನಗರದ ಒಂದು ವೆಬ್‌ಸೈಟ್. Idaegu ಡಾಟ್ ಕಾಂ ಹೆಸರಿನ ಆ ವೆಬ್‌ಸೈಟ್ ವರದಿಗಾರ ರೂ ಸಿಯಾಂಗ್ ವೂಕ್ ಅವರು 20ರಂದು ಸಂಭವಿಸಿದ ಈ ಘಟನೆಯನ್ನು 23ಕ್ಕೆ ವರದಿ ಮಾಡುವಾಗ, ವರದಿಯಲ್ಲಿ ಒಂದು ʼರೂಪಕವಾಗಿʼ, ಕೆಲಸ ಜಾಸ್ತಿ ಆದದ್ದರಿಂದ ಮೆಟ್ಟಿಲುಗಳಿಂದ ಕೆಳಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಮಾಷೆ ಮಾಡಿದ್ದರು!
ಈ ಕುರಿತು ಸ್ಥಳೀಯವಾಗಿ, ಸೋಷಿಯಲ್ ಮೀಡಿಯಾಗಳಲ್ಲಿ, ಅದು ಕೆಲಸ ಜಾಸ್ತಿ ಆಗಿ ಆತ್ಮಹತ್ಯೆ ಮಾಡಿಕೊಂಡಿತೆಂಬ ತಮಾಷೆಯ ಚರ್ಚೆ ಶುರು ಆಗಿತ್ತು. ಈ ತಮಾಷೆಗೆ ಕಾರಣ, ಕೊರಿಯಾ ವ್ಯಾಪಕವಾಗಿ ರೊಬೊಗಳನ್ನು ಬಳಸುತ್ತಿದ್ದು, ಪ್ರತೀ ಹತ್ತು ಜನರಿರುವ ಕಚೇರಿಯಲ್ಲಿ ಒಂದು ರೋಬೋದ ಅನುಪಾತದಲ್ಲಿ ಅಲ್ಲಿ ರೊಬೊ ಬಳಕೆ ಆಗುತ್ತಿದೆ. ಈ ಎಲ್ಲ ತಮಾಷೆಯನ್ನು ಕಂಡು, ಫ್ರೆಂಚ್ ಸುದ್ದಿಸಂಸ್ಥೆ AFP ಮೊದಲಿಗೆ ಹೆಕ್ಕಿ, ಇದನ್ನು ಜಾಗತಿಕ ಸುದ್ದಿ ಮಾಡಿತು. ಫ್ರಾನ್ಸ್‌ನಲ್ಲಿ ಹರಡಿದ ಈ ಸುದ್ದಿ, ಅಲ್ಲಿಂದ ಅಮೆರಿಕ ತಲುಪಿ, ಅಲ್ಲಿಂದ ಭಾರತಕ್ಕೆ ಬರುವ ಹೊತ್ತಿಗೆ ʼಸು ಅಂದ್ರೆ ಸುಕ್ರುಂಡೆʼ ಆಗಿಬಿಟ್ಟಿದೆ! ಕೊರಿಯಾದ ಯಾವುದೇ ಪ್ರಮುಖ ಪತ್ರಿಕೆ ಈ ಕುರಿತು ಇನ್ನೂ ಸುದ್ದಿ ಮಾಡಿಲ್ಲ!
ನಾನೆಲ್ಲಾದರೂ ನನ್ನ ಮನೆಯ ಫ್ಯಾನ್ ಹಾಳಾದರೆ, ಅದು ʼಆತ್ಮಹತ್ಯೆ ಮಾಡಿಕೊಂಡಿತುʼ ಎಂದು ಎಲ್ಲಾದರೂ ತಮಾಷೆಯ ಫೇಸ್ ಬುಕ್ ಪೋಸ್ಟ್ ಹಾಕಿದರೂ ಕಷ್ಟ ಮಾರಾಯ್ರೆ. ಈ ನಮ್ಮ ಡಿಯರ್ ಮೀಡಿಯಾ ʼಭಾರತದಲ್ಲಿ ಫ್ಯಾನ್ ಆತ್ಮಹತ್ಯೆʼ ಸುದ್ದಿ ಮಾಡಿದರೆ ಅಚ್ಚರಿ ಇಲ್ಲ. ಜೊತೆಗೆ, ಫ್ಯಾನಿಗೆ ಹೆಚ್ಚಿನ ಕೆಲಸ ಕೊಟ್ಟದ್ದಕ್ಕಾಗಿ ರಾಜಾರಾಂ ತಲ್ಲೂರು ವಿರುದ್ಧ ಹೊಸ BNS ಕಾಯಿದೆಯಡಿ ಏನಾದರೂ ಸೆಕ್ಷನ್ ಹುಡುಕಿ, FIR ದಾಖಲಿಸಿದರೂ ಅಚ್ಚರಿ ಪಡಬೇಕಿಲ್ಲ. ಇಂತಹ ಮಾಧ್ಯಮಗಳನ್ನು ಪಡೆದ ನಾವೇ ಧನ್ಯರು. ಅದ್ಯಾವುದೋ ಹಳೆಯ ರಜನೀಕಾಂತ್ ಸಿನಿಮಾ ನೋಡಿ ಸುದ್ದಿಮನೆಗೆ ಬಂದು ಕುಳಿತವರೇ ಹೆಚ್ಚಿರುವಾಗ ಬೇರೆ ʼಸ್ವಯ ಇರುವʼ ಸುದ್ದಿಗಾರರನ್ನು ನಿರೀಕ್ಷಿಸುವುದು ಹೇಗೆ?
2017ರಲ್ಲಿ ಅಮೆರಿಕದಲ್ಲೂ ಇಂತಹದೇ ಒಂದು ರೊಬೊ ಆತ್ಮಹತ್ಯೆ ಸುದ್ದಿ, ಟ್ವಿಟ್ಟರ್‌ನಲ್ಲಿ ವ್ಯಾಪಕವಾಗಿ ʼಸೆಟೈರಿಕಲ್ʼ ಚರ್ಚೆ ಆಗಿತ್ತು.
(ಚಿತ್ರ: ಸದ್ರಿ ರೊಬೊ ಅಲ್ಲಿ ಕಳೆದ ಆಗಸ್ಟಿನಲ್ಲಿ ಉದ್ಘಾಟನೆ ಆದ ಚಿತ್ರ ಹಾಗೂ ಅದು ಬಿದ್ದು ಪುಡಿ ಆಗಿರುವ ಚಿತ್ರ. ಸೌಜನ್ಯ: ಯೊನಾಪ್ ನ್ಯೂಸ್, ದ. ಕೊರಿಯಾ)

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).