ಸಂತ ಜೋಸೆಫರ ವಿಶ್ವವಿದ್ಯಾಲಯವು ಇದೇ ಆಗಸ್ಟ್ 21ರಂದು ತನ್ನಲ್ಲಿ ನಡೆಯಲಿರುವ ಸಮಾರಂಭವೊಂದಕ್ಕೆ ಇಸ್ರಯೇಲ್‍ನ ರಾಯಭಾರಿ ಕಚೇರಿಯ ಉನ್ನತ ಅಧಿಕಾರಿ, ದಕ್ಷಿಣ ಭಾರತದಲ್ಲಿ ಆ ದೇಶದ ಕೋನ್ಸಲ್ ಜನರಲ್, ಆಗಿರುವ ಟ್ಯಾಮಿ ಬೆನ್-ಹೆಯ್ಮ್ (Tammy Ben-Haim) ಅವರನ್ನು ಮುಖ್ಯ ಅತಿಥಿಯಾಗಿರಲು ಆಹ್ವಾನಿಸಿದ್ದನ್ನು ಪ್ರಜ್ಞಾವಂತ ಸಾರ್ವಜನಿಕರು, ಸಂಘಸಂಸ್ಥೆಗಳು ವಿರೋಧಿಸುತ್ತಿವೆ. ಆ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ಅಧ್ಯಾಪಕ ವರ್ಗವೂ ಅದನ್ನು ವಿರೋಧಿಸಿದೆ. ಆದ್ದರಿಂದ, ಹೆಯ್ಮ್ ಅವರ ಹೆಸರನ್ನು ಆಹ್ವಾನ ಪತ್ರಿಕೆಯಿಂದ ಕೈಬಿಡಲಾಗಿದೆ. ಆದರೆ, ಇಲ್ಲಿ ಕೆೇಳಬೆೇಕಾದ ಪ್ರಶ್ನೆ ಇದು. ಪ್ರತಿಷ್ಠಿತವೂ, ಗೌರವಾನ್ವಿತವೂ ಆದ ಇಂಥ ವಿಶ್ವವಿದ್ಯಾಲಯಕ್ಕೆ ಇಸ್ರಯೇಲಿನ ಈ ರಾಯಭಾರಿ-ಪ್ರತಿನಿಧಿಯನ್ನು ಆಹ್ವಾನಿಸುವ ದುರಾಲೋಚನೆ ಬಂದದ್ದಾದರೂ ಯಾಕೆ? ಈ ವಿಷಯದಲ್ಲಿ ಕವಿ-ನಾಟಕಕಾರ-ರಂಗನಿರ್ದೇಶಕ ರಘುನಂದನ ಅವರು ಬರೆದ ಲೆೇಖನವನ್ನು ಇಲ್ಲಿ ಕೆೊಡುತ್ತಿದ್ದೇವೆ.
ಬೆಂಗಳೂರಿನ ಸಂತ ಜೋಸೆಫರ ವಿಶ್ವವಿದ್ಯಾಲಯವು ಇದೇ ಆಗಸ್ಟ್ 21ರಂದು ತನ್ನಲ್ಲಿ ನಡೆಯಲಿರುವ ಸಮಾರಂಭವೊಂದಕ್ಕೆ ಇಸ್ರಯೇಲ್‍ನ ರಾಯಭಾರಿ ಕಚೇರಿಯ ಉನ್ನತ ಅಧಿಕಾರಿ, ದಕ್ಷಿಣ ಭಾರತದಲ್ಲಿ ಆ ದೇಶದ ಕೋನ್ಸಲ್ ಜನರಲ್, ಆಗಿರುವ ಟ್ಯಾಮಿ ಬೆನ್-ಹೆಯ್ಮ್ (Tammy Ben-Haim) ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದನ್ನು ಸಾರುವ ಒಂದು ಪೋಸ್ಟರ್ ಅಂತರ್ಜಾಲದಲ್ಲಿ ಬಿತ್ತರಗೊಳ್ಳುತ್ತಿದೆ. ಬಹಳ ಜನರಲ್ಲಿ ದಿಗ್ಭ್ರಾಂತಿ ಮೂಡಿಸಿದೆ.
ಪ್ಯಾಲೆಸ್ತೀನ್‌ನ ಗಾಜಾ಼ ಪ್ರದೇಶದಲ್ಲಿ ಕಳೆದ ಹತ್ತು ತಿಂಗಳಿಂದ ಇಸ್ರೇಲ್ ಬಾಂಬುಗಳನ್ನು ಸುರಿಯುತ್ತ ದೊಡ್ಡ ನರಮೇಧವನ್ನು ಕೈಗೊಂಡಿದೆ. 2023ರ ಅಕ್ಟೋಬರ್ 7ರಿಂದ ತೊಡಗಿ ಗಾಜಾ಼ ಪಟ್ಟಿಯ ಮೇಲೆ, ಜೋರ್ಡನ್ ನದಿಯ ಪಶ್ಚಿಮ ತೀರ ಪ್ರದೇಶದ ಮೇಲೆ ಲಗಾಮಿಲ್ಲದೆ ನಡೆಯುತ್ತಿರುವ ಆ ಬಾಂಬು ದಾಳಿಗೆ ಸತ್ತವರ ಸಂಖ್ಯೆ ಕಡಿಮೆಯೆಂದರೂ ನಲವತ್ತು ಸಾವಿರಕ್ಕೂ ಹೆಚ್ಚು; ಆ ಪೈಕಿ ಬಲಿಯಾದ ಮಕ್ಕಳ, ಹಸುಳೆಯರ ಸಂಖ್ಯೆಯೇ ಸುಮಾರು ಹದಿನೇಳು ಸಾವಿರ. ವಿಶ್ವಸಂಸ್ಥೆಯ ಮುಖ್ಯಸ್ಥರು ಇಸ್ರೇಲಿಗೆ ಪದೇಪದೇ ಛೀಮಾರಿ ಹಾಕಿದ್ದಾರೆ; ಪ್ರಪಂಚದ ದೇಶಗಳೆಲ್ಲವೂ ಸೇರಿ ರಚಿಸಿಕೊಂಡಿರುವ ಅಂತಾರಾಷ್ಟ್ರೀಯ ನ್ಯಾಯಾಲಯವು ದೀರ್ಘವಾದ ವಿಚಾರಣೆಯನ್ನು ನಡೆಸುತ್ತ ಬಂದಿದ್ದು, ಇಸ್ರೇಲಿನ ಮೇಲೆ ಅಧಿಕೃತವಾಗಿ ನರಮೇಧದ ಆರೋಪವನ್ನು ಹೊರಿಸಲು ಸಜ್ಜಾಗುತ್ತಿದೆ.
ಗಾಜಾ಼ ಪಟ್ಟಿಯ ಜನ, ಜೀವನ, ಕಟ್ಟಡಗಳನ್ನು ಇಸ್ರೇಲ್ ಅಕ್ಷರಶಃ ನೆಲಸಮ ಮಾಡಲು ಹೊರಟಿದೆ. ಇಸ್ರೇಲಿನಲ್ಲಿಯೇ, ಅಲ್ಲಿನ ಹತ್ತಾರು ಸಾವಿರ ಪ್ರಜ್ಞಾವಂತರು ಬೀದಿಗಿಳಿದು ತಮ್ಮ ದೇಶದ ಕ್ರೌರ್ಯದ ವಿರುದ್ಧವೂ ತಮ್ಮ ಪ್ರಧಾನಿ ನೇತಾನ್ಯೇಹುವಿನ ಸರ್ವಾಧಿಕಾರಿತ್ವದ ಧೋರಣೆಯ ವಿರುದ್ಧವೂ ಪ್ರತಿಭಟಿಸುತ್ತ ಬಂದಿದ್ದಾರೆ; ಇಸ್ರಯೇಲ್ ದೇಶದ ಈ ಅತಿ ಕ್ರೂರ ಉದ್ಧಟತನಕ್ಕೆ ಬೆಂಬಲ, ಕುಮ್ಮಕ್ಕು ನೀಡುತ್ತ ಬಂದಿರುವ ಅಮೆರಿಕ, ಬ್ರಿಟನ್ ಮುಂತಾದ ದೇಶಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು, ಇತರ ನಾಗರಿಕರು ಈ ವಿಷಯದಲ್ಲಿ ಇಸ್ರೇಲ್‌ನ ವಿರುದ್ಧವೂ ತಮ್ಮದೇ ದೇಶಗಳ ಆಡಳಿತಗಾರರು ಹಾಗೂ ಆಳುವ ವರ್ಗದವರ ವಿರುದ್ಧವೂ ತಿರುಗಿಬಿದ್ದಿದ್ದಾರೆ.

ಅಸಲಿಗೆ, ಇಸ್ರೇಲ್ ಎಂಬ ರಾಷ್ಟ್ರಪ್ರಭುತ್ವ ಹಾಗೂ ಪಶ್ಚಿಮದ ಬಂಡವಾಳಿಗ ದೇಶಗಳ ಈ ಮಹಾಕ್ರೌರ್ಯವು ಇಂದು-ನಿನ್ನೆಯದಲ್ಲ, ಕೇವಲ ಈಚಿನದ್ದಲ್ಲ. ಪ್ಯಾಲಿಸ್ತೀನೀಯರ ಮೇಲೆ, ಪ್ಯಾಲಿಸ್ತೀನ್ ಎಂಬ ದೇಶದ ಮೇಲೆ, ಆ ದೇಶದ ಪರಿಕಲ್ಪನೆಯ ಮೇಲೆ ಈ ಘೋರ ಹಿಂಸಾಚಾರವು ಕಳೆದ ಎಪ್ಪತ್ತೈದು ವರ್ಷಗಳಿಂದ (ಹಾಗೆ ನೋಡಿದರೆ, ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ) ನಡೆಯುತ್ತ ಬಂದಿದೆ.
ಇಲ್ಲಿಯವರೆಗೆ ನಮ್ಮ ದೇಶದಲ್ಲಿ ಆಗಿಹೋದ ಸರ್ಕಾರಗಳು ನಮ್ಮದೇ ದೇಶದಲ್ಲಿ ಏನೆಲ್ಲ ಅನ್ಯಾಯ ಮಾಡಿದ್ದರೂ, ಕಡೇಪಕ್ಷ ವಿದೇಶಾಂಗ ನೀತಿಯಲ್ಲಿ ನ್ಯಾಯದ ಪರವಾದ ನಿಲುವನ್ನು ತಾಳುತ್ತ ಬಂದಿದ್ದವು. ಜಾಗತಿಕ ನ್ಯಾಯ-ನೀತಿ ಪ್ರಶ್ನೆ ಬಂದಾಗ ನಾವು ಯಾವತ್ತೂ ವರ್ಣಭೇದದ ವಿರುದ್ಧ, ವಸಾಹತುಶಾಹಿ ಹಿತಾಸಕ್ತಿಗಳ ವಿರುದ್ಧ ನಿಲ್ಲುವವರಾಗಿದ್ದೆವು; ಬಡದೇಶ-ವಂಚಿತ ದೇಶಗಳು ಮತ್ತು ಜನರ ಪರವಾಗಿ ನಿಲ್ಲುವ ದೇಶದವರಾಗಿದ್ದೆವು: ದಕ್ಷಿಣ ಆಫ್ರಿಕಾ ಹಾಗೂ ಆ ಖಂಡದ ಇತರ ದೇಶಗಳಾದ ಅಂಗೋಲಾ, ಕೆನ್ಯಾ, ಜಿ಼ಮ್ಬಾಬ್ವೇ, ಮೊಜಾ಼ಮ್ಬಿಕ್ ಹಾಗೂ ಅದೇ ಖಂಡದ ಈಜಿಪ್ಟ್, ಶೇಖ್ ಮುಜಿಬುರ್ ರೆಹಮಾನರ ಬಾಂಗ್ಲಾದೇಶ, ಫಿಡೆಲ್ ಕಾಸ್ಟ್ರೋ ಅವರ ಕ್ಯೂಬಾ – ಇಂಥ ದೇಶಗಳು ಮತ್ತು ದೇಶಗಳ ಜನರ ಜೊತೆ ನಾವು ಗಟ್ಟಿಯಾಗಿ ನಿಂತದ್ದರ ಕಥೆ ಇವತ್ತು ಯಾವುದೋ ಪ್ರಾಚೀನ ಕಾಲದಲ್ಲಿ ಆದದ್ದು ಎಂಬಂತೆ ಆಗಿದೆ; ಹಾಗಿದ್ದರೂ, ನಮಗೆ ಈಗಲೂ ಸ್ಫೂರ್ತಿ ನೀಡಬಲ್ಲುದಾಗಿದೆ.
ಆದರೆ, ತೀರ ದುಃಖ ಮತ್ತು ನೋವಿನ ಸಂಗತಿಯೆಂದರೆ, ಈ ಇಷ್ಟೂ ಕಾಲ (ಒಂದು ಶತಮಾನ –ಮುಕ್ಕಾಲು ಶತಮಾನದಿಂದ) ಪ್ಯಾಲೆಸ್ತೀನ್ ಮತ್ತು ಪ್ಯಾಲೆಸ್ತೀನೀಯರ ಪರವಾಗಿ ನಿಲ್ಲುತ್ತ ಬಂದಿರುವ ನಮ್ಮ ದೇಶದ ಅಧಿಕೃತ ನೀತಿ ಕಳೆದ ಹತ್ತು ವರ್ಷದಲ್ಲಿ ಬದಲಾಗಿದೆ. ಇವತ್ತು ಮೋದಿ-ಸಂಘ ಪರಿವಾರ-ಕಾರ್ಪೊರೇಟ್ ಬಂಡವಾಳಿಗರ ಹಿಡಿತದಲ್ಲಿರುವ ಭಾರತ ಸರ್ಕಾರವು ಇಸ್ರೇಲ್‌ನ ಅತಿ ನೆಚ್ಚಿನ ಸಂಗಾತಿ ಆಗಿದೆ. ಇದೀಗ, ಈ ವಿಷಯದಲ್ಲಿ ನಮ್ಮ ದೇಶ ಅಧರ್ಮ-ಅನೃತವನ್ನೂ, ರಕ್ಕಸತನವನ್ನೂ ಎತ್ತಿಹಿಡಿಯುವ ದೇಶವಾಗಿದೆ.
ಈ ವರದಿ ಓದಿದ್ದೀರಾ?: ಹಿಂಡೆನ್‌ಬರ್ಗ್–ಅದಾನಿ-ಸೆಬಿ ಪ್ರಕರಣ | ಅಕ್ರಮಗಳ ಬಗ್ಗೆ ಮಾತನಾಡಿದರೆ ದೇಶದ್ರೋಹವಾಗುತ್ತದೆಯೇ?
ಸಂತ ಜೋಸೆಫರ ವಿಶ್ವವಿದ್ಯಾಲಯವನ್ನು ನಡೆಸುತ್ತಿರುವವರಿಗೆ ಇದು ಯಾವುದೂ ಗೊತ್ತಿಲ್ಲದ ವಿಷಯವಾಗಿದೆ ಎಂದು ಹೇಳುವಂತಿಲ್ಲ. ಒಂದು ವೇಳೆ ಹಾಗೆ ಹೇಳುವಂತಿದ್ದರೆ, ಅದೊಂದು ವಿಶ್ವವಿದ್ಯಾಲಯವಲ್ಲ, ವಿಶ್ವ ಅವಿದ್ಯಾಲಯ ಎನ್ನಬೇಕಾದೀತು. ಆದರೆ, ಆ ವಿದ್ಯಾಸಂಸ್ಥೆ ತಾನು ವಿಶ್ವವಿದ್ಯಾಲಯದ ಪಟ್ಟವನ್ನು ಪಡೆಯುವುದಕ್ಕೆ ಮುಂಚಿನಿಂದಲೂ, ಹಲವು ಬಿಡಿ ಕಾಲೇಜುಗಳನ್ನು ನಡೆಸುವ ಸಂಸ್ಥೆಯಾಗಿದ್ದಾಗಿನಿಂದಲೂ ಬೆಂಗಳೂರಿನ, ರಾಜ್ಯದ ಹಾಗೂ ದೇಶದ ಪ್ರತಿಷ್ಠಿತ, ಗೌರವಾನ್ವಿತ ಸಂಸ್ಥೆಯಾಗಿ ಹೆಸರು ಮಾಡಿದೆ. ಸಂತ ಜೋಸೆಫರ ಕಾಲೇಜುಗಳು, ಶಾಲೆಗಳು ಎಂದರೆ ವಿಶ್ವಪ್ರಜ್ಞೆಯನ್ನು ಎತ್ತಿಹಿಡಿದು ವಿದ್ಯಾರ್ಥಿಗಳ ಮನಸ್ಸುಗಳನ್ನು ಅರಳಿಸುವ ಸಂಸ್ಥೆಯ ಅಂಗಗಳು ಎಂದೇ ನಾವೆಲ್ಲ ಇಷ್ಟು ದಶಕಗಳಿಂದ ಭಾವಿಸುತ್ತ ಬಂದಿದ್ದೇವೆ. ಆದರೆ, ಅಂಥ ನಮ್ಮ ಸಂಸ್ಥೆಯ ಮುಖ್ಯಸ್ಥರು ರಾಜಾರೋಷವಾಗಿ ನಿರಂತರ ನರಮೇಧ ನಡೆಸುತ್ತ ಬಂದಿರುವ, ನಾಟ್‍ಜೀ಼ಸಮಾನ ವರ್ಣಭೇದ ನೀತಿಯನ್ನು ಪಾಲಿಸುತ್ತಿರುವ ರಾಷ್ಟ್ರದ ಪ್ರತಿನಿಧಿಗೆ ಆದರದ ಕರೆಯೋಲೆ ಕೊಟ್ಟಿದ್ದಾರೆ ಎಂದರೆ, ಅದು ವಿಶ್ವ ಪ್ರಜ್ಞೆಯ ಮೇಲೆ ನಡೆಸಿದ ಪ್ರಹಾರ, ಸತ್ಯ, ಪ್ರೇಮ ಮತ್ತು ಕರುಣೆಯ ಮೂರ್ತಿ ಏಸುಪ್ರಭುವಿನ ಎದೆಗೆ ಇರಿದ ಚೂರಿ, ಆ ದೇವಪುತ್ರನಿಗೆ ತಾವಾಗಿ ಈಗ, ಮತ್ತೊಮ್ಮೆ, ವಿಧಿಸಿರುವ ಶಿಲುಬೆಯ ಮೇಲಿನ ಘೋರ ಯಾತನೆ.
ಮಹಾಪಾಪದ ಕೆಲಸ ಇದು, ಇವರು ಮಾಡಹೊರಟಿರುವುದು.
ತಾಯಿ ಮೇರಿ ಕಣ್ಣಲ್ಲಿ ನೀರು ತುಂಬಿಕೊಂಡು, ಗಂಟಲು ಕಟ್ಟಿ ಮಾತು, ಸದ್ದು, ಬಿಕ್ಕು ಏನೊಂದೂ ಹೊರಡದಷ್ಟು ದಿಗ್ಭ್ರಾಂತಳಾಗಿ ತನ್ನ ಮಗನ ಶಿಲುಬೆಯ ಕೆಳಗೆ ಕೂತಿದ್ದಾಳೆ.
ಸತ್ಯವೇದದ ಮಾತೆಲ್ಲಿ, ಸತ್ಯಮಾರ್ಗವೆಲ್ಲಿ, ಏಸುವಿನ ಶುದ್ಧಾತ್ಮದ ನೆತ್ತರೂ, ಮೈತಿರುಳೂ ಉಂಡ ಸತ್ತ್ವ ಎಲ್ಲಿ, ಎಲ್ಲಿ…
ಈಗ, ಇದೀಗ, ಈ ಕೂಡಲೆ ಸಂತ ಜೋಸೆಫರ ವಿಶ್ವವಿದ್ಯಾಲಯವು ತಾನು ತುಳಿಯಲು ಹೊರಟಿರುವ ಪಾಪದ ಮಾರ್ಗವನ್ನು ಬಿಡಲಿ, ಏಸುವಿನ ಮಾರ್ಗದಲ್ಲಿ, ಮೇರಿಪ್ರೇಮದ ಮಾರ್ಗದಲ್ಲಿ ನಡೆಯಲಿ.
ಇದು ದುರಾದೃಷ್ಟ.. ಯಾರೋ ವಿರೋಧಿಸಿದರೆಂದು ಇಸ್ರೇಲ್ ರಾಯಭಾರಿಗೆ ಆಮಂತ್ರಣವನ್ನು ವಾಪಸ್ ಪಡೆದಿರುವುದು ಮೂರ್ಖತನ.. ವಿವಿಯು ತನ್ನ ನೀತಿ ನಿಯಮಗಳಂತೆ ನಡೆಯಬೇಕು.
How long would you continue to carry on such one sided propaganda ignoring the fact that none of the islamic republics have internalised neither democracy nor secularism as part of their constitution? And your silence on islamic terrorism and barbaric violence would not please Indian Muslims either. Anti-Israel and Anti-american public posturing appears shallow and out dated in today’s world. Please come out of this frozen mindset Mr Raghunandan.