ಸಾಣೇಹಳ್ಳಿ ಶ್ರೀಗಳು ಪ್ರಾರಂಭಿಸಿದ ಮತ್ತೆ ಕಲ್ಯಾಣ ಅಭಿಯಾನದ ವೇಳೆಯೂ ಹೀಗೆಯೇ ಅಪಪ್ರಚಾರ ನಡೆದಿತ್ತು…
ಸಾಣೇಹಳ್ಳಿ ಮಠ ಲಿಂಗಾಯತ ಧರ್ಮದ ಮಠ. ನವೆಂಬರ್ ಮೊದಲ ವಾರ ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವದ ಸಂಭ್ರಮ ನೆಲೆಸಿರುತ್ತದೆ. ಸುತ್ತಮುತ್ತಲಿನ ಹಳ್ಳಿಗಳ ಜನ ಈ ನಾಟಕೋತ್ಸವ ನೋಡಲು ಬೆಳಗ್ಗಿನಿಂದ ನಡೆಯುವ ವಿಚಾರಗೋಷ್ಠಿಗಳಲ್ಲಿ ಭಾಗಿಸಲು ಬಹಳ ಉತ್ಸುಕರಾಗಿರುತ್ತಾರೆ. ರಾಜ್ಯದ ಮೂಲೆ ಮೂಲೆಯಿಂದಲೂ ಇಲ್ಲಿಗೆ ಆಗಮಿಸುತ್ತಾರೆ. ಶರಣರ ನಾಟಕಗಳ ಜೊತೆ ಎಲ್ಲಾ ರೀತಿಯ ಆಧುನಿಕ ನಾಟಕಗಳು, ವಿವಿಧ ಪ್ರಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣ ಈ ಸಮಯದಲ್ಲಿ ಆಗುತ್ತದೆ.
ಇಂತಹ ಹೊತ್ತಿನಲ್ಲಿ ಇನ್ನೊಂದು ಘಟನೆಯಾಗಿದೆ. ಬ್ರಾಹ್ಮಣ್ಯ ಪ್ರತಿಪಾದಿಸುವ ಪತ್ರಕರ್ತ ವಿಶ್ವೇಶ್ವರ ಭಟ್ಟ ಅವರು ಸಾಣೇಹಳ್ಳಿ ಮಠ ಮತ್ತು ಇಲ್ಲಿನ ಸ್ವಾಮೀಜಿಯವರನ್ನು ವಿವಾದದ ಕೇಂದ್ರ ಮಾಡಲು ಹೆಣಗುತ್ತಿದ್ದಾರೆ. ನಮ್ಮ ಜಾತಿಯವರೇ ಪತ್ರಿಕೋದ್ಯಮವನ್ನು ಆಳುತ್ತಿದ್ದೇವೆ ಎಂದು ಯಾವುದೇ ನಾಚಿಕೆ ಇಲ್ಲದೆ ಹೇಳಿಕೊಳ್ಳುವ ಜಾತಿವಾದಿಯಾಗಿಯೂ ಗುರುತಿಸಿಕೊಂಡಿರುವ ವಿಶೇಶ್ವರ ಭಟ್ಟ ಅವರು, ಸಾಣೇಹಳ್ಳಿ ಮಠದ ಶ್ರೀಗಳಾದ ಪಂಡಿತಾರಾಧ್ಯ ಶಿವಾಚಾರ್ಯರ ಕೆಲ ಮಾತುಗಳನ್ನು ತಪ್ಪಾಗಿ ಅರ್ಥೈಸಿ ಅವರ ತೇಜೋವಧೆ ಮಾಡುವ ಕೆಲಸಕ್ಕೆ ಇಳಿದಿದ್ದಾರೆ. ಇವರು ಮಾಡುವ ತಿರೀಕಚೀಕರಣಗಳು ಎಂ.ಎಂ.ಕಲ್ಬುರ್ಗಿಯವರ ಪ್ರಕರಣವನ್ನು ನೆನಪಿಸುತ್ತಿವೆ.
ಎಂ.ಎಂ.ಕಲ್ಬುರ್ಗಿಯವರು ಆಡದ ಮಾತನ್ನು ಚರ್ಚೆ ಮಾಡಿ ಅವರ ಕೊಲೆಗೆ ಕಾರಣವಾಗಿದ್ದು ಕರ್ನಾಟಕದ ಕೆಟ್ಟ ಪತ್ರಿಕೋದ್ಯಮ ಎಂಬುದನ್ನು ಮರೆಯಬಾರದು. ಭಟ್ಟರಂತಹ ನೂರು ಜನ ಬಂದರೂ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಗಳ ಚಿಂತನೆ ಮತ್ತು ವೈಚಾರಿಕತೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ. ಶರಣರ ಚಿಂತನೆಗಳನ್ನು ಪ್ರಚಾರ ಮಾಡಲು ಹಗಲಿರುಳು ಶ್ರಮಿಸುವ ಸ್ವಾಮೀಜಿಯವರ ಬಗ್ಗೆ ಅತ್ಯಾಚಾರಿ ಸ್ವಜಾತಿ ಸ್ವಾಮೀಜಿಯ ಕಾಲಿಗೆ ಬೀಳುವ ತಲೆಕಟ್ಟ ಪತ್ರಕರ್ತರೆಲ್ಲ ಹಗುರುವಾಗಿ ಮಾತಾಡುವುದು ನೋಡಿದರೆ ಇದು ಒಂದೂ ಪಿತೂರಿಯ ಭಾಗವೇ ಎನ್ನುವ ಸಂಶಯವೂ ಉಂಟಾಗುತ್ತದೆ.
ಶ್ರೀಗಳು ಕಟ್ಟುವ ಚಿಂತನೆಯುಳ್ಳವರು. ಹಾಗಾಗಿಯೇ ಅವರು ರಂಗಭೂಮಿ ಮತ್ತು ಕನ್ನಡ ಸಂಸ್ಕೃತಿಯನ್ನು ಕಟ್ಟುವ ಕಡೆ ಪ್ರತಿದಿನ ಕೆಲಸ ಮಾಡುತ್ತಾರೆ. ಅವರ ವಿರುದ್ಧದ ಪಿತೂರಿ ನಡೆಸುತ್ತಿರುವವರು ಕೆಡುವುವ ಚಿಂತನೆಯುಳ್ಳವರು. ಹಾಗಾಗಿ ಅವರಿಗೆ ಒಂದು ಮಾತಿನ ಹಿಂದೆ ಇರುವ ಬದಲಾವಣೆಯ ಚಿಂತನೆ ಅರ್ಥ ಆಗುವುದಿಲ್ಲ. ಕರ್ನಾಟಕದ ಹಿರಿಯರು ಕಟ್ಟಿದ ಎಲ್ಲವನ್ನೂ ಕೆಡವಲು ಈ ದುಷ್ಟ ಪಡೆಗಳು ಕ್ಷಿಪ್ರ ಕಾರ್ಯಾಚರಣೆಗಳನ್ನು ನಡೆಸುತ್ತಲೇ ಇವೆ.
ಶ್ರೀಗಳ ಪರಿಚಯ ನನಗೆ ಹತ್ತು ವರ್ಷಕ್ಕೂ ಮಿಗಿಲಿನದ್ದು. ಮಠ ಮಾನ್ಯಗಳ ಕಡುವಿರೋಧಿ ಆಗಿದ್ದ ನನಗೆ ಶರಣತತ್ವದ ದರ್ಶನವಾಗಿದ್ದೇ ಸಾಣೇಹಳ್ಳಿಯ ’ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ’ಯ ಮೂಲಕ. ಈ ಶಾಲೆ ಪ್ರತಿ ವರ್ಷ ಇಪ್ಪತ್ತಕ್ಕೂ ಹೆಚ್ಚು ಜನರಿಗೆ ರಂಗಭೂಮಿಯನ್ನು ಕಲಿಸಿ ನಂತರ ಶಿವಸಂಚಾರವೆಂಬ ತಿರುಗಾಟವನ್ನು ನಡೆಸಲು ಕಳಿಸುತ್ತದೆ. ರಾಜ್ಯಾದ್ಯಂತ ನಾಟಕ ಪ್ರದರ್ಶನಗಳನ್ನು ನೀಡುವ ಮೂಲಕ ರಾಜ್ಯದ ಜನಜೀವನವನ್ನು ಅರಿಯುವ ಅಪೂರ್ವ ಅವಕಾಶವನ್ನು ಕಲ್ಪಿಸಲಾಗುತ್ತದೆ. ಇಷ್ಟೇ ಅಲ್ಲದೆ ಸಾಣೇಹಳ್ಳಿಯಲ್ಲಿ ನಿರಂತರವಾದ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ.
ನಮ್ಮ ರಾಜ್ಯದಲ್ಲಿ ಕೆಲ ಮಠಗಳು, ಧಾರ್ಮಿಕ ಕೇಂದ್ರದ ಹೆಸರಲ್ಲಿ ನಡೆಸುತ್ತಿರುವ ಅನಾಚಾರಗಳು, ವ್ಯಾಪಾರ- ವಹಿವಾಟುಗಳು ಜಗಜ್ಜಾಹೀರಾಗಿವೆ. ಆದರೆ ಸಾಣೇಹಳ್ಳಿಮಠ ಇಂತಹ ವಿಚಾರಗಳ ಆಚೆಗೆ ಬದುಕುತ್ತಿದೆ. ಕಲೆಯ ಮೂಲಕ ಶರಣತ್ವ ಪ್ರಚಾರ ಮಾಡಬೇಕೆಂಬ ಬಹುದೊಡ್ಡ ಗುರಿಯ ಹಿಂದೆ ಈ ಮಠ ಬಿದ್ದಿದೆ.
ಮೂಲ ಮಠದ ಸಂಸ್ಕೃತಿ ಮತ್ತು ರಂಗಸಂಸ್ಕೃತಿಯ ಸಮ್ಮಿಲನದ ಪ್ರಯೋಗ ಇಲ್ಲಿ ನಡೆಯುತ್ತಿದೆ. ನಾನು ಅಲ್ಲಿ ರಂಗವಿದ್ಯಾರ್ಥಿಯಾಗಿ ಮತ್ತು ಶಿವಸಂಚಾರದ ಕಲಾವಿದನಾಗಿ ಎರಡು ವರ್ಷಗಳು ಇದ್ದೆ. ನಂತರವೂ ಸಾಣೇಹಳ್ಳಿಯಲ್ಲಿ ಕಾರ್ಯಚಟುವಟಿಕೆಗಳನ್ನು ಗಮನಿಸುತ್ತಲೇ ಬಂದಿರುವೆ. ಕಠೋರವಾಗಿ ಮಠ ಮಾನ್ಯಗಳನ್ನು ವಿರೋಧಿಸುತ್ತಿದ್ದ ಸಿಜಿಕೆಯವರು ಹಿರಿಯ ಸ್ವಾಮೀಜಿಗಳಾಗಿದ್ದ ಶಿವಕುಮಾರ ಸ್ವಾಮೀಜಿ ಮತ್ತು ಈಗಿನ ಸಾಣೇಹಳ್ಳಿ ಶ್ರೀಗಳ ಸಹಕಾರದಿಂದ ಇಲ್ಲಿಯೇ ರಂಗಚಟುವಟಿಕೆಗಳನ್ನು ಶುರುಮಾಡಿದರು. ಸಿಜಿಕೆಯವರು ನಿಧನರಾದ ಬಳಿಕ ಅವರ ಸಮಾಧಿ ಸಹ ಸಾಣೇಹಳ್ಳಿ ಬೃಹತ್ ಬಯಲು ರಂಗಮಂದಿರದ ಪಕ್ಕದಲ್ಲಿಯೇ ಆಯಿತು. ಅಲ್ಲಿ ನಡೆಯುವ ಪ್ರತಿವರ್ಷದ ನಾಟಕೋತ್ಸವ ಮತ್ತು ವಿವಿಧ ಕಾರ್ಯಕ್ರಮಗಳಿಗೆ ವಿವಿಧ ಚಿಂತನೆಯ ಜನರು ಬರುತ್ತಾರೆ. ಎಡ, ಬಲ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಲ್ಲರೂ ಬಂದಿದ್ದಾರೆ. ವೇದಿಕೆಯಲ್ಲಿ ಸ್ವಾಮೀಜಿಗಳು ಬಹಳ ನಿಷ್ಠುರವಾಗಿ ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ಸ್ವಾಮೀಜಿಯವರು ಯಾವಾಗಲೂ ತಮಗೆ ಗೊತ್ತಿಲ್ಲದ ವಿಚಾರಗಳನ್ನು ಕೇಳಿ ತಿಳಿಯುವವರು, ತಮಗೆ ತಿಳಿದ ವಿಚಾರವನ್ನು ನೇರವಾಗಿ ನಿಷ್ಠುರವಾಗಿ ಹೇಳುವವರು. ಎಂತಹ ಸಮಯದಲ್ಲೂ ದೃಢಮನಸ್ಸಿನಿಂದ ಇರುವವರು. ಹಾಗಾಗಿ ಅವರು ತಮ್ಮ ಮಾತಿನ ಯಾವಾಗಲೂ ಬದ್ಧರಾಗಿರುತ್ತಾರೆ. ಯಾವುದೇ ನಾಟಕ ನಡೆದರೂ ರಂಗಶಾಲೆಯಲ್ಲಿ ಅವರ ಮೂಗು ತೂರಿಸುವುದಿಲ್ಲ. ಬದಲಾಗಿ ತಮ್ಮ ಅನಿಸಿಕೆಗಳನ್ನು ನಿರ್ದೇಶಕರ ಜೊತೆ ಮಾತಾಡುತ್ತಾರೆ. ಕಲೆ ಮತ್ತು ಸೃಜನಶೀಲತೆಗೆ ಒಂದು ದೊಡ್ಡ ಕೊಡುಗೆ ಸಾಣೇಹಳ್ಳಿ ಮಠ. ಅಲ್ಲಿ ರಂಗಭೂಮಿಯನ್ನು ಕಲಿಯುವವರು ತಮ್ಮನ್ನು ತಾವು ಪ್ರತಿನಿತ್ಯ ಸಾಣೇ ಹಿಡಿದುಕೊಳ್ಳುತ್ತಾರೆ. ಹಾಗೆಯೇ ಅಲ್ಲಿನ ಪ್ರತಿಯೊಂದು ಕಾರ್ಯಕ್ರಮವು ಮತಿಗೆ ಸಾಣೆ ಹಿಡಿಯುತ್ತದೆ. ವಿಕೃತ ಪತ್ರಕರ್ತನ ಮನಸ್ಸು ಸಾಣೆ ಹಿಡಿಯಲಾರದ ಹಂತಕ್ಕೆ ತುಕ್ಕು ಹಿಡಿದ ಕಾರಣ ಅದು ಸಾಧ್ಯವಾಗದ ಕೆಲಸ. ಹಾಗಾಗಿಯೇ ಸಾಣೇಹಳ್ಳಿ ಶ್ರೀಗಳು ತಮ್ಮ ಲಿಂಗಾಯತ ಸಂಸ್ಕೃತಿಯ ಕುರಿತು ಅವರ ಧರ್ಮಿಯರಿಗೆ ಹೇಳಿದ ಮಾತುಗಳನ್ನು ತೆಗೆದುಕೊಂಡು ಸ್ವಾಮೀಜಿಗಳ ವಿರುದ್ದ ಎಲ್ಲರನ್ನೂ ಎತ್ತಿಕಟ್ಟುವ ಕೆಲಸವನ್ನು ವಿಶ್ವೇಶ್ವರ ಭಟ್ಟರು ಮಾಡುತ್ತಿದ್ದಾರೆ.
ಇದನ್ನೂ ಓದಿರಿ: ಧರ್ಮದ ಮಾರಾಟಗಾರರ ಎಡಬಿಡಂಗಿತನದ ಅನಾವರಣ: ಸಾಣೇಹಳ್ಳಿ ಶ್ರೀಗಳ ಲೇಖನ
ಸಾಣೇಹಳ್ಳಿ ಶ್ರೀಗಳು ಪ್ರಾರಂಭಿಸಿದ ಮತ್ತೆ ಕಲ್ಯಾಣ ಅಭಿಯಾನವನ್ನು ನೀವು ಗಮನಿಸಿರಬಹುದು. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಮತ್ತೆ ಕಲ್ಯಾಣದ ಮೂಲಕ ಎಲ್ಲಾ ಲಿಂಗಾಯತರು, ಜೀವಪರರು ಒಂದು ಕಡೆ ಸೇರಿ ಹನ್ನೆರಡನೆಯ ಶತಮಾನದ ಶರಣರ ತತ್ವಗಳನ್ನು ಮತ್ತೆ ಮುನ್ನೆಲೆಗೆ ತಂದು ಚರ್ಚಿಸುವ, ವಿದ್ಯಾರ್ಥಿಗಳು ಮತ್ತು ಯುವಜನರ ನಡುವೆ ಚರ್ಚೆ ಮಾಡುವ ಕಾರ್ಯ ಮಾಡಿದಾಗಲೂ ಕೆಲವರು ಇದೇ ರೀತಿ ಅಸಂಬದ್ದವಾದ ಟೀಕಾ ಪ್ರಹಾರಗಳನ್ನು ಸ್ವಾಮೀಜಿಯವರ ವಿರುದ್ಧ ಬಿಟ್ಟಿದ್ದರು. ಆದರೂ ಸ್ವಾಮೀಜಿಯವರು ಆ ಕಾರ್ಯವನ್ನು ನಿಲ್ಲಿಸಲಿಲ್ಲ. ಹೀಗೆ ಕ್ರಿಯಾಶೀಲವಾದ ಚಟುವಟಿಕೆಗಳಲ್ಲೇ ಇರುವ ಸ್ವಾಮೀಜಿಯವರಿಗೆ ಹಲವು ರೀತಿಯ ಕಿರಿಕಿರಿಗಳು ಇದ್ದೇ ಇವೆ. ಸಾಣೇಹಳ್ಳಿ ಮಠ ಮತ್ತು ಸಾಣೇಹಳ್ಳಿಯ ರಂಗಪರಂಪರೆಯ ಜೊತೆ ನಿಲ್ಲುವುದು ನಮ್ಮಂಥವರ ಜವಾಬ್ದಾರಿ. ಮತ್ತೆ ಕಲ್ಯಾಣದಂತಹ ಪರಿಕಲ್ಪನೆಯನ್ನು ಬೆಳೆಸುತ್ತಿರುವ ಸ್ವಾಮೀಜಿಯವರು, ಕೆಟ್ಟ ಜನರ ಪಿತೂರಿಗೆ ಆಹಾರವಾಗದಂತೆ ನಾವು ಅವರ ಜೊತೆ ನಿಲ್ಲಬೇಕಿದೆ.

ಅನಿಲ್‌ಕುಮಾರ್ ಚಿಕ್ಕದಾಳವಟ್ಟ
ಮೂಲತಃ ತುಮಕೂರಿನ ಮಧುಗಿರಿ ತಾಲ್ಲೂಕಿನವರಾದ ಅನಿಲ್‌ಕುಮಾರ್ ಜನಪರ ಚಿಂತನೆಗಳ ಪತ್ರಕರ್ತರು, ರಂಗಕರ್ಮಿಯೂ ಹೌದು. ಸಾಣೇಹಳ್ಳಿ ರಂಗಶಾಲೆಯಲ್ಲಿ ಕಲಿತ್ತಿದ್ದಾರೆ
ಅವನನ್ನು ವಿಶ್ವೇಶ್ವರ ಭಟ್ಟ ಅನ್ನುವುದಕ್ಕಿಂತ ವಿಷ ಭಟ್ಟ ಎನ್ನುವುದೇ ಸೂಕ್ತ. ಈ ಹಿಂದೆ ಯೋಗೀಶ್ ಮಾಸ್ಟ್ರು ಡುಂಡಿ ಬರೆದಾಗಲೂ ಹೀಗೆ ವಿಷ ಕಾರಿದ್ದ ಇಂತ ವಿಷಕಾರಿಗಳನ್ನು ವಿವೇಕಿಗಾಗಳು ದೂರ ಹಿಡಬೇಕು