1993ರಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮುಂಬೈ ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿ, ಜೈಲು ಶಿಕ್ಷೆಗೆ ಒಳಗಾಗಿದ್ದ, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಂಟ ಶ್ಯಾಮ್ ಕಿಶೋರ್ ಗರಿಕಪಟ್ಟಿ ಬೆಂಗಳೂರು ಕಂಬಳದ ಅತಿಥಿ !
ಬೆಂಗಳೂರು ಕಂಬಳದ ದಿನ ಹತ್ತಿರವಾಗುತ್ತಿದ್ದಂತೆ ಕಳಂಕದ ಮೇಲೆ ಕಳಂಕ ಅಂಟಿಸಿಕೊಳ್ಳುತ್ತಿದೆ. 32 ಪುಟಗಳ ಬೃಹತ್ ಆಮಂತ್ರಣ ಪತ್ರಿಕೆಯಲ್ಲಿ ಮೂರೂ ಪಕ್ಷಗಳ ಸಕಲ ಶಾಸಕರು, ಸಂಸದರೂ, ಮಾಜಿಗಳೂ ಅತಿಥಿಗಳ ಪಟ್ಟಿಯಲ್ಲಿದ್ದಾರೆ. ಅಷ್ಟೇ ಆಗಿದ್ದರೆ ಭಯಪಡುವ ಅಗತ್ಯ ಇರಲಿಲ್ಲ. ಆದರೆ, ಅತಿಥಿಗಳ ಪಟ್ಟಿಯಲ್ಲಿ ಬ್ರಿಜ್‌ಭೂಷಣನೆಂಬ ಅತ್ಯಾಚಾರದ ಆರೋಪಿತ ಸಂಸದನ ಹೆಸರಿರುವುದು ವಿವಾದಕ್ಕೆ ಕಾರಣವಾಗಿ ಈಗ ಆತನನ್ನು ಕೈ ಬಿಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಅಶೋಕ್ ರೈ ಹೇಳಿಕೆ ನೀಡಿದ್ದಾರೆ. ಆದರೆ ಅದೇ ವೇದಿಕೆಯಲ್ಲಿ ಅತಿಥಿ ಸ್ಥಾನದಲ್ಲಿರುವ ಇನ್ನೊಂದು ಹೆಸರು ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಆ ಹೆಸರೇ ಶ್ಯಾಮ್ ಕಿಶೋರ್ ಗರಿಕಪಟ್ಟಿ.
ಭೂಗತ ದೊರೆ ದಾವೂದ್ ಇಬ್ರಾಹಿಂನ ಸಹಚರ
ಪುಣೆ ಮೂಲದ ಶ್ಯಾಮ್ ಕಿಶೋರ್ ಗರಿಕಪಟ್ಟಿ ಭೂಗತ ದೊರೆ ದಾವೂದ್ ಇಬ್ರಾಹಿಂನ ಸಹಚರ. 1990ರ ದಶಕದಿಂದಲೇ ದಾವೂದ್ ಗ್ಯಾಂಗಿನ ಸದಸ್ಯ. ಬ್ಲ್ಯಾಕ್ ಸ್ಕಾರ್ಪಿಯನ್ ಎಂಬ ಅಡ್ಡ ಹೆಸರಿನಿಂದ ಕರೆಯಲ್ಪಡುವ ಈತ ದಾವೂದ್ ಇಬ್ರಾಹಿಂ ಮತ್ತು ಅರುಣ್ ಗಾವ್ಲಿಯ ಗ್ಯಾಂಗ್‌ಗಳ ನಡುವೆ 1990ರಲ್ಲಿ ಜೆ ಜೆ ಆಸ್ಪತ್ರೆಯಲ್ಲಿ ನಡೆದ ಶೂಟೌಟ್‌ನ ಆರೋಪಿ ಕೂಡ ಆಗಿದ್ದಾನೆ. 1990ರ ಫೆಬ್ರವರಿಯಲ್ಲಿ ನಡೆದ ಘನಶ್ಯಾಮ್ ಭಾಟಿಯಾ ಮತ್ತು ಏಪ್ರಿಲ್‌ನಲ್ಲಿ ನಡೆದ ಭಾಟಿಯಾ ಸಹೋದರ ಇಂದರ್ ಹತ್ಯೆ ಪ್ರಕರಣದಲ್ಲೂ ಗರಿಕಪಟ್ಟಿ ಭಾಗಿಯಾಗಿದ್ದ. ಸಾಕ್ಷ್ಯಾಧಾರದ ಕೊರತೆಯಿಂದ ಈ ಪ್ರಕರಣದಲ್ಲಿ ಖುಲಾಸೆಯಾಗಿದ್ದ.
1993ರಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮುಂಬೈ ಸರಣಿ ಬಾಂಬ್ ದಾಳಿಯಲ್ಲಿ ಭಾಗಿಯಾಗಿದ್ದ ಈ ಗರಿಕಪಟ್ಟಿ ಸುಮಾರು 18 ಅಪರಾಧ ಪ್ರಕರಣಗಳ ಆರೋಪಿ. ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿದ್ದ ಈತ 2003ರಲ್ಲಿ ಪೆರೋಲ್ ಮೇಲೆ ಹೊರಬಂದವನು ನಂತರ 8 ವರ್ಷಗಳ ಕಾಲ ತಲೆ ಮರೆಸಿಕೊಂಡಿದ್ದ. 2021ರ ಫೆಬ್ರವರಿಯಲ್ಲಿ ಗೋವಾದ ಹಳ್ಳಿಯೊಂದರಲ್ಲಿ ಆತನನ್ನು ಬಂಧಿಸಲಾಗಿತ್ತು. ನಕಲಿ ಐಡಿ ಮತ್ತು ಬಂದೂಕುಗಳನ್ನು ವಶಪಪಡಿಸಿಕೊಳ್ಳಲಾಗಿತ್ತು. ಅದಾಗಿ ಒಂದೂವರೆ ವರ್ಷ ಅಷ್ಟೇ ಆಗಿದೆ. ಈತ ಈಗ ಬೆಂಗಳೂರು ಕಂಬಳಕ್ಕೆ ಅತಿಥಿಯಾಗಿ ಬರಲಿದ್ದಾನೆಯೇ! ಇದೊಂದು ಆತಂಕ ಪಡಬೇಕಾದ ಸಂಗತಿ.
ಈ ಅತಿಥಿಯನ್ನು ಸಭೆಗೆ ಪರಿಚಯಿಸುವಾಗ ನಿರೂಪಕರು ಏನೆಂದು ಪರಿಚಯಿಸುತ್ತಾರೆ? ಆಮಂತ್ರಣ ಪತ್ರದಲ್ಲಿ ಶ್ಯಾಮ್ ಕಿಶೋರ್ ಗರಿಕಪಟ್ಟಿ ಹೆಸರಿನ ಮುಂದೆ ಯಾವುದೇ ಹುದ್ದೆ, ಪದನಾಮ ಇಲ್ಲ.

2019 ರಲ್ಲಿ ಮಹಾರಾಷ್ಟ್ರದ ನಲ್ಲಸೋಪರ ಎಂಬ ಕ್ಷೇತ್ರದ ಚುನಾವಣೆಯಲ್ಲಿ ಶಿವಸೇನಾ ಅಭ್ಯರ್ಥಿ ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಜೊತೆ ಚುನಾವಣಾ ರ‍್ಯಾಲಿಯಲ್ಲಿ ಹೆಜ್ಜೆ ಹಾಕಿದ್ದ ಫೋಟೋ ವೈರಲ್ ಆಗಿ ವಿವಾದವಾಗಿತ್ತು. ಪ್ರದೀಪ್ ಶರ್ಮಾ ಸ್ಪಷ್ಟೀಕರಣ ನೀಡಿ “ನಾನು ಕರ್ತವ್ಯದಲ್ಲಿದ್ದಾಗ ಶ್ಯಾಮ್ ಕಿಶೋರ್ ಗರಿಕಪಟ್ಟಿಯನ್ನು ಹಲವು ಸಲ ಬಂಧಿಸಿದ್ದೇನೆ. ಆತನನ್ನು ನಾನು ರ‍್ಯಾಲಿಗೆ ಕರೆದಿಲ್ಲ. ಆತ ಹೇಗೆ ಬಂದನೋ ಗೊತ್ತಿಲ್ಲ” ಎಂದು ಹೇಳಿದ್ದರು. “ನಾನು ಬೇರೆಯವರೊಬ್ಬರ ಕರೆಯ ಮೇರೆಗೆ ಆ ಹಾದಿಯಲ್ಲಿ ಸಾಗುತ್ತಿದ್ದಾಗ ರ‍್ಯಾಲಿ ಬಂತು. ಒಂದೆರಡು ನಿಮಿಷ ಅದರ ಜೊತೆ ಸಾಗಿದ್ದೇನಷ್ಟೇ” ಎಂದು ಗರಿಕಪಟ್ಟಿ ಕೂಡ ಹೇಳಿಕೆ ನೀಡಿದ್ದ. ಆದರೆ, ಅವರಿಬ್ಬರು ತೀರಾ ಸನಿಹದಲ್ಲಿ ಜೊತೆಯಾಗಿ ಭುಜಕ್ಕೆ ಭುಜ ತಾಗುವಷ್ಟು ಹತ್ತಿರದಲ್ಲೇ ಹೆಜ್ಜೆ ಹಾಕಿದ್ದಾರೆ. ಆದರೂ ಮಾಜಿ ಪೊಲೀಸ್ ಅಧಿಕಾರಿಗೆ ಆತನ ಪಕ್ಕದಲ್ಲಿದ್ದದ್ದು ಗೊತ್ತಿರಲಿಲ್ಲ !
ಈಗ ಬೆಂಗಳೂರು ಕಂಬಳಕ್ಕೆ ಗರಿಕಪಟ್ಟಿಯನ್ನು ಆಹ್ವಾನಿಸಿದವರಾರು? ಯಾವ ಕಾರಣಕ್ಕೆ? ಕಂಬಳ ಆಯೋಜಕರಿಗೆ ದಾವೂದ್ ಗ್ಯಾಂಗಿನ ಸಂಪರ್ಕವಿದೆಯೇ ಎಂಬ ನಿಟ್ಟಿನಲ್ಲಿ ತನಿಖೆಗೆ ಒಳಪಡಿಸುವ ಅಗತ್ಯವಿದೆ. ಯಾಕೆಂದರೆ 90ರ ದಶಕದಲ್ಲಿ ದಾವೂದ್ ಗ್ಯಾಂಗಿನ ಸದಸ್ಯರಿಗೆ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಸಿಂಗ್ ಆಶ್ರಯ ನೀಡುತ್ತಿದ್ದ. ಭೂಗತನಾಗಿದ್ದ ದಾವೂದ್ ಜೊತೆ ಸಂಪರ್ಕಿಸಲು ಆತನ ಸಹಚರರಿಗೆ ತನ್ನ ದೂರವಾಣಿಯನ್ನು ನೀಡುತ್ತಿದ್ದ ಎಂಬ ಆರೋಪ ಬಂದಿತ್ತು. ಆ ಕಾರಣಕ್ಕಾಗಿಯೇ TADA ಕಾಯ್ದೆಯಡಿ ಬಂಧನಕ್ಕೂ ಒಳಗಾಗಿದ್ದ. ಬ್ರಿಜ್ ಭೂಷಣ್ ನಿಂದ ಆಶ್ರಯ ಆ ದಾವೂದ್‌ನ ಸಹಚರರಲ್ಲಿ ಈ ಶ್ಯಾಮ್ ಕಿಶೋರ್ ಕೂಡಾ ಇದ್ದ.
ಕಂಬಳದ ಹೆಸರಿನಲ್ಲಿ ಸಮಾಜಘಾತಕರನ್ನು ಕರೆ ತಂದು ಕರುನಾಡನ್ನು ಏನು ಮಾಡಬೇಕೆಂದಿದ್ದಾರೆ ನಮ್ಮ ಜನನಾಯಕರು ಎಂಬ ಪ್ರಶ್ನೆ ಮೂಡಿದರೆ ಅಚ್ಚಯಿರಿಲ್ಲ. ಒಂದು ಕಾಲದಲ್ಲಿ ಮುತ್ತಪ್ಪ ರೈ, ಅಮರ್ ಆಳ್ವ ಮುಂತಾದ ಬಂಟ ಸಮುದಾಯದ ಕುಖ್ಯಾತ ರೌಡಿಗಳ ನಂಟಿನಿಂದಾಗಿ 90ರ ದಶಕದಲ್ಲಿ ದಕ್ಷಿಣ ಕನ್ನಡದ ಹಲವು ಯುವಕರು ಪಾತಕ ಲೋಕದ ಹಾದಿ ಹಿಡಿದಿದ್ದರು. ಇಡೀ ಜಿಲ್ಲೆ ಮತ್ತು ಬಂಟ ಸಮುದಾಯ ಅವಮಾನಕ್ಕೆ ಒಳಗಾಗಿತ್ತು. ಈಗ ಬಂಟ ಸಮುದಾಯದ ಏಕೈಕ ಕಾಂಗ್ರೆಸ್ ಶಾಸಕ ಅಶೋಕ್ ರೈ ಮುತುವರ್ಜಿಯಿಂದ ಆಯೋಜಿಸಿದ ಕಂಬಳಕ್ಕೆ ಕುಖ್ಯಾತ ರೌಡಿಗಳನ್ನು ಕರೆಸಿ ಯಾವ ಸಂದೇಶ ರವಾನೆ ಮಾಡುತ್ತಿದ್ದಾರೆ? ವಿರೋಧ ಬಂದಾಗ ಪಟ್ಟಿಯಿಂದ ಕೈ ಬಿಡುವುದು ಪರಿಹಾರವಾಗಲಾರದು. ಇಂತಹದೊಂದು ಕಾರ್ಯಕ್ರಮಕ್ಕೆ ಸಮಾಜಘಾತಕ ವ್ಯಕ್ತಿಗಳನ್ನು ಆಹ್ವಾನಿಸುವ ಮನಸ್ಥಿತಿ ಎಂತದ್ದು? ಕಂಬಳದ ಆಯೋಜಕರು ಯಾರ ಮುಲಾಜಿಗೆ ಒಳಗಾಗಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಬಹಳ ಒಳ್ಳೆಯ ಲೇಖನ