ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯ ಎಂದರೆ ಕೇವಲ ಒಂದು ವಿಶ್ವವಿದ್ಯಾಲಯ ಅಷ್ಟೇ ಅಲ್ಲ ಅದೊಂದು ಆಂದೋಲನ ಎಂದೇ ನಂಬಿದ್ದ ಶಿಫಾ ಉರ್ ರಹಮಾನ್ ವಿದ್ಯಾರ್ಥಿಗಳಲ್ಲಿ ಸೈದ್ಧಾಂತಿಕ, ಜೀವಪರ ಹೋರಾಟದ ಮನೋಸ್ಥೈರ್ಯವನ್ನು ಬಿತ್ತುತ್ತಲೇ ಬಂದಿದ್ದರು…
ಸರ್ಕಾರಿ ಪ್ರಾಯೋಜಿತ ದೆಹಲಿ ದಂಗೆಯಲ್ಲಿ ಬಲಿಪಶುವಾಗಿ ಕಳೆದ ಐದು ವರ್ಷಗಳಿಂದ ತಮ್ಮ ವಿಳಾಸವನ್ನು ತಿಹಾರ್ ಜೈಲಾಗಿಸಿಕೊಂಡಿರುವ ಸದ್ಯ ಜೈಲುಹಕ್ಕಿಯಾಗಿಯೇ ದೆಹಲಿಯ ಚುನಾವಣಾ ಕಣದಲ್ಲಿರುವ ಮತ್ತೊಬ್ಬ ಸಂಗಾತಿ ಶಿಫಾ ಉರ್ ರಹಮಾನ್. ಆತ ಒಬ್ಬ ಕಂಟ್ರಾಕ್ಟರ್. ಕಂಟ್ರಾಕ್ಟರ್ ಆಗಿದ್ದರೂ ಕೂಡ ಆತ ತಾನು ಓದಿದ ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯಕ್ಕೆ ಬರುವ ವಿದ್ಯಾರ್ಥಿಗಳಿಗೆ ವಸತಿ, ಫೀಸ್ ವ್ಯವಸ್ಥೆಗಳನ್ನು ಮಾಡಿಕೊಡುತ್ತ ತೀರಾ ಅಶಕ್ತರನ್ನು ತನ್ನ ಮನೆಯಲ್ಲೇ ಇಟ್ಟುಕೊಂಡು ಓದಿಸುತ್ತಿದ್ದ ವ್ಯಕ್ತಿ. ಜೊತೆಗೆ ಆತ ಜಾಮಿಯ ಮಿಲ್ಲಿಯ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೂಡ.
ಅಂದು ಡಿಸೆಂಬರ್ 13, 2019 ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಿಎಎ ವಿರುದ್ಧ ತಮ್ಮ ಪ್ರತಿರೋಧದ ದಾಖಲೆಗಾಗಿ ಸಂಸತ್ತಿನವರೆಗೆ ಶಾಂತಿಯುತ ಕಾಲ್ನಡಿಗೆ ಜಾಥಾವನ್ನು ನಡೆಸಲು ನಿರ್ಧರಿಸಿದ್ದರು. ವಿದ್ಯಾರ್ಥಿಗಳು ಗೇಟಿನಿಂದ ಹೊರಹೋಗದಂತೆ ತಡೆಯಲು ಮತ್ತು ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಏಕಾಏಕಿ ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗವನ್ನು ಮಾಡಲು ಶುರು ಮಾಡೇಬಿಟ್ಟರು. ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ನಡೆದ ಲಾಠಿಚಾರ್ಜ್‌ನಲ್ಲಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡರು. ಆ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ವ್ಯಕ್ತಿಗಳಲ್ಲಿ ಪ್ರಮುಖರೇ ಶಿಫಾ ಉರ್ ರಹಮಾನ್.

ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯವೆಂದರೆ ಕೇವಲ ಒಂದು ವಿಶ್ವವಿದ್ಯಾಲಯವಷ್ಟೆ ಅಲ್ಲ, ಅದೊಂದು ಆಂದೋಲನ ಎಂದ ನಂಬಿದ್ದ ಶಿಫಾ ಉರ್ ರಹಮಾನ್ ವಿದ್ಯಾರ್ಥಿಗಳಲ್ಲಿ ಸೈದ್ಧಾಂತಿಕ ಮತ್ತು ಜೀವಪರ ಹೋರಾಟದ ಮನೋಸ್ಥೈರ್ಯವನ್ನು ಬಿತ್ತುತ್ತಲೇ ಬಂದಿದ್ದರು. ಆ ಕಾರಣದಿಂದಾಗಿಯೇ ಡಿಸೆಂಬರ್ 13ರಂದು ನಡೆದ ಅನೈತಿಕ ಪೊಲೀಸ್‌ಗಿರಿ ಮತ್ತು ಸಿ.ಎ.ಎ, ಎನ್.ಆರ್.ಸಿ ವಿರೋಧಿಸಿ ಡಿಸೆಂಬರ್ 15, 2019ರ ಬೆಳಿಗ್ಗೆ ಜಾಮಿಯಾದ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಎಎ ವಿರುದ್ಧ ಪ್ರತಿಭಟಿಸಿ ಗೇಟ್ ನಂ. 1 ರ ಹೊರಗೆ ಜಮಾಯಿಸಿದರು. ಅಲ್ಲಿಂದ ಜಾಮಿಯಾ ನಗರದ ಸ್ಥಳೀಯ ಜನರು ಮತ್ತು ಇತರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಇಂಡಿಯಾ ಗೇಟ್ ಕಡೆಗೆ ಮೆರವಣಿಗೆ ಪ್ರಾರಂಭವಾಗಿತ್ತು. ವಿದ್ಯಾರ್ಥಿಗಳು ಮಾತಾ ಮಂದಿರ ಮಾರ್ಗ ನ್ಯೂ ಫ್ರೆಂಡ್ಸ್ ಕಾಲೋನಿಯ ಟ್ರಾಫಿಕ್ ಸಿಗ್ನಲ್ ತಲುಪಿದಾಗ, ದೆಹಲಿ ಪೊಲೀಸರು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿ ಲಾಠಿ ಚಾರ್ಜ್, ಗುಂಡು ಹಾರಿಸಿ ಮತ್ತು ಅಶ್ರುವಾಯು ಪ್ರಯೋಗಿಸಿ ವಿದ್ಯಾರ್ಥಿಗಳನ್ನು ಚದುರಿಸಿದರು. ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿ ಶಾಹೀನ್ ಅಬ್ದುಲ್ಲಾ, ಚಂದಾ ಯಾದವ್, ಅಖ್ತರಿಸ್ತಾ ಅನ್ಸಾರಿ, ಲದೀದಾ ಫರ್ಜಾನಾ ಮತ್ತು ಆಯಿಷಾ ರೆನ್ನಾ ಸೇರಿದಂತೆ ವಿದ್ಯಾರ್ಥಿಗಳನ್ನು ಪೊಲೀಸರು ಥಳಿಸಿದರು. ಸಂಜೆ 5:30 ರ ಸುಮಾರಿಗೆ ಮಾತಾ ಮಂದಿರ ರಸ್ತೆಯಲ್ಲಿ ಘರ್ಷಣೆ ಪ್ರಾರಂಭವಾಯಿತು. ಪ್ರತಿಭಟನಾಕಾರರನ್ನು ಪೊಲೀಸರು ಲಾಠಿ ಪ್ರಹಾರ ನಡೆಸಿ ಚದುರಿಸಿದರು. ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಲು ಪ್ರಾರಂಭಿಸಿದ ಸ್ಥಳದಿಂದಲೇ ಬಸ್ಸುಗಳನ್ನು ಸುಡುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಲು ಪ್ರಾರಂಭಿಸಿದವು. ಅದೇ ದಿನ ಸಂಜೆ 6:46ಕ್ಕೆ ನೂರಾರು ಪೊಲೀಸ್ ಅಧಿಕಾರಿಗಳು, ಕಾಲೇಜು ಪ್ರಾಧಿಕಾರದ ಅನುಮತಿಯಿಲ್ಲದೆ ಜಾಮಿಯಾ ಕ್ಯಾಂಪಸ್‌ಗೆ ಬಲವಂತವಾಗಿ ಪ್ರವೇಶ ಮಾಡಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮತ್ತು ಅಶ್ರುವಾಯು ಪ್ರಯೋಗಿಸಿದರು.
ವಿಶ್ವವಿದ್ಯಾಲಯದ ಗ್ರಂಥಾಲಯದೊಳಗೆ ಆಶ್ರುವಾಯು ಸಿಡಿಸಿ, ಲಾಠಿ ಚಾರ್ಜ್ ಮಾಡಿದ್ದು ಎಷ್ಟು ಭೀಕರವಾಗಿತ್ತೆಂದರೆ ಮೊಹಮ್ಮದ್ ಮಿನ್ಹಾಜುದ್ದೀನ್ ಎಂಬ ಹುಡುಗನ ಎಡ ಭಾಗದ ಕಣ್ಣು ಸಂಪೂರ್ಣವಾಗಿ ಜಖಂ ಆಗಿತ್ತು. ದೆಹಲಿ ಪೊಲೀಸರು ಸುಮಾರು ನೂರು ವಿದ್ಯಾರ್ಥಿಗಳನ್ನು ಬಂಧಿಸಿ ಮರುದಿನ ಬೆಳಿಗ್ಗೆ 3:30 ಕ್ಕೆ ಬಿಡುಗಡೆ ಮಾಡಿದರು. ವಿದ್ಯಾರ್ಥಿಗಳನ್ನು ಪೊಲೀಸರು ಎಳೆದೊಯ್ದು ಹಲ್ಲೆ ಮಾಡುತ್ತಿರುವ ದೃಶ್ಯಗಳನ್ನು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದವು. ಮಾರನೆಯ ದಿನವೇ ಈ ಘಟನೆಯನ್ನು ಖಂಡಿಸಿ ದೆಹಲಿಯಾದ್ಯಂತ ಜೆ.ಎನ್.ಯೂ, ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬೀದಿಗಿಳಿದರು. ಆ ಸಂದರ್ಭದಲ್ಲಿ ಪ್ರತಿಭಟನೆಗಳನ್ನು ಆಯೋಜಿಸುವುದರಲ್ಲಿ ಮತ್ತು ಆಳುವ ಸರ್ಕಾರವನ್ನು ಖಂಡತುಂಡವಾಗಿ ಪ್ರಶ್ನಿಸುವಲ್ಲಿ ಎದೆಗಾರಿಕೆಯನ್ನು ತೋರಿಸಿದ ವ್ಯಕ್ತಿ ಶಿಫಾ ಉರ್ ರಹಮಾನ್.
ಸರ್ಕಾರದ ಅಸಂವಿಧಾನಿಕ ನೀತಿಗಳನ್ನು ಪ್ರಶ್ನಿಸುವವರನ್ನೆಲ್ಲ ಬಾಯ್ಮುಚ್ಚಿಸಲು ಸರ್ಕಾರ ಪ್ರಾಯೋಜಿಸಿದ ದೆಹಲಿ ದಂಗೆಯಲ್ಲಿ ಶಿಫಾ ಉರ್ ರಹಮಾನ್ ವಿರುದ್ಧ ಎಫ್‌ಐಆರ್ ಸಂಖ್ಯೆ 59/2020ನಲ್ಲಿ 1967ರ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ), ಗಲಭೆ ನಡೆಸಿದ್ದಾರೆಂದು ಐಪಿಸಿ ಸೆಕ್ಷನ್ 147, ಮಾರಕ ಆಯುಧದಿಂದ ಗಲಭೆ ನಡೆಸಿದ್ದಾರೆಂದು ಐಪಿಸಿ ಸೆಕ್ಷನ್ 148, ಕೊಲೆ ಮಾಡಿದ್ದಾರೆಂದು ಐಪಿಸಿ ಸೆಕ್ಷನ್ 302, ಕೊಲೆ ಯತ್ನ ನಡೆಸಿದ್ದಾರೆಂದು ಐಪಿಸಿ ಸೆಕ್ಷನ್ 307, ದೇಶದ್ರೋಹ -ಐಪಿಸಿ ಸೆಕ್ಷನ್ 124 ಎ ಅಷ್ಟೆ ಅಲ್ಲದೆ ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾಮರಸ್ಯವನ್ನು ಹಾಳು ಮಾಡಲು ಕೃತ್ಯಗಳನ್ನು ಎಸಗಲಾಗಿದೆಯೆಂದು ಐಪಿಸಿ ಸೆಕ್ಷನ್ 153 ಎ ಕಾನೂನುಬಾಹಿರ ಚಟುವಟಿಕೆಗಳು -ಯುಎಪಿಎ ಸೆಕ್ಷನ್ 13, ಭಯೋತ್ಪಾದಕ ಕೃತ್ಯಗಳು-ಸೆಕ್ಷನ್ 16 ಯುಎಪಿಎ, ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹಿಸುವುದು-ಸೆಕ್ಷನ್ 17 ಯುಎಪಿಎ ಮತ್ತು ಪಿತೂರಿ ನಡೆಸಿದ್ದಾರೆಂದು ಸೆಕ್ಷನ್ 18 ಯುಎಪಿಎ ಅಡಿಯಲ್ಲಿ ದೂರು ದಾಖಲು ಮಾಡಿದ ದೆಹಲಿ ಪೊಲೀಸರು ಶಿಫಾ ಉರ್ ರಹಮಾನ್ ಅವರನ್ನು 2020ರ ಏಪ್ರಿಲ್ 26ರಂದು ಬಂಧಿಸಿದರು.
ಶಿಫಾ ಉರ್ ರಹಮಾನ್ ತನ್ನ ದುಡಿಮೆಯ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ತನ್ನ ಸ್ನೇಹಿತರು, ಉದ್ಯಮಿಗಳಿಂದ ಹಣ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವ್ಯಕ್ತಿ. ಗಮನಿಸಬೇಕಾದ ವಿಚಾರವೆಂದರೆ ಈತ ಕೇವಲ ಎನ್.ಆರ್.ಸಿ, ಸಿ.ಎ.ಎ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಷ್ಟೆ ಅಲ್ಲ ಅದಕ್ಕೂ ಹತ್ತಾರು ವರ್ಷಗಳ ಹಿಂದಿನಿಂದಲೂ ಈ ತರಹದ ಕೆಲಸಗಳನ್ನು ಮಾಡುತ್ತಲೇ ಬಂದಿದ್ದರು. ವಿದ್ಯೆಗಾಗಿ ಹಣ ಸಂಗ್ರಹಿಸಿ ಹಂಚುತ್ತಿದ್ದವನ ಪುಣ್ಯ ಕಾರ್ಯವನ್ನೇ ತಿರುಚಿದ ಪೊಲೀಸರು ದಂಗೆಗೆ ಹಣ ಸಂಗ್ರಹಿಸಿ ಹೂಡಿದ್ದಾನೆಂದು ಕಥೆ ಕಟ್ಟಿದರು. ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸಿ, ಶುಶ್ರೂಷೆ ಮಾಡಿ ವಿದ್ಯಾರ್ಥಿಗಳೆಲ್ಲರನ್ನೂ ತನ್ನ ಮಕ್ಕಳಂತೆ ಭಾವಿಸಿ ಸರ್ಕಾರದ ಮತ್ತು ಪೊಲೀಸರ ಧಮನಕಾರಿ ನೀತಿಯ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ಶಿಫಾ-ಉರ್ ರಹಮಾನ್ ಬದುಕಿಗೆ ಪೊಲೀಸರು ಬರೆ ಎಳೆದೇ ಬಿಟ್ಟರು.
ನಿರಂತರವಾಗಿ ಕೋರ್ಟಿನ ಮೊರೆ ಹೋದರೂ ಇತ್ತ ಜಾಮೀನು ನೀಡದೆ, ಅತ್ತ ವಿಚಾರಣೆ ನಡೆಸದೆ ಸತಾಯಿಸುತ್ತಲೇ ಇದ್ದ ದೆಹಲಿ ಕೋರ್ಟ್ 2025ರ ಜನವರಿ 15ರಂದು ದೆಹಲಿ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಿತ್ತು. ದೆಹಲಿಯ ಓಕ್ಲಾ ವಿಧಾನಸಭಾ ಕ್ಷೇತ್ರದಿಂದ ಎ.ಐ.ಎಮ್.ಐ.ಎಮ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಮತ್ತೆ ತಿಹಾರ್ ಜೈಲಿಗೆ ವಾಪಸಾಗಿರುವ ಶಿಫಾ-ಉರ್-ರಹಮಾನ್ ಪರವಾಗಿ ಅವರ ಪತ್ನಿ ನೂರಿನ್ ಫಾತಿಮಾ ತೀವ್ರ ಹುರುಪಿನಿಂದ ಮತಯಾಚನೆ ಮಾಡುತ್ತಿದ್ದಾರೆ.
ಇನ್ನೂ ಓದಿ ದೆಹಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಜೈಲುಹಕ್ಕಿ ತಾಹಿರ್ ಹುಸೈನ್ ಯಾರು ಗೊತ್ತೇ?
“ಮಾನವೀಯ ಅಂತಃಕರಣದ ನನ್ನ ಗಂಡನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಕಳೆದ ಐದು ವರ್ಷಗಳಿಂದ ಜೈಲಿನಲ್ಲಿಟ್ಟಿರುವ ಸರ್ಕಾರದ ವಿರುದ್ಧ ಪ್ರತಿರೋಧ ತೀರಿಸಿಕೊಳ್ಳಲೇಬೇಕಾಗಿದೆ, ಸತ್ಯ ಗೆದ್ದೆ ಗೆಲ್ಲುತ್ತದೆ” ಎಂಬ ನಂಬಿಕೆಯಲ್ಲಿರುವ ನೂರಿನ್ ಫಾತಿಮಾರಿಗೆ ಪ್ರಚಾರ ಕಾರ್ಯದಲ್ಲಿ ಜೊತೆ ನಿಂತಿದ್ದಾರೆ ಅಸಾದುದ್ದಿನ್ ಓವೈಸಿ.

ನಜ್ಮಾ ನಜೀರ್, ಚಿಕ್ಕನೇರಳೆ
ಯುವ ರಾಜಕಾರಣಿ. ಸಾಮಾಜಿಕ ಹೋರಾಟಗಳಲ್ಲಿ ತೊಡಗಿಕೊಂಡಿದ್ದಾರೆ