ಭಾರತದಲ್ಲಿ ದಲಿತರ ದೇವಾಲಯ ಪ್ರವೇಶ ʼನಿಷೇಧʼದ ಕೆಲವು ಪ್ರಶ್ನೆಗಳು

Date:

Advertisements

ಡಾ ಬಿ ಆರ್‌ ಅಂಬೇಡ್ಕರ್ ಅವರು ದೇವಾಲಯವನ್ನು ತಮ್ಮ ತಂಡದೊಂದಿಗೆ ಪ್ರವೇಶ ಮಾಡಲು ಹಂಬಲಿಸಿದ್ದು ಭಕ್ತಿ ಅಥವಾ ಅಜ್ಞಾನದ ಅಂಧಕಾರದ ಮಾದರಿಯಿಂದಲ್ಲ. ಬದಲಿಗೆ ಈ ನೆಲದ ವಾರಸುದಾರಿಕೆಯ ಸಂವಿಧಾನಬದ್ಧ ಹಕ್ಕನ್ನು ಚಲಾಯಿಸಲು ಎಂಬುವುದನ್ನು ಮರೆಯಬಾರದು.

ಭಾರತ ಚರಿತ್ರೆ ನಿಜಾರ್ಥದಲ್ಲಿ ಪ್ರಶ್ನೆ ಮಾಡದೇ ಒಪ್ಪಿಕೊಳ್ಳುವ ಮಾದರಿಯು ವರ್ಣರಂಜಿತವಾಗಿದೆ. ನಿಜಾರ್ಥದಲ್ಲಿ ಹೇಳಬೇಕೆಂದರೆ, ದುಡಿಸಿಕೊಂಡು ಹೊಟ್ಟೆ ತುಂಬಾ ಉಂಡವರೇ ತಮ್ಮ ಊಟದ ವೈಶಿಷ್ಟ್ಯವನ್ನು ವರ್ಣರಂಜಿತವಾಗಿ ಬರೆದುಕೊಂಡು ಅದನ್ನೇ ಭಾರತದ ಚರಿತ್ರೆಯನ್ನಾಗಿಸಿದರು. ಈ ಚರಿತ್ರೆ ಪುರಾಣದೊಂದಿಗೆ ಸಮೀಕರಿಸಿಕೊಂಡ ಕಾರಣಕ್ಕಾಗಿ ಜನರಿಗೂ ಹೆಚ್ಚು ರಂಜಿಸಿತು. ಈ ಪುರಾಣ ಹಾಗೂ ತೀರ್ಥದ ಹಿನ್ನೆಲೆಯ ರಂಜನೆಯನ್ನು ಹೇಳುತ್ತಿರುವ ಜನರೇ ಇಂದಿಗೂ ವಾಸ್ತವದ ಸಂವಿಧಾನವನ್ನು ಧಿಕ್ಕರಿಸಿ ಪುರಾಣದ ಸಂವಿಧಾನವನ್ನೇ ಮಾತನಾಡುತ್ತಿರುವುದು. ಅದನ್ನೇ ಹಂಬಲಿಸುತ್ತಿರುವುದು. ನಿಜವಾಗಿಯೂ ಇವರೇ ರಾಷ್ಟ್ರದ್ರೋಹಿಗಳು.

ಇಂತಹ ಸಂವಿಧಾನ ಭಾಹಿರ ಧೋರಣೆಯನ್ನು ಧಿಕ್ಕರಿಸಿ ಭಾರತ ಹಾಗೂ ಭಾರತೀಯತೆ ನೆಲಮೂಲ ಸಂಸ್ಕೃತಿಯನ್ನು ಅನಾವರಣಗೊಳಿಸುವ ಜನರ ಬೆವರಿನ ಚರಿತ್ರೆ ಇಂದು ವಾಸ್ತವದ ಹಿನ್ನೆಲೆಯಿಂದ ಹೆಚ್ಚೆಚ್ಚು ದಾಖಲೆ ಸಹಿತ ನಿರ್ಮಾಣವಾಗಬೇಕಾಗಿದೆ. ಈ ಹಿನ್ನೆಲೆಯಿಂದ ಎಂದಿಗೂ, ಯಾರೋ ಏಕಮುಖ ದೃಷ್ಟಿಕೋನದಿಂದ ವರ್ಣರಂಜಿತವಾಗಿ ಚರಿತ್ರೆ ಬರೆದವರ ಮೇಲೆ ಪ್ರಶ್ನೆ ಮಾಡದ ಹಾಗೆ ದೇವರನ್ನು ಮುಂದೆ ಇಟ್ಟು ಮೂಕರನ್ನಾಗಿಸಿತು. ಸಂಪ್ರದಾಯವಾದಿ ಚರಿತ್ರಕಾರರು ದಾಖಲಿಸಿರುವ ಆಧಾರದಂತೆ 3000 ವರ್ಷಗಳಿಂದಲೂ ಇವರೇ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡ ಶಾಸನ, ಇವರೇ ತಮ್ಮ ಸ್ವಾರ್ಥಕ್ಕಾಗಿ ನಿರ್ಮಿಸಿಕೊಂಡ ದೇವಾಲಯ, ಇವರೇ ತಮ್ಮ ಸ್ವಾರ್ಥಕ್ಕಾಗಿ ಬರೆದುಕೊಂಡ ಹಸ್ತಪ್ರತಿಗಳ ಆಧಾರದ ಮೇಲೆ ಚರಿತ್ರೆಯನ್ನು ಬರೆದರೇ ಹೊರತು, ನಿಜವಾದ ಜನ ಜೀವನದ ದಾಖಲೆಗಳನ್ನು ಇಟ್ಟುಕೊಂಡು ಜನ ಸಂಸ್ಕೃತಿಯ ಅನಾವರಣಗೊಳಿಸುವ ಹಿನ್ನೆಲೆಯಿಂದ ಅಕ್ಷರವನ್ನು ಪಾರಂಪರಿಕವಾಗಿ ಸೊತ್ತಾಗಿಸಿಕೊಂಡಿದ್ದನ್ನು ಬರೆಯಲೇ ಇಲ್ಲ.

Advertisements

ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯಿಂದ ಈ ನೆಲದ ಶ್ರಮಜೀವಿ ವರ್ಗದ ವಾರಸುದಾರಿಕೆಯ ಜನರನ್ನು ಸಂವಿಧಾನ ಬಾಹಿರ ಹಿನ್ನೆಲೆಯಿಂದ ಒಂದು ಸುಳ್ಳನ್ನು ನಿಜ ಮಾಡಲು ಸಾವಿರ ಸುಳ್ಳು ಹೇಳಿ ನಂಬಿಸಿದಂತೆ ಇವರ ಸ್ವಾರ್ಥದ ಬದುಕಿಗಾಗಿ ದೇವರನ್ನು ಮುಂದೆ ಇಟ್ಟುಕೊಂಡು ಬಹುದೊಡ್ಡ ಸಾಂಸ್ಕೃತಿಕ ಕಂದಕವನ್ನೇ ಸೃಷ್ಟಿಸಿದರು. ಈ ಬಹುದೊಡ್ಡ ಕಂದಕ ನಿರ್ಮಾಣದ ಹಿಂದೆ ವೈದಿಕ ನಿಯಂತ್ರಣದ ಪ್ರಭುತ್ವವಿದೆ, ವೈದಿಕೀಕರಣ ಪ್ರಭುತ್ವ ಇದೆ. ಹೀಗೆ ವೈದಿಕೀಕರಣಗೊಂಡ ಭಾರತ ಚರಿತೆಯಲ್ಲಿ ಜನ ಇಲ್ಲ. ಜನ ಎಂದು ಉಲ್ಲೇಖ ಮಾಡುತ್ತಿರುವುದು ಭಾರತದ ಸಾಮಾಜಿಕ ಹಾಗೂ ಧಾರ್ಮಿಕ ಶ್ರೇಣಿಕೃತ ವ್ಯವಸ್ಥೆಯಲ್ಲಿ ಅಸ್ಪೃಶ್ಯರಾದವರ ಕುರಿತು.

ambedkar deekshabhoomi

ಪ್ರಪಂಚದ ಮಟ್ಟಿಗೆ ನಮ್ಮದು ಬಹು ಬಂಧುತ್ವದ ಜನ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರವೆಂದು ಹೇಳಿಕೊಂಡರೂ, ತನ್ನ ಒಡಲಾಳದಲ್ಲಿ ಬಹುದೊಡ್ಡ ಅಸಮಾನತೆಯನ್ನು ಹೊಂದಿರುವ ರಾಷ್ಟ್ರವೆಂದು ಘಂಟಾಘೋಷವಾಗಿ ಹೇಳಿಕೊಳ್ಳಲು ದಾಖಲೆಗಾಗಿ ಯಾವ ಕನ್ನಡಿಯನ್ನು ಹುಡುಕಬೇಕಾಗಿಲ್ಲ. ಇಂದು ʼಅಸ್ಪೃಶ್ಯರುʼ ಎಂದು ಕರೆಸಿಕೊಳ್ಳುತ್ತಿರುವ ದಲಿತರು ನಿಜ ಜೀವನದಲ್ಲಿ ತಮ್ಮ ದುಡಿಮೆ ಹಾಗೂ ಶ್ರಮ ಸಿದ್ಧಾಂತದ ಮೂಲಕ ಈ ನೆಲದಲ್ಲಿ ನಿಜ ʼಸ್ಪೃಶ್ಯʼರಾದರೂ ಮಾಡುವ ಕಸುಬು – ಕಸುಬಿನ ಆಧಾರದ ಮೇಲಿನ ಜಾತಿ- ಸೇವಿಸುವ ಆಹಾರ-ವಾಸಿಸುವ ಸ್ಥಳ- ಪೂಜಿಸುವ ದೇವರು- ದೇವರ ಹೆಸರಿನಲ್ಲಿ ಮಾಡುವ ಅಮಾನವೀಯ ಆಚರಣೆಗಳ ಆಧಾರದ ಮೇಲೆ ದೇವರ ಹೆಸರಿನಲ್ಲಿ ಶ್ರೇಷ್ಠತೆಯನ್ನು ಬಯಸಿಕೊಂಡು ಬದುಕಲು ಅಪೇಕ್ಷೆಪಡುತ್ತಿರುವ ಜನರಿಂದ “ಅಸ್ಪೃಶ್ಯರು” ಎಂದು ಕರೆಸಿಕೊಂಡರು ಎಂಬುದನ್ನು ಅರಿಯಬೇಕಾಗಿದೆ. ಅಂದರೆ, ಇವರು ಅಸ್ಪೃಶ್ಯರಲ್ಲ, ಶತಶತಮಾನಗಳಿಂದಲೂ ಮಾನಸಿಕ ಅಸ್ಪೃಶ್ಯತೆಗೆ ಒಳಗಾದವರಿಂದ ಅಸ್ಪೃಶ್ಯರೆಂದು ಕರೆಸಿಕೊಂಡವರು ಎಂಬುವುದು ಸ್ಪಷ್ಟ.

ಹೀಗೆ ದೈಹಿಕ ಅಸ್ಪೃಶ್ಯತೆಗೆ ಒಳಗಾದ ಈ ಜನವರ್ಗಕ್ಕೆ ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯಿಂದ ಮೂಲಭೂತ ಹಕ್ಕುಗಳನ್ನು ಸಂಪೂರ್ಣವಾಗಿ ಹರಣ ಮಾಡಲಾಯಿತು. ಮನುಷ್ಯ ಈ ಭೂಮಿ ಮೇಲೆ ಜೀವಿಸಲು ಇರಬೇಕಾದ ಮೂಲಭೂತ ಹಕ್ಕುಗಳನ್ನು ದೇವರು ಹಾಗೂ ದೇವಾಲಯದ ಹೆಸರಿನಿಂದ ನಿರ್ಬಂಧಕ್ಕೆ ಒಳಪಡಿಸಲಾಯಿತು. ಕುಡಿಯುವ ನೀರು, ಸೇವಿಸುವ ಆಹಾರ, ವಾಸಿಸುವ ಮನೆಗಳೂ ಕೂಡ ಅಸ್ಪೃಶ್ಯತೆಯ ಹಿನ್ನೆಲೆಯಿಂದ ಸಾಂಸ್ಕೃತಿಕ ದಿಗ್ಬಂಧನಕ್ಕೆ ಒಳಗಾದವು. ಈ ದಿಗ್ಬಂಧನದಲ್ಲಿ ಪ್ರಮುಖವಾದದ್ದು ದಲಿತರನ್ನು ಊರಿನಲ್ಲಿ ನಿರ್ಮಾಣಗೊಳ್ಳುವ ದೇವಾಲಯಗಳಿಗೆ ಪ್ರವೇಶ ನಿರಾಕರಣೆಯೂ ಒಂದು.

ನಾನು ಮೇಲೆ ಉಲ್ಲೇಖಿಸಿದ ಮಾದರಿಯವರು ಬರೆದುಕೊಂಡ ಪ್ರಶ್ನೆ ಮಾಡಿದ ಚರಿತ್ರೆಯಲ್ಲಿ ಊರಿನ ದೇವಾಲಯಗಳಿಗೆ ಪ್ರಮುಖ ಸ್ಥಾನವಿದೆ. ಊರಿನ ದೇವಾಲಯವೆಂದರೆ ಅಗ್ರಜರು ವಾಸ ಮಾಡುವ ಸ್ಥಳ ಅಗ್ರಹಾರ ಹಾಗೂ ತಮಗೆ ತಾವೇ ಮೇಲ್ಜಾತಿ ಎಂದು ಕರೆದುಕೊಂಡಿರುವ ಜನ ವಾಸ ಮಾಡುವ ಸ್ಥಳ. ಈ ದಿನದಿಂದ ಇವರು ಬರೆದ ಚರಿತ್ರೆಯಲ್ಲಿ ಭಾರತ ದೇವಾಲಯಗಳ ನಾಡು ಎಂದು ಕರೆಸಿಕೊಳ್ಳುತ್ತದೆ. ಆದರೆ, ಈ ದೇವಾಲಯಗಳ ನಾಡಿನಲ್ಲಿ ಸಾಮಾನ್ಯವಾಗಿ ದಲಿತ ಜನರ ಮೂಲಭೂತ ಹಕ್ಕುಗಳ ವಿರೋಧಿ ನೀತಿ ಎಗ್ಗಿಲ್ಲದೆ ನಡೆಯುತ್ತಿದೆ. ಇವರ ದೇವಾಲಯಗಳ ಅಮಾನವೀಯ ಪದ್ಧತಿಯನ್ನು ಚಾಚೂ ತಪ್ಪದೇ ಮಾಡಲು ದಲಿತ ಇರಬೇಕು, ಆದರೆ ಇವರ ಅಜ್ಞಾನದ ದೇವಾಲಯಕ್ಕೆ ಮಾತ್ರ ಇವರು ಪ್ರವೇಶ ಮಾಡುವಂತಿಲ್ಲ. ಈ ಹಂತದಲ್ಲಿ ಕಾಡುವ ಪ್ರಶ್ನೆಯೆಂದರೆ ಈ ಸವರ್ಣೀಯತೆ ಬಯಸುವ ಮನುಷ್ಯ ದೇವರಿಗಿಂತ ಶ್ರೇಷ್ಠನೋ- ಅಥವಾ ದೇವರು ಈ ಸವರ್ಣೀಯ ಮನುಷ್ಯನಿಗಿಂತ ಕನಿಷ್ಠವೋ? ಇದಕ್ಕೆ ಉತ್ತರವೂ ಸ್ಪಷ್ಟವಾಗಿದೆ. ಈ ಅಸಂಬದ್ಧವಾದ ತತ್ವ ಸಿದ್ಧಾಂತದ ಮುಂದೆ ದೇವರು ಸಹ ಕನಿಷ್ಠವೇ ಎಂಬುದು ಸತ್ಯ.

ದಲಿತರ ದೇಗುಲ ಪ್ರವೇಶ

ಮೇಲಿನ ಈ ತತ್ವ ಸಿದ್ಧಾಂತವನ್ನು ಬುದ್ಧನಿಂದ ಮೊದಲುಗೊಂಡು ಬಸವಾದಿ ಶರಣ-ಶರಣೆಯರು, ಕನಕಾದಿ-ಕೀರ್ತನೆಕಾರರು, ಸೂಫಿ-ಸಂತರು ಸಂಪೂರ್ಣವಾಗಿ ವಿರೋಧಿಸಿದರು. ನಮ್ಮ ದೇಹಗಳೇ ದೇಗುಲ ಎಂದು ನಮ್ಮನ್ನು ನಾವು ಮೊದಲು ಅರ್ಥಮಾಡಿಕೊಳ್ಳುವ ಮಾದರಿಯಲ್ಲಿ ತಿಳಿಹೇಳಿದರು. ಇವರ ಈ ವಾಸ್ತವದ ಮಾತುಗಳು ಧಾರ್ಮಿಕ ಅಂಧಕಾರದಲ್ಲಿ ಸೃಷ್ಟಿಸಿಕೊಂಡಿರುವ ದೇವಾಲಯದ ಹಾಗೂ ಸ್ವ-ಪ್ರತಿಷ್ಠೆಯ ದೇವರ ವಾರಸುದಾರರಿಗೆ ತಿಳಿಯಲೇ ಇಲ್ಲ. ನಾವು ಅನುಸರಿಸುತ್ತಿರುವ ನೀತಿ ತಪ್ಪು ಎಂದು ಸ್ಪಷ್ಟವಾಗಿ ತಿಳಿದಿದ್ದರೂ ಸ್ವಾರ್ಥಕ್ಕಾಗಿ ಮುಂದುವರೆಸಿದ ಕಾರಣಕ್ಕಾಗಿ ನಿಜ ಭಾರತದ ಸಾಂಸ್ಕೃತಿಕ ಪ್ರೀತಿ ನಿಜಾರ್ಥದಲ್ಲಿ ಅಸ್ಪೃಶ್ಯತೆಗೆ ಒಳಗಾಗಿದೆ. ಇದಕ್ಕೆ ಕಾರಣ ಮಾತನಾಡದ ದೇವರು ನಮ್ಮನ್ನು ಕೈ ಹಿಡಿದು ಮುನ್ನಡೆಸುತ್ತದೆ ಎಂಬ ಅಜ್ಞಾನದಿಂದ ನಂಬಿರುವಷ್ಟು, ಸಮಾಜ ಸುಧಾರಕರನ್ನು ಹಾಗೂ ನಮ್ಮ ವಾಸ್ತವದ ಲಿಖಿತ ಸಂವಿಧಾನವನ್ನು ನಂಬುವುದೇ ಇಲ್ಲ. ಇದಕ್ಕೆ ಪ್ರಮುಖ ಕಾರಣ ಪಾರಂಪರಿಕ ಅಜ್ಞಾನ.

ಸ್ವತಂತ್ರ ಪೂರ್ವದಲ್ಲಿ ಅಸ್ಪೃಶ್ಯತೆ ಮೌನವಾಗಿ ತಾಂಡವವಾಡುತ್ತಿತ್ತು. ಮೂಕ ವೇದನೆಯನ್ನು ಅನುಭವಿಸುತ್ತಿತ್ತು. ಇಂತಹ ಅಮಾನವೀಯ ಅಸ್ಪೃಶ್ಯತೆ ಹಿನ್ನೆಲೆಯಿಂದ ಕೇರಿ ಜನರು ತಮ್ಮ ಬದುಕಿನ ಉಜ್ವಲವನ್ನು ಹಂಬಲಿಸಲು ತಮ್ಮ ಕೇರಿಗೆ ಸಂಬಂಧಿಸಿದಂತೆ ಮಾರಿ- ಮಸಣಿಗಳನ್ನು ಪ್ರಕೃತಿ ಹಾಗೂ ವಾಸ್ತವದ ಹಿನ್ನೆಲೆಯಿಂದ ಸೃಷ್ಟಿಸಿ ಪೂಜೆ ಪುನಸ್ಕಾರಗಳನ್ನು ಮಾಡಿ ತಮ್ಮ ಧಾರ್ಮಿಕ ಪದ್ಧತಿಯನ್ನು ಪ್ರದರ್ಶಿಸುತ್ತಿದ್ದರು. ದೇವರ ಹೆಸರಿನಲ್ಲಿ ತಮ್ಮ ಹಾಗೂ ತಾವು ನಂಬಿರುವ ಜನರ ಕಲ್ಯಾಣದ ಬದುಕಿಗಾಗಿ ಅಮಾನವೀಯ ಪದ್ಧತಿಗಳನ್ನು ಪಾಲಿಸುತ್ತಿದ್ದರು. ಇವುಗಳಿಗೆ ಸ್ಥಳೀಯ ಬಂಡವಾಳಶಾಹಿಗಳು ಹಾಗೂ ಊಳಿಗಮಾನ್ಯಶಾಹಿಗಳ ಸ್ವಪ್ರತಿಷ್ಠೆ ಕೇಂದ್ರಿತ ಆಜ್ಞೆಯೂ ಇತ್ತು. ಈ ಸಂದರ್ಭದಲ್ಲಿ ಅಸ್ಪೃಶ್ಯರು ಊರಿನಲ್ಲಿದ್ದ ವರ್ಣರಂಜಿತ ದೇವಾಲಯಗಳಿಗೂ ನಾವು ಪ್ರವೇಶ ಮಾಡಬೇಕೆಂಬ ಮೂಲಭೂತ ಹಕ್ಕನ್ನು ಮಂಡಿಸಿ ಹೋರಾಟ ಮಾಡಿರುವುದರ ಕುರಿತು ಯಾವ ದಾಖಲೆಯೂ ಇಲ್ಲ. ಶಾಸನ ಹಾಗೂ ಹಸ್ತಪ್ರತಿಗಳನ್ನು ಬರೆದು ಪಂಡಿತ ಪಾಮರರಾದವರು ಇಂತಹ ಹೋರಾಟಗಳು ನಡೆದಿದ್ದರೂ ಕೂಡಾ ತಮ್ಮ ಪಾರಂಪರಿಕ ಅಸ್ಪೃಶ್ಯತೆಯ ಮನಸ್ಸನ್ನು ಹೊಂದಿರುವ ಕಾರಣಕ್ಕಾಗಿ ದಾಖಲಿಸಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು.

ಸ್ವತಂತ್ರ್ಯಪೂರ್ವದಲ್ಲಿ ಒಂದಷ್ಟು ಕೇರಿಯ ಜನ ಅಂದರೆ ಅಸ್ಪೃಶ್ಯರು ಊರಿನ ದೇವಾಲಯಗಳಿಗೆ ಪ್ರವೇಶ ಮಾಡಲು ಹಂಬಲಿಸಿದ್ದು ಬ್ರಿಟಿಷ್ ಸಂಸ್ಕೃತಿ ಭಾರತಕ್ಕೆ ಪ್ರವೇಶ ಮಾಡಿ ಒಂದಿಷ್ಟು ನವ ಚಿಂತನೆಗಳು, ಭಾರತಕ್ಕೆ ಪ್ರವೇಶ ಆದ ನಂತರವೇ. ನಂತರ ಪ್ರಬಲವಾಗಿ ದೇವಾಲಯ ಪ್ರವೇಶಕ್ಕೆ ಹೋರಾಟ ನಡೆದದ್ದು ಅಂಬೇಡ್ಕರ್ ಅವರು 1930ರಲ್ಲಿ ನಾಸಿಕ್‌ನ ಕಾಲರಾಂಪುರ ದೇವಾಲಯಕ್ಕೆ ಪ್ರವೇಶ ಮಾಡಲು ಬೌದ್ಧಿಕ ಹೋರಾಟವನ್ನು ಹಮ್ಮಿಕೊಂಡ ಸಂದರ್ಭ. ಭಾರತದಲ್ಲಿ ದಲಿತರ ದೇವಾಲಯ ಪ್ರವೇಶಕ್ಕೆ ಮುನ್ನುಡಿ ಬರೆದವರು ಬಾಬಾಸಾಹೇಬ್ ಡಾ ಬಿ ಆರ್ ಅಂಬೇಡ್ಕರ್. ಅವರಿಗೂ ಮುಂಚೆ ಕೇರಳದ ಅಯ್ಯನ್ ಕಾಳಿ ಹಾಗೂ ಮಹಾರಾಷ್ಟ್ರದ ಜ್ಯೋತಿಬಾ ಫುಲೆ ದಂಪತಿ ಈ ಕಾರ್ಯವನ್ನು ಮಾಡಲು ಮುಂದಾಗಿ ಸೋತಿದ್ದರು. ಆದರೆ, ಅಂಬೇಡ್ಕರ್ ಅವರ ಈ ಹೋರಾಟ ಎರಡೂವರೆ ಸಾವಿರ ವರ್ಷಗಳ ಸಾಂಪ್ರದಾಯಕ ಚರಿತ್ರೆಗೆ ಪ್ರಗತಿದಾಯಕ ಹಿನ್ನೆಲೆಯ ಮುನ್ನುಡಿ ಬರೆದಂತಾಗಿತ್ತು. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ದಲಿತರು ದೇವಾಲಯ ಪ್ರವೇಶ ಮಾಡುವುದು ಎಂದರೆ ಈ ನೆಲದ ಮೂಲನಿವಾಸಿಗಳಾಗಿ ಇಲ್ಲಿನ ಸಕಲ ದೇವರು ಹಾಗೂ ದೇವಸ್ಥಾನಗಳಿಗೂ ನಾವು ಕಾನೂನಾತ್ಮಕವಾಗಿ ವಾರಸುದಾರರು ಎನ್ನುವ ಅಚಲವಾದ ನಂಬಿಕೆ.

ದೇವಾಲಯ ಪ್ರವೇಶ 2

ಅಂಬೇಡ್ಕರ್ ಅವರು ಈ ದೇವಾಲಯವನ್ನು ತಮ್ಮ ತಂಡದೊಂದಿಗೆ ಪ್ರವೇಶ ಮಾಡಲು ಹಂಬಲಿಸಿದ್ದು ಭಕ್ತಿ ಅಥವಾ ಅಜ್ಞಾನದ ಅಂಧಕಾರದ ಮಾದರಿಯಿಂದಲ್ಲ. ಬದಲಿಗೆ ಈ ನೆಲದ ವಾರಸುದಾರಿಕೆಯ ಸಂವಿಧಾನಬದ್ಧ ಹಕ್ಕನ್ನು ಚಲಾಯಿಸಲು ಎಂಬುವುದನ್ನು ಮರೆಯಬಾರದು. ಈ ಮಾದರಿಗಿಂತಲೇ ದಲಿತರು ಗ್ರಾಮೀಣ ಭಾಗದಲ್ಲಿ ದೇವಾಲಯಗಳ ಪ್ರವೇಶವನ್ನು ಭಾರತದ ಸಂವಿಧಾನಾತ್ಮಕ ಹಿನ್ನೆಲೆಯಿಂದ ಪ್ರವೇಶ ಮಾಡಲು ಹಕ್ಕು ಮಂಡಿಸುತ್ತಿರುವುದು. ಈ ಹಂತದಲ್ಲಿ ದಲಿತರ ಬೇಡಿಕೆ ಸಂವಿಧಾನಾತ್ಮಕವಾಗಿ ಸತ್ಯವಾಗಿದೆ.

1947ಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂತು. 1950ರ ಜನವರಿ 26 ಭಾರತ ಸಮ ಸಮಾಜವನ್ನು ಬಯಸಿದ ಸಂವಿಧಾನ ಜಾರಿಗೆ ಬಂತು. ಭಾರತ ಸಂವಿಧಾನ ಸಮಸ್ತ ಭಾರತದ ಪ್ರತಿಯೊಬ್ಬ ಪ್ರಜೆಗೂ ತನ್ನ ಮೂಲಭೂತ ಹಕ್ಕುಗಳನ್ನು ಕಾಪಾಡಿಕೊಳ್ಳುವ – ರಕ್ಷಿಸಿಕೊಳ್ಳುವ ಅಧಿಕಾರವನ್ನು ನೀಡಿತು. ಈ ಹಿನ್ನಲೆಯಿಂದ ಜಾತ್ಯತೀತತೆಯನ್ನು ಹಂಬಲಿಸಿದ, ಧರ್ಮ ನಿರಪೇಕ್ಷತೆಯನ್ನು ಸಾರಿ ಹೇಳುವ ಸಂವಿಧಾನವನ್ನು ನಾವೆಲ್ಲರೂ ಜಾರಿಗೊಳಿಸಿಕೊಂಡೆವು. ನಮ್ಮ ಸಂವಿಧಾನ ಒದಗಿಸಿದ ಸಮಸ್ತ ಮಾನವನ ಮೂಲಭೂತ ಹಕ್ಕುಗಳ ನೀಡಿಕೆ ಹಾಗೂ ಸಂರಕ್ಷಣೆಯ ಹಿನ್ನೆಲೆಯಿಂದ ದಲಿತರು ತಮ್ಮ ಕೇರಿಯ ದೇವರನ್ನು ಶತಶತಮಾನಗಳಿಂದಲೂ ಊರಿನ ದೇವರೊಂದಿಗೆ ಬೆಸೆದುಕೊಂಡಿದ್ದ ಸಹೋದರತ್ವದ ಬಂಧುತ್ವದೊಂದಿಗೆ ಸಾಂಸ್ಕೃತಿಕ ಬಂಧನಕ್ಕೆ ಒಳಪಡಿಸಿಕೊಂಡಿದ್ದರೂ, ಕೇರಿಯ ದೇವತೆ ಊರಿನ ದೇವತೆ ಜೊತೆ ಎಂದಿಗೂ ಜಾತಿ ಹಾಗೂ ಅಸ್ಪೃಶ್ಯತೆ ಹಿನ್ನೆಲೆಯಿಂದ ಮುಖಾಮುಖಿಯಾಗಿರಲೇ ಇಲ್ಲ.

ಆದರೆ, ಸಂವಿಧಾನದ ಹಿನ್ನೆಲೆಯಿಂದ ಊರಿನ ದೇವತೆ ಹಾಗೂ ದೇವಸ್ಥಾನವನ್ನು ನೋಡುವ ಹಾಗೂ ಪ್ರವೇಶ ಮಾಡುವ ಹಕ್ಕನ್ನು ದಲಿತರು ಪ್ರತಿಪಾದನೆ ಮಾಡಿದ್ದೆ ಪಾರಂಪರಿಕ ಅಜ್ಞಾನದ ಅಲಿಖಿತ ಸಂವಿಧಾನ ಮತ್ತೆ ಜ್ಞಾನದ ಲಿಖಿತ ಸಂವಿಧಾನದ ವಿರುದ್ಧ ಬೀದಿಯಲ್ಲಿ ನಿಂತು ಅವೈಜ್ಞಾನಿಕ ಹೋರಾಟ ಮಾಡಲು ಆರಂಭಿಸಿತು.

ಈ ಅಜ್ಞಾನದ ಹೋರಾಟಕ್ಕೆ 2500 ವರ್ಷಗಳ ಅಜ್ಞಾನದ ಮೂಲಭೂತ ಪೈಚಾಚಿಕ ರೂಪ ಪಡೆದು ಊರುಕೇರಿಗಳಲ್ಲಿ ತಾಂಡವ ನೃತ್ಯ ಮಾಡುತ್ತಿದೆ.

tholasamma devalaya

ಸ್ವಾತಂತ್ರ್ಯ ಬಂದು 77 ವರ್ಷಗಳಾಯಿತು. ಸಂವಿಧಾನ ಬಂದು 75 ವರ್ಷಗಳಾದರೂ ಸಮಾನತೆಯನ್ನು ಬಯಸದ ಜನರು ದೇವರು ಹಾಗೂ ಧರ್ಮದ ಕಿಂಚಿತ್ತು ಪರಿಜ್ಞಾನವೇ ಇಲ್ಲದೆ, ಕೇವಲ ಸಮಾಜದ ಹಿನ್ನೆಲೆಯಿಂದಲೇ ದೌರ್ಜನ್ಯವನ್ನು ಎಸೆಗುತ್ತಿರುವುದು ಭಾರತಕ್ಕೆ ಅಂಟಿರುವ ಬಹುದೊಡ್ಡ ದುರಂತ. ದೇಶ ಪ್ರತಿದಿನ, ಪ್ರತಿಕ್ಷಣ ಹೆಚ್ಚು ಹೆಚ್ಚು ಸಂಕುಚಿತ ಗೊಳ್ಳುತ್ತಿರುವುದು ಈ ಹಿನ್ನಲೆಯಿಂದಲೇ. ಇದು ಭಾರತ ಪ್ರಪಂಚ ಮಟ್ಟದಲ್ಲಿ ತನ್ನ ಸಾಂಸ್ಕೃತಿಕ ಐಡೆಂಟಿಟಿಯನ್ನು ಕಳೆದುಕೊಳ್ಳುತ್ತಿರುವುದಕ್ಕೂ ಕಾರಣವಾಗಿದೆ.

ಮೇಲಿನ ಅಂಶಗಳಿಗೆ ನಿದರ್ಶನವೆಂದರೆ ಗ್ರಾಮೀಣ ಭಾಗದಲ್ಲಿ ಇನ್ನೂ ಹಚ್ಚ ಹಸಿರಾಗಿಯೇ ಇರುವ ಕೇರಿಯ ಜನ ದೇವಾಲಯಗಳಿಗೆ ಪ್ರವೇಶ ಮಾಡಲು ಮುಂದಾದರೆ ಸ್ವ ಘೋಷಿತ ಊರಿನ ಜನ “ಊರು- ಹೊಲಗೇರಿ ಒಂದು ಮಾಡಲು ಸಾಧ್ಯವೇ” ಎಂಬ ಅಸಂವಿಧಾನಾತ್ಮಕ ಮಾತುಗಳನ್ನಾಡುತ್ತಿದ್ದಾರೆ. ಮುಂದೆ ದೇವರನ್ನೇ ಬಹಿರಂಗವಾಗಿ ಬೇರೆಡೆಗೆ ಕೊಂಡೊಯ್ಯುವುದು ಭಾರತದ ಸಂಕುಚಿತಗೊಂಡಿರುವ ಸಂಸ್ಕೃತಿಗೆ ಹಿಡಿದ ಕೈಗಡಿಯಾಗಿದೆ.

ಇನ್ನು ದೇವಾಲಯಗಳಿಗೆ ದಲಿತರು ಪ್ರವೇಶ ಮಾಡುತ್ತಾರೆ ಅಥವಾ ಸರ್ಕಾರವೇ ಮಾಡಿಸಲು ಮುಂದಾಗುತ್ತದೆ ಎಂಬ ವಿಷಯ ಕೇಳಿ ಸವರ್ಸಾಣೀಯರು ಸಾಮೂಹಿಕ ಆತ್ಮಹತ್ಯೆಗೂ ಮುಂದಾಗುತ್ತೇವೆ ಎಂದು ಹೇಳಿಕೊಂಡದ್ದು ಧಾರ್ಮಿಕ ದುರಂತವೇ ಸರಿ. ಭಾರತದ ಸಂವಿಧಾನ ಹೇಳುವ ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು ಎಂಬ ತತ್ವ ಸಿದ್ಧಾಂತದ ಹಿನ್ನೆಲೆಯಿಂದ ದಲಿತರು ಸಂವಿಧಾನಾತ್ಮಕವಾಗಿ ಯಾವ ಮೂಲಭೂತ ಹಕ್ಕುಗಳನ್ನು ಇಂದಿಗೂ ಸಹ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಇಂತಹ ನಿದರ್ಶನಗಳು ಸಾವಿರಾರು ಇವೆ. ಸಾರ್ವಜನಿಕರಿಗಾಗಿ ನಿರ್ಮಾಣಗೊಂಡಿರುವ ಕೆರೆ, ಬಾವಿ, ಕಲ್ಯಾಣಿ , ನೀರಿನ ಅರವಟ್ಟಿಗಳನ್ನು ಯಾವ ಕಾರಣಕ್ಕೂ ಮುಟ್ಟುವ ಹಾಗಿಲ್ಲ. ಆದರೆ, ಇದು ತಪ್ಪು ಎಂದು ಹೇಳುವ ಕಾನೂನು ಸಹ ಸ್ಥಳೀಯ ಆಡಳಿತದ ಮುಂದೆ ಸೋತು ರಾಜಿ ಮಾಡುತ್ತಿರುವುದು ದುರಂತವೇ ಸರಿ.

ವಾಸ್ತವದಲ್ಲಿ ಬುದ್ಧನ ಕಾಲದಿಂದ ಅಂಬೇಡ್ಕರ್ ಕಾಲದವರೆಗೂ ಕೇರಿಯ ಜನರೇ ಈ ಭಾರತದ ನೆಲದಲ್ಲಿ ಶತಶತಮಾನಗಳಿಂದಲೂ ಬದಲಾವಣೆಯನ್ನು ತಂದವರು ಹಾಗೂ ಬದಲಾವಣೆಯನ್ನು ಬಯಸುವವರು. ಆದರೆ
ಬುದ್ಧನ ಪೂರ್ವದಿಂದ ಮೊದಲ್ಗೊಂಡು ಇಂದಿನವರೆಗೂ ಬದಲಾವಣೆಯನ್ನು ಬಯಸದೇ ಇರುವ ಏಕೈಕ ವರ್ಗವೆಂದರೆ ಅದು ಊರಲ್ಲಿ ವಾಸ ಮಾಡುವ ಜನವರ್ಗ. ಇವರು ನಾವು ಧರ್ಮ ಹಾಗೂ ಜಾತಿಯ ಹಿನ್ನೆಲೆಯಿಂದ ಶ್ರೇಷ್ಠರು ಎಂಬ ಪಾರಂಪರಿಕ ಅಜ್ಞಾನದ ಅಸ್ಪೃಶ್ಯತೆಯನ್ನು ತಮ್ಮ ತಲೆಯಲ್ಲಿ ತುಂಬಿಕೊಂಡಿರುವ ಕಾರಣ ಆ ಗುಂಗಿನಿಂದ ಹೊರಬರದೆ ನಿಂತಲ್ಲಿ ನಿಂತು ಶಾಶ್ವತವಾಗಿ ತಟಸ್ಥವಾಗಿದ್ದಾರೆ. ಆದರೆ ಕೇರಿಯ ಜನ ಶ್ರೇಣೀಕೃತ ವ್ಯವಸ್ಥೆಯ ತಳದಲ್ಲಿ ಇರುವ ಕಾರಣ ಮೇಲೆ ಹತ್ತುವ ಬಯಕೆಯಿಂದ ಸಾಂಸ್ಕೃತಿಕವಾಗಿ ಬದಲಾವಣೆಗೆ ಅನುವು ಮಾಡಿಕೊಳ್ಳುತ್ತಿದ್ದಾರೆ.

ವಿಶ್ವಜ್ಞಾನಿ ಅಂಬೇಡ್ಕರ್‌ ಕುರಿತು ಸ್ಪರ್ಧಾತ್ಮಕ ಪರೀಕ್ಷೆ

ಬದಲಾವಣೆಯ ಭಾರತದಲ್ಲಿ ಅನೇಕ ಹೊಸ ಹೊಸ ಆವಿಷ್ಕಾರಗಳನ್ನು ನಿರ್ಮಾಣ ಮಾಡಿದವರು ಭಾರತದ ಕೇರಿಯ ಜನರೇ ಹೊರತು ಊರಿನ ಜನರಲ್ಲ ಎಂಬುವುದು ಈ ಹಂತದಲ್ಲಿ ಸ್ಪಷ್ಟವಾದದ್ದು. ಭಾರತದಲ್ಲಿ ಏಕೆ ಪ್ರಪಂಚಕ್ಕೆ ಸಮಸೃಷ್ಟಿಯನ್ನು ಪ್ರತಿಪಾದನೆ ಮಾಡಲು ಕನ್ನಡ ನೆಲದಲ್ಲಿ ಶತಮಾನದಲ್ಲಿ ಹುಟ್ಟಿಕೊಂಡ ವಚನ ಚಳವಳಿ ಸಹ ಕನ್ನಡ ನೆಲದ ಕೇರಿಯ ಜನದಿಂದಲೇ ಎಂಬುದನ್ನು ಮರೆಯಬಾರದು. ಈ ಚಳವಳಿ ಹುಟ್ಟಿಕೊಂಡಿದ್ದೇ ಊರಿನ ಜನರ ಸಂಪ್ರದಾಯ ನೀತಿಗಳ ವಿರುದ್ಧ ಹೊರತು ಬೇರೇನೂ ಅಲ್ಲ.

ಇನ್ನು ಊರಿನ ದೇವಾಲಯಗಳಿಗೆ ಪ್ರವೇಶ ಮಾಡಬೇಕು ಎಂದು ಪ್ರಬಲ ಹಕ್ಕನ್ನು ಮಂಡಿಸುವ ಕೇರಿಯ ಜನರಿಗೂ ಸಂವಿಧಾನದ ಸ್ಪಷ್ಟ ಅರಿವು ಇಲ್ಲ. ಇವರಿಗೆ ಕಾನೂನುಗಳು ಹಾಗೂ ಕಾನೂನನ್ನು ರೂಪಿಸಿದ ಧೀಮಂತ ವ್ಯಕ್ತಿ ಅಂಬೇಡ್ಕರ್ ಅವರು ದೇವರಾಗಿ ಪರಿವರ್ತನೆ ಆಗಿದ್ದಾರೆ. ಯಾವಾಗ ಅಂಬೇಡ್ಕರ್ ಅವರ ಚಿಂತನೆಗಳು ದೇವರ ರೂಪವನ್ನು ಪಡೆದುಕೊಳ್ಳುತ್ತವೆಯೋ ಅಲ್ಲಿ ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಸಿದ್ದಾಂತ ಸೋತಿತು ಎಂದರ್ಥ. ಈ ಸಿದ್ಧಾಂತವನ್ನು ಕೇರಿಯ ಜನರ ಮೇಲೆ ಪ್ರತಿಪಾದನೆ ಮಾಡಲು ಊರಿನ ಜನ ತುದಿಗಾಲಲ್ಲಿ ಕಾದು ನಿಂತಿರುತ್ತಾರೆ. ಈ ಸಂದರ್ಭದಲ್ಲಿ ಊರಿನ ದೇವತೆ ನೋಡುವ ಭಾಗ್ಯ, ಕೇರಿಯ ಜನರಿಗೆ ಒಂದಷ್ಟು ದೊರಕಲೂ ಬಹುದು. ಅದು ಸಮಯ ಸಾಧಕತನದವರೆಗೆ ಮಾತ್ರ.

ಇದನ್ನೂ ಓದಿ ಅಂಬೇಡ್ಕರ್‌ ವಿಶೇಷ | ಚಿರಂಜೀವಿಯಾಗಿ ಬದುಕಿರುವ ಬಾಬಾಸಾಹೇಬರನ್ನು ‘ಕಾಣುವುದು’ ಯಾವಾಗ?
ಇದನ್ನೂ ಓದಿ ಯುಪಿ ಮಾದರಿಯ ದ್ವೇಷೋತ್ಪಾದನೆಯಲ್ಲಿ ಕರ್ನಾಟಕದ ʼಸಂತರುʼ ಸಕ್ರಿಯ!

ಇಂತಹ ಊರಿನ ಹಾಗೂ ಕೇರಿಯ ಜನರಿಬ್ಬರಿಗೂ ಕಾನೂನಿನ ಅರಿವು ಮೂಡಿಸುವಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಪಾತ್ರ ಮಹತ್ವದಾಗಿದೆ. ಇವುಗಳ ಜೊತೆಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಕೇವಲ ಪಾಠ ಮಾಡುವುದಲ್ಲ, ಬದಲಿಗೆ ಪಾಠ ಮಾಡಲು ಬೇಕಾದ (ಸೋರ್ಸ್ ಗಳನ್ನು) ದಾಖಲೆಗಳನ್ನು, ಇಂತಹ ಅಸಂವಿಧಾನಾತ್ಮಕ ನೀತಿಯನ್ನು ಜಾರಿಗೊಳಿಸುತ್ತಿರುವ ಊರು ಮತ್ತು ಸಂವಿಧಾನಾತ್ಮಕವಾಗಿ ಬದಲಾವಣೆಯನ್ನು ಕೇಳುತ್ತಿರುವ ಕೇರಿಗಳಿಂದ ವಸ್ತುನಿಷ್ಠವಾಗಿ ಮಾಹಿತಿಯನ್ನು ಸಂಗ್ರಹಿಸುವುದು. ಸಂಗ್ರಹಿಸಿದ ಮಾಹಿತಿಯನ್ನು ಕಾನೂನಿನ ಪರಿಮಿತಿಗೆ ಒಳಪಡಿಸಿ ಸಮಸ್ತ ಜನರಿಗೂ ಸಂವಿಧಾನಾತ್ಮಕ ನ್ಯಾಯವನ್ನು ಒದಗಿಸುವುದು ಪ್ರಮುಖ ಆದ್ಯತೆಯಾಗಿದೆ. ಸಂವಿಧಾನದ ಅರಿವನ್ನು ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ. ಇದಕ್ಕೆ ಪೂರಕವಾಗಿ ಆರಂಭದಿಂದಲೇ ಪ್ರಜ್ಞಾವಂತ ಶಿಕ್ಷಣ ಹಾಗೂ ಬೌದ್ಧಿಕತೆಯ ಅನಾವರಣ ಆಗಬೇಕಿದೆ. ಹಾಗಾದಾಗ ಮಾತ್ರ ಭೌತಿಕ ದೇವಾಲಯವನ್ನು ಮುಚ್ಚಿ ಬೌದ್ಧಿಕ ದೇವಾಲಯದ ಬಾಗಿಲನ್ನು ತೆರೆಯಬಹುದಾಗಿದೆ. ಇದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಯಸಿದ ಭಾರತದ ಒಡಲಾಳದ ಸತ್ಯ ಸಂಗತಿಯು ಹೌದು.

ಸೊಸಲೆ
ಎನ್ ಚಿನ್ನಸ್ವಾಮಿ ಸೋಸಲೆ
+ posts

ಪ್ರಾಧ್ಯಾಪಕ, ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಎನ್ ಚಿನ್ನಸ್ವಾಮಿ ಸೋಸಲೆ
ಎನ್ ಚಿನ್ನಸ್ವಾಮಿ ಸೋಸಲೆ
ಪ್ರಾಧ್ಯಾಪಕ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X