ರಾಜ್ಯ ಬಜೆಟ್ | ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯಗಳ ಸಮತೋಲನದ ಬಜೆಟ್

Date:

Advertisements
 ತಲಾ ವರಮಾನವು ರೂ. 3 ಲಕ್ಷವನ್ನು ಮೀರಿರುವ ಕರ್ನಾಟಕದಲ್ಲಿ ಕೂಲಿಕಾರರಿಗೆ, ಅಸಂಘಟಿತ ವಲಯದ ಕಾರ್ಮಿಕರಿಗೆ, ಬಡ ರೈತರಿಗೆ, ಬೀದಿಬದಿ-ತಳ್ಳುಗಾಡಿ ವ್ಯಾಪಾರಗಾರರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ನೀಡುವ ರೂ.51,304 ಕೋಟಿ ವೆಚ್ಚವು ಅನುತ್ಪಾದಕವಾಗುತ್ತದೆಯೇ?

ಇಡೀ ದೇಶದಲ್ಲಿ ಆರ್ಥಿಕ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ. ಆರ್ಥಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯ ಕರ್ನಾಟಕ. ತಲಾ ವರಮಾನದಲ್ಲಿ ಅತ್ಯುತ್ತಮ ಸ್ಥಾನದಲ್ಲಿರುವ ರಾಜ್ಯ ಕರ್ನಾಟಕ. ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ ಗುರಿಗಳ ನಡುವೆ ಸಮತೋಲನವನ್ನು ಸಾಧಿಸಿಕೊಂಡು ಬೆಳೆಯುತ್ತಿರುವ ರಾಜ್ಯ ಕರ್ನಾಟಕ. ಕರ್ನಾಟಕವು 2024-25ರಲ್ಲಿ ಶೇ.7.4 ರಷ್ಟು ಆರ್ಥಿಕ ಬೆಳವಣಿಗೆಯನ್ನು ಸಾಧಿಸಿಕೊಂಡಿದೆ. ಇದೇ ಅವಧಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣ ಶೇ.6.4. ಸಿದ್ಧರಾಮಯ್ಯನವರ ಸರ್ಕಾರವು ಬಜೆಟ್ಟನ್ನು ಆರ್ಥಿಕ ನೆಲೆಯಲ್ಲಿ ನಿರ್ವಹಿಸುತ್ತಿದೆಯೇ ವಿನಃ ಕುಂಭಮೇಳ ನೆಲೆಯಲ್ಲಲ್ಲ. ಕರ್ನಾಟಕದ 2025-26ನೆಯ ಸಾಲಿನ ಬಜೆಟ್ಟಿನ ಬಗ್ಗೆ ವಿರೋಧ ಪಕ್ಷಗಳು ಆರೋಪಿಸುತ್ತಿರುವಂತೆ ಅದು ಹಿಂದುತ್ವ-ವಿರೋಧಿ ಬಜೆಟ್ಟೂ ಅಲ್ಲ; ಮಾಡರ್ನ್ ಮುಸ್ಲಿಂ ಲೀಗ್ ಬಜೆಟ್ಟೂ ಅಲ್ಲ. ಆರ್ಥಿಕ ಅನಕ್ಷರಸ್ಥರು ಮಾತ್ರ ಹೀಗೆ ಬಜೆಟ್ಟೊಂದನ್ನು ಟೀಕಿಸಬಹುದು. ಹಿಂದುತ್ವ-ವಿರೋಧಿ ಬಜೆಟ್ಟು, ಮಾಡರ್ನ್ ಮುಸ್ಲಿಂ ಲೀಗ್ ಬಜೆಟ್ಟು ಮುಂತಾದವು ಉತ್ತರ ಭಾರತದ ಧರ್ಮಾಂದ ರಾಜಕಾರಣಿಗಳ ಪರಿಭಾಷೆ. ಈ ಪರಿಭಾಷೆಯಿಂದ ಆರ್ಥಿಕ ಬೆಳವಣಿಗೆಯನ್ನು ನಿರ್ವಹಿಸುತ್ತಿರುವುದರಿಂದಲೇ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಬಿಹಾರ, ರಾಜಸ್ಥಾನ ಮುಂತಾದ ರಾಜ್ಯಗಳು ಆರ್ಥಿಕವಾಗಿ ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿವೆ. ಆರ್ಥಿಕ ಪರಿಭಾಷೆಯಲ್ಲಿ ಬಜೆಟ್ಟನ್ನು ನಿರ್ವಹಿಸುತ್ತಿರುವುದರಿಂದ ದಕ್ಷಿಣ ಭಾರತದ ರಾಜ್ಯಗಳು ಸಮೃದ್ಧತೆಯನ್ನು ಮೆರೆಯುತ್ತಿವೆ.

image 45

ಸಿಕ್ಕಿಂ ಮತ್ತು ದೆಹಲಿ ರಾಜ್ಯಗಳ ನಂತರ ದೇಶದಲ್ಲಿ ತಲಾ ವರಮಾನದಲ್ಲಿ ಮೂರನೆಯ ಸ್ಥಾನದಲ್ಲಿ ತೆಲಂಗಾಣವಿದ್ದರೆ ನಾಲ್ಕನೆಯ ಸ್ಥಾನದಲ್ಲಿ ಕರ್ನಾಟಕ ಮತ್ತು ಐದನೆಯ ಸ್ಥಾನದಲ್ಲಿ ತಮಿಳುನಾಡು ರಾಜ್ಯಗಳಿವೆ.

ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ತಲಾ ವರಮಾನವು ಇಂದು ಐದು ಅಂಕಿಗಳನ್ನು ದಾಟಿಲ್ಲ. ಉತ್ತರ ಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ಡಬಲ್ ಎಂಜಿನ್ ಸರ್ಕಾರದ ಆಳ್ವಿಕೆಯಿದೆ. ಆದರೂ ಅದರ ಬಡತನದ ಪ್ರಮಾಣ ತಗ್ಗುತ್ತಿಲ್ಲ ಮತ್ತು ತಲಾ ವರಮಾನದಲ್ಲಿ ಏರಿಕೆಯಾಗುತ್ತಿಲ್ಲ. ಇದಕ್ಕೆ ಬದಲಾಗಿ ಬಜೆಟ್ಟನ್ನು ಆರ್ಥಿಕ ಪರಿಭಾಷೆಯಲ್ಲಿ ನಿರ್ವಹಿಸುತ್ತಿರುವುದರಿಂದ ದಕ್ಷಿಣ ಭಾರತದ ರಾಜ್ಯಗಳ ತಲಾ ವರಮಾನವು ರೂ. 3 ಲಕ್ಷ ಮೀರಿದೆ. ಉತ್ತರ ಪ್ರದೇಶದಲ್ಲಿ ವಯಸ್ಕ ಮಹಿಳೆಯರ(15-49ರ ವಯೋಮಾನ) ಸಾಕ್ಷರತಾ ಪ್ರಮಾಣ 2019-2021ರಲ್ಲಿ ಶೇ.66 ರಷ್ಟಿದ್ದರೆ ಬಿಹಾರದಲ್ಲಿ ಇದು ಶೇ.57.8ರಷ್ಟಿದೆ. ಕೇರಳದಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ.98 ರಷಿದ್ದರೆ, ತಮಿಳುನಡಿನಲ್ಲಿ ಇದು ಶೇ.84 ರಷ್ಟಿದೆ. ಇದೇ ರೀತಿಯಲ್ಲಿ ನೀತಿ ಆಯೋಗದ ಬಹುಮುಖಿ ಬಡತನ ವರದಿ ಪ್ರಕಾರ ಬಿಹಾರದಲ್ಲಿ 12 ಸೂಚಿಗಳನ್ನು ಆಧರಿಸಿದ ಬಹುಮುಖಿ ಬಡವರ ಪ್ರಮಾಣ 2019-2021ರಲ್ಲಿ ಶೇ.33.76 ರಷ್ಟಿದ್ದರೆ ಉತ್ತರ ಪ್ರದೇಶದಲ್ಲಿ ಇದು ಶೇ.22.93ರಷ್ಟಿದೆ. ಆದರೆ ಕೇರಳದಲ್ಲಿ ಇದು ಶೇ.0.55 ರಷ್ಟು ಮತ್ತು ತಮಿಳುನಾಡಿನಲ್ಲಿ ಇದು ಶೇ.2.20 ರಷ್ಟಿದೆ. ಕನಾಟಕದಲ್ಲಿ ಇದರ ಪ್ರಮಣ ಶೇ.7.58ರಷ್ಟಿದೆ (ಮೂಲ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5ನೆಯ ಸುತ್ತು. 2019-2021)

Advertisements

ಕರ್ನಾಟಕ ಬಜೆಟ್ 2025-26

ಸಿದ್ಧರಾಮಯ್ಯ ಅವರು ತಮ್ಮ ಸರ್ಕಾರವು ಎರಡನೆಯ ಅವಧಿಯಲ್ಲಿನ ಮೂರನೆಯ ವರ್ಷದ ಬಜೆಟ್ಟನ್ನು ಮಾರ್ಚ್ 7ರಂದು ಮಂಡಿಸಿದ್ದಾರೆ. ಇದೊಂದು ಅಭಿವೃದ್ದಿ ಮುಖಿ ಬಜೆಟ್ಟಾಗಿದೆ. ಸಿದ್ಧರಾಮಯ್ಯನವರು 2023-24ರಲ್ಲಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿನ ಘೋಷಣೆಯ ಪ್ರಕಾರ ಐದು ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಆಕಾಶವೇ ಮೇಲೆ ಬಿದ್ದಂತೆ ಬಿಜೆಪಿ ಮತ್ತು ಜಿಡಿಎಸ್ ಹಾಗೂ ಪ್ರಧಾನಿಯನ್ನು ಸೇರಿಸಿಕೊಂಡು ಒಕ್ಕೂಟ ಸರ್ಕಾರದ ಮಂತ್ರಿಗಳು ‘ಗ್ಯಾರಂಟಿ’ಗಳಿಂದ ಕರ್ನಾಟಕದ ಆರ್ಥಿಕತೆ ದಿವಾಳಿಯಾಗುತ್ತದೆ, ಅಭಿವೃದ್ದಿಗೆ ಹಣವೇ ಉಳಿಯುತ್ತಿಲ್ಲ, ಗ್ಯಾರಂಟಿಗಳಿಂದ ಜನರು ಸೋಮಾರಿಗಳಾಗುತ್ತಾರೆ, ಗೃಹಲಕ್ಷ್ಮಿ ಕಾರ್ಯಕ್ರಮದಿಂದಾಗಿ ಮಹಿಳೆಯರು ದಾರಿ ತಪ್ಪುವ ಸಾಧ್ಯತೆಯಿದೆ ಮುಂತಾದ ಅಸಹ್ಯಕರ ರೀತಿಯಲ್ಲಿ ಟೀಕಿಸಲಾಗಿತ್ತು. ಈ ಜನಕಲ್ಯಾಣ ಕಾರ್ಯಕ್ರಮಗಳು ಜಾರಿಗೆ ಬಂದು ಎರಡು ವರ್ಷಗಳ ಮೇಲಾಯಿತು. ಕರ್ನಾಟಕದ ಆರ್ಥಿಕತೆಯು ಗ್ಯಾರಂಟಿ ಕಾರ್ಯಕ್ರಮಗಳಿಂದ ದಿವಾಳಿಯೂ ಆಗಿಲ್ಲ, ಹಣದ ಕೊರತೆಯಿಂದ ಅಭಿವೃದ್ಧಿಯೂ ಕುಂಠಿತಗೊಂಡಿಲ್ಲ. ಅಲ್ಲದೆ, ಗೃಹಲಕ್ಷ್ಮಿಯಿಂದಾಗಿ ಹಾಗೂ ಸಾರಿಗೆಗೆ ಸಂಬಂಧಿಸಿದ ‘ಶಕ್ತಿ’ ಕಾರ್ಯಕ್ರಮದಿಂದಾಗಿ ಮಹಿಳೆಯರ ಕಾರ್ಮಿಕ ಸಹಭಾಗಿತ್ವ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಪ್ರಸ್ತುತ ವರ್ಷ 2025-26ರ ಬಜೆಟ್ಟಿನಲ್ಲಿ ಗ್ಯಾರಂಟಿ ಕಾರ್ಯಯೋಜನೆಗೆ ರೂ. 51,034 ಕೋಟಿ ಅನುದಾನ ನೀಡಲಾಗಿದೆ. ಇದು ಕರ್ನಾಟಕದ ಒಟ್ಟು ರಾಜ್ಯ ಆಂತರಿಕ ಉತ್ಪನ್ನದ ಶೇ.1.82 ರಷ್ಟಾಗುತ್ತದೆ. ತಲಾ ವರಮಾನವು ರೂ. 3 ಲಕ್ಷವನ್ನು ಮೀರಿರುವ ಕರ್ನಾಟಕ ಅಲ್ಲಿನ ಕೂಲಿಕಾರರಿಗೆ, ಅಸಂಘಟಿತ ವಲಯದ ಕಾರ್ಮಿಕರಿಗೆ, ಬಡ ರೈತರಿಗೆ, ಬೀದಿಬದಿ-ತಳ್ಳುಗಾಡಿ ವ್ಯಾಪಾರಗಾರರಿಗೆ ನೀಡುವ ರೂ.51,304 ಕೋಟಿ ವೆಚ್ಚವು ಅನುತ್ಪಾದಕವಾಗುತ್ತದೆಯೇ? ಗ್ಯಾರಂಟಿ ಕಾರ್ಯಕ್ರಮವು ಎಲ್ಲ ರೀತಿಯಲ್ಲಿಯೂ ಅಭಿವೃದ್ಧಿ ಕಾರ್ಯಕ್ರಮವೇ ಆಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರು ‘ಪಂಚ ಗ್ಯಾರಂಟಿಗಳು ಸೇರಿದಂತೆ ಹಲವು ಕಲ್ಯಾಣ ಕಾರ್ಯಕ್ರಮಗಳು ಉಚಿತ ಕೊಡುಗೆಗಳಲ್ಲ. ಇವು ಆರ್ಥಿಕ ಮತ್ತು ಸಾಮಾಜಿಕ ತತ್ವದಲ್ಲಿ ಮಾಡಿರುವ ಹೂಡಿಕೆಗಳು ಎಂದು ಆತ್ಮವಿಶ್ವಾಸದಿಂದ ಹೇಳಬಯಸುತ್ತೇನೆ’ ಎಂದು ಹೇಳಿರುವುದು ಸರಿಯಾಗಿಯೇ ಇದೆ.

ಈ ವರದಿ ಓದಿದ್ದೀರಾ?: ಹಿಂದಿ ವಲಯದ ಓಲೈಕೆ; ಕೇಂದ್ರದ ತೆರಿಗೆ ಹಂಚಿಕೆ ನೀತಿಯಿಂದ ಹಿಡಿದು ಭಾಷೆಯವರೆಗೆ…

ಕರ್ನಾಟಕದ 2025-26ನೆಯ ಸಾಲಿನ ಬಜೆಟ್ಟಿನ ಒಟ್ಟು ವೆಚ್ಚ ರೂ.4,09,549 ಕೋಟಿ. ಇದು ಹಿಂದಿನ ವರ್ಷ 2024-25ನೆಯ ಸಾಲಿನ ಬಜೆಟ್ ವೆಚ್ಚವಾದ ರೂ.365865 ಕೋಟಿಗಿಂತ ಶೇ. 12ರಷ್ಟು ಏರಿಕೆಯಾಗಿದೆ. ಒಕ್ಕೂಟ ಸರ್ಕಾರದ 2025-26ನೆಯ ಸಾಲಿನ ಬಜೆಟ್ ವೆಚ್ಚವು 2024-25ಕ್ಕೆ ಹೋಲಿಸಿದರೆ ಕೇವಲ ಶೇ.5.08ರಷ್ಟು ಏರಿಕೆಯಾಗಿದೆ.

ರಾಜ್ಯದ ಹಣಕಾಸಿನ ಪರಿಸ್ಥಿತಿ

ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದಾಗ ವಿರೋಧ ಪಕ್ಷಗಳು ಇದಕ್ಕೆ ಹಣ ಎಲ್ಲಿದೆ? ಇದರಿಂದ ಅಭಿವೃದ್ಧಿಗೆ ಹಣವೇ ದೊರೆಯುವುದಿಲ್ಲ ಎನ್ನಲಾಗಿತ್ತು. ನಿಜ, ಗ್ಯಾರಂಟಿಗಳಿಂದ ಮತ್ತು ಜಿಎಸ್‌ಟಿ ಮೂಲಕ ರಾಜ್ಯದ ಹಣಕಾಸು ಸ್ವಾಯತ್ತತೆಯನ್ನು ಒಕ್ಕೂಟ ಕಸಿದುಕೊಂಡ ಮೇಲೆ ರಾಜ್ಯ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದೆ. ರಾಜ್ಯ ಇಂದು ಹಣಕಾಸಿನ ಕೊರತೆಯನ್ನು ಅನುಭವಿಸುತ್ತಿದ್ದರೆ ಅದಕ್ಕೆ ಕಾರಣ ರಾಜ್ಯದ ಹಣಕಾಸು ನಿರ್ವಹಣೆಯ ವೈಫಲ್ಯವಲ್ಲ. ಏಕೆಂದರೆ ರಾಜ್ಯವು ಬಜೆಟ್ಟಿಗೆ ಸಂಬಂಧಿಸಿದಂತೆ ವಿತ್ತೀಯ ಜವಾಬ್ದಾರಿ ಕಾಯಿದೆ ನಿಗದಿಪಡಿಸಿರುವ ಮಾನದಂಡಗಳನ್ನು ಪಾಲಿಸುತ್ತಿದೆ. ರಾಜ್ಯದ ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇ.3 ಮೀರಬಾರದು. ರಾಜ್ಯವು ಇದನ್ನು ಮೀರಿಲ್ಲ. ರಾಜ್ಯದ ಹೊಣೆಗಾರಿಕೆ (ಸಾಲ) ಜಿಎಸ್‌ಡಿಪಿಯ ಶೇ.25 ಮೀರಬಾರದು, ರಾಜ್ಯ ಇದನ್ನೂ ಮೀರಿಲ್ಲ. ಆದರೆ ರಾಜ್ಯಕ್ಕೆ ರೆವಿನ್ಯೂ ಖಾತೆಯಲ್ಲಿನ ಮಿಗುತೆಯನ್ನು ಸಾಧಿಸಿಕೊಳ್ಳುವುದು ಸಾಧ್ಯವಾಗಿಲ್ಲ.

ಹಾಗಾದರೆ ಕರ್ನಾಟಕ ಹಣಕಾಸು ಸಮಸ್ಯೆಯ ಮೂಲ ಎಲ್ಲಿದೆ?

  1. 15ನೇ ಹಣಕಾಸು ಆಯೋಗವು ರಾಜ್ಯಕ್ಕೆ ನೀಡುವಂತೆ ರಾಜ್ಯಕ್ಕೆ ಶಿಫಾರಸ್ಸು ಮಾಡಿದ್ದ ರೂ.11,595 ಕೋಟಿಯನ್ನು ಒಕ್ಕೂಟ ಸರ್ಕಾರವು ನೀಡಿಲ್ಲ.
  2. 15ನೇ ಹಣಕಾಸು ಆಯೋಗವು ಒಕ್ಕೂಟ ತೆರಿಗೆ ರಾಶಿಯಲ್ಲಿನ ಕರ್ನಾಟಕದ ಪಾಲನ್ನು ಶೇ. 4.713 ರಿಂದ ಶೇ. 3.647ಕ್ಕಿಳಿಸಿದೆ. ಇದರಿಂದ ರಾಜ್ಯಕ್ಕೆ ವಾರ್ಷಿಕ ರೂ. 12,000 ಕೋಟಿ ನಷ್ಟವಾಗುತ್ತಿದೆ.
  3. ಸೆಸ್ ಮತ್ತು ಸರ್‌ಚಾರ್ಜ್ ತೆರಿಗೆಗಳ ರೆವಿನ್ಯೂವನ್ನು ಒಕ್ಕೂಟ ಸಂಪುರ್ಣವಾಗಿ ಅನುಭವಿಸುತ್ತಿದೆ. ಈ ತೆರಿಗೆಗಳಲ್ಲಿ ಒಕ್ಕೂಟವು ರಾಜ್ಯಗಳಿಗೆ ಪಾಲು ನೀಡುತ್ತಿಲ್ಲ.
  4. ಒಕ್ಕೂಟ ಸರ್ಕಾರವು ರಾಜ್ಯಕ್ಕೆ ನೀಡುವ ಸಹಾಯಾನುದಾನ 2019-20ರಲ್ಲಿ ರೂ. 19,982 ಕೋಟಿಯಿತ್ತು. ಆದರೆ ಇದು 2025-26ರಲ್ಲಿ ರೂ.16,000 ಕೋಟಿಗಿಳಿದಿದೆ.

    ಹೀಗೆ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ಒಕ್ಕೂಟ ಸರ್ಕಾರ ನಡೆಯುತ್ತಿದೆ. ರಾಜ್ಯದ ಯಾವುದೇ ಬೇಡಿಕೆಯನ್ನು ಒಕ್ಕೂಟ ಸರ್ಕಾರ ಜಾರಿಗೊಳಿಸುತ್ತಿಲ್ಲ ಉದಾ: ದೇಶದಲ್ಲಿನ ಪ್ರತಿಷ್ಠಿತ ಆಲ್ ಇಂಡಿಯಾ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಎಐಐಎಂಎಸ್) ಘಟಕವನ್ನು ಕರ್ನಾಟಕದಲ್ಲಿ ತೆರೆಯಲು ಅನೇಕ ವರ್ಷಗಳಿಂದ ಕೇಳಲಾಗುತ್ತಿದೆ. ಆದರೆ, ಇದಕ್ಕೆ ಒಕ್ಕೂಟ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ನೆರವು ನೀಡುವುದಕ್ಕೆ ಬದಲಾಗಿ ಇಲ್ಲಸಲ್ಲದ ಟೀಕೆಗಳನ್ನು ಮಾಡಲಾಗುತ್ತಿದೆ. ರಾಜ್ಯದ ಹಕ್ಕುಗಳನ್ನು – ಅಧಿಕಾರವನ್ನು ಒತ್ತುವರಿ ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ರಾಜ್ಯದ ನೀರಾವರಿ ಯೋಜನೆಗಳಿಗೆ, ರೈಲು ಯೋಜನೆಗಳಿಗೆ, ರಸ್ತೆ ಕಾರಿಡಾರುಗಳಿಗೆ ಹೆಚ್ಚಿನ ನೆರವು ನೀಡುತ್ತಿಲ್ಲ.

    ಪ.ಜಾ. ಮತ್ತು ಪ.ಪಂ. ಉಪಯೋಜನೆಗಳಿಗೆ 2025-26ರಲ್ಲಿ ಕರ್ನಾಟಕ ಸರ್ಕಾರ ನೀಡಿರುವ ಅನುದಾನ ರೂ.42,018 ಕೋಟಿ. ಇದು ಬಜೆಟ್ಟಿನ ಒಟ್ಟು ವೆಚ್ಚದ ಶೇ. 10.28ರದಷ್ಟಾಗುತ್ತದೆ. ಆದರೆ ಒಕ್ಕೂಟ ಸರ್ಕಾರ 2025-26ರಲ್ಲಿ ಪ.ಜಾ. ಮತ್ತು ಪ.ಪಂ. ಉಪಯೋಜನೆಗಳಿಗೆ ನೀಡಿರುವ ಅನುದಾನ ರೂ.2,97,726 ಕೋಟಿ. ಇದು ಒಕ್ಕೂಟ ಸರ್ಕಾರದ ಒಟ್ಟು ಬಜೆಟ್ ವೆಚ್ಚದ ಶೇ. 5.87ರಷ್ಟಾಗುತ್ತದೆ. ಹೀಗೆ ಎಲ್ಲ ದೃಷ್ಟಿಯಿಂದಲೂ ಕರ್ನಾಟಕದ ಬಜೆಟ್ಟು ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ. ಉದ್ದಿಮೆ ವಲಯ, ರಸ್ತೆಗಳು, ಮಾಹಿತಿ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಿಗೂ ಬಜೆಟ್ಟಿನಲ್ಲಿ ಒತ್ತು ನೀಡಲಾಗಿದೆ. ಕರ್ನಾಟಕ ಬಜೆಟ್ಟೆಂದರೆ ‘ಐದು ಗ್ಯಾರಂಟಿಗಳು’ ಎಂದು ವಿರೋಧ ಪಕ್ಷಗಳು, ಮಾಧ್ಯಮ, ಪ್ರಧಾನಿ ಭಾವಿಸಿರುವಂತೆ ಕಾಣುತ್ತದೆ. ಸರಿಸುಮಾರು ರೂ. 3 ಲಕ್ಷಕ್ಕೂ ಮೀರಿದ ತಲಾ ವರಮಾನದ ರಾಜ್ಯ ಸಮಾಜದಲ್ಲಿ ಅಂಚಿಗೆ ದೂಡಲ್ಪಟ್ಟವರಿಗೆ, ಅಭಿವೃದ್ಧಿ ವಂಚಿತರಿಗೆ ರೂ.51,000 ಕೋಟಿ ನೆರವು ನೀಡುವುದು ಭಾರವಾಗುತ್ತದೆಯೇ?

    ಗ್ಯಾರಂಟಿಗಳಿಂದ ದುಡಿಮೆಗಾರರು ‘ಸೋಮಾರಿಗಳಾಗುತ್ತಾರೆ’ ಎನ್ನುವವರು ಸಾಮಾಜಿಕ ನ್ಯಾಯ ದ್ರೋಹಿಗಳು. ಗ್ಯಾರಂಟಿಗಳಿಗೆ ನೀಡುವ ಅನುದಾನ ‘ಅನುತ್ಪಾದಕ’ – ‘ವೆಸ್ಟ್’ ಎನ್ನುವವರು ಆರ್ಥಿಕ ಬೆಳವಣಿಗೆ ವಿರೋಧಿಗಳು. ಬಜೆಟ್ಟನ್ನು ಆರ್ಥಿಕ ಚೌಕಟ್ಟಿನಲ್ಲಿ ಟೀಕೆ, ವಿಮರ್ಶೆ ಮಾಡಬೇಕಾದುದು ವಿರೋಧ ಪಕ್ಷಗಳ ಕರ್ತವ್ಯ. ಆದರೆ ಕರ್ನಾಟಕದ ವಿರೋಧ ಪಕ್ಷಗಳು ‘ಹಲಾಲ್ ಬಜೆಟ್ಟು’, ‘ಹಿಂದುತ್ವ-ವಿರೋಧಿ ಬಜೆಟ್ಟು’, ‘ಮಾಡರ್ನ್ ಮುಸ್ಲಿಂ ಲೀಗ್ ಬಜೆಟ್ಟು’ ಎಂದೆಲ್ಲ ಟೀಕಿಸುವುದು ಆರ್ಥಿಕ ಅನಕ್ಷರತೆಗೆ ಸಾಕ್ಷಿ. ಬಜೆಟ್ಟಿನ ತೆರಿಗೆ ಭಾಗವನ್ನು ಕುರಿತಾಗಲಿ ಅಥವಾ ವೆಚ್ಚದ ಭಾಗಕ್ಕೆ ಸಂಬಂಧಿಸಿದ ಸಂಗತಿಗಳನ್ನಾಗಲಿ ವಿಮರ್ಶೆ ಮಾಡದೆ ಉತ್ತರ ಭಾರತದ ಧರ್ಮಾಂದರ ಪರಿಭಾಷೆಯಲ್ಲಿ ಬಜೆಟ್ಟಿನ ಬಗ್ಗೆ ಚರ್ಚೆ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಅರ್ಥಶಾಸ್ತ್ರದ ಮೂಲ ಸೂತ್ರಗಳ ಬಗ್ಗೆ ತಿಳಿವಳಿಕೆ ಇಲ್ಲದವರಂತೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಬಜೆಟ್ಟನ್ನು ಟೀಕಿಸುತ್ತಿದ್ದಾರೆ. ಸಂಸದರು ಸಂಸತ್ತಿನಲ್ಲಿ ರಾಜ್ಯದ ಹಿತಾಸಕ್ತಿಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ಇದೊಂದು ರಾಜಕೀಯ ಭ್ರಷ್ಟಾಚಾರ.

    ಸಿದ್ಧರಾಮಯ್ಯನವರು ಮಂಡಿಸಿರುವ ಬಜೆಟ್ಟಿನಲ್ಲಿ ದೋಷವಿಲ್ಲವೆಂದು ಹೇಳಲು ಬರುವುದಿಲ್ಲ. ರಾಜ್ಯದಲ್ಲಿ ಅನಿಮಿಯ ಪ್ರಮಾಣ ಮಹಿಳೆಯರಲ್ಲಿ ಮತ್ತು ಮಕ್ಕಳಲ್ಲಿ ಏರಿಕೆಯಾಗುತ್ತಿದೆ. ಇದರ ಬಗ್ಗೆ ದೊಡ್ಡ ಕಾರ್ಯಕ್ರಮ ಬಜೆಟ್ಟಿನಲ್ಲಿಲ್ಲ. ಇದು ಎಷ್ಟು ಗಂಭಿರವಾದುದೆಂದರೆ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 6 ತಿಂಗಳಿಂದ 59 ತಿಂಗಳು ವಯೋಮಾನದ ಒಟ್ಟು ಮಕ್ಕಳಲ್ಲಿ ಶೇ. 70ಕ್ಕಿಂತ ಅಧಿಕ ಮಕ್ಕಳು ಅನಿಮಿಯ(ರಕ್ತಹೀನತೆ) ಎದುರಿಸುತ್ತಿದ್ದಾರೆ. ದೋಷಪೂರಿತ ಮಾತ್ರೆ ಸೇವನೆಯಿಂದ ಅನೇಕ ತಾಯಂದಿರು ಆಸ್ಪತ್ರೆಗಳಲ್ಲಿ ಸಾವಿಗೀಡಾಗುತ್ತಿದ್ದಾರೆ. ಪರೀಕ್ಷಾ ಹಗರಣಗಳು ದಿನಬೆಳಗಾದರೆ ಸುದ್ಧಿಯಾಗುತ್ತಿವೆ.

    ಬಜೆಟ್ ಭಾಷಣದಲ್ಲಿ ಆಡಳಿತ ಸುಧಾರಣೆಯು ಬಜೆಟ್ಟಿನ ಒಂದು ಮುಖ್ಯ ಗುರಿ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕಾದ ಅಗತ್ಯವಿದೆ. ಶಿಕ್ಷಣ (ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ) ಕ್ಷೇತ್ರವು ಅತ್ಯಂತ ವಿಷಾದನೀಯ ಸ್ಥಿತಿಯಲ್ಲಿದೆ. ಈ ಕ್ಷೇತ್ರಕ್ಕೆ 2025-26ರಲ್ಲಿ ನೀಡಿರುವ ಅನುದಾನ ರೂ.45,286 ಕೋಟಿ ಮತ್ತು ಆರೋಗ್ಯಕ್ಕೆ ನೀಡಿರುವ ಅನುದಾನ ರೂ.17,473 ಕೋಟಿ. ಇವೆರಡೂ ಸೇರಿ ಒಟ್ಟು ಬಜೆಟ್ಟಿನ ಶೇ. 15 ರಷ್ಟಾಗುತ್ತದೆ. ಈ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕಾಗಿತ್ತು.

ಒಟ್ಟಾರೆ ಅನೇಕ ಇತಿಮಿತಿಗಳ ನಡುವೆ ಸಿದ್ಧರಾಮಯ್ಯ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯಗಳನ್ನು ಸಮತೋಲನದಲ್ಲಿ ನಿರ್ವಹಿಸುವ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆರ್ಥಿಕ ಬೆಳವಣಿಗೆಗೆ ಧಕ್ಕೆಯಾಗದಂತೆ ಸಾಮಾಜಿಕ ನ್ಯಾಯವನ್ನು ಮತ್ತು ಸಾಮಾಜಿಕ ನ್ಯಾಯಕ್ಕೆ ಹಾನಿಯಾಗದಂತೆ ಆರ್ಥಿಕ ಬೆಳವಣಿಗೆಯನ್ನು ಸಂಯೋಜಿಸುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಲಾಗಿದೆ.
.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಟಿ ಆರ್ ಚಂದ್ರಶೇಖರ
ಟಿ ಆರ್ ಚಂದ್ರಶೇಖರ
ವಿಶ್ರಾಂತ ಪ್ರಾಧ್ಯಾಪಕ, ಲೇಖಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X